ಹೊರೆಯಾಗುವ ಹೆಜ್ಜೆ

Update: 2025-04-24 09:39 IST
ಹೊರೆಯಾಗುವ ಹೆಜ್ಜೆ
  • whatsapp icon

ಈಗ ಒಕ್ಕೂಟ ಸರಕಾರ ಕೆರಳಿದೆ. ಹಾಗೆಂದು ಅಧಿಕೃತವಾಗಿ ಹೇಳಲಾರದ ಸ್ಥಿತಿಯಲ್ಲಿದೆ. ಆದ್ದರಿಂದ ತನ್ನ ಮಾಮೂಲು ರೀತಿಯ ಹಠಸಾಧನೆಯ ತಂತ್ರಗಳಂತೆ ಕೆಲವು ಮಂದಿಗಳ ಮೂಲಕವಾಗಿ ತನ್ನ ವಿಕಾರ ಸಂದೇಶಗಳನ್ನು ಪ್ರಕಟಪಡಿಸಿದೆ. ರೂಢಿಗತ ಸಿಪಾಯಿಯಂತೆ ವರ್ತಿಸುವ ಉಪರಾಷ್ಟ್ರಪತಿಗಳು ಈಗಾಗಲೇ ಈ ತೀರ್ಪು ರಾಷ್ಟ್ರಪತಿಗಳ ಅನುಮತಿಗೂ ಸಮಯದ ಗಡುವು ವಿಧಿಸುವ ಮೂಲಕ ಸಂವಿಧಾನ ವಿರೋಧವೆಂದು ಹೇಳಿದ್ದಾರೆ. ಅವರ ಪ್ರಕಾರ ಸಂವಿಧಾನವು ಪರಮೋಚ್ಚವಲ್ಲ; ಸಂಸತ್ತು ಪರಮೋಚ್ಚ. ಸಂಸತ್ತು ಅಂಗೀಕರಿಸಿದ ಮಸೂದೆಗಳನ್ನು ನ್ಯಾಯಾಂಗವು ಪ್ರಶ್ನಿಸಲೇಬಾರದೆಂಬ ಹಂತಕ್ಕೆ ಅವರು ತಲುಪಿದ್ದಾರೆ. ಅವರು ಹೇಳಿದ ಮಾತುಗಳು ಸರಿಯೂ ಅಲ್ಲ, ಅವರ ಹುದ್ದೆಗೆ ಗೌರವ ತರುವಂಥದ್ದೂ ಅಲ್ಲ.

ಈಚೆಗೆ ತಮಿಳುನಾಡು ಸರಕಾರ ಮತ್ತು ಅಲ್ಲಿನ ರಾಜ್ಯಪಾಲರ ನಡುವಣ ವಿವಾದದಲ್ಲಿ ಸರ್ವೋಚ್ಚ ನ್ಯಾಯಾಲಯವು ನೀಡಿದ ತೀರ್ಪು ಸಂವಿಧಾನದ ಅಭಿಮಾನಿಗಳಿಗೆ, ಸಂವಿಧಾನಾಸಕ್ತರಿಗೆ ಬಹಳ ಸಂತೋಷ ಅಥವಾ ತೃಪ್ತಿ ನೀಡಿದೆ. ತಮಿಳುನಾಡಿನ ರಾಜ್ಯಪಾಲರು ಇನ್ನೂ ಅಲ್ಲೇ ಉಳಿಯಲು ನಿರ್ಧರಿಸಿದಂತಿರುವುದರಿಂದ ಹಾಸ್ಯಪ್ರಧಾನ ಪಾತ್ರದಲ್ಲಿ ಪ್ರಶಸ್ತಿಪಡೆಯಲು ಸಿದ್ಧರಾದ ನಟರಂತಾಗಿದ್ದಾರೆ. ಆದರೆ ಒಕ್ಕೂಟ ಸರಕಾರದ ಕೇಂದ್ರವಾಗಿರುವ ಪ್ರಧಾನಿ ಮತ್ತವರ ಸಹಚರರಿಗೆ ಭಾರೀ ಮುಜುಗರ ಮಾತ್ರವಲ್ಲ, ಮುಖಭಂಗವೂ ಆಗಿದೆ. ಈಗಾಗಲೇ ದೇಶಾದ್ಯಂತ ಜನಪ್ರಿಯತೆಯನ್ನು ಪಡೆದಿರುವ ಈ ತೀರ್ಪನ್ನು ಪ್ರಶ್ನಿಸಲು ಸರಕಾರವು ತೆರೆಮರೆಯ ತಯಾರಿಯನ್ನು ನಡೆಸುವುದು ರಹಸ್ಯವಾಗಿ ಉಳಿದಿಲ್ಲ. ಸಮಯ, ಸಂದರ್ಭ ನೋಡಬೇಕಷ್ಟೇ. ಆದರೆ ಗಾಯಗೊಂಡ ಮುದಿ ಹುಲಿ ಕೆರಳಿದಂತೆ ಈಗ ಸರಕಾರವು ನ್ಯಾಯಾಂಗದ ವಿರುದ್ಧ ತೀವ್ರ ಟೀಕಾಸ್ತ್ರವನ್ನೆಸೆಯಲು ಹಿರಿ-ಕಿರಿ ತಂಡವನ್ನು ನೇಮಿಸಿದಂತಿದೆ. ಮುಂದೆ ಏನು ಮಾಡುತ್ತದೆಯೋ ಎಂದು ಆತಂಕದಿಂದ ಎದುರುನೋಡುವಂತಾಗಿದೆ.

ಪ್ರಾಯಃ ಸಂವಿಧಾನದಲ್ಲಿ ಪ್ರಶ್ನಾರ್ಹವಾಗಿರುವ ಹುದ್ದೆಗಳೆಂದರೆ ರಾಷ್ಟ್ರಪತಿ, ಉಪರಾಷ್ಟ್ರಪತಿ ಹಾಗೂ ರಾಜ್ಯಪಾಲರದ್ದು. (ಈ ಬಗ್ಗೆ ಸಂವಿಧಾನದ 5ನೇ ಭಾಗ-ಅನುಚ್ಛೇದ 52ರಿಂದ 73, 153ರಿಂದ 162ಗಳನ್ನು ಮತ್ತು ಇವಕ್ಕೆ ಪೂರಕವಾಗಿರುವ ಇತರ ಅನುಚ್ಛೇದಗಳನ್ನು ಗಮನಿಸಬಹುದು.) ಇದು ಬ್ರಿಟಿಷ್ ಆಡಳಿತದ ಪ್ರಭಾವದ ಬೆಳವಣಿಗೆ. ಅಲ್ಲಿ ರಾಣಿ ಅಥವಾ ರಾಜ ಎಂಬ ಉತ್ಸವಮೂರ್ತಿಗಳಿವೆ. ರಾಜಸತ್ತೆಯನ್ನು ಮುರಿದು ಪ್ರಜಾಸತ್ತೆಗೆ ಹೊರಳುವಾಗ ನೀಡಿದ ವಿನಾಯಿತಿ ಅಥವಾ ಉಡುಗೊರೆಯಿದು. ಯಾವ ಅಧಿಕಾರವೂ ಇಲ್ಲದೆ ಸರಕಾರದ ಸೂಚನೆಗಳಿಗೆ ಸಹಿಹಾಕುವ ಒಂದು ಪದವಿ. ನಮ್ಮಲ್ಲಿ ಬ್ರಿಟಿಷರನ್ನು ಹಾಡಿ ಹೊಗಳುವ ಒಂದು ಸಮುದಾಯವಿದ್ದಂತೆಯೇ ಅವರನ್ನು ಸಹಿಸದ ಇನ್ನೊಂದು ಸಮುದಾಯವೂ ಇತ್ತು. ಇವರು ‘ಹ್ಯಾಟು ಬೂಟಿನ ಬಿಳಿದೊರೆ, ಭಾರತಕ್ಕೆ ಅದು ಹೊರೆ’ ಎಂದು ಲಾವಣಿಯ ಧಾಟಿಯಲ್ಲಿ ಲೇವಡಿ ಮಾಡುತ್ತಿದ್ದರು. ಕಾಮನ್‌ವೆಲ್ತ್ ಆಡಳಿತದಲ್ಲಿರುವ ಎಲ್ಲ ದೇಶಗಳಿಗೂ ಈ ಬಿಳಿದೊರೆಗಳ ಪ್ರಾತಿನಿಧ್ಯ ಒದಗಿ ಬಂದಿದೆಯಾದರೂ ಹಲವಾರು ದೇಶಗಳು ಸ್ವಯಮಾಡಳಿತ ಹೊಂದಿವೆ. ಅಲ್ಲಿಗೆ ಬ್ರಿಟನ್‌ನ ವಸಾಹತುಶಾಹಿ ಪ್ರಾತಿನಿಧ್ಯ ಕೊನೆಗೊಂಡಿದೆ.

ವಿಪರ್ಯಾಸವೆಂದರೆ ಅದಕ್ಕೆ ಬದಲಾಗಿ ನಮ್ಮ ಹಿರಿಯರು ವಿಶ್ವಾಸದಿಂದ, ಸದಾಶಯದಿಂದ, ಸಂವಿಧಾನದಲ್ಲಿ ಒಕ್ಕೂಟದ ಉತ್ಸವಮೂರ್ತಿಗಳನ್ನು ಹೊಂದಲು ಅವಕಾಶಮಾಡಿಕೊಟ್ಟರು. ಇವುಗಳಲ್ಲಿ ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿಗಳ ಆಯ್ಕೆಗೆ ಆಗಿನ ಹಿರಿಯರು ಪ್ರಾಮಾಣಿಕವಾಗಿಯೇ ಸಂವಿಧಾನದಲ್ಲಿ ಪರೋಕ್ಷ ಅಥವಾ ಜನಪ್ರತಿನಿಧಿಗಳ ಮೂಲಕ ಚುನಾವಣೆಯನ್ನು ಒದಗಿಸಿದರು. ಇದು ಆ ಸಂದರ್ಭಕ್ಕೆ ಸಾಧುವೇ ಆಗಿತ್ತೇನೋ, ಏಕೆಂದರೆ ಸಂವಿಧಾನ ಸಮಿತಿಯ ಅಥವಾ ಅದರ ನಿರ್ಮಾಪಕರ ಯೋಗ್ಯತೆಯಾಗಲೀ, ದೇಶಭಕ್ತಿಯಾಗಲೀ, ದೇಶಪ್ರೇಮವಾಗಲೀ ಪ್ರಶ್ನಾತೀತವಾಗಿತ್ತು. ಆದ್ದರಿಂದ ಇದನ್ನು ವಸಾಹತುಶಾಹಿ ಸಿದ್ಧಾಂತವೆಂದು ಟೀಕಿಸುವುದು ಸರಿಯಾಗದು. ರಾಷ್ಟ್ರಪತಿಗಳಿರುವಾಗ ಉಪರಾಷ್ಟ್ರಪತಿಗಳಿಗೆ ನಿಜಕ್ಕೂ ಕೆಲಸವೇ ಇರುವುದಿಲ್ಲ. ಇದನ್ನು ಗಮನಿಸಿ ಸಂವಿಧಾನ ನಿರ್ಮಾಪಕರು ಅವರಿಗೂ ಒಂದು ಉದ್ಯೋಗವಿರಲಿ ಎಂಬಂತೆ ರಾಜ್ಯಸಭಾಪತಿಯ ನಿರ್ವಹಣೆಯನ್ನು ದಯಪಾಲಿಸಿದರು. ಲೋಕಸಭಾಪತಿಗಳಿಗೂ ರಾಜ್ಯಸಭಾಪತಿಗಳಿಗೂ ಮೌಲಿಕ ವ್ಯತ್ಯಾಸವಿದೆ. ಲೋಕಸಭಾಪತಿಯ ಹುದ್ದೆ ಎಷ್ಟೇ ನಿಷ್ಪಕ್ಷಪಾತದ್ದೆಂದರೂ ಅದನ್ನು ನಿರ್ವಹಿಸುವುದು ಒಬ್ಬ ಚುನಾಯಿತ ರಾಜಕಾರಣಿಯೆಂಬುದನ್ನು ಮರೆಯಬಾರದು. ಅವರು ಅಲ್ಲಿನ ಬಹುಮತದ ಸಂಕೇತ. ಆದರೆ ರಾಜ್ಯಸಭೆ ಹಾಗಲ್ಲ. ಉಪರಾಷ್ಟ್ರಪತಿಗಳು ಒಂದು ಪಕ್ಷದ ವಕ್ತಾರರಲ್ಲ. ಎಷ್ಟೇ ವಿವೇಚನಾಪೂರ್ಣ ಚರ್ಚೆಯನ್ನು ಪ್ರತಿಪಕ್ಷದವರು ಮಾಡಿದರೂ ಕೊನೆಗೂ ಅವರು ಸಂಖ್ಯಾಬಲದಿಂದಲೇ ಮಸೂದೆಯ ಸ್ವೀಕೃತಿಯನ್ನು ನಿರ್ಧರಿಸುತ್ತಾರೆ. ಆದ್ದರಿಂದ ಸತ್ಯ, ನ್ಯಾಯ, ಇವು ಸಂಸತ್ತಿನಿಂದ ಬಹಿಷ್ಕೃತಗೊಂಡು ಅಶೋಕಚಕ್ರದಲ್ಲಷ್ಟೇ ಉಳಿದುಕೊಳ್ಳುತ್ತದೆ. ಈಗ ರಾಜಕೀಯ ನಡೆಯುವ ದಿಕ್ಕನ್ನು ಗಮನಿಸಿದರೆ ತಿದ್ದುಪಡಿಗೆ ಅವಕಾಶವಿದ್ದರೆ ರಾಷ್ಟ್ರಪತಿಗಳನ್ನೇ ಲೋಕಸಭಾಪತಿಯನ್ನಾಗಿಸಬಹುದು!

ಆದರೆ ರಾಜ್ಯಪಾಲರ ಆಯ್ಕೆ ಇದಕ್ಕೆ ವ್ಯತಿರಿಕ್ತವಾಗಿ ನೇಮಕಾತಿಯಿಂದ ನಡೆಯಿತು. ಈ ಹುದ್ದೆ ರಾಷ್ಟ್ರಪತಿಗಳ ಇಷ್ಟಪರ್ಯಂತ ಇರುವಂಥದ್ದು. ಆದರೆ ರಾಷ್ಟ್ರಪತಿಗಳು ಸ್ವಂತವಾಗಿ ಈ ಆಯ್ಕೆ ಮಾಡುವಂತಿಲ್ಲ. ಒಕ್ಕೂಟ ಸರಕಾರದ ಆಯ್ಕೆಗೆ ಅವರು ತಮ್ಮ ಮುದ್ರೆಯನ್ನೊತ್ತಬೇಕಾಗಿತ್ತು ಮತ್ತು ಅದೇ ನಿಯಮ ಮುಂದುವರಿದಿದೆ. ಪರಿಣಾಮವಾಗಿ ಮೊದಮೊದಲು ವಿವಿಧ ಕಾರಣಗಳಿಂದಾಗಿ ರಾಜಕೀಯದಲ್ಲಿ ಸ್ಥಾನ ಹೊಂದದ ಮಹನೀಯರಿಗೆ ಈ ಹುದ್ದೆಗಳನ್ನು ನೀಡಲಾಯಿತು. ಸಂವಿಧಾನವು ಈ ಅಧಿಕಾರವನ್ನು ಒಕ್ಕೂಟ ಸರಕಾರಕ್ಕೆ ಮಾತ್ರ ನೀಡಿ ರಾಜ್ಯದ ಚುನಾಯಿತ ಸರಕಾರಗಳು ಇಂತಹ ನೇಮಕಾತಿಯ ಅಧಿಕಾರವಂಚಿತವಾದವು. ಆದರೂ ರಾಜ್ಯಪಾಲರ ಹುದ್ದೆಗೆ ನಿವೃತ್ತ ಹಿರಿಯರನ್ನು ಅಥವಾ ಅಪಾರ ತಿಳುವಳಿಕೆಯಿದ್ದು ಸಾರ್ವಜನಿಕ ಗೌರವಸ್ಥರನ್ನು ಮತ್ತು ಯಾವುದೇ ರಾಜ್ಯಕ್ಕೆ ರಾಜ್ಯಪಾಲರನ್ನು ಅಲ್ಲಿನ ಸರಕಾರದೊಂದಿಗೆ ಸಮಾಲೋಚಿಸಿ ನೇಮಿಸಲಾಗುತ್ತಿತ್ತು. ಆದರೂ ಅದಕ್ಕೊಂದು ಗೌರವವಿತ್ತು ಮತ್ತು ಹಾಗೆ ನೇಮಕವಾದವರು ಸಾಂವಿಧಾನಿಕ ಹಿರಿಯಣ್ಣನ ಸ್ಥಾನಗಳನ್ನು ಹೊಣೆಯರಿತು ನಿರ್ವಹಿಸಿದರು ಮತ್ತು ರಾಜ್ಯ ಸರಕಾರದ ಹಿರಿಯಣ್ಣನಂತೆ ರಾಜ್ಯಪಾಲರು ಅಧಿಕಾರ ನಿರ್ವಹಿಸುತ್ತಿದ್ದ್ದರು. ತಿಕ್ಕಾಟಕ್ಕೆ ಬಹುತೇಕ ಅವಕಾಶವಿರಲಿಲ್ಲ.

ಆದರೆ ಯಾವಾಗ ರಾಜಕಾರಣಿಗಳಿಗೆ ದೇಶ, ಸಂವಿಧಾನ, ಜನಹಿತ, ಲೋಕಹಿತ ಇವುಗಳಿಗಿಂತ ಅಧಿಕಾರ ಹೆಚ್ಚಾಯಿತೋ ಆಗ ಈ ಹುದ್ದೆಗಳೆಲ್ಲ ತುಕ್ಕು ಹಿಡಿಯಲಾರಂಭಿಸಿದವು. ಇವು ನೇಮಿಸುವವರಿಗೂ ನೇಮಕವಾಗುವವರಿಗೂ ಲಾಭದಾಯಕ ಹುದ್ದೆ ಮತ್ತು ಉದ್ಯಮವಾದವು. ಕೆಲವು ಬಾರಿ ಪ್ರಭಾವಶಾಲೀ ರಾಜಕೀಯ ಸ್ಪರ್ಧಿಗಳಿಗೆ ಈ ಹುದ್ದೆಯನ್ನು ನೀಡಿ ಒಂದು ರೀತಿಯ ವಾನಪ್ರಸ್ಥವನ್ನು ಅವರಿಗೆ ಕರುಣಿಸಿದ್ದೂ ಇತ್ತು. ಅವರಾದರೂ ಯಾಕೆ ಈ ಹುದ್ದೆಯನ್ನು ಒಪ್ಪಿಕೊಂಡರೆಂದರೆ ಇಲ್ಲದಿದ್ದರೇ ಅದೂ ಇಲ್ಲ ಎಂಬ ಮನಸ್ಥಿತಿ ಅವರಿಗಿತ್ತು. ಪ್ರಣವ್ ಮುಖರ್ಜಿ, ವೆಂಕಯ್ಯ ನಾಯ್ಡು ಮುಂತಾದವರು ಇದಕ್ಕೆ ನಿದರ್ಶನವಾಗಿದ್ದರು. ಒಮ್ಮೆ ಈ ಆಲಂಕಾರಿಕ ಹುದ್ದೆಯನ್ನು ಪಡೆದರೆಂದರೆ ಆನಂತರ ಅವರ ಹಾದಿ ಹಿಮಾಲಯದ್ದೇ ಎಂಬುದು ಖಚಿತವಾಗಿತ್ತು. ಇದಲ್ಲದೆ ಇರುವ ನೇಮಕಾತಿಯೆಂದರೆ ರಬ್ಬರ್ ಸ್ಟ್ಯಾಂಪ್ ವ್ಯಕ್ತಿಗಳದ್ದು. ಎಲ್ಲೋ ಶಾಸಕರೋ ಅಥವಾ ಪ್ರಾದೇಶಿಕ ಮಟ್ಟದ ರಾಜಕಾರಣಿಗಳಿದ್ದರೆ ಅವರಿಗೆ ಪ್ರಸಾದರೂಪವಾಗಿ ಇಂತಹ ನೇಮಕಾತಿ ಲಭ್ಯವಾಗುತ್ತಿತ್ತು. ಈಚೆಗಿನ ಇಬ್ಬರು ರಾಷ್ಟ್ರಪತಿಗಳು ಈ ವರ್ಗದವರು. ತಮ್ಮ ಸಾಂಪ್ರದಾಯಿಕ ಸ್ಥಾನವನ್ನು ಮರೆತು ಪ್ರಧಾನಿ ಬಂದರೆ ಎದ್ದು ನಿಂತು ಗೌರವ ಸಲ್ಲಿಸುವವರು.

ಇವೆಲ್ಲವೂ ಸಂವಿಧಾನದ ಚೌಕಟ್ಟಿನಲ್ಲೇ ನಡೆಯಬೇಕಾದದ್ದು ಅಥವಾ ನಡೆಯುತ್ತವೆಂದು ನಂಬಬೇಕಾದವುಗಳು.

ಆದರೆ ಕ್ರಮೇಣ ಈ ಹುದ್ದೆಗಳು ಒಂದು ಉಡುಗೊರೆಯಾಗಿ ಅಥವಾ ರಾಜಕೀಯದ ಸ್ಪರ್ಧಾನಿಷ್ಠಗಳನ್ನು ಸಾಗಹಾಕುವುದಕ್ಕಾಗಿ ಉಪಯೋಗಕ್ಕೆ ಬರಲಾರಂಭವಾದವು. ಈ ಪೈಕಿ ರಾಷ್ಟ್ರಪತಿ, ಉಪರಾಷ್ಟ್ರಪತಿಗಳ ನೇಮಕಾತಿ ಯಲ್ಲಿ ಕೆಲವು ಬಾರಿ ನೇಮಕಾತಿ ಸರಕಾರ ಹೇಳಿದ್ದನ್ನು ಓದದೆಯೂ ಸಹಿಹಾಕುವಂತಹ ರಬ್ಬರ್ ಸ್ಟ್ಯಾಂಪ್ ವ್ಯಕ್ತಿ(ತ್ವ)ಗಳನ್ನೂ ಆರಿಸಲಾಯಿತು.

ತೀರ್ಪಿನ ಬಗ್ಗೆ ಒಂದಿಷ್ಟು: ತಮಿಳುನಾಡಿನಲ್ಲಿ ಚುನಾಯಿತ ಸರಕಾರವಿದೆ. ಹಾಗೆಯೇ ನೇಮಕಗೊಂಡ ಒಬ್ಬ ರಾಜ್ಯಪಾಲರೂ ಇದ್ದಾರೆ. ರಾಜ್ಯಪಾಲರು ಚುನಾಯಿತ ಸರಕಾರವು ಅಂಗೀಕರಿಸಿದ ಮಸೂದೆಗಳಿಗೆ ತಮ್ಮ ವಿವೇಚನಾ ಮುದ್ರೆಯನ್ನೊತ್ತಬೇಕು. ಇದು ಹೆಚ್ಚು ಕಡಿಮೆ ಯಾಂತ್ರಿಕ ಚಲನೆ. ಆದರೆ ಕೆಲವು ಬಾರಿ ಅಂದರೆ ಮೊನ್ನೆ ತಮಿಳುನಾಡಿನ, ಕೇರಳ ಮತ್ತು ಇನ್ನು ಕೆಲವು ರಾಜ್ಯಗಳ ರಾಜ್ಯಪಾಲರು ಮಾಡಿದಂತೆ ಅದನ್ನು ಅತ್ತ ತಿರಸ್ಕರಿಸದೆ, ಇತ್ತ ಅಂಗೀಕರಿಸದೆ ತಮ್ಮ ಶೈತ್ಯಾಗಾರದಲ್ಲಿಟ್ಟು ರಾಜ್ಯಸರಕಾರವನ್ನು ಇಕ್ಕಟ್ಟಿಗೂ ಒತ್ತಟ್ಟಿಗೂ ಇಡುವ ಚಟವಿದೆ. ಇದು ಸಾಮಾನ್ಯವಾಗಿ ಒಕ್ಕೂಟ ಸರಕಾರದ ಪಕ್ಷವು ಅಧಿಕಾರದಲ್ಲಿಲ್ಲದ ರಾಜ್ಯಗಳಲ್ಲೇ ನಡೆಯುತ್ತದೆ. ಒಂದು ವೇಳೆ ತಿರಸ್ಕರಿಸಿ ಮರಳಿಸಿದರೆ ಚುನಾಯಿತ ಸರಕಾರವು ತಿದ್ದುಪಡಿಯೊಂದಿಗೆ ಅಥವಾ ಇದ್ದಂತೆಯೇ ಪುನಃ ಕಳುಹಿಸಿದರೆ ರಾಜ್ಯಪಾಲರು ಒಪ್ಪಲೇಬೇಕೆಂದು ಸಂವಿಧಾನ ಹೇಳುತ್ತದೆ. ಇದನ್ನು ತಪ್ಪಿಸಲೋಸುಗ ರಾಜ್ಯಪಾಲರು ಮಸೂದೆಯನ್ನು ರಾಷ್ಟ್ರಪತಿಗಳಿಗೆ ಕಳುಹಿಸುವ ತಂತ್ರವನ್ನು ಹೂಡುತ್ತಾರೆ. ಅವರು ಮರಳಿಸಿದರೆ ಅದನ್ನು ಮತ್ತೆ ಪರಿಶೀಲನೆಗೆ ಒಡ್ಡಬಹುದು. ಈ ಸಂದರ್ಭಗಳನ್ನು ಸಂವಿಧಾನದ 200 ಮತ್ತು 201ರ ಅನುಚ್ಛೇದಗಳಲ್ಲಿ ವಿವರಿಸಲಾಗಿದೆ. ಈ ವಿವರಗಳು ಈಗಾಗಲೇ ಮಾಧ್ಯಮಗಳಲ್ಲಿ ಬಹಿರಂಗಗೊಂಡಿರುವುದರಿಂದ ಇಲ್ಲಿ ಅಪ್ರಸ್ತುತ.

ತಮಿಳುನಾಡಿನ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು ಈ ಎರಡೂ ಅನುಚ್ಛೇದಗಳನ್ನು ವಿಶ್ಲೇಷಿಸಿತು ಮತ್ತು ರಾಜ್ಯಪಾಲರಿಗೂ ರಾಷ್ಟ್ರಪತಿಗಳಿಗೂ ಸಮಯದ ಗಡುವನ್ನು ನೀಡಿತು. ಅಲ್ಲದೆ ಪ್ರಸ್ತುತ ಪ್ರಕರಣದಲ್ಲಿ ರಾಜ್ಯಪಾಲರು ಮಂಜೂರು ಮಾಡದ 10 ಮಸೂದೆಗಳನ್ನು ಸ್ವೀಕೃತವೆಂದು ತನಗಿರುವ ಸಂವಿಧಾನದ 142ನೇ ಅನುಚ್ಛೇದದ ಅಧಿಕಾರವನ್ನು ಬಳಸಿಕೊಂಡು ಆದೇಶಿಸಿತು. ಇದರಿಂದಾಗಿ ಸ್ವತಂತ್ರ ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ರಾಜ್ಯಪಾಲರ ಅನುಮತಿಯಿಲ್ಲದೆ ನ್ಯಾಯಾಲಯದ ಮೂಲಕ ಮಸೂದೆಗಳು ಜಾರಿಗೆ ಬಂದವು. ಒಂದರ್ಥದಲ್ಲಿ ಸರ್ವೋಚ್ಚ ನ್ಯಾಯಾಲಯವು ತಮಿಳುನಾಡಿನ ರಾಜ್ಯಪಾಲರ ನಿರ್ಣಯವನ್ನು ಖಂಡಿಸಿದ್ದು ಮತ್ತು ಅನೂರ್ಜಿತಗೊಳಿಸಿದ್ದು ಮಾತ್ರವಲ್ಲ, ಅಂತಹ ದುರ್ವರ್ತನೆಗೆ ಸಂಕೇತಾರ್ಥದ ಕಪಾಳಮೋಕ್ಷ ಮಾಡಿತು.

ಒಕ್ಕೂಟ ಸರಕಾರವು ತನ್ನ ಪಕ್ಷ ಅಧಿಕಾರದಲ್ಲಿಲ್ಲದ ರಾಜ್ಯಗಳಿಗೆ ಕಳುಹಿಸುವುದೇ ಇಂತಹ ಹೊಣೆಗೇಡಿ ಅನರ್ಥಕೋರ ರಾಜ್ಯಪಾಲರನ್ನು. ಅವರು ಒಕ್ಕೂಟ ಸರಕಾರದ ಪರವಾಗಿರಲಿ; ಆದರೆ ತನ್ನ ವೈಯಕ್ತಿಕ ಮಾನವನ್ನು ಹರಾಜುಹಾಕುವ ಕೆಲಸಮಾಡಬಾರದು. ವಿಶೇಷ ಸಂದರ್ಭದ ಹೊರತಾಗಿ ತಮ್ಮ ಅನುಮತಿ ಅಥವಾ ಒಪ್ಪಿಗೆಯು ಯಾಂತ್ರಿಕ ಮತ್ತು ಔಪಚಾರಿಕವೆಂದು ಅವರು ತಿಳಿಯಬೇಕು. ವಿಳಂಬವೇ ಸೂತ್ರಸಾಧನವಾದಾಗ ರಾಜ್ಯ ಸರಕಾರಗಳು ಜಗಳವಾಡಬೇಕಾದ ಸಂದರ್ಭವನ್ನು ರಾಜ್ಯಪಾಲರು ಸೃಷ್ಟಿಸಿದಂತಾಗುತ್ತದೆ. ತಮಿಳುನಾಡಿನಲ್ಲಿ ನಡೆದದ್ದು ಇದೇ. ಈಗ ಕೇರಳದಲ್ಲಿ ನಡೆದದ್ದೂ ಇದೇ. (ಕೇರಳದ ಪ್ರಕರಣವು ಸರ್ವೋಚ್ಚ ನ್ಯಾಯಾಲಯದಲ್ಲಿದೆ. ಆದ್ದರಿಂದ ಆ ಬಗ್ಗೆ ಚರ್ಚೆ ಬೇಡ.)

ಒಕ್ಕೂಟ ಸರಕಾರವು ಈ ನಿಧಾನಗತಿಯ ತಂತ್ರದ ಹಿಂದಿದೆಯೆಂಬುದು ಯಾರಿಗೂ ಅರ್ಥವಾಗುತ್ತದೆ. ಒಂದು ಪ್ರಕರಣದಲ್ಲೇ ಇದು ವೇದ್ಯವಾಗುತ್ತದೆ. ಈಚೆಗೆ ವಕ್ಫ್ ತಿದ್ದುಪಡಿ ಮಸೂದೆಯು ಸಂಸತ್ತಿನ ಉಭಯ ಸದನಗಳಲ್ಲಿ ಸ್ವೀಕೃತವಾಯಿತು. ದೇಶಾದ್ಯಂತ ಸದ್ದು ಗದ್ದಲ ಮಾಡಿದ ಈ ಮಸೂದೆಯ ಕುರಿತು ಸಂಸತ್ತಿನಲ್ಲೂ ಬಾರೀ ಚರ್ಚೆಯೇ ನಡೆಯಿತು. ಬಹಳ ಸೂಕ್ಷ್ಮ ಪರಿಣಾಮವನ್ನು ಹೊಂದಿದ ಈ ಮಸೂದೆಯನ್ನು ರಾಷ್ಟ್ರಪತಿಗಳ ಅಂಕಿತಕ್ಕೆ ಕಳುಹಿಸಿದ ತಕ್ಷಣವೇ ಅವರು ಅನುಮತಿಯ ಸಹಿ ಗುಜರಾಯಿಸಿ ಮರಳಿಸಿದರು. ಪತ್ರಿಕೆ ಓದುವ, ಸಾಮಾಜಿಕ ಜಾಲತಾಣ ಮತ್ತು ಒಟ್ಟಾರೆ ಮಾಧ್ಯಮ ಮತ್ತು ಸರಕಾರದ ಓಡಾಟವನ್ನು ಗಮನಿಸುವ ಯಾವನೇ ರಾಷ್ಟ್ರಪತಿಯಾಗಲೀ ಈ ಕುರಿತು ಸಂವಿಧಾನತಜ್ಞರನ್ನು ಸಮಾಲೋಚಿಸಬಹುದಿತ್ತು ಅಥವಾ ಸರ್ವೋಚ್ಚ ನ್ಯಾಯಾಲಯಕ್ಕೆ ಅದನ್ನು ಅಭಿಪ್ರಾಯಕ್ಕಾಗಿ ಕಳುಹಿಸಬಹುದಿತ್ತು. ಆದರೆ ರಾಷ್ಟ್ರಪತಿಗಳು ಇದೊಂದು ಸಂಬಳದ ಬಿಲ್ಲೆಂಬ ರೀತಿಯಲ್ಲಿ ಸಹಿಹಾಕಿದರು. ಇದು ಇಷ್ಟು ವೇಗವಾಗಿ ನಡೆಯಬೇಕಾದರೆ ರಾಜ್ಯವೊಂದರ ಮಸೂದೆಗಳನ್ನು ವರ್ಷಾನುಗಟ್ಟಲೆ ಕಾದಿರಿಸುವ ಹುನ್ನಾರದ ಗುಣ ಯಾವ ಮಟ್ಟದ್ದಿರಬಹುದು?

ಈಗ ಒಕ್ಕೂಟ ಸರಕಾರ ಕೆರಳಿದೆ. ಹಾಗೆಂದು ಅಧಿಕೃತವಾಗಿ ಹೇಳಲಾರದ ಸ್ಥಿತಿಯಲ್ಲಿದೆ. ಆದ್ದರಿಂದ ತನ್ನ ಮಾಮೂಲು ರೀತಿಯ ಹಠಸಾಧನೆಯ ತಂತ್ರಗಳಂತೆ ಕೆಲವು ಮಂದಿಗಳ ಮೂಲಕವಾಗಿ ತನ್ನ ವಿಕಾರ ಸಂದೇಶಗಳನ್ನು ಪ್ರಕಟಪಡಿಸಿದೆ. ರೂಢಿಗತ ಸಿಪಾಯಿಯಂತೆ ವರ್ತಿಸುವ ಉಪರಾಷ್ಟ್ರಪತಿಗಳು ಈಗಾಗಲೇ ಈ ತೀರ್ಪು ರಾಷ್ಟ್ರಪತಿಗಳ ಅನುಮತಿಗೂ ಸಮಯದ ಗಡುವು ವಿಧಿಸುವ ಮೂಲಕ ಸಂವಿಧಾನ ವಿರೋಧವೆಂದು ಹೇಳಿದ್ದಾರೆ. ಅವರ ಪ್ರಕಾರ ಸಂವಿಧಾನವು ಪರಮೋಚ್ಚವಲ್ಲ; ಸಂಸತ್ತು ಪರಮೋಚ್ಚ. ಸಂಸತ್ತು ಅಂಗೀಕರಿಸಿದ ಮಸೂದೆಗಳನ್ನು ನ್ಯಾಯಾಂಗವು ಪ್ರಶ್ನಿಸಲೇಬಾರದೆಂಬ ಹಂತಕ್ಕೆ ಅವರು ತಲುಪಿದ್ದಾರೆ. ಅವರು ಹೇಳಿದ ಮಾತುಗಳು ಸರಿಯೂ ಅಲ್ಲ, ಅವರ ಹುದ್ದೆಗೆ ಗೌರವ ತರುವಂಥದ್ದೂ ಅಲ್ಲ. ಅನೇಕ ವರ್ಷಗಳ ಕಾಲ ನ್ಯಾಯವಾದಿಯಾಗಿದ್ದ ಅವರು ಅದನ್ನು ತನ್ನ ಪೂರ್ವಾಶ್ರಮವೆಂಬುದನ್ನು ಮರೆತು ತನ್ನ ರಾಜ್ಯಪಾಲಹುದ್ದೆಯಡಿ ತನ್ನ ಸಹವ್ಯಸನಿಯಾಗಿದ್ದ ತಮಿಳುನಾಡಿನ ರಾಜ್ಯಪಾಲರಿಗಾದ ಅವಮಾನಕ್ಕಾಗಿ ಆತಂಕಪಟ್ಟಿದ್ದಾರೆ. ಆದರೆ ಅದನ್ನು ಹೆಚ್ಚು ಹೇಳುವಂತಿಲ್ಲ; ಆದ್ದರಿಂದ ರಾಷ್ಟ್ರಪತಿಗಳ ಹೆಗಲ ಮೇಲೆ ತನ್ನ ಬಂದೂಕನ್ನು ಸರ್ವೋಚ್ಚ ನ್ಯಾಯಾಲಯದೆಡೆಗೆ ಗುರಿಯಿರಿಸಿದ್ದಾರೆ. ಅದನ್ನು ಮತ್ತೆ ಮತ್ತೆ ಹೇಳುತ್ತಿದ್ದಾರೆ. ನೇತ್ಯಾತ್ಮಕ ಮಾತ್ರವಲ್ಲ, ಅಪಾಯಕಾರೀ, ವಿನಾಶಕಾರೀ ನಡೆ. ಇದೊಂದು ವೈಚಾರಿಕ ಧೂರ್ತತನ ಮಾತ್ರವಲ್ಲ ಅಧಿಕಾರಮೂಲ ಗೂಂಡಾಗಿರಿ.

ಶಶಿಕಾಂತ ದುಬೆಯೆಂಬ ರಾಜಕಾರಣಿ (ಇವರೂ ಒಕ್ಕೂಟ ಸರಕಾರದ ಆಡಳಿತ ಪಕ್ಷದವರು) ಈಗಾಗಲೇ ಭಾರತದ ಸರ್ವೋಚ್ಚ ನ್ಯಾಯಾಧೀಶರನ್ನು ಟೀಕಿಸುವ ತಾನು ಪ್ರತಿನಿಧಿಸುವ ಸಿದ್ಧಾಂತವೆಂತಹುದೆಂದು ಪ್ರಚುರಪಡಿಸಿದ್ದಾನೆ. ಒಂದು ಕೈಯಲ್ಲಿ ಮಗುವನ್ನು ಚಿವುಟಿ, ಇನ್ನೊಂದು ಕೈಯಲ್ಲಿ ಸಮಾಧಾನಪಡಿಸುವ ಒಕ್ಕೂಟ ಸರಕಾರದ ಆಡಳಿತ ಪಕ್ಷವು ಇದು ಅವರ ವೈಯಕ್ತಿಕ ಅಭಿಪ್ರಾಯವೆಂದೂ, ತಾನು ಇದರಿಂದ ಪ್ರತ್ಯೇಕವಾಗಿದ್ದೇನೆಂದೂ ಹೇಳಿ ಕೈತೊಳೆದುಕೊಂಡಿದೆ. ಇಂತಹ ಬೇಜವಾಬ್ದಾರಿ ನಡತೆಗಳು ದೇಶಕ್ಕಾಗಲೀ, ಜನರಿಗಾಗಲೀ ಒಳ್ಳೆಯದನ್ನು ಮಾಡುತ್ತದೆಂದು ತಿಳಿದರೆ ಅದಕ್ಕಿಂತ ಹೆಚ್ಚು ಮೂರ್ಖತನ ಬೇರೆ ಇಲ್ಲ. ಆದರೆ ಅಧಿಕಾರವೇ ಮುಖ್ಯವಾದ ಸಿದ್ಧಾಂತದ ನಡುವೆ ಇದಕ್ಕೆ ಉಳಿವು ಎಲ್ಲಿದೆ?

ಇಂತಹ ರಾಜಕಾರಣದಲ್ಲಿ ಹೆಜ್ಜೆ ಹಿಂದಿಡುವಾಗಲೂ ವಿನಾಶಕ್ಕೆಡೆಮಾಡಿ ಕೊಡುವ ತಿರುಗಾಮುರುಗಾ ನಡೆಯೇ ಆಧಾರವಾಗಿ ಭೂತಗಳ, ದೆವ್ವಗಳ ಆಡಳಿತ ಅನಿವಾರ್ಯ. ಈ ಕಾರಣಕ್ಕೇ ಸಂವಿಧಾನ ನಿರ್ಮಾತೃಗಳು ರಾಜ್ಯನೀತಿಯ ನಿರ್ದೇಶಕ ತತ್ವಗಳ (ಅನುಚ್ಛೇದ 36-51) ಪೈಕಿ ಅನುಚ್ಛೇದ 50ರಡಿ ರಾಜ್ಯದ ಲೋಕಸೇವೆಗಳಲ್ಲಿ, ನ್ಯಾಯಾಂಗವನ್ನು ಕಾರ್ಯಾಂಗದಿಂದ ಪ್ರತ್ಯೇಕಿಸಲು ರಾಜ್ಯವು ಕ್ರಮಕೈಗೊಳ್ಳತಕ್ಕುದು ಅಂದರೆ ನ್ಯಾಯಾಂಗವನ್ನು ಇತರ ಸಾರ್ವಜನಿಕ/ಲೋಕ ಸೇವೆಗಳಿಂದ ಪ್ರತ್ಯೇಕವಾಗಿಸಲು ನಿರ್ದೇಶಿಸಿದರು. ಆದರೆ ಅದನ್ನು ಪಾಲಿಸುವ ಬಿಡಿ, ಕೇಳುವ ಯೋಗ್ಯತೆಯ ಆಳ್ವಿಕೆಯೂ ಈ ದೇಶದಲ್ಲಿ ಇಲ್ಲದಿರುವುದು ನಮ್ಮ ದುರಂತ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಬಾಲಸುಬ್ರಮಣ್ಯ ಕಂಜರ್ಪಣೆ

contributor

Similar News