ಸೆಕ್ಯುಲರಿಸಂ-ಸೋಷಿಯಲಿಸಂ ಪದಗಳೇನೋ ಉಳಿದವು, ಆದರೆ ಸಾರ ಉಳಿದಿದೆಯೇ?
ಸೆಕ್ಯುಲರಿಸಂ ಮತ್ತು ಸೋಷಿಯಲಿಸಂ ಪದಗಳನ್ನು ಮಾತ್ರ ಸುಪ್ರೀಂ ಉಳಿಸಿ ಅವುಗಳ ನೈಜ ಅರ್ಥದ ಮೇಲೆ ತಾನೂ ಕೂಡ ದಾಳಿ ಮಾಡಿದೆ. ಇದಕ್ಕೆ ಕಾರಣ ಸ್ವಾತಂತ್ರ್ಯಾನಂತರವೂ ರಾಜ್ಯಾಧಿಕಾರ ಬಂಡವಾಳಶಾಹಿ ಮತ್ತು ಬ್ರಾಹ್ಮಣಶಾಹಿಗಳ ಬಳಿಯೇ ಉಳಿಸಿರುವುದು ಮತ್ತು ಪ್ರಜಾತಂತ್ರವೂ ಸಾರದಲ್ಲಿ ಬಂಡವಾಳ ತಂತ್ರವೇ ಆಗಿರುವುದು. ಹೀಗಾಗಿ ಸೆಕ್ಯುಲರ್, ಸೋಷಿಯಲಿಸ್ಟ್ ಎಂಬ ಪದಗಳು ಉಳಿದ ಸಮಾಧಾನದ ಆಚೆಗೆ ಅವುಗಳ ಅರ್ಥವನ್ನೂ ಉಳಿಸಿಕೊಳ್ಳುವ ಅಸಲಿ ಪ್ರಜಾತಂತ್ರದ ಹೋರಾಟಕ್ಕೆ ಈ ದೇಶದ ಜನತೆಯೇ ಮುಂದಾಗಬೇಕಿದೆ.
‘ಮೂಲ ಸಂವಿಧಾನ’ ಮತ್ತು ಸೋಷಿಯಲಿಸಂ
ಮೂಲ ಸಂವಿಧಾನದ ಮುನ್ನುಡಿಯಲ್ಲಿ ಸೋಷಿಯಲಿಸಂ ಎನ್ನುವ ಪದವಿರಲಿಲ್ಲ ಎನ್ನುವುದು ಮತ್ತು ಅದನ್ನು ಮುನ್ನುಡಿಯಲ್ಲಿ 42ನೇ ತಿದ್ದುಪಡಿಯ ಮೂಲಕ ಸೇರಿಸಲಾಯಿತು ಎನ್ನುವುದೂ ಕೂಡ ಅರ್ಧ ಸತ್ಯವೇ.
ಅಸಲು ಸಮಾಜವಾದ ಎಂದರೇನು?
ಜಗತ್ತಿನಲ್ಲಿ ಸಮಾಜವಾದದ ಬಗ್ಗೆ ಹಲವು ಬಗೆಯ ವ್ಯಾಖ್ಯಾನಗಳು ಇವೆ.
ಅವುಗಳೆಲ್ಲದರ ಸಾರ ‘ಸರ್ವರಿಗೂ ಸಮ ಪಾಲು-ಸಮಬಾಳು’ ಎಂಬುದಷ್ಟೇ ಆಗಿದೆ.
ಈಗ ಈ ಆಶಯಗಳು ನಮ್ಮ ಸಂವಿಧಾನದಲ್ಲಿ ಇರಲಿಲ್ಲವೇ?
ಸಂವಿಧಾನದ ಮುನ್ನುಡಿಯನ್ನು ನೋಡೊಣ. ಅದು ಹೀಗೆ ಹೇಳುತ್ತದೆ:
‘‘ಭಾರತದ ಎಲ್ಲಾ ಪ್ರಜೆಗಳಿಗೆ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ನ್ಯಾಯವನ್ನು ಒದಗಿಸಲು...ಸ್ಥಾನಮಾನ ಮತ್ತು ಅವಕಾಶಗಳ ಸಮಾನತೆಯನ್ನು ದೊರಕಿಸಲು...’’ ಈ ಸಂವಿಧಾನವನ್ನು ರೂಪಿಸಿರುವುದಾಗಿ ಮುನ್ನುಡಿ ಹೇಳುತ್ತದೆ.
ಹಾಗೆಯೇ ನಮ್ಮ ಸಂವಿಧಾನದ 4ನೇ ಪರಿಚ್ಛೇದ ‘ಪ್ರಭುತ್ವ ನಿರ್ದೇಶನಾ ತತ್ವ’ಗಳಲ್ಲಿ:
ಆರ್ಟಿಕಲ್ 38 (1)- ಭಾರತದ ಎಲ್ಲಾ ಸಾಂವಿಧಾನಿಕ ಸಂಸ್ಥೆಗಳು ಈ ದೇಶದ ಎಲ್ಲಾ ಜನರಿಗೆ ಆರ್ಥಿಕ ನ್ಯಾಯವನ್ನು ಒದಗಿಸುವಂತೆ ಅದೇಶಿಸಲಾಗುವುದು..
38(2) -ಪ್ರಭುತ್ವವು ಆದಾಯಗಳಲ್ಲಿನ ಅಸಮಾನತೆಯನ್ನು ಮತ್ತು ಸ್ಥಾನಮಾನ, ಸೌಲಭ್ಯ ಮತ್ತು ಅವಕಾಶಗಳಲ್ಲಿನ ಅಸಮಾನತೆಯನ್ನು ನಿವಾರಿಸಲು ಶ್ರಮಿಸುವುದು.
ಆರ್ಟಿಕಲ್ 39(ಎ) -ದೇಶದ ಎಲ್ಲಾ ವ್ಯಕ್ತಿಗಳಿಗೂ ಅತ್ಯಗತ್ಯ ಜೀವನೋಪಾಯಗಳನ್ನು ಸಮಾನವಾಗಿ ಪಡೆದುಕೊಳ್ಳುವ ಹಕ್ಕನ್ನು ಖಾತರಿ ಪಡಿಸಲಾಗುವುದು.
39(ಬಿ) -ಸಮುದಾಯದ ಸಂಪತ್ತಿನ ಮೇಲೆ ಒಡೆತನವನ್ನು ಸಮುದಾಯದ ಸಾರ್ವತ್ರಿಕ ಒಳಿತಿಗಾಗಿ ಬಳಸುವಂತೆ ನಿಯೋಜಿಸಲಾಗುವುದು.
39(ಸಿ) -ಆರ್ಥಿಕ ನೀತಿಗಳು ಸಂಪತ್ತು ಒಂದು ಕಡೆ ಕೇಂದ್ರೀಕರಣವಾಗದಂತೆ ರೂಪಿಸಲಾಗುವುದು.
39(ಡಿ) -ಗಂಡು ಮತ್ತು ಹೆಣ್ಣು ಮಕ್ಕಳ ನಡುವೆ ಸಮಾನ ಕೆಲಸಕ್ಕೆ ಸಮಾನ ವೇತನ.
ಆರ್ಟಿಕಲ್ 41 -ಎಲ್ಲರಿಗೂ ಉದ್ಯೋಗ ಮತ್ತು ಶಿಕ್ಷಣದ ಹಕ್ಕನ್ನು ಒದಗಿಸುತ್ತದೆ.
ಇವೆಲ್ಲವೂ ನಮ್ಮ ಮೂಲ ಸಂವಿಧಾನದಲ್ಲೇ ಇದೆ. ಈ ಎಲ್ಲಾ ನೀತಿಗಳನ್ನೇ ಒಂದೇ ಪದದಲ್ಲಿ ಸಮಾಜವಾದ ಎಂದು ಕರೆಯುತ್ತಾರೆ.
ಅದನ್ನೇ ಒಂದು ಪದವಾಗಿ ಮುನ್ನುಡಿಯಲ್ಲಿ ಸೇರಿಸಲಾಗಿದೆ.
ಹಾಗಿದ್ದಲ್ಲಿ ಮೋದಿ ಸರಕಾರ ಸಮಾಜವಾದದ ಪದದ ಜೊತೆಗೆ ಮೇಲಿನ ಎಲ್ಲಾ ಕಲಮುಗಳನ್ನು ರದ್ದು ಮಾಡುವುದೇ?
ಹಾಗೆ ನೋಡಿದರೆ 1977ರಲ್ಲಿ ಇಂದಿರಾ ಗಾಂಧಿಯವರ ಸರ್ವಾಧಿಕಾರವನ್ನು ಮಣಿಸಿ ಇವತ್ತಿನ ಬಿಜೆಪಿಯ ಅಂದಿನ ಅವತಾರವಾಗಿದ್ದ ಭಾರತೀಯ ಜನ ಸಂಘ ಹಾಗೂ ಇನ್ನಿತರ ಪಕ್ಷಗಳು ಒಟ್ಟುಗೂಡಿ ರಚಿಸಿಕೊಂಡ ಜನತಾ ಪಕ್ಷ ಅಧಿಕಾರಕ್ಕೆ ಬಂತು.
ಅವರು ಸಂವಿಧಾನಕ್ಕೆ 44ನೇ ತಿದ್ದುಪಡಿಯನ್ನು ತಂದು ಇಂದಿರಾ ಗಾಂಧಿ 42ನೇ ತಿದ್ದುಪಡಿಯ ಮೂಲಕ ಜಾರಿ ಮಾಡಿದ್ದ ಇತರ ತಿದ್ದುಪಡಿಗಳನ್ನು ರದ್ದುಗೊಳಿಸಿದರೇ ವಿನಾ ಅದೇ 42ನೇ ತಿದ್ದುಪಡಿಯ ಪ್ರಮುಖ ಅಂಶವಾದ ಸೆಕ್ಯುಲರಿಸಂ ಮತ್ತು ಸೋಷಿಯಲಿಸಂ ಸೇರ್ಪಡೆಗಳನ್ನಲ್ಲ! ಆ ನಂತರ ಈವರೆಗೆ ಸಂವಿಧಾನಕ್ಕೆ 80ಕ್ಕೂ ಹೆಚ್ಚು ತಿದ್ದುಪಡಿಗಳಾಗಿದ್ದರೂ ಬಿಜೆಪಿಯನ್ನು ಒಳಗೊಂಡಂತೆ ಹಲವು ಪಕ್ಷಗಳ ಸರಕಾರಗಳು ಅಧಿಕಾರಕ್ಕೆ ಬಂದಿದ್ದರೂ ‘ಸೆಕ್ಯುಲರಿಸಂ ಮತ್ತು ಸೋಷಿಯಲಿಸಂ’ಗೆ ತಿದ್ದುಪಡಿ ಮಾಡಿರಲಿಲ್ಲ.
ಹೀಗಾಗಿ ಸೆಕ್ಯುಲರಿಸಂ ಮತ್ತು ಸೋಷಿಯಲಿಸಂಗಳು ಸಂವಿಧಾನದ ಭಾಗವಲ್ಲ ಎಂಬ ಸಂಘಿಗಳ ವಾದದಲ್ಲಿ ಹುರುಳಿಲ್ಲ. ಅದು ಅವರು ಮನುಸ್ಮತಿಯನ್ನೇ ಭಾರತದ ಸಂವಿಧಾನ ಮಾಡಬೇಕೆಂಬ ಯೋಜನೆಯ ಭಾಗವಾಗಿ ಹುಟ್ಟಿಸಿರುವ ಹುಯಿಲು.
ಸೆಕ್ಯುಲರ್-ಸೋಷಿಯಲಿಸಂನ ನೈಜ ಸಾರವನ್ನು ಸುಪ್ರೀಂ ಕೋರ್ಟ್ ಏಕೆ ರಕ್ಷಿಸಲಿಲ್ಲ?
ದುರಂತವೆಂದರೆ ಸೊಷಿಯಲಿಸಂ ಆಶಯಗಳು ನಿರ್ದೇಶನಾ ತತ್ವಗಳಲ್ಲಿ ಇದ್ದರೂ ಅದು ಮೂಲಭೂತ ಹಕ್ಕುಗಳಲ್ಲ. ಅದನ್ನು ಸರಕಾರ ಜಾರಿ ಮಾಡದಿದ್ದರೂ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದಿಲ್ಲ. ಹೀಗಾಗಿಯೇ ಕಾಂಗ್ರೆಸನ್ನೂ ಒಳಗೊಂಡಂತೆ ಅಧಿಕಾರಕ್ಕೆ ಬಂದ ಎಲ್ಲಾ ಪಕ್ಷಗಳು ಸಂವಿಧಾನಕ್ಕೆ ತಿದ್ದುಪಡಿಯನ್ನು ಮಾಡದೆಯೇ ಸೆಕ್ಯುಲರಿಸಂ ವಿರೋಧಿ, ಸೋಷಿಯಲಿಸಂ ವಿರೋಧಿ ನೀತಿಗಳನ್ನೇ ಅನುಸರಿಸುತ್ತಾ ಬಂದಿವೆ.
1991ರ ನಂತರ ಈ ಅನಧಿಕೃತ ಸರ್ವಪಕ್ಷ ಸಮ್ಮತ ಸಂವಿಧಾನ ಉಲ್ಲಂಘನೆ ಇನ್ನೂ ವೇಗ ಪಡೆಯಿತು. ಅದರಿಂದ ಪುಷ್ಟಿ ಪಡೆದುಕೊಂಡ ಸಂಘಪರಿವಾರದ ಹಿಂದುತ್ವವಾದಿಗಳು ಮೋದಿ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದಮೇಲೆ ಈಗ ಬಹಿರಂಗವಾಗಿ ಹಾಗೂ ಅಧಿಕೃತವಾಗಿಯೇ ‘ಸೆಕ್ಯುಲರಿಸಂ ಮತ್ತು ಸೋಷಿಯಲಿಸಂ’ ಮೇಲೆ ಸಮರ ಸಾರಿವೆ.
ವಾಸ್ತವವಾಗಿ ಅಂಬೇಡ್ಕರ್ ಅವರು ತಮ್ಮ ‘State and Minorities’ ಕೃತಿಯಲ್ಲಿ ಸ್ಪಷ್ಟಪಡಿಸುವಂತೆ ಸಾಮಾಜಿಕ ಪ್ರಜಾತಂತ್ರ ಹಾಗೂ ಆರ್ಥಿಕ ಪ್ರಜಾತಂತ್ರವಿಲ್ಲದೆ ರಾಜಕೀಯ ಪ್ರಜಾತಂತ್ರದಿಂದ ತಳಸಮುದಾಯಗಳಿಗೆ ಯಾವ ಪ್ರಯೋಜನವೂ ಇಲ್ಲ. ಹೀಗಾಗಿ ಆರ್ಥಿಕ ಸಮಾನತೆಯನ್ನು ಮೂಲಭೂತ ಹಕ್ಕುಗಳಾಗಬೇಕೆಂದು ಅಂಬೇಡ್ಕರ್ ಅವರು ಪ್ರತಿಪಾದಿಸಿದ್ದರು. ಅದಕ್ಕಾಗಿ ದೇಶದ ಆಸ್ತಿಯನ್ನು ರಾಷ್ಟ್ರೀಕರಿಸಬೇಕೆಂಬುದನ್ನು ಅವರು ಉದ್ದಕ್ಕೂ ಪ್ರತಿಪಾದಿಸಿದರು. 1952ರಲ್ಲಿ ಸಂಸತ್ತಿನಲ್ಲೂ ಸಹ ಗೇಣಿ ರದ್ದತಿ, ಭೂ ಸುಧಾರಣೆಯಂತಹ ಕಾರ್ಯಕ್ರಮಗಳಿಂದ ಈ ದೇಶದ ದಲಿತ ದಮನಿತರಿಗೆ ಯಾವ ಪ್ರಯೋಜವೂ ಇಲ್ಲ. ಬದಲಿಗೆ ರಶ್ಯದಲ್ಲಿ ನಡೆದಂತೆ ಭೂಮಿ ಮತ್ತು ಇತರ ಸಂಪತ್ತುಗಳು ರಾಷ್ಟ್ರೀಯ ಅಥವಾ ಇಡೀ ಸಮಾಜದ ಆಸ್ತಿಯಾಗಬೇಕೆಂದೇ ಅಂಬೇಡ್ಕರ್ ಪ್ರತಿಪಾದಿಸಿದ್ದರು.
ಆದರೆ ಸಂವಿಧಾನದಲ್ಲಿ ಅದಕ್ಕೆ ತದ್ವಿರುದ್ಧವಾಗಿ ಸಂಪತ್ತು ಹಂಚುವ ಸಮಾಜವಾದಿ ಆಶಯಗಳಿರಲಿ, ಎಲ್ಲರಿಗೂ ಘನತೆಯ ಬದುಕನ್ನು ಖಾತರಿಗೊಳಿಸುವ ಕಲ್ಯಾಣ ರಾಜ್ಯದ ಆಶಯಗಳೂ ಮೂಲಭೂತ ಹಕ್ಕುಗಳಾಗಲಿಲ್ಲ. ಬದಲಿಗೆ ಅವು ಕೇವಲ ಉಪದೇಶಾತ್ಮಕ ನಿರ್ದೇಶನಾ ತತ್ವಗಳ ಪಟ್ಟಿಯಲ್ಲಿ ಸೇರಿಕೊಂಡವು.
ಹೀಗಾಗಿಯೇ ಕಲ್ಯಾಣ ರಾಜ್ಯದ ಹೆಸರಿದ್ದರೂ ಸ್ವಾತಂತ್ರ್ಯ ಬಂದಾಗಿನಿಂದಲೂ ಬಂಡವಾಳ ರಾಜ್ಯವೇ ಅಧಿಪತ್ಯ ನಡೆಸುತ್ತಿದೆ. ಮಿಶ್ರ ಆರ್ಥಿಕತೆಯ ಹೆಸರಿನಲ್ಲಿ ಆದದ್ದೆಲ್ಲಾBark Of Socialism-Bite Of Capitalism- ಬೊಗಳಿದಾಗ ಮಾತ್ರ ಸಮಾಜವಾದ-ಕಚ್ಚಿದಾಗ ಬಂಡವಾಳವಾದವೇ ಆಗುತ್ತಾ ಬಂದಿದೆ. 1991ರ ನಂತರ ಇದರ ವೇಗ ಇನ್ನಷ್ಟು ಹೆಚ್ಚಾಗಿ ಮೋದಿ ಕಾಲದಲ್ಲಿ ಉಗ್ರ ಹಾಗೂ ತೀವ್ರ ಸ್ವರೂಪ ಪಡೆದುಕೊಂಡಿದೆ.
ಸಾರದಲ್ಲಿ ಬಂಡವಾಳಶಾಹಿಯೂ, ಹಿಂದುತ್ವವಾದಿಯೂ ಆಗಿರುವ ಈ ಪ್ರತಿಕ್ರಾಂತಿಗೆ ಕಲ್ಯಾಣ ರಾಜ್ಯವನ್ನು ಕಾಪಾಡಬೇಕಿದ್ದ ಸುಪ್ರೀಂ ಕೋರ್ಟ್ ಸಹಾಯ ಮಾಡುತ್ತಲೇ ಬಂದಿವೆ. ಅದರಲ್ಲೂ 1991ರ ನಂತರ ಸುಪ್ರೀಂನ ಸಾಂವಿಧಾನಿಕ ಪೀಠಗಳ ಅಯೋಧ್ಯಾ, ಕಾಶ್ಮೀರ, ಬೀದಿ ವ್ಯಾಪಾರ ವಿರೋಧಿ, ಬೃಹತ್ ಖಾಸಗೀಕರಣ ಪರ ತೀರ್ಪುಗಳು ನ್ಯಾಯಿಕ ಸಮರ್ಥನೆ ಒದಗಿಸುತ್ತಾ ಬಂದಿವೆ.
ಅದಕ್ಕೆ ಇತ್ತೀಚಿನ ಸೇರ್ಪಡೆ ಮಾಜಿ ಮುಖ್ಯ ನ್ಯಾಯಾಧೀಶ ಚಂದ್ರಚೂಡರ ನೇತೃತ್ವದಲ್ಲಿ ಏಳು ನ್ಯಾಯಾಧೀಶರ ಪೀಠ ಸಮುದಾಯದ ಆಸ್ತಿಗಳ ಮೇಲೆ ಖಾಸಗಿ ಏಕಸ್ವಾಮ್ಯವನ್ನು ಎತ್ತಿಹಿಡಿದು ಕೊಟ್ಟ ತೀರ್ಪು.
ಹೀಗಾಗಿಯೇ ಸೆಕ್ಯುಲರಿಸಂ ಮತ್ತು ಸೋಷಿಯಲಿಸಂ ಪದಗಳನ್ನು ಸಮರ್ಥಿಸಿಕೊಂಡ ಸುಪ್ರೀಂ ಪೀಠ ಅವುಗಳ ಸಾರವನ್ನೇ ವಿಕೃತವಾಗಿ ವ್ಯಾಖ್ಯಾನಿಸಿ ಉಳಿಸಿಕೊಂಡಿದೆ. ಮುಖ್ಯ ನ್ಯಾಯಾಧೀಶ ಖನ್ನಾ ಅವರ ಪ್ರಕಾರ ಸೋಷಿಯಲಿಸಂ ಮತ್ತು ಸೆಕ್ಯುಲರಿಸಂ ಒಂದು ನಿರ್ದಿಷ್ಟ ತತ್ವ ವ್ಯಾಖ್ಯಾನವೇ ಅಲ್ಲ. ಸೋಷಿಯಲಿಸಂ ಎಂದರೆ ಭಾರತದಲ್ಲಿ ಕಲ್ಯಾಣ ರಾಜ್ಯ ಎಂದು ಮಾತ್ರ ಅರ್ಥ ಹಾಗೂ ಸೆಕ್ಯುಲರಿಸಂ ಎಂದರೆ ಸರ್ವ ಧರ್ಮ ಸಮಭಾವ ಎಂದರ್ಥ ಎಂದೆಲ್ಲಾ ತಮಗೆ ತೋಚಿದ ವ್ಯಾಖ್ಯಾನ ಕೊಟ್ಟಿದ್ದಾರೆ. ಪ್ರಭುತ್ವವು ಎಲ್ಲಾ ಮತಧರ್ಮಗಳಿಂದ ಸಮದೂರವನ್ನು ಕಾಪಾಡಿಕೊಳ್ಳಬೇಕೆಂಬ ಹಾಗೂ ದೇಶದ ಸಂಪತ್ತಿನ ಮೇಲೆ ಸಮುದಾಯಗಳ ಒಡೆತನವನ್ನು ಎತಿಹಿಡಿಯುವ ಅಂಬೇಡ್ಕರ್ ಅವರ ವ್ಯಾಖ್ಯಾನವನ್ನೂ ಕೂಡ ಅವರು ಪರಿಗಣಿಸಿಲ್ಲ. ಚಂದ್ರಚೂಡ್ ಅವರೂ ಕೂಡ ತಮ್ಮ ಕೊನೆಯ ತೀರ್ಪಿನಲ್ಲಿ ಸಮಾಜವಾದದ ಬಗ್ಗೆ ಸುಪ್ರೀಂ ತಿರಸ್ಕಾರವನ್ನು ಸೂಚಿಸಿದ್ದರು.
ಸೆಕ್ಯುಲರಿಸಂ ಮತ್ತು ಸೋಷಿಯಲಿಸಂ ಪದಗಳನ್ನು ಮಾತ್ರ ಸುಪ್ರೀಂ ಉಳಿಸಿ ಅವುಗಳ ನೈಜ ಅರ್ಥದ ಮೇಲೆ ತಾನೂ ಕೂಡ ದಾಳಿ ಮಾಡಿದೆ. ಇದಕ್ಕೆ ಕಾರಣ ಸ್ವಾತಂತ್ರ್ಯಾನಂತರವೂ ರಾಜ್ಯಾಧಿಕಾರ ಬಂಡವಾಳಶಾಹಿ ಮತ್ತು ಬ್ರಾಹ್ಮಣಶಾಹಿಗಳ ಬಳಿಯೇ ಉಳಿಸಿರುವುದು ಮತ್ತು ಪ್ರಜಾತಂತ್ರವೂ ಸಾರದಲ್ಲಿ ಬಂಡವಾಳ ತಂತ್ರವೇ ಆಗಿರುವುದು. ಹೀಗಾಗಿ ಸೆಕ್ಯುಲರ್, ಸೋಷಿಯಲಿಸ್ಟ್ ಎಂಬ ಪದಗಳು ಉಳಿದ ಸಮಾಧಾನದ ಆಚೆಗೆ ಅವುಗಳ ಅರ್ಥವನ್ನೂ ಉಳಿಸಿಕೊಳ್ಳುವ ಅಸಲಿ ಪ್ರಜಾತಂತ್ರದ ಹೋರಾಟಕ್ಕೆ ಈ ದೇಶದ ಜನತೆಯೇ ಮುಂದಾಗಬೇಕಿದೆ.