ಅಂಬೇಡ್ಕರ್ ದ್ವೇಷಿ, ಸಂವಿಧಾನ ದ್ರೋಹಿಗಳ ‘ಸಂವಿಧಾನ ಸನ್ಮಾನ ಅಭಿಯಾನ’

ಸಂಘಪರಿವಾರದ ಅಂಗಸಂಸ್ಥೆಗಳು ಇದೇ ನ. 26ರಿಂದ ಜನವರಿ 26ರ ವರೆಗೆ ‘ಸಂವಿಧಾನ ಸನ್ಮಾನ ಅಭಿಯಾನ’ ನಡೆಸುತ್ತಿವೆ. ಈ ಅಭಿಯಾನದಲ್ಲಿ ಸಂವಿಧಾನದ ಹಾಗೂ ಅಂಬೇಡ್ಕರ್‌ರ ನಿಜವಾದ ಅನುಯಾಯಿಗಳು ತಾವೇ ಹೊರತು ಕಾಂಗ್ರೆಸ್ ಅಥವಾ ಇತರ ಪಕ್ಷಗಳಲ್ಲ ಎಂದು ನಂಬಿಸಲು ಹಲವಾರು ಸುಳ್ಳುಗಳನ್ನು, ಐತಿಹಾಸಿಕ ಅರ್ಧ ಸತ್ಯಗಳನ್ನು, ಪ್ರಚಾರ ಮಾಡುತ್ತಿದೆ. ಆ ಮೂಲಕ ತನ್ನ ನಿಜ ಸ್ವರೂಪವಾದ ಅಂಬೇಡ್ಕರ್ ದ್ವೇಷ ಹಾಗೂ ಸಂವಿಧಾನ ದ್ರೋಹವನ್ನು ಮರೆಮಾಚುವ ಕುತಂತ್ರ ನಡೆಸಿದೆ.. ಈ ಸರಣಿ ಲೇಖನವು ಸಂಘಿ ಅಭಿಯಾನದ ಸುಳ್ಳುಗಳನ್ನು, ಬಯಲಿಗೆಳೆಯಲಿದೆ ಮತ್ತು ಸಂಘಿಗಳ ಅಸಲಿ ಪಾತ್ರವನ್ನು ಮತ್ತು ಹಾಲಿ ದುರುದ್ದೇಶಗಳನ್ನು ಅನಾವರಣ ಮಾಡಲಿದೆ.. ಕರ್ನಾಟಕದ ರಾಜಕೀಯ ಆರೋಗ್ಯದ ಹಿತದೃಷ್ಟಿಯಿಂದ ಈ ಸರಣಿಯನ್ನು ಪ್ರಕಟಿಸಲಾಗುತ್ತಿದೆ.

Update: 2024-12-04 04:56 GMT
Editor : Thouheed | Byline : ಶಿವಸುಂದರ್

ಸರಣಿ- 1

ಈ ವರ್ಷ ಸಂಘಪರಿವಾರದ ಮಾತೃ ಸಂಘಟನೆ ಆರೆಸ್ಸೆಸ್‌ಗೆ ನೂರು ವರ್ಷ ತುಂಬಲಿದ್ದು, ಅದು ಹಿಂದೂ ಎಂದು ಭಾವಿಸುವ ಇಡೀ ಸಮುದಾಯವನ್ನು ಸಾಮ-ದಾನ-ಭೇದ-ದಂಡಗಳ ಮೂಲಕ ಬ್ರಾಹ್ಮಣೀಯ ಹಿಂದುತ್ವದಡಿಯಲ್ಲಿ ತಂದು ಅಖಂಡ ಹಿಂದೂ ರಾಷ್ಟ್ರ ಕಟ್ಟುವ ಸನ್ನಾಹವನ್ನು ತೀವ್ರಗೊಳಿಸುವ ಯೋಜನೆಯನ್ನು ಮಾಡಿದೆ.

ಈ ನಿಟ್ಟಿನಲ್ಲಿ ಅಂಬೇಡ್ಕರ್ ಅವರನ್ನು ಹಿಂದೂ ಸಂತನೆಂದು ಬಣ್ಣಿಸುತ್ತಾ ಹಿಂದೂ ಚಾಮರದೊಳಗೆ ತಂದುಕೊಳ್ಳುವುದು ಹಾಗೂ ತಾವು ಮೀಸಲಾತಿ ಹಾಗೂ ಸಂವಿಧಾನ ವಿರೋಧಿಯಲ್ಲವೆಂದು ದಲಿತ-ದಮನಿತ ಸಮುದಾಯಗಳನ್ನು ನಂಬಿಸುವ ಅಗತ್ಯ ಉಂಟಾಗಿದೆ. ಈ ಯೋಜಿತ ಕುತಂತ್ರದಿಂದ ಹುಟ್ಟಿರುವುದೇ ‘ಸಂವಿಧಾನ ಸನ್ಮಾನ ಅಭಿಯಾನ’.

ಸಿಟಿಜನ್ಸ್ ಫಾರ್ ಸೋಷಿಯಲ್ ಜಸ್ಟಿಸ್ ಹೆಸರಿನಲ್ಲಿ ಕರ್ನಾಟಕದ ಸಂಘಪರಿವಾರವು ನವೆಂಬರ್ 26ರಿಂದ ಜನವರಿ 26ರ ವರೆಗೆ ಎರಡು ತಿಂಗಳ ಕಾಲ ‘ಸಂವಿಧಾನ ಸನ್ಮಾನ ಅಭಿಯಾನ’ವನ್ನು ನಡೆಸಲಿದೆ. ಅದರ ಭಾಗವಾಗಿ ರಾಜ್ಯಾದ್ಯಂತ ಸಂವಿಧಾನದ ಬಗ್ಗೆ ಮತ್ತು ಅಂಬೇಡ್ಕರ್ ಬಗ್ಗೆ ಏನೆಲ್ಲಾ ವಿಕೃತಿಯ ಅಪಪ್ರಚಾರಗಳನ್ನು ಮಾಡಲಿದೆಯೆಂಬ ಸೂಚನೆಗಳು, ಅವರ ನಾಯಕರ ಏಕರೂಪಿ ಭಾಷಣಗಳಲ್ಲಿ ಈಗಾಗಲೇ ದೊರೆಯುತ್ತಿವೆ.

ಸಂವಿಧಾನವನ್ನೇ ಬದಲಿಸಬೇಕೆಂದು ಹೊರಟಿರುವ ಸಂಘಿಗಳು ಇದ್ದಕ್ಕಿದ್ದ ಹಾಗೆ ಸಂವಿಧಾನ ಸನ್ಮಾನವೇಕೆ ಮಾಡುತ್ತಿದ್ದಾರೆ ಎಂಬುದಕ್ಕೆ ಉತ್ತರ ಸರಳ. ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಬಿಜೆಪಿಗೆ ಬಹುಮತ ದೊರಕದಿರಲು ಒಂದು ಪ್ರಮುಖ ಕಾರಣ ಬಿಜೆಪಿಯ ರಾಷ್ಟ್ರೀಯ ನಾಯಕರುಗಳು ಈ ಬಾರಿ ತಮಗೆ 400ಕ್ಕಿಂತಲೂ ಹೆಚ್ಚು ಸೀಟುಗಳು ಬರುತ್ತದೆ ಮತ್ತು ಈ ಬಾರಿ ಸಂವಿಧಾನ ಬದಲಿಸುತ್ತೇವೆ ಎಂದು ಬಹಿರಂಗವಾಗಿ ಘೋಷಿಸಿದ್ದು. ಹೀಗಾದಲ್ಲಿ ಬಿಜೆಪಿ ಅಂಬೇಡ್ಕರ್ ರಚಿಸಿದ ಸಂವಿಧಾನ ಬದಲಾಗಿ ಮೀಸಲಾತಿಯೂ ರದ್ದಾಗುವುದು ಎಂಬ ಆತಂಕ ದಲಿತ ದಮನಿತ ಸಮುದಾಯದಲ್ಲಿ ಮಡುಗಟ್ಟಿದ್ದರಿಂದ ಈ ಬಾರಿ ಬಹುಪಾಲು ದಮನಿತರ ಮತಗಳು ಬಿಜೆಪಿಗೆ ಚಲಾವಣೆ ಆಗಲಿಲ್ಲ. ಹೀಗಾಗಿ ಬಿಜೆಪಿ ಬಹುಮತ ಪಡೆಯದೆ ಇತರ ಪಕ್ಷಗಳ ಸಹಕಾರದೊಂದಿಗೆ ಸರಕಾರ ರಚಿಸಬೇಕಾಗಿ ಬಂದಿದೆ.

ಇದಲ್ಲದೆ ಈ ವರ್ಷ ಸಂಘಪರಿವಾರದ ಮಾತೃ ಸಂಘಟನೆ ಆರೆಸ್ಸೆಸ್‌ಗೆ ನೂರು ವರ್ಷ ತುಂಬಲಿದ್ದು, ಅದು ಹಿಂದೂ ಎಂದು ಭಾವಿಸುವ ಇಡೀ ಸಮುದಾಯವನ್ನು ಸಾಮ-ದಾನ-ಭೇದ-ದಂಡಗಳ ಮೂಲಕ ಬ್ರಾಹ್ಮಣೀಯ ಹಿಂದುತ್ವದಡಿಯಲ್ಲಿ ತಂದು ಅಖಂಡ ಹಿಂದೂ ರಾಷ್ಟ್ರ ಕಟ್ಟುವ ಸನ್ನಾಹವನ್ನು ತೀವ್ರಗೊಳಿಸುವ ಯೋಜನೆಯನ್ನು ಮಾಡಿದೆ.

ಈ ನಿಟ್ಟಿನಲ್ಲಿ ಅಂಬೇಡ್ಕರ್ ಅವರನ್ನು ಹಿಂದೂ ಸಂತನೆಂದು ಬಣ್ಣಿಸುತ್ತಾ ಹಿಂದೂ ಚಾಮರದೊಳಗೆ ತಂದುಕೊಳ್ಳುವುದು ಹಾಗೂ ತಾವು ಮೀಸಲಾತಿ ಹಾಗೂ ಸಂವಿಧಾನ ವಿರೋಧಿಯಲ್ಲವೆಂದು ದಲಿತ-ದಮನಿತ ಸಮುದಾಯಗಳನ್ನು ನಂಬಿಸುವ ಅಗತ್ಯ ಉಂಟಾಗಿದೆ. ಈ ಯೋಜಿತ ಕುತಂತ್ರದಿಂದ ಹುಟ್ಟಿರುವುದೇ ‘ಸಂವಿಧಾನ ಸನ್ಮಾನ ಅಭಿಯಾನ’.

ಇದು ಒಂದು ರೀತಿಯ ಧೃತರಾಷ್ಟ್ರ ಆಲಿಂಗನವೇ. ಮಹಾಭಾರತದಲ್ಲಿ ಕುರುಕ್ಷೇತ್ರ ಯುದ್ಧ ಮುಗಿದ ಮೇಲೆ ಸೋತ ಕೌರವರ ಪಿತಾಮಹ ಧೃತರಾಷ್ಟ್ರನಿಗೆ ತನ್ನೆಲ್ಲ ಮಕ್ಕಳನ್ನು ಕೊಂದುಹಾಕಿದ ಪಾಂಡವರ ಮೇಲೆ ಅಪಾರ ಕ್ರೋಧ ಹುಟ್ಟುತ್ತದೆ. ಆದರೆ ಅದನ್ನು ತೋರಿಸಿಕೊಳ್ಳದೆ ತನ್ನ ಆಪ್ತ ಪುತ್ರ ದುರ್ಯೋಧನನನ್ನು ಕೊಂದ ಭೀಮನನ್ನು ಪ್ರೀತಿಯಿಂದ ಅಪ್ಪಿಕೊಳ್ಳುವ ಕೋರಿಕೆಯುಂಟಾಗಿದೆಯೆಂದು ಬರಹೇಳುತ್ತಾನೆ. ಆದರೆ ಭೀಮನನ್ನು ಎಷ್ಟು ಬಲವಾಗಿ ಅಪ್ಪಿಕೊಳ್ಳುತ್ತಾನೆಂದರೆ ಅಪ್ಪುಗೆಯಿಂದಲೇ ಮೂಳೆಗಳನ್ನು ಪುಡಿಪುಡಿ ಮಾಡಿ ಕೊಂದು ಹಾಕುವ ತಂತ್ರವನ್ನು ಹೆಣೆದಿರುತ್ತಾನೆ. ಸಂಘಿಗಳು ಸಂವಿಧಾನವನ್ನು ಮತ್ತು ಅಂಬೇಡ್ಕರರನ್ನು ಈಗ ಅಪ್ಪಿಕೊಂಡು ಸಂವಿಧಾನ ಸನ್ಮಾನ ಅಭಿಯಾನ ಮಾಡುತ್ತಿರುವುದು ಕೂಡ ಒಂದು ರೀತಿ ಧೃತರಾಷ್ಟ್ರ ಆಲಿಂಗನವೇ ಆಗಿದೆ.

ಈ ಎರಡು ತಿಂಗಳ ಅಭಿಯಾನದಲ್ಲಿ ಸಂಘಿಗಳು ಪ್ರಧಾನವಾಗಿ ಕೇಂದ್ರೀಕರಿಸಿರುವುದು ಎರಡು ವಿಷಯಗಳ ಮೇಲೆ:

1. ನಿಜವಾದ ಅಂಬೇಡ್ಕರ್ ಅನುಯಾಯಿಗಳು ಸಂಘಪರಿವಾರ ಮತ್ತು ಬಿಜೆಪಿ, ಆದರೆ ಕಾಂಗ್ರೆಸ್ ಅಂಬೇಡ್ಕರ್ ವಿರೋಧಿ. ಏಕೆಂದರೆ ಅಂಬೇಡ್ಕರ್‌ರನ್ನು ಚುನಾವಣೆಯಲ್ಲಿ ಸೋಲಿಸಿದ್ದು ಕಾಂಗ್ರೆಸೇ ಹಾಗೂ ಸಚಿವ ಸಂಪುಟದಿಂದ ರಾಜೀನಾಮೆ ಕೊಡುವಂತೆ ಮಾಡಿದ್ದು ಕಾಂಗ್ರೆಸೇ.

2. ಅತಿ ಹೆಚ್ಚು ಸಾರಿ ಸಂವಿಧಾನಕ್ಕೆ ತಿದ್ದುಪಡಿ ಮಾಡಿರುವುದು ಕಾಂಗ್ರೆಸ್ ಮತ್ತು ಅವೆಲ್ಲವೂ ಅಧಿಕಾರ ಲಾಲಸೆಯ ತಿದ್ದುಪಡಿಗಳು. ಬಿಜೆಪಿ ಮಾಡಿರುವ ತಿದ್ದುಪಡಿಗಳೆಲ್ಲಾ ದಲಿತ ಮೀಸಲಾತಿ ಪರ ಮತ್ತು ಅಂಬೇಡ್ಕರ್ ಆಶಯಕ್ಕೆ ಹತ್ತಿರವಾದವುಗಳು.

ಕಾಂಗ್ರೆಸ್ ವಿಷಯದಲ್ಲಿ ಸಂಘಿಗಳು ಹೇಳುತ್ತಿರುವ ಐತಿಹಾಸಿಕ ವಿಷಯದಲ್ಲಿ ಹಲವು ಅರ್ಧ ಸತ್ಯಗಳಿವೆ. ಹೀಗಾಗಿ ಬಿಜೆಪಿಯ ಅಂಬೇಡ್ಕರ್ ದ್ರೋಹಿತನವನ್ನು ಸಾಬೀತು ಮಾಡಲು ಕಾಂಗ್ರೆಸ್ ಪರವಾಗುವ ಅಗತ್ಯವಿಲ್ಲ. ಆದರೆ ಕಾಂಗ್ರೆಸ್ ಮಾಡಿದ ಪ್ರಮಾದಗಳನ್ನು ಎತ್ತಿ ಹೇಳುತ್ತಾ ಸಂಘಪರಿವಾರ ತಾನೂ ರಾಜಕೀಯವಾಗಿ ಮಾತ್ರವಲ್ಲದೆ ಸೈದ್ಧಾಂತಿಕವಾಗಿಯೂ ಅಂಬೇಡ್ಕರರನ್ನು ದ್ವೇಷಿಸುತ್ತಿದ್ದನ್ನು ಹಾಗೂ ಸಂಘಪರಿವಾರದ ಹಿಂದುತ್ವವೇ ಅಂಬೇಡ್ಕರ್ ವಾದದ ಪ್ರಧಾನ ಶತ್ರುವಾಗಿರುವುದನ್ನು ಮರೆಮಾಚಲು ಸಾಧ್ಯವಿಲ್ಲ.

ಇದನ್ನು ಅವರು ‘ಪಾಕಿಸ್ತಾನ ಅಥವಾ ಭಾರತದ ವಿಭಜನೆ’ ಎಂಬ ಕೃತಿಯಲ್ಲಿ ಅತ್ಯಂತ ಸ್ಪಷ್ಟವಾಗಿ ದಾಖಲಿಸುತ್ತಾರೆ.

‘‘ಹಿಂದೂ ರಾಜ್ಯವು ವಾಸ್ತವವಾಗಿ ಬಿಟ್ಟರೆ ಅದು ಅತಿ ದೊಡ್ಡ ವಿಪತ್ತಾಗಿರುತ್ತದೆ. ಹಿಂದೂ ರಾಷ್ಟ್ರವೆಂದರೆ ಸ್ವಾತಂತ್ರ್ಯ, ಸಮಾನತೆ ಮತ್ತು ಬಂಧುತ್ವಗಳಿಗೆ ಎದುರಾಗುವ ಅಪಾಯವೇ ಆಗಿದೆ. ಹೀಗಾಗಿ ಎಲ್ಲಾ ಪ್ರಯತ್ನಗಳನ್ನು ಮಾಡಿ ಹಿಂದೂ ರಾಷ್ಟ್ರವು ವಾಸ್ತವಕ್ಕೆ ಬರದಂತೆ ತಡೆಗಟ್ಟಬೇಕು’’ ಎಂದು 1940ರಲ್ಲೇ ಅಂಬೇಡ್ಕರ್ ಹೇಳಿದ್ದರು.

(Dr. Babasaheb Ambedkar: Writings And Speeches, Vol 8, p. 358)

ಈಗ ಸಂಘಿಗಳು ಏನೇ ನಾಟಕವಾಡುತ್ತಿದ್ದರೂ, ಅಂಬೇಡ್ಕರ್ ಅವರಿಗೆ ಸಂಘಿ ಹಿಂದುತ್ವದ ಬಗ್ಗೆ ಬೇರೆ ಯಾರಿಗೂ ಇರದಷ್ಟು ಸ್ಪಷ್ಟತೆ ಇದ್ದಿದ್ದರಿಂದಲೇ ಆರೆಸ್ಸೆಸ್ ಮತ್ತು ಹಿಂದೂ ಮಹಾಸಭಾ ಅಂಬೇಡ್ಕರ್ ಅವರನ್ನು ತೀವ್ರವಾಗಿ ದ್ವೇಷಿಸುತ್ತಿದ್ದರು ಎಂಬುದು ಇತಿಹಾಸವನ್ನು ಗಂಭೀರವಾಗಿ ಅಭ್ಯಾಸ ಮಾಡಿದರೆ ಅರ್ಥವಾಗುತ್ತದೆ.

1. ಅಂಬೇಡ್ಕರ್ ದ್ವೇಷಿ ಸಂಘಪರಿವಾರ

ಅಂಬೇಡ್ಕರ್‌ಗೆ ಸಹಾಯ ಮಾಡುವುದೆಂದರೆ ಹಾವಿಗೆ

ಹಾಲೆರದಂತೆ!- ಹಿಂದೂ ಮಹಾಸಭಾ

1935ರಲ್ಲಿ ಅಂಬೇಡ್ಕರ್ ಅವರು ಹಿಂದೂ ಧರ್ಮ ತೊರೆಯುತ್ತೇನೆ ಎಂದು ಘೋಷಿಸುವ ತನಕ ಆರೆಸ್ಸೆಸ್ ಮತ್ತು ಹಿಂದೂ ಮಹಾಸಭಾಗಳು ಅಸ್ಪಶ್ಯರನ್ನು ಮನುಷ್ಯರೆಂದೇ ಪರಿಗಣಿಸಿರಲಿಲ್ಲ. ಕಾಂಗ್ರೆಸ್ ನಾಯಕರುಗಳು ಕೂಡಾ ದಲಿತರನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಯಾವಾಗ 1932ರ ದುಂಡು ಮೇಜಿನ ಪರಿಷತ್ತಿನ ಒಪ್ಪಂದಗಳು ಶಾಸನ ಸಭೆಗಳಲ್ಲಿ ಕೋಮುವಾರು ಜನಸಂಖ್ಯಾಧಾರಿತ ಪ್ರಾತಿನಿಧ್ಯವನ್ನು ಘೋಷಿಸಿತೋ, ಆಗ ಹಿಂದೂಗಳ ಸಂಖ್ಯೆ ಹೆಚ್ಚಿಸಿಕೊಳ್ಳುವ ಅನಿವಾರ್ಯತೆ ಅವರಿಗೆ ಎದುರಾಯಿತು.

ಅಸ್ಪಶ್ಯರು ಹಿಂದೂ ಧರ್ಮ ತೊರೆದರೆ ಹಿಂದೂ ಕೋಮಿನ ಜನಸಂಖ್ಯೆ ಪ್ರಮಾಣ ಕಡಿಮೆಯಾಗಿ, ಆ ಮೂಲಕ ಹಿಂದೂ ಪ್ರಾತಿನಿಧ್ಯ ಕಡಿಮೆಯಾಗುತ್ತದೆ ಎಂಬ ಭಯ ಕಾಂಗ್ರೆಸ್ ಮತ್ತು ಸಭಾ ಎರಡನ್ನೂ ಸಮಾನವಾಗಿ ಆವರಿಸಿಕೊಂಡಿತ್ತು. ಅದರಲ್ಲೂ ಪ್ರಾರಂಭದಲ್ಲಿ ಅಂಬೇಡ್ಕರ್ ಇಸ್ಲಾಮ್ ಧರ್ಮವನ್ನು ಸೇರುವ ಸಾಧ್ಯತೆಯನ್ನು ಗಂಭೀರವಾಗಿ ಪರಿಗಣಿಸುತ್ತಿದ್ದದ್ದು ಸಹ ಹಿಂದೂ ಮಹಾಸಭಾದ ಆತಂಕವನ್ನು ಹೆಚ್ಚಿಸಿತು.

ಈ ಅನಿವಾರ್ಯತೆ ಸೃಷ್ಟಿಯಾಗುವ ಕೇವಲ ಎರಡು ವಾರಗಳ ಮುನ್ನವೂ ಹಿಂದೂ ಮಹಾಸಭಾದ ನಾಯಕ ಮೂಂಜೆ ಅವರು ತಮ್ಮ ಡೈರಿಯಲ್ಲಿ ಹೀಗೆ ಬರೆದುಕೊಂಡಿರುತ್ತಾರೆ:

‘‘ಇವತ್ತಿನ ಸಂದರ್ಭದಲ್ಲಿ ನಾವು ನಮ್ಮ ಎಲ್ಲಾ ಶಕ್ತಿಯನ್ನು, ಹಣ ಮತ್ತು ಇನ್ನಿತರ ಸಂಪನ್ಮೂಲಗಳನ್ನು ಒಗ್ಗೂಡಿಸಿ ಮಾಡಬೇಕಾದ ತುರ್ತು ಕೆಲಸವೆಂದರೆ ಸವರ್ಣೀಯ ಹಿಂದೂಗಳ ಸೈನಿಕ ತರಬೇತಿ. ಆ ತರಬೇತಿಯನ್ನು ಪಡೆದವರು ನಂತರದಲ್ಲಿ ಹಿಂದೂ ಧರ್ಮವನ್ನು ತೊರೆಯುವವರನ್ನು ಮತ್ತು ಆ ರೀತಿ ಹಿಂದೂಶ್ರದ್ಧೆಯನ್ನು ತೊರೆಯುವಂತೆ ಮಾಡುವವರನ್ನು ಶಿಕ್ಷಿಸಲು ಸಮರ್ಥರಾಗುತ್ತಾರೆ’’. ಇದು ಹಿಂದೂ ಮಹಾಸಭಾದ ಮೂಂಜೆ ಹಿಂದೂ ಧರ್ಮವನ್ನು ತೊರೆಯುವ ಸನ್ನಾಹದಲ್ಲಿದ್ದ ಮತ್ತು ಇತರ ದಲಿತರಿಗೂ ಪ್ರೇರಣೆ ನೀಡುತ್ತಿದ್ದ ಅಂಬೇಡ್ಕರ್ ಅವರನ್ನು ಗಮನದಲ್ಲಿಟ್ಟುಕೊಂಡು ಹಾಕಿದ ಬೆದರಿಕೆ.

ಹಾಗೆ ನೋಡಿದರೆ 1932ರ ಪೂನಾ ಒಪ್ಪಂದದಲ್ಲಿ ಗಾಂಧಿ ನೇತೃತ್ವದಲ್ಲಿ ನಡೆದ ದಲಿತ ದ್ರೋಹಿ ಒಪ್ಪಂದಕ್ಕೆ ಹಿಂದೂ ಸಮಾಜದ ಪರವಾಗಿ ಸಹಿ ಹಾಕಿದವರಲ್ಲಿ ಮೂಂಜೆಯವರೂ ಒಬ್ಬರು. ಆದರೂ ಅವರು ಅಸ್ಪಶ್ಯರು ಮತ್ತು ಅಂಬೇಡ್ಕರ್ ಬಗ್ಗೆ ತಮಗಿದ್ದ ದ್ವೇಷವನ್ನು 1935ರಲ್ಲಿ ಅತ್ಯಂತ ಸ್ಪಷ್ಟವಾಗಿ ಹೀಗೆ ಕಕ್ಕಿಕೊಂಡಿದ್ದರು:

‘‘....ಅಂಬೇಡ್ಕರ್ ಅವರ ಮೇಲೆ ಮತ್ತು ಅಸ್ಪಶ್ಯರ ಮೇಲೆ ಹಣವನ್ನು ಖರ್ಚು ಮಾಡುವುದೆಂದರೆ ಹಾವಿಗೆ ಹಾಲೆರದಂತೆ. ನಾವು ಅಸ್ಪಶ್ಯರಿಗೆ ಯಾವುದೇ ಸಹಾಯವನ್ನು ಮಾಡದೆ ಅವರ ಕಷ್ಟಗಳನ್ನು ಅವರೇ ಅನುಭವಿಸಲು ಬಿಟ್ಟುಬಿಡಬೇಕು’’

(Moonje Diary, Nehru Memorial Museum and Library, ಕೀತ್ ಮೇದೋಕ್ರಾಫ್ಟ್ ಅವರ ‘the Moonje-Ambedkar Pact’ ಎಂಬ ಉಲ್ಲೇಖ)

ಅಂಬೇಡ್ಕರ್ ಅವರು ತಮ್ಮ ಜಾತಿ ವಿನಾಶ ಕೃತಿಯಲ್ಲಿ ಕೆಲವು ಹಿಂದೂ ನಾಯಕರು ತನ್ನನ್ನು ದೇವತೋಟದ ಹಾವೆಂದು ಪರಿಗಣಿಸುತ್ತಾರೆ ಎಂದು ಉಲ್ಲೇಖಿಸುವುದು ಇದೇ ಪ್ರಸಂಗವನ್ನೇ.. ಇದೇ ಮೂಂಜೆಯವರೇ ಸಾವರ್ಕರ್ ಅವರ ಅಣ್ಣ ಮತ್ತು ಹೆಡಗೇವಾರ್ ಅವರ ಜೊತೆ ಸೇರಿ 1925ರಲ್ಲಿ ಆರೆಸ್ಸೆಸನ್ನು ಹುಟ್ಟುಹಾಕಿದರು. 1932ರಲ್ಲಿ ಇಟಲಿಗೆ ಹೋಗಿ ಮುಸಲೋನಿಯನ್ನು ಭೇಟಿಯಾಗಿ ಬಂದು ಭಾರತದಲ್ಲಿ ಹಿಂದೂಗಳನ್ನು ಅದೇ ಮಾದರಿಯಲ್ಲಿ ಸೈನಿಕವಾಗಿ ಸಂಘಟಿಸಬೇಕೆಂದೂ, ಆರ್ಯ ಶ್ರೇಷ್ಠತೆಯನ್ನು ಕಾಪಾಡಿಕೊಳ್ಳಲು ಜಾತಿ ಶ್ರೇಷ್ಠತೆಯನ್ನು ಉಳಿಸಿಕೊಳ್ಳಬೇಕೆಂಬ ‘ದರ್ಶನ’ವನ್ನು ಒದಗಿಸಿದವರು.

ಇದು ಹಿಂದೂತ್ವವಾದಿಗಳ, ಸಂಘಪರಿವಾರಿಗರ ಅಂಬೇಡ್ಕರ್ ಪ್ರೇಮದ ಅಸಲಿಯತ್ತು. ಅದೇ ಅನಿವಾರ್ಯತೆಯಿಂದಾಗಿಯೇ ಈಗಲೂ ಸಂಘಿಗಳು ದಲಿತರ ಪರವಾಗಿ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ, ಅಷ್ಟೆ.

ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಮತ್ತು ಸ್ವಾತಂತ್ರ್ಯಾನಂತರದ ಮೊದಲ ನಾಲ್ಕು ದಶಕಗಳ ಕಾಲ ಅಂಬೇಡ್ಕರ್‌ರ ರಾಜಕೀಯಕ್ಕೆ ಮತ್ತು ಸಿದ್ಧಾಂತಕ್ಕೆ ಪ್ರಧಾನ ಪ್ರತಿಸ್ಪರ್ಧಿ ಕಾಂಗ್ರೆಸೇ. ಆರೆಸ್ಸೆಸ್ ಮತ್ತು ಹಿಂದೂ ಮಹಸಭಾ ಹಾಗೂ ಆನಂತರದ ಭಾರತೀಯ ಜನಸಂಘ ಅಷ್ಟು ಪ್ರಬಲವಾಗಿರದ ಸಂದರ್ಭದಲ್ಲಿ ಹಲವು ಉಗ್ರ ಹಿಂದುತ್ವವಾದಿ ಶಕ್ತಿಗಳು ಕಾಂಗ್ರೆಸಿನೊಳಗೇ ಇದ್ದವು. ಈಗಲೂ ಇವೆ. ಹೀಗಾಗಿ ಕಾಂಗ್ರೆಸಿನ ಮೇಲೆ ಅಂಬೇಡ್ಕರ್ ಮಾಡಿದ ಕಟುವಾದ ಹಲವು ವಿಮರ್ಶೆಗಳು ಇಂದಿನ ಹಿಂದುತ್ವವಾದಿಗಳಿಗೆ ನೇರವಾಗಿ ಸಲ್ಲುತ್ತವೆ. ಆದರೆ ಆ ಸಂದರ್ಭದಲ್ಲೂ ಅಂಬೇಡ್ಕರ್ ಅವರಿಗೆ ಹಿಂದುತ್ವವಾದಿ ಆರೆಸ್ಸೆಸ್‌ನ ಮತ್ತು ಹಿಂದೂ ಮಹಸಭಾದ ಅಪಾಯಗಳ ಬಗ್ಗೆ ಅತ್ಯಂತ ಸ್ಪಷ್ಟತೆ ಇತ್ತು.

ಅಯೋಗ್ಯ ಹಿಂದೂ ಮಹಾಸಭಾ ಮತ್ತು ಅಪ್ರಾಮಾಣಿಕ ಕಾಂಗ್ರೆಸ್

ವಾಸ್ತವದಲ್ಲಿ ಅಂಬೇಡ್ಕರ್ ಆಗ ತಮ್ಮ ಪ್ರಧಾನ ರಾಜಕೀಯ ಶತ್ರುವೆಂದು ಪರಿಗಣಿಸಿದ್ದ ಕಾಂಗ್ರೆಸಿನ ವಿರುದ್ಧ ಹೋರಾಡುತ್ತಿದ್ದಾಗಲೂ ಅಪಾಯಕಾರಿ ಹಿಂದುತ್ವವಾದಿ ಶಕ್ತಿಗಳ ಬಗ್ಗೆ ಅತ್ಯಂತ ನಿಷ್ಠುರ ಸ್ಪಷ್ಟತೆಯನ್ನು ಇಟ್ಟುಕೊಂಡಿದ್ದರು.

ಉದಾಹರಣೆಗೆ ಕಾಂಗ್ರೆಸ್ ಒಂದು ಸಿದ್ಧಾಂತವಾಗಿ ಮತ್ತು ರಾಜಕೀಯ ಪಕ್ಷವಾಗಿ ಅಸ್ಪಶ್ಯರಿಗೆ ಹೇಗೆ ಮೋಸ ಮಾಡಿತು ಎಂದು ವಿವರಿಸುವ ಅವರ ‘WHAT CONGRESS AND GANDHI HAVE DONE TO THE UNTOUCHABLES’ ಎಂಬ ದೀರ್ಘ ಬರಹದಲ್ಲೂ ಅಂಬೇಡ್ಕರ್ ಅವರು ಕಾಂಗ್ರೆಸ್ ಅಸ್ಪಶ್ಯರ ಸಮಸ್ಯೆಯನ್ನು ಬಗೆಹರಿಸುವ ಜವಾಬ್ದಾರಿಯನ್ನು ಸಾವರ್ಕರ್-ಮೂಂಜೆ ನೇತೃತ್ವದ ಹಿಂದೂ ಮಹಾಸಭಾದಂತಹ ಅಯೋಗ್ಯ ಸಂಘಟನೆಗೆ ವಹಿಸಿದ್ದನ್ನು ಅಸ್ಪಶ್ಯರ ಬಗೆಗೆ ಅದಕ್ಕೆ ಇರುವ ತಾತ್ಸಾರಕ್ಕೆ ಒಂದು ಉದಾಹರಣೆಯೆಂದು ಪ್ರತಿಪಾದಿಸುತ್ತಾರೆ.

ಮುಂದುವರಿದು:

‘‘ಕಾಂಗ್ರೆಸ್ ಅಸ್ಪಶ್ಯರ ಸಮಸ್ಯೆಯನ್ನು ನಿವಾರಿಸುವ ಜವಾಬ್ದಾರಿಯಿಂದ ಜಾರಿಕೊಂಡಿದ್ದು ಮಾತ್ರವಲ್ಲದೆ ಆ ಜವಾಬ್ದಾರಿಯನ್ನು ಹಿಂದೂ ಮಹಾಸಭಾಗೆ ವಹಿಸಿ ಗಾಯದ ಮೇಲೆ ಉಪ್ಪು ಸವರಿತು.’’

‘‘ಅಸ್ಪಶ್ಯರ ಉದ್ಧಾರದ ಜವಾಬ್ದಾರಿಯನ್ನು ಹೊರಲು ಅತ್ಯಂತ ಅಯೋಗ್ಯವಾಗಿರುವ ಸಂಸ್ಥೆಯೊಂದು ಇದ್ದರೆ ಅದು ಹಿಂದೂ ಮಹಾಸಭಾ. ಹಿಂದೂ ಮಹಾಸಭಾ ಒಂದು ಉಗ್ರ ಹಿಂದೂ ಸಂಘಟನೆ. ಅದರ ಉದ್ದೇಶ ಧಾರ್ಮಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಹಿಂದೂ ಎಂದು ಇರುವುದೆಲ್ಲವನ್ನೂ ಕಾಪಿಟ್ಟುಕೊಳ್ಳುವುದೇ ಆಗಿದೆ. ಅದು ಒಂದು ಸಾಮಾಜಿಕ ಸುಧಾರಣೆಯ ಸಂಘಟನೆಯೂ ಅಲ್ಲ. ಅದೊಂದು ರಾಜಕೀಯ ಸಂಘಟನೆಯಾಗಿದ್ದು ಅದರ ಪ್ರಮುಖ ಧ್ಯೇಯ ಭಾರತದ ರಾಜಕೀಯದಲ್ಲಿ ಮುಸ್ಲಿಮ್ ಪ್ರಭಾವದ ವಿರುದ್ಧ ಘರ್ಷಣೆ ಹುಟ್ಟುಹಾಕುವುದೇ ಆಗಿದೆ. ತನ್ನ ರಾಜಕೀಯ ಶಕ್ತಿಯನ್ನು ಉಳಿಸಿಕೊಳ್ಳುವುದಕ್ಕಾಗಿಯೇ ಅದು ಸಾಮಾಜಿಕ ಸೌಹಾರ್ದವನ್ನು ಉಳಿಸಿಕೊಳ್ಳಲು ಬಯಸುತ್ತದೆ ಹಾಗೂ ಅದಕ್ಕಾಗಿ ಅದು ಅನುಸರಿಸುವ ಮಾರ್ಗ ಜಾತಿ ಮತ್ತು ಅಸ್ಪಶ್ಯತೆಯ ಬಗ್ಗೆ ಮಾತಾಡದೇ ಮೌನವಾಗಿದ್ದುಬಿಡುವುದು. ಅಂತಹ ಸಂಘಟನೆಯನ್ನು ಅಸ್ಪಶ್ಯರ ನಡುವೆ ಕೆಲಸ ಮಾಡಲು ಕಾಂಗ್ರೆಸ್ ಹೇಗೆ ಆಯ್ಕೆ ಮಾಡಿತು ಎಂಬುದು ನನ್ನ ಗ್ರಹಿಕೆಗೆ ಮೀರಿದ ವಿಷಯವಾಗಿದೆ. ಕಾಂಗ್ರೆಸ್ ಹೀಗೇಕೆ ಮಾಡುತ್ತಿದೆ? ತನಗೆ ಅಹಿತಕರವಾಗಿರುವ ಈ ವಿಷಯವನ್ನು ಮತ್ತೊಬ್ಬರಿಗೆ ದಾಟಿಸಿಬಿಡುವ ಧೋರಣೆಯನ್ನು ಬಿಟ್ಟರೆ ಇದಕ್ಕೇ ಬೇರೆ ಕಾರಣಗಳು ಇಲ್ಲ. ಹಿಂದೂ ಮಹಾಸಭಾ ಕೂಡ ಈ ನಿಟ್ಟಿನಲ್ಲಿ ಯಾವುದೇ ಕಾರ್ಯಕ್ರಮ ಮಾಡಲು ಉತ್ಸುಕತೆ ಹೊಂದಿರಲಿಲ್ಲ ಹಾಗೂ ಇದಕ್ಕಾಗಿ ಕಾಂಗ್ರೆಸ್ ಯಾವುದೇ ವಿಶೇಷ ನಿಧಿಯನ್ನೂ ಎತ್ತಿಟ್ಟಿರಲಿಲ್ಲ. ಹೀಗಾಗಿ ಈ ಯೋಜನೆ ಅತ್ಯಂತ ಅವಮಾನಕಾರಿಯಾದ ಸಾವನ್ನಪ್ಪಿತು’’.

(DR. BABASAHEB AMBEDKAR : WRITINGS AND SPEECHES, Vol. 9- p.23)

ಹಿಂದೂ ಮಹಾಸಭಾ ಮತ್ತು ಆರೆಸ್ಸೆಸ್‌ಗಳು ಮೊದಲಿಂದಲೂ ದಲಿತೋದ್ಧಾರಕ್ಕಾಗಿ ಪಣತೊಟ್ಟು ಕೆಲಸ ಮಾಡುತ್ತಿವೆ ಎಂಬ ಅವರ ಪ್ರಚಾರಗಳು ಎಷ್ಟು ಸುಳ್ಳು ಎಂಬುದು ಇದರಿಂದ ಗೊತ್ತಾಗುತ್ತದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಶಿವಸುಂದರ್

contributor

Similar News