ಆನ್‌ಲೈನ್ ಬೆಟ್ಟಿಂಗ್‌ನಿಂದ ಯುವಜನತೆಯನ್ನು ರಕ್ಷಿಸುವವರು ಯಾರು?

Update: 2025-04-13 10:33 IST
ಆನ್‌ಲೈನ್ ಬೆಟ್ಟಿಂಗ್‌ನಿಂದ ಯುವಜನತೆಯನ್ನು ರಕ್ಷಿಸುವವರು ಯಾರು?
  • whatsapp icon

ಈ ದೇಶದ ಬಹುದೊಡ್ಡ ಗುಂಪು ಎನಿಸಿಕೊಂಡಿರುವ ಯುವಜನರು ಈಗ ಚಾಲ್ತಿಯಲ್ಲಿರುವ ಐಪಿಎಲ್ ಕ್ರಿಕೆಟ್ ಆಟವನ್ನು ಒಂದು ಜೂಜು ಎನ್ನುವಂತೆ ನೋಡುತ್ತಿದ್ದಾರೆ. ಇದಕ್ಕೆ ಮಕ್ಕಳೇನು ಹೊರತಾಗಿಲ್ಲ. ಇವುಗಳಿಗೆ ಪೂರಕವೆನ್ನುವಂತೆ ಐಪಿಎಲ್‌ನ ಎಲ್ಲಾ ಆಟಗಾರರು ಬೆಟ್ಟಿಂಗ್ ಆ್ಯಪ್‌ಗಳನ್ನು ಪ್ರಮೋಟ್ ಮಾಡುತ್ತಾ, ‘ಡ್ರೀಮ್‌11, ಮೈ11 ಸರ್ಕಲ್ ಆಡಿ ಕೋಟಿ ಕೋಟಿ ಹಣ ಗಳಿಸಿ’ ಎಂದು ಯುವಜನರನ್ನು ಪ್ರಚೋದಿಸುತ್ತಿದ್ದಾರೆ.

ಇಲ್ಲಿ ಗಮನಿಸಬೇಕಾದದ್ದು ಜಾಹೀರಾತುಗಳನ್ನು. ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಟಿವಿ ಮಾಧ್ಯಮಗಳಲ್ಲಿ ಹೆಚ್ಚಾಗಿ ಡ್ರೀಮ್ 11 ಮತ್ತು ಮೈ11 ಸರ್ಕಲ್ ಆ್ಯಪ್ ಬಗ್ಗೆಯೇ ಪ್ರಚಾರ ನಡೆಯುತ್ತಿದೆ. ಆಟಕ್ಕಿಂತ ಈ ಡ್ರೀಮ್‌11 ಬೆಟ್ಟಿಂಗ್ ಸದ್ದು ಜೋರಾಗಿದೆ. ವರ್ಷದಿಂದ ವರ್ಷಕ್ಕೆ ಇದರ ವಿಜೃಂಭಣೆ ಹೆಚ್ಚುತ್ತಾ ಸಾಗುತ್ತದೆ. ಆಟಗಾರರಂತೂ ಈ ಬೆಟ್ಟಿಂಗ್ ಆ್ಯಪ್‌ನ ಪೋಷಕರಂತೆ ಪ್ರಚಾರ ನೀಡುತ್ತಿದ್ದಾರೆ.

ಆಫ್‌ಲೈನ್ ಬೆಟ್ಟಿಂಗ್‌ನಿಂದ ಖಾಸಗಿ ಕಂಪೆನಿಗಳಿಗೆ ಮತ್ತು ಸರಕಾರಕ್ಕೆ ಲಾಭವಿಲ್ಲ. ಹೀಗಾಗಿ ಅದು ಕಾನೂನು ಬಾಹಿರ. ಆ್ಯಪ್ ಮೂಲಕ ಆನ್‌ಲೈನ್‌ನಲ್ಲಿ ಆಡಿದರೆ ಖಾಸಗಿ ಕಂಪೆನಿಗಳಿಗೆ ಸಾವಿರಾರು ಕೋಟಿ ರೂ. ಲಾಭವಿದೆ ಮತ್ತು ಸರಕಾರಕ್ಕೆ ಜಿಎಸ್‌ಟಿ ಮೂಲಕ ಹಣ ಬರುತ್ತದೆ. ಹೀಗಾಗಿ ಇದು ಕಾನೂನು ಬಾಹಿರವಲ್ಲ ಎನ್ನುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಾಣುತ್ತಿದೆ. ಸದ್ಯ ಡ್ರೀಮ್ 11 ಮತ್ತು 1 ಎಕ್ಸ್ ಬೆಟ್, ಮೈ11 ಸರ್ಕಲ್ ಹಾಗೂ ಎಂಪಿಎಲ್ ಒಪಿನಿಯೊ ಎಂಬ ಆ್ಯಪ್‌ಗಳು ಸಾಕಷ್ಟು ಹಣ ಮಾಡುತ್ತಿರುವುದು ಸುಳ್ಳೇನಲ್ಲ.

ಡ್ರೀಮ್‌11 ಭಾರತದಲ್ಲಿ ಹೆಚ್ಚು ಜನಪ್ರಿಯವಾಗಿ ಬೆಳೆದಿರುವ ಬೆಟ್ಟಿಂಗ್ ಆ್ಯಪ್ ಎಂದು ಹೆಸರಾಗಿದೆ. 2021ರಲ್ಲಿ ಡ್ರೀಮ್ 11 ಆ್ಯಪ್‌ನಿಂದ 2,706 ಕೋಟಿ ರೂ. ಆದಾಯ ಸಂಗ್ರಹವಾಗಿದ್ದರೆ 2022ರಲ್ಲಿ 3,480.75 ಕೋಟಿ ಮತ್ತು 2023ರಲ್ಲಿ 6,384 ಕೋಟಿ ರೂ. ಆದಾಯ ಗಳಿಸಿದೆ. ವರ್ಷದಿಂದ ವರ್ಷಕ್ಕೆ ಆದಾಯ ಹೆಚ್ಚುತ್ತಲೇ ಇದೆ. ಅಂದರೆ ಭಾರತದಲ್ಲಿ ಯುವಜನರು ಹಣದ ಆಸೆಗೆ ಬಲಿಯಾಗುತ್ತ ಆರ್ಥಿಕವಾಗಿ ದಿವಾಳಿಯಾಗುತ್ತಿದ್ದಾರೆ ಎಂದರ್ಥ. ಈ ಆನ್‌ಲೈನ್ ಬೆಟ್ಟಿಂಗ್ ಆ್ಯಪ್‌ಗಳಿಗೆ ಕಾನೂನು ಮೂಗುದಾರ ಇಲ್ಲದಂತಾಗಿದೆ. 2017ರಲ್ಲಿ ದೇಶದಲ್ಲೇ ಮೊದಲ ಬಾರಿಗೆ ತೆಲಂಗಾಣ ರಾಜ್ಯವು ಆನ್‌ಲೈನ್ ಬೆಟ್ಟಿಂಗ್ ಆ್ಯಪ್‌ಗಳ ಮೇಲೆ ನಿಷೇಧ ಹೇರಿತ್ತು. ಜೊತೆಗೆ ಈ ಡ್ರೀಮ್ 11 ಕಂಪೆನಿಯ ವಿರುದ್ಧ ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಲಾಯಿತು. ಆದರೆ ‘ಡ್ರೀಮ್ 11 ಆಟವನ್ನು ಆಡುವುದರಿಂದ ಉತ್ತಮ ಜ್ಞಾನ ಮತ್ತು ಆಟವನ್ನು ಜಡ್ಜ್ ಮಾಡುವ ಕೌಶಲ್ಯ ಬೆಳೆಯುತ್ತದೆ’ ಎಂದು ಹೈಕೋರ್ಟ್ ತೀರ್ಪು ನೀಡಿತು. ಆದರೂ ನಿಷೇಧವಿದ್ದ ಅಸ್ಸಾಂ ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿಯೂ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸುವ ಮೂಲಕ ದೇಶದಾದ್ಯಂತ ತನ್ನ ಡ್ರೀಮ್ 11 ಆ್ಯಪ್ ಅನ್ನು ವಿಸ್ತರಣೆ ಮಾಡಿಕೊಂಡಿತು. ಅಕ್ಟೋಬರ್ 2021ರಲ್ಲಿ ಕರ್ನಾಟಕ ರಾಜ್ಯವು ಆನ್‌ಲೈನ್ ಜೂಜಾಟ ಮತ್ತು ಬೆಟ್ಟಿಂಗ್ ಅನ್ನು ನಿಷೇಧಿಸಿದ ನಂತರ ಡ್ರೀಮ್‌11 ಅನ್ನು ಸ್ಥಗಿತಗೊಳಿಸಿತು. ಫೆಬ್ರವರಿ 2022ರಲ್ಲಿ ಕರ್ನಾಟಕ ಹೈಕೋರ್ಟ್ ಆನ್‌ಲೈನ್ ಜೂಜಾಟದ ಮೇಲಿನ ನಿಷೇಧವನ್ನು ರದ್ದುಗೊಳಿಸಿದ ನಂತರ ಮತ್ತು ಕಂಪೆನಿಯ ವಿರುದ್ಧ ದಾಖಲಾಗಿದ್ದ ದೂರು ರದ್ದುಗೊಂಡ ನಂತರ, ಡ್ರೀಮ್ 11 ರಾಜ್ಯದಲ್ಲಿ ಪುನರಾರಂಭಿಸಿತು.

ಈ ಜೂಜಾಟದ ಆ್ಯಪ್ ಯಶಸ್ವಿಯಾಗಲು ಕಾರಣ ಹೆಚ್ಚು ಹೆಚ್ಚು ಯುವಜನತೆ ಆನ್‌ಲೈನ್ ಗೇಮಿಂಗ್‌ಗಳತ್ತ ಆಕರ್ಷಿತರಾಗುತ್ತಿರುವುದು. ಈ ಕುರಿತು ಪರ ವಿರೋಧ ಚರ್ಚೆಗಳು ಇವೆ. ಆನ್‌ಲೈನ್ ಗೇಮಿಂಗ್ ಎಂಬುದು ಒಂದು ಜೂಜಾಟ, ಇದರಿಂದ ಬಹಳಷ್ಟು ಜನ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ ಎಂದು ಒಂದು ಗುಂಪು ಪ್ರತಿಪಾದಿಸಿದರೆ ಮತ್ತೊಂದು ಗುಂಪು ಇದು ಬುದ್ಧಿಶಕ್ತಿ ಉಪಯೋಗಿಸಿ ಆಡುವ ಆಟ ಎನ್ನುತ್ತಿದ್ದಾರೆ.

ಸರಕಾರ ಹೇಳುವುದೇನು?

ಬಾಜಿ ಉದ್ದೇಶ ಹೊಂದಿರುವ ರಿಯಲ್‌ಮನಿ ಗೇಮ್‌ಗಳನ್ನು (ಆರ್‌ಎಂಜಿ) ನಿಯಂತ್ರಿಸುವುದಷ್ಟೇ ನಮ್ಮ ಉದ್ದೇಶ ಎಂದು ಕೇಂದ್ರ ಸಚಿವರು ಸ್ಪಷ್ಟಪಡಿಸಿದ್ದಾರೆ. ಆಟವೊಂದು ಅದರ ಫಲಿತಾಂಶದ ಆಧಾರದಲ್ಲಿ ಬಹುಮಾನದ ಹಣ ನೀಡುವಂತಿದ್ದರೆ ಅಂತಹ ಗೇಮ್‌ಗೆ ಅವಕಾಶವಿಲ್ಲ ಎಂದು ಈ ಹಿಂದೆ ಇದ್ದಂತಹ ವಿದ್ಯುನ್ಮಾನ ಹಾಗೂ ಮಾಹಿತಿ ತಂತ್ರಜ್ಞಾನ ಇಲಾಖೆಯ ಸಚಿವರಾಗಿದ್ದ ರಾಜೀವ್ ಚಂದ್ರಶೇಖರ್ ಅವರು ಹೇಳಿದ್ದರು. ಈಗಲೂ ಈ ನಿಯಮ ಜಾರಿಯಲ್ಲಿದೆ. ಈ ನಿಯಮಗಳನ್ನು ಭಾರತದ ಗೇಮಿಂಗ್ ಉದ್ಯಮ ಕೂಡ ಸ್ವಾಗತಿಸಿದೆ.

ಎಸ್‌ಆರ್‌ಒ ನಿಯಮಗಳು ಏನು ಹೇಳುತ್ತವೆ?

ಎಸ್‌ಆರ್‌ಒ (ಸ್ವಯಂ ನಿಯಂತ್ರಣ ಸಂಸ್ಥೆ) ಆನ್‌ಲೈನ್ ಗೇಮ್‌ಗಳು ದೇಶದಲ್ಲಿ ಕಾರ್ಯಾಚರಣೆ ನಡೆಸಬೇಕಾದರೆ ಎಸ್‌ಆರ್‌ಒಗಳ ಅನುಮತಿಯನ್ನು ಕಡ್ಡಾಯವಾಗಿ ಪಡೆಯಬೇಕು. ಅನುಮತಿ ಕೋರಿರುವ ಆನ್‌ಲೈನ್ ಗೇಮ್, ಸರಕಾರ ನಿಗದಿಪಡಿಸಿರುವ ಮಾನದಂಡಗಳಿಗೆ ಪೂರಕವಾಗಿದೆಯೇ, ಇಲ್ಲವೇ ಎಂಬುದನ್ನು ಎಸ್‌ಆರ್‌ಒ ನಿರ್ಧರಿಸುತ್ತದೆ. ಯಾವ ಯಾವ ಗೇಮ್‌ಗೆ ಅನುಮತಿ ನೀಡಲಾಗಿದೆ ಎಂಬ ಪಟ್ಟಿಯನ್ನು ಎಸ್‌ಆರ್‌ಒಗಳು ತಮ್ಮ ವೆಬ್‌ಸೈಟ್‌ನಲ್ಲಿ ಪ್ರಕಟಿಸುತ್ತವೆ. ನೀಡಲಾಗಿದ್ದ ಅನುಮತಿಯನ್ನು ಯಾವ ಕಾರಣಕ್ಕೆ ಹಿಂಪಡೆಯಲಾಗಿದೆ ಎಂಬ ಮಾಹಿತಿಯನ್ನೂ ಎಸ್‌ಆರ್‌ಒಗಳು ವೆಬ್‌ಸೈಟ್ ಅಥವಾ ಆ್ಯಪ್‌ನಲ್ಲಿ ಉಲ್ಲೇಖಿಸಬೇಕಿದೆ.

ಇಂತಹ ಪ್ರತೀ ಎಸ್‌ಆರ್‌ಒಗಳಲ್ಲಿ ಗೇಮಿಂಗ್ ಉದ್ಯಮವೂ ಸೇರಿದಂತೆ ವಿವಿಧ ವಲಯಗಳ ತಜ್ಞರು ಇದ್ದಾರೆ. ಗೇಮಿಂಗ್ ಉದ್ಯಮದವರು, ಶಿಕ್ಷಣ ತಜ್ಞರು, ಮನಃಶಾಸ್ತ್ರಜ್ಞರು, ಮಕ್ಕಳ ಹಕ್ಕುಗಳಿಗಾಗಿ ಕೆಲಸ ಮಾಡಿದವರು ಸೇರಿದಂತೆ ಸಮಾಜದ ವಿವಿಧ ವಲಯಗಳ ತಜ್ಞರನ್ನು ಎಸ್‌ಆರ್‌ಒ ಹೊಂದಿರುತ್ತದೆ. ಆನ್‌ಲೈನ್ ಆಟದಲ್ಲಿ ಫಲಿತಾಂಶದ ಮೇಲೆ ಬಾಜಿ ಕಟ್ಟುವುದಕ್ಕೆ ಸಂಬಂಧಿಸಿಲ್ಲ ಎಂಬುದು ಖಚಿತಪಟ್ಟರೆ ಮಾತ್ರ ತಜ್ಞರು ಅದರ ಬಳಕೆಗೆ ಅನುಮತಿಸುತ್ತಾರೆ. ಹಣವನ್ನು ಪಣಕ್ಕಿಟ್ಟು ಆಡುವ ಆನ್‌ಲೈನ್‌ಗೇಮ್‌ಗಳಿಗೆ ಅವಕಾಶವಿಲ್ಲ ಎಂದು ನಿಯಮಗಳು ಹೇಳುತ್ತವೆ. ಆದರೆ ಆಟಗಳಲ್ಲಿ ಕೌಶಲ ಆಧಾರಿತ ಆಟ (ಸ್ಕಿಲ್‌ಬೇಸ್ಡ್) ಮತ್ತು ಅದೃಷ್ಟ ಆಧಾರಿತ ಆಟ (ಚಾನ್ಸ್‌ಬೇಸ್ಡ್) ಎಂಬುದಾಗಿ ವಿಭಾಗಿಸಲಾಗುತ್ತದೆ. ಕೌಶಲ ಆಧಾರಿತ ಆಟಗಳಲ್ಲಿ ಆಟಗಾರರಿಗೆ ಆಟದ ಬಗ್ಗೆ ಜ್ಞಾನ ಮತ್ತು ಅನುಭವ ಇರಬೇಕಾಗುತ್ತದೆ. ಆದರೆ ಅದೃಷ್ಟದ ಆಟಗಳಿಗೆ ಕೌಶಲದ ಅಗತ್ಯವಿಲ್ಲ. ಇವು ಬಹುತೇಕ ಜೂಜು ಆಟವೆಂದು ಪರಿಗಣಿತವಾಗಿವೆ. ಆದರೆ ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ್ದು ಏನೆಂದರೆ ಸರಕಾರ ಯಾವುದು ಕೌಶಲ ಆಟ ಮತ್ತು ಯಾವುದು ಅದೃಷ್ಟದ ಆಟ ಎಂದು ಪ್ರತ್ಯೇಕಿಸಿಲ್ಲ ಎನ್ನುವುದು. ಹೀಗೆ ಇವುಗಳನ್ನು ಪ್ರತ್ಯೇಕಿಸಿದರೆ ಎಲ್ಲಾ ಜೂಜು ಆಟಗಳು ಹೊರ ಬೀಳುತ್ತವೆ. ನಮ್ಮ ದೇಶದಲ್ಲಿಯೂ ಆನ್‌ಲೈನ್ ಬೆಟ್ಟಿಂಗ್ ಗೇಮ್‌ಗಳಿಗೆ ಪ್ರತ್ಯೇಕ ಘಟಕವಿದೆ, ಜೂಜಾಟ ತಡೆಯಲು ತಂಡಗಳನ್ನು ರಚಿಸಲಾಗಿದೆ ಎಂದು ಹೇಳಿಕೊಳ್ಳಲು ಮಾತ್ರ ಈ ಎಸ್‌ಆರ್‌ಒ ಸಂಸ್ಥೆಯನ್ನು ರೂಪಿಸಿದಂತೆ ಕಾಣುತ್ತಿದೆ. ಸರಕಾರ ನಾಮ ಮಾತ್ರಕ್ಕೆ ನಿಯಮಗಳನ್ನು ರೂಪಿಸಿ ತಪ್ಪಿಸಿಕೊಂಡಿದೆ. ಜೊತೆಗೆ ಆನ್‌ಲೈನ್ ಜೂಜಾಟಗಳಿಗೆ ಜೀವ ತುಂಬುವಂತೆ ಕೋರ್ಟ್ ತೀರ್ಪುಗಳನ್ನು ನೀಡಿವೆ. ಹೀಗಾಗಿ ಈ ಐಪಿಎಲ್ ಆಟ ಆಟವಾಗಿ ಉಳಿಯದೆ ಬೆಟ್ಟಿಂಗ್ ದಂಧೆಯಾಗಿರುವ ಎಲ್ಲಾ ಲಕ್ಷಣಗಳೂ ಕಣ್ಣಮುಂದಿವೆ. ಪ್ರಸಕ್ತ ಆನ್‌ಲೈನ್‌ಬೆಟ್ಟಿಂಗ್‌ನಲ್ಲಿ ಮುಳುಗಿರುವ ಯುವಜನರನ್ನು ಮೇಲೆತ್ತಬೇಕಾದ ಕೇಂದ್ರ ಸರಕಾರವೇ ಹಳ್ಳ ತೋಡುತ್ತಿದೆ. ಇದಕ್ಕೆ ರಮ್ಮಿ ಸರ್ಕಲ್ ಆಡಿ ಎಂದು ಹೇಳುವ ಸಿನೆಮಾ ನಟ ನಟಿಯರು ಕೂಡಾ ಹೊರತಾಗಿಲ್ಲ. ಆದರೆ ದೇಶದ ಯುವಜನತೆ ಆನ್‌ಲೈನ್ ಬೆಟ್ಟಿಂಗ್‌ನಿಂದ ಹೊರ ಬಂದು ರಚನಾತ್ಮಕವಾಗಿ ತೊಡಗಿಕೊಳ್ಳಬೇಕಾದರೆ ಇಂತಹ ಆ್ಯಪ್‌ಗಳಿಗೆ ಕಠಿಣ ಕಾನೂನು ಕ್ರಮಗಳನ್ನು ಜಾರಿಮಾಡಬೇಕಿದೆ. ಇಲ್ಲವೆಂದಾದರೆ ಆರ್ಥಿಕವಾಗಿ ಮತ್ತು ಮಾನಸಿಕವಾಗಿ ಯುವಜನರು ಖಿನ್ನತೆಗೆ ಒಳಗಾಗಿ ನರಳುವ ಪರಿಣಾಮವನ್ನು ಈ ದೇಶ ಎದುರಿಸ ಬೇಕಾಗುತ್ತದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಸಂಜೀವ್ ಜಗ್ಲಿ, ಮಾನ್ವಿ

contributor

Similar News