ಕನಿಷ್ಠ ಬೆಂಬಲ ಬೆಲೆ ಶಾಸನ ಜಾರಿಗೆ ಸೂಕ್ತ ಕಾಲ
ಕೃಷಿ ಉತ್ಪನ್ನಗಳ ಬೆಲೆ ಏರಿಳಿತ ಊಹಾತೀತವಾದುದು. ಎಂಎಸ್ಪಿಯಿಂದ ಬೆಲೆ ಕುಸಿತ ಮತ್ತು ರೈತರಿಗೆ ನಷ್ಟವನ್ನು ತಡೆಯಬಹುದು. ಉದ್ದೇಶಿತ ಎಂಎಸ್ಪಿ ಖಾತ್ರಿಯು ಬೆಲೆ ಕುಸಿತದ ಸಂಕಷ್ಟ ಕಾಲದಲ್ಲಿ ರೈತರನ್ನು ಕಾಯುತ್ತದೆ. ಬರ, ಪ್ರವಾಹ ಇಲ್ಲವೇ ಸಾಂಕ್ರಾಮಿಕದ ಸಂದರ್ಭದಲ್ಲಿ ಗ್ರಾಮೀಣರಿಗೆ ನೆರವಾಗುವ ಉದ್ಯೋಗ ಖಾತ್ರಿ(ನರೇಗಾದಂತೆ), ರೈತರ ಸುರಕ್ಷಾ ಕವಚದಂತೆ ಕಾರ್ಯ ನಿರ್ವಹಿಸುತ್ತದೆ.
ಕೇಂದ್ರ ಸರಕಾರ 6.92 ಲಕ್ಷ ಕ್ವಿಂಟಾಲ್ ಉಂಡೆ ಕೊಬ್ಬರಿಯನ್ನು ಮಾತ್ರ ಖರೀದಿಸುವುದಾಗಿ ಹೇಳಿರುವುದರಿಂದ, ರೈತರು ಅನಿವಾರ್ಯವಾಗಿ ಖರೀದಿ ಕೇಂದ್ರಗಳಿಗೆ ಮುಗಿಬಿದ್ದಿದ್ದಾರೆ. 8 ಜಿಲ್ಲೆಗಳ 30,543 ಕೊಬ್ಬರಿ ಬೆಳೆಗಾರರು ನೋಂದಣಿ ಮಾಡಿಸಿಕೊಂಡಿದ್ದಾರೆ (ಮಾ.6ರ ಮಾಹಿತಿ). ಕಿಕ್ಕೇರಿಯಲ್ಲಿ ಖರೀದಿ ಕೇಂದ್ರಗಳಲ್ಲಿ ರಾತ್ರಿಯಿಡೀ ಜಾಗರಣೆ ಮಾಡಿದ್ದಾರೆ. ತುಮಕೂರು ಜಿಲ್ಲೆಯಲ್ಲಿ ಸರ್ವರ್ ಸಮಸ್ಯೆಯಿಂದಾಗಿ, ಟೋಕನ್ ನೀಡಲಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ರೈತರು ರಾತ್ರಿಯಿಡೀ ನೋಂದಣಿ ಕೇಂದ್ರದ ಮುಂದೆಯೇ ಮಲಗಿದ್ದರು. ಖರೀದಿಗೆ ಮಿತಿ ವಿಧಿಸಿರುವುದರಿಂದ, ಈ ಪ್ರಮಾಣ ತಲುಪಿದ ತಕ್ಷಣ ನೋಂದಣಿ ಪ್ರಕ್ರಿಯೆ ತನ್ನಿಂದತಾನೇ ಸ್ಥಗಿತಗೊಳ್ಳುತ್ತದೆ. ಇದರಿಂದ ರೈತರು ಅನಿವಾರ್ಯವಾಗಿ ಕೇಂದ್ರಗಳಿಗೆ ಮುಗಿಬಿದ್ದಿದ್ದಾರೆ. ಇಂಥ ಖರೀದಿ ಪ್ರಹಸನಗಳು ದೇಶದೆಲ್ಲೆಡೆ ವಿವಿಧ ಬೆಳೆಗಳು, ವಿವಿಧ ರೂಪಗಳಲ್ಲಿ ಕಾಣಸಿಗುತ್ತವೆ. ಇದಕ್ಕೆ ಅಂತ್ಯ ಕಾಣಿಸಬಹುದಾದ ಸರಕಾರಗಳು ಎಂದಿನದೇ ರಾಜಕೀಯ ಮೇಲಾಟದಲ್ಲಿ ತೊಡಗಿಕೊಂಡಿದ್ದು, ಬರದಿಂದ ಹೈರಾಣಾಗಿರುವ ರೈತರು ಹತಾಶರಾಗಿದ್ದಾರೆ. ಆತ್ಮಹತ್ಯೆಗಳು ಹೆಚ್ಚಿವೆ.
ರೈತರಿಂದ ಮತ್ತೊಮ್ಮೆ ಪ್ರತಿಭಟನೆ: ರೈತರು ಮಾರ್ಚ್ 10ರಿಂದ ದಿಲ್ಲಿಯಲ್ಲಿ ಎಂಎಸ್ಪಿ(ಕನಿಷ್ಠ ಬೆಂಬಲ ಬೆಲೆ) ಕಾನೂನು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಬೇಕೆಂದು ಎರಡನೇ ಸುತ್ತಿನ ಪ್ರತಿಭಟನೆ ಆರಂಭಿಸಲಿದ್ದಾರೆ. 2019ರಲ್ಲಿ ಪ್ರಧಾನಿ ನರೇಂದ್ರ ಮೋದಿ, ‘‘ಕಾಂಗ್ರೆಸ್ ರೈತರನ್ನು ವೋಟ್ ಬ್ಯಾಂಕಿನಂತೆ ಬಳಸಿಕೊಳ್ಳುತ್ತಿದೆ. ಆಶ್ವಾಸನೆ ನೀಡಿ ಈಡೇರಿಸದೆ ಇರುವುದರಿಂದ ರೈತರು ಪ್ರತಿಭಟನೆ-ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ’’ ಎಂದು ದೂರಿದ್ದರು. ಸತ್ಯವೇನೆಂದರೆ, ಪ್ರತಿಯೊಂದು ರಾಜಕೀಯ ಪಕ್ಷವೂ ರೈತರನ್ನು ಚುನಾವಣೆಯಲ್ಲಿ ಗೆಲುವಿಗೆ ಬಳಸಿಕೊಳ್ಳುತ್ತಿದೆ. ಪ್ರತೀ ಬಾರಿ ಪ್ರತಿಭಟನೆ ನಡೆದಾಗ, ರೈತರು ಮತ್ತು ದೇಶಕ್ಕೆ ಆರ್ಥಿಕ ನಷ್ಟ ಆಗುತ್ತದೆ. ಜೊತೆಗೆ, ರೈತರು ಜೀವ ಕಳೆದುಕೊಳ್ಳುತ್ತಾರೆ. ರಾಷ್ಟ್ರೀಯ ಅಪರಾಧ ಬ್ಯೂರೋ ವರದಿ(ಎನ್ಸಿಆರ್ಬಿ) ಪ್ರಕಾರ, ದೇಶದಲ್ಲಿ ಪ್ರತಿದಿನ 154 ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಗರಿಷ್ಠ, ನಂತರದ ಸ್ಥಾನಗಳಲ್ಲಿ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಮಧ್ಯಪ್ರದೇಶವಿದೆ. ಕಳೆದ 5 ವರ್ಷದಲ್ಲಿ ಕೃಷಿಯಲ್ಲಿ ತೊಡಗಿಸಿಕೊಂಡ 11,290 ಮಂದಿ ಮೃತಪಟ್ಟಿದ್ದಾರೆ. ಇದರಲ್ಲಿ 5,207 ಕೃಷಿಕರು ಹಾಗೂ 6,083 ಕೃಷಿ ಕಾರ್ಮಿಕರು ಇದ್ದಾರೆ.
ರಾಜ್ಯದಲ್ಲಿ ಸಂಯುಕ್ತ ಕೃಷಿಕ ಮೋರ್ಚಾ 2023ರ ನವೆಂಬರ್ನಲ್ಲಿ 72 ಗಂಟೆಗಳ ಮಹಾಧರಣಿ ಹಮ್ಮಿಕೊಂಡಿತ್ತು. ವಿದ್ಯುತ್ ತಿದ್ದುಪಡಿ ಕಾಯ್ದೆ 2022ನ್ನು ರದ್ದುಗೊಳಿಸಬೇಕು ಎಂಬುದು ಪ್ರಮುಖ ಬೇಡಿಕೆಯಾಗಿತ್ತು. ಈ ಕಾಯ್ದೆಯನ್ನು ಹಲವು ರೈತ ಸಂಘಟನೆಗಳು ಮತ್ತು ಒಕ್ಕೂಟಗಳು ತಿರಸ್ಕರಿಸಿವೆ. ಒಕ್ಕೂಟ ತತ್ವಕ್ಕೆ ಧಕ್ಕೆ ತರುತ್ತದೆ ಮತ್ತು ವಿದ್ಯುತ್ ಕ್ಷೇತ್ರದ ಖಾಸಗೀಕರಣಕ್ಕೆ ದಾರಿ ಮಾಡಿಕೊಡುತ್ತದೆ ಎನ್ನುವುದು ವಿರೋಧಕ್ಕೆ ಕಾರಣ. 2003ರ ವಿದ್ಯುತ್ ಕಾಯ್ದೆಗೆ ಈ ಮಸೂದೆ 35 ತಿದ್ದುಪಡಿಗಳನ್ನು ಅಳವಡಿಸಿದೆ. ಅದರಲ್ಲಿ ವಿಭಾಗ 5, ಪ್ರದೇಶವೊಂದಕ್ಕೆ ವಿದ್ಯುತ್ ಹಂಚಿಕೆಗೆ ಒಂದಕ್ಕಿಂತ ಹೆಚ್ಚು ವಿತರಣೆ ಕಂಪೆನಿ(ಡಿಸ್ಕಾಂ)ಗಳಿಗೆ ಅನುಮತಿ ನೀಡುತ್ತದೆ. ಹಳೆಯ ಕಾಯ್ದೆಯಲ್ಲಿ ಈ ಅಂಶವಿದ್ದರೂ, ಹೊಸ ಡಿಸ್ಕಾಂ ತನ್ನದೇ ಆದ ತಂತಿ ಜಾಲ-ವಿತರಣೆ ವ್ಯವಸ್ಥೆಯನ್ನು ಹೊಂದಿರಬೇಕೆಂದು ಷರತ್ತು ವಿಧಿಸಿತ್ತು. ಆದರೆ, ಹೊಸ ಕಾಯ್ದೆ ಪ್ರಕಾರ, ಹೊಸ ಕಂಪೆನಿ ಹಳೆಯ ವಿತರಣೆ ಜಾಲವನ್ನೇ ಬಳಸಿಕೊಳ್ಳಬಹುದು. ಇದಕ್ಕಾಗಿ ಸೇವಾ ಶುಲ್ಕ ಪಾವತಿಸಿದರೆ ಸಾಕು. ಇದು ವಿದ್ಯುತ್ ಕ್ಷೇತ್ರದ ಖಾಸಗೀಕರಣ ಪ್ರಯತ್ನ ಎನ್ನುವುದು ಪ್ರತಿಪಕ್ಷಗಳು-ರೈತ ಸಂಘಟನೆಗಳ ಆರೋಪ.
ಮೊಹಾಲಿ-ಚಂಡಿಗಡ ಗಡಿಯಲ್ಲಿ ಸಂಯುಕ್ತ ಕೃಷಿಕ ಮೋರ್ಚಾ ವತಿಯಿಂದ ನವೆಂಬರ್ 2023ರಲ್ಲಿ ಪ್ರತಿಭಟನೆ ಆರಂಭವಾಯಿತು. ಎಂಎಸ್ಪಿ ಖಾತ್ರಿ ಕಾನೂನು ಜಾರಿ, ಕಳೆದ ವರ್ಷ ಕೃಷಿ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆ ವೇಳೆ ರೈತರ ಮೇಲೆ ದಾಖಲಿಸಿದ್ದ ಪ್ರಕರಣಗಳ ಹಿಂಪಡೆಯುವಿಕೆ, ಸಾಲ ಮನ್ನಾ, ರೈತರಿಗೆ ಪಿಂಚಣಿ, ಕೂಳೆಯನ್ನು ಸುಟ್ಟಿದ್ದಕ್ಕೆ ದಾಖಲಿಸಿದ ಎಫ್ಐಆರ್ಗಳನ್ನು ವಾಪಸ್ ಪಡೆಯುವುದು, ಪ್ರವಾಹದಿಂದಾದ ಬೆಳೆ ನಷ್ಟಕ್ಕೆ ಪರಿಹಾರ ನೀಡಬೇಕೆಂಬುದು ಬೇಡಿಕೆ. 3 ವರ್ಷಗಳ ಹಿಂದೆ ರೈತರ ಪ್ರತಿಭಟನೆಯಿಂದಾಗಿ ಒಕ್ಕೂಟ ಸರಕಾರ ಕೃಷಿ ಕಾನೂನುಗಳನ್ನು ಹಿಂಪಡೆಯಿತು; ತೀವ್ರ ಮುಖಭಂಗ ಅನುಭವಿಸಿತು. 1967ರಲ್ಲಿ ಜಾರಿಗೊಂಡ ಎಂಎಸ್ಪಿ ವ್ಯವಸ್ಥೆಯು ಬೇಳೆಕಾಳು, ಧಾನ್ಯ, ಎಣ್ಣೆ ಕಾಳು ಮತ್ತು ವಾಣಿಜ್ಯ ಬೆಳೆಗಳಾದ ಕೊಬ್ಬರಿ ಮತ್ತು ಹತ್ತಿ ಸೇರಿದಂತೆ 23 ಬೆಳೆಗಳಿಗೆ ಅನ್ವಯಿಸುತ್ತದೆ. ಕಬ್ಬಿಗೆ ಕೇಂದ್ರ ಮತ್ತು ರಾಜ್ಯ ಎರಡೂ ಬೆಂಬಲ ಬೆಲೆ ನೀಡುತ್ತವೆ. ಆದರೆ, ಎಂಎಸ್ಪಿಗೆ ಶಾಸನಾತ್ಮಕ ಬೆಂಬಲ ಇಲ್ಲ. ಕೃಷಿ ವೆಚ್ಚ ಮತ್ತು ಬೆಲೆ ಆಯೋಗದ ಸಲಹೆಯಂತೆ ಪ್ರತೀ ವರ್ಷ ಎಂಎಸ್ಪಿಯನ್ನು ನಿಗದಿಗೊಳಿಸಲಾಗುತ್ತದೆ. ಆಯೋಗದ ಸಲಹೆಯನ್ನು ಕೇಂದ್ರ ಸಂಪುಟ ಪರಿಗಣಿಸಲೇಬೇಕು ಎಂಬ ಕಡ್ಡಾಯವಿಲ್ಲ.
ಹಲವು ಬೆಲೆಗಳಿಗೆ ಎಂಎಸ್ಪಿ ನಿಗದಿಪಡಿಸಿದ್ದರೂ, ಗೋಧಿ-ಭತ್ತಕ್ಕೆ ಮಾತ್ರ ಅದು ಹೆಚ್ಚು ಬಳಕೆಯಾಗುತ್ತಿದೆ. ಕೇಂದ್ರ ಮತ್ತು ಕೆಲವು ರಾಜ್ಯಗಳೆರಡೂ ಎಂಎಸ್ಪಿಯಲ್ಲಿ ಗೋಧಿ-ಭತ್ತ ಖರೀದಿಸುತ್ತವೆ. ಲಾಭ ಕೆಲವು ರಾಜ್ಯಗಳಿಗೆ ಮಾತ್ರ ದಕ್ಕುತ್ತದೆ. ಧಾನ್ಯ ಖರೀದಿಸಿದ ರಾಜ್ಯಕ್ಕೆ ಮಂಡಿಯಲ್ಲಿ ಸಂಗ್ರಹಿಸಿದ ತೆರಿಗೆ ದೊರಕಲಿದ್ದು, ಖರೀದಿ ಹೆಚ್ಚಿದಂತೆ ತೆರಿಗೆ ಸಂಗ್ರಹವೂ ಹೆಚ್ಚುತ್ತದೆ. ಪಂಜಾಬ್ನಂಥ ರಾಜ್ಯಕ್ಕೆ ಇದು ಗಮನಾರ್ಹ ಆದಾಯದ ಮೂಲ. ಮಧ್ಯಪ್ರದೇಶ ಹಾಗೂ ಕೆಲವು ರಾಜ್ಯಗಳು ಎಂಎಸ್ಪಿಯಡಿ ಬೇಳೆಕಾಳು ಖರೀದಿಸಿದ್ದೂ ಇದೆ. ಮಹಾರಾಷ್ಟ್ರ ಎಂಎಸ್ಪಿಯಡಿ ಬೇಳೆಕಾಳು ಖರೀದಿಸಬೇಕು ಎಂದು ಖಾಸಗಿ ವ್ಯಾಪಾರಿಗಳಿಗೆ ಹೇಳಿದಾಗ, ಅವರು ಬಂಡೆದ್ದರು; ಸಹಕರಿಸಲಿಲ್ಲ. ಖಾಸಗಿ ವ್ಯಾಪಾರಿಗಳಿಂದ ಹೆಚ್ಚು ತೆರಿಗೆ ಸಂಗ್ರಹಿಸಬಹುದು ಎಂದುಕೊಂಡಿದ್ದ ಸರಕಾರ, ಆಲೋಚನೆಯನ್ನು ಕೈಬಿಡಬೇಕಾಗಿ ಬಂದಿತು. ವಾಸ್ತವವೆಂದರೆ, ಎಂಎಸ್ಪಿ ಭತ್ತ-ಗೋಧಿ ಬೆಳೆಗಾರರಿಗೆ ಮಾತ್ರ ಪ್ರಯೋಜನಕಾರಿ. ಅದು ಕೂಡ ಭಾರೀ ಪ್ರಮಾಣದಲ್ಲಿ ಆವಕ ಇರಿಸಿಕೊಂಡಿರುವವರಿಗೆ ಮಾತ್ರ. ಹೀಗಾಗಿ, ಪಂಜಾಬ್, ಹರ್ಯಾಣ ಮತ್ತು ಪಶ್ಚಿಮ ಉತ್ತರಪ್ರದೇಶಕ್ಕೆ ಸೀಮಿತವಾಗಿದೆ.
ಎಂಎಸ್ಪಿಗೆ ಶಾಸನದ ಬಲ ತುಂಬುವುದು ಸರಿಯಾದ ಆಲೋಚನೆಯೇ? ಹೌದು. ಮೊದಲಿಗೆ, ಅದರಿಂದ ಆರ್ಥಿಕ ಅನಾಹುತವೇನೂ ಸಂಭವಿಸುವುದಿಲ್ಲ. ಎಂಎಸ್ಪಿ ಅವಶ್ಯಕತೆ ಬರುವುದು ಮಾರುಕಟ್ಟೆಯಲ್ಲಿ ಬೆಲೆ ಕುಸಿದಾಗ ಮಾತ್ರ. 2ನೆಯದಾಗಿ ಸರಕಾರ ಮಧ್ಯಪ್ರವೇಶಿಸಿ ಉತ್ಪನ್ನಗಳ ಖರೀದಿ ಆರಂಭಿಸುತ್ತಿದ್ದಂತೆ, ಮುಕ್ತ ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಲಾರಂಭಿಸುತ್ತದೆ. ಮೂರನೆಯದಾಗಿ, ಎಂಎಸ್ಪಿ ರೈತರಿಗೆ ಬೆಲೆ ವಿಮೆಯಿದ್ದಂತೆ. ರೈತರ ಉತ್ಪನ್ನಗಳಿಗೆ ಬೆಲೆ ನಿಗದಿ ವ್ಯವಸ್ಥೆಯೊಂದು ಇರಲೇಬೇಕಿದೆ. ಕೃಷಿ ಉತ್ಪನ್ನಗಳ ಬೆಲೆ ಏರಿಳಿತ ಊಹಾತೀತವಾದುದು. ಎಂಎಸ್ಪಿಯಿಂದ ಬೆಲೆ ಕುಸಿತ ಮತ್ತು ರೈತರಿಗೆ ನಷ್ಟವನ್ನು ತಡೆಯಬಹುದು. ನಾಲ್ಕನೆಯದಾಗಿ, ಉದ್ದೇಶಿತ ಎಂಎಸ್ಪಿ ಖಾತ್ರಿಯು ಬೆಲೆ ಕುಸಿತದ ಸಂಕಷ್ಟ ಕಾಲದಲ್ಲಿ ರೈತರನ್ನು ಕಾಯುತ್ತದೆ. ಬರ, ಪ್ರವಾಹ ಇಲ್ಲವೇ ಸಾಂಕ್ರಾಮಿಕದ ಸಂದರ್ಭದಲ್ಲಿ ಗ್ರಾಮೀಣರಿಗೆ ನೆರವಾಗುವ ಉದ್ಯೋಗ ಖಾತ್ರಿ(ನರೇಗಾದಂತೆ), ರೈತರ ಸುರಕ್ಷಾ ಕವಚದಂತೆ ಕಾರ್ಯ ನಿರ್ವಹಿಸುತ್ತದೆ.
ರೈತ ಕುಟುಂಬಗಳ ಸಮಸ್ಯೆಗಳನ್ನು ಪರಿಗಣಿಸಿದರೆ, ಎಂಎಸ್ಪಿ ಕಾನೂನಿನ ಜಾರಿಗೆ ಸಮಯ ಕೂಡಿಬಂದಿದೆ. ಇಂಥ ಕಾನೂನನ್ನು ಲಾಭ-ನಷ್ಟದ ದೃಷ್ಟಿಯಿಂದ ಮೌಲ್ಯಮಾಪನ ಮಾಡುವುದು ಸರಿಯಲ್ಲ. 70(2013) ಮತ್ತು 77(2019)ನೇ ಸುತ್ತಿನ ರಾಷ್ಟ್ರೀಯ ಸ್ಯಾಂಪಲ್ ಸಮೀಕ್ಷೆಯಲ್ಲಿರುವ ಕೃಷಿ ಕುಟುಂಬಗಳ ಪರಿಸ್ಥಿತಿಯ ಮೌಲ್ಯ ಮಾಪನದ ಪ್ರಕಾರ, ಈ ಅವಧಿಯಲ್ಲಿ ಕೃಷಿ ಕುಟುಂಬಗಳ ಕೃಷಿಯಿಂದ ಬಂದ ಆದಾಯವು ಕೂಲಿ ಆದಾಯಕ್ಕಿಂತ ಕಡಿಮೆ ಇದ್ದಿತ್ತು. 2019ರಲ್ಲಿ ಕೃಷಿ ಕುಟುಂಬಗಳ ಮಾಸಿಕ ಆದಾಯ 10,000 ರೂ. ಇತ್ತು. ಇದು ರಾಷ್ಟ್ರೀಯ ಸರಾಸರಿ ಆದಾಯಕ್ಕಿಂತ ಬಹಳ ಕಡಿಮೆ. ಆದರೆ, ರೈತರ ಸಾಲ ಹೆಚ್ಚಳಗೊಂಡಿತ್ತು. ರೈತರು ಸಾಲವನ್ನು ಜೀವನ ನಿರ್ವಹಣೆಗೆ ಮಾಡಿದ್ದರೇ ಹೊರತು, ಹೂಡಿಕೆಗೆ ಅಲ್ಲ. ವಾಸ್ತವವೆಂದರೆ, 2004-2011ರವರೆಗೆ ವಾರ್ಷಿಕ ಶೇ.3.4 ಇದ್ದ ರೈತರ ಆದಾಯ ಬೆಳವಣಿಗೆಯು 2015-19ರಲ್ಲಿ ಶೇ.2.5ಕ್ಕೆ ಕುಸಿದಿದೆ. ಇದೇ ಅವಧಿಯಲ್ಲಿ ರಾಷ್ಟ್ರೀಯ ಆದಾಯ ಅತ್ಯಂತ ವೇಗವಾಗಿ ಬೆಳೆಯಿತು ಎಂಬುದನ್ನು ಮರೆಯಬಾರದು. ಕೃಷಿ ಕುಟುಂಬಗಳು ಹಿಂದೆ ಬೀಳುತ್ತಿರುವುದರಿಂದ, ಬಡತನವು ಕೃಷಿ/ಗ್ರಾಮೀಣ ಕುಟುಂಬಗಳಿಗೆ ಸೀಮಿತವಾಗಿರುವುದು ಆಶ್ಚರ್ಯವೇನಲ್ಲ. ಸರಕಾರ 2016ರಲ್ಲಿ ರೈತರ ಆದಾಯ ದುಪ್ಪಟ್ಟು ಮಾಡುವುದಾಗಿ ಹೇಳಿತ್ತು. ಆದರೆ, ಅವರ ಆದಾಯ ಕುಸಿಯುತ್ತಲೇ ನಡೆದಿದೆ.
ಕೃಷಿ ಕ್ಷೇತ್ರದ ಸಮಸ್ಯೆಗಳು ಹಲವು- ಬೆಲೆ ಏರಿಳಿತ, ಹವಾಮಾನ ಸಂಬಂಧಿ ಅಕಾಲಿಕ ಮಳೆ/ಬಿಸಿಲು/ಆರ್ದ್ರ ಹವೆ, ಕೀಟಗಳ ಹಾವಳಿ, ಜಾಗತಿಕ ವಿದ್ಯಮಾನಗಳಿಂದ ಉತ್ಪನ್ನಗಳ ಬೆಲೆ ಏರಿಳಿತ, ಸರಕಾರ ದೇಶಿ ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಳ ತಡೆಯಲು ಮಾಡುವ ರಫ್ತು ನಿಷೇಧ ಮತ್ತು ನಗರ ಪ್ರದೇಶದ ಗ್ರಾಹಕರ ಪರವಾದ ಪಕ್ಷಪಾತ ನೀತಿಗಳು. ಕೈಗಾರಿಕೆ ಉತ್ಪನ್ನ/ಸೇವೆಗಳಿಗೆ ಹೋಲಿಸಿದರೆ, ಕೃಷಿ ಉತ್ಪನ್ನಗಳಿಗೆ ಗರಿಷ್ಠ ಮಾರಾಟ ಬೆಲೆ(ಎಂಆರ್ಪಿ) ನಿಗದಿ ಪಡಿಸಬೇಕಿದೆ. ಕ್ರಮೇಣ ಕೃಷಿ ದುಬಾರಿಯಾಗಿದ್ದು, ಒಳಸುರಿಗಳ ಬೆಲೆ ಹೆಚ್ಚಿದೆ. ಕೃಷಿ ಉತ್ಪನ್ನಗಳಿಗೆ ಸಿಗುತ್ತಿರುವುದು ಋಣಾತ್ಮಕ ಬೆಲೆ(-). ಸ್ವದೇಶದಲ್ಲಿ ಬೆಲೆ ಕಡಿಮೆಗೊಳಿಸಲು ಸರಕಾರ ನಡೆಸುವ ರಫ್ತು ನಿಷೇಧ ನಾಟಕದಿಂದ, ಕೃಷಿ ಆದಾಯದ ಮೇಲೆ ತೆರಿಗೆ ವಿಧಿಸಿದಂತೆ ಆಗುತ್ತದೆ. ಬೆಲೆ ಹೆಚ್ಚಳದಿಂದ ಸಿಗಬಹುದಾದ ಲಾಭ ಕೈ ತಪ್ಪುತ್ತದೆ. ಕೃಷಿಕರ ಆದಾಯಕ್ಕೆ ತೆರಿಗೆ ವಿಧಿಸಬೇಕು ಎಂದು ಗೊಣಗುವವರು ರೈತರ ಮೇಲಿರುವ ಹೊರೆ ಬಗ್ಗೆ ತಿಳಿದುಕೊಳ್ಳದ ಮೂಢರು.
ಇದರೊಟ್ಟಿಗೆ, ಭೂಮಿಯ ಛಿದ್ರೀಕರಣ ನಿರಂತರವಾಗಿದೆ. ಪೀಳಿಗೆಯಿಂದ ಪೀಳಿಗೆಗೆ ತಲಾ ಹಿಡುವಳಿ ಕಡಿಮೆಯಾಗುತ್ತಿದೆ. ದೇಶದಲ್ಲಿ ಪ್ರಸ್ತುತ 141 ದಶಲಕ್ಷ ಸಣ್ಣ ಹಿಡುವಳಿಗಳಿವೆ; ಹಿಂದಿನ 50 ವರ್ಷಕ್ಕೆ ಹೋಲಿಸಿದರೆ ದುಪ್ಪಟ್ಟು. ಸಣ್ಣ ಹಿಡುವಳಿ ಎಂದರೆ ಕಡಿಮೆ ಉತ್ಪಾದಕತೆ, ಸುಧಾರಿತ ಕೃಷಿ ವಿಧಾನಗಳನ್ನು ಬಳಸಲು ಸಾಧ್ಯವಾಗು ವುದಿಲ್ಲ ಮತ್ತು ಕಡಿಮೆ ಉತ್ಪಾದನೆಯಿಂದ ರೈತರಿಗೆ ಮಾರುಕಟ್ಟೆಯ ಲಾಭ ದೊರಕುವುದಿಲ್ಲ. ಶೇ.90ಕ್ಕೂ ಅಧಿಕ ಕೃಷಿ ಕುಟುಂಬಗಳ ಬಳಿ 2 ಹೆಕ್ಟೇರ್ಗಿಂತ ಕಡಿಮೆ ಕೃಷಿ ಭೂಮಿ ಇದೆ. ಇಂಥ ಪರಿಸ್ಥಿತಿಯಲ್ಲಿ ರೈತರ ಆದಾಯವು ರಾಷ್ಟ್ರೀಯ ಜಿಡಿಪಿ ಬೆಳವಣಿಗೆಗೆ ಅನುಗುಣವಾಗಿರಲು ಹೇಗೆ ಸಾಧ್ಯ?
ಇಷ್ಟೆಲ್ಲ ಸಮಸ್ಯೆಯಿದ್ದರೂ ರೈತರು ಕೃಷಿಗೆ ಅಂಟಿಕೊಳ್ಳುವುದು ಏಕೆ? ಬೇರೆ ಕೆಲಸ ಮಾಡಬಾರದೇ ಎಂದು ಪ್ರಶ್ನಿಸುವ ಅಲ್ಪಮತಿಗಳು ಇದ್ದಾರೆ. ಕೃಷಿಕರಿಗೆ ಬೇಸಾಯ ಬಿಟ್ಟರೆ ಬೇರೆ ಗತಿ ಇಲ್ಲ. ಕೃಷಿ ಹೊರತಾದ ಬೇರೆ ಕ್ಷೇತ್ರಗಳಲ್ಲಿ ಅಧಿಕ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿ ಆಗುತ್ತಿಲ್ಲ. ಕೈಗಾರಿಕೆ/ಸೇವಾ ಕ್ಷೇತ್ರದಲ್ಲಿ ಸುರಕ್ಷಿತ ಉದ್ಯೋಗ, ಅಧಿಕ ವೇತನ ಲಭ್ಯವಿದ್ದರೆ, ವಿದ್ಯಾವಂತ ರೈತರು ಅದನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಕೃಷಿ ಹೊರತಾದ ಉದ್ಯಮ-ಸೇವಾ ಕ್ಷೇತ್ರಗಳಲ್ಲಿ ಅಧಿಕ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿ ಆಗದೆ ಇರುವುದು ದೇಶದ ಕೃಷಿ ಕ್ಷೇತ್ರದ ಸಂಕಷ್ಟಕ್ಕೆ ಪ್ರಮುಖ ಕಾರಣ. ಇದರೊಟ್ಟಿಗೆ, ದಲ್ಲಾಳಿಗಳ ನಿಯಂತ್ರಣ, ದೊಡ್ಡ ವ್ಯಾಪಾರಿಗಳ ಲಾಭಕೋರತನಕ್ಕೆ ಕಡಿವಾಣ, ಕಾನೂನು ಸುಧಾರಣೆ, ರಫ್ತು ನಿಷೇಧಕ್ಕೆ ತಡೆ, ಸಣ್ಣ ರೈತರು-ಗುತ್ತಿಗೆ ಕೃಷಿಕರಿಗೆ ಕಡಿಮೆ ಬಡ್ಡಿ ದರದಲ್ಲಿ ಸುಲಭವಾಗಿ ಸಾಲ ಲಭ್ಯವಾಗುವಂತೆ ಮಾಡುವುದು, ಬೆಳೆ ವೈವಿಧ್ಯೀಕರಣಕ್ಕೆ ಆರ್ಥಿಕ ನೆರವು, ಕೃಷಿ ವಿಶ್ವವಿದ್ಯಾನಿಲಯಗಳಿಂದ ರೈತರಿಗೆ ಉಪಯುಕ್ತ ಸಂಶೋಧನೆ, ಆಧುನಿಕ ಕೃಷಿ ತಂತ್ರಜ್ಞಾನ ಅಳವಡಿಕೆಗೆ ನೆರವು ಇತ್ಯಾದಿಯಿಂದ ರೈತರ ಬದುಕನ್ನು ಸಹನೀಯಗೊಳಿಸಬಹುದು.
ರೈತರ ಆತ್ಮಹತ್ಯೆ ಒಂದು ಸಂಕೀರ್ಣ ಸಮಸ್ಯೆ. ಸರಕಾರದಿಂದ ಬೆಂಬಲದ ಕೊರತೆ, ಹವಾಮಾನ ವೈಪರೀತ್ಯ ಮತ್ತು ಮಾನಸಿಕ ಸಮಸ್ಯೆಗಳಿಗೆ ಪರಿಹಾರ ಲಭ್ಯವಾಗದೆ ಇರುವುದು ಸೇರಿದಂತೆ ಹಲವು ಕಾರಣಗಳಿವೆ. ಇದನ್ನು ಬಗೆಹರಿಸಲು ಸಮಗ್ರ ವ್ಯವಸ್ಥೆಯೊಂದು ಅಗತ್ಯವಿದೆ. ಕನಿಷ್ಠ ಬೆಂಬಲ ಖಾತ್ರಿ ಮೂಲಕ ಕೃಷಿ ಕ್ಷೇತ್ರದ ಸ್ವಾವಲಂಬನೆಗೆ ಮೊದಲ ಹೆಜ್ಜೆ ಇಟ್ಟಂತೆ ಆಗಲಿದೆ. ಸರಕಾರಗಳು ಗ್ರಾಹಕರ ಹಿತರಕ್ಷಣೆಗೆ ಮುಂದಾಗುತ್ತವೆ; ಮಧ್ಯಮ ವರ್ಗದವರ ಆಕ್ರೋಶಕ್ಕೆ ಹೆದರುತ್ತವೆ. ಕೃಷಿಕರು ಒಂದು ತಂಡದಂತೆ ಮತ ಚಲಾವಣೆ ಮಾಡದೆ ಇರುವುದರಿಂದ, ಅವರ ಕೊಡು-ಕೊಳ್ಳು ಸಾಮರ್ಥ್ಯ ಕಡಿಮೆಯಾಗಿದೆ. ಚುನಾವಣೆ ಬಂದಾಗ ರೈತರು ವಿವಿಧ ಪಕ್ಷಗಳಲ್ಲಿ ಹಂಚಿಹೋಗುತ್ತಾರೆ. ಇದು ಗೊತ್ತಿದ್ದೇ ರಾಜಕಾರಣಿಗಳು ಅವರ ಪ್ರತಿಭಟನೆಗೆ ಸೊಪ್ಪು ಹಾಕುವುದಿಲ್ಲ. ಇಂಥ ಸನ್ನಿವೇಶದಲ್ಲಿ ಎಂಎಸ್ಪಿ ಕಾಯ್ದೆ ಸಕಾರಾತ್ಮಕ ಸಂದೇಶ ನೀಡಲಿದೆ.
ರೈತರು ಹೊಸದಿಲ್ಲಿಗೆ ಲಗ್ಗೆ ಹಾಕುತ್ತಿರುವ ಹೊತ್ತಿನಲ್ಲೇ ಜಾಮ್ ನಗರದಲ್ಲಿ ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ವಿವಾಹಪೂರ್ವ ಸಮಾರಂಭ ಅತ್ಯಂತ ಅದ್ಧೂರಿಯಾಗಿ ನಡೆದಿದೆ. ಇದಕ್ಕಾಗಿ ಮಾಡಿದ ವೆಚ್ಚ ಭಾರತದಂಥ ದೇಶದಲ್ಲಿ ಕ್ರೌರ್ಯದ ಪರಮಾವಧಿ.