ವಿಕ್ರಂ ಗೌಡ್ಲು ಎನ್‌ಕೌಂಟರ್: ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ನಿಮ್ಮ ಕೈಗೆ ರಕ್ತ ಮೆತ್ತಿದೆ!

ವಿಕ್ರಂ ಗೌಡ್ಲು ಅವರ ಹತ್ಯೆ ಆಳುವ ಸರಕಾರಗಳ ಕಾರ್ಪೊರೇಟ್ ಪರ ಬೃಹತ್ ಯೋಜನೆಯ ಭಾಗವೇ ಆಗಿದೆ. ಈ ಪ್ರಭುತ್ವ ಭಯೋತ್ಪಾದನೆಗಿರುವ ಪಕ್ಷಾತೀತ ಸಮ್ಮತಿಯ ಹಿಂದೆ ಇರುವುದು ಕೂಡ ಪಕ್ಷಾತೀತ ಕಾರ್ಪೊರೇಟ್ ಪರ ಧೋರಣೆಗಳೇ. ಆದ್ದರಿಂದಲೇ ಇದು ಇಲ್ಲಿಗೆ ನಿಲ್ಲುವುದೂ ಇಲ್ಲ. ಏಕೆಂದರೆ ಜನತೆಯ ಪರವಾದ ಧ್ವನಿಗಳನ್ನು ಹತ್ತಿಕ್ಕಿದ ನಂತರ ಜನರನ್ನು ಎತ್ತಂಗಡಿ ಮಾಡುವುದು, ಶೋಷಿಸುವುದು ಆಳುವ ವರ್ಗಗಳಿಗೆ ಸುಲಭವಾಗಲಿದೆ.

Update: 2024-11-20 05:29 GMT
Editor : Thouheed | Byline : ಶಿವಸುಂದರ್

ಮೋದಿ ಸರಕಾರ ಇನ್ನೆರಡು ವರ್ಷಗಳಲ್ಲಿ ಇಡೀ ದೇಶದಲ್ಲಿ ನಕ್ಸಲರನ್ನು ನಿರ್ನಾಮಗೊಳಿಸುವ ಘೋಷಣೆಯೊಂದಿಗೆ ದೇಶದ ದಟ್ಟಾರಣ್ಯ ಪ್ರದೇಶಗಳಲ್ಲಿ ಆದಿವಾಸಿ ನಿರ್ನಾಮ ಯೋಜನೆಯನ್ನು ಪ್ರಾರಂಭಿಸಿರುವ ಹೊತ್ತಿನಲ್ಲೇ, ಕಾಂಗ್ರೆಸ್ ಸರಕಾರವಿರುವ ಕರ್ನಾಟಕದಲ್ಲಿ ಆದಿವಾಸಿ ಮಲೆಕುಡಿಯ ಸಮುದಾಯದ ನಕ್ಸಲ್ ನಾಯಕ ವಿಕ್ರಂ ಗೌಡ್ಲುರನ್ನು ನವೆಂಬರ್ 18ರ ರಾತ್ರಿ ಕರ್ನಾಟಕದ ನಕ್ಸಲ್ ನಿಗ್ರಹ ಪಡೆ ಹತ್ಯೆ ಮಾಡಿದೆ. ಎಂದಿನಂತೆ ಪೊಲೀಸರು ಮತ್ತು ಗೃಹಮಂತ್ರಿ ಪರಮೇಶ್ವರ್ ಅವರು ಪ್ರತಿ ಎನ್‌ಕೌಂಟರಿನಲ್ಲಿ ಹೇಳುವ ಹಳೆಯ ಹಾಗೂ ಯಾರೂ ನಂಬದ ಕಥೆಗಳನ್ನೇ ಪುನರುಚ್ಚರಿಸಿದ್ದಾರೆ. ಮಾಧ್ಯಮಗಳು ಯಥಾಪ್ರಕಾರ ಅವುಗಳ ಸತ್ಯಾಸತ್ಯತೆಯನ್ನು ಪರೀಕ್ಷಿಸುವ ಜವಾಬ್ದಾರಿಯನ್ನೇ ಮರೆತು ಸರಕಾರದ ಕಥೆಗಳಿಗೆ ತಮ್ಮ ಸೈದ್ಧಾಂತಿಕ ಪೂರ್ವಗ್ರಹದ ಉಪ್ಪುಕಾರಗಳನ್ನು ಬೆರೆಸಿ ವಿಷಾದದ ಸಂದರ್ಭವನ್ನು ವಿಜಯದ ಮೆರವಣಿಗೆಯಂತೆ ಬಿತ್ತರಿಸುತ್ತಿವೆ.

ವಾಸ್ತವವಾಗಿ ಕರ್ನಾಟಕದಲ್ಲಿ ಕಳೆದ 10-15 ವರ್ಷಗಳಿಂದ ನಕ್ಸಲ್‌ಚಟುವಟಿಕೆಗಳ ಸುದ್ದಿಯೇ ಇರಲಿಲ್ಲ. ನಕ್ಸಲ್ ಹೋರಾಟವಿರಲಿ, ಓಡಾಟದ ವರದಿಗಳೂ ಇಲ್ಲವೆಂದು 2023ರ ಮಾರ್ಚ್‌ನಲ್ಲಿ ಬಿಜೆಪಿ ಸರಕಾರದ ಆಂತರಿಕ ಭದ್ರತಾ ಇಲಾಖೆಯೇ ವರದಿ ಮಾಡಿತ್ತು. ಆದ್ದರಿಂದ ಕರ್ನಾಟಕದ ಎಂಟು ವಿವಿಧ ತಾಣಗಳಲ್ಲಿ ನೇಮಿಸಲಾಗಿದ್ದ 500 ನಕ್ಸಲ್ ನಿಗ್ರಹ ಪಡೆಯನ್ನು 250ಕ್ಕೆ ಇಳಿಸುವ ಬಗ್ಗೆ ಪರಿಶೀಲಿಸಲಾಗುತ್ತಿದೆಯೆಂದು ಆಗಿನ ಬಿಜೆಪಿ ಗೃಹಮಂತ್ರಿ ಆರಗ ಜ್ಞಾನೇಂದ್ರ ಅವರೇ ಹೇಳಿಕೆಯನ್ನು ನೀಡಿದ್ದರು. 2005ರಲ್ಲಿ ರಚಿಸಲಾದ ಎಎನ್‌ಎಫ್ 2012ರ ತನಕ 11 ಎನ್‌ಕೌಂಟರ್‌ಗಳಲ್ಲಿ 19 ನಕ್ಸಲರನ್ನು ಹತ್ಯೆ ಮಾಡಿದೆ. ಕೊನೆಯ ‘ಎನ್‌ಕೌಂಟರ್’ ನಡೆದದ್ದೇ 2012ರಲ್ಲಿ. ಅದಾದ ನಂತರ ಕರ್ನಾಟಕದಲ್ಲಿ ನಕ್ಸಲ್ ಸಾಯುಧ ಹೋರಾಟ ತೀವ್ರವಾಗಿ ಇಳಿಮುಖವಾಗಿದೆ.

ನಕ್ಸಲರಿಲ್ಲದ ನಕ್ಸಲ್ ಚಳವಳಿ?

ಕರ್ನಾಟಕದಲ್ಲಿ 2014ರ ನಂತರ ಒಂಭತ್ತು ಪ್ರಮುಖ ನಕ್ಸಲ್ ನಾಯಕರು ಸಾಯುಧ ಹೋರಾಟ ತೊರೆದು ಸಮಾಜದ ಮುಖ್ಯವಾಹಿನಿ ಬದುಕಿಗೆ ಮರಳಿದ್ದಾರೆ. ಅವರಲ್ಲಿ ಕೆಲವರು ವಿವಿಧ ವೃತ್ತಿಗಳನ್ನು ಮಾಡಿಕೊಂಡು ಸಾಮಾನ್ಯ ಬದುಕನ್ನು ಸಾಗಿಸುತ್ತಿದ್ದರೆ ನೂರ್ ಶ್ರೀಧರ್ ಮತ್ತು ಸಿರಿಮನೆ ನಾಗರಾಜ್‌ರಂಥವರು ಜನಚಳವಳಿ ಹಾಗೂ ಫ್ಯಾಶಿಸ್ಟ್ ವಿರೋಧಿ ರಾಜಕಾರಣದಲ್ಲಿ ತೊಡಗಿಕೊಂಡಿದ್ದಾರೆ. ಇವೆಲ್ಲವೂ ಕರ್ನಾಟಕದ ಸಾಯುಧ ಹೋರಾಟದ ತೀವ್ರತೆಯನ್ನು ಕರ್ನಾಟಕದಲ್ಲಿ ಕಡಿಮೆಗೊಳಿಸಿದೆ ಎಂದು ಇಂಟೆಲಿಜೆನ್ಸ್ ವರದಿಗಳು ಹೇಳುತ್ತಿವೆ.

ಕೇಂದ್ರ ಸರಕಾರದ ಗೃಹ ಇಲಾಖೆಯ ಪ್ರಕಾರ ಕರ್ನಾಟಕದ ಬಹುಪಾಲು ನಕ್ಸಲರು ಕೇರಳ-ತಮಿಳುನಾಡು-ಕರ್ನಾಟಕ ಗಡಿಭಾಗದ ತ್ರಿಸಂಧಿ ಪ್ರದೇಶಕ್ಕೆ ವರ್ಗಾವಣೆಗೊಂಡಿದ್ದರು. ಆದರೆ ಅಲ್ಲಿಯೂ ಅನನುಕೂಲ ಪರಿಸ್ಥಿತಿ ಇದೆ. ಹೀಗಾಗಿ ಚಳವಳಿಯನ್ನು ಕಟ್ಟಲು ಕಷ್ಟಸಾಧ್ಯ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆಂದು ಇತ್ತೀಚೆಗೆ ಬಂಧನಕ್ಕೊಳಗಾದ ಕರ್ನಾಟಕ ಮೂಲದ ನಕ್ಸಲ್ ನಾಯಕ ಬಿ.ಜಿ. ಕೃಷ್ಣಮೂರ್ತಿ ಪತ್ರಿಕೆಗಳಿಗೆ ಹೇಳಿದ್ದರು. ಅಲ್ಲಿ ಚಳವಳಿ ಕಟ್ಟಲು ಯತ್ನಿಸುತ್ತಿದ್ದ ಮೂವರು ನಕ್ಸಲ್ ನಾಯಕರು ದಟ್ಟಡವಿ ಯಲ್ಲಿ ಆನೆಗಳ ತುಳಿತಕ್ಕೆ ಬಲಿಯಾದದ್ದೂ ಕೂಡ ಇತ್ತೀಚೆಗೆ ವರದಿಯಾಗಿತ್ತು.

ಆದ್ದರಿಂದಲೇ ಇತ್ತೀಚಿನ ತಿಂಗಳುಗಳಲ್ಲಿ ಆಗಾಗ ನಕ್ಸಲರು ಕರ್ನಾಟಕದ ಚಿಕ್ಕಮಗಳೂರು ಮತ್ತು ಕೊಡಗು ಪ್ರದೇಶದಲ್ಲಿ ಕಾಣಿಸಿಕೊಳ್ಳುತ್ತಿರುವ ವರದಿಗಳು ಬರುತ್ತಿದ್ದವಾದರೂ ಅವು ಆಹಾರ ಖರೀದಿಯ ಉದ್ದೇಶವನ್ನು ಹೊಂದಿದ್ದವೇ ವಿನಾ ಸಶಸ್ತ್ರ ಹೋರಾಟಕ್ಕೆ ಸಿದ್ಧತೆ ಮಾಡಿಕೊಳ್ಳುವ ಭೇಟಿಗಳಾಗಿರಲಿಲ್ಲ ಎಂದು ಪೊಲೀಸ್ ವರದಿಗಳೇ ಹೇಳುತ್ತವೆ.

ನಂಬಲಾಗದ ಮಾಮೂಲಿ ಪೊಲೀಸ್ ‘ಎನ್‌ಕೌಂಟರ್’ ಕಥನ ಪೊಲೀಸರ ಕಥೆ ಮಾಮೂಲಿನದೇ:

‘‘ಉಡುಪಿಯ ಹೆಬ್ರಿ ಬಳಿಯ ಪೀತ ಬೈಲಿನ ಬಳಿ ಐವರು ನಕ್ಸಲರು ಅನುಮಾನಾಸ್ಪದವಾಗಿ ಓಡಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ದಕ್ಕಿತು. ಅದನ್ನು ಆಧರಿಸಿ ನಮ್ಮ ತಂಡ ಅವರನ್ನು ಬಂಧಿಸಲು ಜಾಗಕ್ಕೆ ತೆರಳಿತು. ಜಾಗಕ್ಕೆ ಹೋದೊಡನೆ ನಕ್ಸಲರು ಅತ್ಯಾಧುನಿಕ ಶಸ್ತ್ರಗಳಿಂದ ನಮ್ಮ ಮೇಲೆ ಗುಂಡಿನ ದಾಳಿ ಮಾಡಿದರು. ಹೀಗಾಗಿ ಅನಿವಾರ್ಯವಾಗಿ ನಾವು ನಮ್ಮ ಆತ್ಮರಕ್ಷಣೆಗಾಗಿ ಪ್ರತಿದಾಳಿ ಮಾಡಿದೆವು. ಈ ಪ್ರಕ್ರಿಯೆಯಲ್ಲಿ ಒಬ್ಬ ನಕ್ಸಲರು ಸತ್ತು ಉಳಿದವರು ತಪ್ಪಿಸಿಕೊಂಡು ಓಡಿಹೋದರು. ಸತ್ತವರನ್ನು ಪರಿಶೀಲಿಸಲಾಗಿ ಆತ ಕಳೆದ ಇಪ್ಪತ್ತು ವರ್ಷಗಳಿಂದ ಭೂಗತನಾಗಿದ್ದ ನಕ್ಸಲ್ ಕಮಾಂಡರ್ ವಿಕ್ರಂ ಗೌಡ್ಲು ಎಂದು ಪತ್ತೆ ಹಚ್ಚಲಾಯಿತು. ಓಡಿ ಹೋದ ಉಳಿದ ನಕ್ಸಲರ ಪತ್ತೆ ಕೂಂಬಿಂಗ್ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದೆ’’.

ಪ್ರತೀ ಎನ್‌ಕೌಂಟರ್ ನಂತರ ಪೊಲೀಸರು ಹೊಸೆಯುವ ಈ ಹುಸಿ ಕಥೆಗಳು ನಕ್ಸಲ್ ಹೋರಾಟದಷ್ಟೇ ಅಥವಾ ಸ್ವತಂತ್ರ ಭಾರತದಲ್ಲಿ ಆಳುವ ಪ್ರಭುತ್ವದ ವಿರುದ್ಧ ನಡೆದ ಪ್ರಥಮ ಜನಬಂಡಾಯದಷ್ಟೇ ಹಳೆಯದು.

ಗುಂಡಿನ ಚಕಮಕಿಯಾಗಿರುತ್ತದೆ. ಆದರೆ ನಕ್ಸಲರು ಸಾಯುತ್ತಾರೆ ವಿನಾ ನೂರಕ್ಕೆ 99 ಪ್ರಕರಣಗಳಲ್ಲಿ ಪೊಲೀಸರಿಗೆ ಒಂದು ಗಾಯವೂ ಆಗಿರುವುದಿಲ್ಲ. ಹಾಗೆಯೇ ಈ ಪ್ರಕರಣದಲ್ಲೂ ಐವರು ಆಯುಧಧಾರಿ ನಕ್ಸಲರು ಗುಂಡಿನಮಳೆಗರೆದರೂ ಒಬ್ಬ ಪೊಲೀಸರಿಗೂ ಗಾಯಗಳಾಗಿಲ್ಲ. ಮೇಲಾಗಿ ನಕ್ಸಲರ ಬಳಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳಿತ್ತು ಎಂದು ಹೇಳುವ ಪೊಲೀಸರು ಮೃತ ವಿಕ್ರಂನಿಂದ ವಶಪಡಿಸಿಕೊಂಡಿದ್ದು ಅತ್ಯಂತ ಹಳೆಯ ಸಿಂಗಲ್ ಬ್ಯಾರೆಲ್ ಗನ್!

ಹೀಗಾಗಿಯೇ ಪ್ರಖ್ಯಾತ ಮಾನವ ಹಕ್ಕುಗಳ ಹೋರಾಟಗಾರ ಡಾ. ಬಾಲಗೋಪಾಲ್ ಹೇಳುವಂತೆ ಶೇ.99ರಷ್ಟು ಎನ್‌ಕೌಂಟರ್‌ಗಳು ನಿಜವಾದ ಎನ್‌ಕೌಂಟರ್‌ಗಳಲ್ಲ. ನಕಲಿ ಎನ್‌ಕೌಂಟರ್‌ಗಳು. ಅಂದರೆ ನಕ್ಸಲರನ್ನು ಸೆರೆ ಹಿಡಿದು ಕಾನೂನಿನ ಪ್ರಕ್ರಿಯೆಗೆ ಒಳಪಡಿಸುವ ಸಾಧ್ಯತೆ ಇದ್ದರೂ, ಉದ್ದೇಶಪೂರ್ವಕವಾಗಿ ಹತ್ಯೆ ಮಾಡುವುದು ಅಥವಾ ನಕ್ಸಲರೆಂಬ ನೆಪವೊಡ್ಡಿ ಕಾರ್ಪೊರೇಟ್ ಕಂಪೆನಿಗಳಿಗೆ ಅರಣ್ಯ ಭೂಮಿಯನ್ನು ತೆರವು ಮಾಡಿಕೊಡಲು ಅಮಾಯಕ ಆದಿವಾಸಿಗಳನ್ನು ಅಥವಾ ರೈತರನ್ನು ಕೊಂದು ಇಡೀ ವಲಯದಲ್ಲಿ ಸರಕಾರಿ ಭಯೋತ್ಪಾದನೆ ಮಾಡುವುದು. ಅರ್ಥಾತ್ ಪೊಲೀಸ್ ಹತ್ಯೆಗಳು.

ಅದರ ಅರ್ಥ ಪೊಲೀಸರು ಸಾಯುಧ ಹೋರಾಟಗಾರರು ಗುಂಡು ಚಲಾಯಿಸುತ್ತಿದ್ದರೂ ತಮ್ಮ ಆತ್ಮರಕ್ಷಣೆಗೆ ಮತ್ತು ಪ್ರತಿದಾಳಿಯನ್ನು ಹತ್ತಿಕ್ಕಲು ಗುಂಡು ಹಾರಿಸಬಾರದು ಎಂದಲ್ಲ. ಸ್ವಾತಂತ್ರ್ಯಾನಂತರದಲ್ಲಿ ಈ ದೇಶದಲ್ಲಿ ಅಧಿಕೃತವಾಗಿ ಬಂದೂಕು ಚಲಾಯಿಸುವ ಅಧಿಕಾರ ಕೊಟ್ಟಿರುವುದು ಪೊಲೀಸರಿಗೆ ಮತ್ತು ಸೈನಿಕರಿಗೆ ಮಾತ್ರ. ಅದನ್ನು ಪ್ರಧಾನವಾಗಿ ಆತ್ಮ ರಕ್ಷಣೆ ಮತ್ತು ಶತ್ರುಗಳಿಂದ ಗಡಿರಕ್ಷಣೆಯ ಸಮಯದಲ್ಲಿ ಬಳಸುವ ಅಧಿಕಾರ ಪೊಲೀಸರಿಗಿದೆ. ಆದರೆ ಈ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಪೊಲೀಸರು ಬಂಧಿಸುವ ಸಾಧ್ಯತೆ ಇದ್ದರೂ ಆದಿವಾಸಿ- ರೈತರನ್ನು ಕಾರ್ಪೊರೇಟ್ ಉದ್ಯಮಿಗಳ ವಿರುದ್ಧ ಮತ್ತು ದೊಡ್ಡ ದೊಡ್ಡ ಭೂಮಾಲಕರ ವಿರುದ್ಧ ಸಂಘಟಿಸುವ ಸಾಯುಧ ಅಥವಾ ಆಯುಧ ರಹಿತ ನಕ್ಸಲರನ್ನು ಬೀಭತ್ಸವಾಗಿ ಕೊಂದುಹಾಕುತ್ತಿದ್ದಾರೆ. ಇದನ್ನು ಮಾನವ ಹಕ್ಕು ಹೋರಾಟ ಗಾರರು 1967ರಿಂದ ಈವರೆಗೆ ಸಾವಿರಾರು ಪ್ರಕರಣಗಳಲ್ಲಿ ಸಾಬೀತು ಮಾಡಿದ್ದಾರೆ.

ನಕಲಿ ಎನ್‌ಕೌಂಟರ್ ಎಂದರೆ ಪ್ರಭುತ್ವ ಭಯೋತ್ಪಾದನೆ

ಆದ್ದರಿಂದಲೇ ಸುಪ್ರೀಂ ಕೋರ್ಟ್ 2011ರ ಪ್ರಕಾಶ್ ಕದಂ ಪ್ರಕರಣದಲ್ಲಿ ಎಲ್ಲಾ ನಕಲಿ ಎನ್‌ಕೌಂಟರ್‌ಗಳು ಪೊಲೀಸರ ಪೂರ್ವಯೋಜಿತ ಹತ್ಯೆಗಳೇ ಎಂದು ಘೋಷಿಸಿತ್ತು ಹಾಗೂ ಅವು ನಕಲಿ ಎಂದು ಸಾಬೀತಾದರೆ ಜೀವಾವಧಿ ಶಿಕ್ಷೆಯನ್ನು ವಿಧಿಸಬೇಕೆಂದು ನಿರ್ದೇಶಿಸಿತ್ತು.

2012ರ ಓಂಪ್ರಕಾಶ್ ಮತ್ತು ಜಾರ್ಖಂಡ್ ಸರಕಾರದ ನಡುವಿನ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಪೊಲೀಸರು ನಡೆಸುವ ಎಲ್ಲಾ ಕಾನೂನು ಬಾಹಿರ ಹತ್ಯೆಗಳನ್ನು ಪ್ರಭುತ್ವ ಭಯೋತ್ಪಾದನೆಯೆಂದೇ ಪರಿಗಣಿಸಬೇಕು ಎಂದು ಅಭಿಪ್ರಾಯ ಪಟ್ಟಿತ್ತು.

2014ರಲ್ಲಿ ಪಿಯುಸಿಎಲ್ ಮತ್ತು ಮಹಾರಾಷ್ಟ್ರ ಸರಕಾರದ ಪ್ರಕರಣ ದಲ್ಲಿ ನಕಲಿ ಎನ್‌ಕೌಂಟರ್‌ಗಳನ್ನು ತಡೆಯಲು ಸುಪ್ರೀಂಕೋರ್ಟ್ 16 ನಿರ್ದೇಶನಗಳನ್ನು ನೀಡಿದೆ. ಅದರ ಪ್ರಕಾರ ಪೊಲೀಸರು ಖಚಿತ ಮಾಹಿತಿಯನ್ವಯ ಕೂಂಬಿಂಗ್‌ಗೆ ಹೊರಟರೂ ಅದನ್ನು ಕೇಸ್ ಡೈರಿಯಲ್ಲಿ ನಮೂದು ಮಾಡಬೇಕು. ಎನ್‌ಕೌಂಟರ್‌ನಲ್ಲಿ ಸಾವು ಸಂಭವಿಸಿದರೆ ಕೂಡಲೇ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಸಂಬಂಧಪಟ್ಟ ಪೊಲೀಸರ ಬಗ್ಗೆ ಎಫ್‌ಐಆರ್ ದಾಖಲಿಸಬೇಕು ಹಾಗೂ ಪ್ರಕರಣದ ಬಗ್ಗೆ ಮ್ಯಾಜಿಸ್ಟ್ರೇಟ್ ತನಿಖೆ ಮತ್ತು ಸ್ವತಂತ್ರ ಇಲಾಖಾ ವಿಚಾರಣೆಯಾಗಬೇಕು ಮತ್ತು ಮೃತರ ಪೋಸ್ಟ್ ಮಾರ್ಟಂ ವೀಡಿಯೊ ಮಾಡಬೇಕು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೋಷಿ ಎಂದು ಸಾಬೀತಾಗುವವರೆಗೆ ಭಡ್ತಿ ಅಥವಾ ಪ್ರಶಸ್ತಿಗಳನ್ನು ಕೊಡಬಾರದು.

ಅರ್ಥಾತ್ ಬಂದೂಕು ಉಪಯೋಗಿಸುವ ಮತ್ತು ಕೊಲ್ಲುವ ಅಧಿಕಾರವನ್ನು ಹೊಂದಿರುವ ಪೊಲೀಸರು ಅದನ್ನು ನಿರ್ವಹಿಸುವಾಗ ದುರುಪಯೋಗ ಪಡಿಸಿಕೊಳ್ಳುವ ಎಲ್ಲಾ ಸಾಧ್ಯತೆಗಳು ಇದೆಯೆಂಬುದನ್ನೇ ಸುಪ್ರೀಂಕೋರ್ಟು ಮತ್ತು ಮಾನವಹಕ್ಕುಗಳ ಆಯೋಗ ಸ್ಪಷ್ಟಪಡಿಸುತ್ತದೆ. ಆದ್ದರಿಂದ ಸಮಾಜ ಮತ್ತು ಅದಕ್ಕಿಂತ ಹೆಚ್ಚಾಗಿ ಮಾಧ್ಯಮಗಳು ಪೊಲೀಸರು ಎನ್‌ಕೌಂಟರ್ ಎಂದು ಹೇಳಿದಾಗ ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕೇ ವಿನಾ ಅದಕ್ಕೆ ಮಸಾಲೆ ಹಚ್ಚಿ ಪ್ರಚಾರ ಮಾಡಬಾರದು.

ಈ ಹಿನ್ನೆಲೆಯಲ್ಲಿ ನೋಡಿದರೆ ನವೆಂಬರ್ ತಿಂಗಳ ಪ್ರಾರಂಭದಲ್ಲಿ ಕೊಪ್ಪ ತಾಲೂಕಿನ ಆಸುಪಾಸಿನಲ್ಲಿ ಮತ್ತು ಈಗ ಉಡುಪಿಯ ಹೆಬ್ರಿಯಲ್ಲಿ ಕಾಣಿಸಿಕೊಂಡ ನಕ್ಸಲರ ಓಡಾಟಗಳು ಪೊಲೀಸರ ಜೊತೆ ಸಶಸ್ತ್ರ ಹೋರಾಟದ ಸನ್ನಾಹದಲ್ಲಿರಲಿಲ್ಲ ಎಂಬುದು ಸ್ಪಷ್ಟ. ಹೀಗಾಗಿ ಅಪಾರ ಪೊಲೀಸ್ ಬಲವನ್ನು ಹೊಂದಿದ್ದ ಕರ್ನಾಟಕ ಸರಕಾರ ಬಿಜೆಪಿ ಸರಕಾರದಂತೆ ನಕ್ಸಲರನ್ನು ಕಂಡ ಕೂಡಲೇ ಹೊಡೆದು ಕೊಲ್ಲದೆ ನಾಗರಿಕ ಸರಕಾರದಂತೆ ಪ್ರವರ್ತಿಸಿ ಬಂಧಿಸಿ ಕಾನೂನು ಪ್ರಕ್ರಿಯೆಗೆ ಒಳಪಡಿಸಬಹುದಿತ್ತು. ಹಾಗಿದ್ದರೂ ಕರ್ನಾಟಕದ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ ಬಿಜೆಪಿ ಸರಕಾರದಂತೆ ನಕ್ಸಲರನ್ನು ಬಂಧಿಸುವುದರ ಬದಲು ಕೊಂದುಹಾಕುತ್ತಿರುವುದು ಏಕೆ?

ನಕ್ಸಲ್ ಮುಕ್ತ ಭಾರತವೋ?

ಜನಪ್ರತಿರೋಧ ಮುಕ್ತ ಪ್ರಜಾತಂತ್ರವೋ?

2024ರ ಲೋಕಸಭಾ ಚುನಾವಣೆಯಾದ ನಂತರ ಇಡೀ ಭಾರತವನ್ನು ‘ನಕ್ಸಲ್ ಮುಕ್ತ’ ಪ್ರದೇಶವನ್ನಾಗಿ ಮಾಡಲು ಅಮಿತ್ ಶಾ ರಾಜ್ಯಗಳಿಗೆ ಗಡುವು ವಿಧಿಸಿದ್ದಾರೆ. ಕಳೆದ ಒಂದು ವರ್ಷದಲ್ಲಿ ಮೋದಿ ಸರಕಾರ ಮಧ್ಯಭಾರತದ ಅರಣ್ಯ ಪ್ರದೇಶದಲ್ಲಿ 200ಕ್ಕೂ ಹೆಚ್ಚು ಅಮಾಯಕ ಆದಿವಾಸಿಗಳನ್ನು ಮತ್ತು ನಕ್ಸಲ್ ನಾಯಕರನ್ನು ಕೊಂದುಹಾಕಿದೆ ಮತ್ತು ಸಾವಿರಾರು ಅಮಾಯಕ ಆದಿವಾಸಿಗಳನ್ನು ಸೆರೆಗೆ ದೂಡಿದೆ. ಮುನ್ನೂರಕ್ಕೂ ಹೆಚ್ಚು ಆದಿವಾಸಿಗಳನ್ನು ‘ಶರಣಾಗತಿ’ಯ ಹೆಸರಿನಲ್ಲಿ ವಶಕ್ಕೆ ತೆಗೆದುಕೊಂಡಿದೆ.

ಹೀಗಾಗಿಯೇ ಕರ್ನಾಟಕದಲ್ಲಿ ನಕ್ಸಲ್ ನಿಗ್ರಹ ಪಡೆಯನ್ನು ಕುಗ್ಗಿಸ ಬೇಕೆಂಬ ಇರಾದೆಯಿದ್ದ ಕರ್ನಾಟಕದ ನಿರ್ಧಾರವೂ ಬದಲಾಗಿದೆ. ನಿಗ್ರಹಿಸುವುದು ಎಂದರೆ ಅಳಿದುಳಿದವರನ್ನು ಬಂಧಿಸುವುದು ಎನ್ನುವುದಕ್ಕಿಂತ ಕೊಂದು ಹಾಕುವುದು ಎನ್ನುವ ಅರ್ಥವನ್ನೇ ಕೇಂದ್ರ ಗೃಹ ಸಚಿವಾಲಯ ರಾಜ್ಯಗಳಿಗೆ ನಿರ್ದೇಶಿಸಿದಂತಿದೆ.

ಹೀಗಾಗಿಯೇ ತಮ್ಮ ಪ್ರಕಾರ ‘‘ನಕ್ಸಲರು ದಾರಿ ತಪ್ಪಿದ ನಮ್ಮ ಮಕ್ಕಳೇ. ನಕ್ಸಲರ ನಿಗ್ರಹ ಎಂದರೆ ನಕಲ್ಸರ ಮನಃ ಪರಿವರ್ತನೆ ಹಾಗೂ ಅರಣ್ಯ ಪ್ರದೇಶದಲ್ಲಿ ಆದಿವಾಸಿಗಳ ಸಾಮಾಜಿಕ ಆರ್ಥಿಕ ಅಭಿವೃದ್ಧಿ ಮಾಡುವ ಮೂಲಕ ನಕ್ಸಲರ ಪ್ರಭಾವವನ್ನು ಕುಗ್ಗಿಸುವ ಯೋಜನೆ’’ ಎಂದು ಹೇಳಿಕೊಳ್ಳು ತ್ತಿದ್ದ ಕಾಂಗ್ರೆಸ್ ಹಾಗೂ ಇತರ ಎಲ್ಲಾ ಪಕ್ಷಗಳೂ ಕೂಡ ಪರೋಕ್ಷವಾಗಿ ಬಿಜೆಪಿಯ ನಿರ್ದೇಶನದ ನಿಗ್ರಹ-ಹತ್ಯೆ ಯೋಜನೆಯನ್ನೇ ಜಾರಿ ಮಾಡುತ್ತಿವೆ.

ಏಕೆಂದರೆ ಎಲ್ಲಾ ಪಕ್ಷಗಳು ಪಕ್ಷಾತೀತವಾಗಿ ಕಾರ್ಪೊರೇಟ್ ಬಂಡವಾಳಶಾಹಿಗಳ ಕರುಣೆಯಲ್ಲಿವೆ.

ಗ್ರೀನ್ ಹಂಟ್‌ನಿಂದ ಕೇಸರಿ ಹಂಟ್‌ವರೆಗೆ

ಹಾಗೆ ನೋಡಿದರೆ ಮಧ್ಯಭಾರತದ ಅರಣ್ಯ ಪ್ರದೇಶವನ್ನು ಅಂಬಾನಿ-ಅದಾನಿ-ಟಾಟಾ-ವೇದಾಂತಗಳ ಗಣಿಗಾರಿಕೆಗೆ ಮುಕ್ತಮಾಡಲು ನಕ್ಸಲರನ್ನು ಹತ್ತಿಕ್ಕುವ ನೆಪದಲ್ಲಿ ಆಪರೇಷನ್ ಗ್ರೀನ್ ಹಂಟ್ ಎಂಬ ಹತ್ಯಾ ಬೀಭತ್ಸವನ್ನು ಪ್ರಾರಂಭಿಸಿ ಅಲ್ಲಿನ ಆದಿವಾಸಿಗಳನ್ನು ಎತ್ತಂಗಡಿ ಮಾಡುವ ಬೃಹತ್ ಯೋಜನೆ ಪ್ರಾರಂಭಿಸಿದ್ದು ಯುಪಿಎ ಸರಕಾರದ ಕಾಲದಲ್ಲಿ ಕಾಂಗ್ರೆಸ್ ಗೃಹಮಂತ್ರಿ ಪಿ. ಚಿದಂಬರಂ ಅವರೇ.

ಹೀಗಾಗಿ ವಿಕ್ರಂ ಗೌಡ್ಲು ಅವರ ಹತ್ಯೆ ಆಳುವ ಸರಕಾರಗಳ ಕಾರ್ಪೊರೇಟ್ ಪರ ಬೃಹತ್ ಯೋಜನೆಯ ಭಾಗವೇ ಆಗಿದೆ. ಈ ಪ್ರಭುತ್ವ ಭಯೋತ್ಪಾದನೆಗಿರುವ ಪಕ್ಷಾತೀತ ಸಮ್ಮತಿಯ ಹಿಂದೆ ಇರುವುದು ಕೂಡ ಪಕ್ಷಾತೀತ ಕಾರ್ಪೊರೇಟ್ ಪರ ಧೋರಣೆಗಳೇ. ಆದ್ದರಿಂದಲೇ ಇದು ಇಲ್ಲಿಗೆ ನಿಲ್ಲುವುದೂ ಇಲ್ಲ. ಏಕೆಂದರೆ ಜನತೆಯ ಪರವಾದ ಧ್ವನಿಗಳನ್ನು ಹತ್ತಿಕ್ಕಿದ ನಂತರ ಜನರನ್ನು ಎತ್ತಂಗಡಿ ಮಾಡುವುದು, ಶೋಷಿಸುವುದು ಆಳುವ ವರ್ಗಗಳಿಗೆ ಸುಲಭವಾಗಲಿದೆ.

ಆದ್ದರಿಂದಲೇ ಪ್ರಧಾನಿ ಮೋದಿ ಈಗಾಗಲೇ ಅಸಲಿ ಸಮಸ್ಯೆ ಇರುವುದು ಸಾಯುಧ ನಕ್ಸಲರದ್ದಲ್ಲ. ಅವರಿಗೆ ಬೆಂಬಲಿಸುವ ಅರ್ಬನ್ ನಕ್ಸಲರದ್ದು ಎಂದು ಹೇಳಲು ಪ್ರಾರಂಭಿಸಿದ್ದಾರೆ. ಹೆಬ್ರಿ ಎನ್‌ಕೌಂಟರ್ ಆದಮೇಲೆ ಕಾರ್ಕಳದ ಶಾಸಕ ಸುನೀಲ್ ಕುಮಾರ್ ಕೂಡ ಅರ್ಬನ್ ನಕ್ಸಲರು ಮತ್ತು ನಕ್ಸಲ್ ಬೆಂಬಲಿಸುವ ಬುದ್ಧಿಜೀವಿಗಳನ್ನು ಜೈಲಿಗೆ ಅಟ್ಟಬೇಕೆಂದು ಅರಚತೊಡಗಿದ್ದಾರೆ.

ಇವೆಲ್ಲವೂ ನಕ್ಸಲರ ಹಿಂಸಾವಾದವನ್ನು ತಿರಸ್ಕರಿಸುವ ಅಥವಾ ಆದಿವಾಸಿಗಳ ಪರವಾದ ಆಶಯಗಳಿಂದಲೋ ಉದುರುತ್ತಿರುವ ಮಾತುಗಳಲ್ಲ. ದೇಶಹಿತವೆಂದರೆ ಕಾರ್ಪೊರೇಟ್ ಬಂಡವಾಳಶಾಹಿ ಹಿತ ಎಂದಾದಮೇಲೆ ಎಲ್ಲಾ ಪಕ್ಷಗಳ ಸರಕಾರಗಳಿಗೂ ಭಿನ್ನಮತ ಮತ್ತು ಜನಪ್ರತಿರೋಧ ಅಹಿತವಾದದ್ದು. ಹೀಗಾಗಿಯೇ ಸರಕಾರವನ್ನು ವಿರೋಧಿಸುವ ದಲಿತ-ಆದಿವಾಸಿ ನಕ್ಸಲರಾಗುತ್ತಾರೆ. ಸರಕಾರವನ್ನು ವಿರೋಧಿಸುವ ಮುಸ್ಲಿಮರು ದೇಶದ್ರೋಹಿಗಳಾಗುತ್ತಾರೆ. ಭಿನ್ನಮತ ತೋರುವ ಬುದ್ಧಿಜೀವಿ ಮತ್ತು ಕಲಾವಿದರು ಅರ್ಬನ್ ನಕ್ಸಲರಾಗುತ್ತಾರೆ. ಅವರ ಧ್ವನಿಯನ್ನು ಹತ್ತಿಕ್ಕುವುದು ಮತ್ತು ಕೊಂದುಹಾಕುವುದು ಸ್ವಚ್ಛಂದ ಕಾರ್ಪೊರೇಟ್ ಲೂಟಿಗೆ ಅತ್ಯಗತ್ಯವಾಗಿದೆ.

ಆದ್ದರಿಂದಲೇ ಒಮ್ಮತದ ಗ್ರೀನ್ ಹಂಟ್ ಒಮ್ಮತದ ಕೇಸರಿ ಹಂಟ್ ಆಗಿ ಸಹಜ ರೂಪಾಂತರ ಹೊಂದುತ್ತದೆ.

ನಕ್ಸಲ್ ಸಮರ ಮತ್ತು ಭಾರತದ ಪ್ರಜಾತಂತ್ರೀಕರಣ

ಇಂದಿನ ಕಾಲಘಟ್ಟದಲ್ಲಿ ಪ್ರಭುತ್ವದ ದಮನ ಹಾಗೂ ಸ್ವಯಂಕೃತ ತಪ್ಪುಒಪ್ಪುಗಳಿಂದ ನಕ್ಸಲರ ಶಕ್ತಿ ಕುಂದಿದೆ. ಆದರೆ ಸ್ವಾತಂತ್ರ್ಯಾನಂತರವೂ ಈ ದೇಶದಲ್ಲಿ ಅತ್ಯಂತ ದುಷ್ಟ ಊಳಿಗಮಾನ್ಯ-ಭೂಮಾಲಕ ಶಕ್ತಿಗಳು ಪ್ರಜಾತಂತ್ರ ಒದಗಿಸಿದ ರಾಜಕೀಯ ಅಧಿಕಾರವನ್ನು ಬಳಸಿಕೊಂಡೇ ಜೀತಗಾರರನ್ನು, ಭೂಹೀನ ರೈತರನ್ನು, ಸಣ್ಣ ರೈತಾಪಿಯನ್ನು ಶೋಷಿಸುತ್ತಿದ್ದಾಗ 1970-2000ದ ಮಧ್ಯದಲ್ಲಿ ದೇಶದ ಹಲವು ಭಾಗಗಳಲ್ಲಿ ಅವರನ್ನು ಸಂಘಟಿಸಿ ಸಾಯುಧ ಹೋರಾಟದ ಮೂಲಕ ಊಳಿಗಮಾನ್ಯ ಶಕ್ತಿಗಳ ಮಗ್ಗಲು ಮುರಿದದ್ದು ಇದೇ ಸಾಯುಧ ನಕ್ಸಲ್ ಹೋರಾಟವೇ. ಊಳಿಗಮಾನ್ಯ ಶಕ್ತಿಗಳು ಸೋತ ನಂತರ ಅಥವಾ ನಿತ್ರಾಣಗೊಂಡ ನಂತರವೇ ಅಲ್ಲಿ ದಮನಿತ ಜನತೆ ಸ್ವಾತಂತ್ರ್ಯೋತ್ತರ ಪ್ರಜಾತಂತ್ರದ ಅವಕಾಶಗಳನ್ನು ಹಾಗೂ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯವಾದದ್ದು, ಪ್ರಜಾತಾಂತ್ರಿಕ ರಾಜಕಾರಣದಲ್ಲಿ ಭಾಗವಹಿಸಲು ಸಾಧ್ಯವಾದದ್ದು. ಇದನ್ನು 2006ರ ಕೇಂದ್ರ ಸರಕಾರದ ವರದಿಯೇ ಸ್ಪಷ್ಟಪಡಿಸುತ್ತದೆ.

ಹಾಗೆಯೇ ಇಡೀ ದೇಶದ ಸಂಪತ್ತನ್ನು ಕಾರ್ಪೊರೇಟುಗಳು ಲೂಟಿ ಹೊಡೆಯುತ್ತಿರುವ ಹೊತ್ತಿನಲ್ಲಿ ನಕ್ಸಲರ ಪ್ರಾಬಲ್ಯ ಹೆಚ್ಚಿರುವ ಪ್ರದೇಶಗಳಲ್ಲಿ ಮಾತ್ರ ಅವರ ಲೂಟಿ ಸಾಧ್ಯವಾಗಿರಲಿಲ್ಲ. ಆದಿವಾಸಿಗಳ ಎತ್ತಂಗಡಿ ಸಾಧ್ಯವಾಗಿರಲಿಲ್ಲ. ಈಗ ನಿರಂತರ ಹಾಗೂ ಬೀಭತ್ಸ ಹಿಂಸಾಚಾರಗಳನ್ನು ನಡೆಸಿ ಮಧ್ಯಭಾರತದ ಅರಣ್ಯ ಪ್ರದೇಶಗಳಲ್ಲಿ ನಕ್ಸಲ ಹೋರಾಟವನ್ನು ಹೆಚ್ಚು ಕಡಿಮೆ ಹತ್ತಿಕ್ಕಲಾಗಿದೆ. ಈಗ ಅಲ್ಲಿ ಆದಿವಾಸಿಗಳ ಎತ್ತಂಗಡಿ ಹಾಗೂ ಕಾರ್ಪೊರೇಟ್ ಲೂಟಿ ತೀವ್ರಗತಿಯಲ್ಲಿ ಪ್ರಾರಂಭವಾಗಿದೆ.

ಕರ್ನಾಟಕದಲ್ಲಿ ಕುದುರೆಮುಖ ರಾಷ್ಟ್ರೀಯ ಉದ್ಯಾನದ ಹೆಸರಲ್ಲಿ ಜೈವಿಕ ಬಂಡವಾಳಶಾಹಿ ಲೂಟಿಗೆ ಅನುವು ಮಾಡಿಕೊಡಲು ವಿಕ್ರಂಗೌಡ್ಲುರಂತಹ ಮಲೆಕುಡಿಯ ಆದಿವಾಸಿಗಳನ್ನು ಕಾಂಗ್ರೆಸ್ ಸರಕಾರ 2000ದಲ್ಲಿ ಎತ್ತಂಗಡಿ ಮಾಡಲು ಹೊರಟಿತ್ತು. ಪ್ರಜಾತಾಂತ್ರಿಕ ಹೋರಾಟದ ಮೂಲಕ ಸತತವಾಗಿ ಹೋರಾಡಿದರೂ ಆಗಿನ ಕಾಂಗ್ರೆಸ್ ಸರಕಾರ ಬ್ರಹ್ಮ ವಿಷ್ಣು ಬಂದರೂ ಎತ್ತಂಗಡಿ ನಿಲ್ಲಿಸಲು ಸಾಧ್ಯವಿಲ್ಲ ಎಂದು ಎಚ್ಚರಿಸಿತ್ತು.

ಪ್ರಜಾತಾಂತ್ರಿಕ ಹೋರಾಟ ಮಾರ್ಗ, ಪ್ರಜಾತಾಂತ್ರಿಕ ಸಂಸ್ಥೆಗಳು ಮತ್ತು ಪ್ರಜಾತಾಂತ್ರಿಕವಾಗಿ ಆಯ್ಕೆಯಾದ ಸರಕಾರ ಕಾರ್ಪೊರೇಟುಗಳ ಪರವಾಗಿ ಆದಿವಾಸಿಗಳನ್ನು ಕೈಬಿಟ್ಟಾಗ ವಿಕ್ರಂಗೌಡ್ಲು, ದಿನಕರ್, ಸುಂದರಿ, ಮುಡಗಾರು ಲತಾರಂಥ ಹಲವಾರು ಯುವಕ ಯುವತಿಯರು ಪ್ರಜ್ಞಾಪೂರ್ವಕವಾಗಿ, ನಕ್ಸಲ್ ಹೋರಾಟದ ಭಾಗವಾಗಿ ಸಶಸ್ತ್ರ ಹೋರಾಟ ಕಟ್ಟಿದರು. ಸರಕಾರ ಕುದುರೆಮುಖ ಉದ್ಯಾನ ಯೋಜನೆಯಿಂದ ಆದಿವಾಸಿಗಳ ಎತ್ತಂಗಡಿಯನ್ನು ಕೈ ಬಿಟ್ಟಿದ್ದಕ್ಕೆ ಇದೂ ಒಂದು ಕಾರಣ.

ಹೀಗಾಗಿ ಪ್ರಜಾತಂತ್ರವೆಂದರೆ ಬಲಿಷ್ಠ ಹಾಗೂ ಸಶಕ್ತ ಆಳುವವರ್ಗಗಳ ವಿರುದ್ಧ ತಳಸಮುದಾಯಗಳ ಸಬಲೀಕರಣ ಮತ್ತು ರಕ್ಷಣೆ ಎಂದಾದರೆ ಭಾರತದ ಪ್ರಜಾತಂತ್ರದ ಪ್ರಯಾಣದಲ್ಲಿ ನಕ್ಸಲ್ ಹೋರಾಟಕ್ಕೆ ಒಂದು ಪ್ರಮುಖ ಪಾತ್ರವಿದೆ.

ವಾಸ್ತವದಲ್ಲಿ ಭಾರತದ ಸ್ವಾತಂತ್ರ್ಯೋತ್ತರ ಸಂದರ್ಭದಲ್ಲಿ ತಥಾಕಥಿತ ಪ್ರಜಾತಾಂತ್ರಿಕ ಶಕ್ತಿಗಳು ಮತ್ತು ಸಂಸ್ಥೆಗಳು ಈ ಸಬಲೀಕರಣಕ್ಕೆ ಪೂರಕವಾಗಿರಲಿಲ್ಲ ಅಥವಾ ವಿರುದ್ಧವಾಗಿದ್ದವು. ಹೀಗಾಗಿ ಭಾರತದ ಪ್ರಜಾತಂತ್ರದ ವಿಸ್ತರಣೆಯಲ್ಲಿ ನಕ್ಸಲ್ ಹೋರಾಟದ ಪಾತ್ರ ಅವಿಭಾಜ್ಯ.

ನಿತ್ರಾಣ ಪ್ರಜಾತಂತ್ರ ಮತ್ತು ಬಂಡವಾಳಶಾಹಿ ಸವಾಲು

ಆದರೆ ಊಳಿಗಮಾನ್ಯ ಶಕ್ತಿಗಳನ್ನು ಸೋಲಿಸಿ ತಳಸಮುದಾಯಗಳ ಸಬಲೀಕರಣಕ್ಕೆ ಕಾರಣವಾದ ನಕ್ಸಲ್ ಸಿದ್ಧಾಂತ ಮತ್ತು ಹೋರಾಟಗಳು 1990ರ ನಂತರ ನವಬಂಡವಾಳಶಾಹಿ ಮತ್ತು ಹಿಂದುತ್ವವಾದಿ ಬ್ರಾಹ್ಮಣಶಾಹಿಯ ವಿರುದ್ಧವೂ ಕ್ರಾಂತಿಯನ್ನು ಕಟ್ಟುವಲ್ಲಿ ಅಥವಾ ಪ್ರಜಾತಾಂತ್ರಿಕ ವಿಸ್ತರಣೆಯನ್ನು ಮಾಡುವಲ್ಲಿ ವಿಫಲವಾಗಿವೆ ಎಂಬುದು ಅದರ ಇಂದಿನ ಶಕ್ತಿ ಸಾಮರ್ಥ್ಯದ ಕುಸಿತವೇ ಸ್ಪಷ್ಟಪಡಿಸುತ್ತದೆ. ಆದ್ದರಿಂದಲೇ ಕುದುರೆಮುಖ ಯೋಜನೆಯಲ್ಲಿ ಎತ್ತಂಗಡಿ ರದ್ದಾದ ಮೇಲೆ ಅಲ್ಲಿಯೂ ಚಳವಳಿ ಕಾವು ಕಸುವು ಕಳೆದುಕೊಂಡಿತು.

ಹೀಗಾಗಿ ನಕ್ಸಲ್ ಚಳವಳಿ ಪ್ರಜಾತಾಂತ್ರಿಕ ಕ್ರಾಂತಿಯನ್ನು ಸಂಪೂರ್ಣಗೊಳಿಸಬೇಕೆಂದಿದ್ದರೂ ಇಂದಿನ ರಾಷ್ಟ್ರೀಯ-ಅಂತರ್‌ರಾಷ್ಟ್ರೀಯ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಸಂದರ್ಭದ ಸಮಗ್ರ ಗ್ರಹಿಕೆ ಮತ್ತು ಅದಕ್ಕೆ ತಕ್ಕಂತೆ ತನ್ನ ಕಾರ್ಯತಂತ್ರ, ಸಂಘಟನೆ, ರಾಜಕೀಯ, ಹೋರಾಟ ಮಾರ್ಗಗಳಲ್ಲಿ ಬದಲಾವಣೆ ಮಾಡಿಕೊಳ್ಳದಿದ್ದರೆ ಅದರ ಎಲ್ಲಾ ತ್ಯಾಗ ಮತ್ತು ಬಲಿದಾನಗಳು ವ್ಯರ್ಥವಾಗುತ್ತವೆ. ವ್ಯರ್ಥವಾಗುತ್ತಿವೆ.

ಆದರೆ ಅದೇ ಸಮಯದಲ್ಲಿ ನಕ್ಸಲ್ ಹೋರಾಟದಿಂದ ಹೊರಗೇ ಉಳಿದಿರುವ ಮುಖ್ಯಧಾರೆ ಪ್ರಜಾತಂತ್ರ ಮಾರ್ಗಿಗಳು ಅಥವಾ ಹೊರಬಂದು ಹೊಸ ಪ್ರಜಾತಂತ್ರ ಕಟ್ಟ ಬಯಸಿದ್ದ ಶಕ್ತಿಗಳು ಕೂಡ ಇಂದಿನ ಸಂದರ್ಭದಲ್ಲಿ ನಕ್ಸಲರಷ್ಟೇ ವಿಫಲರಾಗಿದ್ದಾರೆ. ಕೆಲವು ಸಂದರ್ಭದಲ್ಲಿ ಬದಲಾವಣೆಗಿಂತ ಯಥಾಸ್ಥಿತಿಯನ್ನು ಉಳಿಸಿಕೊಳ್ಳುವುದಕ್ಕೆ ತಮ್ಮ ಶಕ್ತಿಯನ್ನು ವಿನಿಯೋಗಿಸಬೇಕಾದ ವೈರುಧ್ಯವನ್ನು ಎದುರಿಸುತ್ತಿದ್ದಾರೆ.

ಇದಕ್ಕೆಲ್ಲಾ ಪ್ರಧಾನ ಕಾರಣ ಇಂದಿನ ಕಾರ್ಪೊರೇಟ್-ಫ್ಯಾಶಿಸ್ಟ್ ಕಾಲಘಟ್ಟದಲ್ಲಿ ಪ್ರಜಾತಂತ್ರವೇ ಜನರಿಂದ ದೂರ ಸರಿದು ಉಳ್ಳವರ ಸಾಧನವಾಗುತ್ತಿರುವುದು.

ಆದ್ದರಿಂದ ನಕ್ಸಲರು ಮತ್ತು ನಕ್ಸಲರಲ್ಲದ ಪ್ರಜಾತಂತ್ರವಾದಿಗಳು ಎಲ್ಲರೂ ಬದಲಾವಣೆಯ ಸರಿ ಮಾರ್ಗದ ಬಗ್ಗೆ ಪ್ರಾಮಾಣಿಕ ಆತ್ಮವಿಮರ್ಶೆಯಲ್ಲಿ ತೊಡಗಿಕೊಳ್ಳುವ ಅಗತ್ಯವಿದೆ. ಏಕೆಂದರೆ ಪ್ರತಿಯೊಬ್ಬರಿಗೂ ತಮ ವೈಫಲ್ಯ ಕಾಣದೆ ಮತ್ತೊಬ್ಬರ ವೈಫಲ್ಯದ ಮೂರ್ಖತನ ಮಾತ್ರ ಕಾಣುವ ಒಕ್ಕಣ್ಣತನದ ಕುರುಡಿದೆ.

ಎಲ್ಲಕ್ಕಿಂತ ಮುಖ್ಯವಾಗಿ ಮತ್ತೊಬ್ಬರಿಗೆ ಕುಡಿಯಲು ನೀರು ಕೊಡಲು ನಿರಾಕರಿಸುವ ಈ ಸಮಾಜದಲ್ಲಿ ಸಮಾಜಕ್ಕೆ ಪ್ರಾಣವನ್ನೇ ಬಲಿಕೊಡುವ ಜೀವದ ಮೌಲ್ಯವನ್ನು ಅರ್ಥಮಾಡಿಕೊಳ್ಳಬೇಕು. ಅದನ್ನು ಹುಂಬತನ, ದಡ್ಡತನ, ಭಂಡತನ ಎಂದು ಬಣ್ಣಿಸದೆ ಬದಲಾವಣೆಯ ಮಾರ್ಗದಲ್ಲಿ ತಪ್ಪುಗಳನ್ನೂ ಘನತೆಯಿಂದ ಅರ್ಥಮಾಡಿಕೊಳ್ಳುವ ಕಲಿಯುವ ದಾರಿಯನ್ನು ರೂಢಿಸಿಕೊಳ್ಳಬೇಕು.

ಅದರಲ್ಲಿ ಮೊದಲ ಹೆಜ್ಜೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕೈಗೆ ಹತ್ತಿರುವ ರಕ್ತವನ್ನು ಕಾಣುವುದು, ಕಾಣಿಸುವುದು ಮತ್ತು ಈ ನೆಲದಲ್ಲಿ ಮತ್ತಷ್ಟು ನಕಲಿ ಎನ್‌ಕೌಂಟರ್‌ಗಳು ನಡೆಯದಂತೆ ನಾಗರಿಕ ಸಮಾಜ ಒಂದಾಗಿ ಧ್ವನಿ ಎತ್ತುವುದು. ಅದರಲ್ಲಿ ಮೊದಲ ಹೆಜ್ಜೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕೈಗೆ ಹತ್ತಿರುವ ರಕ್ತವನ್ನು ಕಾಣುವುದು, ಕಾಣಿಸುವುದು ಮತ್ತು ಈ ನೆಲದಲ್ಲಿ ಮತ್ತಷ್ಟು ನಕಲಿ ಎನ್‌ಕೌಂಟರ್‌ಗಳು ನಡೆಯದಂತೆ ನಾಗರಿಕ ಸಮಾಜ ಒಂದಾಗಿ ಧ್ವನಿ ಎತ್ತುವುದು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಶಿವಸುಂದರ್

contributor

Similar News