ಆರ್ಥಿಕತೆಯ ಅರ್ಥಾನರ್ಥ

ದೇಶದ ನೇರ ಸಮಸ್ಯೆಗಳನ್ನು ಚಿಂತಿಸಲಾಗದವರು ಇನ್ಯಾವ ರೀತಿಯಲ್ಲೂ ಸಮಾಜಕ್ಕೆ ಸ್ಪಂದಿಸಲಾರರು. ತನ್ನ ಶ್ರೇಷ್ಠತೆಯ ಕುರಿತೇ ವ್ಯಸನಿಗಳಾದವರು ಕೊನೆಗೂ ದಾಖಲೆಗಳಲ್ಲಿ ಉಳಿಯುವರೇ ಹೊರತು ಜನಮಾನಸದಲ್ಲಲ್ಲ. ಇದೇ ನಮ್ಮ ರಾಜಕಾರಣಿಗಳಿಗೆ ಶ್ರೀರಕ್ಷೆ. ಎಲ್ಲಿಯ ವರೆಗೆ ಈ ತಜ್ಞರೆನಿಸಿಕೊಂಡವರು ತಮ್ಮ ವೈಯಕ್ತಿಕ ಸಂತೋಷ, ಲಾಭಗಳ ಕುರಿತು ಚಿಂತಿಸುತ್ತಾರೋ ಅಲ್ಲಿಯವರೆಗೂ ದೇಶದ ಸ್ಥಿತಿ ಹೀಗೇ ಡೋಲಾಯಮಾನವಾಗಿರುತ್ತದೆ. ಡಾಲರಿನೆದುರು ರೂಪಾಯಿಯ ಬೆಲೆ ಎಷ್ಟಾದರೂ ಆಗಲಿ, ತಮ್ಮ ಮಕ್ಕಳು ಅಮೆರಿಕದಿಂದ ಕಳಿಸುವ ಡಾಲರು ಇಲ್ಲಿ ಹೆಚ್ಚು ರೂಪಾಯಿಗಳನ್ನು ನೀಡುತ್ತದೆಯೆಂಬುದಷ್ಟೇ ಹೆತ್ತವರಿಗೆ ಪ್ರಾಣಪ್ರತಿಷ್ಠೆಯ ದೇವರಾಗುತ್ತದೆ. ಉಳಿದದ್ದೆಲ್ಲ ಡಾಲರ್ ಕಾಣದ ರೂಪಾಯಿಯಡಿಯೇ ಬದುಕು ಕಾಣಬೇಕಾದ ಬಲವಂತರ ನತದೃಷ್ಟ ಜೀವನವಾಗುತ್ತದೆ.

Update: 2025-01-16 05:50 GMT

ಕೆಲವು ಬಾರಿ ಅನ್ನಿಸುವುದಿದೆ: ಅರ್ಥಶಾಸ್ತ್ರವೆಂದರೆ ಸಂಕೀರ್ಣ ಕಥೆ-ಕಾವ್ಯದ ಹಾಗೆ ಅಂತ. ಅರ್ಥವಾಗುವುದಿಲ್ಲ; ಆದರ ಅನುಭವವಾಗುತ್ತದೆ; ಅನುಭವಕ್ಕೆ ಬರುತ್ತದೆ. ಇದನ್ನು ಶಾಲೆಗಳಲ್ಲಿ ಬೋಧಿಸುವುದಿಲ್ಲ; ಕಾಲೇಜುಗಳಲ್ಲಿ ಅದೂ ಒಂದು ಪಠ್ಯ. ಉನ್ನತ ಶಿಕ್ಷಣದಲ್ಲಿ ಅದು ವಿಜ್ಞಾನದ ಉನ್ನತ ಜ್ಞಾನದ ಹಾಗೆ ಸೂಕ್ಷ್ಮವಾಗುತ್ತ ಹೋಗುತ್ತದೆ. ಎಲ್ಲರಿಗೂ ಅರ್ಥವಾಗದು. ನೊಬೆಲ್ ಪ್ರಶಸ್ತಿ ಪುರಸ್ಕೃತರ ಸಂಶೋಧನೆಗಳು ಮಹತ್ವದ್ದು ಎನ್ನುತ್ತೇವೆ; ಅದರೆ ವಿವರಿಸಲು ಹೋಗುವವರು ಆಯಾಯ ಪಠ್ಯತಜ್ಞರು ಮಾತ್ರ. ಆದರೆ ಬದುಕಿನಲ್ಲಿ ಪ್ರಭಾವ ಬೀರುತ್ತದೆ. ಆದ್ದರಿಂದ ಯಾವುದೇ ಜ್ಞಾನವೇ ಇರಲಿ ಬದುಕಿಗೆ ಬೇಕು. ಅರ್ಥವಾಗಬೇಕು. ಆಗ ಇನ್ನೂ ಸೊಗಸು. ಇಲ್ಲವಾದರೆ ಸೋಜಿಗ; ಚೋದ್ಯ.

ಈಗ ಮಾಧ್ಯಮಗಳಲ್ಲಿ ಅಮೆರಿಕದ ಡಾಲರ್‌ನೆದುರು ಭಾರತದ ರೂಪಾಯಿ ಭಾರೀ ಕುಸಿತ ಕಂಡು ಸುಮಾರು 90 ರೂಪಾಯಿಯ ಬಳಿ ತಲುಪಿದೆಯೆಂದು ಸುದ್ದಿ. ಇರಬಹುದು. ಆದರೆ ಇದನ್ನು ನಿರಾಕರಿಸುವವನಿಗೆ ಇದನ್ನು ಹೇಳಿ ಫಲವಿಲ್ಲ. ಈ ವಿದ್ಯಮಾನವು ಜಾಗತಿಕವಾದದ್ದು. ಪ್ರಾಯಃ ಯುರೋ ಅಥವಾ ಪೌಂಡಿನ ಬೆಲೆಗೆ ಹೋಲಿಸಿದರೆ ಭಾರತದ ರೂಪಾಯಿಯ ಬೆಲೆ ಇನ್ನೂ ದಯನೀಯವಾಗಿರುವ ಸಾಧ್ಯತೆಯಿದೆ. ನೆರೆಯ ಅಫ್ಘಾನಿಸ್ತಾನದ ಕರೆನ್ಸಿ ಭಾರತಕ್ಕಿಂತ ಹೆಚ್ಚು ಬೆಲೆಬಾಳುತ್ತದೆಂದೂ ಓದಿದೆ. ಇದರ ರಹಸ್ಯವೇನು? ಇರಲಿ. ಅದರ ಪಾಡು ನಮಗೆ ಬೇಡ. ನಮಗೆ ನಮ್ಮ ದೇಶದ ಮತ್ತು ಡಾಲರ್ ಸೊಸೆಯ ಸಂಬಂಧದ ಅರ್ಥವಾದರೆ ಸಾಕು.

ಒಂದು ದೇಶದ ಆರ್ಥಿಕತೆಯನ್ನು ಹೋಲಿಸುವುದು ಅಲ್ಲಿನ ಜೀವನ ಮಟ್ಟದ ಆಧಾರದಲ್ಲಿ ಎಂದು ಕೇಳಿದ್ದೇನೆ. ಭಾರತದ ಜಿಡಿಪಿ ಎಷ್ಟು ಹೆಚ್ಚಿದೆ ಮುಂತಾದ ವಿಚಾರದ ಕುರಿತು ಅರ್ಥಶಾಸ್ತ್ರಜ್ಞರು ಹೇಳಬೇಕು. ಜನಸಾಮಾನ್ಯರಿಗೆ ಇದು ಅರ್ಥವಾಗಬೇಕಾಗಿಲ್ಲ. ಭಾರತ ತಲಾ ಆದಾಯ ಎಷ್ಟು ಕುಸಿದಿದೆ ಅಥವಾ ತಲಾ ಸಾಲ ಎಷ್ಟು ಹೆಚ್ಚಿದೆ ಇವು ಸದ್ಯ ಬಡ ಭಾರತೀಯನನ್ನು ಕಾಡುವುದಿಲ್ಲ. ಆತನಿಗೆ ದೈನಂದಿನ ಬದುಕಿನ ಸಾಧುತ್ವ ಮಾತ್ರ ಸಂಬಂಧವಾಗುತ್ತದೆ. ಭಾರತವು ಒಟ್ಟು ಎಷ್ಟು ವಾರ್ಷಿಕ ಆದಾಯವನ್ನು ಹೊಂದಿದೆ ಮತ್ತು ಇದರಲ್ಲಿ ಸಾಲದ ಬಡ್ಡಿ ಕಟ್ಟಲು ಎಷ್ಟು ಹಣವನ್ನು ಹೊಂದಿಸಬೇಕಾಗುತ್ತದೆ, ಅಕಸ್ಮಾತ್ ಅದನ್ನು ಪಾವತಿಸದಿದ್ದರೆ ಏನು? ಯುದ್ಧವಾಗುತ್ತದೆಯೇ? ಯಾರನ್ನಾದರೂ ಬಂಧಿಸಿ ಒಯ್ಯಲಾಗುತ್ತದೆಯೇ ಮುಂತಾದ ವಿಚಾರಗಳೆಲ್ಲ ನಮ್ಮ ಸಾಮಾನ್ಯ ತಲೆಯೊಳಗೆ ಪ್ರವೇಶಿಸವುದಿಲ್ಲ.

ವಿಜ್ಞಾನಿಯೊಬ್ಬ ತನ್ನ ಭಾಷಣದ ನಡುವೆ ‘‘ಭೂಮಿಯು ಇನ್ನು ಹತ್ತು ಮಿಲಿಯ ವರ್ಷಗಳಲ್ಲಿ ನಾಶವಾಗಬಹುದು’’ ಎಂದ. ಜನರೆಲ್ಲ ತಲೆಗೆ ಕೈಹೊತ್ತು ಕುಳಿತರು. ಭಾಷಣ ಕೇಳಲು ಬಂದ ಹಿಂದಿನ ಸಾಲಿನಲ್ಲಿ ಮಂಪರಿನಲ್ಲಿದ್ದ ಮುದುಕಿಯೊಬ್ಬಳು ಎದ್ದುನಿಂತು ತಲೆಕೆರೆದು ‘‘ಎಷ್ಟು?’’ ಎಂದು ಪ್ರಶ್ನಿಸಿದಳು. ಆತ ‘‘ಹತ್ತು ಮಿಲಿಯ ವರ್ಷ’’ ಎಂದು ಮತ್ತೆ ಹೇಳಿದ. ಆಕೆ ‘‘ಹಾಗಾದರೆ ಪರವಾಗಿಲ್ಲ, ನಾನೆಲ್ಲೋ ಐದು ಮಿಲಿಯ ವರ್ಷ ಎಂದುಕೊಂಡೆ’’ ಎಂದು ಹೇಳಿ ಮತ್ತೆ ನಿಶ್ಚಿಂತೆಯಿಂದ ಮಂಪರಿಗೆ ಮರಳಿದಳು. ದೊಡ್ಡ ಸಮಸ್ಯೆಗಳು ಹೀಗೆ ಶ್ರೀಸಾಮಾನ್ಯನನ್ನು ಕಾಡಲಾರವು.

ತೀರಾ ಅಪಾಯ ಹತ್ತಿರವಾದಾಗಲೂ ನಾವು ಏನೂ ಮಾಡಲಾರೆವು. ಇದಕ್ಕೂ ಒಂದು ಹಗುರು ಉದಾಹರಣೆಯಿದೆ. ರೈಲ್ವೇ ಕಾವಲುಗಾರನ ಹುದ್ದೆಯ ಸಂದರ್ಶನಕ್ಕೆ ಬಂದ ಅಭ್ಯರ್ಥಿಯೊಬ್ಬನಿಗೆ ಸಂದರ್ಶಕರು ‘‘ಒಂದೇ ಹಳಿಯಲ್ಲಿ ಎರಡು ರೈಲುಗಳು ಪರಸ್ಪರ ವಿರುದ್ಧ ದಿಕ್ಕಿನಿಂದ ಬಂದರೆ ಏನು ಮಾಡುತ್ತಿ’’ ಎಂದು ಪ್ರಶ್ನಿಸಿದರು. ರೈಲ್ವೆ ಕುರಿತು ಅಲ್ಪಸ್ವಲ್ಪ ಓದಿಕೊಂಡು ಹೋಗಿದ್ದ ಅವನು ‘‘ಸಿಗ್ನಲ್ ನೀಡುತ್ತೇನೆ’’ ಎಂದ. ‘‘ಮತ್ತೂ ನಿಲ್ಲಿಸದಿದ್ದರೆ ಏನು ಮಾಡುತ್ತಿ?’’ ‘‘ಹಳಿಯಲ್ಲಿ ನಿಂತು ಕೆಂಪು ಬಟ್ಟೆಯಲ್ಲಿ ಸೂಚನೆ ನೀಡಿ ಕೂಗಿ ನಿಲ್ಲಿಸಲು ಪ್ರಯತ್ನಿಸುತ್ತೇನೆ.’’ ‘‘ಆದರೂ ನಿಲ್ಲಿಸದಿದ್ದರೆ..?’’ ‘‘ಪಕ್ಕದಲ್ಲೇ ಇರುವ ನನ್ನ ಮನೆಯಿಂದ ನನ್ನ ಪತ್ನಿಯನ್ನು ಕರೆಯುತ್ತೇನೆ’’ ಈಗ ಸಂದರ್ಶಕರು ಅವಾಕ್ಕಾದರು. ‘‘ಅವಳೇನು ಮಾಡುತ್ತಾಳೆ?’’ ‘‘ಅವಳೇನೂ ಮಾಡುವುದಿಲ್ಲ, ಈಗ ಒಂದು ಅಪಘಾತ ನಡೆಯುತ್ತದೆ, ನೋಡುವುದಾದರೆ ನೋಡು ಎನ್ನುತ್ತೇನೆ’’ ಮನುಷ್ಯನ ಆತ್ಯಂತಿಕ ಸ್ಥಿತಿ ಇದೇ. ನಿಯಂತ್ರಿಸಲಾಗದ್ದನ್ನು ಅಸಹಾಯಕತೆಯಿಂದ ಗಮನಿಸುವುದು.

ದಿನನಿತ್ಯದ ಬದುಕಿನಲ್ಲಿ ಕಾಯಿಪಲ್ಲೆಗಳ, ಜೀನಸುಗಳ, ಬಟ್ಟೆಬರೆಗಳ ಬೆಲೆಯಿಂದ ಒಂದು ದೇಶದ ಆರ್ಥಿಕತೆಯನ್ನು ಅಳೆಯಬಹುದೇ? ಅಥವಾ ಅವನ್ನು ಕೊಳ್ಳುವ ಶಕ್ತಿಯ ಆಧಾರದಲ್ಲಿ ಅಳೆಯಬೇಕೇ? ಇದನ್ನು ನಿರ್ಧರಿಸುವವರು ಎಲ್ಲೋ ಕುಳಿತು ಬಡಜನರ ಸ್ಥಿತಿಗತಿಯನ್ನು ಗಮನಿಸುವರೇ? ಗಮನಿಸಿದರೂ ಅದಕ್ಕೆ ಸೂಕ್ತ ಪರಿಹಾರ ನೀಡಬಲ್ಲರೇ?

ಆದರೆ ಕೃಷಿಕರಿಗೆ ತಮ್ಮ ಫಸಲಿನ ಪರಿಮಾಣವೇ ಪ್ರಕೃತಿಯನ್ನವಲಂಬಿಸಿಕೊಂಡಾಗ ಮತ್ತು ಒಂದೊಮ್ಮೆ ಅದು ಸುಭಿಕ್ಷವಾದರೂ ಇನ್ಯಾರೋ ನಿಯಂತ್ರಿಸುವ ಮಾರುಕಟ್ಟೆ ತಮಗೆ ಒದಗಿಬರದಾಗ, ಯಾವ ಆಯವ್ಯಯ ಪತ್ರ ಅವರಿಗೆ ನೆರವಾದೀತು? ಕೃಷಿ ಪರಿಹಾರವೆಂಬ ರಾಜಕೀಯ ನಡೆಯಲ್ಲಿ ತಮ್ಮ (ಸಂ)ಕಷ್ಟಗಳನ್ನು ಪರಿಹಾರಮಾಡಿಕೊಂಡವರೆಷ್ಟು ಮಂದಿ? ಇದ್ದರೂ ಅದು ಶಾಶ್ವತವೇ? ಮುಂದಿನ ವರ್ಷ-ಬರಗಾಲವಾದರೂ ಸರಿಯೆ, ನೆರೆ ಬಂದರೂ ಸರಿಯೆ, ರೋಗರುಜಿನಗಳು, ಕ್ರಿಮಿಕೀಟಗಳು ಬಂದರೂ ಸರಿಯೆ, ಅವರ ದೋಣಿ ಮುಳುಗುತ್ತದೆ. ಯಾವ ಲೆಕ್ಕಾಚಾರವೂ ಅವರನ್ನು ರಕ್ಷಿಸದು.

ಹಾಗೆಂದು ಕೃಷಿಕರು ಬದುಕುತ್ತಿಲ್ಲವೇ? ಬದುಕುತ್ತಾರೆ. ಬದುಕಲು ಸಾಧ್ಯವಾಗದಾಗ ಬದುಕಲು ಇನ್ನೇನೋ ಉಪಾಯ ಹುಡುಕುತ್ತಾರೆ. ಚದುರಂಗದಲ್ಲಿದೆಯಲ್ಲ ‘ಚೆಕ್‌ಮೇಟ್’ ಅಂತ- ಹಾಗಾದಾಗ ಪಲಾಯನ; ಕೆಲವೊಮ್ಮೆ ಬದುಕಿನಿಂದಲೇ ಪಲಾಯನ. ಕೃಷಿಕರಷ್ಟು ಆತ್ಮಹತ್ಯಾ ಪರಿಣಿತರು ಬೇರೆ ಕ್ಷೇತ್ರದಲ್ಲಿ ಇರಲಾರರು ಎಂದು ಅನ್ನಿಸುತ್ತದೆ.

ನಮ್ಮ ಸಾಮಾಜಿಕ ಸಮಾನತೆಯ ಪ್ರಶ್ನೆ ಎದುರಾದಾಗ ಇವೆಲ್ಲ ಮುನ್ನೆಲೆಗೆ ಬರಬೇಕು. ಬರುತ್ತವೆಯೇ? ಭಾರತದ ಸದ್ಯದ ಸ್ಥಿತಿಯನ್ನು ಗಮನಿಸಿದರೆ ಕೆಲವರಲ್ಲಿ ಇಡೀ ದೇಶವನ್ನು ಕೊಳ್ಳುವಷ್ಟು ಹಣವಿದೆ. ಇನ್ನು ಕೆಲವರಲ್ಲಿ ತಮ್ಮ ಧನ, ಕನಕ, ವಸ್ತು, ವಾಹನ ಮಾತ್ರವಲ್ಲ, ತಮ್ಮನ್ನೇ ಅಥವಾ ಸಂಸಾರವನ್ನೇ ಮಾರಿದರೂ ಸಾಲದಿಂದ ಮುಕ್ತರಾಗದ ಸ್ಥಿತಿಯಿದೆ. ಈಗ ದೇಶದ ಶ್ರೀಮಂತಿಕೆಯ ಮಾನದಂಡವೇನು? ಹಣವುಳ್ಳವರ ಮಾನವೇ ಅಥವಾ ಹಣವಿಲ್ಲದವರ ಅವಮಾನವೇ? ಸದ್ಯ ದೇಶದಲ್ಲಿ ಅದಾನಿ, ಅಂಬಾನಿ, ಮಹೇಂದ್ರ ಮುಂತಾದ ಉದ್ಯಮಿಗಳ ಬಳಿ ವಿದೇಶದಲ್ಲಿ ಆಸ್ತಿ ಕೊಳ್ಳುವಷ್ಟು ಸಂಪತ್ತಿದೆ. ಅವರ ಜೀವನ ಶೈಲಿಯು ಬಡಬಗ್ಗರ ಕನಸಿನಲ್ಲೂ ಬಾರದು. ಈಚೆಗೆ ನಡೆದ ಒಂದು ವಿವಾಹ ಮತ್ತು ವಿವಾಹಪೂರ್ವ ಸಂಭ್ರಮದ ವಿವರಣೆಯನ್ನು ನೀಡಿದ ಮಾಧ್ಯಮ ಮಿತ್ರರು ಈ ಸಂಭ್ರಮದ ಹಿಂದೆ ಇದ್ದ ಶೋಷಣೆಯನ್ನಾಗಲೀ ಅದನ್ನು ಹಂಚಿ ಅನೇಕರ ಬಾಳನ್ನು ಬೆಳಗಿಸುವ ಕುರಿತು ಬರೆಯದಾದರು. ನಮ್ಮ ರಾಜಕೀಯ ನಾಯಕರು ಉತ್ಸಾಹದಿಂದಲೇ ಪಕ್ಷಭೇದ ಮರೆತು ಭಾಗವಹಿಸಿದರು. ದೇಶದ ಕಟ್ಟ ಕಡೆಯವನ ಅಗತ್ಯಗಳ ಬಗ್ಗೆ ಯಾರೂ ಯೋಚಿಸಿರಲಾರರು. ಸಮಾಜಕ್ಕೆ ಅದಕ್ಕಿಂತ ಹೆಚ್ಚಿನ ಪಂಚತಾರಾ ವಿಚಾರಗಳು ಗಮನದಲ್ಲಿವೆ.

ಅರ್ಥಶಾಸ್ತ್ರಜ್ಞರು ಎಲ್ಲವನ್ನೂ ಸರಾಸರಿಯ ಆಧಾರದಲ್ಲೇ ನೋಡುತ್ತಾರೆ ಅನ್ನಿಸುತ್ತದೆ. ರಾಜಕೀಯದ ಅರ್ಥ ತಜ್ಞರು ತಮ್ಮೊಡೆಯರ ಬಳಿ ಅವರಿಗೆ ಆಗಬೇಕಾದ್ದೇನು ಎಂಬುದನ್ನು ಕೇಳಿಕೊಂಡು ಅದಕ್ಕನುಗುಣವಾದ ಪರಿಹಾರವನ್ನು, ಸೂತ್ರಗಳನ್ನು ಮಂಡಿಸುತ್ತಾರೆ. ಇದರಲ್ಲಿ ಸುಟ್ಟುಹೋಗುವ, ಸತ್ತುಹೋಗುವ, ಬಲಿಯಾಗುವ ಮೌನಮಂದಿ ಅವರಿಗೆ ಗೌಣ. ವಾಸ್ತವದಲ್ಲಿ ಇದು ನಡೆಯದು. ಗಣಿತ ತಜ್ಞರೊಬ್ಬರು ಸರಾಸರಿ ಅಳತೆಯಲ್ಲಿ ಹೊಳೆದಾಟಹೋಗಿ ಮುಳುಗಿದರಂತೆ. ಎರಡು ಬದಿಯಲ್ಲಿ ಸುಮಾರು ಎರಡೆರಡು ಅಡಿ, ಮಧ್ಯ ಆರು ಅಡಿ ಹೀಗೇನೋ ಅಳತೆಮಾಡಿ ದಾಟಲು ಹೋಗಿ ನಡುವಿಗೆ ಬಂದಾಗ ಆ ಆರು ಅಡಿಯು ಅವರ ಪಾಲಿಗೆ ಮಾರಕವಾಯಿತು!

ಉದ್ಯೋಗದಲ್ಲಿರುವವರಿಗೆ ತಮ್ಮ ನಿಗದಿತ ಸಂಬಳದ ಮತ್ತು ನಿವೃತ್ತರಿಗೆ ತಮ್ಮ ನಿವೃತ್ತಿವೇತನದ ಮಿತಿಯೊಳಗೆ ಬದುಕುವ ಒಂದು ಸೂತ್ರದ ಅಗತ್ಯವಷ್ಟೇ ಇದ್ದೀತು. ಆತ ತಾರೀಕು ಮತ್ತು ಒಟ್ಟು ಆದಾಯವನ್ನು ಲೆಕ್ಕ ಹಾಕಿಕೊಂಡು ಅದಕ್ಕೊಂದು ಭಾಗಕಾರ ಗುಣಾಕಾರ ಮಾಡಿಕೊಂಡು ಸೂಚ್ಯಂಕದ ಲಕ್ಷ್ಮಣರೇಖೆಯನ್ನು ದಾಟದಿದ್ದರಾಯಿತು. ಒಬ್ಬರಿಗಿಂತ ಹೆಚ್ಚು ಮಂದಿ ಮನೆಯಲ್ಲಿದ್ದರೆ ಈ ಸವಾಲು ಸುಲಭವಾದೀತು. ಈಚೆಗೆ ಇಬ್ಬರು ದೊಡ್ಡ ಉದ್ಯಮಿಗಳು ಉದ್ಯೋಗಿಗಳು 72-80 ಹೀಗೆ ತಮ್ಮ ಲೆಕ್ಕಾಚಾರದ ಗಂಟೆಗಳನ್ನು ಸೂಚಿಸಿ ಅಷ್ಟು ದುಡಿಯಬೇಕೆಂದರು. ಒಬ್ಬರಂತೂ ರವಿವಾರ (ಅಥವಾ ರಜಾದಿನ) ಪತ್ನಿಯ ಮುಖವನ್ನು ನೋಡಬೇಕೆಂದೇನಿದೆ? ಕಚೇರಿಗೆ ಬನ್ನಿ ಎಂಬ ಅದ್ಭುತ ಸಲಹೆಯನ್ನು ನೀಡಿದರು. ನನಗಂತೂ ಮೊದಲ ಬಾರಿಗೆ ಇಷ್ಟೊಂದು ಹಣಗಳಿಸಿದವರ ತಲೆಯಲ್ಲೂ ಇಷ್ಟು ಬೂದಿಯಿರುತ್ತದಲ್ಲ ಎಂಬ ಚಿಂತೆ ಕಾಡಿತು. ಇದನ್ನು ವ್ಯಾವಹಾರಿಕವೆಂದು ಗ್ರಹಿಸಲು ಹೋದರೆ ಹುಚ್ಚುಹಿಡಿದೀತು. ವಿಶೇಷವೆಂದರೆ ಕೆಲವೇ ಕೆಲವು ಸಂವೇದನಾಶೀಲರ ಹೊರತು ಇತರರು ಇದರ ಕುರಿತು ಗಾಢ ಮೌನವಹಿಸಿದರು. ರಾಜಕಾರಣಿಗಳಂತೂ ಈ ಪೈಕಿ ತಮಗೆ ರಾಜಕೀಯವಾಗಿ ನೆರವಾಗುವವರು ಯಾರು ಎಂದು ಕವಡೆಯೆಸೆಯುವುದಕ್ಕೆ ತೊಡಗಿರಬಹುದು.

ಮುಖ್ಯವಾಗಿ ಜನಸಾಮಾನ್ಯರಿಗೆ ಅರ್ಥವಾಗದಿರುವ ಆದರೆ ಅದರ ನೋವಿನ ಅನುಭವದ ನೆಲೆಯನ್ನು ಬಲ್ಲ, ಅರ್ಥಶಾಸ್ತ್ರಜ್ಞರು ಈ ಬಗ್ಗೆ ತಮ್ಮ ಪಾರಿಭಾಷಿಕತೆಯನ್ನು ತ್ಯಜಿಸಿ ಸರಳವಾಗಿ ಹೇಳಬೇಕು. ಯಾಕೆ ಇದು ಹೀಗೆ ಎಂಬುದನ್ನು ರಾಜಕಾರಣದಿಂದ ಮುಕ್ತವಾಗಿ ಆಳುವವರಿಗೆ ತಿಳಿಹೇಳಬೇಕು. ಬಹುಪಾಲು ಸೇವೆಯಲ್ಲಿರುವ ತಜ್ಞಮಂದಿ ಮೌನವಾಗಿರುತ್ತಾರೆ. ಅವರಿಗೆ ತಮ್ಮ ಪದೋನ್ನತಿ, ನಿವೃತ್ತರಾದ ಮೇಲೆ ಸಿಗಬಹುದಾದ ಲಾಭ ಇವೇ ಬದುಕಿನ ಮಂತ್ರದಂಡಗಳು. ಅರ್ಥ ಸಚಿವರು ವರ್ಷಾವಧಿ ಆಯವ್ಯಯ ಪತ್ರಗಳನ್ನು ಮಂಡಿಸುವಾಗ ಮಾಧ್ಯಮಗಳು ಅವರ ಬಟ್ಟೆಬರೆ, ವೇಷಭೂಷಣ, ಅವರ ಬ್ರೀಫ್ ಕೇಸಿನ ಬಣ್ಣ ಇವನ್ನು ಹಿಂಬಾಲಿಸುತ್ತಾರೆಯೇ ಹೊರತು ಅದರೊಳಗಿರುವ ಟೈಮ್ ಬಾಂಬನ್ನಲ್ಲ. ಜಿಎಸ್‌ಟಿಯಂತಹ ಕಡುಬಡವನನ್ನೂ ಕಾಡುವ ಅರ್ಥಶಾಸ್ತ್ರಗಳಿಗೂ ಅಣುಬಾಂಬನ್ನು ತಯಾರಿಸಿದ ವಿಜ್ಞಾನಿಯ ಮಹೋನ್ನತ ಸಂಶೋಧನೆಗೂ ಅಂತರವಿಲ್ಲ. ಒಂದು ಸಿವಿಲ್ ಸಾವು; ಇನ್ನೊಂದು ಕ್ರಿಮಿನಲ್. ನಮ್ಮ ನಡುವೆ ಅನೇಕ ಅರ್ಥಶಾಸ್ತ್ರಜ್ಞರಿದ್ದಾರೆ. ಇವರು ಅರ್ಥಶಾಸ್ತ್ರದಲ್ಲಿ ಎಂ.ಎ. ಎಂದು ಪರಿಚಯಿಸಹೊರಟರೆ ಅವರು ತಾನು ಮೊದಲ ರ್ಯಾಂಕ್ ಬಂದಿದ್ದೆ, ಚಿನ್ನದ ಮೆಡಲ್ ಗಳಿಸಿದ್ದೆ ಎನ್ನುತ್ತಾರೆಯೇ ಹೊರತು ತಮ್ಮ ವಿದ್ಯಾ ಪರಿಣತಿಯನ್ನು ಸಮಾಜವನ್ನು ಕಾಡುವ, ಆದರೆ ಎಲ್ಲರಿಗೂ ಕಾಣದ ಸಮಸ್ಯೆಗಳನ್ನು ಕಾಣಿಸುವತ್ತ ಹೊರಳುವುದೇ ಇಲ್ಲ. ಎಲ್ಲೋ ಅಪರೂಪಕ್ಕೆ ಕೆಲವರು ದೇಶದ ಆರ್ಥಿಕ ಸ್ಥಿತಿಗತಿಗಳನ್ನು ಸರಳವಾಗಿ ಹೇಳಬಲ್ಲರು ಮತ್ತು ಅದರ ಪರಿಹಾರಕ್ಕೆ ಪ್ರಯತ್ನಿಸಬಲ್ಲರು. ಉಳಿದವರೆಲ್ಲ ತಾವೆಲ್ಲವನ್ನೂ ಮರೆತಿದ್ದೇವೆಂಬಂತೆ ತಮ್ಮ ಗೂಡಿನೊಳಗೇ ರೆಕ್ಕೆಬಡಿಯುತ್ತ ಕುಳಿತಿರುತ್ತಾರೆ. ಇನ್ನೂ ವಿಶೇಷವೆಂದರೆ ಆರ್ಥಿಕತೆಯ ಸಂಬಂಧವಿಲ್ಲದ, ಸಾಹಿತ್ಯ, ಸಂಗೀತ ಮುಂತಾದ ಸಂಕೀರ್ಣ ವಿಚಾರಗಳಲ್ಲಿ ತೊಡಗುತ್ತಾರೆ.

ದೇಶದ ನೇರ ಸಮಸ್ಯೆಗಳನ್ನು ಚಿಂತಿಸಲಾಗದವರು ಇನ್ಯಾವ ರೀತಿಯಲ್ಲೂ ಸಮಾಜಕ್ಕೆ ಸ್ಪಂದಿಸಲಾರರು. ತನ್ನ ಶ್ರೇಷ್ಠತೆಯ ಕುರಿತೇ ವ್ಯಸನಿಗಳಾದವರು ಕೊನೆಗೂ ದಾಖಲೆಗಳಲ್ಲಿ ಉಳಿಯುವರೇ ಹೊರತು ಜನಮಾನಸದಲ್ಲಲ್ಲ. ಇದೇ ನಮ್ಮ ರಾಜಕಾರಣಿಗಳಿಗೆ ಶ್ರೀರಕ್ಷೆ. ಎಲ್ಲಿಯ ವರೆಗೆ ಈ ತಜ್ಞರೆನಿಸಿಕೊಂಡವರು ತಮ್ಮ ವೈಯಕ್ತಿಕ ಸಂತೋಷ, ಲಾಭಗಳ ಕುರಿತು ಚಿಂತಿಸುತ್ತಾರೋ ಅಲ್ಲಿಯವರೆಗೂ ದೇಶದ ಸ್ಥಿತಿ ಹೀಗೇ ಡೋಲಾಯಮಾನವಾಗಿರುತ್ತದೆ. ಡಾಲರಿನೆದುರು ರೂಪಾಯಿಯ ಬೆಲೆ ಎಷ್ಟಾದರೂ ಆಗಲಿ, ತಮ್ಮ ಮಕ್ಕಳು ಅಮೆರಿಕದಿಂದ ಕಳಿಸುವ ಡಾಲರು ಇಲ್ಲಿ ಹೆಚ್ಚು ರೂಪಾಯಿಗಳನ್ನು ನೀಡುತ್ತದೆಯೆಂಬುದಷ್ಟೇ ಹೆತ್ತವರಿಗೆ ಪ್ರಾಣಪ್ರತಿಷ್ಠೆಯ ದೇವರಾಗುತ್ತದೆ. ಉಳಿದದ್ದೆಲ್ಲ ಡಾಲರ್ ಕಾಣದ ರೂಪಾಯಿಯಡಿಯೇ ಬದುಕು ಕಾಣಬೇಕಾದ ಬಲವಂತರ ನತದೃಷ್ಟ ಜೀವನವಾಗುತ್ತದೆ.

ಇದು ಅರ್ಥಶಾಸ್ತ್ರವೆಂದಲ್ಲ, ಬದುಕನ್ನು ಕಾಡುವ ಎಲ್ಲ ಶಾಸ್ತ್ರಜ್ಞರಿಗೂ ಅನ್ವಯಿಸುವ ಅಥವಾ ಅನ್ವಯಿಸಬೇಕಾದ ಸೂತ್ರ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಬಾಲಸುಬ್ರಹ್ಮಣ್ಯ ಕಂಜರ್ಪಣೆ

contributor

Similar News

ಸಂವಿಧಾನ -75