ಅಂಬೇಡ್ಕರ್ ದ್ವೇಷಿ, ಸಂವಿಧಾನ ದ್ರೋಹಿಗಳ ‘ಸಂವಿಧಾನ ಸನ್ಮಾನ ಅಭಿಯಾನ’
ಸಂಘಪರಿವಾರದ ಅಂಗಸಂಸ್ಥೆಗಳು ಈಗ ನಡೆಸುತ್ತಿರುವ ‘ಸಂವಿಧಾನ ಸನ್ಮಾನ ಅಭಿಯಾನ’ದಲ್ಲಿ ಸಂವಿಧಾನದ ಹಾಗೂ ಅಂಬೇಡ್ಕರ್‌ರ ನಿಜವಾದ ಅನುಯಾಯಿಗಳು ತಾವೇ ಹೊರತು ಕಾಂಗ್ರೆಸ್ ಅಥವಾ ಇತರ ಪಕ್ಷಗಳಲ್ಲ ಎಂದು ನಂಬಿಸಲು ಹಲವಾರು ಸುಳ್ಳುಗಳನ್ನು, ಐತಿಹಾಸಿಕ ಅರ್ಧ ಸತ್ಯಗಳನ್ನು, ಪ್ರಚಾರ ಮಾಡುತ್ತಿದೆ. ಆ ಮೂಲಕ ತನ್ನ ನಿಜ ಸ್ವರೂಪವಾದ ಅಂಬೇಡ್ಕರ್ ದ್ವೇಷ ಹಾಗೂ ಸಂವಿಧಾನ ದ್ರೋಹವನ್ನು ಮರೆಮಾಚುವ ಕುತಂತ್ರ ನಡೆಸಿದೆ.. ಈ ಸರಣಿ ಲೇಖನವು ಸಂಘಿ ಅಭಿಯಾನದ ಸುಳ್ಳುಗಳನ್ನು, ಬಯಲಿಗೆಳೆಯಲಿದೆ ಮತ್ತು ಸಂಘಿಗಳ ಅಸಲಿ ಪಾತ್ರವನ್ನು ಮತ್ತು ಹಾಲಿ ದುರುದ್ದೇಶಗಳನ್ನು ಅನಾವರಣ ಮಾಡಲಿದೆ.. ಕರ್ನಾಟಕದ ರಾಜಕೀಯ ಆರೋಗ್ಯದ ಹಿತದೃಷ್ಟಿಯಿಂದ ಈ ಸರಣಿಯನ್ನು ಪ್ರಕಟಿಸಲಾಗುತ್ತಿದೆ.
ಸರಣಿ- 2
ಗುಜರಾತಿನಲ್ಲಿ ಅಂಬೇಡ್ಕರ್ ಬಗ್ಗೆ ಇರುವ ಪಠ್ಯದಲ್ಲಿ ಅಂಬೇಡ್ಕರ್ ಬೌದ್ಧಕ್ಕೆ ಮರಳಿದಾಗ ಬೋಧಿಸಿದ 22 ಪ್ರತಿಜ್ಞೆಗಳನ್ನೇ ತೆಗೆದುಹಾಕಿದೆ.
ಹಿಂದುತ್ವವನ್ನು ಆಮೂಲಾಗ್ರವಾಗಿ ವಿರೋಧಿಸಿದ ಹಾಗೂ ಹಿಂದೂ ಧರ್ಮವನ್ನು ತೊರೆದು ಬೌದ್ಧಕ್ಕೆ ಮರಳಿದ ಅಂಬೇಡ್ಕರ್‌ರನ್ನು ಸಂಘಪರಿವಾರ ಹಿಂದೂ ಸಂಸತ್ ಪರಂಪರೆಯ ಕೊನೆಯ ಸಂತ ಎಂದು ಮತ್ತೆ ಹಿಂದೂವೀಕರಿಸಲು ಯತ್ನಿಸುತ್ತಿದೆ. ಹಾಗೆಯೇ ಅಂಬೇಡ್ಕರ್ ಬದುಕಿ ಬಾಳಿದ ಐದು ಸ್ಥಳಗಳನ್ನು ಪಂಚಕ್ಷೇತ್ರಗಳೆಂದು ಬ್ರಾಹ್ಮಣೀಯ ನಾಮಕರಣ ಮಾಡಿದೆ.
ಅಂಬೇಡ್ಕರ್ ಗುರುವೆನ್ನುವ ಬುದ್ಧನನ್ನು ದೇಶದ್ರೋಹಿ ಎನ್ನುವ ಸಂಘ
ಅಂಬೇಡ್ಕರ್ ಸಿದ್ಧಾಂತವೆಂಬುದು ಸಾಮಾಜಿಕ ಸಮಾನತೆ ಎನ್ನುವುದಾದರೆ ಅಂಬೇಡ್ಕರ್ ಅದಕ್ಕಾಗಿಯೇ ಬುದ್ಧನನ್ನು ತನ್ನ ಗುರುವೆಂದು ಘೋಷಿಸುತ್ತಾರೆ. ಹಾಗೂ ಅಂತಿಮವಾಗಿ ಹಿಂದೂ ಧರ್ಮವನ್ನು ತೊರೆದು 1956ರಲ್ಲಿ ಬೌದ್ಧ ಧರ್ಮಕ್ಕೆ ಮರಳುತ್ತಾರೆ.
ಆದರೆ ಅಂಬೇಡ್ಕರ್ ತನ್ನ ಸೈದ್ಧಾಂತಿಕ ಗುರು ಎಂದು ಮಾನ್ಯ ಮಾಡಿದ ಬುದ್ಧನ ಬಗ್ಗೆ, ತಾವೇ ನಿಜವಾದ ಅಂಬೇಡ್ಕರ್ ಅನುಯಾಯಿಗಳೆಂದು ಹೇಳುವ ಸಂಘಿಗಳ ನಿಲುವೇನಿತ್ತು?
ಇದನ್ನು ಸಂಘಿಗಳ ಪಿತಾಮಹ ತಮ್ಮ ‘‘Six Glorious Epochs Of Indian History’ ಎಂಬ ತಮ್ಮ ಕೊನೆಯ ಪುಸ್ತಕದಲ್ಲಿ ಬುದ್ಧ ಹಾಗೂ ಬೌದ್ಧ ಧರ್ಮ ಈ ದೇಶದ ಪ್ರಥಮ ದೇಶದ್ರೋಹಿ ಧರ್ಮ ಮತ್ತು ವ್ಯಕ್ತಿ ಎಂದು ಕನಿಷ್ಠ 28 ಸಾರಿ ಹೀಗಳೆಯುವ ಮೂಲಕ ಸ್ಪಷ್ಟಪಡಿಸುತ್ತಾರೆ.
‘‘ಬೌದ್ಧ ಧರ್ಮವು ಜಾತಿ, ಜನಾಂಗ ಅಥವಾ ರಾಷ್ಟ್ರೀಯತೆಗಳ ವ್ಯತ್ಯಾಸಗಳನ್ನೇ ಗುರುತಿಸಲಿಲ್ಲ. ಇಂತಹ ರಾಷ್ಟ್ರದ್ರೋಹಿ, ಭಾರತ ದ್ರೋಹಿ ಚಿಂತನೆಗಳ ಮೂಲಕ ಬೌದ್ಧ ಪ್ರಚಾರಕರು ಭಾರತದ ಜನರನ್ನು ದಾರಿತಪ್ಪಿಸಲು ಪ್ರಾರಂಭಿಸಿದರು.’’ -ಪು. 60
‘‘ಈ ಭಾರತೀಯ ಬೌದ್ಧರ ಇಂತಹ ಅತ್ಯಂತ ಖಂಡನಾರ್ಹ ದ್ರೋಹಪೂರಿತ ಕೃತ್ಯಗಳನ್ನು, ರಾಷ್ಟ್ರೀಯ ಸ್ವಾತಂತ್ರ್ಯವನ್ನು ಕಡೆಗಾಣಿಸಲು ರೂಪಿಸಿದ ತಂತ್ರಗಳನ್ನು ಮತ್ತು ಬೌದ್ಧ ವಿಹಾರಗಳಲ್ಲಿ ಮತ್ತು ಸಂಸ್ಥೆಗಳಲ್ಲಿ ದೇಶದ್ರೋಹಿ ಕೃತ್ಯಗಳನ್ನು ಎಸಗಲು ದೊರೆಯುತ್ತಿದ್ದ ಬಹಿರಂಗ ಪ್ರಚೋದನೆಗಳನ್ನು ಕಠಿಣವಾಗಿ ನಿಗ್ರಹಿಸಲು ಪುಷ್ಯಮಿತ್ರ ಮತ್ತವರ ದಂಡನಾಯಕರು ಕಾಲದ ಅನಿವಾರ್ಯತೆಯಿಂದಾಗಿ ದೇಶದ್ರೋಹಿ ಕೃತ್ಯಗಳಲ್ಲಿ ಭಾಗವಹಿಸಿದ್ದ ಬೌದ್ಧರನ್ನು ಗಲ್ಲಿಗೇರಿಸಬೇಕಾಯಿತು ಮತ್ತು ದೇಶದ್ರೋಹಿ ಕೃತ್ಯಗಳ ಕೇಂದ್ರವಾಗಿದ್ದ ಬೌದ್ಧವಿಹಾರಗಳನ್ನು ಕೆಡವಿ ನಾಶಗೊಳಿಸಬೇಕಾಯಿತು. ಅದು ಶತ್ರುಗಳ ಜೊತೆ ಕೈಗೂಡಿಸಿದ್ದಕ್ಕಾಗಿ, ದೇಶದ್ರೋಹದ ಅಪರಾಧಕ್ಕಾಗಿ ಮತ್ತು ಭಾರತದ ಸಾಮ್ರಾಜ್ಯ ಮತ್ತು ಸ್ವಾತಂತ್ರ್ಯಗಳನ್ನು ಕಾಪಾಡಿಕೊಳ್ಳುವುದಕ್ಕಾಗಿ ನೀಡಿದ ಶಿಕ್ಷೆಯಾಗಿತ್ತು. ಆದ್ದರಿಂದ ಅದು ಧಾರ್ಮಿಕ ಕಾರಣಕ್ಕಾಗಿ ನೀಡಿದ ಶಿಕ್ಷೆಯಾಗಿರಲಿಲ್ಲ. ಅದು, ಭಾರತದ ಸಾಮ್ರಾಜ್ಯದ ಆಡಳಿತ ಯಂತ್ರಾಂಗವನ್ನು ನಡೆಸುವ ಅತ್ಯುನ್ನತ ಅಧಿಕಾರ ಸ್ಥಾನದಲ್ಲಿದ್ದವನಾಗಿ ಪುಷ್ಯಮಿತ್ರ ಮಾಡಲೇ ಬೇಕಾದ ಕರ್ತವ್ಯವಾಗಿತ್ತು’’. ಪು- 72
(https://ia802907.us.archive.org/20/items/sixgloriousepochs ofindianhistoryvinayakdamodar sarvarkar_243_y/Six Glorious Epochs Of Indian History Vinayak Damodar Sarvarkar.pdf)
ಆರೆಸ್ಸೆಸ್‌ನ ಎರಡನೇ ಸರಸಂಘಚಾಲಕ ಗೋಳ್ವಾಲ್ಕರ್ ಸಹ ಸಾವರ್ಕರ್ ವಾದವನ್ನೇ ಮುಂದುವರಿಸುತ್ತಾ:
‘‘ಬೌದ್ಧರ ಕಾಲದಲ್ಲಿಯೂ ಭಾರತಕ್ಕೆ ಇದೇ ಬಗೆಯ ಆಪತ್ತು ಎದುರಾಗಿತ್ತು. ಬೌದ್ಧರು ಭಾರತದ ಧರ್ಮಸತ್ತೆಯನ್ನು ವಿರೋಧಿಸುವ ದೇಶದ್ರೋಹಿಗಳಾಗಿ ಬದಲಾಗಿದ್ದರು’’ ಎಂದು ಬಡ ಬಡಿಸುತ್ತಾರೆ
The Buddhist sect had turned a traitor to the mother society and the mother religion.ಎಂದು ಬರೆಯುತ್ತಾರೆ.
ಆಗ ಭಾರತವನ್ನು ಉಳಿಸಿದ್ದು ಶಂಕರಾಚಾರ್ಯರಂತೆ ...!
(Bunch Of Thoughts, Sahitya Sindhu Prakashana, Bangalore, 1966. p.70-71)
ಮನುಸ್ಮತಿ ಸುಟ್ಟ ಅಂಬೇಡ್ಕರ್-ಮನುಸ್ಮತಿಯೇ ಸಂವಿಧಾನವೆಂದ ಆರೆಸ್ಸೆಸ್-ಸಾವರ್ಕರ್
ಮೊದಲನೆಯದಾಗಿ ಸಾವರ್ಕರ್ ಅವರ 1932ರ ಕಿರ್ಲೋಸ್ಕರ್ ಲೇಖನವನ್ನು ಗಮನಿಸೋಣ.
ಆದರೆ, ಇದಕ್ಕೆ 5 ವರ್ಷಗಳಷ್ಟು ಮುಂಚೆಯೇ, 1927ರ ಡಿಸೆಂಬರ್‌ನಲ್ಲಿ ಅಂಬೇಡ್ಕರ್ ಅವರು ಮನುಸ್ಮತಿಯನ್ನು ದಲಿತ-ಮಹಿಳಾ-ಮಾನವತೆಯ ವಿರೋಧಿ ಗ್ರಂಥ ಎಂದು ಸುಟ್ಟುಹಾಕಿದ್ದರು ಎಂಬುದನ್ನು ನೆನಪಿನಲ್ಲಿಡೋಣ. ಹಾಗೆಯೇ ಅಸ್ಪಶ್ಯತೆಯ ಮೂಲ ಹಿಂದೂ ಧರ್ಮದಲಿದೆಯೆಂದೂ, ಅದರ ಸಾರ ಮನುಸ್ಮತಿಯಲ್ಲಿದೆಯೆಂದೂ, ಹಾಲಿ ಇರುವ ಬ್ರಾಹ್ಮಣಶಾಹಿ ಸಾಮಾಜಿಕ ವ್ಯವಸ್ಥೆಯು ನಿಂತಿರುವುದೇ ಮನುಸ್ಮತಿಯ ನಿರ್ದೇಶನ ಹಾಗೂ ಪ್ರೇರಣೆಗಳಿಂದ ಎಂದೂ ಸ್ಪಷ್ಟ ಪಡಿಸಿದ್ದರು.
ಇಂಥ ಮನುಸ್ಮತಿಯ ಬಗ್ಗೆ ಸಾವರ್ಕರ್ ಅವರು ತಮ್ಮ ಕಿರ್ಲೋಸ್ಕರ್ ಲೇಖನದಲ್ಲಿ ಹೀಗೆ ಬರೆಯುತ್ತಾರೆ:
‘‘ವೇದಗಳ ನಂತರದಲ್ಲಿ ನಮ್ಮ ಹಿಂದೂ ರಾಷ್ಟ್ರವು ಅತ್ಯಂತ ಪೂಜನೀಯ ಎಂದು ಗೌರವಿಸುವ ಶಾಸ್ತ್ರಗ್ರಂಥವೆಂದರೆ ಮನುಸ್ಮತಿ. ಇದು ಅನಾದಿ ಕಾಲದಿಂದಲೂ ನಮ್ಮ ಸಂಸ್ಕೃತಿ-ಸಂಪ್ರದಾಯಗಳ, ವಿಚಾರ ಹಾಗೂ ಆಚಾರಗಳ ಆಧಾರಪ್ರಾಯವಾದ ಗ್ರಂಥವಾಗಿದೆ. ಈ ಪುಸ್ತಕವು ನಮ್ಮ ರಾಷ್ಟ್ರವು ಶತಮಾನಗಳಿಂದ ಸಾಧಿಸುತ್ತಿರುವ ಆಧ್ಯಾತ್ಮಿಕ ಹಾಗೂ ದೈವಿಕ ಮುನ್ನಡೆಗಳನ್ನು ಸೂತ್ರೀಕರಿಸಿದೆ. ಇಂದಿಗೂ ಈ ದೇಶದ ಕೋಟ್ಯಂತರ ಜನರ ಜೀವನ ಮತ್ತು ನಡೆಗಳು ಮನುಸ್ಮತಿಯನ್ನೇ ಅನುಸರಿಸುತ್ತದೆ. ಇಂದು ಮನುಸ್ಮತಿಯೇ ಹಿಂದೂ ಕಾನೂನು ಕೂಡಾ ಆಗಿದೆ ಹಾಗೂ ಇದು ಹಿಂದೂ ದೇಶವಾಗಿದೆ’’ ಎಂದು ಘೋಷಿಸುತ್ತಾರೆ.
(VD Savarkar, `Women in Manusmriti' in Savarkar Samagar (collection of Savarkar's writings in Hindi), Prabhat, Delhi, vol. 4, p.415. ಶಂಸುಲ್ ಇಸ್ಲಾಮ್ ಅವರ ‘ಮಿಥ್ಸ್ ಆ್ಯಂಡ್ ಫ್ಯಾಕ್ಟ್ಸ್’ ಪುಸ್ತಕದಲ್ಲಿ ಉಲ್ಲೇಖ)
ಆದರೆ ಮನುಸ್ಮತಿಯ ಕಾನೂನುಗಳು ಮತ್ತು ಸೂತ್ರಗಳು ಎಷ್ಟು ಮಹಿಳಾ ವಿರೋಧಿ ಮತ್ತು ಅಸ್ಪಶ್ಯ ವಿರೋಧಿಯಿದೆ ಎಂಬುದನ್ನು ಆ ವೇಳೆಗಾಗಲೇ ಫುಲೆ-ಅಂಬೇಡ್ಕರ್ ಹಾಗೂ ಇನ್ನಿತರ ಬಹುಜನ ಚಿಂತಕರು ಬಯಲು ಮಾಡಿದ್ದರು. ಹೀಗಾಗಿ ಈ ನಿಟ್ಟಿನಲ್ಲಿ ಮನುಸ್ಮತಿಯ ಬಗ್ಗೆ ಎದ್ದಿರುವ ಪ್ರಶ್ನೆಯನ್ನು ಸಾವರ್ಕರ್ ಅವರು ಜಾಣತನದಿಂದ ಬಗೆಹರಿಸುತ್ತಲೇ ಮನುಸ್ಮತಿಯ ಪಾರಮ್ಯವನ್ನು ಎತ್ತಿಹಿಡಿಯುತ್ತಾರೆ. ಅವರ ಪ್ರಕಾರ:
‘‘...ಇಂದಿನ ದೃಷ್ಟಿಯಲ್ಲಿ ನೋಡುವುದಾದರೆ ಯಾವೆಲ್ಲ ವಿಷಯಗಳು ಮನುಸ್ಮತಿಯಲ್ಲಿ ಪ್ರತಿಗಾಮಿ ಎಂದು ಕಂಡುಬರುವುದೋ ಅವುಗಳನ್ನು ಕೈಬಿಡಬೇಕು ಎನ್ನುವುದು ಸರಿ. ಆದರೆ ಅಷ್ಟು ಮಾತ್ರಕ್ಕೆ ಮನುಸ್ಮತಿ ಅಪಾಯಕಾರಿಯೋ ಅಥವಾ ಕಾಲಬಾಹಿರವೋ ಆಗಿಬಿಡುವುದಿಲ್ಲ. ಬ್ಯಬಿಲೋನಿಯಾ, ಈಜಿಪ್ಟ್, ಹೀಬ್ರು, ಗ್ರೀಸ್ ಮತ್ತು ರೋಮನ್ ಸಮಾಜಗಳ ಸಾಮಾಜಿಕ ಸೂತ್ರಗಳಿಗೆ ಹೋಲಿಸಿದಲ್ಲಿ ಮನುಸ್ಮತಿ ಅವೆಲ್ಲಕ್ಕಿಂತ ಎತ್ತರದಲ್ಲಿ ನಿಲ್ಲುತ್ತದೆ. ಅದಕ್ಕಾಗಿ ನಾವು ಅದಕ್ಕೆ ಸಕಲ ಗೌರವಗಳನ್ನೂ ಸಲ್ಲಿಸಬೇಕು’’ ಎಂದು ಮನುಸ್ಮತಿಯನ್ನು ಸುಟ್ಟ ಅಂಬೇಡ್ಕರ್ ಅವರಿಗೆ ನೇರವಾಗಿ ಸವಾಲು ಹಾಕುತ್ತಾರೆ.
ಜಾತಿ ವಿನಾಶದ ಅಂಬೇಡ್ಕರ್-ಜಾತಿಯನ್ನು ರಕ್ಷಿಸಲು ಹುಟ್ಟಿಕೊಂಡ ಆರೆಸ್ಸೆಸ್
‘‘ಈ ಜಾತಿ ವಿನಾಶದ ಪ್ರತಿಪಾದನೆಗಳು ಭಾರತದ ರಾಜಕೀಯವನ್ನು ಕುಲಗೆಡಿಸುತ್ತಿದೆ. ಆದ್ದರಿಂದ ಕೆಲವರು ಭಾವಿಸುವಂತೆ ಆರೆಸ್ಸೆಸ್ ಭಾರತವನ್ನು ಕೇವಲ ಇನ್ನೂರು ವರ್ಷ ಹಿಂದಕ್ಕೆ ತೆಗೆದುಕೊಂಡು ಹೋಗಲು ಬಯಸುತ್ತದೆ ಎಂಬುದು ಸುಳ್ಳು. ವಾಸ್ತವವಾಗಿ ನಾವು ಭಾರತವನ್ನು ಇನ್ನಷ್ಟು ಹಿಂದಕ್ಕೆ, ಕನಿಷ್ಠ ಸಾವಿರ ವರ್ಷದ ಹಿಂದಿನ ಉಜ್ವಲ ಯುಗಕ್ಕೆ ಕೊಂಡೊಯ್ಯಲು ಬಯಸುತ್ತೇವೆ’’
(The Organiser, 26 January 1962)
ಅದಕ್ಕೆ ಈ ಸಂಘಪರಿವಾರದ ಈ ಕುಲಪುರೋಹಿತರು ಇನ್ನೂ ಚಿತ್ರವಿಚಿತ್ರವಾದ ಆದರೆ ಅಪಾಯಕಾರಿಯಾದ ವಾದಗಳನ್ನು ಮುಂದಿಡುತ್ತಾರೆ. ಅವರ ಪ್ರಕಾರ:
‘‘ನಮ್ಮ ದೇಶದ ಈಶಾನ್ಯ ಹಾಗೂ ವಾಯುವ್ಯ ಭಾಗಗಳು ಬಹಳ ಸುಲಭವಾಗಿ ಮುಸ್ಲಿಮರ ದಾಳಿಗೆ ತುತ್ತಾಗಲು ಕಾರಣವೇ ಅಲ್ಲಿನ ಸಮಾಜ ವ್ಯವಸ್ಥೆ ಬುದ್ಧನ ಚಿಂತನೆಗಳ ದುಷ್ಪರಿಣಾಮಕ್ಕೆ ಒಳಗಾಗಿ ಜಾತಿ ವ್ಯವಸ್ಥೆಯನ್ನು ಸಡಿಲಗೊಳಿಸಿದ್ದರಿಂದ. ಆದರೆ ಅದಕ್ಕೆ ತದ್ವಿರುದ್ಧವಾಗಿ ಶತಮಾನಗಳ ಕಾಲ ಮುಸ್ಲಿಮರ ನೇರ ಅಧಿಪತ್ಯ ಹಾಗೂ ದಾಳಿಗೆ ಆಹುತಿಯಾಗಿದ್ದರೂ ದಿಲ್ಲಿ ಪ್ರಾಂತಗಳು ಪ್ರಧಾನವಾಗಿ ಹಿಂದೂವಾಗಿಯೇ ಉಳಿದುಕೊಂಡವು. ಅದಕ್ಕೆ ಪ್ರಧಾನ ಕಾರಣ ಅಲ್ಲಿ ಗಟ್ಟಿಯಾಗಿ ಉಳಿದುಕೊಂಡಿದ್ದ ಜಾತಿ ವ್ಯವಸ್ಥೆ ಎನ್ನುವುದನ್ನು ನಾವು ಮರೆಯಬಾರದು’’
(RSS and Democracy (Delhi: Sampradayikta Virodhi Committee, nd) -ಆನಂದ್ ತೇಲ್ತುಂಬ್ಡೆಯವರು ಸಂಪಾದಿಸಿರುವ ‘HINDUTVA AND DALITS’ ಗ್ರಂಥದಲ್ಲಿ ಉಲ್ಲೇಖಿತ)
ಆರೆಸ್ಸೆಸ್‌ನ ಮತ್ತೊಬ್ಬ ಗುರುವಾದ ಹಾಗೂ ಮೋದಿಯವರು ಬಹುವಾಗಿ ಉಲ್ಲೇಖಿಸುವ ದೀನ ದಯಾಳ್ ಉಪಾಧ್ಯ ಅವರಂತೂ ಇದೇ ಅತ್ಯಂತ ಅಪಾಯಕಾರಿ ಚಿಂತನೆಯನ್ನು ಘೋರವಾದ ಮೃದು ಭಾಷೆಯಲ್ಲಿ ಮುಂದಿಡುತ್ತಾರೆ:
‘‘ಈ ಆಧುನಿಕ ಯುಗದಲ್ಲಿ ಪದೇಪದೇ ಸಮಾನತೆಯ ಮಾತುಗಳನ್ನಾಡುತ್ತೇವೆ. ಆದರೆ ಈ ಸಮಾನತೆಯ ಕಲ್ಪನೆಯನ್ನು ಅತ್ಯಂತ ಎಚ್ಚರದಿಂದ ಬಳಸಬೇಕು. ಪ್ರಾಯೋಗಿಕವಾಗಿ ಮತ್ತು ವಾಸ್ತವ ದೃಷ್ಟಿಕೋನದಿಂದ ನೋಡುವುದಾದರೆ ಯಾವ ಇಬ್ಬರು ಮನುಷ್ಯರು ಸಮಾನರಲ್ಲ. ಪ್ರತಿಯೊಬ್ಬ ಮನುಷ್ಯರಿಗೂ ಅವರದೇ ಅದ ವಿಶಿಷ್ಟ ಗುಣಲಕ್ಷಣಗಳಿರುತ್ತವೆ. ಮತ್ತು ಪ್ರತಿಯೊಬ್ಬರಿಗೂ ಅವರ ಆಸ್ಥೆ ಮತ್ತು ಗುಣಮಟ್ಟ, ಸಾಮರ್ಥ್ಯಗಳಿಗೆ ತಕ್ಕಂತೆ ಕರ್ತವ್ಯಗಳಿರುತ್ತವೆ ಮತ್ತು ಅವೆಲ್ಲಕ್ಕೂ ಸಮಾನ ಘನತೆಯಿರುತ್ತದೆ. ಇದನ್ನೇ ಸ್ವಧರ್ಮ ಎಂದು ಕರೆಯಲಾಗುತ್ತದೆ. ಸ್ವಧರ್ಮವನ್ನು ಅನುಸರಿಸುವುದೆಂದರೆ ದೇವರನ್ನು ಅನುಸರಿಸಿದಂತೆ. ಆದ್ದರಿಂದ ಪ್ರತಿಯೊಬ್ಬರೂ ಯಾವುದೇ ಸಂಘರ್ಷಕ್ಕೆ ಕಾರಣವಿಲ್ಲದಂತೆ ಸ್ವಧರ್ಮವನ್ನು ಆಚರಿಸುವುದು ಉತ್ತಮ ಸಮಾಜಕ್ಕೆ ಕಾರಣವಾಗುತ್ತದೆ’’
ಇದನ್ನು ಮುಂದುವರಿಸಿಯೇ ಮೋದಿಯವರು ಚರಂಡಿ ಸ್ವಚ್ಛ ಮಾಡುವ ಪೌರಕಾರ್ಮಿಕರು ತಮ್ಮ ವೃತ್ತಿಯಲ್ಲಿ ಘನತೆಯನ್ನು ಮತ್ತು ದೇವರನ್ನು ಕಾಣುವ ಕರ್ಮಯೋಗಿಗಳು ಎಂದು ಬೊಗಳೆಯಾಡಿದ್ದು.
(upadhya, P. Bhishikar, Pandit Deendayal Upadhyaya: Ideology and Perception?Concept of the Rashtra, vol. 5)
ವಿಕೃತ ಅಂಬೇಡ್ಕರ್ ಎಂದಿದ್ದ ಸಂಘಿ ಗೋಳ್ವಾಲ್ಕರ್
ಅಷ್ಟು ಮಾತ್ರವಲ್ಲ, ಬ್ರಾಹ್ಮಣಶಾಹಿಯ ದ್ರೋಹವನ್ನು ಬಯಲು ಮಾಡುವ ಅಂಬೇಡ್ಕರ್ ಅವರ ಪ್ರತಿಯೊಂದು ಕ್ರಮವನ್ನೂ ಸಂಘಿಗಳು ದ್ವೇಷಿಸುತ್ತಾರೆ. ಉದಾಹರಣೆಗೆ 1927ರಲ್ಲಿ ಅಂಬೇಡ್ಕರ್ ಅವರು ಭೀಮಾ ಕೊರೆಗಾಂವ್ ಸ್ತೂಪಕ್ಕೆ ಹೋಗಿ ಅಲ್ಲಿ ಬ್ರಾಹ್ಮಣಶಾಹಿ ಪೇಶ್ವೆಗಳ ವಿರುದ್ಧ ಸಮರ ಹೂಡಿ ಹುತಾತ್ಮರಾದ ದಲಿತ ಯೋಧರಿಗೆ ನಮನ ಸಲ್ಲಿಸುತ್ತಾರೆ ಮತ್ತು ಅದು ಭಾರತದ ಇತಿಹಾಸದಲ್ಲಿ ಅಂತರಿಕ ವಸಾಹತುಶಾಹಿಯಾಗಿರುವ ಬ್ರಾಹ್ಮಣಶಾಹಿಯ ವಿರುದ್ಧ ಹೂಡಿದ ಸ್ವಾತಂತ್ರ್ಯ ಸಂಗ್ರಾಮವೆಂದು ಬಣ್ಣಿಸುತ್ತಾರೆ.
ಆದರೆ ಅಂಬೇಡ್ಕರ್ ಅವರ ಈ ಬ್ರಾಹ್ಮಣಶಾಹಿ ವಿರೋಧದಿಂದ ಕನಲುವ ಸಂಘಪರಿವಾರದ ಸರಸಂಘಚಾಲಕ ಗೋಳ್ವಾಲ್ಕರ್ ಅಂಬೇಡ್ಕರ್ ಅವರ ನಿಲುವನ್ನು ವಿಕೃತಿ ಎಂದು ನಿಂದಿಸುತ್ತಾ ಹೀಗೆ ಬರೆಯುತ್ತಾರೆ.
‘‘...ಹಾಲಿ ಜಾತಿ ವಿಕೃತಿಗಳನ್ನು ಮೀರಿ ಎಲ್ಲರೊಡನೆ ಒಂದುಗೂಡಬೇಕೆಂಬ ಹೊಣೆಗಾರಿಕೆಯು ಕೆಲವೇ ಕೆಲವು ಜಾತಿ ವಿರೋಧಿ ಉತ್ಸಾಹಿಗಳ ಹೃದಯದಲ್ಲಿ ಮಾತ್ರ ಕಂಡುಬರುತ್ತದೆ. ವಾಸ್ತವವಾಗಿ ಜಾತಿ ವಿರೋಧ ಎಂಬುದನ್ನು ಬಹುಪಾಲು ನಾಯಕರು ತಮ್ಮದೇ ಜಾತಿ ಜನರಲ್ಲಿ ಉತ್ತಮ ಸ್ಥಾನವನ್ನು ಪಡೆದುಕೊಳ್ಳಲು ಮುಖವಾಡವಾಗಿ ಬಳಸುತ್ತಿದ್ದಾರೆ. ಈ ವಿಷವು ನಮ್ಮ ರಾಜಕಾರಣದಲ್ಲಿ ಎಷ್ಟು ಆಳವಾಗಿ ಹೊಕ್ಕಿಬಿಟ್ಟಿದೆ ಎಂಬುದಕ್ಕೆ ಕೆಲವು ವರ್ಷಗಳ ಹಿಂದೆ ನಡೆದ ಒಂದು ಘಟನೆ ಸಾಕ್ಷಿಯಾಗಿದೆ. ಪೂನಾದ ಬಳಿ ಬ್ರಿಟಿಷರು ಪೇಶ್ವೆಗಳ ವಿರುದ್ಧ ಗಳಿಸಿದ ಜಯದ ಸ್ಮಾರಕವಾಗಿ 1818ರಲ್ಲಿ ಸ್ಥಾಪಿಸಿರುವ ಒಂದು ವಿಜಯಸ್ತಂಭವಿದೆ. ಒಬ್ಬ ಪ್ರಖ್ಯಾತ ಹರಿಜನ ನಾಯಕರು ಒಮ್ಮೆ ಈ ಸ್ತಂಭದ ಕೆಳಗೆ ತನ್ನ ಜಾತಿಯ ಜನರನ್ನು ಉದ್ದೇಶಿಸಿ ಭಾಷಣ ಮಾಡಿದ್ದರು. ಬ್ರಾಹ್ಮಣರಾದ ಪೇಶ್ವೆಗಳನ್ನು ಸೋಲಿಸುವಲ್ಲಿ ತಮ್ಮ ಜನರೇ ದೊಡ್ಡ ಪಾತ್ರವನ್ನು ವಹಿಸಿದ್ದರಿಂದ, ಈ ಸ್ತಂಭವು ಬ್ರಾಹ್ಮಣರ ವಿರುದ್ಧ ಹರಿಜನರ ವಿಜಯವನ್ನು ಸೂಚಿಸುವ ಸ್ತಂಭವಾಗಿದೆ ಎಂದು ಅವರು ಹೇಳಿದ್ದರು. ಒಬ್ಬ ದೊಡ್ಡ ನಾಯಕರು ನಮ್ಮ ಗುಲಾಮಗಿರಿಯ ಸಂಕೇತವನ್ನು ನಮ್ಮ ವಿಜಯದ ಸಂಕೇತವೆಂದು ಬಣ್ಣಿಸುವುದನ್ನು ಹಾಗೂ ವಿದೇಶಿಯರ ಗುಲಾಮರಾಗಿ ನಮ್ಮದೇ ಅಣ್ಣತಮ್ಮಂದಿರ ವಿರುದ್ಧ ಸಮರ ನಡೆಸಿದ ಹೀನಾಯ ಕೃತ್ಯವನ್ನು ಒಂದು ಹಿರಿಮೆಯೆಂದು ಬಣ್ಣಿಸುವುದನ್ನು ಕೇಳಿಸಿಕೊಂಡರೆ ಹೃದಯ ಹೆಪ್ಪುಗಟ್ಟುತ್ತದೆ.
ಆ ನಾಯಕರ ಕಣ್ಣುಗಳು ದ್ವೇಷದಿಂದ ಎಷ್ಟು ಕುರುಡಾಗಿದೆಯೆಂದರೆ ಆ ಯುದ್ಧದಲ್ಲಿ ಗೆದ್ದವರು ಯಾರು ಮತ್ತು ಸೋತವರು ಯಾರು ಎಂಬುದನ್ನೂ ಕೂಡ ಗುರುತಿಸಲಾಗದಷ್ಟು ಕುರುಡಾಗಿದೆ... ಎಂಥಾ ವಿಕೃತಿ ..!’’
(Bucnh Of Thoughts, p. 111- ಚಿಂತನೆಯ ಗೊಂಚಲು )
ಈಗಲೂ ಭೀಮಾ ಕೋರೆಗಾಂವ್‌ನಲ್ಲಿ ದಲಿತರು ಹುತಾತ್ಮರ ನೆನಪಿನಲ್ಲಿ ಲಕ್ಷ ಲಕ್ಷ ಸಂಖೆಯಲ್ಲಿ ಸೇರುತ್ತಾರೆ. ಅದನ್ನು ಸಹಿಸಿಕೊಳ್ಳಲಾಗದ ಸಂಘಪರಿವಾರ ನರೇಂದ್ರ ಮೋದಿ ಪ್ರಧಾನಿಯಾದ ಮೇಲೆ 2018ರಲ್ಲಿ ನಡೆದ ಭೀಮಾ ಕೋರೆಗಾಂವ್ ದಲಿತ ಮೇಳದ ಮೇಲೆ ಯೋಜಿತವಾಗಿ ದಾಳಿ ಮಾಡಿ ಹಿಂಸಾಚಾರ ನಡೆಸಿದರು. ಅದರೆ ಮಹಾರಾಷ್ಟ್ರದ ಬಿಜೆಪಿ ಪೊಲೀಸರು ಹಿಂಸಾಚಾರಕ್ಕೆ ಕಾರಣರಾದ ಸಂಘಿ ಉಗ್ರರಾದ ಸಂಬಾಜಿ ಭಿಡೆ ಮತ್ತು ಮಿಲಿಂದ್ ಏಕ್‌ಬೋಟೆಗಳನ್ನು ಬಂಧಿಸದೆ ನೂರಾರು ದಲಿತ ಕಾರ್ಯಕರ್ತರನ್ನು ಬಂಧಿಸಿ ಚಿತ್ರಹಿಂಸೆ ನೀಡಿದರು ಹಾಗೂ ಅದನ್ನೇ ನೆಪವಾಗಿಸಿಕೊಂಡು ದೇಶದ ಹಲವಾರು ಬುದ್ಧಿಜೀವಿಗಳನ್ನು, ವಕೀಲರನ್ನು ಉಗ್ರರೆಂದು ಬಂಧಿಸಿ ಜೈಲಿಗೆ ದೂಡಿದ್ದಾರೆ. ಅವರಲ್ಲಿ ಹಲವರು ಇನ್ನೂ ಜೈಲಿನಲ್ಲೇ ಇದ್ದಾರೆ.
ಅಷ್ಟು ಮಾತ್ರವಲ್ಲ, 1956ರಲ್ಲಿ ಅಂಬೇಡ್ಕರ್ ಅವರು ಬೌದ್ಧ ಧರ್ಮಕ್ಕೆ ಮರಳಿದಾಗ ಹೇಡಿ ಧರ್ಮಕ್ಕೆ ಸೇರಿದ ಅಂಬೇಡ್ಕರ್ ಎಂದು ಸಾವರ್ಕರ್ ಅಂಬೇಡ್ಕರ್ ಅವರನ್ನು ಹೀಗಳೆಯುತ್ತಾರೆ. ಅದಕ್ಕೆ ಪ್ರತಿಯಾಗಿ ಅಂಬೇಡ್ಕರ್ ಸಮಾಲೋಚನೆಯೊಂದಿಗೆ ಪ್ರಕಟವಾಗುತ್ತಿದ್ದ ‘ಪ್ರಬುದ್ಧ ಭಾರತ್’ ಪತ್ರಿಕೆಯಲ್ಲಿ ಸಾವರ್ಕರ್ ಅವರ ವೀರ ಎಂಬ ಅಭಿದಾನದ ಔಚಿತ್ಯವನ್ನು ಹಾಗೂ ಅವರ ಶರಣಾಗತಿಯ ಚರಿತ್ರೆಯನ್ನು ನೆನಪಿಸಲಾಗುತ್ತದೆ.
(https://thewire.in/politics/rss-ambedkar-camaraderie-fictional-narratives)
ಅಂಬೇಡ್ಕರ್ ರಾಷ್ಟ್ರೀಯ ನಾಯಕರೇ ಅಲ್ಲ- ಬಿಜೆಪಿ!
ಇದೆಲ್ಲ ಇತಿಹಾಸ. ತೀರಾ ಇತ್ತೀಚೆಗೆ ಅಂದರೆ ದಲಿತ ಬಂಧು ಎಂದು ಪೋಸು ಹೊಡೆಯುತ್ತಿರುವ ನರೇಂದ್ರ ಮೋದಿಯವರು ಗುಜರಾತಿನ ಮುಖ್ಯಮಂತ್ರಿಯಾಗಿ 14 ವರ್ಷ ಆಳ್ವಿಕೆ ಮಾಡಿದಾಗಲೂ ಅಂಬೇಡ್ಕರ್ ಅವರನ್ನು ಕೋರ್ಟ್-ಕಚೇರಿಗಳಿರಲಿ ಶಾಸನಸಭೆ ಮತ್ತು ಶಾಲೆಗಳಲ್ಲೂ ಬಿಟ್ಟುಕೊಂಡಿರಲಿಲ್ಲ. ಈಗಲೂ ಅಂಬೇಡ್ಕರ್ ಅವರ ಫೋಟೊ ಅಲ್ಲಿನ ಕೋರ್ಟ್‌ಗಳಲ್ಲಿರಲಿ ಯಾವುದೇ ಸರಕಾರಿ ಕಚೇರಿಗಳಲ್ಲೂ ಇಲ್ಲ.
ಏಕೆಂದರೆ ಬಿಜೆಪಿಯ ಗುಜರಾತಿನಲ್ಲಿ ಅಂಬೇಡ್ಕರ್ ರಾಷ್ಟ್ರೀಯ ನಾಯಕರೇ ಅಲ್ಲವಂತೆ.!!
ಮೋದಿ ಸರಕಾರದ ಪ್ರಕಾರ ಗುಜರಾತಿನ ಸರಕಾರಿ ಕಚೇರಿಗಳಲ್ಲಿ ಮಹಾತ್ಮಾ ಗಾಂಧಿ, ನೆಹರೂ, ಸರ್ದಾರ್ ಪಟೇಲ್, ಹಾಲಿ ರಾಷ್ಟ್ರಪತಿ, ಹಾಲಿ ಪ್ರಧಾನಿ, ಭಾರತ್ ಮಾತಾ, ಪಂಡಿತ್ ದೀನ ದಯಾಳ್ ಉಪಾಧ್ಯಾಯ ಮತ್ತು ಶಾಮ ಪ್ರಸಾದ ಮುಖರ್ಜಿ !!
ಅಗ್ರಮಾನ್ಯ ರಾಷ್ಟ್ರ ನಾಯಕ ಅಂಬೇಡ್ಕರ್ ಬಿಜೆಪಿ ಪಟ್ಟಿಯಲ್ಲಿ ಇಲ್ಲವೇ ಇಲ್ಲ!!
1990ರಲ್ಲಿ ಅಂಬೇಡ್ಕರ್ ಅವರಿಗೆ ವಿ.ಪಿ. ಸಿಂಗ್ ಭಾರತ ರತ್ನ ಪ್ರಶಸ್ತಿ ಕೊಡಲು ಹಾಗೂ ಸಂಸತ್ ಭವನದಲ್ಲಿ 1990ರಲ್ಲಿ ಅಂಬೇಡ್ಕರ್ ಫೋಟೊ ಅನಾವರಣ ಮಾಡಲು ತಾನು ಕಾರಣ ಎಂದು ಹೇಳಿಕೊಳ್ಳುವ ಬಿಜೆಪಿ 2012ರಲ್ಲಿ ಕೊಟ್ಟ ಉತ್ತರವಿದು.
(https://indianexpress.com/article/cities/ahmedabad/photos-in-govt-offices-8-figure-in-official-list-ambedkar-not-yet-in/)
ಮತ್ತೊಮ್ಮೆ ಗುಜರಾತಿನ ಸರಕಾರಿ ಕಚೇರಿಗಳಲ್ಲಿ ಅಂಬೇಡ್ಕರ್ ಫೋಟೊ ಏಕೆ ಹಾಕಲಾಗುತ್ತಿಲ್ಲವೆಂದು ಕೇಳಿ ಗುಜರಾತಿನ ದಲಿತ್ ಅಧಿಕಾರ್ ಮಂಚ್‌ನ ಕೀರ್ತಿ ರಾಥೋಡ್ ಅವರು ಸರಕಾರಕ್ಕೆ ಅರ್ಜಿ ಹಾಕಿದ್ದರು. ಅದಕ್ಕೆ 2020ರ ಡಿಸೆಂಬರ್‌ನಲ್ಲಿ ಉತ್ತರಿಸಿರುವ ಆಗಿನ ಬಿಜೆಪಿ ಮುಖ್ಯಮಂತ್ರಿ ವಿಜಯ್ ರುಪಾನಿ ಅವರು:
‘‘ಸರಕಾರಿ ಕಚೇರಿಗಳಲ್ಲಿ ಯಾವ ರಾಷ್ಟ್ರ ನಾಯಕರ ಫೋಟೊಗಳನ್ನು ತೂಗುಹಾಕಬೇಕೆಂಬ ಬಗ್ಗೆ 1996ರ ಸುತ್ತೋಲೆ ಯೊಂದಿದೆ. (ಪ್ರಥಮ ಬಿಜೆಪಿ ಸರಕಾರ ಹೊರಡಿಸಿದ್ದು..) ಅದರಲ್ಲಿ ರಾಷ್ಟ್ರ ನಾಯಕರ ಪಟ್ಟಿಯಲ್ಲಿ ಅಂಬೇಡ್ಕರ್ ಹೆಸರನ್ನು ಸೇರಿಸಲಾಗಿಲ್ಲ. ನಮ್ಮ ಸರಕಾರ ಅದೇ ಪಟ್ಟಿಯನ್ನು ಮುಂದುವರಿಸುವ ತೀರ್ಮಾನ ಮಾಡಿದೆ.’’
ಅಂದರೆ ಬಿಜೆಪಿ ಸರಕಾರ ಅಂಬೇಡ್ಕರ್ ಅವರನ್ನು ರಾಷ್ಟ್ರೀಯ ನಾಯಕರು ಎಂದು ಕೂಡ ಅಧಿಕೃತವಾಗಿ ಗುಜರಾತಿನಲ್ಲಿ ಪರಿಗಣಿಸುತ್ತಿಲ್ಲ. ಇದರ ಬಗ್ಗೆ ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗ 2020ರ ಡಿಸೆಂಬರ್‌ನಲ್ಲಿ ಗುಜರಾತ್ ಸರಕಾರದ ಸ್ಪಷ್ಟೀಕರಣ ಕೇಳಿದೆ. ಆದರೆ ಅದು ಉತ್ತರ ಕೊಡುವ ಗೋಜಿಗೂ ಹೋಗಿಲ್ಲ.
ಇಷ್ಟು ಮಾತ್ರವಲ್ಲದೆ ಗುಜರಾತಿನಲ್ಲಿ ಅಂಬೇಡ್ಕರ್ ಬಗ್ಗೆ ಇರುವ ಪಠ್ಯದಲ್ಲಿ ಅಂಬೇಡ್ಕರ್ ಬೌದ್ಧಕ್ಕೆ ಮರಳಿದಾಗ ಬೋಧಿಸಿದ 22 ಪ್ರತಿಜ್ಞೆಗಳನ್ನೇ ತೆಗೆದುಹಾಕಿದೆ. ಹಿಂದುತ್ವವನ್ನು ಆಮೂಲಾಗ್ರವಾಗಿ ವಿರೋಧಿಸಿದ ಹಾಗೂ ಹಿಂದೂ ಧರ್ಮವನ್ನು ತೊರೆದು ಬೌದ್ಧಕ್ಕೆ ಮರಳಿದ ಅಂಬೇಡ್ಕರ್‌ರನ್ನು ಸಂಘಪರಿವಾರ ಹಿಂದೂ ಸಂಸತ್‌ಪರಂಪರೆಯ ಕೊನೆಯ ಸಂತ ಎಂದು ಮತ್ತೆ ಹಿಂದೂವೀಕರಿಸಲು ಯತ್ನಿಸುತ್ತಿದೆ. ಹಾಗೆಯೇ ಅಂಬೇಡ್ಕರ್ ಬದುಕಿ ಬಾಳಿದ ಐದು ಸ್ಥಳಗಳನ್ನು ಪಂಚಕ್ಷೇತ್ರಗಳೆಂದು ಬ್ರಾಹ್ಮಣೀಯ ನಾಮಕರಣ ಮಾಡಿದೆ.
ಹೀಗೆ ಅಂಬೇಡ್ಕರ್ ಬಗ್ಗೆ ಸಂಘಿಗಳಿಗಿರುವ ದ್ವೇಷ ಇತಿಹಾಸದಲ್ಲೂ ಮತ್ತು ವರ್ತಮಾನದಲ್ಲೂ ಮುಂದುವರಿಯುತ್ತಲೇ ಇದೆ. ಹಾಗೆಂದು ಕಾಂಗ್ರೆಸ್ ಪಕ್ಷ ಮತ್ತು ಅವರ ನೇತೃತ್ವದ ಸ್ವಾತಂತ್ರ್ಯ ಹೋರಾಟ ಅಂಬೇಡ್ಕರ್‌ರನ್ನು ಆದರಿಸಿತ್ತು ಎಂದೇನಲ್ಲ. ಆದರೆ ಅಂಬೇಡ್ಕರ್ ಅವರೇ ಹೇಳಿದ ಹಾಗೆ ಕಾಂಗ್ರೆಸ್ ಅಪ್ರಾಮಾಣಿಕ. ಸಂಘಿಗಳು ಅಯೋಗ್ಯ!