ಬಿಗ್ ಟೆಕ್, ಕಟ್ಟು ಜಾಣ್ಮೆ ಮತು್ತ ಉದ್ಯೋಗನಷ್ಟ

ಭವಿಷ್ಯದಲ್ಲಿ ಅದು ಟ್ರಿಲಿಯನ್ ಡಾಲರ್ ಉದ್ಯಮ ಆಗಬಹುದು ಎಂಬ ನಿರೀಕ್ಷೆಯಿಂದ ಎಐ ಕ್ಷೇತ್ರಕ್ಕೆ ಹಣ ಸುರಿಯಲಾಗುತ್ತಿದೆ. ಇದನ್ನು ಮೆಟಾದ ಸಿಇಒ ಮಾರ್ಕ್ ಝುಕರ್ಬರ್ಗ್ ಪ್ರತಿಬಿಂಬಿಸಿದ್ದು ಹೀಗೆ- ಉದ್ಯೋಗಗಳನ್ನು ಕಡಿತಗೊಳಿಸಿ ವೆಚ್ಚವನ್ನು ನಿಯಂತ್ರಿಸಬೇಕಿದೆ. ಇದರಿಂದ ದೀರ್ಘಾವಧಿಯ, ಮಹತ್ವಾಕಾಂಕ್ಷಿ ಎಐ ಯೋಜನೆಗಳಿಗೆ ಹಣ ಹೂಡಲು ನೆರವಾಗಲಿದೆ. ಸಿಬ್ಬಂದಿ ಕಡಿಮೆ ಇದ್ದಲ್ಲಿ ಕ್ಷಮತೆಯಿಂದ ಕೆಲಸ ಮಾಡಬಹುದು.

Update: 2024-02-17 03:26 GMT
Editor : Safwan | Byline : ಋತ

ನಾವೀಗ 2024ರ 2ನೇ ತಿಂಗಳಿನಲ್ಲಿ ಇದ್ದೇವೆ. ಭಾರೀ ಟೆಕ್ ಕಂಪೆನಿಗಳಲ್ಲಿ ಉದ್ಯೋಗ ಕಡಿತ ಮತ್ತೆ ಆರಂಭಗೊಂಡಿದೆ. ಗೂಗಲ್ ವರ್ಷಾರಂಭದಲ್ಲೇ ಹಲವು ನೂರು ಉದ್ಯೋಗಿಗಳಿಗೆ ಎಳೆಗೆಂಪು ಚೀಟಿ ನೀಡಿತು ಮತ್ತು ಇದು ಆರಂಭವಷ್ಟೇ ಎಂದು ಹೇಳಿತು. ಇದರ ಹಿಂದೆಯೇ ಅಮೆಝಾನ್ ಪ್ರೈಮ್ ವೀಡಿಯೊ ವಿಭಾಗದಿಂದ ನೂರಾರು ಮಂದಿಯನ್ನು, ಮೆಟಾ ಮಧ್ಯಮ ಹಂತದ ಉದ್ಯೋಗಿಗಳನ್ನು ಹಾಗೂ ಮೈಕ್ರೋಸಾಫ್ಟ್ ವೀಡಿಯೊ ಗೇಮ್ ವಿಭಾಗದಿಂದ 1,900 ಮಂದಿಯನ್ನು ತೆಗೆದುಹಾಕಿತು.

ಅಮೆಝಾನ್, ಗೂಗಲ್, ಮೆಟಾ, ಮೈಕ್ರೋಸಾಫ್ಟ್ ಮತ್ತು ಆ್ಯಪಲ್ನಲ್ಲಿರುವ ಒಟ್ಟು ಉದ್ಯೋಗಿಗಳ ಸಂಖ್ಯೆ 21.6 ಲಕ್ಷ. ಗೂಗಲ್ ವರ್ಧಿತ ವಾಸ್ತವ ತಂತ್ರಜ್ಞಾನ(ಆಗ್ಮೆಂಟೆಡ್ ರಿಯಾಲಿಟಿ)ದಲ್ಲಿ ತೊಡಗಿಕೊಂಡಿದ್ದ ಉದ್ಯೋಗಿಗಳನ್ನು, ಮೆಟಾ ಹೊರದೇಶದಲ್ಲಿನ ಯೋಜನೆಗಳ ಉಸ್ತುವಾರಿ ನಡೆಸುತ್ತಿದ್ದ ಪ್ರೋಗ್ರಾಂ ಮ್ಯಾನೇಜರ್ ಸೇರಿದಂತೆ 20,000 ಸಿಬ್ಬಂದಿಯನ್ನು ಮನೆಗೆ ಕಳಿಸಿತು. ಆದರೆ, ಆ್ಯಪಲ್ ಕೋವಿಡ್ ಸಂದರ್ಭದಲ್ಲಿ ಯದ್ವಾತದ್ವಾ ನೇಮಕ ಮಾಡಿಕೊಳ್ಳಲಿಲ್ಲ. 2023ರಲ್ಲಿ ಐಫೋನ್, ಐಪ್ಯಾಡ್ ಮತ್ತು ಮ್ಯಾಕ್ ಮಾರಾಟ ಕಡಿಮೆಯಾದ ಬಳಿಕ ಉದ್ಯೋಗಿಗಳನ್ನು ತೆಗೆಯಲಾರಂಭಿಸಿತು. 15 ವರ್ಷದಲ್ಲಿ ಮೊದಲ ಬಾರಿಗೆ ಒಟ್ಟು ಉದ್ಯೋಗಿಗಳ ಸಂಖ್ಯೆ ಕಡಿಮೆಯಾಗಿದೆ ಎಂದು ಹೇಳಿಕೊಂಡಿತು. ಆ್ಯಪಲ್ನಲ್ಲಿ ಕಡಿಮೆಯಾದ 3,000 ಉದ್ಯೋಗಗಳಲ್ಲಿ ಹೆಚ್ಚಿನವು ವಾರ್ಷಿಕ ಅವಲೋಕನದಲ್ಲಿ ಉಂಟಾದ ಅಸಮಾಧಾನದಿಂದ ತೆರವಾದಂಥವು. ಮೈಕ್ರೋಸಾಫ್ಟ್ ಈವರೆಗೆ ಉದ್ಯೋಗ ಕಡಿತಕ್ಕೆ ಮುಂದಾಗಿಲ್ಲ. 2023ರ ಆರ್ಥಿಕ ವರ್ಷದ ಅಂತ್ಯಕ್ಕೆ 2.21 ಲಕ್ಷ ಮಂದಿಯನ್ನು ನೇಮಿಸಿಕೊಂಡಿತ್ತು. ಹೂಡಿಕೆದಾರರು ಈ ಸ್ಥಿರತೆಗೆ ಭಾರೀ ಕೊಡುಗೆ ನೀಡಿದರು. ಕಂಪೆನಿ ಜಗತ್ತಿನ ಅತ್ಯಂತ ಬೆಲೆಬಾಳುವ ಕಂಪೆನಿ ಎಂಬ ಅಭಿದಾನ ನೀಡಿದರು. ಮೊದಲು ಆ್ಯಪಲ್ ಈ ಗೌರವಕ್ಕೆ ಪಾತ್ರವಾಗಿತ್ತು.

ಅಲೆಕ್ಸಾ(ಅಥವಾಸಿರಿ)ಗೆ ಸಂಬಂಧಿಸಿದ ಉದ್ಯೋಗಿಗಳನ್ನು ಅಮೆಝಾನ್ ಇಲ್ಲವೇ ಪಿಕ್ಸೆಲ್ ಫೋನ್ ಸಿಬ್ಬಂದಿಯನ್ನು ಗೂಗಲ್ ಕಡಿತಗೊಳಿಸುತ್ತಿದೆ ಎಂದರೆ, ಕಂಪೆನಿಗಳು ಸಾಧ್ಯವಿರುವಲ್ಲೆಲ್ಲ ಹಣ ಉಳಿಸಲು ಪ್ರಯತ್ನಿಸುತ್ತಿವೆ ಮತ್ತು ಅದನ್ನು ಬೇರೆಡೆ ಹೂಡಿಕೆ ಮಾಡುತ್ತಿವೆ ಎಂದರ್ಥ. ಇದಕ್ಕೆ ಕಾರಣವಾದರೂ ಏನು? ಈ ಕಂಪೆನಿಗಳು ನಷ್ಟದಲ್ಲಿವೆಯೇ? ಹಾಗೇನೂ ಇಲ್ಲ. ಬದಲಾಗಿ ವ್ಯವಹಾರ ತೇಜಿಯಲ್ಲಿದೆ ಮತ್ತು ಲಾಭದಲ್ಲಿವೆ. ಮೇಲಿನ 5 ಕಂಪೆನಿಗಳು ಕೋವಿಡ್ ಅವಧಿಗಿಂತ ಶೇ.71ರಷ್ಟು ಅಧಿಕ ಆದಾಯ ಗಳಿಸುತ್ತಿದ್ದು, ಅವುಗಳ ಒಟ್ಟು ಗಳಿಕೆ 1.63 ಟ್ರಿಲಿಯನ್ ಡಾಲರ್. ಇದು ಹಿಂದಿನ 5 ವರ್ಷಕ್ಕಿಂತ ಶೇ.81ರಷ್ಟು ಅಧಿಕ. ವಾಲ್ಸ್ಟ್ರೀಟ್ನಲ್ಲಿ ಈ ಕಂಪೆನಿಗಳ ಒಟ್ಟು ಮೌಲ್ಯ 3.5 ಟ್ರಿಲಿಯನ್ ಡಾಲರ್. ಪರಿಣತರ ಪ್ರಕಾರ, ಉದ್ಯೋಗ ಕಡಿತಕ್ಕೆ ಉದ್ಯಮ ಎದುರಿಸುತ್ತಿರುವ ಎರಡು ಪ್ರಮುಖ ಸವಾಲುಗಳು ಕಾರಣ- ಕೋವಿಡ್ ಕಾಲದಲ್ಲಿ ಹೆಚ್ಚು ಸಿಬ್ಬಂದಿಯನ್ನು ನೇಮಿಸಿಕೊಂಡಿದ್ದು ಮತ್ತು ಹೊಮ್ಮುತ್ತಿರುವ ಕ್ಷೇತ್ರವಾದ ಕಟ್ಟು ಜಾಣ್ಮೆ(ಆರ್ಟಿಫಿಷಿಯಲ್ ಇಂಟೆಲಿಜೆನ್ಸ್-ಎಐ)ಯಲ್ಲಿ ಬಂಡವಾಳ ತೊಡಗಿಸುತ್ತಿರುವುದು. ಭವಿಷ್ಯದಲ್ಲಿ ಅದು ಟ್ರಿಲಿಯನ್ ಡಾಲರ್ ಉದ್ಯಮ ಆಗಬಹುದು ಎಂಬ ನಿರೀಕ್ಷೆಯಿಂದ ಎಐ ಕ್ಷೇತ್ರಕ್ಕೆ ಹಣ ಸುರಿಯಲಾಗುತ್ತಿದೆ. ಇದನ್ನು ಮೆಟಾದ ಸಿಇಒ ಮಾರ್ಕ್ ಝುಕರ್ಬರ್ಗ್ ಪ್ರತಿಬಿಂಬಿಸಿದ್ದು ಹೀಗೆ- ಉದ್ಯೋಗಗಳನ್ನು ಕಡಿತಗೊಳಿಸಿ ವೆಚ್ಚವನ್ನು ನಿಯಂತ್ರಿಸಬೇಕಿದೆ. ಇದರಿಂದ ದೀರ್ಘಾವಧಿಯ, ಮಹತ್ವಾಕಾಂಕ್ಷಿ ಎಐ ಯೋಜನೆಗಳಿಗೆ ಹಣ ಹೂಡಲು ನೆರವಾಗಲಿದೆ. ಸಿಬ್ಬಂದಿ ಕಡಿಮೆ ಇದ್ದಲ್ಲಿ ಕ್ಷಮತೆಯಿಂದ ಕೆಲಸ ಮಾಡಬಹುದು.

ಕೋವಿಡ್ ಪರಿಣಾಮ

ಜಗತ್ತನ್ನು ಕೋವಿಡ್ ಕಾಡಿದ 2019ರಿಂದ 2022ರ ಅವಧಿಯಲ್ಲಿ ಮನೆಯಿಂದಲೇ ಕೆಲಸ ಮಾಡಬೇಕಾದ ಅನಿವಾರ್ಯತೆ ನಿರ್ಮಾಣವಾಯಿತು. ಈ ಅವಧಿಯಲ್ಲಿ ಖರೀದಿ ಸಾಮರ್ಥ್ಯವುಳ್ಳ ಗ್ರಾಹಕರು ಕಂಪ್ಯೂಟರ್ ಮತ್ತಿತರ ಗ್ಯಾಜೆಟ್ಗಳನ್ನು ಖರೀದಿಸಿದರು; ಆನ್ಲೈನ್ನಲ್ಲಿ ಹೆಚ್ಚು ಸಮಯ ಕಳೆಯಲಾರಂಭಿಸಿದರು. ಬೇಡಿಕೆಯನ್ನು ಪೂರೈಸಲು ಉತ್ಪಾದನೆ ಹೆಚ್ಚಿಸಬೇಕಾಯಿತು; ವಿತರಣೆ ವ್ಯವಸ್ಥೆಯನ್ನು ಬಲಪಡಿಸಬೇಕಾಯಿತು. ಆ್ಯಪಲ್, ಅಮೆಝಾನ್, ಮೆಟಾ, ಮೈಕ್ರೋ ಸಾಫ್ಟ್ ಮತ್ತು ಆಲ್ಫಾಬೆಟ್ ಅಂದಾಜು 9 ಲಕ್ಷ ಮಂದಿಗೆ ಕೆಲಸ ಕೊಟ್ಟವು. 2020-21ರಲ್ಲಿ ಅಮೆಝಾನ್ ಇ-ಕಾಮರ್ಸ್ ಉತ್ಪನ್ನಗಳ ವಿತರಣೆಗೆ 1.6 ದಶಲಕ್ಷ ಉದ್ಯೋಗಿಗಳನ್ನು ನೇಮಿಸಿಕೊಂಡಿತ್ತು; ಕಾರ್ಪೊರೇಟ್ ಹುದ್ದೆಗಳ ಸಂಖ್ಯೆ 2 ಲಕ್ಷದಿಂದ 3.8 ಲಕ್ಷಕ್ಕೆ ಹೆಚ್ಚಳಗೊಂಡಿತು. ಕೊರೋನ ಪಿಡುಗು ಶಮನಗೊಂಡ ಬಳಿಕ ಖರೀದಿ ಉಬ್ಬರ ಇಳಿಯಿತು. ಕೆಲಸಗಾರರು ಭಾರ ಎನಿಸಿದರು. 2021 ಮತ್ತು 2022ರಲ್ಲಿ ಮೇಲಿನ 5 ಕಂಪೆನಿಗಳು 1.12 ಲಕ್ಷ ಮಂದಿಯನ್ನು ಮನೆಗೆ ಕಳಿಸಿದವು. ಹೀಗಿದ್ದರೂ, ಕಂಪೆನಿಗಳು ಕೋವಿಡ್ ಆರಂಭಕ್ಕೆ ಮೊದಲಿಗಿಂತ ಹೆಚ್ಚು ಹಣ ಗಳಿಸುತ್ತಿದ್ದವು. 2023ರ ಅಂತ್ಯದಲ್ಲಿ ಗೂಗಲ್ನಲ್ಲಿ 1.82 ಲಕ್ಷ ಉದ್ಯೋಗಿಗಳಿದ್ದರು. ಅದು 2023ರ ಕೊನೆಯ ತ್ರೈಮಾಸಿಕದಲ್ಲಿ ಗಳಿಸಿದ ಲಾಭ 20.7 ಬಿಲಿಯನ್ ಡಾಲರ್. ಕಳೆದ ವರ್ಷಕ್ಕಿಂತ ಶೇ.52 ಅಧಿಕ.

ಎಐ ಮತ್ತು ಮ್ಯಾಗ್ನಿಫಿಷಿಯಂಟ್ ಸೆವೆನ್

ಜನರೇಟಿವ್ ಎಐ ಬಹುತೇಕರ ವ್ಯವಹಾರ ಆದ್ಯತೆಗಳನ್ನು ಬದಲಿಸಿದೆ. ಪ್ರಶ್ನೆಗಳಿಗೆ ಉತ್ತರ ನೀಡುವ, ಬಿಂಬಗಳನ್ನು ಸೃಷ್ಟಿಸುವ ಮತ್ತು ಕೋಡ್ ಬರೆಯಬಲ್ಲ ಈ ತಂತ್ರಜ್ಞಾನವು ಓಪನ್ ಎಐ ಚಾಟ್ಬಾಟ್ ಆದ ಚಾಟ್ಜಿಪಿಟಿ ಜನಪ್ರಿಯಗೊಂಡ ಬಳಿಕ ಎಲ್ಲರನ್ನೂ ಸೆಳೆಯುತ್ತಿದೆ. ಎಐ ಬಲ ಪಡೆದ ಮ್ಯಾಗ್ನಿಫಿಷಿಯಂಟ್ ಸೆವೆನ್(ಮೈಕ್ರೋಸಾಫ್ಟ್, ಆ್ಯಪಲ್, ಅಮೆಝಾನ್, ಆಲ್ಫಾಬೆಟ್, ಮೆಟಾ, ಟೆಸ್ಲಾ ಮತ್ತು ಎನ್ವಿಡಿಯ) ಕಂಪೆನಿಗಳ ಒಟ್ಟು ಆದಾಯ 1.75 ಟ್ರಿಲಿಯನ್ ಡಾಲರ್; ಲಾಭ ಅಂದಾಜು 400 ಬಿಲಿಯನ್ ಡಾಲರ್. ಡಾಟ್ಕಾಂ ಉಬ್ಬರದಲ್ಲಿ ಮುಂಚೂಣಿಯಲ್ಲಿದ್ದ ಮೈಕ್ರೋಸಾಫ್ಟ್, ಇಂಟೆಲ್, ಸಿಸ್ಕೋ, ಕ್ವಾಲ್ಕಾಂ, ಆರೇಕಲ್, ಜೆಡಿಎಸ್ ಯುನಿಫೇಸ್ ಮತ್ತು ಸನ್ ಮೈಕ್ರೋಸಿಸ್ಟಮ್ಗಳಲ್ಲಿ ಕೊನೆಯ ಎರಡು ಹೊರತುಪಡಿಸಿ, ಉಳಿದೆಲ್ಲವೂ ತಮ್ಮ ಮುಂಚೂಣಿ ಸ್ಥಾನ ಉಳಿಸಿಕೊಂಡಿವೆ. ಮೈಕ್ರೋಸಾಫ್ಟ್(ಬಿಗ್ ಟೆಕ್), ಇಂಟೆಲ್ (ಎಎಂಡಿ ಬರುವವರೆಗೆ ಪಿಸಿ ಮತ್ತು ಡೇಟಾಸೆಂಟರ್ ಕಂಪ್ಯೂಟಿಂಗ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿತ್ತು), ಕ್ವಾಲ್ಕಾಮ್(ಮೊಬೈಲ್ ಪ್ರಾಸೆಸರ್ನಲ್ಲಿ ಅಗ್ರಣಿ) ಸುತ್ತಲಿನ ರಕ್ಷಣಾಕಂದರಗಳು ಬಹಳ ಬಲಿಷ್ಠವಾಗಿವೆ. ಇವು ಎಐ ಮತ್ತು ತಮ್ಮ ಆಯ್ಕೆಯ ಕ್ಷೇತ್ರದಲ್ಲೂ ಬಲಿಷ್ಠವಾಗಿವೆ. ಜಾಗತಿಕ ಕ್ಲೌಡ್ ವಹಿವಾಟಿನಲ್ಲಿ ಅಮೆಝಾನ್-ಮೈಕ್ರೋಸಾಫ್ಟ್ ಶೇ.50 ಪಾಲು; ಆಲ್ಫಾಬೆಟ್ ಮತ್ತು ಮೆಟಾ ಡಿಜಿಟಲ್ ಜಾಹೀರಾತು ಮಾರುಕಟ್ಟೆಯಲ್ಲಿ ಶೇ.55-65ರಷ್ಟು ಪಾಲು ಹೊಂದಿವೆ. ಇತ್ತೀಚೆಗೆ ಸ್ಮಾರ್ಟ್ಫೋನ್ ವಹಿವಾಟಿನಲ್ಲಿ ಸ್ಯಾಮ್ಸಂಗ್ನ್ನು ಆ್ಯಪಲ್ ಸ್ಥಳಾಂತರಿಸಿದೆ(ಮಾರುಕಟ್ಟೆ ಪಾಲು ಶೇ.20). ಟೆಸ್ಲಾ ವಿದ್ಯುನ್ಮಾನ ವಾಹನಗಳ ಕ್ಷೇತ್ರದಲ್ಲಿ ಚೀನಾದ ಬಿವೈಡಿಯನ್ನು ಸ್ಥಳಾಂತರಿಸಿದ್ದು, ಜಗತ್ತಿನ ಅತಿ ದೊಡ್ಡ ಇವಿ ಮಾರಾಟಗಾರ ಎನ್ನಿಸಿಕೊಂಡಿದೆ.

ಎಐಗೆ ಅತ್ಯಗತ್ಯವಾಗಿ ಬೇಕಿರುವ ಭಾರೀ ಭಾಷಾ ಮಾದರಿ(ಎಲ್ಎಲ್ಎಂ, ಲಾರ್ಜ್ ಲಾಂಗ್ವೇಜ್ ಮಾಡೆಲ್)ಗಳನ್ನು ರೂಪಿಸಲು ಅಗಾಧ ಪ್ರಮಾಣದ ದತ್ತಾಂಶ ಹಾಗೂ ಆರ್ಥಿಕ ಸಂಪನ್ಮೂಲ ಅಗತ್ಯವಿದೆ. ಮೇಲಿನ 7 ಕಂಪೆನಿಗಳ ಬಳಿ ದಶಕಗಳಿಂದ ಸಂಗ್ರಹಿಸಿದ ದತ್ತಾಂಶ ಮತ್ತು ಆರ್ಥಿಕ ಸಂಪನ್ಮೂಲವಿದೆ. ಇದರಿಂದಾಗಿ ಹೊಸಬರು ಸ್ಪರ್ಧಿಸಿ, ಪರ್ಯಾಯ ಉತ್ಪನ್ನವನ್ನು ಸೃಷ್ಟಿಸುವುದು ಕಷ್ಟಕರ. ಓಪನ್ ಎಐ ಉತ್ಪನ್ನವಾದ ಚಾಟ್ಜಿಪಿಟಿಯನ್ನು ವಾಣಿಜ್ಯೀಕರಿಸಲು ಹಣ ನೀಡಿದ್ದು ಮೈಕ್ರೋಸಾಫ್ಟ್. ಎಐಗೆ ದೊಡ್ಡ ಭಾಷಾ ಮಾದರಿಗಳನ್ನು ಸೃಷ್ಟಿಸಲು ಸಾರ್ವಜನಿಕವಾಗಿ ಲಭ್ಯವಿರುವ ದತ್ತಾಂಶ ಬಳಸಲಾಗುತ್ತಿದೆ. ಈ ಭಾಷಾ ಮಾದರಿಗಳನ್ನು ಉತ್ತಮಗೊಳಿಸಲು ಖಾಸಗಿ ದತ್ತಾಂಶಗಳನ್ನು ಬಳಸಿಕೊಳ್ಳುವ ಕಾಲ ದೂರವಿಲ್ಲ. ಉದಾಹರಣೆಗೆ, ಟೆಸ್ಲಾ ಎಐ ಕ್ಷೇತ್ರವನ್ನು ಇತ್ತೀಚೆಗೆ ಪ್ರವೇಶಿಸಿದೆ. ಕಾರುಗಳಲ್ಲಿ ಅಳವಡಿಸಿದ ಕ್ಯಾಮರಾ ಕ್ಲಿಕ್ಕಿಸಿದ ಪೋಟೊಗಳು ಸೇರಿದಂತೆ ಇನ್ನಿತರ ಮಾಹಿತಿಗಳು ಟೆಸ್ಲಾ ಬಳಿ ಇದೆ. ಈ ಖಾಸಗಿ ಮಾಹಿತಿಯನ್ನು ಸಂಪೂರ್ಣ ಆಟೋಮ್ಯಾಟಿಕ್ ವಾಹನಗಳು ಹಾಗೂ ರೋಬೋ ಟ್ಯಾಕ್ಸಿಗಳನ್ನು ತಯಾರಿಸಲು ಬಳಸಬಹುದು. ಎನ್ವಿಡಿಯಗೆ ದತ್ತಾಂಶದ ಅನುಕೂಲ ಇಲ್ಲದೆ ಇರಬಹುದು. ಆದರೆ, ಅಂದಾಜಿನ ಪ್ರಕಾರ, ಎಐ ಚಿಪ್ಗಳಲ್ಲಿ ಕಂಪೆನಿಯ ಮಾರುಕಟ್ಟೆ ಪಾಲು ಶೇ.70-90. ಬೇರೆ ಕಂಪೆನಿಗಳು ಭವಿಷ್ಯದಲ್ಲಿ ಎಲ್ಎಲ್ಎಂಗಳನ್ನು ಬಿಡುಗಡೆಗೊಳಿಸಿದರೂ, ಮೊದಲು ಆರಂಭಿಸಿರುವುದರಿಂದ ಮತ್ತು ಎಐ ಚಿಪ್ಗಳಿಂದಾಗಿ ಎನ್ವಿಡಿಯದ ಏಕಸ್ವಾಮ್ಯವನ್ನು ಮುರಿಯುವುದು ಕಠಿಣ.

ಎಐ ಮೇಲೆ ಹೂಡಿಕೆ

ಟೆಕ್ ಕಂಪೆನಿಗಳು ಎಐಗೆ ಸಾಫ್ಟ್ವೇರ್ ಅಭಿವೃದ್ಧಿ, ಸೆಮಿಕಂಡಕ್ಟರ್, ಕ್ಲೌಡ್ ಕಂಪ್ಯೂಟಿಂಗ್ ಮತ್ತಿತರ ವ್ಯವಸ್ಥೆ ನಿರ್ಮಿಸಲು ಇಂಜಿನಿಯರ್ಗಳನ್ನು ನೇಮಿಸಿಕೊಳ್ಳುತ್ತಿವೆ. ಅಮೆರಿಕದಲ್ಲಿ ಕಳೆದ ವರ್ಷ 1.8 ಲಕ್ಷ ಮಂದಿಯನ್ನು ನೇಮಿಸಿಕೊಳ್ಳಲಾಗಿದೆ. ಇಂಥ ಉದ್ಯೋಗಗಳು ಈ ವರ್ಷ ಇನ್ನಷ್ಟು ಹೆಚ್ಚಲಿವೆ. ಎಐ ಟೆಕ್ ಕಂಪೆನಿಗಳ ಆಂತರಿಕ ಕಾರ್ಯನಿರ್ವಹಣೆಯ ಕ್ಷಮತೆಯನ್ನು ಹೆಚ್ಚಿಸಿದೆ. ಆಲ್ಫಾಬೆಟ್ನ ಜೆಮಿನಿ, ಮೆಟಾದ ಲಾಮಾ, ಮೈಕ್ರೋಸಾಫ್ಟ್ನ ಓಪನ್ ಎಐ ಚಿರಪರಿಚಿತ. ಅಮೆಝಾನ್ ಒಲಿಂಪಸ್ ಹೆಸರಿನ ಎಲ್ಎಲ್ಎಂ ಸೃಷ್ಟಿಸಲು ಮುಂದಾಗಿದೆ. ಟೆಸ್ಲಾ ಸಂಪೂರ್ಣ ಸ್ವಯಂಚಾಲಿತ ಕಾರು ಹಾಗೂ ರೋಬೋಟ್ಯಾಕ್ಸಿಗಳ ತಯಾರಿಕೆಗೆ ಅಗತ್ಯವಾದ ಡೋಜೋ ಹೆಸರಿನ ಸೂಪರ್ ಕಂಪ್ಯೂಟರ್ ಮೇಲೆ ಭಾರೀ ಹೂಡಿಕೆ ಮಾಡುತ್ತಿದೆ. ಎಐಯಿಂದ ಮೈಕ್ರೋಸಾಫ್ಟ್, ಅಮೆಝಾನ್ ಮತ್ತು ಗೂಗಲ್ಗೆ ಕ್ಲೌಡ್ ವಹಿವಾಟು-ಚಂದಾ ಆದಾಯ ಹಾಗೂ ಮೆಟಾ-ಗೂಗಲ್ಗೆ ಜಾಹೀರಾತು ಆದಾಯ ಹೆಚ್ಚಿದೆ. ಎಐ ಚಿಪ್ಗಳಿಗೋಸ್ಕರ ಎನ್ವಿಡಿಯ ಮೇಲೆ ಅವಲಂಬನೆ ತಪ್ಪಿಸಲು ಮೈಕ್ರೋಸಾಫ್ಟ್, ಅಮೆಝಾನ್, ಮೆಟಾ ಮತ್ತು ಗೂಗಲ್ ತಮ್ಮದೇ ಎಐ ಚಿಪ್ ಅಭಿವೃದ್ಧಿಪಡಿಸುತ್ತಿವೆ. ಪ್ರತಿಯಾಗಿ, ಎನ್ವಿಡಿಯ ಕ್ಲೌಡ್ ವಹಿವಾಟಿಗೆ ಕಾಲಿಟ್ಟಿದೆ. ಆ್ಯಪಲ್ ಕೂಡ ತನ್ನದೇ ಎಐ ವ್ಯವಸ್ಥೆ ರೂಪಿಸಲು ಮುಂದಾಗಿದ್ದು, ವರ್ಷಾಂತ್ಯ ಬಿಡುಗಡೆ ಆಗಬಹುದು. ಯುರೋಪಿಯನ್ ಡಿಜಿಟಲ್ ಮಾರ್ಕೆಟ್ಸ್ ಕಾಯ್ದೆ ಮಾರ್ಚ್ 6ರಿಂದ ಅನುಷ್ಠಾನಗೊಳ್ಳಲಿದ್ದು, ಈ ಕಾಯ್ದೆಯು ಆನ್ಲೈನ್ ಸೇವೆಗಳಲ್ಲಿ ನಿಮಗೆ ಇರುವ ಆಯ್ಕೆಗಳೇನು ಎಂಬುದನ್ನು ಗ್ರಾಹಕರಿಗೆ ತಿಳಿಸುವುದನ್ನು ಹಾಗೂ ಗ್ರಾಹಕರ ಮಾಹಿತಿಯನ್ನು ಬಳಸಿಕೊಳ್ಳಲು ಅವರ ಅನುಮತಿ ಪಡೆದುಕೊಳ್ಳುವುದನ್ನು ಕಡ್ಡಾಯಗೊಳಿಸುತ್ತದೆ. ಎಲ್ಲ ಟೆಕ್ ಕಂಪೆನಿಗಳು ಈ ಕಾಯ್ದೆಗೆ ಸಿದ್ಧಗೊಳ್ಳುತ್ತಿವೆ.

‘‘ಎಐ ಶೇ. 5-10ರಷ್ಟು ಉದ್ಯೋಗ ಕಡಿತಕ್ಕೆ ಕಾರಣ ಆಗಬಹುದು. ನಮ್ಮ ದೇಶಕ್ಕೆ ಹೆಚ್ಚು ಸಮಸ್ಯೆಯಾಗದು. ಪ್ರತಿವರ್ಷ ಒಟ್ಟು ಪ್ರಾಜೆಕ್ಟಿನ ಶೇ.10 ಮಂದಿಯನ್ನು ತೆಗೆಯಲಾಗುತ್ತದೆ. ನಮ್ಮ ಕಂಪೆನಿಯಲ್ಲಿ ಕೆಲಸದಿಂದ ತೆಗೆದ 3,000 ಮಂದಿಯಲ್ಲಿ ಬೆಂಗಳೂರಿನವರು ಕೇವಲ ಇಬ್ಬರು ಮಾತ್ರ ಇದ್ದರು. ಆದರೆ, ಕ್ಯಾಂಪಸ್ ನೇಮಕ ಕಡಿಮೆಯಾಗಿದೆ ಮತ್ತು ಹೊಸದಾಗಿ ಬಂದವರಿಗೆ ಅವಕಾಶ ಕಡಿಮೆಯಾಗಿದೆ. ಹೊರದೇಶದ ಗ್ರಾಹಕರಿಗೆ ಸೇವೆಯನ್ನು ಪೂರೈಸುವ ಉದ್ಯಮವಾದ್ದರಿಂದ, ಹೆಚ್ಚೇನೂ ಪರಿಣಾಮ ಬೀರುವುದಿಲ್ಲ’’ ಎಂದು ಐಟಿ ಸಲಹೆಗಾರರೊಬ್ಬರು ಹೇಳುತ್ತಾರೆ.

ಎಐ ಸದ್ಯಕ್ಕೆ ಲಾಭದಾಯಕವಾಗಿಲ್ಲ ಮತ್ತು ಅಪಾರ ಬಂಡವಾಳ ಅಗತ್ಯವಿದೆ. ಅಮೆಝಾನ್, ಮೈಕ್ರೋಸಾಫ್ಟ್ ಮತ್ತು ಗೂಗಲ್ ಗ್ರಾಹಕರಿಗೆ ಸಬ್ಸಿಡಿ ದರದಲ್ಲಿ ಎಐ ಸೇವೆ ನೀಡುತ್ತಿದೆ. ಎಐ ಪ್ರಯಾಣ ಈಗಷ್ಟೇ ಆರಂಭವಾಗಿದೆ. ಸ್ಟೀವ್ ಜಾಬ್ಸ್ ಕಂಪ್ಯೂಟರ್ ಸೃಷ್ಟಿಸಿದಾಗ, ‘ಮನಸ್ಸಿಗೆ ಬೈಸಿಕಲ್ ಬಂತು’ ಎಂದಿದ್ದರು. ಬೇರೆ ಪ್ರಭೇದಗಳಿಗೆ ಹೋಲಿಸಿದರೆ ಮನುಷ್ಯರು ‘ಚಲನೆಯ ಕ್ಷಮತೆ’ಯಲ್ಲಿ ತೀರ ಹಿಂದುಳಿದಿದ್ದಾರೆ ಎಂದು ಅಧ್ಯಯನವೊಂದು ಹೇಳಿತ್ತು. ಸೈಕಲ್ ಬಂದ ಬಳಿಕ ಮನುಷ್ಯ ಎಲ್ಲರಿಗಿಂತ ಮುಂದೆ ಬಂದು, 1ನೇ ಸ್ಥಾನ ಗಳಿಸಿದ. ಆದರೆ, ಆತ ವಿವೇಚನೆ ಗಳಿಸಿಕೊಂಡನೇ ಎನ್ನುವುದು ಪ್ರಶ್ನೆ. ಜಗತ್ತು ತಂತ್ರಜ್ಞಾನದ ಹಿಡಿತದಲ್ಲಿ ಮತ್ತು ತಂತ್ರಜ್ಞಾನ ಹಣಾಢ್ಯರ ಹಿಡಿತದಲ್ಲಿ ಸಿಕ್ಕಿಕೊಂಡಿದೆ. ಇದಕ್ಕೆ ಪರಿಹಾರ ಕ್ಲಿಷ್ಟ.

Writer - ವಾರ್ತಾಭಾರತಿ

contributor

Editor - Safwan

contributor

Byline - ಋತ

contributor

Similar News

ಸಂವಿಧಾನ -75