ಓದಿನ ಪರಿ-ಭಾಷೆ

ತಲೆಬರಹ, ಹಣೆಬರಹ ಎಲ್ಲವನ್ನೂ ಒಂದೇ ಮುಷ್ಟಿಯಲ್ಲಿಟ್ಟು ಓದುಗರೆಡೆಗೆ ಎಸೆದಂತಿತ್ತು ಈ ಕೃತಿ. ವ್ಯಕ್ತಿಪ್ರೀತಿ ಮತ್ತು ವಸ್ತುನಿಷ್ಠೆಯಿಂದ ಈ ಪುಸ್ತಕವನ್ನು ಪಠ್ಯದಂತೆ ವಿವರವಾಗಿ ಓದಿದೆ. ಅನೇಕ ಸಮಸ್ಯೆಗಳನ್ನು ಎದುರಿಟ್ಟು ಅದಕ್ಕೆ ಲೇಖಕರು ನಿರೂಪಣೆ, ಮಾಹಿತಿ, ವ್ಯಾಖ್ಯಾನ, ಪ್ರಶ್ನೋತ್ತರ ಮತ್ತು ಕೆಲವೆಡೆ ಪರಿಹಾರವನ್ನೂ ನೀಡುತ್ತ ಓದುಗರಿಗೆ ತಾವೇನು ಎಂದು ಅವಲೋಕನ ಮಾಡಲು ಹಚ್ಚಿದ್ದಾರೆ.;

Update: 2025-02-20 11:27 IST
ಓದಿನ ಪರಿ-ಭಾಷೆ
  • whatsapp icon

ಕನ್ನಡದ ಪ್ರಸಿದ್ಧ ಸಾಹಿತಿ ಕೆ. ಸತ್ಯನಾರಾಯಣ ಅವರ ‘ಓದುವವರೆಲ್ಲ ಓದುಗರಲ್ಲ! ಹಾಗಾದರೆ?’ ಎಂಬ ಪ್ರಶ್ನಾರ್ಥಕ ಶೀರ್ಷಿಕೆಯನ್ನು ಮತ್ತು ಅದರೊಂದಿಗೆ ‘ಓದುವ ವ್ಯಾಮೋಹ ಹಾಗೂ ಓದುವ ವಿಧಿ ವಿಧಾನಗಳ ಕುರಿತ ಗಂಭೀರ, ತುಂಟ, ವಿನಯಪೂರ್ವಕ ಬರಹಗಳು’ ಎಂಬ ಉಪಶೀರ್ಷಿಕೆಯನ್ನು ಹೊತ್ತ ಕೃತಿ ಇತ್ತೀಚೆಗೆ ಬಿಡುಗಡೆಯಾಗಿದೆ.

ತಲೆಬರಹ, ಹಣೆಬರಹ ಎಲ್ಲವನ್ನೂ ಒಂದೇ ಮುಷ್ಟಿಯಲ್ಲಿಟ್ಟು ಓದುಗರೆಡೆಗೆ ಎಸೆದಂತಿತ್ತು ಈ ಕೃತಿ. ವ್ಯಕ್ತಿಪ್ರೀತಿ ಮತ್ತು ವಸ್ತುನಿಷ್ಠೆಯಿಂದ ಈ ಪುಸ್ತಕವನ್ನು ಪಠ್ಯದಂತೆ ವಿವರವಾಗಿ ಓದಿದೆ. ಅನೇಕ ಸಮಸ್ಯೆಗಳನ್ನು ಎದುರಿಟ್ಟು ಅದಕ್ಕೆ ಲೇಖಕರು ನಿರೂಪಣೆ, ಮಾಹಿತಿ, ವ್ಯಾಖ್ಯಾನ, ಪ್ರಶ್ನೋತ್ತರ ಮತ್ತು ಕೆಲವೆಡೆ ಪರಿಹಾರವನ್ನೂ ನೀಡುತ್ತ ಓದುಗರಿಗೆ ತಾವೇನು ಎಂದು ಅವಲೋಕನ ಮಾಡಲು ಹಚ್ಚಿದ್ದಾರೆ. ಇದನ್ನು ಒಟ್ಟಾಗಿ ಒಂದೇ ಬಾರಿಗೆ ಓದುವುದು ತುಸು ತ್ರಾಸದಾಯಕ. ಒಂದೊಂದು ಅಧ್ಯಾಯವನ್ನು ಒಂದೊಂದು ಬಾರಿ ಓದಿ ಅವನ್ನು ಜೋಡಿಸುವುದು ಸುಲಭ. ಈ ಕೃತಿ ಮತ್ತು ಅದು ಎತ್ತಿದ ವಿಚಾರಗಳ ಕುರಿತು ಒಂದಿಷ್ಟನ್ನು ಇಲ್ಲಿ ಹೇಳುತ್ತಿದ್ದೇನೆ:

ಓದುಗರಾದ ಓದುವವರಿಗೆ (ಓದಿ ಮರುಳಾಗುವವರಿಗಲ್ಲ!) ಇಂತಹ ಕೃತಿಗಳು ಹೊಸತೇನಲ್ಲ. ವಿಶ್ವಾದ್ಯಂತ ವಿವಿಧ ಭಾಷೆಗಳಲ್ಲಿ ಈ ಬಗೆಯ ಕೃತಿಗಳು ನೂರಾರು ಬಂದಿವೆ. ಈ ಕೃತಿಯ ಗ್ರಂಥಋಣದಲ್ಲೇ 21 ಇಂಗ್ಲಿಷ್ ಕೃತಿಗಳು ಉಲ್ಲೇಖವಾಗಿವೆ. ಕನ್ನಡದಲ್ಲೂ ಬಹಳ ಗಹನವಾಗಿ ಗಂಭೀರವಾಗಿ ಬಂದಿವೆ. ನನ್ನ ತೆಕ್ಕೆಗೆ ಸಿಕ್ಕಿದ ಕೆಲವನ್ನು ಮಾತ್ರ ಇಲ್ಲಿ ಉಲ್ಲೇಖಿಸಿದ್ದೇನೆ. 1998ರಲ್ಲಿ ಸಿ.ಎನ್. ರಾಮಚಂದ್ರನ್ ‘ಓದುಗರು ಮತ್ತು ಓದುವಿಕೆ’ ಎಂಬ ‘ಪಾಶ್ಚಾತ್ಯ ರಾಚನಿಕೋತ್ತರ ಚಿಂತನೆಯ ಒಂದು ಪ್ರಮುಖ ಕವಲಾದ ವಾಚಕ-ಸ್ಪಂದನ ಸಿದ್ಧಾಂತಗಳನ್ನು (Reader-Response Theories) ಕನ್ನಡ ಸಾಹಿತ್ಯದ ನಿದರ್ಶನಗಳನ್ನು ನೀಡುವ, ಸಂಸ್ಕೃತ ಕಾವ್ಯ ಮೀಮಾಂಸೆಯ ಕೆಲವು ಸಮಾನ ಅಂಶಗಳನ್ನು ಗುರುತಿಸುವ ಕೃತಿಯನ್ನು ರಚಿಸಿದ್ದರು. ಪಾಶ್ಚಾತ್ಯ ಓದಿನ ವಿವಿಧ ವಿಭಾಗದ ವಿಮರ್ಶೆಯನ್ನು ಭಾರತೀಕರಣಕ್ಕೆ ಒಳಪಡಿಸಿ ಓದುಗನಿಗೆ ನೀಡುವುದು ಈ ಕೃತಿಯ ಉದ್ದೇಶವಿದ್ದಂತಿತ್ತು. ಅಲ್ಲಿನ ಎಲ್ಲ ಬಗೆಯ ಓದುಗರನ್ನು ಅಂದರೆ ಪ್ರಬುದ್ಧ ಓದುಗ, ಆದರ್ಶ ಓದುಗ, ವಿವಕ್ಷಿತ ಓದುಗರನ್ನು ಭಾರತೀಯ ಕಾವ್ಯಮೀಮಾಂಸೆಯ ನಿಕಷಕ್ಕೆ ಒಡ್ಡಿ ಮೌಲಿಕವಾದ ಕಾವ್ಯಾನುಶೀಲ ‘ಸಹೃದಯ’ನ ಕಲ್ಪನೆಯನ್ನು ಅಭಿನವಗುಪ್ತನ ವ್ಯಾಖ್ಯಾನದಿಂದ ಸಿಎನ್‌ಆರ್ ಆರಿಸಿಕೊಂಡಿದ್ದರು. ಹಾಗೆಯೇ ರಿಚರ್ಡ್ಸ್‌ನ ವಿಚಾರಗಳನ್ನು ವಿವರಿಸುತ್ತ ‘ಸ್ಪಂದನಶೀಲತೆಯ ಮಟ್ಟವನ್ನು (ಓದುಗರಲ್ಲಿ/ಪ್ರೇಕ್ಷಕರಲ್ಲಿ) ಹೆಚ್ಚಿಸುವುದು ಇಂದಿನ ಅತಿ ತುರ್ತು ಕೆಲಸಗಳಲ್ಲಿ ಒಂದಾಗಿದೆ ಮತ್ತು ಅದನ್ನು ಹೆಚ್ಚಿಸುವ ಅಥವಾ ಕಮ್ಮಿ ಮಾಡುವ ಸಾಧನಗಳಲ್ಲಿ ಕಲೆಗಳು ಮುಖ್ಯ’ ಮತ್ತು ‘ಆದರ್ಶ ವಿಮರ್ಶಕನೆಂದರೆ ಆದರ್ಶ ಓದುಗ’ ಎಂದುದನ್ನು ಉಲ್ಲೇಖಿಸಿ ಓದುಗನ ಮತ್ತು ಓದಿನ ಪ್ರಾಮುಖ್ಯತೆಯನ್ನು ವಿಸ್ತರಿಸಿದ್ದರು. ನಿರೂಪಕ ಮತ್ತು ನಿರೂಪಿತ ಎಂದರೆ ಲೇಖಕ ಮತ್ತು ಓದುಗನೂ ಆಗಬಹುದೆಂಬುದನ್ನೂ ಇತರ ಅನೇಕ ಶೈಲಿಶಾಸ್ತ್ರಜ್ಞರು ಸಂಪೂರ್ಣ ಕೃತಿನಿಷ್ಠರಾಗಿ ಲೇಖಕನನ್ನು/ಓದುಗನನ್ನು ಅಲಕ್ಷಿಸಿದರೆ ಶೈಲಿಶಾಸ್ತ್ರಜ್ಞ ಸ್ತ್ಯಾನ್ಲಿಫಿಶ್ ತನ್ನ ವಿಶ್ಲೇಷಣೆಯುದ್ದಕ್ಕೂ ಓದುಗನನ್ನೇ ಲಕ್ಷ್ಯವಾಗಿಟ್ಟುಕೊಳ್ಳುತ್ತಾನೆ ಎಂಬುದನ್ನು ನೆನಪಿಸಿದ್ದರು. (ಈ ಕೃತಿಯ ಗ್ರಂಥಋಣದಲ್ಲಿ ಕನ್ನಡ ಮತ್ತು ಇಂಗ್ಲಿಷಿನ 30 ಕೃತಿಗಳನ್ನು ಉಲ್ಲೇಖಿಸಿದ್ದರು); ಕೆಲವು ಪ್ರಭಾವಶಾಲಿ ಪ್ರಮೇಯಗಳನ್ನು ಪರಿಶೀಲಿಸಿದ್ದರು. ಆದರೆ ಅದು ತನ್ನ ಪರಿಭಾಷೆಯ ಭಾರದಿಂದಾಗಿಯೇ ಇರಬೇಕು- ಇತ್ತ ಸರಳ ಓದುಗರನ್ನೂ ಮುಟ್ಟದೆ, ಅತ್ತ ವಿದ್ವಜ್ಜನರನ್ನೂ ತಟ್ಟದೆ ಹೋಯಿತು. ನಮ್ಮ ಭಾಷಾ ಮತ್ತು ಸಾಹಿತ್ಯ ಜಗತ್ತು ಜಾಗೃತವಾಗಿದಿದ್ದರೆ ಅದು ಪ್ರಾಯಃ ಪದವಿ ಅಥವಾ ಅದಕ್ಕೂ ಮೇಲಿನ ಹಂತಕ್ಕೆ ಪಠ್ಯವಾಗುವ ಅರ್ಹತೆ ಹೊಂದಿತ್ತು.

ಗಿರಡ್ಡಿಗೋವಿಂದರಾಜರು ಕರ್ನಾಟಕ ಸಾಹಿತ್ಯ ಅಕಾಡಮಿಯ ಅಧ್ಯಕ್ಷರಾಗಿದ್ದಾಗ ಸಂಪಾದಿಸಿದ, ಕನ್ನಡದ ಅನೇಕ ಪ್ರಮುಖ ಬರಹಗಾರರು ಚರ್ಚಿಸಿದ ಲೇಖನಗಳನ್ನೊಳಗೊಂಡ ‘ಓದುವ ದಾರಿಗಳು’ ಎಂಬ ಕೃತಿಯನ್ನು 2002ರಲ್ಲಿ ಗುರುಲಿಂಗಕಾಪಸೆಯವರು ಅಧ್ಯಕ್ಷರಾದ ಮೇಲೆ ಪ್ರಕಟಿಸಲಾಯಿತು. ಇದು ಕೃತಿಯ ಸಂಪಾದಕರು ಹೇಳುವಂತೆ ಸೈದ್ಧಾಂತಿಕ ನಿಲುವುಗಳ ಬೆಳಕಿನಲ್ಲಿ ಅನ್ವಯಿಕ ವಿಮರ್ಶೆಯ ಮೂಲಕ ‘ಸಾಹಿತ್ಯದ ಅಧ್ಯಯನ ಮಾಡುವವರಿಗೆ’ ಹಾಗೂ ‘ಬರಲಿರುವ ವಿಮರ್ಶಕರಿಗೆ’ ಮಾರ್ಗದರ್ಶನ ಮಾಡುವ ಕೃತಿ. ಓದುಗನಿಗಿಂತ ನಿರೂಪಕನನ್ನೇ ಹೆಚ್ಚು ಕೇಂದ್ರೀಕರಿಸಿದ ಓದಿನ ರೀತಿಯಲ್ಲಿ ಇದು ಕೃತಿಗಳನ್ನು ಅಭ್ಯಸಿಸಿದೆ. ಸಂಕಿರಣವೊಂದರ ಉಪನ್ಯಾಸಗಳ ಮಾಲೆಯಾದ್ದರಿಂದ ಇಲ್ಲಿ ಏಕತಾನತೆಯೂ ಇಲ್ಲ; ಸೂತ್ರಬದ್ಧತೆಯೂ ಇಲ್ಲ. ಇದೂ ಓದಿದವರಿಗೆ ಮತ್ತು ಗಂಭೀರವಾಗಿ ಯೋಚಿಸುವವರಿಗೆ, ಚಿಂತಕರಿಗೆ ಗ್ರಾಹ್ಯವಾಗಬಲ್ಲ ಕೃತಿ. ಆದರೆ ‘ಜನಸಾಮಾನ್ಯ’ರಿಗಲ್ಲ.

ಈಚೆಗೆ ಅಂದರೆ 2021ರಲ್ಲಿ ಕೆ. ಸತ್ಯನಾರಾಯಣರೇ ‘ಅವರವರ ಭವಕ್ಕೆ ಓದುಗರ ಭಕುತಿಗೆ’ ಎಂಬ ಶೀರ್ಷಿಕೆಯಡಿ ‘ಏಳು ಬರಹಗಾರರ ಆತ್ಮಚರಿತ್ರೆಗಳ ಪರಿಶೀಲನೆ’ ನಡೆಸಿದ್ದರು. ಈ ಕೃತಿಯಲ್ಲ್ ಲೇಖಕರು ‘ಓದುಗರೊಡನೆ’ ಮಾಡಿದ ಸ್ವಗತ ಮಾತುಗಳು ಪ್ರಸ್ತುತ ಕೃತಿಯ ಪರಿಚಯಕ್ಕೂ ಮುನ್ನುಡಿಯಂತಿವೆ: ‘ಬರವಣಿಗೆಯೆಂಬುದು ಲೇಖಕನಿಗೆ ತನ್ನನ್ನು ತಾನು ತೋಡಿಕೊಳ್ಳುವ, ತೆರೆದುಕೊಳ್ಳುವ, ಶೋಧಿಸಿಕೊಳ್ಳುವ ಒಂದು ಮಾಧ್ಯಮ. ಹೀಗೆ ಮಾಡುವಾಗಲೇ ತನ್ನನ್ನು ಮಾತ್ರವಲ್ಲ, ತನ್ನ ಕಾಲ ಮತ್ತು ಸಮಾಜವನ್ನು ಕೂಡ ಶೋಧಿಸುತ್ತಿರುತ್ತಾನೆ’ ಮತ್ತು ಮುಂದೆ ‘ಬರವಣಿಗೆಯಲ್ಲಿ ಒಂದು ಆಟದ, ರಾಜಕಾರಣದ ಅಂಶವು ಕೂಡ ಇದ್ದೇ ಇರುತ್ತದೆ. ಎಲ್ಲ ಲೇಖಕರೂ ಪ್ರಜ್ಞಾಪೂರ್ವಕವಾಗಿಯೇ ಇದರಲ್ಲಿ ತೊಡಗಿರುತ್ತಾರೆ. ಓದುಗನ ಮನಸ್ಸನ್ನು ಆಕ್ರಮಿಸುವ, ಒಲಿಸಿಕೊಳ್ಳುವ, ತಿರುಚುವ ಉಪಾಯಗಳಲ್ಲಿ ಎಲ್ಲರೂ ಮಗ್ನರು. ಓದುಗರು ಕೂಡಾ ಒಮ್ಮೊಮ್ಮೆ ಇದನ್ನು ಬಯಸುತ್ತಾರೆ. ಬರವಣಿಗೆಯೊಡನೆ ಆಟಕ್ಕೆ ಇಳಿಯುತ್ತಾರೆ. ಆತ್ಮಚರಿತ್ರೆಯ ಬರವಣಿಗೆಯಲ್ಲಿ ಮತ್ತು ಓದಿನಲ್ಲಿ ಈ ಆಟ ಮತ್ತು ರಾಜಕಾರಣದ ಸ್ವಭಾವ ಮುನ್ನೆಲೆಯಲ್ಲಿರುತ್ತದೆ. ಬರವಣಿಗೆ ಕಲೆಯನ್ನು ಚೆನ್ನಾಗಿ ಬಲ್ಲ ಸಾಹಿತಿಗಳ ಆತ್ಮಚರಿತ್ರೆಗಳಲ್ಲಿ ಇದು ಸಾಮಾನ್ಯ. ಒಂದು ಸ್ವಭಾವದ, ಕಾಲಮಾನದ ಸಾಹಿತಿಗಳ ಆತ್ಮಚರಿತ್ರೆಗಳನ್ನು ಒಟ್ಟಾಗಿ ಓದುವುದರಿಂದ ಈ ಆಟ-ರಾಜಕಾರಣದ ಸ್ವರೂಪ ಓದುಗರಿಗೆ ಚೆನ್ನಾಗಿ ಮನದಟ್ಟಾಗಬಹುದು. ಇಲ್ಲಿ ಆರಿಸಿಕೊಂಡಿರುವ ಆತ್ಮಚರಿತ್ರೆಗಳನ್ನು ಪರಸ್ಪರ ಹೋಲಿಸುವುದು ನನ್ನ ಉದ್ದೇಶವಲ್ಲ. ಆದರೆ ಅವುಗಳ ಗುಣ ಸ್ವಭಾವವನ್ನು ವಿವರಿಸುತ್ತಾ, ವಿಶ್ಲೇಷಿಸುತ್ತಾ ಹೋದಂತೆ, ಇಂತಹ ಹೋಲಿಕೆ ಓದುಗನ ಮನಸ್ಸಲ್ಲಿ ಮೂಡುತ್ತದೆ’. ಈ ಮಾತುಗಳ ಮತ್ತು ಆನಂತರದ ಕೆಲವು ವಿವರಗಳ ಮೂಲಕ ಲೇಖಕರು ಓದುಗನ ಪ್ರಾಮುಖ್ಯತೆಯನ್ನು ಗಂಭೀರವಾಗಿ ಗಮನಿಸಿದ್ದಾರೆ.

ಈಗ ಬಂದಿರುವ ಕೃತಿಯಲ್ಲಿ ‘ಚರಿತ್ರೆ, ಜೀವನ ಚರಿತ್ರೆ, ಆತ್ಮಚರಿತ್ರೆಗಳು’ ಎಂಬ ಅಧ್ಯಾಯವೂ ಸೇರಿದಂತೆ ಓದಿನ ಕುರಿತ ಮತ್ತು ಓದುಗ-ಲೇಖಕನ ಕ್ರಿಯೆ-ಪ್ರಕ್ರಿಯೆ-ಪ್ರತಿಕ್ರಿಯೆಗಳ ಹಲವು ಹೊರ ಮತ್ತು ಒಳ ನೋಟಗಳಿವೆ. ಓದುಗನನ್ನು ಹಿಂದೆ ಓದುಗಾರ ಎಂದು ಹೇಳುತ್ತಿದ್ದರಂತೆ. ಲೇಖಕರು ಕ್ರಿಕೆಟ್ ಆಟಗಾರರೇನೋ ಗೊತ್ತಿಲ್ಲ. ಆದರೆ ಕ್ರಿಕೆಟ್ ಕುರಿತಂತೆ ಅವರ ಅನುಭವವು ಅವರ ಪ್ರಬಂಧಗಳಲ್ಲಿದೆ. ಇಲ್ಲಿ ಅವರು ರಕ್ಷಣಾತ್ಮಕವಾಗಿ ಬ್ಯಾಟನ್ನು ಹಿಡಿದಿದ್ದಾರೆ. ಇಲ್ಲವಾದರೆ ಕೃತಿ ಪ್ರಶ್ನೆಗಳನ್ನು ಹಾಕಿದ ಬಳಿಕ ಉಪಶೀರ್ಷಿಕೆ ಶಮನಕಾರಿಯಾಗಿ ಏನೂ ಹೇಳಬೇಕಾಗಿರಲಿಲ್ಲ. ಹೀಗೆ ಅವರು ಕೇವಿಯಟ್ ಹಾಕಿದ್ದರಿಂದ ಇಲ್ಲಿನ ಬರಹದಲ್ಲಿ/ಗಳಲ್ಲಿ ‘ಗಂಭೀರ, ತುಂಟ, ವಿನಯಪೂರ್ವಕ’ ಆಯಾಮಗಳನ್ನು ಗುರುತಿಸುವುದಕ್ಕೆ ಅವರೇ ಪರವಾನಿಗೆ ನೀಡಿದಂತಾಗಿದೆ. ‘ಓದುವವರೆಲ್ಲ ಓದುಗರಲ್ಲ’ ಎಂಬುದು ಬಹಳ ಕಠಿಣ ಹೇಳಿಕೆ. ಏಕೆಂದರೆ ಓದು ಎಂಬುದು ಒಂದು ಕಾಲಬದ್ಧ ಕ್ರಿಯಾಮಾನ. ಕನ್ನಡದಲ್ಲಿ ‘ಓದಿದವನು’ ಎಂದರೆ ಶಿಕ್ಷಣ ಪಡೆದವನು ಎಂಬ ಅರ್ಥವೂ ಇದೆ. ಡಿಗ್ರಿ ಓದುತ್ತಿದ್ದಾನೆ ಎನ್ನುತ್ತಾರಲ್ಲ! (ಹಾಗೆಯೇ ಶಿಕ್ಷಕನಿಗೆ ‘ಓದಿಸುವವನು’ ಎಂಬ ಪದವೂ ವಾಡಿಕೆಯಲ್ಲಿದೆ.)

ಸತ್ಯನಾರಾಯಣರ ಈ ಕೃತಿಯಲ್ಲಿ 37 ಅಧ್ಯಾಯಗಳಿವೆ. ಇವನ್ನು ಬಿಡಿಬರಹಗಳಂತೆಯೂ (ಮಹಾಭಾರತದ ವಿಷ್ಣು ಸಹಸ್ರನಾಮ, ಭಗವದ್ಗೀತೆ ಇತ್ಯಾದಿಯಂತೆ) ಓದಬಹುದು. ಬಿಟ್ಟುಹೋದ ಅಧ್ಯಾಯಗಳು ಅಪೂರ್ಣತೆಯಿಂದ ಓದನ್ನು ಘಾಸಿಗೊಳಿಸಲಾರವು. ಕೆಲವು ಅವರೇ ಹೇಳಿದಂತೆ ಗಂಭೀರ ಶೈಲಿಯಲ್ಲಿವೆ (ಕ್ಲಾಸಿಕ್ಸ್‌ಗಳನ್ನು ಏಕೆ ಓದಬೇಕು? ಇತ್ಯಾದಿ); ಕೆಲವು ಲಲಿತ ಪ್ರಬಂಧಗಳಂತಿವೆ; (ಹಸ್ತಪ್ರತಿ ಓದುವುದು/ಓದಿಸುವುದು; ಕಿಂಡಲ್ ವಿರುದ್ಧ ಮಹಾಯುದ್ಧ ಮುಂತಾದವುಗಳು ಅವರ ಈ ಮೊದಲು ಪ್ರಕಟವಾದ ಕೆಲವು ಲಲಿತ ಪ್ರಬಂಧಗಳ ಧಾಟಿಯಲ್ಲಿವೆೆ); ಓದುಗರ ಕುರಿತು ವಿನಯವನ್ನು ಪ್ರಕಟಿಸುತ್ತಲೇ ಕೆಲವು ಬಾರಿ ಈ ವಿನಯವು ಧೂರ್ತಲಕ್ಷಣದ ಲೇಖಕನೊಬ್ಬನ ಅತಿವಿನಯವಾಗುವುದೂ, ಓದುಗನ ಕುರಿತ ಅತಿ ಗಮನದಿಂದಾಗಿ ಓದಿನ ಕುರಿತ ಗಮನವು ಹಿನ್ನೆಲೆಗೆ ಸರಿಯುವುದೂ ಉಂಟು. ಓದುಗರ ಕುರಿತು ಹೇಳುತ್ತಲೇ ಲೇಖಕರು ಆಟ ಮತ್ತು ರಾಜಕಾರಣದ ಸುಳಿವನ್ನು ಬಚ್ಚಿಡುತ್ತ, ಬಿಚ್ಚಿಡುತ್ತ ಸಾಗುತ್ತಾರೆ.

ಅಧ್ಯಾಯಗಳು ಸಮುದ್ರದ ಅಲೆಗಳಂತೆ ಬಹಳ ಸೂಕ್ಷ್ಮವಾಗಿ ಅವಲೋಕಿಸಿದರೆ ಮಾತ್ರ ಬೇರೆಬೇರೆಯಾಗಿ ಕಾಣಿಸುತ್ತವೆ. ಇಲ್ಲದಿದ್ದರೆ ಅದೇ ನೊರೆ, ಅದೇ ಅಬ್ಬರ, ಬಂದು ಹೋಗುವ ತೀವ್ರತೆಯೂ ಅಷ್ಟೇ ಜರೂರು! ಕೆಲವೇ ಅಧ್ಯಾಯಗಳು ಬೆರಳೆಣಿಕೆಯ ಪುಟಗಳಿಗಿಂತ ಹೆಚ್ಚು ವಿಸ್ತೃತವಾಗಿವೆ. ಮೊದಲನೇ ಅಧ್ಯಾಯದಲ್ಲಿ ‘ಈ ಪುಸ್ತಕವು ಓದುಗನನ್ನು ಉದ್ದೇಶಿಸಿದೆ, ಓದುಗ ವರ್ಗವನ್ನಲ್ಲ’ ಎಂದಿದ್ದಾರೆ ಲೇಖಕರು. ಅಂದರೆ ಓದುಗರು ‘unorganized’ ಎಂದಂತಾಯಿತು. ಆದರೆ ಮತದಾರರಂತೆ ಈ ಗುಂಪು/ವರ್ಗ ಒಳಗೆಲ್ಲೋ ಸಮಾನ ತರಂಗಾಂತರದ ಅಂಟು-ನಂಟುಗಳೊಂದಿಗೆ ಬೆಸೆದಿರುತ್ತದೆ/ಬೆರೆತಿರುತ್ತದೆ ಮತ್ತು ಅಂತರ್ಜಲದ ಹರಿವು ಈ ಎಲ್ಲ ಓದುಗರನ್ನು ಜೋಡಿಸಿರುತ್ತದೆ ಎಂಬುದನ್ನು ಮರೆಯುವಂತಿಲ್ಲ. (exit poll ಮೂಲಕ ಫಲಿತಾಂಶವನ್ನು ನಿರ್ಧರಿಸಿದಂತೆ) ಎಷ್ಟೇ ಸೈದ್ಧಾಂತಿಕ ಕಂಬಗಳನ್ನೂರಿದರೂ ಜನಪ್ರಿಯತೆ ಮತ್ತು ಶ್ರೇಷ್ಠತೆ ಬಹುಸಂಖ್ಯಾತ ಜನಸಾಮಾನ್ಯರು ಮತ್ತು ಅಲ್ಪಸಂಖ್ಯಾತ ಪರಿಣತರು ಇವರ ನಡುವೆ ತೂಗಾಡಬೇಕಾಗುತ್ತದೆ. ಜನಸಾಮಾನ್ಯರು ಇಂದಿಗೂ ಓದುವ ಅನೇಕ ಕೃತಿಗಳ, ಅವುಗಳ ಲೇಖಕರ ಕುರಿತು ಒಂದೂ ವಿಮರ್ಶೆ ಪ್ರಕಟವಾಗುವುದಿಲ್ಲ. ಪರಿಣತರಿಂದ ‘ಸಾಮಾನ್ಯ’ ಎಂಬ ಹಣೆಪಟ್ಟಿ ಧರಿಸಿದ ಓದುಗರು ಪರಿಣತ(ರ) ವಿಮರ್ಶೆಯನ್ನು ಲೆಕ್ಕಿಸುವುದೇ ಇಲ್ಲ. ಇಷ್ಟಕ್ಕೂ ಓದು-ಬರಹ ಅನಿವಾರ್ಯವಲ್ಲ. ಓದು-ಬರಹವೇ ಬದುಕಾದವರಿಗೆ ತನ್ನ ಸುತ್ತಣ ಸಮಾಜದ ಜೊತೆ ಸಾಂಗತ್ಯವೇ ಇರುವುದಿಲ್ಲ. ಎಲ್ಲವನ್ನೂ ಅವರು ತಮ್ಮ ಅನುಕೂಲಕ್ಕೆ, ಲಾಭಕ್ಕೆ ಎಂಬಂತೆ ತಾವೇ ಕೇಂದ್ರದಲ್ಲಿದ್ದು ಯೋಚಿಸುತ್ತಾರೆ. ಲೇಖಕರು ಓದುಗರನ್ನು ತಮ್ಮ ಬೇಟೆಯೆಂದು ಯೋಚಿಸಿದರೆ, ಓದುಗರು ಬರಹವನ್ನು ತನ್ನ ಆಹಾರವೆಂದು ಯೋಚಿಸಬಹುದು.

‘ಪುಸ್ತಕಗಳ ಶಿಫಾರಸು’ ಎಂಬ ಅಧ್ಯಾಯದಲ್ಲಿ ಅವರು ಹೇಳುವ ಮಾತುಗಳನ್ನು ಓದಿದಾಗ ‘ಟಾಪ್‌ಟೆನ್’ ಕುರಿತಂತೆ ಲೇಖಕರೊಬ್ಬರು ಹೇಳಿದ ‘10 ಪ್ರತಿ ಮಾರಾಟವಾದರೆ ಅದು ಟಾಪ್-1ರಲ್ಲಿರುತ್ತದೆ. ಅನಂತರ 9,8,7,6... ಹೀಗೆ ಇಳಿಯುತ್ತ ಕೊನೆಗೆ ಟಾಪ್-10ರ ಪುಸ್ತಕ 1 ಪ್ರತಿ ಮಾರಾಟವಾದರೂ ರ್ಯಾಂಕ್ ಪಟ್ಟಿಯಲ್ಲಿರುತ್ತದೆ’ ಎಂಬ ಮಾತುಗಳು ನೆನಪಾಗುತ್ತವೆ. ‘ಕಿಂಡಲ್ ವಿರುದ್ಧ ಮಹಾಯುದ್ಧ’ ಎಂಬ ಅಧ್ಯಾಯದಲ್ಲಿ ತಾನು ಹೇಗೆ ಅದೃಶ್ಯ ಓದಿನ ವಿರುದ್ಧ ಪುಸ್ತಕದ ಓದನ್ನು ಗೆದ್ದೆ ಅಥವಾ ಗೆಲ್ಲಿಸಿದೆ ಎಂಬ ವಿವರಗಳಿವೆ. ಈ ಸಂದರ್ಭ ಹಿಂದೆಯೂ ಇತ್ತು. ಓಲೆಗರಿ, ತಾಳೆಗರಿಯ ಓದಿನ ನಂತರ ಬಂದ ಕಾಗದದ ಓದು ಲಿಖಿತ ಓದಿನ ಬಹು ತಡ ರೂಪ. ಪ್ರಾಯಃ ಜಾನಪದ, ಮತ್ತಿತರ ಮೌಖಿಕ ಪರಂಪರೆಯ ಹಿರಿಯರು ಇಂದಿಗೂ ಲಿಖಿತ ರೂಪದೆದುರು ಇದೇ ಇಕ್ಕಟ್ಟನ್ನು, ಸಂಕಟವನ್ನು ಅನುಭವಿಸಬಹುದು. ಬದಲಾವಣೆಯೊಂದೇ ಶಾಶ್ವತವಾಗಿರುವ ಈ ಜಗತ್ತಿನಲ್ಲಿ ತಲೆಮಾರಿನಿಂದ ತಲೆಮಾರಿಗೆ ಈ ಸಂಘರ್ಷ ಅನಿವಾರ್ಯ ಮತ್ತು ಸಹಜ. ಆದ್ದರಿಂದ ಇಲ್ಲಿ ಸೋಲು-ಗೆಲುವಿನ ಪ್ರಶ್ನೆಯೇ ಇಲ್ಲ.

ತುಂಟ ಬರಹದ ಕುರಿತು ಒಂದೆರಡು ತುಂಟತನದ ಪ್ರತಿಕ್ರಿಯೆಗಳು: ಪ್ರಯಾಣ/ಪ್ರವಾಸ ಸಾಹಿತ್ಯ ಎಂಬುದನ್ನು ಸಾಮಾನ್ಯವಾಗಿ ಪ್ರವಾಸ ಹೋಗಿ ಬಂದ ಮೇಲೆ ಬರೆಯುವ ಕಡ್ಡಾಯ ಬರವಣಿಗೆಯೆಂದೇ ಜನರು ತಿಳಿದಿದ್ದಾರೆ. ಆದರೆ ಪ್ರಯಾಣಿಸುತ್ತಿರುವಾಗ, ಪ್ರವಾಸದಲ್ಲಿರುವಾಗ ಬರೆಯುವ ವಿಚಾರ ಎಂದು ಈ ಕೃತಿಯಿಂದ ಗೊತ್ತಾಗುತ್ತದೆ. ಹಾಗೆಯೇ ಒಂದು ಪುಸ್ತಕವನ್ನು ಯಾವ ಭಂಗಿಯಲ್ಲಿ ಓದಬೇಕು ಎಂದು ಲೇಖಕರು ಸೂಚಿಸಿಲ್ಲ. ನಿದ್ರೆ ಬಂದಾಗ ಪುಸ್ತಕ ಬಿದ್ದುಹೋಗುವ ವಿಧಾನ, ಕಾರಣ ಮತ್ತು ಪರಿಣಾಮಗಳ ಕುರಿತೂ ಇಲ್ಲಿ ಚರ್ಚಿಸಬಹುದಿತ್ತು. ತನ್ನ ಬಿಸಿಯುಸಿರನ್ನು ಇನ್ನೊಬ್ಬ ಓದುಗನ ಮೇಲೆ ಬೀರಿ ದೂರದಿಂದ ಓದುವ ಇಣುಕು ಓದೂ ಒಂದು ಉಲ್ಲೇಖಿಸಬಹುದಾದ ವಿಚಾರ. ಲೇಖಕರೇ ಸೂಚಿಸಿದಂತೆ ಓದುವವರೆಲ್ಲ ಓದುಗರಲ್ಲ; ಸರಿ; ಹಾಗೆಯೇ ಬರೆಯವವರೆಲ್ಲ ಬರಹಗಾರರಲ್ಲ. ಸಿನೆಮಾ ಹಾಡೊಂದರ ಮೊದಲ ಎರಡು ಸಾಲುಗಳು- ‘ದೊಡ್ಡವರೆಲ್ಲ ಜಾಣರಲ್ಲ, ಸಣ್ಣವರೆಲ್ಲ ಕೋಣರಲ್ಲ’ ಎನ್ನುವ ಮೂಲಕ ಲೇಖಕನ ಮತ್ತು ಓದುಗನ ಸಂಬಂಧ ಸುಧಾರಿಸಬಹುದು. ಬರೆಯುವುದಕ್ಕೇ ಬಿಡುವಿಲ್ಲ, ಇನ್ನು ಓದುವುದಕ್ಕೆಲ್ಲಿದೆ ಬಿಡುವು ಎಂಬ ಲೇಖಕನಿಗೆ ಮುಖಾಮುಖಿಯಾದ ಓದುಗ ಈಗ ಪ್ರಕಟವಾಗುತ್ತಿರುವ ಪುಸ್ತಕ ರಾಶಿಯನ್ನು ಕಂಡು ಓದುವುದಕ್ಕೇ ಬಿಡುವಿಲ್ಲ, ಇನ್ನು ಬರೆಯುವುದಕ್ಕೆಲ್ಲಿದೆ ಬಿಡುವು ಎಂದು ಪ್ರಶ್ನಿಸಲೂಬಹುದು. ಓದುವವರಿಗೆ ಇದೂ ಒಂದು ಮಾರ್ಗಸೂಚಿಯಾಗಬಹುದು; ಕೋಚಿಂಗ್ ಸೆಂಟರಿನ ಗೈಡಿನಂತೆ. ಮುಖಪುಟದಲ್ಲಿರುವ ಕಿಂಡಲ್ ಓದುಗ ಈ ದೃಷ್ಟಿಯಿಂದ ಮಹತ್ವದ ಸೂಚಕ.್ಚ

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಬಾಲಸುಬ್ರಹ್ಮಣ್ಯ ಕಂಜರ್ಪಣೆ

contributor

Similar News

ಸಂವಿಧಾನ -75