ಜಾಗೃತಿಯ 20 ಬಗೆಗಳು

Update: 2024-11-17 03:43 GMT

ಜಾಗೃತಿ ಎಂದರೇನು?

ಒಬ್ಬ ವ್ಯಕ್ತಿ ತನ್ನ ಮನಸ್ಥಿತಿ, ಪರಿಸ್ಥಿತಿ, ಪರಿಸರದ ಬಗ್ಗೆ ಗಮನವನ್ನು ಮತ್ತು ತಿಳುವಳಿಕೆಯನ್ನು ಹೊಂದಿರುವುದಕ್ಕೆ ಜಾಗೃತಿ ಎನ್ನಬಹುದು. ತನ್ನ ಬಗ್ಗೆ ಹಾಗೂ ತಾನಿರುವ ವಾತಾವರಣದ ಬಗ್ಗೆ ಎಚ್ಚರಿಕೆಯನ್ನು, ಮಾಹಿತಿಯನ್ನು ಮತ್ತು ಪ್ರಜ್ಞೆಯನ್ನು ಹೊಂದಿರುವುದು. ತನ್ನಲ್ಲಿ ಉಂಟಾಗುವ ಆಲೋಚನೆಗಳು, ಭಾವನೆಗಳು ಮತ್ತು ಅನುಭವಗಳನ್ನು ಒಳಹೊಕ್ಕು ನೋಡುವ ಮತ್ತು ಗ್ರಹಿಸುವ ಸಾಮರ್ಥ್ಯವನ್ನು ಹೊಂದಿರುವುದು. ತನ್ನ ಕ್ರಿಯೆ ಮತ್ತು ಪ್ರತಿಕ್ರಿಯೆಗಳ ಉದ್ದೇಶವನ್ನು ತಿಳಿದುಕೊಳ್ಳಲು ಸಾಧ್ಯವಾಗುವುದು.

ಈ ಅಂಶಗಳುಳ್ಳ ಜಾಗೃತಿ ಅಥವಾ ಪ್ರಜ್ಞೆಯನ್ನು ಹೊಂದಿರುವುದು ಎಂದರೆ ಅದರಲ್ಲಿ ಹಲವು ರೀತಿಯ ಜಾಗೃತಿಗಳನ್ನು ಹೊಂದಿರಬೇಕಾಗುತ್ತದೆ.

1. ಮಾನಸಿಕ ಜಾಗೃತಿ: ತನ್ನ ಮಾನಸಿಕ ಆರೋಗ್ಯ, ಭಾವನೆಗಳು ಮತ್ತು ವರ್ತನೆಗಳನ್ನು ಅರ್ಥ ಮಾಡಿಕೊಳ್ಳುವುದು. ತನ್ನಲ್ಲಿರುವ ಅರಿಮೆಗಳನ್ನು, ತನ್ನ ವ್ಯಕ್ತಿತ್ವದ ಮಾದರಿಯನ್ನು ಮತ್ತು ತನಗಿರುವ ಮಾನಸಿಕ ಸಮಸ್ಯೆಗಳನ್ನು ಗುರುತಿಸಿಕೊಳ್ಳುವುದು.

2. ತನ್ನತನದ ಜಾಗೃತಿ: ತನ್ನಲ್ಲಿ ಉಂಟಾಗುವ ಆಲೋಚನೆಗಳನ್ನು, ಚಿಂತನೆಗಳನ್ನು, ತನ್ನ ಇತಿಮಿತಿಗಳನ್ನು ಅಥವಾ ದೌರ್ಬಲ್ಯಗಳನ್ನು ಮತ್ತು ಸಾಮರ್ಥ್ಯಗಳನ್ನು ಗುರುತಿಸಿಕೊಳ್ಳಲು ಸಾಧ್ಯವಾಗುವುದು.

3. ಭಾವುಕತೆಯ ಜಾಗೃತಿ: ತನ್ನಲ್ಲಿ ಉಂಟಾಗುವ ಭಾವನೆಗಳ ಕಾರಣಗಳನ್ನು ಗುರುತಿಸಿಕೊಳ್ಳುವುದಲ್ಲದೆ, ಅವುಗಳನ್ನು ನಿರ್ವಹಿಸಲು ಸಾಧ್ಯವಾಗುವುದು.

4. ಸಾಮಾಜಿಕ ಜಾಗೃತಿ: ತಾನಿರುವ ಸಮಾಜದ ಸಂರಚನೆ ಮತ್ತು ಅದು ಕೆಲಸ ಮಾಡುವ ರೀತಿ, ಸಂಬಂಧಗಳನ್ನು ಮತ್ತು ಕೌಟುಂಬಿಕ ಹಾಗೂ ಸಾಮಾಜಿಕ ವ್ಯವಸ್ಥೆಗಳು ಇರುವ ಮತ್ತು ಚಲಿಸುತ್ತಿರುವ ದಿಕ್ಕನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವುದು. ಹಾಗೆಯೇ ಅದನ್ನು ಸಹಾನುಭೂತಿಯಿಂದ ಮತ್ತು ನಿಷ್ಪಕ್ಷಪಾತವಾಗಿ ಸಾಕ್ಷೀಕರಿಸಲು ಸಾಧ್ಯಾವಾಗುವುದು.

5. ಮಾನಸಿಕ ಒಲವು ಮತ್ತು ನಿಲುವುಗಳ ಬಗ್ಗೆ ಜಾಗೃತಿ: ಪ್ರಸ್ತುತ ಕಾಲಮಾನದಲ್ಲಿ ಜೀವಿಸುತ್ತಾ ಸಂಪೂರ್ಣವಾಗಿ ಕ್ರಿಯಾಶೀಲವಾಗಿ ತೊಡಗಿಕೊಳ್ಳುವುದು.

6. ಆಧ್ಯಾತ್ಮಿಕ ಜಾಗೃತಿ: ತನ್ನ ಜೀವ ಮತ್ತು ಜೀವನವನ್ನು ಮೌಲ್ಯಗಳೊಂದಿಗೆ ಗುರುತಿಸಿಕೊಳ್ಳುವುದು ಮತ್ತು ತನ್ನ ಜೀವಿತದ ಉದ್ದೇಶ ಮತ್ತು ಸಾರ್ಥಕತೆಯ ಬಗ್ಗೆ ಎಚ್ಚರಿಕೆಯನ್ನು ಹೊಂದಿರುವುದು.

7. ಸಾಂಸ್ಕೃತಿಕ ಜಾಗೃತಿ: ತನ್ನ ಸಮಾಜದ ವಿವಿಧ ಸಂಸ್ಕೃತಿಗಳನ್ನು ಗುರುತಿಸುವುದು, ಗೌರವಿಸುವುದು ಮತ್ತು ಅವುಗಳಲ್ಲಿ ತನ್ನ ಸಾಂಸ್ಕೃತಿಕ ಎಳೆಗಳನ್ನು ಬೆಸೆಯಲು ಇರಬಹುದಾದ ಸಾಧ್ಯತೆಗಳನ್ನು ಗುರುತಿಸಿ ಸಂವಹನ ನಡೆಸಲು, ಸಂಪರ್ಕ ಸಾಧಿಸಲು ಯತ್ನಿಸುವುದು ಆರೋಗ್ಯಕರ ಸಾಂಸ್ಕೃತಿಕ ಜಾಗೃತಿಯಾಗಿರುತ್ತದೆ. ತನ್ನದ್ದನ್ನೂ ಸೇರಿದಂತೆ ಇತರ ಸಂಸ್ಕೃತಿಗಳ ಪರಂಪರೆಗಳನ್ನು ಮತ್ತು ಗ್ರಹಿಕೆಗಳನ್ನು ಪೂರ್ವಾಗ್ರಹ ಪೀಡಿತ ಮನಸ್ಥಿತಿ ಇಲ್ಲದೇ ಸಾಕ್ಷೀಕರಿಸುವುದು.

8. ಪರಿಸರ ಜಾಗೃತಿ: ಪ್ರಕೃತಿಯ ಮತ್ತು ಮಾನವ ನಿರ್ಮಿತ ಪರಿಸರದಲ್ಲಿನ ಆಗುಹೋಗುಗಳನ್ನು ಗಮನಿಸುವ ಮತ್ತು ಅವುಗಳ ಪ್ರಭಾವಗಳನ್ನು ಗುರುತಿಸಲು ಸಾಧ್ಯವಾಗುವುದು. ಹಾಗೆಯೇ ಪರಿಸರದ ಮತ್ತು ಜೀವಸಂಕುಲದ ಉನ್ನತಿಗೆ ಮಾಡಬೇಕಾದ್ದನ್ನು ಮತ್ತು ಮಾಡಬಾರದ್ದನ್ನು ಗುರುತಿಸಿ ಹಾಗೆಯೇ ವರ್ತಿಸುವುದು.

9. ದೈಹಿಕ ಜಾಗೃತಿ: ತಮ್ಮ ದೇಹದ ಆರೋಗ್ಯಕ್ಕೆ ಅಗತ್ಯವಿರುವುದನ್ನು ಮತ್ತು ಅಗತ್ಯವಿರದಿರುವುದನ್ನು ಗುರುತಿಸುವುದು ಮತ್ತು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವುದು.

10. ಆರ್ಥಿಕ ಜಾಗೃತಿ: ತಮ್ಮ ಆರ್ಥಿಕ ಸಂಪನ್ಮೂಲಗಳನ್ನು ಸಮರ್ಥವಾಗಿ ನಿರ್ವಹಿಸುವುದು. ಗಳಿಕೆ, ಉಳಿಕೆ ಮತ್ತು ಆಯವ್ಯಯಗಳ ಬಗ್ಗೆ ಎಚ್ಚರಿಕೆಯನ್ನು ಹೊಂದಿರುವುದು. ಆರ್ಥಿಕ ಸದೃಢತೆಯನ್ನು ಹೊಂದುವುದೆಂದರೆ ಜಿಪುಣತನವಲ್ಲ, ಲೋಭಿಯಾಗಿರುವುದಲ್ಲ. ಆರ್ಥಿಕ ಸಂಪನ್ಮೂಲಗಳನ್ನು ಉಳಿಸಿಕೊಳ್ಳುವ ಮತ್ತು ಬೆಳೆಸುವ ಬಗ್ಗೆ ಸುಶಿಕ್ಷಿತರಾಗಿರುವುದು.

11. ಸಮಯದ ಜಾಗೃತಿ: ಜೀವನ ಮತ್ತು ಸಮಯವೆರಡೂ ಸಮಾನಾರ್ಥಕ ಪದಗಳು. ಸಮಯವನ್ನು ವ್ಯರ್ಥ ಮಾಡುವುದೆಂದರೆ ಜೀವನವನ್ನೇ ವ್ಯರ್ಥಗೊಳಿಸಿಕೊಂಡಂತೆ. ಆದ್ದರಿಂದ ಸಮಯವನ್ನು ವಿನಿಯೋಗಿಸುವಾಗ ಆದ್ಯತೆಗಳನ್ನು ಗುರುತಿಸಿಕೊಳ್ಳುವುದು. ಪರಿಣಾಮಕಾರಿಯಾಗಿ, ಫಲಪ್ರದವಾಗಿ ಮತ್ತು ರಚನಾತ್ಮಕವಾಗಿ ಮಾತ್ರವೇ ತಮ್ಮ ಸಮಯವನ್ನು ವಿನಿಯೋಗಿಸುವುದು ಮತ್ತು ಇತರರ ಸಮಯಕ್ಕೆ ಗೌರವವನ್ನು ಕೊಡುವುದು.

12. ಸೀಮಾ ಜಾಗೃತಿ: ತನ್ನ ಮತ್ತು ಇತರ ವ್ಯಕ್ತಿ, ಸಮೂಹ ಹಾಗೂ ವ್ಯವಸ್ಥೆಗಳ ನಡುವೆ ಆರೋಗ್ಯಕರವಾದ ಮತ್ತು ಅಗತ್ಯವಾದ ಅಂತರವನ್ನು ಇಟ್ಟುಕೊಳ್ಳುವುದು. ಸಂಬಂಧಗಳ ನಡುವಿನ ಇತಿಮಿತಿ ಮತ್ತು ಖಾಸಗಿತನಗಳ ಬಗ್ಗೆ ಅತಿಕ್ರಮಣ ತಾನೂ ಮಾಡದಂತೆ ಮತ್ತು ಇತರರೂ ಮಾಡಗೊಡದಂತೆ ಎಚ್ಚರಿಕೆಯನ್ನು ಹೊಂದಿರುವುದು.

13. ಅತೀಂದ್ರಿಯ ಜಾಗೃತಿ: ನಮ್ಮ ಕಣ್ಣು, ಕಿವಿ, ಮೂಗು, ಚರ್ಮ, ಮನಸ್ಸಿನ ಆಲೋಚನೆಗಳಿಗಿಂತ ಮಿಗಿಲಾಗಿ ಕೆಲವೊಂದು ಗಾಢವಾದ ಭಾವನೆಗಳು ಉಂಟಾಗುತ್ತವೆ. ಅವು ಅತೀಂದ್ರಿಯವಾದ ಗ್ರಹಿಕೆಗಳಾಗಿರಲಿಕ್ಕೆ ಸಾಧ್ಯತೆಗಳು ಉಂಟು. ಅಂತಹವನ್ನು ಕೂಡಾ ಗಮನಿಸುವುದು. ಪ್ರಾಣಿಗಳಿಗೆ ಅನಾಹುತಗಳ ಬಗ್ಗೆ ಸಂವೇದನೆಗಳನ್ನು ಹೊಂದುವಂತೆ ಮನುಷ್ಯರಿಗೂ ಕೂಡಾ ಸೂಕ್ಷ್ಮ ಸಂವೇದನೆಗಳು ಖಂಡಿತ ಕೆಲಸ ಮಾಡುತ್ತವೆ. ಅವುಗಳನ್ನು ಗುರುತಿಸುವುದರ ಬಗ್ಗೆ ಜಾಗೃತಿಯನ್ನು ಹೊಂದುವುದು.

14. ಸೃಜನಶೀಲತೆಯ ಜಾಗೃತಿ: ಜೀವಂತವಾಗಿರುವ ವ್ಯಕ್ತಿ ಪ್ರಾಕೃತಿಕವಾಗಿ ಸೃಷ್ಟಿಶೀಲನಾಗಿರುತ್ತಾನೆ. ಹಾಗಾಗಿ ತನ್ನ ಕಲ್ಪನೆಗಳನ್ನು, ಸೃಜನಶೀಲತೆಯನ್ನು ಮತ್ತು ಹೊಸತರ ಸಂಶೋಧನೆಗಳನ್ನು ತನ್ನೆಲ್ಲಾ ಚಟುವಟಿಕೆಗಳಲ್ಲಿ ಅಭಿವೃದ್ಧಿಗೊಳಿಸಿಕೊಳ್ಳುವುದು.

15. ಹೊಂದಾಣಿಕೆ ಅಥವಾ ಸಲಿಲತೆಯ ಜಾಗೃತಿ: ಈ ಪ್ರಕೃತಿಯ ಆಗುಹೋಗುಗಳೊಂದಿಗೆ ಹೊಂದಿಕೊಳ್ಳಲು ಒಪ್ಪುವ ಅಥವಾ ಒಗ್ಗುವ ಜೀವಿಗಳು ಮಾತ್ರವೇ ತಮ್ಮ ಅಸ್ತಿತ್ವವನ್ನು ಕಾಪಾಡಿಕೊಳ್ಳುವುದು. ಹಾಗಾಗಿ ಸಂಕಷ್ಟದ ಸಮಯಗಳಲ್ಲಿ ಪರಿಸ್ಥಿತಿಗಳೊಂದಿಗೆ ಹಟಮಾರಿತನವಿಲ್ಲದೇ, ಜಟಿಲತೆ ಇಲ್ಲದೆ ಮನಸ್ಥಿತಿಯನ್ನು ಹೊಂದಿಸಿಕೊಳ್ಳುವುದು.

16. ನೈತಿಕ ಜಾಗೃತಿ: ಪ್ರದರ್ಶನಕ್ಕೆ ಅಥವಾ ಭಾಷಣಗಳಿಗೆ ಅಲ್ಲದೆ ಜೀವನದ ಮೌಲ್ಯಗಳನ್ನು ತನ್ನ ನಡೆ ಮತ್ತು ನುಡಿಗಳಲ್ಲಿ ಸ್ಪಷ್ಟವಾಗಿ ಕಾಪಾಡಿಕೊಳ್ಳುವುದು.

17. ವೈಚಾರಿಕ ಜಾಗೃತಿ: ಜೀವನ ಪೂರ್ತಿ ಕಲಿಕೆಗೆ ಸಿದ್ಧವಾಗಿರುವುದು ಮತ್ತು ಪೂರ್ವಾಗ್ರಹಗಳಿಲ್ಲದೆ, ಪೂರ್ವ ನಿರ್ಧಾರಗಳಿಲ್ಲದೆ ಮುಕ್ತ ಮನಸ್ಸಿನಿಂದ ವಿಷಯಗಳನ್ನು ತಾರ್ಕಿಕವಾಗಿ ಮತ್ತು ಸಹಾನುಭೂತಿಯಿಂದ ಆಲೋಚಿಸುವುದು.

18. ಆಧ್ಯಾತ್ಮಿಕ ಕೌಶಲ್ಯದ ಜಾಗೃತಿ: ಆಧ್ಯಾತ್ಮಿಕ ಪರಂಪರೆ ಅಥವಾ ಚಿಂತನೆಗಳನ್ನು ಆಚರಣೆಗಳಿಗೆ ಮಾತ್ರವೇ ಮೀಸಲಿಡದೇ ಲೌಕಿಕ ಮತ್ತು ಸಾಮಾನ್ಯವಾದ ದಿನನಿತ್ಯದ ನಡೆ ನುಡಿಗಳಲ್ಲಿ ಎಚ್ಚರಿಕೆಯಿಂದ ಕಾಪಾಡಿಕೊಳ್ಳುವುದು ಮತ್ತು ಪ್ರಕಟಗೊಳಿಸಿಕೊಳ್ಳುವುದು.

19. ಮಾಹಿತಿ ಮತ್ತು ತಂತ್ರಜ್ಞಾನದ ಜಾಗೃತಿ: ಪೀಳಿಗೆಗಳ ಮನಸ್ಥಿತಿ ಮತ್ತು ಪರಿಸ್ಥಿತಿಗಳು ರೂಪುಗೊಳ್ಳುವಲ್ಲಿ ಆಯಾ ಕಾಲದ ಮಾಹಿತಿ ತಂತ್ರಜ್ಞಾನಗಳ ಪ್ರಭಾವಗಳು ಮಹತ್ತರ ಪಾತ್ರವನ್ನು ವಹಿಸುತ್ತದೆ. ಅವು ಕಾಲದಿಂದ ಕಾಲಕ್ಕೆ ಅಭಿವೃದ್ಧಿ ಹೊಂದುತ್ತಿರುವುದರಿಂದ ಅದರ ಬಗ್ಗೆ ನಮ್ಮ ಕೌಶಲ್ಯವನ್ನು ವೃದ್ಧಿಸಿಕೊಳ್ಳುವುದು. ಹೊಣೆಯರಿತ ಬಳಕೆ ಮತ್ತು ಸುರಕ್ಷತೆಯಿಂದ ಆಯಾ ಕಾಲದ ಮಾಹಿತಿ ಮತ್ತು ತಂತ್ರಜ್ಞಾನಗಳನ್ನು ಬಳಸುವುದು.

20. ಸಮಗ್ರ ಜಾಗೃತಿ: ಒಟ್ಟಾರೆ ಬದುಕನ್ನು ರೂಪಿಸುವ ಅನೇಕಾನೇಕ ಅಂಶಗಳು ವ್ಯಕ್ತಿಗೆ ಎದುರಾಗುತ್ತಿರುತ್ತದೆ. ಹಾಗಾಗಿ ವ್ಯಕ್ತಿಯು ತನ್ನ ಜೀವ ಮತ್ತು ಜೀವನವನ್ನು ಆರೋಗ್ಯಕರವಾಗಿಸಿಕೊಳ್ಳುವಂತಹ ಅಂಶಗಳನ್ನು ಗುರುತಿಸಿ ಅಗತ್ಯಕ್ಕೆ ಅನುಗುಣವಾಗಿ ಅವುಗಳನ್ನು ಸ್ವೀಕರಿಸುವ ಮತ್ತು ತಿರಸ್ಕರಿಸುವ ಗಮನಶೀಲ ಮನಸ್ಥಿತಿಯನ್ನು ಹೊಂದಿರುವುದು. ಹಾಗೆಯೇ ತಿಳುವಳಿಕೆಯಿಲ್ಲದ ವ್ಯಕ್ತಿಗಳ ಬಗ್ಗೆ, ಒಳಿತು ಮಾಡಲು ಸಾಧ್ಯವಾಗದಿದ್ದರೂ ಸಹಾನುಭೂತಿಯಿಂದ ವರ್ತಿಸುವುದು. ಮಾತ್ರವಲ್ಲದೆ ತಮ್ಮಿಂದ ಅವರಿಗೂ, ಅವರಿಂದ ತಮಗೂ ತೊಂದರೆಯಾಗದಂತೆ ಎಚ್ಚರಿಕೆ ವಹಿಸುವುದು.   

Writer - ವಾರ್ತಾಭಾರತಿ

contributor

Editor - Musaveer

contributor

Byline - ಯೋಗೇಶ್ ಮಾಸ್ಟರ್,

contributor

Similar News

ಅತಿಶಯಕಾರರು
ಮೌನದ ಬಲ
ನಾಸ್ತಿಕ ಮದ
ಅಂಜುಗೇಡಿತನ
ಮನದರಿವು
ಬಯಲರಿವು
ಬಯಲರಿವು