(ಮಹಾ)ಕುಂಭ ತುಂಬುವ ವರೆಗೆ... ಒಂದು ಹಗುರು ಕಥನ

ಪಾಪಿಗಳಿಗಂತೂ ಇದೊಂದು ಸುಯೋಗ. ಅಜಮಿಳನನ್ನು ಯಮದೂತರು ಎಳೆವಾಗ ಆತ ಕೂಗಿದ ‘ನಾರಾಯಣಾ’ ಎಂಬ ಪದವೇ ಅವನ ಎಲ್ಲ ಲುಚ್ಛ-ಬಾಳನ್ನು ಪಾವನಗೊಳಿಸಿ ಸ್ವರ್ಗಕ್ಕೆ ಉಚಿತ ವೀಸಾ ಪಡೆಯಲಿಲ್ಲವೇ? ನಮ್ಮ ಪುರಾಣಕಥೆಗಳನ್ನು ಕೇಳಿದ ಎಲ್ಲ ಪಾಪಿಗಳೂ ಒಮ್ಮೆ ಪ್ರಯಾಗಕ್ಕೆ ಹೋಗಿಬರುವುದು ಅಥವಾ ಕನಿಷ್ಠ ಹೋಗುವುದು ಅಗತ್ಯ ಅನ್ನಿಸಿತು. ನಮ್ಮ ಜನಪ್ರತಿನಿಧಿಗಳಿಗೆ ಅವರ ರಾಜಕೀಯದ ಮಾಲಿನ್ಯವನ್ನು ಗಂಗೆಯಲ್ಲಿ ತೇಲಿಬಿಡಲು ಇದೊಂದು ಸದವಕಾಶ. ಮೊನ್ನೆ ಅಯೋಧ್ಯೆಯ ಪ್ರಧಾನ ಅರ್ಚಕರನ್ನು ಸರಯೂ ನದಿಯಲ್ಲಿ ಶ್ರೀರಾಮಚಂದ್ರನಂತೆ ಲೀನವಾಗಲು ಬಿಟ್ಟರಂತೆ. ವೈಕುಂಠಕ್ಕೆ ದಾರಿ ಯಾವುದಯ್ಯಾ ಎಂದು ಕೇಳುವವರಿಗೆ ಇದಕ್ಕಿಂತ ಉತ್ತಮ ಮಾರ್ಗದರ್ಶನ ಸಿಕ್ಕದು.;

Update: 2025-02-27 11:58 IST
(ಮಹಾ)ಕುಂಭ ತುಂಬುವ ವರೆಗೆ... ಒಂದು ಹಗುರು ಕಥನ
  • whatsapp icon

1972ರಲ್ಲಿ ಗೋಪಾಲಕೃಷ್ಣ ಅಡಿಗರು ಬರೆದ ‘ದೆಹಲಿಯಲ್ಲಿ’ ಎಂಬ ಕವನದಲ್ಲಿ ಈ ಸಾಲುಗಳಿವೆ: ‘‘ಕಂಭವೊಡೆಯುವ ವರೆಗೆ, ಕುಂಭ ತುಂಬುವ ವರೆಗೆ, ಲೆಕ್ಕ ನೂರಕ್ಕೆ ಭರ್ತಿಯಾಗುವನಕ, ಬಿರ್ನಮ್ ಅರಣ್ಯವೇ ಎದ್ದು ಹೊರಡುವ ತನಕ, ಮೋಹಿನಿಯ ಕೈ ತಲೆಯ ಮುಟ್ಟುವನಕ’’. ನನ್ನನ್ನು ಕೆಲವರು ಅಡಿಗ ಪಕ್ಷಪಾತಿಯೆನ್ನುವುದುಂಟು. ಹಾಗೇನಿಲ್ಲ. ಅವರ ಕಾವ್ಯದ ಆಕರ್ಷಣೆ ಮತ್ತು ಅವರ ಕಾವ್ಯಜೀವನದ ಸಿದ್ಧಾಂತದ ಕುರಿತು ನನ್ನ ಭಿನ್ನಾಭಿಪ್ರಾಯಗಳ ಹೊರತೂ ವಿವಿಧ ಸಂದರ್ಭಗಳಲ್ಲಿ ಅವರ ಕಾವ್ಯ ಉಲ್ಲೇಖಾರ್ಹ. ಈ ಕವನವನ್ನು ಇಂದಿರಾಗಾಂಧಿಯ ತುರ್ತುಪರಿಸ್ಥಿತಿಯ ಬಗ್ಗೆ ಬರೆದದ್ದೆಂದು ಅನೇಕರು ಹೇಳುವುದುಂಟು. ಅದಕ್ಕಾಗಿಯೇ ಕವನದ ಇಸವಿಯನ್ನು ಉಲ್ಲೇಖಿಸಿದ್ದು. (ಜಿ. ರಾಜಶೇಖರ ‘‘ಅವರ ಕಾವ್ಯದ ಬಗ್ಗೆ ನನಗೆ ಆಕರ್ಷಣೆ ಮತ್ತು ವಿರೋಧ ಎರಡೂ ಇರುವುದರಿಂದ..’’ ‘‘ಅವರ ಇತ್ತೀಚೆಗಿನ ನಿಲುವುಗಳ ಬಗ್ಗೆ ನನಗೆ ಸಹಾನುಭೂತಿಯಿಲ್ಲ’’ ಎಂದಿದ್ದಾರೆ.) ಹೆಚ್ಚಿನ ವಿವರಗಳು ಇಲ್ಲಿ ಅಪ್ರಸ್ತುತ. ಏಕೆಂದರೆ ಈ ಉಲ್ಲೇಖ ಅನುಷಂಗಿಕ ಮಾತ್ರ.

ಮೇಲಿನ ಉಲ್ಲೇಖ ನೆನಪಾದದ್ದು ಇದೀಗ ನಡೆಯುತ್ತಿರುವ ಪ್ರಯಾಗದ ಕುಂಭಮೇಳದ ಸಂದರ್ಭದಲ್ಲಿ. ಕೋಟ್ಯಂತರ ಜನರು ಭಾಗವಹಿಸುವ ಮೇಳ ಇದೆಂದು ಜಾಹೀರಾತಾಗುತ್ತಿದೆ. ಆ ಸಂಖ್ಯೆಯ ಹಾಗೆ ಇಲ್ಲಿನ ಹಾಜರಾತಿಯ ಕುರಿತು ಕ್ಷಣಕ್ಷಣದ ವರದಿಯಲ್ಲೂ ಸಂಖ್ಯೆ ಹೆಚ್ಚುತ್ತಲೇ ಇದೆ. ಈ ದೇಶದಲ್ಲಿ 145 ಕೋಟಿ ಜನರಿರುವಾಗ ಇಂತಹ ಸಂದರ್ಭದಲ್ಲಿ ಭಾಗವಹಿಸುವುದೇ ಕಾಯಕವೆಂದು ತಿಳಿಯುವ ಜನರೇ ಹೆಚ್ಚು. ಹಣವಂತರು ಬಹುಮುಖ್ಯರಾಗಿ, ಗಣ್ಯರಾಗಿ ಸುಖಪ್ರವಾಸವನ್ನು ಪೂರೈಸಿ ಬಂದರೆ, ಮಧ್ಯಮವರ್ಗ ನಾವೂ ಇದ್ದೇವೆ ಎಂಬ ಠೀವಿಯಲ್ಲಿ ಬಳಲಿಕೊಂಡಾದರೂ ಹೋಗಿಬರುವುದುಂಟು. ಇನ್ನು ಬಡವರು ಇಲ್ಲದ ದುಡ್ಡನ್ನು ಚೆಲ್ಲಿ ಹೇಗೆ-ಹೇಗೋ ಏಗಿ, ಪ್ರವಾಸದ ಪ್ರಯಾಸವನ್ನು ನುಂಗಿ, ಗುಂಪಿನಲ್ಲಿ ಗೋವಿಂದ ಎಂದು ಸಾರ್ಥಕತೆಯನ್ನು ಪಡೆದು ಬರುವುದು ಸಾಮಾನ್ಯ.

ಇತರ ದಿನಗಳಲ್ಲಿ ಮನೆಯ ಮುಂದೆ ಕೈಚಾಚಿ ತಾವು ಶಬರಿಮಲೆಗೋ, ತಿರುಪತಿಗೋ, ಕಾಶಿಗೋ, ಕೊನೆಗೆ ಧರ್ಮಸ್ಥಳ-ಉಡಪಿ- ಸುಬ್ರಮಣ್ಯಕ್ಕೋ ಹೋಗಬೇಕೆಂದು ಧನಸಹಾಯ ಕೇಳುವವರಿದ್ದಾರೆ. ಇಷ್ಟು ಕಷ್ಟದಲ್ಲಿ ಯಾಕೆ ಹೋಗುತ್ತೀರಿ ಎಂದು ಅವರನ್ನು ಬದುಕಿನ ವಾಸ್ತವತೆಗೆ ಒಲಿಸಲು ಪ್ರಯತ್ನಿಸಿದರೆ ಇಂತಹ ಮಂದಿ ಸುತಾರಾಂ ಒಪ್ಪಿಕೊಳ್ಳುವುದಿಲ್ಲ; ಕೆಲವರು ಸಿಟ್ಟಿನಿಂದ ದುಡ್ಡು ಕೊಡುವುದಾದರೆ ಕೊಡಿ ಎಂದು ಕೂಗಾಡುವವರೂ ಇದ್ದಾರೆ. 1990ರ ದಶಕದಲ್ಲಿ ಅಯೋಧ್ಯೆಗೆ ಕರಸೇವೆಗೆ ಹೋದ ನನ್ನೂರಿನ ಒಬ್ಬ ಮರಳಲು ಹಿಂದೇಟು ಹಾಕಿದ. ವಿಚಾರಿಸಿದಾಗ ಊರಿನಲ್ಲಿ ಅವನ ವಿರುದ್ಧ ಯಾವುದೋ ಕ್ರಿಮಿನಲ್ ಪ್ರಕರಣದಲ್ಲಿ ವಾರಂಟ್ ಆಗಿದೆಯೆಂದು ಗೊತ್ತಾಯಿತು. ಅವನಿಗೆ ರಕ್ಷಣೆಯ ಭರವಸೆ ನೀಡಿದ ಬಳಿಕವೇ ಅವನು ಮರಳಿದ್ದು. ದೇವರು, ಧರ್ಮ, ಮತ, ಕ್ಷೇತ್ರ ಮುಂತಾದವು ಮನುಷ್ಯನ ಬದುಕಿನಲ್ಲಿ ಅರ್ಥಹೀನ/ನಿರರ್ಥಕವಾದರೂ, ಎಷ್ಟು ದೊಡ್ಡ ಪಾತ್ರವನ್ನು ನಿರ್ವಹಿಸುತ್ತವೆಯೆಂದು ಗೊತ್ತಾಗುವುದು ಇಂತಹ ಸಂದರ್ಭದಲ್ಲೇ.

ಜಗನ್ನಾಥ ರಥಯಾತ್ರೆಯಲ್ಲಿ ಆಗುವುದಕ್ಕಿಂತಲೂ ಹೆಚ್ಚು ನಿಬಿಡತೆಯ ಜನಜಂಗುಳಿಯಿಂದಾಗಿ ಆಗಬಾರದ್ದು ಆದರೆ ಅದನ್ನು ಮಾಮೂಲು ಎಂದೇ ಜನರು ಭಾವಿಸುತ್ತಾರೆ. ಇದೊಂದು ಧಾರ್ಮಿಕತೆಯ ಹೆಸರಿನ ಭಾವನಾತ್ಮಕ ಕಾರ್ಯಕ್ರಮವಾದ್ದರಿಂದ ಅಲ್ಲಿ ಆಗುವ ಎಲ್ಲ ಒಳಿತು ಕೆಡುಕುಗಳೂ ಭಗವನ್ನಿಯಾಮಕವೆಂದು ತಿಳಿದು ಸ್ವೀಕರಿಸುವವರೇ ಜಾಸ್ತಿ. ಪ್ರಯಾಗದ ಈ ಕುಂಭಮೇಳಕ್ಕೆ ಉತ್ತರ ಪ್ರದೇಶ ಸರಕಾರ ಮತ್ತು ಅದರ ಬೆನ್ನಿಗೆ ನಿಂತಿರುವ ಕೇಂದ್ರ ಸರಕಾರ, ಧಾರ್ಮಿಕ ಕಾರಣಗಳಿಗಾಗಿ ಅದ್ದೂರಿಯಾಗಿ ನಡೆಸುತ್ತಿದೆಯೆಂದು ತಿಳಿಯುವುದು ತಪ್ಪಾದೀತು. ಇದರಲ್ಲಿ ರಾಜಕೀಯ ಲಾಭ ಪಡೆಯುವ ಭಾರೀ ಹುನ್ನಾರವಿದೆ. ಮುಗ್ಧ ಮತ್ತು ಅಜ್ಞಾನಿ ಜನರಿಗೆ ಧಾರ್ಮಿಕ ಕಾರಣಗಳು ಪೂಜಾರ್ಹ. ಧರ್ಮದ ಹೆಸರಿನಲ್ಲಿ ಮತೀಯ ರಾಜಕಾರಣವೇ ವೈಭವದಿಂದ ಮೆರವಣಿಗೆ ಹೋಗುವ ಈ ಕಾಲದಲ್ಲಿ ಸಂಸ್ಕೃತಿಯ ಹೆಸರಿನಲ್ಲಿ ಮತಧರ್ಮಗಳು ನೆಲೆಗೊಳ್ಳುವುದು ವಿಚಿತ್ರವೇನಲ್ಲ. ಆದರೂ ಜನರು ಜಾತಿ-ಮತ ಭಿನ್ನತೆಯಿಲ್ಲದೆ ಇಂತಹ ಕಾರ್ಯಕ್ರಮಗಳನ್ನು ಗೌರವಿಸುತ್ತಾರೆ ಹಾಗೂ ಬೆಂಬಲಿಸುತ್ತಾರೆ.

ಈ ಬಾರಿಯ ಕುಂಭಮೇಳ ರಾಜಕೀಯ ಅಥವಾ ಮತೀಯ ಕಾರಣಗಳಿಗಾಗಿ ವಿವಾದಾಸ್ಪದವಾಗಿಲ್ಲ. ಬದಲಿಗೆ ತನ್ನ ಅವ್ಯವಸ್ಥೆ ಮತ್ತು ಅದರ ಪರಿಣಾಮವಾದ ಅಪಘಾತಗಳು, ಸಾವು-ನೋವು ಮುಂತಾದವುಗಳಿಂದಾಗಿ ಜನಜನಿತವಾಯಿತು. ಬೆಂಕಿ ಮತ್ತು ನೀರು ಎಷ್ಟು ಅನಿವಾರ್ಯವೋ ಅಷ್ಟೇ ಅಪಾಯಕಾರಿ. ಪ್ರಯಾಗದ ಮೇಳದ ಸ್ಥಳದಲ್ಲಿ ಅಗ್ನಿ ಅನಾಹುತವಾಯಿತು. ನೂಕುನುಗ್ಗಲಿನಲ್ಲಿ ಜನ ಸಾವನ್ನಪ್ಪಿದರು; ನೋವುಂಡರು. ಅಲ್ಲಿಗೆ ಉತ್ತರಭಾರತದಿಂದಲೇ ಹೋಗುತ್ತಿದ್ದ ರೈಲು ಪ್ರಯಾಣಿಕರೂ ನೂಕುನುಗ್ಗಲನ್ನುಂಡರು. ಹತಾಶರಾದವರು ಹಿಂಸೆಗೆ ತೊಡಗಿದರು. ಹೋಗುವವರು, ಬರುವವರು ರಸ್ತೆ ಅಪಘಾತಗಳಲ್ಲಿ ಸಾವು-ನೋವಿಗೆ ಬಲಿಯಾದದ್ದೂ ಇದೆ. ಅದಕ್ಕೆ ಮಹಾಕುಂಭ ಹೊಣೆಯಾಗಲಾರದು. ಅದು ನಿತ್ಯದ ಸುದ್ದಿ. ಇನ್ನು ಚಿಕ್ಕ ಪುಟ್ಟ ಘಟನೆಗಳೆಂಬಂತೆ ಕಳವು, ಹೊಡೆದಾಟ, ಮೋಸ ಇವು ಸಹಜವಾಗಿಯೇ ಎಲ್ಲ ಜನಸಂದಣಿಯಲ್ಲಿರುವಂತೆ ಅಲ್ಲೂ ಇರಬೇಕಾದ್ದು ನ್ಯಾಯವೇ. ಇಲ್ಲವಾದರೆ ಭಕ್ತಿಗೂ ಧರ್ಮಕ್ಕೂ ಬೆಲೆಯೆಲ್ಲಿ?

ಆದರೆ ಈಗಾಗಲೇ ದೇಶದ ನದಿಗಳು ಕಲುಷಿತಗೊಂಡಿವೆ ಎಂಬ ಕೂಗು ದೇಶಾದ್ಯಂತ ಕೇಳುತ್ತಿತ್ತು. ಅದು ಪಕ್ಷ-ಧರ್ಮ ರಹಿತವಾದ ಕೂಗು. ಇವೆಲ್ಲದರೊಂದಿಗೆ ಕೋಟ್ಯಾನುಗಟ್ಟಲೆ ರೂಪಾಯಿ ವಿನಿಯೋಗಿಸಿದ ಯೋಜನೆಯ ‘ನಮಾಮಿ ಗಂಗೆ’ ಮಲಿನಳಾದ ಬಗ್ಗೆ ಅನೇಕರು ತಮ್ಮ ಆತಂಕವನ್ನು ಹೇಳಿದರು. ಆದರೆ ಈ ಸತ್ಯವನ್ನು ದೃಶ್ಯ ಗಂಗಾ ಮತ್ತು ಯಮುನಾ ಹಾಗೂ ಅದೃಶ್ಯ ಸರಸ್ವತಿ ಮೇಳೈಸುವ ಪ್ರಯಾಗದ ಮಹಾಕುಂಭಕ್ಕೆ ಅನ್ವಯಿಸಲು ಜನರು ಸಿದ್ಧರಿಲ್ಲ. ಭಕ್ತಿಯ ಪರಾಕಾಷ್ಠೆಯಲ್ಲಿರುವ ಜನರ ಉನ್ಮತ್ತತೆ ಮತ್ತು ಪರವಶತೆ ಇವನ್ನೆಲ್ಲ ಲೆಕ್ಕಿಸುವ ಮನಸ್ಥಿತಿಯಲ್ಲಿರಲಿಲ್ಲ. ಅದೆಲ್ಲ ಹಿಂದೂ ಧರ್ಮವನ್ನು ದ್ವೇಷಿಸುವವರು ಅಥವಾ ರಾಜಕೀಯವಾಗಿ ಭಾಜಪವನ್ನು ವಿರೋಧಿಸುವವರು ಮಾಡಿದ ಮಸಲತ್ತು ಎಂದು ಅಧಿಕಾರಸ್ಥರೂ ಅವರ ಅಪಾರ ಹಿಂಬಾಲಕ ಜನಸ್ತೋಮವೂ ಖಂಡಿಸಿತು. ನೀರಿನಲ್ಲಿ ತೇಲಿಹೋಗುವುದು ಎಂದೂ ಮಲಮಲಿನವಾಗಲು ಸಾಧ್ಯವಿಲ್ಲ; ಹರಿವ ನೀರು ಹಾಲುನೀರಿಗೆ ಸಮಾನ ಎಂಬ ಪಾರಂಪರಿಕ ನಂಬಿಕೆ ಇಲ್ಲೂ ಗೆದ್ದಿತು. ಗಂಗೆ ಬತ್ತುವುದಿಲ್ಲ. ಗಂಗೆ ನಿತ್ಯ ಶುದ್ಧಳು ಮತ್ತು ಶುಭ್ರಳು.

ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೆ ಯಾರೋ ದೂರಿತ್ತರು. ಅಥವಾ ಅದೇ ಸ್ವಯಿಚ್ಛೆಯಿಂದ ಈ ವಿಚಾರವನ್ನು ಗಮನಿಸಿತೋ ಏನೋ? ಮೂಲ ಮುಖ್ಯವಲ್ಲ. ವಾಸ್ತವದ ಕುರಿತು ವರದಿ ಕೇಳಿತು. ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯು ಬಹುಜನರ ನಂಬಿಕೆಗೆ ವಿರುದ್ಧವಾಗಿ ಗಂಗೆ ಮಲ-ಮೂತ್ರಗಳ ಕಾರಣ ಮಲಿನಗೊಂಡಿದೆಯೆಂಬ ಅಪಥ್ಯವರದಿಯನ್ನು ನೀಡಿತು. ಈ ಮಂಡಳಿ ಆಡಳಿತದ ಭಾಜಪದ ಪ್ರತಿನಿಧಿಯೇ. ಇದು ಎಷ್ಟೇ ಕಟ್ಟಿಕೊಂಡರೂ ಹೊರಬರುವ ಅಮೇಧ್ಯದಂತೆ ಬಹಿರಂಗವಾಯಿತು; ಮಾಧ್ಯಮಗಳು- ‘ಗೋದಿ’ (ಇದು ಹಿಂದೀ ಹೇರಿಕೆ ಯನ್ನು ವಿರೋಧಿಸುವ ನನ್ನ ಗೆಳೆಯರಿಗೆ ಹಿಡಿಸದಿದ್ದರೂ ಸದ್ಯ ಕನ್ನಡದಲ್ಲಿ ಇದಕ್ಕೆ ಪರ್ಯಾಯಪದವು ಸೃಷ್ಟಿಯಾಗುವ ವರೆಗೆ ಇದನ್ನೇ ಬಳಸಬೇಕಾಗಿದೆ!) ಮಾಧ್ಯಮವೂ ಸೇರಿದಂತೆ ಅನಿವಾರ್ಯವಾಗಿ ಇದನ್ನು ಪ್ರಕಟಿಸಿದವು.

ಈಗ ಇದಕ್ಕೆ ಪರಿಹಾರ ಸೂಚಿಸುವ ಅಥವಾ ಇದನ್ನು ನಿಯಂತ್ರಿಸುವ, ಬದಲು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಇದೆಲ್ಲ ಸುಳ್ಳು ಸುದ್ದಿ ಎಂದು ಹೇಳಿ ಗಾಯಕ್ಕೆ ಈ ಮಲವನ್ನು ಮುಲಾಮಿನಂತೆ ಹಚ್ಚಿ ಅಭಿಮಾನಿಗಳನ್ನು ಸಂತೈಸಿದರು. ಅವರ ನ್ಯಾಯ, ತರ್ಕವೂ ಸರಿಯೇ. ಮೇಳ ಮುಗಿದ ಮೇಲೆ ಇವೆಲ್ಲ ಇರುವುದಿಲ್ಲ. ತತ್ಕಾಲಕ್ಕೆ ಇವನ್ನು ಸುಳ್ಳೆಂದು ಹೇಳದಿದ್ದರೆ ಹಾಕಿದ ಕೋಟ್ಯಂತರ ರೂಪಾಯಿಯ ಬಂಡವಾಳ ಗಂಗೆಯಲ್ಲಿ ಕೊಚ್ಚಿಹೋಗಬಹುದು. ಮತದಾರರ ಮೇಲಿನ ಬಂಡವಾಳವು ನಷ್ಟವಾಗಬಹುದು. ಹೀಗೆ ನೀರಿನಲ್ಲಿ ಹೋಮ ಮಾಡುವುದಕ್ಕೆ ಅವರಾಗಲೀ, ಕೇಂದ್ರ ಆಡಳಿತ ಸೂತ್ರವಾಗಲೀ ಸಿದ್ಧರಿಲ್ಲ. ಒಂದು ವೇಳೆ ಮಾಲಿನ್ಯವಿದ್ದರೂ ಅದನ್ನು ಮೀರಿದ ಪಾವನರಾಗಲು ಜನರು ಸಿದ್ಧರಿರುವಾಗ ಈ ಕೊಳಕು ಸುದ್ದಿಯೇಕೆ? ಕೆಸರಲ್ಲಿ ಹುಟ್ಟಿದ ಕಮಲವನ್ನು ಬಿಸಜನಾಭನಿಗರ್ಪಿಸುವುದಿಲ್ಲವೇ ಎಂಬುದು ಕಮಲಮುಖ-ಮುಖಿಯರ ಪಾಳಯದ ಸುತರ್ಕ.

ನಾನೂ ಇದೇ ಪ್ರಯಾಗದ ಸಂಗಮದಲ್ಲಿ ಕೆಲವು ದಶಕಗಳ ಹಿಂದೆ ಮಿಂದೆದ್ದವನು. ದೋಣಿಯಲ್ಲಿ ಹೋಗಿ ಪೂಜಾ ನಿರ್ಮಾಲ್ಯವನ್ನು ತೆಂಗಿನ ಕಾಯಿಯ ಸಹಿತ ನೀರಿಗೆ ಹಾಕಿ ಅರೆನಿಮಿಷದಲ್ಲಿ ಪುರೋಹಿತರ ಪೈಕಿ ಒಬ್ಬ ಹಾರಿ ಈಸಿ ಆ ತೆಂಗಿನಕಾಯಿಯನ್ನು ಹಿಡಿದು ತಂದು ಮುಂದಿನ ಪೂಜೆಗೆ ಅದನ್ನು ತೆಗೆದಿಟ್ಟದ್ದನ್ನು ನೋಡಿ ಪಾವನಗೊಂಡಿದ್ದೆ. ಇದನ್ನು ಜನರು ನಂಬಿದ ರೀತಿಯಲ್ಲಿ ಭಗವಂತನೇ ನುಡಿದನೆನ್ನಲಾದ ‘ಸರ್ವ ಧರ್ಮಾನ್ ಪರಿತ್ಯಜ್ಯ ಮಾಮೇಕಂ ಶರಣಂ ವ್ರಜ’ ನೀತಿಯಿತ್ತು. ಅಪ್ಪಟ ದೇಶಭಕ್ತರೊಬ್ಬರು ನನಗೆ ಸಾಂತ್ವನ ಹೇಳಿ ಗಂಗೆಯಲ್ಲಿ ಬಂದ ಎಲ್ಲವನ್ನೂ ದೇವರ ಪ್ರಸಾದವೆಂದು ಸ್ವೀಕರಿಸಬೇಕೆಂದರು. ಗಂಗಾಸ್ನಾನಂ ತುಂಗಾಪಾನಂ ಎಂದಿದ್ದಾರೆಯೇ ಹೊರತು ಗಂಗಾಪಾನಂ ಎಂದು ಹೇಳಿಲ್ಲ; ಮುಳುಗಿ ಎದ್ದರೆ ಸಾಕು; ಪಾಪಗಳೆಲ್ಲ ಪರಿಹಾರವಾಗುತ್ತವೆ; ಸಂಶಯವಿಡಬೇಡಿ; ಸಂಶಯಾತ್ಮಾ ವಿನಶ್ಯತಿ; ಸಂಶಯವಿದ್ದರೆ ಮನೆಗೆ ಬಂದು ಮತ್ತೊಮ್ಮೆ ಡೆಟಾಲ್ ಹಾಕಿ ಬೇಕಾದರೆ ಸ್ನಾನಮಾಡಿ; ಮತ್ತೂ ಸಂಶಯವಿದ್ದರೆ ಚರ್ಮರೋಗ ತಜ್ಞರನ್ನು ಭೇಟಿಯಾಗಿ.. ಹೀಗೆಲ್ಲ ಹೇಳಿದರು. ನನಗೆ ತಲೆ ಹಾಳಾದಂತಾಯಿತು. ‘ಭಕ್ತ ಕುಂಬಾರ’ ಸಿನೆಮಾದ ‘ಮಾನವಾ ಮೂಳೆ ಮಾಂಸದ ತಡಿಕೆ, ಇದರ ಮೇಲಿದೆ ತೊಗಲಿನ ಹೊದಿಕೆ’ ಹಾಡು ನೆನಪಾಯಿತು. ಪ್ರಾಯಃ ಈ ಕಾಯಿಲೆಗೆ ಚರ್ಮರೋಗ ತಜ್ಞರಿಂದ ಪ್ರಯೋಜನ, ಪರಿಹಾರ ಸಿಗಲಿಕ್ಕಿಲ್ಲವೆಂದುಕೊಂಡು ತೊಗಲುತಜ್ಞರನ್ನು ನೆನಪುಮಾಡಿಕೊಂಡೆ. ಹಾಗೆಯೇ ಹಗುರು ಲಹರಿಯ ಮಾಲಿನ್ಯ ಮನಸ್ಸಿನಲ್ಲಿ ತೇಲಿಬಂದವು. ಅವನ್ನೂ ಹಂಚಿಕೊಳ್ಳಬೇಕೆಂದನ್ನಿಸಿದೆ.

ಈಗ ಈ ಮೇಳದಿಂದ ಮರಳುವ ವ್ಯಕ್ತಿಗಳಲ್ಲಿ ಚರ್ಮರೋಗದ ಸೋಂಕು ಕಂಡುಬರುತ್ತಿದೆಯೆಂದು ರಾಂಚಿಯ ಚರ್ಮರೋಗತಜ್ಞರು ಹೇಳಿದರೆಂದು ವರದಿಯಾಗಿದೆ. ತುರಿಕೆ ಮತ್ತು ಚರ್ಮದಲ್ಲಿ ಕೆಂಪು ಕಲೆ ಸೃಷ್ಟಿಯಾಗುವ ಲಕ್ಷಣಗಳಿಗೆ ಇದೇ ಕಾರಣವಿರಬಹುದೆಂಬುದು ಇನ್ನೂ ಸಾಬೀತಾಗಿಲ್ಲ. ಅಲ್ಲಿಯವರೆಗೆ ಹೀಗೆ ಹೇಳುವವರು ಧರ್ಮದ್ರೋಹಿಗಳೂ, ದೇಶದ್ರೋಹಿಗಳೂ ಆಗಿಯೇ ಉಳಿಯುತ್ತಾರೆ. ಸಾಬೀತಾದ ಮೇಲೆ? ಅದನ್ನು ನಂಬಬೇಕಾಗಿಲ್ಲ. ನಂಬಿಕೆಯ ಆಧಾರದಲ್ಲೇ ನ್ಯಾಯಾಲಯಗಳ ತೀರ್ಪೂ ಬರುತ್ತಿರುವಾಗ, ದೇಶದ ಪ್ರತಿಷ್ಠಿತ ವಿಜ್ಞಾನ ಸಂಸ್ಥೆಗಳಲ್ಲೂ ಪಾಪ-ಪುಣ್ಯದ, ಪುನರ್ಜನ್ಮದ, ಭೂತಸಂಚಾರದ ಸಂಶೋಧನೆಗಳು ಸರಕಾರದ ಕೃಪೆಗೆ ಪಾತ್ರವಾಗುವಾಗ ವಿಜ್ಞಾನಕ್ಕಿಂತ ಅಜ್ಞಾನವೇ ಮೇಲು. ಆದ್ದರಿಂದ ಈ ಬಗ್ಗೆ ಸ್ವಲ್ಪ ಹಾಸ್ಯ, ಸ್ವಲ್ಪ ವ್ಯಂಗ್ಯ, ಸ್ವಲ್ಪ ಹಗುರು ಧೋರಣೆಯೇ ಒಳ್ಳೆಯದು.

ಇಷ್ಟಕ್ಕೂ ಕುಂಭಯಾತ್ರೆ ಕಡ್ಡಾಯವೇನಲ್ಲ. ಇಷ್ಟವಾದರೆ ನಷ್ಟಮಾಡಿಕೊಂಡು ಹೋಗಿ; ನಿಮ್ಮ ಅಭೀಷ್ಟವು ನೆರವೇರಬಹುದು. ಪಾಪಿಗಳಿಗಂತೂ ಇದೊಂದು ಸುಯೋಗ. ಅಜಮಿಳನನ್ನು ಯಮದೂತರು ಎಳೆವಾಗ ಆತ ಕೂಗಿದ ‘ನಾರಾಯಣಾ’ ಎಂಬ ಪದವೇ ಅವನ ಎಲ್ಲ ಲುಚ್ಛ-ಬಾಳನ್ನು ಪಾವನಗೊಳಿಸಿ ಸ್ವರ್ಗಕ್ಕೆ ಉಚಿತ ವೀಸಾ ಪಡೆಯಲಿಲ್ಲವೇ? ನಮ್ಮ ಪುರಾಣಕಥೆಗಳನ್ನು ಕೇಳಿದ ಎಲ್ಲ ಪಾಪಿಗಳೂ ಒಮ್ಮೆ ಪ್ರಯಾಗಕ್ಕೆ ಹೋಗಿಬರುವುದು ಅಥವಾ ಕನಿಷ್ಠ ಹೋಗುವುದು ಅಗತ್ಯ ಅನ್ನಿಸಿತು. ನಮ್ಮ ಜನಪ್ರತಿನಿಧಿಗಳಿಗೆ ಅವರ ರಾಜಕೀಯದ ಮಾಲಿನ್ಯವನ್ನು ಗಂಗೆಯಲ್ಲಿ ತೇಲಿಬಿಡಲು ಇದೊಂದು ಸದವಕಾಶ. ಮೊನ್ನೆ ಅಯೋಧ್ಯೆಯ ಪ್ರಧಾನ ಅರ್ಚಕರನ್ನು ಸರಯೂ ನದಿಯಲ್ಲಿ ಶ್ರೀರಾಮಚಂದ್ರನಂತೆ ಲೀನವಾಗಲು ಬಿಟ್ಟರಂತೆ. ವೈಕುಂಠಕ್ಕೆ ದಾರಿ ಯಾವುದಯ್ಯಾ ಎಂದು ಕೇಳುವವರಿಗೆ ಇದಕ್ಕಿಂತ ಉತ್ತಮ ಮಾರ್ಗದರ್ಶನ ಸಿಕ್ಕದು.

ಈ ಎಲ್ಲದರ ನಡುವೆ ನಿತ್ಯ ಸಾಯುವವರನ್ನು ಅರೆಬೆಂದ ಸ್ಥಿತಿಯಲ್ಲಿ ಗಂಗೆಗೆ ಎಸೆಯುವ ಪದ್ಧತಿ ನಿಂತುಹೋಗಿಲ್ಲವೆಂದು ನನ್ನ ಸನಾತನ ನಂಬಿಕೆ. ಇದನ್ನು ಕೇಳಿದ ಮೇಲೆ ಸತ್ತಂತಿಹರಿಗೆ ಹೊಸ ಉತ್ಸಾಹ ಬಂದು ಪ್ರಯಾಗಕ್ಕೆ ಹೊರಟಿರಬಹುದು. ಇವೆಲ್ಲದರ ನಡುವೆ ಗಂಗೆಯಲ್ಲಿ ತೇಲಿ ಬರುವ ಕರ್ಣರಿಗೆ ಯಾರಾದರೊಬ್ಬ ರಾಧೆ ಸಿಗಬಹುದೆಂದು ಆಶಿಸೋಣ. ಹೇಗೂ ಬತ್ತಲಾರದು ಗಂಗೆ.

ಮಹಾಕುಂಭ ತುಂಬುವ ವರೆಗೆ ನಡೆಯಲಿ ಪೂರ್ಣ ಕುಂಭದ ಈ ಮಲಿನ ಪಯಣ. ಇವೆಲ್ಲದರ ಬಳಿಕ ನಮ್ಮ ನಂಬಿಕೆಯಂತೆ ಕೆಡುಕು ನಾಶವಾಗಿ ಒಳಿತು ಸೃಷ್ಟಿಯಾಗಬಹುದೇನೋ? ಆ ಅಚ್ಛೇದಿನಕ್ಕಾಗಿ ದಾರಿ ಸಾಗುವುದೆಂತೋ ನೋಡಬೇಕು; ಕಾಯಬೇಕು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಬಾಲಸುಬ್ರಹ್ಮಣ್ಯ ಕಂಜರ್ಪಣೆ

contributor

Similar News

ಸಂವಿಧಾನ -75