ವಕ್ಫ್ ವಿವಾದದ ಸುಳ್ಳು-ಸತ್ಯಗಳು

Update: 2024-11-14 05:24 GMT
Editor : Thouheed | Byline : ಶಿವಸುಂದರ್

ಭಾಗ- 2

ವಕ್ಫ್ ಎಂದ ತಕ್ಷಣ ವಕ್ಫ್ ಆಗುತ್ತದೆಯೇ?

ವಕ್ಫ್ ಬೋರ್ಡ್ ತೀರ್ಮಾನಕ್ಕೆ ಅಪೀಲಿಲ್ಲವೇ?

ಇದು ವಕ್ಫ್‌ನ ಅರ್ಥ ಮತ್ತು ಅದರ ನಿರ್ವಹಣೆಯ ಸ್ವರೂಪ. ಈಗ ಬಿಜೆಪಿ ಇದರ ಬಗ್ಗೆ ಮಾಡುತ್ತಿರುವ ಅಪಪ್ರಚಾರವನ್ನು ಗಮನಿಸೋಣ. ಅದರಲ್ಲಿ ರೈತರನ್ನು ಕಂಗೆಡಿಸಿರುವುದು ಒಮ್ಮೆ ವಕ್ಫ್ ಎಂದಾದರೆ ಜಮೀನನ್ನು ಕಿತ್ತುಕೊಳ್ಳುತ್ತಾರೆ ಎಂಬ ಪುಕಾರು.

ಈಗಾಗಲೇ ಗಮನಿಸಿದಂತೆ ಯಾವುದೇ ಆಸ್ತಿಯನ್ನು ವಕ್ಫ್ ಎಂದು ಗುರುತಿಸುವುದು ಸರಕಾರ ನೇಮಿಸಿದ ಸರ್ವೇ ಕಮಿಷನರ್. ಹಾಗೆ ಘೋಷಣೆ ಆಗುವ ಮುನ್ನ ದಾಖಲೆಗಳನ್ನು ಪರಿಶೀಲಿಸಿರಬೇಕು. ಇದು ಮೊದಲನೇ ಹಂತ. ಆನಂತರ ಅದು ವಕ್ಫ್ ಆಸ್ತಿ ಎಂದು ವಕ್ಫ್ ಬೋರ್ಡ್ ಘೋಷಿಸಿದ ನಂತರವೂ ವಕ್ಫ್ ಟ್ರಿಬ್ಯುನಲ್ ಮುಂದೆ ತಗಾದೆ ಹೂಡಬಹುದು. ಜಿಲ್ಲಾ ಹಂತದಲ್ಲೂ, ರಾಜ್ಯ ಮಟ್ಟದಲ್ಲೂ. ಬಿಜೆಪಿ ಹುಟ್ಟಿಸಿರುವ ಮತ್ತೊಂದು ಸುಳ್ಳು ಸುದ್ದಿ ವಕ್ಫ್ ಟ್ರಿಬ್ಯುನಲ್ ತೀರ್ಮಾನಕ್ಕೆ ಕೋರ್ಟಿನಲ್ಲಿ ಅಪೀಲು ಹಾಕಲು ಸಾಧ್ಯವಿಲ್ಲ ಎಂಬುದು. ಇದು ಹಸಿ ಸುಳ್ಳು.

ವಕ್ಫ್ ಟ್ರಿಬ್ಯುನಲ್‌ಗಳನ್ನು 1995ರ ವಕ್ಫ್ ಕಾಯ್ದೆಯಡಿ ರಚಿಸಲಾಗುತ್ತದೆ. ಆ ಕಾಯ್ದೆಯ ಸೆಕ್ಷನ್ 83 (9) ತುಂಬಾ ಸ್ಪಷ್ಟವಾಗಿ ಹೇಳುವಂತೆ ವಕ್ಫ್‌ನ ತೀರ್ಮಾನವನ್ನು ಮತ್ತು ಅದರ ಹಿಂದಿನ ದಾಖಲೆಗಳ ಸತ್ಯಾಸತ್ಯತೆಗಳನ್ನು ಹೈಕೋರ್ಟಿನಲ್ಲಿ ಪ್ರಶ್ನಿಸಬಹುದು. ಆಸಕ್ತರು ಸೆಕ್ಷನ್ 83ರ ಸಂಪೂರ್ಣ ವಿವರಗಳನ್ನು ಈ ವೆಬ್ ಲಿಂಕಿನಲ್ಲಿ ಪರಿಶೀಲಿಸಬಹುದು:

https://indiankanoon.org/doc/84071258/

ರಾಜ್ಯ ವಕ್ಫ್ ಬೋರ್ಡಿನ ಪ್ರಕಾರ ಒಟ್ಟಾರೆ ರಾಜ್ಯದಲ್ಲಿ 26,000 ವಕ್ಫ್ ಆಸ್ತಿಗಳಿದ್ದು 10 ಸಾವಿರ ಆಸ್ತಿಗಳು ಮಾತ್ರ ದಾಖಲಾತಿಯಾಗಿದೆ. ಒಂದು ಅಂದಾಜಿನ ಪ್ರಕಾರ ವಕ್ಫ್ ಆಸ್ತಿಯ ಘೋಷಣೆಯನ್ನು ಪ್ರಶ್ನಿಸಿ ಜಿಲ್ಲಾ ಟ್ರಿಬ್ಯುನಲ್ ಹಾಗೂ ರಾಜ್ಯ ಟ್ರಿಬುನಲ್‌ಗಳ ಮುಂದೆ 3,500 ಕೂ ಹೆಚ್ಚು ತಗಾದೆಗಳಿವೆ. ಹಾಗೂ ಹೈಕೋರ್ಟಿನಲ್ಲೇ 800ಕ್ಕೂ ಹೆಚ್ಚು ತಗಾದೆಗಳು ಬಾಕಿ ಇವೆ.

ಹೀಗಾಗಿ ವಕ್ಫ್ ಆದೇಶಕ್ಕೆ ಅಪೀಲಿಲ್ಲ ಎನ್ನುವ ಬಿಜೆಪಿಯ ವಾದ ಹಸಿ ಸುಳ್ಳು. ಕೇವಲ ರೈತರಿಗೆ ಆತಂಕ ಹುಟ್ಟಿಸುವುದು ಮಾತ್ರ ಅದರ ಉದ್ದೇಶ.

ಅಷ್ಟು ಮಾತ್ರವಲ್ಲ. 2024ರ ಆಗಸ್ಟ್‌ನಲ್ಲಿ ಕರ್ನಾಟಕದ ಹೈಕೋರ್ಟ್, ಸರಿಯಾದ ನಿಯಮಗಳನ್ನು ಮತ್ತು ಪ್ರಕ್ರಿಯೆಗಳನ್ನು ಅನುಸರಿಸದೆ ಮತ್ತು ನೋಟಿಸು ನೀಡದೆ ದಾಖಲೆಗಳಲ್ಲಿ ವಕ್ಫ್ ಒಡೆತನ ಎಂದು ನಮೂದಿಸಿದ ಮಾತ್ರಕ್ಕೆ ಅದು ವಕ್ಫ್ ಆಸ್ತಿಯಾಗದು ಎಂದು ಸ್ಪಷ್ಟವಾದ ತೀರ್ಪು ನೀಡಿದೆ. (https://www.livelaw.in/high-court/karnataka-high-court/karnataka-high-court-ruling-waqf-property-status-and-name-changes-revenue-records-267250)

ಹೀಗಾಗಿ ರೈತರ ಆತಂಕಕ್ಕೆ ಯಾವ ಕಾರಣವೂ ಇಲ್ಲ. ಬಿಜೆಪಿಯು ರೈತರ ಆತಂಕವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ.

ದೇಶಾದ್ಯಂತ ವಕ್ಫ್ ಬೋರ್ಡಿಗೆ ಇರುವ ಜಮೀನೆಷ್ಟು?

ದೇವಸ್ಥಾನಗಳಿಗೆಷ್ಟು?

ದೇಶದಲ್ಲಿ ರಕ್ಷಣಾ ಇಲಾಖೆಗೆ 35 ಲಕ್ಷ ಎಕರೆ, ರೈಲ್ವೆಗೆ 16 ಲಕ್ಷ ಎಕರೆ ಬಿಟ್ಟರೆ ಅತಿ ಹೆಚ್ಚು ಜಮೀನಿರುವುದು ವಕ್ಫ್ ಬೋರ್ಡಿಗೆ -9 ಲಕ್ಷ ಎಕರೆ- ಎಂದು ಅರ್ಧ ಸತ್ಯವನ್ನು ಅಪಪ್ರಚಾರ ಬಿಜೆಪಿ ಮಾಡುತ್ತಿದೆ.

ವಾಸ್ತವದಲ್ಲಿ ರಕ್ಷಣಾ ಇಲಾಖೆಯಷ್ಟೇ ಅಥವಾ ಅದಕ್ಕಿಂತ ಸ್ವಲ್ಪ ಕಡಿಮೆ ಭೂಮಿಯ ಒಡೆತನವನ್ನು ಹೊಂದಿರುವುದು ದೇಶದಲ್ಲಿ ಹಿಂದೂ ದೇವಸ್ಥಾನಗಳು ಮತ್ತು ಮಠಗಳು. ಉದಾಹರಣೆಗೆ ಹಾಲಿ ಆಂಧ್ರಪ್ರದೇಶ ರಾಜ್ಯ ಒಂದರಲ್ಲೇ ದೇವಸ್ಥಾನಗಳು ಮತ್ತು ಮಠಗಳಿಗೆ 4.2 ಲಕ್ಷ ಎಕರೆ ಜಮೀನಿದೆ. ತಮಿಳುನಾಡಿನಲ್ಲಿ 5 ಲಕ್ಷ ಎಕರೆ ಜಮೀನಿದೆ. ಹೀಗೆ ಎರಡು ರಾಜ್ಯಗಳಲ್ಲೇ ಹಿಂದೂ ದೇವಸ್ಥಾನ ಮತ್ತು ಮಠಗಳಿಗೆ 9 ಲಕ್ಷಕ್ಕೂ ಹೆಚ್ಚು ಎಕರೆ ಜಮೀನಿದೆ. ಅದರಲ್ಲಿ ಉಳುತ್ತಿರುವ ಹಿಂದೂ ರೈತರಿಗೆ ಸರಕಾರಗಳು ಎತ್ತಂಗಡಿ ನೋಟಿಸು ಕೊಡುತ್ತಿವೆ.

ವಾಸ್ತವವಾಗಿ ರಾಜ್ಯ ವಕ್ಫ್ ಬೋರ್ಡಿನ ಪ್ರಕಾರ ವಕ್ಫ್ ಬೋರ್ಡಿಗೆ 1.08 ಲಕ್ಷ ಎಕರೆ ಆಸ್ತಿಯಿದ್ದು 85,000 ಎಕರೆ ಒತ್ತುವರಿಯಾಗಿದೆ. ಅವುಗಳಲ್ಲಿ ಬಹುಪಾಲು ಇನಾಮ್ತಿ ರದ್ದತಿ ಮತ್ತು ಭೂ ಸುಧಾರಣೆ ಕಾಯ್ದೆ ಹಾಗೂ ಸರಕಾರಗಳ ವಶದ ಮೂಲಕ ಹಾಗೂ ಒತ್ತುವರಿಗಳ ಮೂಲಕ ಕಳೆದುಕೊಳ್ಳಲಾಗಿದೆ. ಇಂದು ಕರ್ನಾಟಕದಲ್ಲಿ 113 ಲಕ್ಷ ಎಕರೆ ಜಮೀನುಗಳನ್ನು ಸಾಗುವಳಿ ಮಾಡಲಾಗುತ್ತಿದೆ. ಅದರಲ್ಲಿ ವಕ್ಫ್ ನ ಮೂಲ ಒಡೆತನದಲ್ಲಿ ಇದ್ದದ್ದೇ ಕೇವಲ ಒಂದು ಲಕ್ಷ ಎಕರೆ. ಅದರಲ್ಲಿ ಈಗ ಅದರ ಬಳಿ ಇರುವುದು ಕೇವಲ 20 ಸಾವಿರ ಎಕರೆ. ಅಂದರೆ ಅದು ಕರ್ನಾಟಕದ ರೈತರ ಹಿಡುವಳಿಯ ಶೇ. 0.01ರಷ್ಟು ಅಲ್ಲ. ಆದರೆ ಅದನ್ನು ಬಿಜೆಪಿ ಇಡೀ ರಾಜ್ಯದ ಸಮಸ್ಯೆಯನ್ನಾಗಿ ಮಾಡುತ್ತಿದೆ.

ಬಿಜೆಪಿಯ ವಕ್ಫ್ ವಿರೋಧಕ್ಕೆ ರೈತಪರತೆ ಕಾರಣವೇ?

ಈಗಾಗಲೇ ಪತ್ರಿಕೆಗಳಲ್ಲಿ ವರದಿಯಾಗಿರುವಂತೆ ಬಿಜೆಪಿ ಅಧಿಕಾರದಲ್ಲಿದ್ದ ಕಾಲದಲ್ಲೂ ವಿಜಾಪುರ ಹಾಗೂ ಇನ್ನಿತರ ಕಡೆಗಳಲ್ಲಿ ರೈತರಿಗೆ ಬಿಜೆಪಿ ನೇಮಿಸಿದ ವಕ್ಫ್ ಬೋರ್ಡೇ ನೋಟಿಸ್ ಕೊಟ್ಟಿತ್ತು. ಮುಖ್ಯಮಂತ್ರಿ ಬೊಮ್ಮಾಯಿಯವರೇ ‘‘ಒತ್ತುವರಿಯಾದ ವಕ್ಫ್ ಜಮೀನನ್ನು ವಾಪಸ್ ಪಡೆದುಕೊಳ್ಳದಿದ್ದರೆ ಭಗವಂತನು ಮುಸ್ಲಿಮ್ ನಾಯಕರನ್ನು ಕ್ಷಮಿಸುವುದಿಲ್ಲ’’ ಎಂದು ಎಚ್ಚರಿಸಿದ್ದರು. ಬಿಜೆಪಿಯ ಪ್ರಣಾಳಿಕೆಯಲ್ಲೂ ಒತ್ತುವರಿಯಾದ ವಕ್ಫ್ ಜಮೀನನ್ನು ಮರಳಿ ಪಡೆದುಕೊಳ್ಳಲಾಗುವುದು ಎಂದು ಭರವಸೆ ನೀಡಲಾಗಿತ್ತು. ಹೀಗಾಗಿ ಬಿಜೆಪಿ ಕಾಂಗ್ರೆಸ್ ಕೊಟ್ಟಿರುವ ನೋಟಿಸಿಗೆ ವಿರೋಧ ಮಾಡುತ್ತಿರುವುದರಲ್ಲಿ ಕ್ಷುಲ್ಲಕ ರಾಜಕೀಯ ಬಿಟ್ಟರೆ ಆದರಲ್ಲಿ ರೈತಪರತೆ ಇಲ್ಲ.

ಈಗಾಗಲೇ ಗಮನಿಸಿದಂತೆ ವಕ್ಫ್ ಬೋರ್ಡುಗಳಿಗಿಂತ ದೇವಸ್ಥಾನ ಮತ್ತು ಮಠಗಳ ಬಳಿ ಅತಿ ಹೆಚ್ಚು ಜಮೀನುಗಳಿವೆ. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಆಂಧ್ರದಲ್ಲಿ ಅಧಿಕಾರಕ್ಕೆ ಬಂದ ಟಿಡಿಪಿ-ಬಿಜೆಪಿ ಸರಕಾರ ಅದರಲ್ಲಿ 87,000 ಎಕರೆಯನ್ನು ರೈತರು ಒತ್ತುವರಿ ಮಾಡಿದ್ದಾರೆಂದು ಗುರುತಿಸಿ ಅವರನ್ನು ಎತ್ತಂಗಡಿ ಮಾಡಲು ನೋಟಿಸು ಕೊಡುವುದಾಗಿ ಘೋಷಿಸಿದೆ. ಹಾಗೆಯೇ ಒಡಿಶಾದ ಬಿಜೆಪಿ ಸರಕಾರವೂ ದೇವಸ್ಥಾನಗಳ ಜಮೀನಿನಿಂದ ಹಿಂದೂ ರೈತರನ್ನು ಎತ್ತಂಗಡಿ ಮಾಡುವ ಸಿದ್ಧತೆಯಲ್ಲಿದೆ. ದೇವಸ್ಥಾನ ಮತ್ತು ಮಠಗಳ ಜಮೀನಿನ ತಗಾದೆಯ ವಿಷಯದಲ್ಲಿ ವಕ್ಫ್ ಟ್ರಿಬುನಲ್ ರೀತಿಯ ವ್ಯವಸ್ಥೆಯೂ ಇಲ್ಲ. ಅದನ್ನು ನೇರವಾಗಿ ಇತರ ಕೋರ್ಟ್‌ಗಳಲ್ಲೇ ಪ್ರಶ್ನಿಸಬೇಕು. ಇದು ಬಿಜೆಪಿಯ ಸೋಗಲಾಡಿತನ.

ಅಷ್ಟು ಮಾತ್ರವಲ್ಲ, ತಾನು ಅಧಿಕಾರದಲ್ಲಿದ್ದ ಕಡೆಗಳೆಲ್ಲಾ ರೈತರನ್ನು ಒಕ್ಕಲೆಬ್ಬಿಸಿ ರೈತರ ಜಮಿನನ್ನು ಕಾರ್ಪೊರೇಟ್‌ಗಳಿಗೆ ಪರಭಾರೆ ಮಾಡುತ್ತಿರುವುದು, ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದಾಗ ಭೂ ಸುಧಾರಣೆಯ ಕಾಯ್ದೆಯ ಸೆಕ್ಷನ್ 79ಎ, ಬಿ, ಸಿಗಳಿಗೆ, 80 ಮತ್ತು 106ಕ್ಕೆ ತಿದ್ದುಪಡಿ ತಂದು ಉಳುವವನ ಕೈಯಿಂದ ಉಳ್ಳವರ ಕೈಗೆ ಭೂಮಿ ಜಾರುವಂತೆ ಮಾಡಿದ್ದು ಕೂಡ ಇದೇ ಬಿಜೆಪಿ ಸರಕಾರ. ಕೇಂದ್ರದಲ್ಲಿ ಮೂರು ರೈತ ವಿರೋಧಿ ಕಾಯ್ದೆ ತಂದು ಅದರ ವಿರುದ್ಧ ಹೋರಡುತ್ತಿದ್ದ ರೈತರಲ್ಲಿ 700 ರೈತರನ್ನು ಸಾಯಿಸಿದ್ದು ಕೂಡ ಇದೇ ಬಿಜೆಪಿ.

ಹೀಗಾಗಿ ಬಿಜೆಪಿಯ ಧೂರ್ತತೆಯನ್ನು ರೈತರು ಅರ್ಥಮಾಡಿಕೊಳ್ಳಬೇಕಿದೆ.

ಮೋದಿ ತರುತ್ತಿರುವ ವಕ್ಫ್ ವಿನಾಶ ಕಾಯ್ದೆ

ಈಗಾಗಲೇ ಚರ್ಚಿಸಿದಂತೆ ಬಿಜೆಪಿ ಈ ವಿವಾದವನ್ನು ಹುಟ್ಟಿಹಾಕಿರುವುದೇ ತಾನು ಕೇಂದ್ರದಲ್ಲಿ ಜಾರಿ ಮಾಡಲು ಉದ್ದೇಶಿಸಿರುವ United Wakf -Management, Empowerment, Efficiency, Development-Act-UMEED-ಮಸೂದೆಯನ್ನು ಜಾರಿಗೆ ತರಲು ಬೇಕಿರುವ ಉದ್ವಿಘ್ನ ಸಮ್ಮತಿಯನ್ನು ರೂಢಿಸಿಕೊಳ್ಳಲು. ವಾಸ್ತವದಲ್ಲಿ ಉರ್ದುವಿನಲ್ಲಿ ‘ಉಮೀದ್’ ಎಂದರೆ ನಿರೀಕ್ಷೆ ಭರವಸೆ ಎಂದು. ಆದರೆ ಇದು ಅವೆಲ್ಲವನ್ನೂ ನಾಶ ಮಾಡುವ ಕಾಯ್ದೆಯಾಗಿದೆ.

ಮೊದಲನೆಯದಾಗಿ 1995 ಮತ್ತು 2013ರಲ್ಲಿ ಅಂದಿನ ಸರಕಾರಗಳು ಮಾಡಿದಂತೆ ಮೋದಿ ಸರಕಾರ ತಾನು ಜಾರಿ ಮಾಡಲು ಹೊರಟಿರುವ ವಕ್ಫ್ ಮಸೂದೆಯ ಬಗ್ಗೆ ಅದು ಯಾರ ಜೊತೆಗೂ ಸಮಾಲೋಚನೆ ಮಾಡಿಲ್ಲ. ಅದು ಪ್ರಸ್ತಾವಿಸಿರುವ ತಿದ್ದುಪಡಿಯ ಪ್ರಕಾರ ಇನ್ನು ಮುಂದೆ ಆರು ತಿಂಗಳೊಳಗೆ ಕಾಗದ ಪತ್ರ ತೋರಿಸಿ ದಾಖಲಾಗದ ಯಾವುದೇ ವಕ್ಫ್ ಆಸ್ತಿಯನ್ನು ವಕ್ಫ್ ಎಂದು ಪರಿಗಣಿಸಲಾಗುವುದಿಲ್ಲ. ಆದರೆ ಶೇ. 60 ಕ್ಕೂ ಹೆಚ್ಚು ವಕ್ಫ್ ಆಸ್ತಿಗಳು ಮೌಖಿಕ ಒಪ್ಪಂದಗಳ ಮೇಲೆ ಏರ್ಪಟ್ಟವು. ಅಷ್ಟು ಮಾತ್ರವಲ್ಲ, ಇನ್ನು ಮುಂದೆ ಜಿಲಾ ವಕ್ಫ್ ಟ್ರಿಬ್ಯುನಲ್ ಮತ್ತು ಸರ್ವೇ ಕಮಿಷನರ್‌ಗೆ ಇದ್ದ ಎಲ್ಲಾ ಜವಾಬ್ದಾರಿಗಳನ್ನು ಒಬ್ಬ ಜಿಲ್ಲಾಧಿಕಾರಿಗೆ ನೀಡಲಾಗಿದೆ. ಅದರಲ್ಲೂ ಒಂದು ಆಸ್ತಿ ಸರಕಾರಕ್ಕೆ ಸೇರಿದ್ದೋ ಅಥವಾ ವಕ್ಫ್‌ಗೋ ಎಂದು ತೀರ್ಮಾನ ಮಾಡುವ ನ್ಯಾಯಿಕ ಅಧಿಕಾರವನ್ನು ಕೂಡ ಕಾರ್ಯಾಂಗದ ಜಿಲ್ಲಾಧಿಕಾರಿಗೆ ನೀಡಲಾಗಿದೆ. ಜಿಲ್ಲಾಧಿಕಾರಿ ತೀರ್ಮಾನವೇ ಅಂತಿಮ. ಅದನ್ನು ಹೈಕೋರ್ಟಿನಲ್ಲೇ ಪ್ರಶ್ನಿಸಬೇಕು. ಅಷ್ಟು ಮಾತ್ರವಲ್ಲದೆ ಕೇಂದ್ರೀಯ ವಕ್ಫ್ ಕೌನ್ಸಿಲ್ ಅನ್ನು ರದ್ದು ಮಾಡಲಾಗಿದೆ. ಹಿಂದೆ ಇದ್ದಂತೆ ಸರ್ವೇ ಕಮಿಷನರ್, ವಕ್ಫ್ ಬೋರ್ಡ್ ಮತ್ತು ವಕ್ಫ್ ಟ್ರಿಬ್ಯುನಲ್‌ಗೆ ನೇಮಕವಾಗುವ ಸರಕಾರಿ ಅಧಿಕಾರಿ ಮುಸ್ಲಿಮನಾಗಿರಬೇಕೆಂಬ ಷರತ್ತನ್ನು ತೆಗೆದು ಹಾಕಲಾಗಿದೆ.

ಅಲ್ಲದೆ ವಕ್ಫ್ ಬೋರ್ಡಿನಲ್ಲಿ ಕಡ್ಡಾಯವಾಗಿ ಮುಸ್ಲಿಮೇತರರನ್ನು ನೇಮಿಸಬೇಕೆಂದು ಬದಲಿಸಲಾಗಿದೆ.

ಆದರೆ ಈ ಬಗೆಯ ಷರತ್ತು ಹಿಂದೂ ಧಾರ್ಮಿಕ ಅಥವಾ ಸಿಖ್ ಅಥವಾ ಕ್ರಿಶ್ಚಿಯನ್ ಸಂಸ್ಥೆಗಳಿಗೆ ಇಲ್ಲ. ಹೀಗಾಗಿ ಇದರ ಹಿಂದಿನ ದುರುದ್ದೇಶ ಸ್ಪಷ್ಟ.

ಈವರೆಗೆ ವಕ್ಫ್ ಕಾಯ್ದೆಗಳಲ್ಲಿ ತಿದ್ದುಪಡಿ ಆಗುತ್ತಿದ್ದದ್ದು ಅಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ತಡೆಯಲು ಮತ್ತು ಒತ್ತುವರಿಯಾದ ವಕ್ಫ್ ಜಮೀನನ್ನು ಆಸ್ತಿಗಳನ್ನು ಪಡೆಯಲು. ಆದರೆ ಮೋದಿ ಸರಕಾರ ತರುತ್ತಿರುವ ತಿದ್ದುಪಡಿ ವಕ್ಫ್ ಆಸ್ತಿಗಳನ್ನು ಸರಕಾರ ಒತ್ತುವರಿ ಮಾಡಲು ಮತ್ತು ವಕ್ಫಿನ ಇಸ್ಲಾಮಿಕ್ ಧಾರ್ಮಿಕತೆಯನ್ನು ನಾಶಮಾಡಲು.

ಹಾಗೆ ನೋಡಿದರೆ ಹಿಂದೂ ಧಾರ್ಮಿಕ ಸಂಸ್ಥೆಗಳನ್ನು ಸರಕಾರಿ ಹಿಡಿತದಿಂದ ವಿಮೋಚನೆ ಮಾಡಬೇಕೆಂದು ಉಗ್ರವಾಗಿ ಆಗ್ರಹಿಸು ತ್ತಿರುವ ಸಂಘಪರಿವಾರ ಮತ್ತು ಬಿಜೆಪಿ ಮುಸ್ಲಿಮ್ ವಕ್ಫ್ ವಿಷಯ ದಲ್ಲಿ ಸರಕಾರಿ ಹಿಡಿತವನ್ನು ಹೆಚ್ಚಿಸುವ ಮತ್ತು ಮುಸ್ಲಿಮ್ ಆಸ್ತಿಗಳ ನ್ನು ರಾಷ್ಟ್ರೀಕರಿಸುವ ಹಿಂದುತ್ವವಾದಿ ದುರುದ್ದೇಶವನ್ನು ಹೊಂದಿದೆ.

ಇದು ಮುಸ್ಲಿಮರ ಅಸ್ತಿತ್ವ, ಅಸ್ಮಿತೆ, ಬದುಕು ಮತ್ತು ನಾಗರಿಕತ್ವವನ್ನೇ ನಾಶ ಮಾಡುವ ಉಗ್ರ ಹಿಂದುತ್ವ ಯೋಜನೆಯ ಭಾಗವಾಗಿದೆ. ಆದ್ದರಿಂದಲೇ ಬಿಜೆಪಿಯ ವಕ್ಫ್ ವಿರೋಧ ಮುಸ್ಲಿಮರನ್ನು ಕಂಗಾಲು ಮಾಡುತ್ತಿದೆ.

ಮುಸ್ಲಿಮರ ಆತಂಕ-ರೈತರ

ಆತಂಕ ಬಗೆಹರಿಸುವ ಮಾರ್ಗ

ಮತ್ತೊಂದು ಕಡೆ ಹಲವಾರು ದಶಕಗಳಿಂದ ಉಳುಮೆ ಮಾಡುತ್ತಿರುವ ರೈತರಿಗೆ ಜಮೀನು ನಿಮ್ಮದಲ್ಲ ಎಂಬ ನೋಟಿಸು ಬಂದರೆ ಸಹಜವಾಗಿಯೇ ಈಗಾಗಲೇ ಜರ್ಝರಿತವಾಗಿರುವ ರೈತರು ಮತ್ತಷ್ಟು ಕಂಗಾಲಾಗುತ್ತಾರೆೆ. ಆದರೆ 1998ರ ಜನವರಿ 28ರಂದು ಸುಪ್ರೀಂ ಕೋರ್ಟಿನ ದ್ವಿಸದಸ್ಯ ಪೀಠ ಕೊಟ್ಟ ತೀರ್ಪಿನ ಪ್ರಕಾರವೂ ಒಮ್ಮೆ ಒಂದು ಆಸ್ತಿಯ ಸ್ವರೂಪ ವಕ್ಫ್ ಸ್ವರೂಪದ್ದಾಗಿದ್ದಲ್ಲಿ ಅದು ಶಾಶ್ವತವಾಗಿ ವಕ್ಫ್ ಸ್ವರೂಪದ್ದೇ ಆಗಿರುತ್ತದೆ. ಅದರ ಒಡೆತನವನ್ನು ವರ್ಗಾವಣೆ ಮಾಡಲು ಬರುವುದಿಲ್ಲ. ಆ ಆದೇಶದ ಮುಂದುವರಿಕೆಯಾಗಿಯೇ ಈಗ ಒತ್ತುವರಿಯಾಗಿರಬಹುದಾದ ಆಸ್ತಿಗಳಿಗೆ ವಕ್ಫ್ ನೋಟಿಸು ಕೊಡುತ್ತಿದೆ. ಆ ಪ್ರಕ್ರಿಯೆಯನ್ನು ನಿಲ್ಲಿಸುವುದು ನ್ಯಾಯಾಂಗ ನಿಂದನೆಯೇ ಆಗುತ್ತದೆ.

ಹಾಗಿದ್ದರೆ ಪರಿಹಾರವೇನು?

ವಾಸ್ತವದಲ್ಲಿ ವಕ್ಫ್ ಆಸ್ತಿಗಳ ಅತಿ ಹೆಚ್ಚು ದುರ್ಬಳಕೆಯಾಗಿರು ವುದು ಮುಸ್ಲಿಮ್ ಸಮಾಜದ ಶ್ರೀಮಂತರು ಮತ್ತು ರಾಜಕಾರಣಿ ಗಳಿಂದಲೇ. ವಕ್ಫ್ ಆಸ್ತಿಗಳ ಒಡೆತನವನ್ನು ಬದಲಾಯಿಸಲು ಸಾಧ್ಯವಿಲ್ಲವಾದರೂ ಅದರ ಗುತ್ತಿಗೆ ಮತ್ತು ಉಪಗುತ್ತಿಗೆಯನ್ನು ಆ ಆಸ್ತಿಯ ಉಸ್ತುವಾರಿ ನೋಡಿಕೊಳ್ಳುವ ಮುತವಲ್ಲಿ ಮಾಡಬಹುದು. ಈ ಅವಕಾಶವನ್ನು ಬಳಸಿಕೊಂಡು ಕೋಟ್ಯಂತರ ರೂ. ಗುತ್ತಿಗೆ ಆದಾಯ ತರಬಹುದಾದ ಆಸ್ತಿಗಳನ್ನು ವಿಂಡ್ಸರ್ ಮ್ಯಾನರ್‌ನಂತಹ ಪಂಚತಾರಾ ಹೊಟೇಲ್‌ಗಳಿಗೆ ಅಥವಾ ಅಂಬಾನಿಯ ಅರಮನೆಗೆ ಕೆಲವು ಸಾವಿರ ಅಥವಾ ಲಕ್ಷ ರೂಪಾಯಿಗಳಿಗೆ ಗುತ್ತಿಗೆ ಕೊಟ್ಟು ವಾಸ್ತವದ ಹಣವನ್ನು ಅದರ ಉಸ್ತುವಾರಿಗಳು ಮತ್ತು ಅವರ ಹಿಂದಿರುವ ರಾಜಕಾರಣಿಗಳು ಮತ್ತು ಬಲಾಢ್ಯರು ಭ್ರಷ್ಟಾಚಾರ ಮಾಡುತ್ತಿದ್ದಾರೆ. ವಕ್ಫ್ ಬೋರ್ಡಿಗೆ ಅತಿ ದೊಡ್ಡ ನಷ್ಟವಾಗುತ್ತಿರುವುದು ನಗರದ ವಕ್ಫ್ ಆಸ್ತಿಗಳ ದುರ್ಬಳಕೆ ಮತ್ತು ಒತ್ತುವರಿಗಳಿಂದ. ನಿಗ್ರಹಿಸಬೇಕಿರುವುದು ಅದನ್ನು.

ಗ್ರಾಮೀಣ ಪ್ರದೇಶದಲ್ಲಿ ರೈತರು ದಶಕಗಳಿಂದ ಉಳುಮೆ ಮಾಡುತ್ತಿರುವ ಜಮೀನುಗಳು ಅಕಸ್ಮಾತ್ ವಕ್ಫ್ ಭೂಮಿಯೇ ಆಗಿದ್ದರೂ ಅದನ್ನು ಅವರಿಂದ ಕಿತ್ತುಕೊಳ್ಳುವುದರಿಂದ ವಕ್ಫ್‌ಗೆ ಯಾವ ಹೊಸ ಆದಾಯವೂ ಬರುವುದಿಲ್ಲ. ಏಕೆಂದರೆ ಅದು ಉಳುಮೆ ಮಾಡುವ ಭೂಮಿಯೇ ಅಗಿರುತ್ತದೆ. ಆದ್ದರಿಂದ ಅದು ವಕ್ಫ್ ಭೂಮಿಯೆಂದು ಸ್ಥಾಪಿತವಾದರೂ ಅದನ್ನು ರೈತರಿಗೆ ಉಳುಮೆಗೆ ಬಿಟ್ಟುಕೊಡುವುದರ ಮೂಲಕ ಮಾತ್ರ ವಕ್ಫ್‌ಗೆ, ಮುಸ್ಲಿಮ್ ಸಮುದಾಯಕ್ಕೆ ಮತ್ತು ಒಟ್ಟಾರೆ ಸಮಾಜಕ್ಕೆ ಸಾಮಾಜಿಕ ಆರ್ಥಿಕ ಲಾಭ ಹಾಗೂ ನಿಜವಾದ ಪರಿಹಾರ ಸಿಗುತ್ತದೆ.

ಹೀಗಾಗಿ ಈ ಸಮಸ್ಯೆಯನ್ನು ರೈತರು, ವಕ್ಫ್ ಬೋರ್ಡ್, ಮುಸ್ಲಿಮ್ ಸಮುದಾಯ ಮತ್ತು ಸರಕಾರ ಸೌಹಾರ್ದ ಭಾವದಿಂದ ಒಬ್ಬರ ಆತಂಕವನ್ನು ಮತ್ತೊಬ್ಬರು ಅರ್ಥಮಾಡಿಕೊಳ್ಳುವ ಭ್ರಾತೃತ್ವದ ಮೂಲಕ ಮಾತ್ರ ಬಗೆಹರಿಸಲು ಸಾಧ್ಯ. ಅದು ಸಾಧ್ಯವಾಗಬೇಕೆಂದರೆ ಸಹೋದರರ ನಡುವೆ ಬೆಂಕಿ ಹಚ್ಚುವ ಬಿಜೆಪಿ ಮತ್ತು ಸಂಘ ಪರಿವಾರವನ್ನು ರೈತರು ಮತ್ತು ಸಮಾಜ ದೂರವಿಡಬೇಕಾದ್ದು ಮೊದಲ ಹೆಜ್ಜೆ. ಅಲ್ಲವೇ?

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಶಿವಸುಂದರ್

contributor

Similar News