ಭಾಷಾ ಸೂತ್ರದ ಗಂಟುಗಳು
ಕನ್ನಡವೆಂದಲ್ಲ, ಭಾರತದ ಎಲ್ಲ ದೇಶೀ ಭಾಷೆಗಳಿಗೂ ಕನ್ನಡದ್ದೇ ಅಪಾಯ, ಆತಂಕಗಳಿವೆ. ಇವನ್ನು ಒಕ್ಕೂಟ ವ್ಯವಸ್ಥೆಯಲ್ಲಿ ಪ್ರಜಾಪ್ರಭುತ್ವ ಮೌಲ್ಯಗಳ ಸಂವಿಧಾನದಡಿ ಪರಿಶೀಲಿಸಬೇಕು. ಆದರೆ ಕೇಂದ್ರದ ಆಡಳಿತವು ಭಾಷಾ ಗೌರವವನ್ನು ಹೊಂದದೆ ತನ್ನ ಗುಪ್ತ ಅಧಿಕಾರ ಸೂಚಿಯನ್ನು ಭಾಷೆಯ ಮೂಲಕ ಹೇರಲು ತೊಡಗಿದಾಗ ಪ್ರತೀ ಭಾಷಿಕನ ಅಸ್ಮಿತೆಯ ಪರೀಕ್ಷೆಯಾಗುತ್ತದೆ. ಸದ್ಯ ಭಾರತದಲ್ಲಿ ಬಂದಿರುವ ತೊಡಕು ಇದೇ.;

ಸದ್ಯ ಕೋಮುವಾದ, ಬೆಲೆಯೇರಿಕೆ, ಹಿಂಸೆ ಮತ್ತು ಭ್ರಷ್ಟಾಚಾರದ ಬಳಿಕ ಹೆಚ್ಚು ಗದ್ದಲ, ಗೊಂದಲ ಸೃಷ್ಟಿಸುತ್ತಿರುವುದು ಭಾಷೆ. ಒಂದೆಡೆ ಹಿಂದಿಯನ್ನು ಹೇರುತ್ತಿರುವುದರ ವಿರುದ್ಧ ದಕ್ಷಿಣದ ರಾಜ್ಯಗಳು, ಅದರಲ್ಲೂ ತಮಿಳುನಾಡು ಪ್ರಬಲ ಪ್ರತಿರೋಧವನ್ನು ತೋರಿದೆ. ಇನ್ನೊಂದೆಡೆ ಕರ್ನಾಟಕದ ಗಡಿಭಾಗದಲ್ಲಿ ಮರಾಠಿ ಭಾಷಿಕರು ತಮ್ಮ ಮೇಲ್ಮೆಯನ್ನು ಹಿಂಸಾತ್ಮಕವಾಗಿ ಪ್ರದರ್ಶಿಸಿದ್ದಾರೆ. ಇವೆಲ್ಲದರ ಹಿಂದೆ ನೇಪಥ್ಯದಲ್ಲಿ ಭಾಷೆಗಳ ಅಳಿವು-ಉಳಿವಿನ ಕುರಿತು ಆತಂಕ, ಅಧ್ಯಯನ, ವಿಚಾರಸಂಕಿರಣಗಳಿವೆ. ಇವೆಲ್ಲ ಕಾರಣವಾಗಿ ದೇಶ-ಭಾಷೆ ಸುಮ್ಮನಿರುವುದಿಲ್ಲ.
ಯಾವುದೇ ಪ್ರದೇಶದ, ಭಾಷೆಯ, ಕಾಲದ ಜನರಿಗೆ ಭೌತಿಕ ಅಥವಾ ಜೈವಿಕವಲ್ಲದ ಯಾವುದೇ ಒಂದು ಸಾಮಾನ್ಯ ಗುಣವನ್ನು ಆರೋಪಿಸುವುದು ಆಕರ್ಷಕವಾಗಿ ಕಾಣಿಸುತ್ತದೆ; ಮತ್ತು ಆ ಪ್ರದೇಶದ ಜನರಿಗೆ ಸಂತಸವನ್ನು ನೀಡುತ್ತದೆ. ಈ ನಿಟ್ಟಿನಲ್ಲಿ ಹೇಳುವುದಾದರೆ ಕನ್ನಡಿಗರು ಲಾಗಾಯ್ತಿನಿಂದಲೂ ‘ಭಾರತೀಯ’ವೆಂದು ಕರೆಸಿಕೊಳ್ಳುವ ಧಾರಾಳತನದ, ಉದಾರನೀತಿಯ, ನಿರಭಿಮಾನದ ಆಸುಪಾಸಿನಲ್ಲಿ ಸುಳಿಯುತ್ತಿರುವಷ್ಟು ಸೌಮ್ಯ ಸ್ವಭಾವದವರು. ದಡ್ಡರೆಂದು ಹೇಳುವಂತಿಲ್ಲ; ಕುರಿತೋದದೆಯುಂ ಕಾವ್ಯ ಪ್ರಯೋಗ ಪರಿಣತಮತಿಗಳ್! ಹಳೆಯ ಶಾಸನಗಳಲ್ಲಿ, ಐತಿಹ್ಯಗಳಲ್ಲಿ, ಮಾಧುರ್ಯದ ಬಹಳಷ್ಟು ಉಲ್ಲೇಖಗಳಿವೆ. ಕನ್ನಡಿಗರು ಎಲ್ಲರನ್ನೂ ಬರಮಾಡಿಕೊಂಡು ‘ಇವ ನಮ್ಮವ’ ಎಂದು ಹೇಳುವವರೆಂದು ಹೇಳಲಾಗುತ್ತಿದೆ. ಪ್ರಾಯಃ ಎಲ್ಲ ಕಾಲ-ಪ್ರದೇಶ-ಭಾಷೆಯಲ್ಲಿ ಈ ಬಗೆಯ ಸ್ವಾಭಿಮಾನದ ಮತ್ತು ಕೆಲವೆಡೆ ಸ್ವರತಿಯ ಶಿಫಾರಸುಗಳಿರಬಹುದು. ಇವೊಂದು ರೀತಿಯಲ್ಲಿ ಆತ್ಮನಿರ್ಭರತೆಯ ದ್ಯೋತಕಗಳು.
ಭಾಷೆಯ ಜಿಜ್ಞಾಸೆ ಬಹು ಸೂಕ್ಷ್ಮದ್ದು. ಯಾವ ಭಾಷೆಯಲ್ಲೇ ಇರಲಿ, ‘ಭಾಷೆ’ ಅಥವಾ ಅದರ ಸಮಾನ/ಪರ್ಯಾಯ ಪದಗಳು ಹತ್ತಾರು ಅರ್ಥಗಳನ್ನು, ಹೊಳಹುಗಳನ್ನು ಹೊಂದಿರುತ್ತವೆ. ಅರ್ಥಕೋಶಕ್ಕೆ ಹೋದರೆ ವಾಕ್ಯ, ನುಡಿ, ಮಾತು, ವ್ಯವಹಾರ, ಭರವಸೆ ಮುಂತಾದ ಅರ್ಥಗಳಿವೆ. ಭಾಷೆಯನ್ನಾಡುತ್ತಾರೆ ಎಂದರೆ ಮಾತನಾಡುತ್ತಾರೆ ಎಂದೇ ಅರ್ಥ. ಮಾತನಾಡುವುದು ಅಥವಾ ಮಾತನ್ನು ಆಡುವುದು ಹೇಗೆ ಎಂದರೆ ಗಹನವಾದ ಪ್ರಶ್ನೆಯಾಗುತ್ತದೆ; ಭಾಷೆಯೆಂದರೆ ಒಂದು ಆಟ ಎಂದೂ ಅರ್ಥಮಾಡಿಕೊಳ್ಳಬಹುದು. ಭಾಷೆಯೊಂದಿಗೆ ಆಟ ಎಂಬುದೇ ಕೆಲವು ಕವಿತೆಗಳ ಲಕ್ಷಣವೂ ಆಗುವುದುಂಟು. ಭಾಷೆಯೆಂದರೆ ಸಂಸ್ಕೃತಿ ಎಂಬ ಬಳಕೆಯೂ ಇದೆ. ಆತನಿಗೆ ಭಾಷೆಯಿದೆ ಅಥವಾ ಇಲ್ಲ ಎಂಬಾಗ ಅದು ಸಂಸ್ಕೃತಿ, ನಾಗರಿಕತೆ ಎಂಬುದನ್ನೇ ಧ್ವನಿಸುತ್ತದೆ. ಭಾಷೆ ಕೊಡುವುದು, ಭಾಷೆ ನೀಡುವುದು ಎಂಬಾಗ ಅದು ವಚನ, ಭರವಸೆ ಮುಂತಾದ ವಿಶ್ವಾಸಾರ್ಹ ನೀತಿಯನ್ನು ಸೂಚಿಸುತ್ತದೆ. ದುಷ್ಯಂತನು ಶಕುಂತಲೆಗೆ ಮದುವೆಯಾಗುವುದಾಗಿ ಮಾತು ಕೊಟ್ಟನು ಅಥವಾ ದೇವವ್ರತನು ಶಂತನುವಿಗೆ ಭಾಷೆ ಕೊಟ್ಟನು ಎಂಬಾಗ ವಚನ ಬದ್ಧತೆ, ಭರವಸೆ ಮಾತ್ರವಲ್ಲ ಶಪಥ ಎಂದೂ ಭಾವಿಸಬೇಕು. ಭಾಷೆಯು ಎಷ್ಟು ವಿಶಿಷ್ಟ ರಚನೆಯೆಂದರೆ ಅದು ಸಂದರ್ಭ, ಸ್ಥಳ, ಸಮಯವನ್ನು ಹೊಂದಿಕೊಂಡು ವಿವಿಧ ಅರ್ಥವನ್ನು ನೀಡಬಲ್ಲುದು. ಸಾಹಿತ್ಯ ಚರಿತ್ರೆ ಇದಕ್ಕೆ ಸಾಕ್ಷಿ. ಭಾಷೆಯ ವ್ಯಾಪ್ತಿ ಇಷ್ಟೇ ಅಲ್ಲ, ಬಹು ದೊಡ್ಡದು.
ಒಂದೇ ಭಾಷೆ ಉಗಮವಾಗಬೇಕಿತ್ತಲ್ಲ! ಎಷ್ಟೊಂದು ಭಾಷೆಗಳು? ಯಾಕೆ? ಹೇಗೆ ಇವು ವಿಕಾಸಗೊಂಡವು? ಪ್ರತ್ಯೇಕವಾದವು? ಸೃಷ್ಟಿಯಾದ್ದೆಲ್ಲವೂ ಅಳಿಯಲೇಬೇಕಾದ್ದರಿಂದ ಭಾಷೆ ಅದಕ್ಕೆ ಹೊರತಾಗಲಾರದು. ಸಾವಿರಾರು ಭಾಷೆಗಳಿವೆ. ಅವಕ್ಕೆ ಪರಸ್ಪರ ಸಾಮ್ಯತೆಯೂ ಭಿನ್ನತೆಯೂ ಇದೆ. ದ್ರಾವಿಡ ಭಾಷೆಗಳಲ್ಲೇ ಈ ಅಂಶಗಳು ಗೋಚರಿಸಬಹುದು. ಇದನ್ನು ಭಾಷಾತಜ್ಞರು ಹೇಳಬಹುದು. ಮೇಲ್ನೋಟದ ಭಾಷಿಕರು ಈ ಬಗ್ಗೆ ತಲೆಕೆಡಿಸಿಕೊಳ್ಳಬೇಕಾಗಿಲ್ಲ.
ಕನ್ನಡವು ವೇಗವಾಗಿ ಅಳಿಯುತ್ತಿರುವ ಭಾಷೆಯೆಂಬ ವ್ಯಾಪಕ ಟೀಕೆಯಿದೆ. ಇದಕ್ಕೆ ಯಾರು ಹೊಣೆ? ಕನ್ನಡಿಗರೇ. ಒಂದು ಕಾಲದಲ್ಲಿ ರಾಜಭಾಷೆಯಾಗಿದ್ದು ದೇವಭಾಷೆ, ಗೀರ್ವಾಣ ಭಾಷೆ ಎಂದೆಲ್ಲ ಮೇಲ್ಮೆಯನ್ನು ಹಾಡಿಹೊಗಳಿಸಿಕೊಂಡು ಬಂದ ಸಂಸ್ಕೃತ ಭಾಷೆಯಿಂದ ತನ್ನ ಸುಮಾರು ಶೇ. 75 ಪದಗಳನ್ನು ಎರವಲು ಪಡೆದು ಜನಸಾಮಾನ್ಯರ ಆಡುನುಡಿಯಾಗಿ ಬೆಳೆದುಬಂದು ನಾಡನ್ನೂ, ತನ್ನನ್ನೂ ಪೋಷಿಸಿಕೊಂಡು ಬಂದ ಕನ್ನಡವು ಸಂಸ್ಕೃತ ಭಾಷೆಯನ್ನು ಅಳಿವಿನ ಅಂಚಿಗೆ ತಂದಿತ್ತು. ಸಂಸ್ಕೃತ ಸಾಹಿತ್ಯದ ಸಮೃದ್ಧಿಯ ಕುರಿತು ಕನ್ನಡದಲ್ಲಿ ಬಂದ ಭಾಷ್ಯಗಳು, ವಿಮರ್ಶೆಗಳು, ವಿಶ್ಲೇಷಣೆಗಳು, ವಿವೇಚನೆಗಳು ಸಂಸ್ಕೃತವನ್ನು ತೀವ್ರ ನಿಗಾ ಘಟಕದಿಂದ ವಿಶೇಷ ವಾರ್ಡಿಗೆ ತಂದವು. ಪರಿಣಾಮವಾಗಿ ಸಂಸ್ಕೃತವು ಈಗಲೂ ಪಾಂಡಿತ್ಯದ ವಿಶೇಷ ಮೀಸಲಾತಿಯನ್ನು ಹೊಂದಿದೆ. ಆದರೆ ಅದು ಸಾಮಾನ್ಯ ವಾರ್ಡಿಗೆ ಬರದೇ ಜನಸಾಮಾನ್ಯರ ನಡುವೆ ಬದುಕಲಾರದು.
ಆದರೆ ಕನ್ನಡವು ಜನಸಾಮಾನ್ಯರ ನಡುವೆ ಇದ್ದೂ ಈಗ ಅಪರೂಪವಾಗುತ್ತಿರುವುದೇಕೆ? ಆಧುನಿಕ ಕಾಲದಲ್ಲಿ ಅತೀ ವೇಗವಾಗಿ ಬೆಳೆಯುತ್ತಿರುವ ನಗರಗಳು, ಗ್ರಾಮೀಣ ಪ್ರದೇಶದಿಂದ ನಗರಕ್ಕೆ ಹಲವಾರು ಕಾರಣಗಳಿಂದ ಅಲ್ಲಿ ನೆಲೆಯಾಗುತ್ತಿರುವ ಜನರು, ವಸುಧೈವ ಕುಟುಂಬದ ಜನರ ವಲಸೆ ಮಿಶ್ರಣವಾಗದೆ ಸಂಯಕ್ತವಾಗಿ ಅಲ್ಲಿ ವಾಸ್ತವ ಮತ್ತು ವ್ಯಾವಹಾರಿಕ ನೆಲೆಯಲ್ಲಿ ಭಾಷೆಯ ಬಳಕೆ ಇವು ಕನ್ನಡ ಅಂತಲ್ಲ ಯಾವುದೇ ಭಾಷೆಯ ಬಳಕೆಯನ್ನೂ, ಬದುಕನ್ನೂ ನಿರ್ಧರಿಸುತ್ತವೆ. ಬೆಂಗಳೂರಿನಂತಹ ಬೃಹತ್ ನಗರದಲ್ಲಿ ದೇಶವಿದೇಶಗಳಿಂದ ನಾನಾ ಕಾರಣಗಳಿಂದ ಬರುವ ಜನರು ಇಲ್ಲಿನ ನೀರು ಕನ್ನಡವಾಹಿನಿಯೇ ಆಗದಂತೆ ಪ್ರಭಾವಿಸಿದ್ದಾರೆ. ಎಲ್ಲ ಭಾಷೆಗಳೂ ಸಂಗಮಿಸಿದಾಗ ಹೊಸದೊಂದು ಭಾಷೆ ಸೃಷ್ಟಿಯಾಗಬೇಕಿತ್ತಲ್ಲ! ಆದರೆ ಹಾಗಾಗುತ್ತಿಲ್ಲ. ಪ್ರಭುತ್ವದ ಭಾಷೆಯು ಅಧೀನ ಭಾಷೆಗಳನ್ನು ಆಳುತ್ತದೆ. ಹೀಗೆ ಒಡೆತನದ ಭಾಷೆ ಮತ್ತು ಗುಲಾಮೀ ಭಾಷೆ ಎಂಬ ವರ್ಗ ಯಾವುದೇ ಸಂಘರ್ಷವಿಲ್ಲದೆ ಉದಿಸುತ್ತವೆ.
ಕನ್ನಡವು ಅವಸಾನದ ಅಂಚಿನಲ್ಲಿದೆ ಎಂದು ಕೂಗಿಕೊಳ್ಳುವ ಪಂಡಿತ-ಪಾಮರರೆಲ್ಲ ಕನ್ನಡವನ್ನು ಹೇಗೆ ಉಳಿಸುವುದು ಎಂಬ ಬಗ್ಗೆ ಇನ್ನೂ ಖಚಿತ ನಿರ್ಧಾರಕ್ಕೆ ಬಂದಂತಿಲ್ಲ. ಭಾಷೆಯ ಉಳಿವಿಗೆ ಥರ್ಮಾಸ್ ಫ್ಲಾಸ್ಕ್ ಆಗಲೀ ಶೈತ್ಯಾಗಾರ (ರಿಫ್ರಿಜರೇಟೇರ್) ವೆಂಬುದಿಲ್ಲ. ಅದನ್ನು ನಾಲಗೆಯ ಮತ್ತು ಬರೆಹದ ಸರಸ್ವತಿಯೇ ರಕ್ಷಿಸಬೇಕು. ನಮ್ಮಲ್ಲನೇಕರಿಗೆ ಕನ್ನಡ ಮಾತನಾಡುವುದೆಂದರೆ ಒಂದು ಕೀಳರಿಮೆ. ಆದರೆ ಎಷ್ಟು ಸಾಧ್ಯವೋ ಅಷ್ಟನ್ನು ಬಳಸುವುದು ಅಗತ್ಯ. ವಿಶ್ವದ ಯಾವುದೋ ಒಂದು ಭಾಷೆಯನ್ನು ಅನುವಾದದಲ್ಲೋ, ರೂಪಾಂತರದಲ್ಲೋ ಅಥವಾ ಇನ್ಯಾವುದೋ ಸಂದರ್ಭದಲ್ಲಿ ಬಳಸುವಾಗ ಸಮಾನ ಅಥವಾ ಪರ್ಯಾಯ ಕನ್ನಡ ಪದಗಳು ತಕ್ಷಣಕ್ಕೆ ಸಿಕ್ಕದಿರಬಹುದು. ಅಂತಹ ಸಂದರ್ಭದಲ್ಲಿ ಮೂಲ ಪದವೊಂದನ್ನು ಯಥಾವತ್ತಾಗಿ ಬಳಸುವುದನ್ನು ಸಹಿಸಲೇಬೇಕು. ಇಲ್ಲವಾದಲ್ಲಿ ಅವನ್ನು ಕನ್ನಡಿಸಬೇಕು. ಕೆಲವು ಕನ್ನಡಪದಗಳ ಬಳಕೆಯಲ್ಲಿ ಆವರಣದಲ್ಲಿ ಮೂಲ ಭಾಷಾಪದವನ್ನು ಆಯಾಯ ಭಾಷೆಯಲ್ಲಿ ಅಥವಾ ಕನ್ನಡದಲ್ಲಿ ಬಳಸುವುದು ಅನಿವಾರ್ಯ. ತಾಂತ್ರಿಕ, ಕಾನೂನು, ವೈದ್ಯಕೀಯ ರಂಗ/ಕ್ಷೇತ್ರಗಳಲ್ಲಿ ಬಳಸುವುದು ವಾಸ್ತವಿಕವಾಗಲಾರದು. ಪ್ರಾಯೋಗಿಕವಾಗಿ ಬಳಸಬಹುದಾದ್ದನ್ನು ತಕ್ಷಣದಿಂದಲೇ ಜಾರಿಗೆ ತರುವ ನಿರ್ಣಯಗಳು ಅವಾಸ್ತವ ಮಾತ್ರವಲ್ಲ, ನಗೆಪಾಟಲೂ ಹೌದು. ಆದ್ದರಿಂದ ಹಾಗೂ ಹೀಗೂ ಕನ್ನಡ ಕೀಲಿಮಣೆಯನ್ನು ಕೆ.ಪಿ.ರಾವ್‌ರಂತಹ ಪ್ರಭೃತಿಗಳು ಚಾಲನೆಗೆ ತಂದದ್ದರಿಂದ ಆಧುನಿಕತೆಯ ಭರಾಟೆಯಲ್ಲಿ ಅಥವಾ ಭರಾಟೆಯಿಂದ ಕನ್ನಡ ಸಾಯದ ಸ್ಥಿತಿಯಿದೆ. ಆದರೆ ನಮ್ಮಲ್ಲನೇಕರು ಕಂಪ್ಯೂಟರ್, ಮೊಬೈಲಿನಲ್ಲಿ, ಕನ್ನಡವನ್ನು ಇಂಗ್ಲಿಷ್ ಲಿಪಿಯಲ್ಲಿ ಬರೆಯುವ ದಡ್ಡತನವನ್ನು ಕಲಿತಿದ್ದೇವೆ. ಇಮೈಲ್ ಹೆಸರು ಕನ್ನಡ ಲಿಪಿಯಲ್ಲಿನ್ನೂ ಆರಂಭವಾಗಿಲ್ಲ. ಕಾರಣವೆಂದರೆ ಅಂತಹ ಸಾಧನದತ್ತ ಕನ್ನಡಿಗರ ಸಂಶೋಧನೆ ಸಾಗಿಲ್ಲ. ಅದನ್ನು ಕನ್ನಡಿಗರು ಶೋಧಿಸಿದರೆ ಕನ್ನಡವನ್ನು ಎಲ್ಲೂ ಬಳಸಬಹುದೆಂಬ ಜಾಗೃತಿಯನ್ನು ಸಮಕಾಲೀನ ಸಮಾಜ ಕಾಣಬಹುದು.
ಇದಿಷ್ಟೇ ಸಾಕೇ? ಕನ್ನಡದ ಕೀಳರಿಮೆಯನ್ನು ಹೋಗಲಾಡಿಸಬೇಕಾದರೆ ಬಹುಪಾಲು ಪ್ರಚಾರಕ್ಕಾಗಿ, ಪ್ರತಿಷ್ಠೆಗಾಗಿ, ನಡೆಯುವ ರಾಷ್ಟ್ರಮಟ್ಟದ ಸಂಕಿರಣಗಳು ರಾಜ್ಯಮಟ್ಟಕ್ಕಾದರೂ ಇಳಿದು ತನ್ನ ಸಾರ್ಥಕ್ಯಪಡೆಯುವುದು ಅಗತ್ಯ. ನಮ್ಮ ಲಿಟ್ ಫೆಸ್ಟಿವಲ್‌ಗಳು ಆಯಾಯ ಭಾಷೆಯ ತಜ್ಞರಿಗೆ, ಕಲಾವಿದರಿಗೆ, ಹೊರಕಿಂಡಿಯನ್ನೇನೋ ನೀಡಬಹುದು. ಆದರೆ ಅವರು ಅಲ್ಲಿ ಭಾಗವಹಿಸಿ ಕನ್ನಡಕ್ಕೆ ಕೊಡುವ/ಕೊಟ್ಟ ಕೊಡುಗೆಯನ್ನು ಅಳೆಯಬೇಕೇ ಹೊರತು ಅಲ್ಲಿ ಎಷ್ಟು ಪ್ರಚಾರ ಪಡೆದರು ಎಂಬುದರಿಂದಲ್ಲ.
ಕನ್ನಡಿಗರು ಆಧುನಿಕತೆಯೆಂದರೆ ಇಂಗ್ಲಿಷ್ ಅಥವಾ ಆಳುವ ಸರಕಾರದ ಭಾಷೆಯೆಂದೇ ತಿಳಿಯುತ್ತಾರೇನೋ? ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲ ಭಾಷೆಗಳಿಗೂ ಚಿಕ್ಕ-ದೊಡ್ಡ ಎಂಬ ಅಂತರವಿಲ್ಲದೆ ಸಮಾನ ಗೌರವ ಸಿಗಬೇಕು. ಆದರೆ ಆಡಳಿತ ವ್ಯವಸ್ಥೆ ಹೇಗಿದೆಯೆಂದರೆ ಜನರನ್ನು ಭಾವನಾತ್ಮಕವಾಗಿ ಕೆರಳಿಸಿ ತಮ್ಮ ಅಧಿಕಾರವನ್ನು ಶಾಶ್ವತಗೊಳಿಸುವುದೇ ರಾಜಕಾರಣದ ಕೃತ್ರಿಮಕ್ರೌರ್ಯವಾಗಿದೆ. ಭಾರತವೆಂದರೆ ಇಂಗ್ಲಿಷರ ಅಧೀನದಿಂದ ಬಿಡಿಸಿಕೊಂಡ ವ್ಯವಸ್ಥೆಯಾಗಿರುವುದರಿಂದ ಇಲ್ಲಿ ಇಂಗ್ಲಿಷಿಗೆ ಮಾತ್ರವಲ್ಲ, ಇಂಗ್ಲಿಷಿನ ಚಹರೆ ಹೊಂದಿದ ‘ಇಂಡಿಯಾ’ಕ್ಕೂ ಮನ್ನಣೆ ಸಿಗಬಾರದೆಂಬ ವ್ಯೆಹವನ್ನು ರಚಿಸಲಾಗುತ್ತದೆ. ಭಾರತವನ್ನು ಅಳಿದ ಪರದೇಶಗಳೊಂದಿಗೆ ಪರಸ್ಪರ ಸಮಾನತೆಯನ್ನು ಹೊಂದಿರುವ ನಮ್ಮ ದೇಶವು ಭಾಷೆಯ ಸಂಬಂಧ ಅವರನ್ನು ದ್ವೇಷಿಸುವುದರಿಂದಾಗಲೀ, ಭಾಷಾ ಶ್ರೇಷ್ಠತೆಯನ್ನು ಅಳೆಯುವುದರಿಂದಾಗಲೀ ಏನನ್ನೂ ಸಾಧಿಸಲಾಗದು. ಬ್ರಿಟನ್‌ನಿಂದ ಬಿಡುಗಡೆಗೊಂಡ ಅಮೆರಿಕ ಈಗ ಅಮೆರಿಕದ ಇಂಗ್ಲಿಷನ್ನು ಹೊಂದಿದೆ. ಬ್ರಿಟನ್ ತನ್ನ ಇಂಗ್ಲಿಷನ್ನು ಹೊಂದಿದೆ. ಗಣಕ ತಂತ್ರಜ್ಞಾನದ ಪರಿಚಯವಿರುವವರಿಗೆ ಇಂಗ್ಲಿಷ್ ಎಂದರೆ ಅಷ್ಟೇ ಸಾಕಾಗುವುದಿಲ್ಲ. ಅಲ್ಲಿರುವ ಈ ಇಂಗ್ಲಿಷಿನಿಂದ ಹೊರತಾದ ಭಾರತೀಯ ಇಂಗ್ಲಿಷಿನ ಸಲಕರಣೆಗಳೂ ಕೀಲಿಮಣೆಯೂ ಇರುವುದನ್ನು ಕಾಣಬಹುದು. ಅಮೆರಿಕವು ಹೇಗೆ ತನ್ನದೇ ಇಂಗ್ಲಿಷನ್ನು ಹೊಂದಿದೆಯೋ ಹಾಗೆಯೇ ಭಾರತವೂ ತನ್ನ ಇಂಗ್ಲಿಷನ್ನು ತನ್ನ ಭೂಗುಣಗಳಿಗೆ ಮತ್ತು ಜನಗುಣಗಳಿಗೆ ಅನುಸಾರವಾಗಿ ಮಾರ್ಪಡಿಸಬಹುದು. ಇಂಗ್ಲಿಷನ್ನು ಬಹಿಷ್ಕರಿಸಬೇಕಾಗಿಲ್ಲ. ಅದು ಸಂಪರ್ಕಭಾಷೆಯಾಗಿ ಪ್ರಭುತ್ವದ ಹೊರತಾಗಿಯೂ ತನ್ನದೇ ಪ್ರಭಾವ ಮತ್ತು ಉಪಯುಕ್ತತೆಯಿಂದಾಗಿ ಕಣದಲ್ಲಿದೆ.
ಕನ್ನಡವೆಂದಲ್ಲ, ಭಾರತದ ಎಲ್ಲ ದೇಶೀ ಭಾಷೆಗಳಿಗೂ ಕನ್ನಡದ್ದೇ ಅಪಾಯ, ಆತಂಕಗಳಿವೆ. ಇವನ್ನು ಒಕ್ಕೂಟ ವ್ಯವಸ್ಥೆಯಲ್ಲಿ ಪ್ರಜಾಪ್ರಭುತ್ವ ಮೌಲ್ಯಗಳ ಸಂವಿಧಾನದಡಿ ಪರಿಶೀಲಿಸಬೇಕು. ಆದರೆ ಕೇಂದ್ರದ ಆಡಳಿತವು ಭಾಷಾ ಗೌರವವನ್ನು ಹೊಂದದೆ ತನ್ನ ಗುಪ್ತ ಅಧಿಕಾರ ಸೂಚಿಯನ್ನು ಭಾಷೆಯ ಮೂಲಕ ಹೇರಲು ತೊಡಗಿದಾಗ ಪ್ರತೀ ಭಾಷಿಕನ ಅಸ್ಮಿತೆಯ ಪರೀಕ್ಷೆಯಾಗುತ್ತದೆ. ಸದ್ಯ ಭಾರತದಲ್ಲಿ ಬಂದಿರುವ ತೊಡಕು ಇದೇ. ಸರ್ವವಿಧಿತವಾದ ವಿಷಯವೆಂದರೆ ಉತ್ತರ ಭಾರತದ ಬಹಳಷ್ಟು ಪ್ರದೇಶಗಳಲ್ಲಿ ಹಿಂದಿ ಅಥವಾ ಅದಕ್ಕೆ ಸಮೀಪವಾದ ಭಾಷೆಗಳು ಪ್ರಚಲಿತವಿವೆ. ಇವುಗಳಲ್ಲಿ ಯಾವುದು ಹಳೆಯದು, ಯಾವುದು ಹೊಸದು ಅಥವಾ ಯಾವುದು ಯಾವುದನ್ನು ಅವಲಂಬಿಸಿದೆ ಎಂಬುದು ಗೌಣ. ಆದ್ದರಿಂದ ಅವರಿಗೆ ಒಂದು ಸಮಾನವಾದ ಭಾವತರಂಗ ಹಿಂದಿಯ ಮೂಲಕ ಒದಗಬಹುದು ಅಥವಾ ಅವರದನ್ನು ಸಹಿಸಬಹುದು.
ದಕ್ಷಿಣ ಭಾರತದಲ್ಲಿ ಈ ಪರಿಸ್ಥಿತಿಯಿಲ್ಲ. ಪ್ರಾಥಮಿಕ ಸ್ತರದಲ್ಲಿ ಕನ್ನಡವನ್ನು ಬಳಸಿದ ವಿದ್ಯಾರ್ಥಿಯು ಮಾಧ್ಯಮಿಕ ಹಂತದಲ್ಲಿ ಅನಿವಾರ್ಯವಾಗಿ ಹಿಂದಿಯನ್ನು ಕಲಿತರೂ ಅದು ಪರೀಕ್ಷೆಯ ಭಾಷೆ/ವಿಷಯವಾಗಿದೆಯೇ ಹೊರತು ನಿತ್ಯಬಳಕೆಯ ಆಹಾರವಾಗಿಲ್ಲ. ಮಾತೃಭಾಷೆಯಲ್ಲದೆ ವ್ಯವಹಾರಕ್ಕೆ ಅತ್ಯಂತ ಅನುಕೂಲ ಮತ್ತು ಬಹಳಷ್ಟು ಸಂದರ್ಭಗಳಲ್ಲಿ ಅನಿವಾರ್ಯವೂ ಆಗಿರುವ ಇಂಗ್ಲಿಷ್ ಸ್ವಾಗತಾರ್ಹ. ಅದು ಕನ್ನಡದ ನೆಲದಿಂದ ವಿಶ್ವದ ಮೂಲೆಮೂಲೆಗೂ ಸಂಚರಿಸಬಲ್ಲ ವಾಹನ. ಅದಲ್ಲದೆ ಇನ್ನೂ ಒಂದು ಭಾಷೆಯು ಅದು ಹಿಂದಿಯೇ ಇರಲಿ, ಸಂಸ್ಕೃತವೇ ಇರಲಿ ಅಥವಾ ವ್ಯಕ್ತಿಗತವಾಗಿ ಕಲಿಯಲು, ಬಳಸಲು ಇಚ್ಛಿಸುವ ಯಾವುದೇ ಭಾರತೀಯ ಭಾಷೆಯೇ ಇರಲಿ, ಅನಿವಾರ್ಯವಾಗಿಸದೆ ಐಚ್ಛಿಕವಾಗಿರಿಸಬೇಕು. ಈಗ ಇಂಗ್ಲಿಷಿನ ವಿರುದ್ಧ ನಡೆಯುತ್ತಿರುವ ಅಭಿಯಾನವು ಕನ್ನಡವನ್ನು ಪೋಷಿಸುವ ಬದಲು ಕೇಂದ್ರದ ಆಡಳಿತದಿಂದ ರಾಜ್ಯಗಳ ಮೇಲೆ ಹೇರುವ ಸಂಚಿನಂತೆ ಭಾಸವಾಗುತ್ತಿದೆ. ಭಾಷೆಯನ್ನು ಆಳುವ ಭಾಷೆಯಾಗಿಸಿದರೆ ಅದರ ಗತಿಯೇನಾಗುತ್ತದೆಯೆಂದು ಸಂಸ್ಕೃತವನ್ನು ನೋಡಿ ಕಲಿಯಬೇಕು, ಇಲ್ಲವೇ ಮರೆಯಬೇಕು. ಸದ್ಯ ಉತ್ತರ ಭಾರತದವರಿಗೆ ಹಿಂದಿಯ ಬಳಕೆಯಿಂದ ಹಾನಿಯಿಲ್ಲ. ಅವರು ಅದನ್ನು ನಿತ್ಯದಲ್ಲಿ ಬಳಸುತ್ತಾರೆ. ಆದರೆ ದಕ್ಷಿಣದ ರಾಜ್ಯಗಳಲ್ಲಿ ಅವು ಇಷ್ಟು ಸುಲಭವಾಗಿಲ್ಲ. ಇಲ್ಲಿ ಮಾತೃಭಾಷೆಯೊಂದಿಗೆ ಇಂಗ್ಲಿಷ್ ತನ್ನ ವಿಶ್ವಾತ್ಮಕತೆಯಿಂದಾಗಿ ಅನಿವಾರ್ಯವಾಗಿರುವುದರಿಂದ ಮೂರನೇ ಭಾಷೆ ಯಾವುದೇ ಇರಲಿ ಕಡ್ಡಾಯವಾಗಿಸಿದರೆ ಅದು ಗಂಟಲಲ್ಲಿ ಇಳಿಯಲಾರದು. ಸಾಂಸ್ಕೃತಿಕ ಸಾಮ್ಯತೆಯಿಲ್ಲದೆ ಯಾವ ಭಾಷೆಯೂ ಮಾತೃಭಾಷೆಯೊಂದಿಗೆ ಮಿಳಿತವಾಗದು.
ಈ ದೃಷ್ಟಿಯಿಂದ ತಮಿಳುನಾಡು ಆರಂಭಿಸಿದ ಪ್ರತಿಭಟನೆಯು ಹಿಂದಿಯನ್ನು ಒಂದು ಬರೀ ಭಾಷೆಯಾಗಷ್ಟೇ ವಿರೋಧಿಸಿದೆಯೆಂದು ತಿಳಿಯಬಾರದು. ಅದು ಈಗ ಒಂದು ಪಾಳೇಗಾರಿಕೆ ಅಥವಾ ಪ್ರಭುತ್ವ ಭಾಷೆಯಂತೆ ಹೇರಲ್ಪಟ್ಟಿದೆ. ಭಾಷೆಯಾಗಿ ಹಿಂದಿಯನ್ನು ಇಷ್ಟಪಡೋಣ. ನಮ್ಮ ಪ್ರಭುತ್ವಭಾಷೆಯಾಗಿ ಅಲ್ಲ; ರಾಷ್ಟ್ರಭಾಷೆಯಾಗಿ ಅಲ್ಲ. ಗೀತಾಂಜಲಿಯನ್ನು ಯೇಟ್ಸನ ಮೂಲಕ ಓದಿದ ನಮಗೆ, ಈಗ ಇಮೈಲ್ ವ್ಯವಸ್ಥೆಯ ಪಥಿಕರಾಗಿರುವ ನಮಗೆ, ಇಂಗ್ಲಿಷ್ ಹಿಂದಿಗಿಂತ ಹತ್ತಿರವಾಗಿ ಕಂಡರೆ ಅಚ್ಚರಿಯಿಲ್ಲ. ಇದನ್ನು ಮನಗಾಣದೆ ಕನ್ನಡಿಗರು ಸುಮ್ಮನಿದ್ದರೆ ಈಗಾಗಲೇ ವಿಶ್ವಾತ್ಮಕತೆಯ ಅಪ್ಪುಗೆಯಿಂದ ಬೆಂಗಳೂರು ಮತ್ತು ಅಲ್ಲಿನ ಅವಕಾಶವಾದಿ ಕನ್ನಡಿಗರು ಕನ್ನಡವನ್ನು ತಳ್ಳಿದ ಕೂಪಕ್ಕೆ ಇಡೀ ರಾಜ್ಯವೇ ತಳ್ಳಲ್ಪಡಬಹುದು. ಕರ್ನಾಟಕದಲ್ಲಿ ಕನ್ನಡ ಅನಿವಾರ್ಯವೆಂದು ಕನ್ನಡಿಗರಿಗೇ ಅನ್ನಿಸದಿದ್ದರೆ, ಪರಭಾಷಿಕರಿಗೆ ಹೇಗೆ ಅನ್ನಿಸೀತು?
ಮರಾಠಿಯರು ಹೇಗೆ ಮರಾಠಿಗೆ ಒತ್ತುಕೊಟ್ಟು ಅಲ್ಲಿರುವ ಇತರರನ್ನು ಮರಾಠಿಯಲ್ಲಿ ಮಾತನಾಡಬೇಕೆಂದು ಒತ್ತಾಯಪಡಿಸುತ್ತಾರೋ ಅಂತಹ ಆದರೆ ಅಹಿಂಸಾತ್ಮಕ ಹೋರಾಟ ಕನ್ನಡಿಗರದ್ದೂ ಆಗಬೇಕು. ಈ ಮೇಳದಲ್ಲಿ ತಮಿಳುನಾಡು ನಾಯಕತ್ವವನ್ನು ವಹಿಸಿದೆ. ಅದಕ್ಕೆ ಪಕ್ಕವಾದ್ಯ ಕರ್ನಾಟಕದ್ದೂ ಇರಲಿ, ಕೇರಳದ್ದೂ ಇರಲಿ, ತೆಲುಗುನಾಡುಗಳದ್ದೂ ಇರಲಿ. ವಿಶ್ವಕ್ಕೆ, ದೇಶಕ್ಕೆ ಇಂಗ್ಲಿಷ್ ಸಂಪರ್ಕಸೇತುವಾಗಿರಲಿ; ಆದರೆ ನಮ್ಮ ಬದುಕಿಗೆ ಮಾತೃಭಾಷೆಯೇ ಇರಲಿ; ಹಿಂದಿ ಈ ಪಯಣದಲ್ಲಿ ಹೇರಿದ ಹೊರೆಯಾಗದಿರಲಿ.