ಬದುಕು, ಬರೆಹ ಮತ್ತು ಭಾಷಣ

ಎಲ್ಲೋ ಯಾರೋ ಎಂದೋ ಮೆಚ್ಚುತ್ತಾರೆಂಬ ಮಂದಿಗೆ ಬದುಕು ಮುಖ್ಯವಾಗುತ್ತದೆ. ಸಾಕಿನ್ನು ಎಂದು ನರೆಕೂದಲು ಕಂಡು ವಾನಪ್ರಸ್ಥಕ್ಕೆ ಹೋಗುವಷ್ಟು ಅತಿಯಲ್ಲವಾದರೂ ಯವ್ವನಕ್ಕಾಗಿ ಚ್ಯವನಪ್ರಾಶವನ್ನು ನಂಬಿಕೊಳ್ಳುವುದು ಕೃತಕತೆಯಾಗುತ್ತದೆಯಲ್ಲವೇ? ಅಮಾನಿಯಾಗಿರುವುದು, ಗೌರವದಿಂದ ಮೌನವಾಗಿರುವುದೇ ಅನೇಕ ಬಾರಿ ಇನ್ನಷ್ಟು ಗೌರವವನ್ನು ನೀಡುತ್ತದೆ.;

Update: 2025-04-10 15:08 IST
ಬದುಕು, ಬರೆಹ ಮತ್ತು ಭಾಷಣ
  • whatsapp icon

ನನ್ನ ಆಪ್ತರನೇಕರು ಈಗಾಗಲೇ ನಿವೃತ್ತರಾಗಿ ಎಲ್ಲರಿಂದ ‘ಆರೋಗ್ಯ, ಸಂತೋಷ, ನೆಮ್ಮದಿಯ ನಿವೃತ್ತ ಜೀವನದ ಹಾರೈಕೆ’ಯನ್ನು ಪಡೆದಿದ್ದಾರೆ. ಈ ಪೈಕಿ ಹೆಚ್ಚಿನವರಿಗೆ ಮಧುಮೇಹ, ರಕ್ತದೊತ್ತಡ ಇನ್ನಿತರ ಅನಾರೋಗ್ಯಗಳಿವೆ. ಇವು ರೋಗಗಳಲ್ಲವೆಂಬಷ್ಟರ ಮಟ್ಟಿಗೆ ಸಮಾಜವನ್ನು ಆವರಿಸಿಕೊಂಡಿರುವುದರಿಂದ ಇವನ್ನು ಸಹಜವಾಗಿಯೇ ಮೂಲೆಯಲ್ಲಿಟ್ಟು ಆದರೆ ನಿರ್ಲಕ್ಷಿಸದೆ ಆರೈಕೆ ಮಾಡಬೇಕಾಗಿದೆ. ಪ್ರಾಯಃ ಇಳಿ ವಯಸ್ಸಿನಲ್ಲಿ ಇದೇ ಸುಖಜೀವನದ ಗುಟ್ಟು. ಉಳಿದಂತೆ ಎಲ್ಲ ಚಿಂತೆಗಳಿರುತ್ತವೆ. ಮಕ್ಕಳು ಬಳಿಯಿಲ್ಲ, ಮನೆಯಲ್ಲಿ ಹೊತ್ತು ಹೋಗುವುದಿಲ್ಲ, ಮನೆಯೇ ವೃದ್ಧಾಶ್ರಮದಂತಿದೆ ಮುಂತಾದ ಮಾನಸಿಕ, ಬೌದ್ಧಿಕ ತಾಪತ್ರಯಗಳೂ ಇರುತ್ತವೆ. ಆದರೂ ಕವಿವಾಣಿಯಂತೆ ಇರಬೇಕು ಇರುವಂತೆ ತೊರೆದು ಸಾವಿರ ಚಿಂತೆ!

ಇದು ಎಲ್ಲರ ಜೀವನವಾದರೆ ಕೆಲವರು ನಿವೃತ್ತ ಜೀವನವೆಂದರೆ ಹೀಗಿರಬೇಕು ಎಂಬ ಮಾದರಿಯನ್ನು ಹಾಕಿಕೊಂಡು ಸಂಸಾರದಲ್ಲಿರುತ್ತಾರೆ. ಕಥೆ-ಕಾದಂಬರಿಯಲ್ಲಿ ಬರುವಂತಹ ಮಧ್ಯಮ, ಮೇಲ್ಮಧ್ಯಮ ರೀತಿಯ ದಿನಚರಿ-ಗೊತ್ತಾದ ಹೊತ್ತಿನಲ್ಲಿ ಏಳುವುದು, ನಿತ್ಯವಿಧಿ, ಎದ್ದು ‘ಬೆಡ್ ಕಾಫಿ/ಚಹ’, ಪತ್ರಿಕೆಯ ಓದು, ಟಿವಿಯಲ್ಲಿ ವಾರ್ತೆಯ ಅವಲೋಕನ, ಒಂದಷ್ಟು ಹೊತ್ತು ನೆರೆಯ ಪಾರ್ಕೋ, ನಿರ್ಜನ ಬೀದಿಯಲ್ಲೋ ನಡೆಯುವ ವ್ಯಾಯಾಮ, ತಿಂಡಿ, ಸ್ನಾನ, ಊಟ, ನಿದ್ರೆ, ಗೆಳೆಯರೊಂದಿಗೆ ಪ್ರತ್ಯಕ್ಷ ಅಥವಾ ಫೋನ್ ಸಂಭಾಷಣೆ, ನಿಗದಿತ ಹೊತ್ತಿನಲ್ಲಿ ನಿದ್ರೆ, ನಡುವೆ ಮಕ್ಕಳು ಜೊತೆಗಿದ್ದರೆ ಸ್ವಲ್ಪ ವ್ಯವಹಾರ, ಸ್ವಲ್ಪ ಸುಖ-ದುಃಖ ಮಾತುಕತೆ, ವಾರಕ್ಕೊಂದೆರಡು ಬಾರಿಯಾದರೂ ಯಾವುದಾದರೂ ಕಚೇರಿ, ಅಂಗಡಿ, ಹೋಟೆೆಲು ಮುಂತಾದ ಅಗತ್ಯ ಕೇಂದ್ರಗಳ ಭೇಟಿ, ಓದುವ ಹವ್ಯಾಸವಿರುವವರಾದರೆ ಏನಾದರೂ ಪುಸ್ತಕಗಳ ಓದು, ಹೀಗೆ ವೈವಿಧ್ಯತೆಯಲ್ಲೂ ಏಕತೆಯನ್ನು ಸಾರುವ, ಕ್ಯಾಲೆಂಡರಿನಲ್ಲಿ ಬದಲಾಗುವ ತಾರೀಕೊಂದೇ ಬದುಕಿನ ಬದಲಾವಣೆಯೂ, ಬೆಳವಣಿಗೆಯೂ ಎಂಬಂತಿರುವ ಸುಸೂತ್ರ ಬದುಕು. ನಡುನಡುವೆ ಯಾರಾದರೂ ಇವರ ವೃತ್ತಿ-ಉದ್ಯೋಗದ ಬದುಕಿನ ಅನುಭವಗಳನ್ನು ನೆನಪಿಟ್ಟು ಆಹ್ವಾನಿಸಿ ಗೌರವಿಸಿದರೆ ಆ ಕ್ಷಣಗಳು ಆಗಾಗ ಬರಲಿ ಎಂಬ ನಿರೀಕ್ಷೆ.

ಇನ್ನು ಕೆಲವರು ಸದಾ ರಾಜಕಾರಣಿಗಳಂತೆ ಇಂಗ್ಲಿಷಿನ ‘ಬಿಸಿ’ಯಾಗಿರುತ್ತಾರೆ. ಅವರ ಜೀವನ ಕ್ರಮ ಬೆರಗು ಹುಟ್ಟಿಸುವಂಥಾದ್ದು. ಎಲ್ಲಿಂದ ಬರಬೇಕು ಈ ಚಲನಶಕ್ತಿ ಎಂದು ನನಗೆ-ನಿಮಗೆ ಅನ್ನಿಸಬಹುದು. ಅವರಲ್ಲಿರುವ ಮಹತ್ವಾಕಾಂಕ್ಷೆಯೋ, ಅವರದೇ ಆದ ಭೌತಿಕ ಸಿದ್ಧಾಂತಗಳಿಗೆ ಅವರಲ್ಲಿರುವ ಬದ್ಧತೆಯೋ ಅಥವಾ ಉಳಿಯಲೇಬೇಕಾದ ಛಲವೋ, ಏನೋ ಒಂದು. ಅಂತೂ ನಿತ್ಯ ಸುದ್ದಿಯಲ್ಲಿರುತ್ತಾರೆ. ಸುದ್ದಿಯಲ್ಲೇ ಬದುಕುತ್ತಾರೆ.

ಇವರಲ್ಲದೆ ಸಂವೇದನಾಶೀಲ ಬದುಕನ್ನು ದುಡಿಯುವವರೋ ಅನುಭವಿಸಿದವರೋ ಆದ ಕಲಾವಿದರು, ಸಾಹಿತಿಗಳು ಇರುತ್ತಾರೆ. ನಾನೀಗ ಇಂಥವರ ಬಗ್ಗೆ ಕುತೂಹಲಿಯಾಗಿದ್ದೇನೆ. ಇವರಲ್ಲಿ ನಿವೃತ್ತ ಶಿಕ್ಷಕರು, ಉಪನ್ಯಾಸಕರು, (ಮುಖ್ಯವಾಗಿ ಭಾಷಾ ವೃತ್ತಿಯನ್ನೇ ದುಡಿದವರು), ಪತ್ರಕರ್ತರು ಅಲ್ಲದೆ ಇತರ ಶಿಸ್ತುಗಳ ಅಧಿಕಾರಿಗಳು ಸೇರುತ್ತಾರೆ. ಯಾವುದೇ ಉದ್ಯೋಗ, ವೃತ್ತಿಯಲ್ಲಿರಲಿ ಕಲೆಯನ್ನು ಪೂರ್ಣಾವಧಿಯೋ ಅಲ್ಪಾವಧಿಯೋ ಅಪ್ಪಿಕೊಂಡವರಿಗೆ ಅದರಿಂದ ಬಿಡುಗಡೆ ಕಷ್ಟ. ಅದು ಉದ್ಯೋಗ ಸಂಬಂಧಿಯಾದರಂತೂ ಕೇಳಲೇಬೇಡಿ. ಇವರು ತಮ್ಮ ಉದ್ಯೋಗವೋ, ವೃತ್ತಿಯೋ ಯಾವುದೇ ಇರಲಿ, ಅಲ್ಲಿ ತಮ್ಮ ಬದುಕಿನ ಹದನಿಧಾನದ ಜೊತೆಗೆ ಒಂದಷ್ಟು ಸಮಯವನ್ನು ಈ ಪ್ರವೃತ್ತಿಗೆ ಕೊಟ್ಟಿರುತ್ತಾರೆ. ವೃತ್ತಿಗಿಂತ, ಉದ್ಯೋಗಕ್ಕಿಂತ ಹೆಚ್ಚು ಪ್ರವೃತ್ತಿಪರರಾದವರೂ ಇದ್ದಾರೆ. ಕೆಲವರು ಈ ಪ್ರವೃತ್ತಿಯ ಹವ್ಯಾಸವನ್ನು ವ್ಯವಸಾಯವಾಗಿ ಪರಿವರ್ತಿಸಿಕೊಂಡು ಜೀವನದ ಹಾದಿಯನ್ನೇ ಬದಲಾಯಿಸಿಕೊಂಡವರಿದ್ದಾರೆ. ವೈದ್ಯರೋ ವಕೀಲರೋ, ಯಂತ್ರ/ತಂತ್ರಜ್ಞಾನಿಗಳೋ ಸಮಾಜದಲ್ಲಿ ಕಲಾವಿದ/ಸಾಹಿತಿಯೆಂದು ಗುರುತಿಸಿಕೊಂಡವರಿದ್ದಾರೆ. ಸಾಕಷ್ಟು ಸಭೆ, ಸಮಾರಂಭಗಳಲ್ಲಿ, ಕಲಾ, ಸಾಹಿತ್ಯಕ, ವೈಚಾರಿಕ ಗೋಷ್ಠಿಗಳಲ್ಲಿ ಭಾಗವಹಿಸಿ ಗೌರವ, ಪ್ರತಿಷ್ಠೆ, ಪ್ರಶಸ್ತಿ ಸಂಪಾದಿಸಿಕೊಂಡವರಿದ್ದಾರೆ. ಅಧ್ಯಯನಗಳನ್ನು ಮಾಡಿದವರು, ಪುಸ್ತಕಗಳನ್ನು ಬರೆದವರು, ಜನಪ್ರಿಯತೆ ಗಳಿಸಿದವರು ಈ ಸಾಲಿನಲ್ಲಿದ್ದಾರೆ.

ಇಂಥವರಿಗೆ ನಿವೃತ್ತರಾದ ಮೇಲೂ ತಮ್ಮ ಸಂವೇದನಾಶೀಲ ಬದುಕು ‘ಬಿಟ್ಟೆನೆಂದರೂ ಬಿಡದ ಮಾಯೆ’. ಈ ತರಹದ ವ್ಯಕ್ತಿಗಳಿಗೆ ನಿವೃತ್ತಿಯೆಂಬುದು ಒಂದು ಆಘಾತಕರ ವಿಷಯವಾಗುವುದೂ ಉಂಟು. ನಿವೃತ್ತಿಯೆಂಬುದು ಹಿರಿತನದ, ವಯೋಸೂಚಕ ಸ್ಥಾನದ, ಸಂಕೇತವೂ ಆಗಿರುವುದರಿಂದ ಕೇಳುವ ಹಂತದಿಂದ ಹೇಳುವ ಹಂತಕ್ಕೆ ಬಂದಿರುತ್ತಾರೆ. ತಮ್ಮ ಅನುಭವಗಳನ್ನು ಸಹವ್ಯಸನಿಗಳೊಂದಿಗೆ, ಕಿರಿಯರೊಂದಿಗೆ ಹಂಚಿಕೊಳ್ಳುವುದೆಂದರೆ ಈ ಮಂದಿಗೆ ಅಗಾಧ ಆಸಕ್ತಿ. ಅನುಭವವನ್ನು ಮಾತಿನ ಮೂಲಕ ನಡೆಸುವುದೇ ಹೆಮ್ಮೆಯ ವಿಹಾರವಾದವರೇ ಇಂಥವರಲ್ಲಿ ಹೆಚ್ಚು. ನಿವೃತ್ತಿಯಾದೊಡನೆ ಈ ರೀತಿಯ ಮನುಷ್ಯರಿಗೆ ಪ್ರವೃತ್ತಿಯಿಂದ ನಿವೃತ್ತಿಯಾಗುವುದಿಲ್ಲ, ನಿವೃತ್ತಿಯಾಗಲಿಲ್ಲ ಎಂಬ ಎಚ್ಚರವಿರುತ್ತದೆ. ಆದ್ದರಿಂದ ಅವರು ತಮ್ಮ ತಾರುಣ್ಯವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಹಿರಿ-ಕಿರಿಯರೊಂದಿಗೆ, ಸರೀಕರೊಂದಿಗೆ ಮಾನ್ಯತೆಯ ದಾಹವಡಗಿಸಿಕೊಳ್ಳಲು ಮೊದಲಿಗಿಂತ ಹೆಚ್ಚು ಚಟುವಟಿಕೆಯಲ್ಲಿ ಭಾಗವಹಿಸುತ್ತಾರೆ; ಜಾಗೃತರಾಗುತ್ತಾರೆ. ಹೆಚ್ಚು ಸಮಾನತೆಯ ಖಯಾಲಿ ಅನೇಕರಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಇದರಲ್ಲಿ ಈಗಾಗಲೇ ಉಲ್ಲೇಖಿಸಿದ ಕಲಾ/ಸಾಹಿತ್ಯಕ, ವೈಚಾರಿಕ ಗೋಷ್ಠಿಗಳಲ್ಲಿ, ಭಾಗವಹಿಸಿ ಗೌರವ, ಪ್ರತಿಷ್ಠೆ, ಪ್ರಶಸ್ತಿಗಳನ್ನು ಪಡೆಯುವುದಕ್ಕಾಗಿ ತಮ್ಮ ಆರೋಗ್ಯವನ್ನೂ ಒತ್ತೆಯಿಡುತ್ತಾರೆ. ಅನಾರೋಗ್ಯವನ್ನು ಒಂದು ಇತ್ಯಾತ್ಮಕ ಮೌಲ್ಯವಾಗಿಸಿ ಅಭಿವ್ಯಕ್ತಿಸಿದವರೂ ಇದ್ದಾರೆ.

ಆಡಂಬರದ, ಅಬ್ಬರದ ಜೀವನಖ್ಯಾತಿಯವರು ತಾವು ತಮ್ಮ ಬಳಗದವರು ಕಲಿತದ್ದನ್ನು, ಪ್ರಯಾಣ ಮಾಡಿದ್ದನ್ನು ಸಭೆ-ಸಮಾರಂಭಗಳಲ್ಲಿ ವಿಶೇಷ ಗೌರವಕ್ಕೆ ಪಾತ್ರವಾದ್ದನ್ನು ಮೆಲುಕು ಹಾಕುವುದು ಮಾತ್ರವಲ್ಲ, ಮತ್ತೆ ಮತ್ತೆ ಜನರೆದುರು ಹೇಳುತ್ತಾರೆ. ತಾವು ಹೇಳುವುದು ತಮ್ಮ ಪ್ರಾಶಸ್ತ್ಯಕ್ಕಲ್ಲ, ಪ್ರತಿಷ್ಠೆಗಲ್ಲ, ಬದಲಾಗಿ ಸಾರ್ಥಕ ಬದುಕನ್ನು ಜೀವಿಸುವುದು ಹೇಗೆ ಎಂಬುದಕ್ಕೆ ಮಾರ್ಗದರ್ಶಿಯಾಗುವುದಕ್ಕೆ ಎಂದು ಸಮರ್ಥಿಸುತ್ತಾರೆ. ತಾವು ಹೇಗೆ ಸಮಾಜದಲ್ಲಿ ವೈಶಿಷ್ಟ್ಯಪೂರ್ಣವಾದ ಉದಾಹರಣೆಯಗಿದ್ದೇವೆಂಬುದನ್ನು ಮನದಟ್ಟುಮಾಡಲು ಸದಾ ಸಿದ್ಧರಾಗಿರುತ್ತಾರೆ. ಲೇಖಕರಾದರೆ ತಮ್ಮ ಬರೆಹ ಹೇಗೆ ಇತರ ಎಲ್ಲರ ಬರೆಹಕ್ಕಿಂತ ಹೆಚ್ಚು ವಿಶಿಷ್ಟವಾಗಿದೆ ಎಂದು ವಿವರಿಸತ್ತಾರೆ. ಪರಂಪರೆಯನ್ನು ಮುರಿದು ಹೊಸತನ್ನು ಪ್ರಯೋಗಿಸುವುದು ತನಗೆ ಪ್ರೀತಿಯೆಂಬುದನ್ನು ಯಾವತ್ತೂ ಹೇಳುವವರಿದ್ದಾರೆ. ಇದಕ್ಕೆ, ಅಂದರೆ ಈ ಪ್ರವೃತ್ತಿಗೆ ನಿವೃತ್ತಿ ಅಡ್ಡ ಬರುವುದಿಲ್ಲ. ಇನ್ನಷ್ಟು ಉಮೇದು ನೀಡುತ್ತದೆ.

ನಾನು ಪ್ರಯಾಣಕ್ಕೆ ಆಲಸಿ. ಅಗತ್ಯವಾದದ್ದನ್ನಷ್ಟು ಮಾಡಿ ಸುಮ್ಮನಿರುವವನು. ಆದರೆ ನನ್ನ ಕೆಲವು ಸಹಪಾಠಿಗಳು ಯಾವುದೇ ಸಭೆ, ಸಮಾರಂಭಗಳಲ್ಲಿ ವೇದಿಕೆ, ಪತ್ರಿಕೆಗಳಲ್ಲಿ ಸ್ಥಳ ಹಂಚಿಕೊಳ್ಳುವ ಅವಕಾಶವನ್ನು ಬಿಟ್ಟುಕೊಡಲಾರರು. ಅವರ ಜೀವನೋತ್ಸಾಹವನ್ನು ಕಂಡಾಗ ಬೆರಗಾಗುತ್ತದೆ. ಮತ್ಸರವಿಲ್ಲ. ಏಕೆಂದರೆ ನನಗದು ಅಷ್ಟು ಇಷ್ಟವಲ್ಲ.

ನನ್ನೊಬ್ಬ ಮಿತ್ರರು ತಮ್ಮ ಅನಾರೋಗ್ಯದ ಕುರಿತು ಹೇಳಿದರು. ಆದರೂ ಒಂದು ಕಾರ್ಯಕ್ರಮದಲ್ಲಿ ತಾನು ಭಾಗವಹಿಸಲೇಬೇಕೆಂದು ಹೇಳಿದರು. ಅದು ತನ್ನ ಪ್ರೀತಿಯ ವಿಷಯ. ಆದ್ದರಿಂದ ಅನಾರೋಗ್ಯದ ನಡುವೆಯೂ ತಾನು ಭಾಗವಹಿಸುವುದಾಗಿ ಹೇಳಿದರು. ಪ್ರಯಾಣದ ಅಸ್ಥಿರತೆಗಳು, ಆರೋಗ್ಯ/ಅನಾರೋಗ್ಯದಲ್ಲಾಗುವ ಏರುಪೇರುಗಳು, ಇವೆಲ್ಲ ಅವರಿಗೆ ಹೊಸದೇನಲ್ಲ. ಹಿಂದೆ ಇದನ್ನೆಲ್ಲ ತಾನು ಸಹಿಸಿಕೊಳ್ಳುತ್ತಿದ್ದದ್ದು ಮತ್ತು ಈಗ ಅವನ್ನು ಎದುರಿಸಲು ಹರಸಾಹಸವನ್ನು ಮಾಡುತ್ತಿರುವುದನ್ನು ಹೇಳಿದರು. ಇಷ್ಟಾದರೂ ಅವರು ತನಗೆ ಒದಗಿ ಬಂದ ಅವಕಾಶವನ್ನು ಬಿಡಲಾರರು. ಹೇಗೆ ಹೋಗುತ್ತೀರಪ್ಪ? ಎಂದರೆ ಹೇಗಾದರೂ ಎನ್ನುತ್ತಾರೆ. ಅವರ ಉದ್ದೇಶವೇನೆಂದು ನನಗೆ ಸ್ಪಷ್ಟವಾಗಲಿಲ್ಲ. ಏನು ತುಂಬಾ ಸಂಭಾವನೆಯನ್ನು ಕೊಡುತ್ತಾರಾ? ಎಂದು ಕೇಳಿದೆ. ವಾಸ್ತವ್ಯಕ್ಕೆ ಏರ್ಪಾಡು ಚೆನ್ನಾಗಿರುತ್ತದೆ; ಪ್ರಯಾಣ ವೆಚ್ಚ ಕಳೆದು ಇನ್ನೊಂದಷ್ಟು ಹಣ ಬರುತ್ತದೆ ಎಂದರು. ಅದು ಸರಿ, ನಿಮ್ಮ ಆರೋಗ್ಯ? ಅದು ಇದ್ದದ್ದೇ ಎಂದರು. ಅಂತೂ ಹೋಗಿ ಬಂದರು. ಆರೋಗ್ಯ ಹದಗೆಟ್ಟಿತ್ತು. ಅವರನ್ನು ಭೇಟಿಯಾಗಲು ಬಂದವರಲ್ಲಿ ತನ್ನ ಅನಾರೋಗ್ಯವನ್ನು ಹಿಂದಿಕ್ಕಿ ಅಲ್ಲಿ ತಾವು ನೀಡಿದ ಜ್ಞಾನಯಜ್ಞದ ಕುರಿತು ಹೇಳಿದರು. ಕೇಳುವವರಿಗಿಂತ ಅವರಿಗೆ ಹೇಳುವುದಕ್ಕೆ ಉತ್ಸಾಹವಿತ್ತು. ಅಷ್ಟೇ ಅಲ್ಲ- ತಾನು ಹೀಗೆ ಮಾಡಿದ ಭಾಷಣಗಳನ್ನು ಲಿಖಿತ ರೂಪಕ್ಕಿಳಿಸಿ ಅದನ್ನೊಂದು ಪುಸ್ತಕವಾಗಿ ಪ್ರಕಟಿಸುವವರಿದ್ದಾರೆಂದೂ ಅದಕ್ಕಾಗಿ ತಾನು ಸದ್ಯದ ಬಿಡುವನ್ನು ಬಳಸಿಕೊಳ್ಳುವುದಾಗಿಯೂ ಹೇಳಿದರು. (ಅವರ ಹತ್ತಾರು ಪುಸ್ತಕಗಳು ಈಗಾಗಲೇ ಪ್ರಕಟವಾಗಿದ್ದವು.) ಒಟ್ಟಿನಲ್ಲಿ ಅವರಿಗೆ ಈ ಪರಿಶ್ರಮ ಯಾಕೆ ಮತ್ತು ಅವರಿಗೆ ವಿಶ್ರಾಂತಿ ಅಥವಾ ಕನಿಷ್ಠ ಸಿಗಬೇಕಾದ ಖಾಸಗಿ ಬದುಕು ಎಲ್ಲಿ, ಯಾವಾಗ ಎಂದು ನನಗೆ ಅರ್ಥವಾಗಲಿಲ್ಲ. ಇಂಥವರ ಬದುಕನ್ನೇ ಅವಿಶ್ರಾಂತ ಬದುಕು ಎಂದು ಹೇಳುತ್ತಾರೇನೋ?

ಬರೆಹ ಮತ್ತು ಭಾಷಣ ಇವೆರಡೂ ಬದುಕಿನಷ್ಟು ಮುಖ್ಯವಲ್ಲ ಅನ್ನಿಸುತ್ತದೆ. ಯಾರಾದರೂ ಬರೆದುಕೊಡಿರೆಂದರೆ ಅನಿವಾರ್ಯವೆಂಬಂತೆ ಬರೆಯುವುದು ಅನೇಕರ ಪ್ರವೃತ್ತಿಯಾದರೆ ಕೆಲವರಂತೂ ಅತ್ತೂ ಕರೆದೂ ಆಮಂತ್ರಣದ ಔತಣವನ್ನು ಪಡೆಯುತ್ತಾರೆ. ನಿಮ್ಮಲ್ಲಿ ನನ್ನನ್ನು ಕರೆಸಿ ಒಂದು ಭಾಷಣ ಮಾಡಿಸಿ, ನನ್ನ ವಿಶೇಷತೆ ಇದು ಎಂದೆಲ್ಲ ಹೇಳುವವರಿದ್ದಾರೆ. ಒಮ್ಮೆ ನೀವು ಒಪ್ಪಿದರೆಂದರೆ ಅವರು ಅವರಿಗೆ ಆಗಬೇಕಾದ, ಸಿಗಬೇಕಾದ, ಸೌಕರ್ಯಗಳ ಬಗ್ಗೆ ತಮ್ಮ ಸಂದೂಕವನ್ನು ತೆರೆಯುತ್ತಾರೆ. ಒಪ್ಪಿದ ಆತಿಥೇಯರಿಗೆ ಇವೆಲ್ಲ ಬಿಸಿತುಪ್ಪ. ಕೊನೆಗೆ ಈ ಒತ್ತಾಯದ ಅತಿಥಿಗೆ ಮಣೆಹಾಕಲೇಬೇಕಾದ ಅನಿವಾರ್ಯದ ಒತ್ತಡ ಆತಿಥೇಯರಿಗೆ. ಇವೆಲ್ಲದರ ಲಾಭ ಪಡೆದು ಸಮಯದ ಅಭಾವದ ನಡುವೆ ನಡೆಯುವ ಸಮಾರಂಭದಲ್ಲಿ ಅಷ್ಟೋ ಇಷ್ಟೋ ಭಾಷಣ ಮಾಡಿ ಅದನ್ನು ತಾವೇ ಬಳಗಕ್ಕೆ ಹಂಚುವವರನ್ನು ಗಮನಿಸಿದಾಗ ಕಲೆಯೆಂಬುದು ಶಾಶ್ವತ ನಂಟಾದವರಿಗೆ ಶಾಶ್ವತ ಅಂಟೂ ಹೌದು ಎನ್ನುವ ಸತ್ಯ ಗೋಚರಿಸುತ್ತದೆ.

ಈ ರೀತಿಯ ಬಯಕೆಗಳು ಸಾಕಷ್ಟು ಜನಪ್ರಿಯರಿಗಿರುವುದು ಅಚ್ಚರಿಯ ಸಂಗತಿಯೆಂದು ಅನ್ನಿಸುತ್ತದೆಯಾದರೂ ಅದೀಗ ಅಸಾಮಾನ್ಯರ ಸಾಮಾನ್ಯ ಪ್ರವೃತ್ತಿಯೆಂದಾಗಿದೆ. ಜನಪ್ರಿಯತೆಯಲ್ಲಿ ಎರಡು ಬಗೆಯದ್ದಿದೆ. ಜನರಿಗೆ ಪ್ರಿಯವಾಗುವವರು ಒಂದೆಡೆ; ನಮ್ಮ ಚಲನಚಿತ್ರ ತಾರೆಯರು, ಕ್ರೀಡಾಪಟುಗಳು ಮುಂತಾದವರು. ಜನರ ಬಳಿ ಹೋಗಿ ಜನಪ್ರಿಯರಾಗಲು ಯತ್ನಿಸುವವರದ್ದು ಇನ್ನೊಂದು ಬಗೆ. (ಈ ಎರಡನೇ ಬಗೆ ರಾಜಕಾರಣದಂತೆ. ಲಾಭ ಜನರಿಗಲ್ಲ; ಅವರ ಬಳಿ ಹೋಗುವವರಿಗೆ. ಇಂತಹವರನ್ನು ಗಮನಿಸಿದಾಗ ಅಬ್ಬ ಇವರ ಜೀವ(ನ) ಪ್ರೀತಿಯೇ! ಎಂದನ್ನಿಸುವುದಿಲ್ಲ. ಬದಲಾಗಿ ಇನ್ನೂ ಇವರಿಗೆ ಬದುಕಿನ ಐಚ್ಛಿಕಗಳ ವ್ಯಾಮೋಹ ಹೋಗಿಲ್ಲವೇ ಅನ್ನಿಸುತ್ತದೆ. ಮುಖ್ಯ ನನಗನಿಸಿದ್ದು ಅವರಿಗೆ ಪ್ರಚಾರ, ಪ್ರಾಶಸ್ತ್ಯ ಬೇಕಾಗಿದೆ ಎಂಬುದು. ಜೊತೆಗೆ ಸಿಗುವ ಅಲ್ಪ ಸ್ವಲ್ಪ ಸಂಭಾವನೆಯ ಮೋಹ. ಅವರು ಇದನ್ನು ತಮಗಿಂತ ಕಿರಿಯರಿಗೆ, ಅಷ್ಟಾಗಿ ಪ್ರಚಾರವೈಭವವನ್ನು ಪಡೆಯದವರಿಗೆ ವರ್ಗಾಯಿಸಿ ತಾವು ಇದ್ದಲ್ಲೇ ಒಂದು ಚೌಕಟ್ಟು ಹಾಕಿಕೊಂಡು ಇರಬಾರದೇಕೆ ಅನ್ನಿಸುತ್ತದೆ. ಆದರೆ ಅವರ ಸ್ವಾತಂತ್ರ್ಯವನ್ನು ನಾವು ಹತ್ತಿಕ್ಕಬೇಕೇ? ಅದು ಅವರವರ ಸ್ವಾತಂತ್ರ್ಯ. ಮಗಳ ಪಾತ್ರದಿಂದ ನಾಯಕಿಯ ಪಾತ್ರಕ್ಕೆ, ಅಲ್ಲಿಂದ ಅಕ್ಕ-ತಾಯಿಯ ಪಾತ್ರಕ್ಕೆ, ಅಲ್ಲಿಂದ ಅಜ್ಜಿಯ ಪಾತ್ರಕ್ಕೆ ಸಾಗುವ ನಟಿಯರನ್ನು ನೋಡುತ್ತೇವೆ. ನಟರೂ ಹೀಗೆಯೇ. ಆದರೆ ಲಿಖಿತ ಪ್ರಪಂಚದಲ್ಲಿ ಯಯಾತಿಯರೇ ಜಾಸ್ತಿ. ಎಲ್ಲರ ಯವ್ವನವನ್ನು ಪಡೆದು ಕಿರೀಟಧಾರಿಯಾಗಿ ಕಂಗೊಳಿಸುವುದೇ ಹರ್ಷವೆಂದೆಣಿಸುವ ಮಂದಿಯ ಸಂವೇದನೆ ನಿಜಕ್ಕೂ ಮರುಕಳಿಸುವ ವೇದನೆಯಲ್ಲವೇ ಅದು ಅವರಿಗೆ ಅರ್ಥವಾಗುವುದು ಯಾವಾಗ ಎಂದು ಯೋಚಿಸಿದಾಗ ಸಂವೇದನೆಗೆ ವೈರಾಗ್ಯವಿಲ್ಲವೆಂದು ಅನ್ನಿಸುತ್ತದೆ.

ಇದೊಂದು ಉದಾಹರಣೆ. ಇಂತಹ ನೂರಾರು ಉದಾಹರಣೆಗಳು ನಿಮ್ಮ ಬಳಿ ಇರಬಹುದು. ಒಮ್ಮೆ ಮನುಷ್ಯನಿಗೆ ಇಂತಹ ದಾಹದ ಚಟ ಆರಂಭವಾದರೆ ಅದನ್ನು ನಿಲ್ಲಿಸುವುದು ಕಷ್ಟ. ಕಲೆ, ಅದರಲ್ಲೂ ಸಾಹಿತ್ಯ ಮನುಷ್ಯನನ್ನು ಲೌಕಿಕದಿಂದ ನಿರ್ಗಮಿಸಲು ನೆರವಾಗಬೇಕು. ಏಕೆಂದರೆ ಕಲೆಯ ಮೂಲವೇ ಏಕಾಂತ. ಎಲ್ಲರ ನಡುವೆ ಒಂಟಿತನದ ಸುಖ, ನೆಮ್ಮದಿ, ಅನುಭವಿಸಬಲ್ಲವನಿಗೆ ಜನಸಂದಣಿಯಲ್ಲಿರುವುದು ಕಷ್ಟವಾಗಬಹುದು. ಅದಾಗಿ (ಒದಗಿ) ಬಂದಾಗ ತಪ್ಪಿಸಿಕೊಳ್ಳಲಾಗದು. ಆದರೆ ದೂರವಿರುವ ಅವಕಾಶ ಸಿಕ್ಕಿದಾಗಲೂ ಸಂವೇದನೆ, ಪ್ರವೃತ್ತಿ ಇತ್ಯಾದಿಗಳ ಹೆಸರಿನಲ್ಲಿ ಬದುಕಲಾರದವರು ಅತೃಪ್ತರಾಗಿ ಕೊನೆಗೊಳ್ಳುವ ಸಾಧ್ಯತೆಗಳೇ ಹೆಚ್ಚು.

ಈ ಅತೃಪ್ತಿಯ ಬದಲು ನೇಪಥ್ಯದಲ್ಲಿದ್ದು ಯಾವಾಗಲೊಮ್ಮೆ ಪ್ರತ್ಯಕ್ಷವಾಗು ವುದೇ ಒಳಿತಲ್ಲವೇ? ನಾವು ನೋಡುವ ನಕ್ಷತ್ರದ ಬೆಳಕು ಅನೇಕ ಬಾರಿ ಎಂದೋ ಸುಟ್ಟು ಕರಕಲಾದ ನಕ್ಷತ್ರದ್ದು. ಅದು ನಮಗೆ ನೀಡುವ ಬೆಳಕು ಮಾತ್ರ ನಮಗೆ ಮುಖ್ಯ. ಎಲ್ಲೋ ಯಾರೋ ಎಂದೋ ಮೆಚ್ಚುತ್ತಾರೆಂಬ ಮಂದಿಗೆ ಬದುಕು ಮುಖ್ಯವಾಗುತ್ತದೆ. ಸಾಕಿನ್ನು ಎಂದು ನರೆಕೂದಲು ಕಂಡು ವಾನಪ್ರಸ್ಥಕ್ಕೆ ಹೋಗುವಷ್ಟು ಅತಿಯಲ್ಲವಾದರೂ ಯವ್ವನಕ್ಕಾಗಿ ಚ್ಯವನಪ್ರಾಶವನ್ನು ನಂಬಿಕೊಳ್ಳುವುದು ಕೃತಕತೆಯಾಗುತ್ತದೆಯಲ್ಲವೇ? ಅಮಾನಿಯಾಗಿರುವುದು, ಗೌರವದಿಂದ ಮೌನವಾಗಿರುವುದೇ ಅನೇಕ ಬಾರಿ ಇನ್ನಷ್ಟು ಗೌರವವನ್ನು ನೀಡುತ್ತದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಬಾಲಸುಬ್ರಹ್ಮಣ್ಯ ಕಂಜರ್ಪಣೆ

contributor

Similar News

ಸಂವಿಧಾನ -75