ನೋಟಗಳು: ಒಂದು ಅಣಕುನೋಟ!

ಮತದಾನದಲ್ಲಿ ಯಾರೂ ಬೇಡವೆಂದು ನೀಡುವ ‘ನೋಟಾ’ ದೀರ್ಘವಿದೆ. ಆದರೂ ಸಾಹಿತ್ಯದ(ಲ್ಲಿರುವ, ಇರಬೇಕಾದ, ಇಲ್ಲವೇ ಇರಬಹುದಾದ) ನೋಟಗಳ ಕುರಿತು ನಾನು ಬಿಡುವಿನ ವೇಳೆಯಲ್ಲಿ ತಲೆಕೆಡಿಸಿಕೊಂಡದ್ದಿದೆ. ಅದರ ಗುಣಾಕಾರದ ಫಲಶ್ರುತಿಯಾಗಿ ಯುಗಾದಿಗೆ ನನ್ನ ಅಂಗಳದಲ್ಲಿ ಬೆಳೆದ ಟಿಪ್ಪಣಿಯಿದು. ಇದನ್ನು ನಿಮ್ಮ ಮಡಿಲಿಗಿಡಲು ಬಯಸಿದ್ದೇನೆ. ಇದರಲ್ಲಿ ಬೇವೂ ಇದೆ, ಬೇರೆಲ್ಲವೂ ಇದೆಯೆಂದು ನಂಬಿಕೊಳ್ಳಿ. ಮತ್ತು ಅಲ್ಲಿಂದ ನೀವು ಅದನ್ನು ನಿಮ್ಮ ಅರಿವಿನ ಕಡಲಿನಲ್ಲಿ ತೇಲಿ ಬಿಡಿ. ನಂಬುವುದಕ್ಕೆ, ನಂಬದಿರುವುದಕ್ಕೆ ನೀವು ಸ್ವತಂತ್ರರು.;

Update: 2025-04-03 12:45 IST
ನೋಟಗಳು: ಒಂದು ಅಣಕುನೋಟ!
  • whatsapp icon

ಕಲೆಯ ಅನುಭವದಲ್ಲಿ, ಅದರಲ್ಲೂ ಸಾಹಿತ್ಯದ ಓದಿನಲ್ಲಿ ‘ನೋಟ’ಗಳ ಕುರಿತು ಬಂದಷ್ಟು ನೋಟಗಳು ಬೇರೆ ವಿಚಾರಗಳ ಕುರಿತು ಬಂದಿರಲಿಕ್ಕಿಲ್ಲ ಎಂದು ಅನ್ನಿಸುತ್ತದೆ. ‘ನೋಟ’ಗಳನ್ನು ‘ನೋಟು’ಗಳು ಎಂದು ಓದುವ ವ್ಯವಹಾರಸ್ಥರೇ ಹೆಚ್ಚು. ಮತದಾನದಲ್ಲಿ ಯಾರೂ ಬೇಡವೆಂದು ನೀಡುವ ‘ನೋಟಾ’ ದೀರ್ಘವಿದೆ. ಆದರೂ ಸಾಹಿತ್ಯದ (ಲ್ಲಿರುವ, ಇರಬೇಕಾದ, ಇಲ್ಲವೇ ಇರಬಹುದಾದ) ನೋಟಗಳ ಕುರಿತು ನಾನು ಬಿಡುವಿನ ವೇಳೆಯಲ್ಲಿ ತಲೆಕೆಡಿಸಿಕೊಂಡದ್ದಿದೆ. ಅದರ ಗುಣಾಕಾರದ ಫಲಶ್ರುತಿಯಾಗಿ ಯುಗಾದಿಗೆ ನನ್ನ ಅಂಗಳದಲ್ಲಿ ಬೆಳೆದ ಟಿಪ್ಪಣಿಯಿದು. ಇದನ್ನು ನಿಮ್ಮ ಮಡಿಲಿಗಿಡಲು ಬಯಸಿದ್ದೇನೆ. ಇದರಲ್ಲಿ ಬೇವೂ ಇದೆ, ಬೇರೆಲ್ಲವೂ ಇದೆಯೆಂದು ನಂಬಿಕೊಳ್ಳಿ. ಮತ್ತು ಅಲ್ಲಿಂದ ನೀವು ಅದನ್ನು ನಿಮ್ಮ ಅರಿವಿನ ಕಡಲಿನಲ್ಲಿ ತೇಲಿ ಬಿಡಿ. ನಂಬುವುದಕ್ಕೆ, ನಂಬದಿರುವುದಕ್ಕೆ ನೀವು ಸ್ವತಂತ್ರರು. ಈ ನೋಟಗಳಿಗೆ ಕೃತಿಸ್ವಾಮ್ಯವಿಲ್ಲ. (ನನ್ನ ಲೇಖನಕ್ಕಿದೆ!)

ಚತುರ್ದಶ ಭುವನಗಳಿದ್ದಂತೆ (ಇವೆಯೋ ಇಲ್ಲವೋ ಇದ್ದರೆ ಎಲ್ಲಿ ಮುಂತಾದ ಮಾಹಿತಿಯನ್ನು ಪುರಾಣ ವಿಜ್ಞಾನಿಗಳಿಂದ ತಿಳಿದುಕೊಳ್ಳಿ) ನೋಟ ಗಳೂ ಅಷ್ಟೇ ಸಂಖ್ಯೆಯಲ್ಲಿ ಅಥವಾ ಅದಕ್ಕೂ ಹೆಚ್ಚು ಇರಬಹುದೇನೋ? ಇದು ಸಾಹಿತ್ಯದ ವಿಚಾರವಾದ್ದರಿಂದ ಸಾಹಿತ್ಯ ಬ್ರಹ್ಮರು (ಎಷ್ಟಾದರೂ ಬ್ರಹ್ಮ ತನ್ನ ಮಗಳು ಸರಸ್ವತಿಯನ್ನೇ ವರಿಸಿದವನಲ್ಲವೇ? ತನ್ನ ಕಾವ್ಯಕ್ಕೆ ತಾನೇ ಮಣಿದ ಬ್ರಹ್ಮನೂ ಕವಿಯಾಗಿದ್ದಿರಬಹುದೆಂದು ಊಹಿಸಿಕೊಳ್ಳೋಣ) ಎಷ್ಟು ಬೇಕಾದರೂ ಸೃಷ್ಟಿಸಬಹುದು!

ಕೆಲವು ನೋಟಗಳತ್ತ ನಮ್ಮ ನಿಮ್ಮ ಕಿರುನೋಟವನ್ನು ಹರಿಸೋಣ. ಇವು ಆದ್ಯತೆ, ಪ್ರತಿಷ್ಠೆ, ಪ್ರಾಶಸ್ತ್ಯ, ಪ್ರಭಾವದ ಆಯ್ಕೆಗಳಲ್ಲವೆಂದು ಆರಂಭದಲ್ಲೇ ಸ್ಪಷ್ಟಪಡಿಸುತ್ತೇನೆ.

1. ಹೊರನೋಟ

ಹೊರಗಿನಿಂದ ನೋಡಿದರೆ ಅಂದರೆ ಗಮನಿಸಿದರೆ ಪಂಡಿತನಂತೆ, ಪ್ರತಿಭಾವಂತನಂತೆ, ಧೈರ್ಯವಂತನಂತೆ ಕಾಣಿಸುವುದು. ನೋಟಕ್ಕೆ ಇವನಿಗೆ ಸರಿಯಿಲ್ಲೆನಿಸಿ ಪ್ರದರ್ಶಿಸುವ ಉದರ/ಉದಾರ ವೈರಾಗ್ಯದ ಭಂಗಿಯೂ ಇದೇ. ಆದರೆ ಬಾಯಿಬಿಟ್ಟರೆ ನಮ್ಮ ಕೆಲವು ರಾಜಕಾರಣಿಗಳಂತೆ ವಿರಾಟ (ನಗರ) ಸಂಸ್ಕೃತಿಯ ಉತ್ತರ ಕುಮಾರನ ಸಂತತಿಯೆಂದು ಗೊತ್ತಾಗುವುದು. ವಿಶೇಷ ಸಂಚಿಕೆಗಳಲ್ಲಿ ಬರುವ ಕೆಲವು ಬರಹಗಳಂತೆ ಅಂದರೆ ತುಂಬಾ ತಿಳಿದವರೆಂಬ ಭ್ರಮೆಯಲ್ಲಿ ಲೇಖನವನ್ನು ಆಹ್ವಾನಿಸಿದರೆ ಅವರು ಯಾಕೂ ಬೇಡದ, ಯಾವತ್ತೋ ಬರೆದ, ಯಾರೂ ಸ್ವೀಕರಿಸದ ಬರೆಹವನ್ನು ಕಳುಹಿಸುತ್ತಾರೆ. ಪ್ರಕಟಿಸದೇ ವಿಧಿಯಿಲ್ಲ. ಸಂಪಾದಕರಿಗೆ ಹೊರನೋಟದ ಭ್ರಾಂತಿ ಕಳೆಯುತ್ತದೆ. ಆದರೂ ಇದೇ ಗೀಳು ಮುಂದಿನ ವರ್ಷ ಯುಗಾದಿ(ಯಂತೆ) ಮರಳಿ ಬರುತಿದೆ!

2. ಒಳನೋಟ

ಇದೀಗ ತನ್ನ ಅರ್ಥವನ್ನು, ಮಹತ್ವವನ್ನು ಕಳೆದುಕೊಂಡ ಪದ. ವಿಮರ್ಶೆಯ ಸವಕಲು ಪರಿಭಾಷೆಯಲ್ಲಿ ‘ಮುಖಾಮುಖಿ’ಯಂತೆ ಇದೂ ಒಂದು. ಕ್ಷಕಿರಣದ ಹಾಗೆ ನೇರ ಒಳಪದರವನ್ನು ತಲುಪುವ, ತಿಳಿಯುವ ಉದ್ದೇಶದ ಒಂದು ತಂತ್ರ. ಹೊರ ಕೋಣೆಯಿಂದ ಅಡುಗೆಮನೆ, ಮಲಗುವ ಮನೆ, ಕೊನೆಗೆ ದೇವರ ಮನೆಯನ್ನೂ ಕಾಣುವ ನೋಟ. ಈ ಲೇಖಕರು ಅಪಾರ ಒಳನೋಟವನ್ನು ಹೊಂದಿದ್ದಾರೆ, ಇಲ್ಲಿ ಬದುಕಿನ ಒಳನೋಟವಿದೆ, ಎಂದು ಕೃತಿಯನ್ನು ಓದದೆಯೇ ಮುನ್ನುಡಿ ಮತ್ತು ಬೆನ್ನುಡಿಗಳ ಆಧಾರದಲ್ಲಿ ವಿಮರ್ಶೆಯ ಕಾಣಿಕೆಯನ್ನು ಕಾಣ್ಕೆಯಂತೆ ತೋರಿಸಬಲ್ಲ ಜ್ಞಾನಪೀಠದ ವ್ಯಾಯಾಮ ಇದು.

3. ಮೇಲ್ನೋಟ

ಹೊರನೋಟದ ಸುಶಿಕ್ಷಿತ ಹಾದಿಯಿದು. ಮೇಲರಿಮೆಯಿಂದ ನರಳುತ್ತಿರುವವರು ತಮ್ಮ ನೋಟ ಯಾವತ್ತೂ ಮೇಲಿದ್ದು, ತಾವು ಬೀರುವ ನೋಟ ಮೇಲ್ನೋಟವೆಂದು ತಿಳಿಯಪಡಿಸುವ ನೋಟವಿದು. ಕಿರಿಯ ಬರೆಹಗಾರರಿಗಿಂತ ಮಿಗಿಲೆನಿಸಿದವರು ‘ಮೇಲ್ನೋಟಕ್ಕೆ ಇಲ್ಲಿ ಏನೂ ಇಲ್ಲವೆನಿಸಿದರೂ ಓದುತ್ತ ಹೋದಂತೆ ಹೊಸದೊಂದು ಜಗತ್ತಿನ ಪರಿಚಯವಾಗುತ್ತದೆ’ ಎಂದು ಬರೆಯಬಲ್ಲರು. ಆ ಜಗತ್ತು ಯಾವುದೆಂದು ಓದುಗ ಜೀವನವಿಡೀ ಹುಡುಕಬೇಕು! ಪರಿಚಯವಾಗುವ ಈ ಹೊಸ ಜಗತ್ತು ಸಾಹಿತ್ಯದಲ್ಲೇ ಆಗಬೇಕಾಗಿಲ್ಲ! ತನಗಿಂತ ಮೇಲಿರುವವರನ್ನು ಅವರ ಬರೆಹದ ಲೋಪಗಳನ್ನು ಗುರುತಿಸದೆ, ಗುರುತಿಸಿದರೂ ಅದನ್ನು ಬಹಿರಂಗಪಡಿಸದೆ ಭಕ್ತಿಯಿಂದ, ಆರಾಧನಾಭಾವದಿಂದ ಹೊಗಳಬಲ್ಲ ನೋಟವೂ ಹೌದು.

4. ಕಿರುನೋಟ

ನಾನು ಪ್ರಸ್ತಾವಿಸಿದ ಕಿರುನೋಟ ಇದಲ್ಲ. ಇದು ಶುದ್ಧಾಂಗ ಕಿರು ನೋಟ. ಉಚಿತವಾಗಿ ಬಂದು, ಒಂದು ಕೃತಿಯ ಬಗ್ಗೆ ಸಾದರ ಸ್ವೀಕಾರದ ಮುಲಾಜಿಗೆ ಬರೆಯುವ ಒಂದೆರಡು ವಾಕ್ಯಗಳ ಪುಟ್ಟ ಟಿಪ್ಪಣಿ. ಕೆಲವು ಕೃತಿಗಳನ್ನು ಮುಫತ್ತಾಗಿ ಸ್ವೀಕರಿಸಿ ಏನೂ ಬರೆಯದೇ ಇಟ್ಟರೆ ಒಂದೆರಡು ದಿನ/ವಾರದಲ್ಲಿ ಅವರು ನೇರ ಫೋನ್ ಮಾಡಿ ‘ನನ್ನ ಕೃತಿ ಬಗ್ಗೆ ಏನೂ ಬರೆದಿಲ್ಲ?’ ಎಂದಾಗ ವಿಮರ್ಶಕರು ಮೊದಲಾದರೆ ಅಂಚೆ ಕಾರ್ಡ್, ಈಗ ವಾಟ್ಸ್‌ಆ್ಯಪ್ ಸಂದೇಶದ ಮೂಲಕ ಹೇಳುವ ನೋಟವಿದು. ಬಹಿರಂಗವಾಗದಷ್ಟು ಸಂಕ್ಷಿಪ್ತ. ಅದನ್ನು ಆ ಲೇಖಕರು ಫೇಸ್‌ಬುಕ್‌ನಲ್ಲಿ ಹಾಕಿದಾಗ ಯಾಕಾದರೂ ಬರೆದೆನೋ ಎಂಬ ಮುಜುಗರ. ವಿಮರ್ಶಕ ತಲೆಯೆತ್ತದೆ, ಫೋನೆತ್ತದೆ ದಿನವಿಡೀ ಗೃಹಬಂಧನಕ್ಕೆ ಕಾರಣವಾಗುವುದೂ ಇದೆ.

5. ಬೀಸುನೋಟ

ದಯವಿಟ್ಟು ನಿಮ್ಮ ಅಭಿಪ್ರಾಯ ತಿಳಿಸಿ ಎಂದು ಪುಸ್ತಕ ಕಳುಹಿಸಿದವರಿಗೆ ‘ನಿಮ್ಮ ಕೃತಿ ಚೆನ್ನಾಗಿದೆ, (ಅದ್ಭುತವಾದ, ಹೇಳಲಾಗದ, ಅನುಭವ ನೀಡುತ್ತದೆ) ಬರೆಯುವುದಕ್ಕೆ ಬಹಳಷ್ಟಿದೆ’ ಎಂದು ಬರೆದು ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಬರೆಯುವುದು. ಸಾಹಿತ್ಯದ ಬೀಸುಗಾಳಿಗೆ ಬೀಳುತೇಳುತ ತೆರೆಯ ಮೇಲ್ಗಡೆ, ನೆನಪಿನಾಚೆಗೆ ದಾಟುವ, ದಾಟಿಸುವ ಸಂಚುನೋಟ.

6. ತೇಲ್ನೋಟ

ಚೆನ್ನಾಗಿದೆಯೆಂದಷ್ಟೇ ಹೇಳಿ ಆರೋಗ್ಯ, ಪ್ರವಾಸ, ಮಳೆ-ಬೆಳೆ ಮುಂತಾದ ಬೇರೆ ವಿಚಾರಗಳಲ್ಲಿ ತೇಲಿ ಬಿಡುವ ನೋಟ. ಏನನ್ನಾದರೂ ತೇಲಿಸಿ ಮುಳುಗಿಸುವ ಜಾರ ದಾರಿಯಿದು. ತೇಲಿ ಬರುವ ಜಾಸ್ ಗಾನ ನಮ್ಮ (ಈ) ಕುಣಿತಕಲ್ಲವೇನ?

7. ಓರೆನೋಟ

ಇದು ಒಳ್ಳೆಯದಕ್ಕೂ ಸರಿ; ಕೇಡಿಗೂ ಸರಿ. ಸೌಂದರ್ಯ ಶಾಸ್ತ್ರದಲ್ಲಿ ಇದು ಧಾರಾಳ ಬಳಕೆಯಲ್ಲಿದೆ. (ಕೋರೆನೋಟ ಬೀರಿದರೂ ಅವಳು ಓರೆ ನೋಟ ಬೀರಿದಳು ಇತ್ಯಾದಿ.) ಸಾಹಿತ್ಯ ಕ್ಷೇತ್ರದಲ್ಲಿ ಇದಕ್ಕೆ ಲಿಂಗಭೇದವಿಲ್ಲ. ಇದನ್ನು ನಾವು ಕಾಣುವುದು ಸಭೆ ಸಮಾರಂಭಗಳಲ್ಲಿ, ಗೋಷ್ಠಿಗಳಲ್ಲಿ, ವಿಚಾರ ಸಂಕಿರಣಗಳಲ್ಲಿ. ನಮ್ಮದೊಂದು ಕೃತಿಯನ್ನು ಇನ್ನೊಬ್ಬರಿಗೆ ನೀಡಿ ಅವರ ಪ್ರತಿಕ್ರಿಯೆಗೆ ಕಾಯುವ ಹೊತ್ತಿನಲ್ಲಿ ಬೀರುವ ದೃಷ್ಟಿ.

8. ವಕ್ರನೋಟ

ನಮಗಾಗದವರ ಅಥವಾ ಅವರ ಕೃತಿಗಳ ಕುರಿತು ಬೀರುವ ನೋಟ. ನಮಗೆ ಸ್ಪರ್ಧಿಯಾದರಂತೂ ಅದಕ್ಕೆ ಸ್ವಲ್ಪ ಅಥವಾ (ಅಭಿ)ರುಚಿಗೆ ತಕ್ಕಷ್ಟು ಅಸೂಯೆಯ ಉಪ್ಪು-ಖಾರ ಸೇರಿರುತ್ತದೆ. ನೋಡಲು ನಮಗಿಂತ ಚೆನ್ನಾಗಿದ್ದರೆ, ನಮಗಿಂತ ಹೆಚ್ಚು ಜನಪ್ರಿಯರಾಗಿದ್ದರೆ ಇದು ಶಿಖರಪ್ರಾಯ. ಅವರಿಗೇನು ಗೊತ್ತು ನನ್ನ ಸಾಹಿತ್ಯ? ಎಂಬುದೇ ಇಲ್ಲಿ ಪಲ್ಲವಿ!

9. ಸೀಳುನೋಟ

ಸೀಳುನಾಯಿಗಾಗಲಿ, ಸೀಲ್ ಮೀನಿಗಾಗಲಿ ಸಂಬಂಧಿಸಿದ್ದಲ್ಲ. ಆದರೆ ಕೂದಲು ಸೀಳುವಷ್ಟು ಅನಗತ್ಯ ಸೂಕ್ಷ್ಮತೆ ಈ ನೋಟಕರಿಗಿರುತ್ತದೆ. ಇದು ಯಾರನ್ನೂ ಯಾವುದನ್ನೂ ಸೀಳಬಲ್ಲುದು. ಹೀಗೆ ಸೀಳಿದ್ದನ್ನು ಜೋಡಿಸುವ ಕಲೆಯೂ ಕೆಲವರಿಗಿರುತ್ತದೆ. ಅದು ವಿಲೋಮವಾದರೆ ಜರಾಸಂಧನಂತೆ ಅಳಿದು ಕಲೆ ಕಳೆಯಾಗುವುದೂ ಇದೆ.

10. ಹಾಸುನೋಟ

ಆಹ್ವಾನಿಸುವ ನೋಟ. ನಿಮಗೆ ಕೆಂಪು ಹಾಸನ್ನು ಹಾಸಿ ಸನ್ಮಾನಿಸಲೆಂದೇ ಬರುವವರ ನೋಟವಿದು. ಅವರಿಗೆ ನಿಮ್ಮಿಂದ ಏನೋ ಆಗಬೇಕಾದಾಗ ಈ ನೋಟ ಅಗತ್ಯ, ಅನಿವಾರ್ಯ. ಆ ಕ್ಷಣದಲ್ಲಿ ನೀವು ಸರ್ವಸ್ವ, ಕುಲದೇವರು.

11. ಕುಡಿನೋಟ

ಓರೆ ನೋಟಕ್ಕೆ ಪರ್ಯಾಯವಾಗಿ ಅಥವಾ ಸಮೀಪವಾಗಿರುವ ನೋಟವಿದು. ನಲ್ಲೆಯ ನೋಟ ಒಮ್ಮೊಮ್ಮೆ ಹೀಗಿರುತ್ತದೆಯೆಂದು ಕೇಳಿ ಬಲ್ಲೆ. ಪುಟ್ಟ ಮಕ್ಕಳ ಕುರಿತು ಹೇಳುವುದೂ ಇದೆ.

12. ಕಣ್ಣೋಟ

ಇದು ಕಣ್ಣಿನ ನೋಟವೋ ಓಟವೋ ಎಂಬ ಗೊಂದಲ. ಜಾನಪದರು ಕಂದನ ಕಣ್ಣೋಟ ಶಿವನ ಕೈಯಲಗು ಹೊಳೆದಂಗ ಎನ್ನುತ್ತಾರಲ್ಲ! ಆದರೆ ಸಾಹಿತ್ಯ ಸಮಾರಂಭಗಳಲ್ಲಿ ಇಂತಹ ಕಣ್ಣೋಟಗಳು ಹೇಳಬೇಕಾದ್ದನ್ನು ಮತ್ತು ಕೆಲವು ಬಾರಿ ಹೇಳಬಾರದ್ದನ್ನು ಹೇಳುತ್ತವೆ.

13. ಇಡಿನೋಟ

ಇದಕ್ಕೂ ‘ಈಡಿ’ಯೆಂದು ಸ್ಮರಿಸುವ ಜಾರಿನಿರ್ದೇಶನಾಲಯಕ್ಕೂ ಯಾವುದೇ ಸಂಬಂಧವಿಲ್ಲ. ಇಡೀಯಾಗಿ ನಿಮ್ಮನ್ನೇ ಆವರಿಸುವಂತಿರುವ ನೋಟ. ಕೆಲವು ಬಾರಿ ಈ ವ್ಯಕ್ತಿ ಇವರೇ ಇರಬಹುದು ಎಂಬ ಸಂಶಯವನ್ನು ಬಗೆಹರಿಸಲು ಇಂತಹ ನೋಟ ಬೇಕಾಗುತ್ತದೆ.

14. ಬಿಡಿನೋಟ

ಇದು ಇಡಿ ನೋಟದ ಬದಲಿಗೆ ವಿಶ್ಲೇಷಣಾತ್ಮಕವಾಗಿರುವ ಆಯ್ದ ಭಾಗದ ನೋಟ. ಪ್ರಾಯೋಗಿಕ ವಿಮರ್ಶೆಯ ಒಂದು ಮಾದರಿ. ಬಿಡಿಬಿಡಿಯಾಗಿ ಪುಸ್ತಕವನ್ನು ವಿಮರ್ಶಿಸುವುದು. ನೀರುಳ್ಳಿ ಸಿಪ್ಪೆ ಸುಲಿದ ಕತೆ. ಕೆಟ್ಟ ಕೃತಿಗಳಲ್ಲಿ ಕೊನೆಗೆ ಏನೂ ಸಿಗದಿರುವುದು.

15. ಕೆಳನೋಟ

ಕಾವ್ಯಗಳಲ್ಲಿ, ಕಾದಂಬರಿಗಳಲ್ಲಿ ಹೆಣ್ಣಿಗೆ ಅನ್ವಯಿಸಬಹುದಾದ ಆದರೆ ಅಷ್ಟಾಗಿ ಬಳಸದ, ಪ್ರಯೋಗಿಸದ ಒಂದು ಅಲಂಕಾರ. ಅವನಂತೆ ಮುಖದ ನೋಟ ಇನ್ನು ಬೇರೆ ಹೇಗಿರಬೇಕು? ಈಗ ಎಲ್ಲರೂ ಸಮಾನವಾಗಿರುವುದರಿಂದ, ಅವಮಾನಿತರ ದೃಷ್ಟಿಯಿಂದ ಸ್ತ್ರೀ ಪುರುಷರಿಬ್ಬರಿಗೂ ಅನ್ವಯಿಸುತ್ತದೆ. ಏನೂ ಹೇಳಲಾಗದಿರುವಾಗ ಭೂಮಿ ಬಾಯಿಬಿಡುವಂತಹ ಪರಿಸ್ಥಿತಿಯಲ್ಲೂ ಅನಿವಾರ್ಯ ಇದು. ಕೃತಿ ಚೋರರು (ಸಿಕ್ಕಿಬಿದ್ದಾಗ) ಎದುರಿಸಬಹುದಾದ ಮರುಕದ ಸ್ಥಿತಿಯೂ ಹೌದು.

16.ಅಣಕುನೋಟ

ಶೀರ್ಷಿಕೆಯಲ್ಲಿ ಕಾಣಿಸಿದ ನೋಟ ನಿಮ್ಮ ನೋಟವನ್ನು ತಪ್ಪಿಸಿಕೊಂಡು ಇಲ್ಲಿಯ ತನಕ ಬಂದಿದ್ದರೆ ಈಗ ಗುಮಾನಿಯಿಂದ ಗಮನಿಸಿ. ನಮ್ಮ ತೆಳು ತೊಗಲಿನ ಸಮಾಜಕ್ಕೆ ಇದನ್ನು ಸಹಿಸಲಸಾಧ್ಯ. ಈ ನೋಟ ಪ್ರಕಟವಾದರೆ ಪ್ರಕರಣವನ್ನು ದಾಖಲಿಸಲು ಪೊಲೀಸರು ಕಾದಿರುತ್ತಾರೆ. ಅಣಕನ್ನು ಸಹಿಸಲು ಸಾಧ್ಯವಾಗದ್ದಕ್ಕೆ ಮುಖ್ಯ ಕಾರಣವೆಂದರೆ ಅದು ಸತ್ಯವನ್ನು ಹಾಸ್ಯದ ಮೂಲಕ ತಲುಪಿಸುತ್ತದೆ. ನನ್ನ ಈ ಲೇಖನವನ್ನು ಹೀಗೆ ತಿಳಿಯಬಹುದು ಎಂಬ ಸೂಚನೆಯನ್ನು ಆರಂಭದಲ್ಲೇ ನೀಡಿದ್ದೇನಲ್ಲವೇ?

17. ಇಣುಕುನೋಟ

ಇದರಲ್ಲಿ ವೈವಿಧ್ಯವಿದೆ. ಬಸ್ಸಿನಲ್ಲಿ ನೀವು ಪತ್ರಿಕೆಯನ್ನು ಓದುವಾಗ ಪಕ್ಕದಲ್ಲಿ ಕುಳಿತವನೋ ಹಿಂದಿನ ಸೀಟಿನಲ್ಲಿ ಕುಳಿತವನೋ ಅವರ ಬಿಸಿಯುಸಿರನ್ನು ನಿಮ್ಮ ಕೊರಳಿಗೆ ಗುರಿಯಿಟ್ಟು ಅವರೂ ನಿಮ್ಮೊಂದಿಗೆ ಪತ್ರಿಕೆ ಓದುವ ನೋಟ ಮೊದಲನೆಯದು. ದೂರದಿಂದಲೇ ಗೋಣನ್ನು ಜಿರಾಫೆಯಂತೆ ಎತ್ತರಿಸಿ ಓದುವುದು ಇನ್ನೊಂದು ಬಗೆಯದು. ಇನ್ನೊಬ್ಬರ ಹೆಗಲಮೇಲೆ ತನ್ನ ಕೋವಿಯನ್ನಿಟ್ಟು ವಿಮರ್ಶಿಸುವ ವಿಧಾನವೂ ಇದರಲ್ಲಿದೆ.

18. ಕೋರೆನೋಟ

ಅಷ್ಟಾದಶವಾಗಿ ಹೆಸರಿಸಿದ ಈ ನೋಟ ಓರೆ ನೋಟಕ್ಕೆ ಬದಲಿಯಾಗಿ ಈಗಾಗಲೇ ಹೇಳಲ್ಪಟ್ಟಿದೆ. ದುಷ್ಟಸಂಹಾರದ ನೋಟವೇ ಇದು? ಸುಂದರಿಯರ ಕಾಲಿನ ಚಪ್ಪಲಿ ಕೈಗೆ ಬಂದಾಗ ಎಂತಹ ನೋಟವೆಂದರೆ ಇದು. ಕಾಡು ಹಂದಿಗೆ ಎಲ್ಲ ನೋಟವೂ ಕೋರೆನೋಟವೇ. ಬರೆಹದಲ್ಲೂ ಕೆಲವು ಬಾರಿ ಇದು ಪ್ರಯೋಗವಾಗುವುದುಂಟು.

ಇನ್ನೂ ಇರಬಹುದು. ಅವರವರ ಭಾವಕ್ಕೆ, ಅವರವರ ಭಕುತಿಗೆ ಅನುಗುಣವಾಗಿ ಈ ನೋಟೇಶ್ವರ ದೇವರು ಅನಂತವಾಗಿರುತ್ತಾನೆ. ಅವನು ಯಾವ ನೋಟ ನಿಮ್ಮ ಮೇಲೆ ಬಿದ್ದರೆ ಒಳ್ಳೆಯದೆಂದು ಯೋಚಿಸಿ.

ಸದ್ಯಕ್ಕೆ ಇಷ್ಟೇ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ಬಾಲಸುಬ್ರಹ್ಮಣ್ಯ ಕಂಜರ್ಪಣೆ

contributor

Similar News

ಸಂವಿಧಾನ -75