ಸಂವಿಧಾನ -75

Update: 2024-12-26 05:35 GMT

ಏನೂ ಸಾಧಿಸದಿದ್ದರೂ 75 ವರ್ಷಗಳ ಬದುಕೇ ಒಬ್ಬ ವ್ಯಕ್ತಿಯ ಜೀವನದಲ್ಲಿ ದೊಡ್ಡ ಸಾಧನೆ. ಅದನ್ನು ಹಲವಾರು ರೀತಿಯಲ್ಲಿ ಆಚರಿಸಬಹುದು. ಮನುಷ್ಯ ಹುಟ್ಟುಹಬ್ಬದ ಆಚರಣೆಯಲ್ಲಿ ಸುಖ ಕಾಣುವವನಾದ್ದರಿಂದ ಅವೆಲ್ಲ ಹಳೆಯ ಫರ್ಲಾಂಗು ಕಲ್ಲಿನ ಹಾಗೆ ಚಿಕ್ಕ ಗುರುತಿನೊಂದಿಗೆ ಊರುತ್ತ, ಬೆಳ್ಳಿ, ಸುವರ್ಣ, ವಜ್ರ, ಪ್ಲಾಟಿನಂ, ಕೊನೆಗೆ ಶತಮಾನದ ಆಚರಣೆಗಳು ಭದ್ರವಾಗಿ ಊರಲ್ಪಟ್ಟ ಮೈಲಿಗಲ್ಲಿನಂತೆ ಕಾಣುತ್ತವೆ.

ಇನ್ನೊಂದಷ್ಟು ದಿನ. 2024ರ ಗಡಿ ದಾಟಿದಂತೆಲ್ಲ ಸಂವಿಧಾನವು 75 ಶಿಶಿರಗಳನ್ನು ದಾಟಿತೆಂಬುದನ್ನು ಮರೆಯುತ್ತೇವೆ. ಅವಸರದಲ್ಲಿ ಈ ಪ್ಲಾಟಿನಂ ಮೈಲಿಗಲ್ಲನ್ನು ನೆನಪುಮಾಡಿಕೊಳ್ಳಬಹುದು. ಶತಮಾನಕ್ಕಿಂತ ಕಡಿಮೆ; ವಜ್ರಕ್ಕಿಂತ ಹೆಚ್ಚು!

ಒಂದು ಮಹತ್ವದ, ಆದರೆ ಮರೆಯಬಾರದ, ಪ್ರಸಂಗದೊಂದಿಗೆ ಸಂವಿಧಾನವನ್ನು ಮೆಲುಕುಹಾಕಬಹುದು; ಸಂವಿಧಾನದ 219ನೇ ಅನುಚ್ಛೇದವು ‘‘ಉಚ್ಚ ನ್ಯಾಯಾಲಯದ ನ್ಯಾಯಾಧೀಶನಾಗಿ ನೇಮಕಗೊಂಡ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಪದವನ್ನು ವಹಿಸಿಕೊಳ್ಳುವುದಕ್ಕೆ ಮುಂಚೆ ರಾಜ್ಯದ ರಾಜ್ಯಪಾಲ ಅಥವಾ ಅವನಿಂದ ಆ ಬಗ್ಗೆ ನೇಮಕಗೊಂಡ ಇತರ ವ್ಯಕ್ತಿಯ ಮುಂದೆ ಮೂರನೆಯ ಅನುಸೂಚಿಯಲ್ಲಿ ಆ ಉದ್ದೇಶಕ್ಕಾಗಿ ಕೊಟ್ಟಿರುವ ನಮೂನೆಗನುಸಾರವಾಗಿ ಪ್ರಮಾಣವಚನ ಅಥವಾ ದೃಢೀಕರಣವನ್ನು ಮಾಡತಕ್ಕುದು ಮತ್ತು ಅದಕ್ಕೆ ತನ್ನ ರುಜು ಹಾಕತಕ್ಕುದು.’’ ಎಂದು ಹೇಳುತ್ತದೆ. (ಇಂಗ್ಲಿಷಿನ ‘Judges’ ಎಂಬುದು ನ್ಯಾಯಾಧೀಶರು ಎಂದಾಗಬೇಕು; ಆಗಿದೆ. ಆದರೆ ‘Judges’ ಎಂಬುದು ನ್ಯಾಯಾಧೀಶನು ಎಂಬ, ಮತ್ತು ‘he’ ಎಂಬ ಪದವು ಅವನಿಂದ ಎಂದು ಭಾಷಾಂತರಗೊಂಡಿದೆ. ಇಂಗ್ಲಿಷಿನಲ್ಲಿ ಏಕವಚನ ಬಹುವಚನ ಪ್ರಯೋಗವು ಸಂಖ್ಯೆಯನ್ನವಲಂಬಿಸಿದರೆ ಕನ್ನಡದಲ್ಲಿ ಅದು ಮನ್ನಣೆಯನ್ನು, ಸ್ಥಾನ-ಮಾನವನ್ನು ಸೂಚಿಸುತ್ತದೆ. ಈ ದೃಷ್ಟಿಯಿಂದ ‘ನ್ಯಾಯಾಧೀಶರು’ ಮತ್ತು ‘ಅವರಿಂದ’ ಎಂದು ಭಾಷಾಂತರಗೊಳ್ಳಬೇಕಿತ್ತು; ಇರಲಿ. 3ನೇ ಅನುಸೂಚಿಯ 8ನೇ ಕ್ರಮಾಂಕದಲ್ಲಿ ಉಲ್ಲೇಖಿಸಲಾದ ನಮೂನೆಯು ಉಚ್ಚ ನ್ಯಾಯಾಲಯದ ಮುಖ್ಯ/ನ್ಯಾಯಾಧೀಶರ ಪ್ರಮಾಣವಚನವನ್ನು ತನ್ನ ಅಧಿಕೃತ ಕನ್ನಡ ಆವೃತ್ತಿಯಲ್ಲಿ ಹೀಗೆ ನಿರೂಪಿಸಿದೆ (ಇದು ಭಾರತೀಯ ಅಥವಾ ಕರ್ನಾಟಕ ಆಡಳಿತ ಸೇವೆಯ ಅನುವಾದವಾದ್ದರಿಂದ ತಪ್ಪುಗಳಿಗೆ ಕ್ಷಮೆಯಿರಲಿ!):

‘‘... ಎಂಬ ಹೆಸರಿನವನಾದ ನಾನು ...ಲ್ಲಿ (ಅಥವಾ ...ದ)ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶನಾಗಿ (ಅಥವಾ ನ್ಯಾಯಾಧೀಶನಾಗಿ) ನೇಮಕಗೊಂಡವನಾಗಿ, ಕಾನೂನು ಮೂಲಕ ಸ್ಥಾಪಿತವಾದ ಭಾರತದ ಸಂವಿಧಾನಕ್ಕೆ ಸತ್ಯ, ಶ್ರದ್ಧೆ ಮತ್ತು ನಿಷ್ಠೆಯನ್ನು ಹೊಂದಿರುತ್ತೇನೆಂದು ಮತ್ತು ಭಾರತದ ಸಾರ್ವಭೌಮತ್ವವನ್ನು ಮತ್ತು ಅಖಂಡತೆಯನ್ನು ಎತ್ತಿ ಹಿಡಿಯುತ್ತೇನೆಂದು ಯುಕ್ತನಾಗಿ ಮತ್ತು ಶ್ರದ್ಧಾಪೂರ್ವಕವಾಗಿ ಮತ್ತು ನನ್ನ ಸಾಮರ್ಥ್ಯ, ಜ್ಞಾನ ಮತ್ತು ವಿವೇಚನೆ ಇರುವಷ್ಟರ ಮಟ್ಟಿಗೆ ನನ್ನ ಪದದ ಕರ್ತವ್ಯಗಳನ್ನು ಭಯ ಮತ್ತು ಪಕ್ಷಪಾತ, ಮಮತೆ ಅಥವಾ ದ್ವೇಷ ಇಲ್ಲದೆಯೇ ನೆರವೇರಿಸುತ್ತೇನೆಂದು, ಸಂವಿಧಾನವನ್ನು ಮತ್ತು ಕಾನೂನನ್ನು ಎತ್ತಿಹಿಡಿಯುತ್ತೇನೆಂದು ದೇವರ ಹೆಸರಿನಲ್ಲಿ ಪ್ರಮಾಣ ಮಾಡುತ್ತೇನೆ/ಶ್ರದ್ಧಾಪೂರ್ವಕವಾಗಿ ದೃಢೀಕರಣ ಮಾಡುತ್ತೇನೆ’’.

ಈ ಪ್ರಮಾಣವಚನವನ್ನು ಈ ರೀತಿ ನೇಮಕಗೊಳ್ಳದವನೂ ಮಾಡಬಹುದು; ಮಾಡಬೇಕಾದು ಆತನ ಕರ್ತವ್ಯ. ಯಾವ ಪದಕ್ಕೆ (ಹುದ್ದೆಗೆ) ನೇಮಕಗೊಂಡವನೆಂಬುದು ಮುಖ್ಯವಲ್ಲ. ಅದರಲ್ಲಿ ಇರುವ/ಬರುವ ‘‘ಕಾನೂನು ಮೂಲಕ ಸ್ಥಾಪಿತವಾದ ಭಾರತದ ಸಂವಿಧಾನಕ್ಕೆ ಸತ್ಯ, ಶ್ರದ್ಧೆ ಮತ್ತು ನಿಷ್ಠೆಯನ್ನು ಹೊಂದಿರುತ್ತೇನೆಂದು ಮತ್ತು ಭಾರತದ ಸಾರ್ವಭೌಮತ್ವವನ್ನು ಮತ್ತು ಅಖಂಡತೆಯನ್ನು ಎತ್ತಿ ಹಿಡಿಯುತ್ತೇನೆಂದು’’ಹಾಗೂ ‘‘ನನ್ನ ಸಾಮರ್ಥ್ಯ, ಜ್ಞಾನ ಮತ್ತು ವಿವೇಚನೆ ಇರುವಷ್ಟರ ಮಟ್ಟಿಗೆ ನನ್ನ ಪದದ ಕರ್ತವ್ಯಗಳನ್ನು ಭಯ ಮತ್ತು ಪಕ್ಷಪಾತ, ಮಮತೆ ಅಥವಾ ದ್ವೇಷ ಇಲ್ಲದೆಯೇ ನೆರವೇರಿಸುತ್ತೇನೆಂದು’’ ಮತ್ತು ‘‘ಸಂವಿಧಾನವನ್ನು ಮತ್ತು ಕಾನೂನನ್ನು ಎತ್ತಿಹಿಡಿಯುತ್ತೇನೆಂದು’’ ಎಂಬ ಪದಗಳು ನೇಮಕಗೊಂಡವನ ಕರ್ತವ್ಯವನ್ನು ನಿರೂಪಿಸುತ್ತದೆ.

ಹೀಗೆ ನೇಮಕಗೊಂಡವನು ಕಾನೂನನ್ನು ತಿಳಿದುಕೊಂಡವನು ಮಾತ್ರವಲ್ಲ, ಅದರಲ್ಲಿ ಪರಿಣತ ಅಥವಾ ಅನುಭವಿ ಎಂಬುದು ಸ್ವಯಂವೇದ್ಯ. ಇಲ್ಲವಾದರೆ ನ್ಯಾಯದ ತಕ್ಕಡಿಯನ್ನು ಕಾನೂನಿನನ್ವಯ (ಅಥವಾ ಅದನ್ನು ಮೀರದೆ) ನೀಡುವುದಾದರೂ ಹೇಗೆ?

ಈಚೆಗೆ ಉತ್ತರಪ್ರದೇಶದ ಅಲ್ಲಹಾಬಾದ್ ಉಚ್ಚ ನ್ಯಾಯಾಲಯದ ನ್ಯಾಯಾಧೀಶರೊಬ್ಬರು ವಿಶ್ವ ಹಿಂದೂ ಪರಿಷತ್ (ಪ್ರಾ)ಯೋಜಿಸಿದ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡುತ್ತ ಹಿಂದೂಗಳು ಬಹುಸಂಖ್ಯಾಕರು. ಅವರು ಹೇಳಿದಂತೆ ಅಥವಾ ಆದೇಶಿಸಿದಂತೆ ಇತರರು (ಅವರು ಅಲ್ಪಸಂಖ್ಯಾಕ ಮುಸ್ಲಿಮರನ್ನು ಉದ್ದೇಶಿಸಿದ್ದರು!) ಬದುಕಬೇಕಾಗುತ್ತದೆಂದು ಹೇಳಿದರು. ಇದಕ್ಕೆ ಅವರಿಗೆ ಅಲ್ಲಿ ಕಿವಿಗಡಚಿಕ್ಕುವ ಸಂಮಾನವು ದೊರೆತಿರಬೇಕು!

ಆದರೆ ಇತರರಿಂದ ಮಾತ್ರವಲ್ಲ ಬಹುಸಂಖ್ಯಾತ ಹಿಂದೂಗಳಲ್ಲೇ ಸಾಕಷ್ಟು ಮಂದಿಯಿಂದ ಅದರಲ್ಲೂ ಸರ್ವಧರ್ಮಸಮಭಾವದ ಕಾನೂನು/ಸಂವಿಧಾನ ತಜ್ಞರಿಂದ ಟೀಕೆ ಎದುರಾಯಿತು. ಈ ನ್ಯಾಯಾಧೀಶರ ಮಾತುಗಳು ನೇರವಾಗಿ ಸಂವಿಧಾನದ ಉಲ್ಲಂಘನೆಯಾಗುತ್ತದೆಂಬ ಜನಾಭಿಪ್ರಾಯ ಮೂಡಿತು. ಸದ್ರಿ ನ್ಯಾಯಾಧೀಶರ ಹೆಸರು ಮುಖ್ಯವಲ್ಲ; ಅಗತ್ಯವೂ ಇಲ್ಲ. ಅವರು ಒಂದು ಮತೀಯ ಮನಸ್ಥಿತಿಯ ಪ್ರತಿನಿಧಿ ಅಷ್ಟೇ. ಅವರ ಹೆಸರು ಹೇಳಿದರೆ ಅವರು ಸಮಾಜದ ವಿನಾಶಕಾರೀ ಶಕ್ತಿಗಳ ಮನಸ್ಸಿನಲ್ಲಿ ಇನ್ನಷ್ಟು ಭದ್ರವಾಗಿ ತಳವೂರುತ್ತಾರೆ-ಈಗ ಖಳನಾಯಕ ನಾಥೂರಾಮ್ ಗೋಡ್ಸೆಗೆ ಸಿಕ್ಕಿದ ಪ್ರಚಾರದಂತೆ!

ಸರ್ವೋಚ್ಚ ನ್ಯಾಯಾಲಯವು ಅವರ ಮಾತುಗಳ ದೃಶ್ಯ/ಶ್ರಾವ್ಯ ದಾಖಲೆಗಳನ್ನು ಪಡೆದು ಅವರನ್ನು ಅನೌಪಚಾರಿಕ ವಿಚಾರಣೆಗೆ ಕರೆಯಿತು. ಅವರು ಸಂವಿಧಾನದ್ವಾರಾ ನೇಮಕಗೊಂಡವರಾದ್ದರಿಂದ ಅವರನ್ನು (ಇಲ್ಲಿ ಬಹುವಚನ ಮತ್ತು ಏಕವಚನದ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳಬಹುದು) ಸಂಸತ್ತು ಮಾತ್ರ ಪದಚ್ಯುತಿಗೊಳಿಸಬಹುದು. ಆದ್ದರಿಂದ ಸರ್ವೋಚ್ಚ ನ್ಯಾಯಾಲಯದ ಕ್ರಮವು ಅರ್ಥವಾಗುವುದಿಲ್ಲ. (ಅನುಚ್ಛೇದ 142ರಲ್ಲಿ ನ್ಯಾಯ ನೀಡಲು ಸರ್ವೋಚ್ಚ ನ್ಯಾಯಾಲಯವು ಯಾವುದೇ ಆದೇಶವನ್ನು ಅದು ಮಾಡಬಲ್ಲುದು ಎಂಬಲ್ಲಿ ಮಾತ್ರ ಇದು ಸಾಧ್ಯತೆಯನ್ನು ಪಡೆಯಬಲ್ಲುದು!) ಅವರನ್ನು ವಿಚಾರಿಸಲಾಯಿತು; ಪ್ರಾಯಃ ಸಿಕ್ಕಿಂನಂತಹ ಯಾವುದಾದರೂ ಅಮುಖ್ಯ ಉಚ್ಚ ನ್ಯಾಯಾಲಯಕ್ಕೆ ವರ್ಗಾಯಿಸಬಹದು. ಆದರೆ ಇಲ್ಲೂ ಅವರಿಗೆ ಒಕ್ಕೂಟ ಸರಕಾರದ ಕೃಪಾಶ್ರಯವು ಸಿಗಬಹುದು!

ಆದರೆ ಮುಖ್ಯವಾಗಿ ಗಮನಿಸಬೇಕಾದದ್ದು ಈ ನ್ಯಾಯಾಧೀಶನ ವರ್ತನೆಯನ್ನು. (ಇಲ್ಲಿ ಅಧಿಕೃತವಾಗಿ ಸಾಂವಿಧಾನಿಕವಾದ ಏಕವಚನವನ್ನೇ ಬಳಸಿದ್ದೇನೆ.) ತನ್ನ ಪ್ರಮಾಣವನ್ನು ಸ್ಪಷ್ಟವಾಗಿ ಉಲ್ಲಂಘಿಸಿ ಅದಕ್ಕೆ ಹೆಮ್ಮೆ ಪಟ್ಟು ತಾನು ಅದಕ್ಕೆ (ಉಲ್ಲಂಘನೆಗೆ) ಬದ್ಧನಾಗಿದ್ದೇನೆಂಬ ರೀತಿಯಲ್ಲಿ ವರ್ತಿಸುವ ಇಂಥವರ ಬಳಿ ಸರ್ವಧರ್ಮ ಸಮಭಾವದ ನ್ಯಾಯ ಎಷ್ಟು ಸುರಕ್ಷಿತ? ಸಂವಿಧಾನವನ್ನು ಒಪ್ಪದಿರುವವರು ಈ ದೇಶದ ಪ್ರಜೆಗಳಾಗಿರಲು ಸಾಧ್ಯವಿಲ್ಲ. ವಿದೇಶೀಯರೂ ಭಾರತದ ನೆಲ/ನೆಲೆಯೊಳಗೆ ಭಾರತದ ಸಂವಿಧಾನಕ್ಕೆ ಬದ್ಧರಾಗಿರಬೇಕು. ಇಲ್ಲಿನ ಕಾನೂನನ್ನು ಗೌರವಿಸಬೇಕು, ಪಾಲಿಸಬೇಕು. ಏಕೆಂದರೆ ಇಲ್ಲಿನ ಕಾನೂನು ಇಲ್ಲಿನ ಸಂವಿಧಾನಕ್ಕನುಗುಣವಾಗಿದೆ. ಸಂವಿಧಾನಕ್ಕೆ ಚ್ಯುತಿ ಬರುವ ಯಾವುದೇ ಕಾನೂನೂ ಊರ್ಜಿತವಾಗುವುದಿಲ್ಲ.

ವಿಶೇಷವೆಂದರೆ ಈ ಬಗ್ಗೆ ಒಕ್ಕೂಟ ಸರಕಾರವು ತಲೆಕೆಡಿಸಿಕೊಂಡಿಲ್ಲ. ಏಕೆಂದರೆ ಮತೀಯತೆಯನ್ನು, ಸಂವಿಧಾನದ ಉಲ್ಲಂಘನೆಯನ್ನು ಪ್ರೋತ್ಸಾಹಿಸುತ್ತಿರುವುದು ಮಾತ್ರವಲ್ಲ, ಅದನ್ನು ತಮ್ಮ ‘ಇತರ’ರ ಮೂಲಕ ಪ್ರಚೋದಿಸುತ್ತಿರುವುದೂ ಅವರೇ. ಈ ನ್ಯಾಯಾಧೀಶರು ನೀಡಿದ ತೀರ್ಪುಗಳ ಪರಾಮರ್ಶೆಯಾಗಬೇಕಾಗಿದೆ. ಇವರ ಕೈಯಲ್ಲಿ ‘ಇತರರು’ ಎಷ್ಟು ಕ್ಷೇಮವೆಂದು ಚಿಂತಿಸಬೇಕಾಗಿದೆ. ಇವರ ಮಾತು ಅಲ್ಪಸಂಖ್ಯಾಕರ ವಿರುದ್ಧ ಬಹುಸಂಖ್ಯಾಕರನ್ನು ಪ್ರಚೋದಿಸುವ, ಗುಂಪುಹಲ್ಲೆಗೆ ದಾರಿಮಾಡಿಕೊಡುವ ಅಪರಾಧವಾಗಿದೆ; ದೇಶದ್ರೋಹವಾಗಿದೆ; ಮಾತ್ರವಲ್ಲ, ಸಂವಿಧಾನದ್ರೋಹವಾಗಿದೆ. ಸದ್ಯಕ್ಕೆ ಸಂವಿಧಾನದ್ರೋಹಕ್ಕೆ ಕಾನೂನಿನಲ್ಲಿ ಸರಿಯಾದ ನೀತಿನಿಯಮಾವಳಿಗಳಿಲ್ಲ. ಅದೊಂದು ಅಪರಾಧವೆಂದು ಬಿಂಬಿಸುವ ಕಾನೂನೇ ಇಲ್ಲ! ಇದ್ದಿದ್ದರೆ ಈ ನ್ಯಾಯಾಧೀಶರು ಈಗಾಗಲೇ ಮನೆಗೆ ತೆರಳುತ್ತಿದ್ದರು! ಇದರಿಂದಾಗಿ ಸದ್ಯಕ್ಕಂತೂ ಈ ನ್ಯಾಯಾಧೀಶ‘ನು’ ಸುರಕ್ಷಿತ ಕಕ್ಷೆೆಯಲ್ಲಿದ್ದಾ‘ನೆಂ’ದು ನಂಬಬೇಕಾಗಿದೆ.

ನ್ಯಾಯಾಲಯಗಳಾಗಬೇಕಾದ ಅಸ್ತಿತ್ವಗಳು ‘ನ್ಯಾಯಲಾಯ’ ಅಥವಾ ‘ನ್ಯಾಯಲಯ’ಗಳಾಗುವುದು ಹೀಗೆಯೇ. ಇಂತಹ ಹತ್ತಾರು ಘಟನೆಗಳನ್ನು ನಿತ್ಯ ನೋಡುತ್ತೇವೆ. ತರಂಗಾಂತರ, ಸ್ಥಾನಮಾನ ಬೇರೆಯಿರಬಹುದು; ಆಶಯ, ಅನುಷ್ಠಾನಗಳಂತೂ ಒಂದೇ.

ಸಂವಿಧಾನವನ್ನು 1949ರ ನವೆಂಬರ್ 26ರಂದು ಸ್ವೀಕರಿಸಲಾಯಿತು. ಇದನ್ನು ರಚಿಸಿದ ಸಂವಿಧಾನ ಸಮಿತಿಯು ಗುರಿ, ಆಶಯ, ಭಾಷೆ, ಆಚರಣೆ ಮುಂತಾದವುಗಳನ್ನು ಸೂಕ್ಷ್ಮವಾಗಿ ಗಮನಿಸಿದೆ. ಅದರ ಅಧ್ಯಕ್ಷರಾದ ಡಾ|ಅಂಬೇಡ್ಕರ್ ಈ ಕುರಿತು ಬಹಳಷ್ಟು ಅಧ್ಯಯನ ಮಾಡಿದ್ದರು. ಈ ಸಂವಿಧಾನವನ್ನು ರಾಷ್ಟ್ರದ ಅಧ್ಯಕ್ಷರೋ, ಪ್ರಧಾನಿಯೋ ಸಂಸತ್ತೋ ನೀಡಿದ್ದಲ್ಲ. ಇದನ್ನು ರಚಿಸಿ ಆತ್ಮಾರ್ಪಿತಗೊಳಿಸಿದವರು ‘ಭಾರತದ ಜನಗಳು’ ಅರ್ಥಾತ್ ಈ ದೇಶದ ಪ್ರಜೆಗಳು. ನಮಗೆ ನಾವೇ ಕೊಟ್ಟ ಈ ಸಂವಿಧಾನದ ಅನುಷ್ಠಾನಕ್ಕಾಗಿ ನಾವು ಸರಕಾರವನ್ನಿಟ್ಟುಕೊಂಡಿದ್ದೇವೆ. ರಾಷ್ಟ್ರಪತಿ, ಪ್ರಧಾನಿ ಮುಂತಾದ ರಾಷ್ಟ್ರಮಟ್ಟದಿಂದ ಗ್ರಾಮಮಟ್ಟದ ವರೆಗೆ ಇವರೆಲ್ಲ ನೌಕರರೇ. ಇವರ್ಯಾರೂ ಹೆಚ್ಚಲ್ಲ; ಪ್ರಜೆಗಳು ಕೀಳಲ್ಲ. ಆದರೆ ನಮ್ಮನ್ನಾಳುವವರು ಈ ದೇಶಕ್ಕೆ ರಾಜಕೀಯ ಮತ್ತು ಅಧಿಕಾರದ ಸ್ವಾತಂತ್ರ್ಯವಷ್ಟೇ ಸಿಕ್ಕಿದ್ದೆಂಬ ರೀತಿಯಲ್ಲಿ ವರ್ತಿಸುತ್ತಿದ್ದಾರೆಂಬುದೇ ಈ 75ರ ದುರದೃಷ್ಟ. ನಾವು ಮಾಡಿದ ಸಂವಿಧಾನ; ಜನಪ್ರತಿನಿಧಿಗಳಾದ ನಾವು ಅದನ್ನು ಏನು ಬೇಕಾದರೂ ಮಾಡಬಹುದು ಎಂಬ ಹುಚ್ಚು ಮತ್ತು ಧೂರ್ತ ನಿರ್ಣಯಕ್ಕೆ ಅಧಿಕಾರದಲ್ಲಿರುವವರು ತಪ್ಪು ತಿಳಿದಿದ್ದಾರೆ. ಇದನ್ನು ಊಹಿಸಿಯೇ ಸಂವಿಧಾನ ನಿರ್ಮಾಪಕರು ಜಾಗ್ರತೆ ವಹಿಸಿದ್ದು. ಶಿಲ್ಪಿ ಕೆತ್ತಿದ ದೇವರ ವಿಗ್ರಹವನ್ನು ನಾಶ ಮಾಡಲು ಅವನಿಗೆ ಅಧಿಕಾರವಿದೆಯೇ? ಅಥವಾ ಮಕ್ಕಳನ್ನು ಕೊಲ್ಲಲು, ಹಿಂಸಿಸಲು ಹೆತ್ತವರಿಗೆ ಹಕ್ಕಿದೆಯೇ? ಆದ್ದರಿಂದಲೇ ‘‘ವಿ ದಿ ಪೀಪಲ್ ಆಫ್ ಇಂಡಿಯಾ’’ ಅಥವಾ ‘‘ಭಾರತದ ಪ್ರಜೆಗಳಾದ ನಾವು’’ ಎಂಬ ಪ್ರಸ್ತಾವನೆಯ ಉಲ್ಲೇಖ.

ಈ ಬಗೆಯ ಅನಾಹುತವನ್ನು ಸಂವಿಧಾನ ಸಮಿತಿಯು ನಿರೀಕ್ಷಿಸಿದ್ದಿರಬಹುದು. ಅದಕ್ಕೇ ಅಂಬೇಡ್ಕರ್ ‘‘ನಾವು ದಾರಿಯನ್ನು ಹಾಕಿಕೊಡಬಹುದು; ಆದರೆ ಇದನ್ನು ಉಳಿಸಿಕೊಳ್ಳುವುದು, ಪಾಲಿಸುವುದು ಇದನ್ನು ಬಳಸುವ ಭವಿಷ್ಯದ ಪ್ರಜೆಗಳ ಕರ್ತವ್ಯ; ಅವರು ಹೊಣೆಯನ್ನು ಮರೆತರೆ ದೇಶಕ್ಕೆ ದುರಂತ ಕಾದಿದೆ’’ ಎಂಬರ್ಥದ ಮಾತುಗಳನ್ನಾಡಿದ್ದರು.

ಈಗ ಸಂವಿಧಾನ-75. ಇಂದಿನ ಪರಿಸ್ಥಿತಿಯನ್ನು ಗಮನಿಸಿದರೆ ದೇಶದ ಉಸಿರುಗಟ್ಟಿದೆ. ನಮ್ಮಲ್ಲಿ ಅನೇಕ ವೃದ್ಧರಿಗೆ ಒಂದು ರೀತಿಯ ವಿಚಿತ್ರ ಮರೆವು ಕಾಡುವುದುಂಟು. ಅವರಿಗೆ ತಮ್ಮ ಸುತ್ತ ಈಗ ಏನು ನಡೆಯುತ್ತದೆಯೆಂಬುದು ಮರೆತುಹೋಗುತ್ತದೆ; ಅಥವಾ ಅದರ ಪರಿವೆಯಿಲ್ಲ. ಆದರೆ ಹಲವು ದಶಕಗಳ ಹಿಂದಿನ ಸಂಗತಿಗಳನ್ನು ಕರಾರುವಾಕ್ಕಾಗಿ ಹೇಳಬಲ್ಲರು. ಇದು ‘ಆಯ್ದ ಮರೆವು’ ಅಲ್ಲ. ಅದೊಂದು ಕಾಯಿಲೆ. ಈಗ ನಮ್ಮ ಪ್ರಭುಗಳು 50 ವರ್ಷಗಳ ಹಿಂದಿನ ತುರ್ತುಪರಿಸ್ಥಿತಿಯನ್ನು ಸದಾ ಆರೋಪಿಸುತ್ತ ತಮ್ಮ ತಪ್ಪುನಡೆಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಹೌದು; 1975 ಸ್ವತಂತ್ರ ಭಾರತದ ಇತಿಹಾಸದಲ್ಲಿ ಒಂದು ಕರಾಳ ಅಧ್ಯಾಯ. ಅದರ ವಿರುದ್ಧ ದೇಶದ ಪ್ರಜ್ಞಾವಂತ ಪ್ರಜೆಗಳು ಪ್ರತಿಭಟಿಸಿದರು. 1977ರಲ್ಲಿ ಅದನ್ನು ಆಗಿನ ಅದೇ ಸರಕಾರ ಹಿಂದೆಗೆದುಕೊಡಿತು. (ನೆನಪಿಡಬೇಕಾದ್ದೆಂದರೆ ಯಾರು ತಮ್ಮ ಸರ್ವಾಧಿಕಾರವನ್ನು ಬಳಸಿ ತುರ್ತುಪರಿಸ್ಥಿತಿಯನ್ನು ಘೋಷಿಸಿದರೋ ಅವರೇ ಅದನ್ನು ಹಿಂದೆಗೆದುಕೊಂಡದ್ದು; ಮತ್ತು ಚುನಾವಣೆಯನ್ನು ಘೋಷಿಸಿದ್ದು; ಯಾವ ಹೊಸ ಸರಕಾರವಲ್ಲ!) ಅಂದರೆ ಈ ಮಣ್ಣಿನ ಗುಣದಲ್ಲಿ ಪ್ರಜಾತಂತ್ರ ನೆಲೆಯೂರಿದೆ. ಬರಬಂದಾಗ ಒಣಗಿ ನಶಿಸಿದ ಗರಿಕೆ ಗಿಡ ಮಳೆಹನಿಯ ಸಿಂಚನದೊಂದಿಗೆ ಚಿಗುರಬಲ್ಲುದು. ನಮ್ಮ ಸಂವಿಧಾನದ ಬೇರುಗಳು ಅಷ್ಟು ಗಟ್ಟಿಯಾಗಿವೆ. ಸಂವಿಧಾನದ ಪ್ರಸ್ತಾವನೆ ಎಲ್ಲ ಸದಾಶಯಗಳಿಗೆ ಮಾರ್ಗದರ್ಶಿ; ದಾರಿದೀಪವಾಗಿ ಇದನ್ನು ಬಲವಾಗಿ ಸೂಚಿಸಿದೆ. ಅಲ್ಲೊಂದು ‘ದೃಢ ಸಂಕಲ್ಪ’ವಿದೆ. ಅದು ಅನೇಕ ತಿದ್ದುಪಡಿಗಳನ್ನು ಮಾಡಿಸಲ್ಪಟ್ಟಿತಾದರೂ ತನ್ನ ಮೂಲ ಆಶಯಗಳನ್ನು ತಿರುಚುವಂತಿಲ್ಲವೆಂದು ಸರ್ವೋಚ್ಚ ನ್ಯಾಯಾಲಯವು 1973ರ ‘ಕೇಶವಾನಂದ ಭಾರತೀ ಪ್ರಕರಣ’ದಲ್ಲಿ ತೀರ್ಪುನೀಡಿ ಸಂವಿಧಾನವನ್ನು ‘ಎತ್ತಿಹಿಡಿಯಿತು’ (‘ರಕ್ಷಿಸಿತು’ ಅಲ್ಲ!). ಹಾಗೆಯೇ 1977ರಲ್ಲಿ ಆದ ತಿದ್ದುಪಡಿಗಳ ಬಗ್ಗೆ 1982ರಲ್ಲಿ ‘ಡಿ.ಎಸ್.ನಕರ ಪ್ರಕರಣ’ದಲ್ಲಿ ವಿಶ್ಲೇಷಿಸಿತು.

(ಮುಂದುವರಿಯುವುದು)

(ಮಂಡ್ಯದಲ್ಲಿ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 21.12.2024ರಂದು ‘ಸಂವಿಧಾನ 75’ ಎಂಬ ಶೀರ್ಷಿಕೆಯಲ್ಲಿ ಮಾಡಿದ ವಿಶೇಷ ಉಪನ್ಯಾಸದ ಪರಿಷ್ಕೃತ ರೂಪದ ಮೊದಲ ಭಾಗ)

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಬಾಲಸುಬ್ರಹ್ಮಣ್ಯ ಕಂಜರ್ಪಣೆ

contributor

Similar News