ಬಿಲಿಯನೇರ್‌ಗಳ ಬಗೆಗಿನ ಜಗಳಕ್ಕೆ ಬಡ ಭಾರತೀಯನ ಹಣ ಪೋಲು!

Update: 2024-12-14 04:24 GMT

ಇದಕ್ಕಿಂತ ದುರಂತ ಇನ್ನೊಂದಿಲ್ಲ. ಇಬ್ಬರು ಬಿಲಿಯನೇರ್‌ಗಳಾದ ಗೌತಮ್ ಅದಾನಿ ಮತ್ತು ಜಾರ್ಜ್ ಸೊರೊಸ್ ಬಗ್ಗೆ ಪ್ರಸಕ್ತ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಚರ್ಚೆ ಮಾಡಲು ಬಡ ಭಾರತೀಯ ತೆರಿಗೆದಾರರ ಹಣ ಪ್ರತೀ ನಿಮಿಷಕ್ಕೆ 2.5 ಲಕ್ಷ ರೂಪಾಯಿಗಳಂತೆ ವ್ಯಯವಾಗುತ್ತಿದೆ.

ಸೋಲಾರ್ ಎನರ್ಜಿ ಒಪ್ಪಂದಗಳನ್ನು ಪಡೆಯಲು ಭಾರತೀಯ ಸರಕಾರಿ ಅಧಿಕಾರಿಗಳಿಗೆ 250 ಮಿಲಿಯನ್ ಡಾಲರ್‌ಗಿಂತಲೂ ಹೆಚ್ಚು ಲಂಚದ ಆಮಿಷ ಒಡ್ಡಿದ್ದಾರೆ ಎಂದು ಅಮೆರಿಕದ ಡಿಪಾರ್ಟ್ ಮೆಂಟ್ ಆಫ್ ಜಸ್ಟಿಸ್ (Doj) ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಮತ್ತು ಇನ್ನೂ ಏಳು ಜನರ ಮೇಲೆ ಕ್ರಿಮಿನಲ್ ದೋಷಾರೋಪ ಬಿಡುಗಡೆ ಮಾಡಿದೆ. ಈ ಹಿನ್ನೆಲೆಯಲ್ಲಿ ಗೌತಮ್ ಅದಾನಿ ದೇಶದಲ್ಲಿ ಮಾಡಿಕೊಂಡಿರುವ ವ್ಯಾಪಾರ ಒಪ್ಪಂದಗಳ ಬಗ್ಗೆ ತನಿಖೆಯಾಗಬೇಕು. ಅದಕ್ಕೂ ಮೊದಲು ಅವರನ್ನು ಬಂಧಿಸಬೇಕು ಎಂದು ಕಾಂಗ್ರೆಸ್ ಒತ್ತಾಯ ಮಾಡುತ್ತಿದೆ. ಅದರಲ್ಲೂ ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಹೆಚ್ಚು ಒತ್ತಡ ಹೇರುತ್ತಿದ್ದಾರೆ.

ಇದೇ ವಿಷಯವನ್ನು ಸಂಸತ್ತಿನ ಉಭಯ ಸದನಗಳಲ್ಲಿ ಚರ್ಚೆ ಮಾಡಲು ಅವಕಾಶ ಮಾಡಿಕೊಡಿ ಎಂದು ಕಾಂಗ್ರೆಸ್ ನೇತೃತ್ವದ ‘ಇಂಡಿಯಾ’ ಮೈತ್ರಿಕೂಟ ಅಧಿವೇಶನದ ಆರಂಭದ ದಿನದಿಂದಲೂ ಕೇಳುತ್ತಿದೆ. ಕೇಂದ್ರ ಸರಕಾರ ವಿಪಕ್ಷಗಳ ಮನವಿಗೆ ಸ್ಪಂದಿಸಿಲ್ಲ. ಸರಕಾರ ತಮ್ಮ ಮನವಿಯನ್ನು ಪರಿಗಣಿಸದಿರುವುದರಿಂದ ಪ್ರತಿಪಕ್ಷಗಳು ಸದನದ ಒಳ-ಹೊರಗೆ ಪ್ರತಿಭಟನೆ ನಡೆಸುತ್ತಿವೆ. ಪ್ರತಿದಿನವೂ ‘ಮೋದಿ-ಅದಾನಿ ಏಕ್ ಹೈ, ಅದಾನಿ ಸೇಫ್ ಹೈ’ ಎಂಬ ಘೋಷಣೆ ಕೂಗುತ್ತಿವೆ. ಇದರಿಂದ ಕೆರಳಿದ ಕೇಂದ್ರ ಸರಕಾರ/ಬಿಜೆಪಿ ಮೊದಲಿಗೆ ‘ರಾಹುಲ್ ಗಾಂಧಿ ದೇಶವಿರೋಧಿ’ ಎಂದು ಹೇಳಿದವು. ಈ ‘ಪ್ರಪೋಗಂಡ’ ಟೇಕ್ ಆಫ್ ಆಗದಿದ್ದಾಗ ‘ಕಾಶ್ಮೀರ ಭಾರತದ ಭಾಗ ಅಲ್ಲ ಎಂದಿದ್ದ ವಿದೇಶಿ ಉದ್ಯಮಿ ಜಾರ್ಜ್ ಸೊರೊಸ್ ಜೊತೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಸಂಪರ್ಕದಲ್ಲಿದ್ದರು’ ಎಂಬ ಹೊಸ ವರಾತ ತೆಗೆದಿವೆ.

ಕಾಂಗ್ರೆಸ್ ಗೌತಮ್ ಅದಾನಿ ಬಗ್ಗೆ ಚರ್ಚೆಯಾಗಬೇಕು ಎಂದು ಕೇಳಿದಾಗೆಲ್ಲಾ ಬಿಜೆಪಿ ಪ್ರಸ್ತುತವಲ್ಲದ ಜಾರ್ಜ್ ಸೊರೊಸ್ ವಿಷಯ ಪ್ರಸ್ತಾವ ಮಾಡುತ್ತಿದೆ. ಸದನದಲ್ಲಿ ಕದನ ಶುರುವಾಗುತ್ತಿದೆ. ಈ ಇಬ್ಬರು ಬಿಲಿಯನೇರ್‌ಗಳ ಕುರಿತಾದ ಜಗಳದಿಂದ ಅಗತ್ಯವಾಗಿ ಚರ್ಚೆಯಾಗಬೇಕಿರುವ ವಿಷಯಗಳು ಬಗಲಿಗೆ ಸರಿಯುತ್ತಿವೆ. ಇನ್ನು ಒಂದು ವಾರ ಮಾತ್ರ ಉಳಿದಿರುವ ಅಧಿವೇಶನದಲ್ಲಿ ದೇಶವಾಸಿಗಳ ಜೀವನದ ಮೇಲೆ ನೇರವಾಗಿ ಪರಿಣಾಮ ಬೀರುತ್ತಿರುವ ಬೆಲೆ ಏರಿಕೆ, ಹಣದುಬ್ಬರ, ನಿರುದ್ಯೋಗ ಮತ್ತಿತರ ವಿಷಯಗಳು ಮರೆಯಾಗುತ್ತಿವೆ.

ಸದನವನ್ನು ಸುಗಮವಾಗಿ ಮತ್ತು ಸಮರ್ಥವಾಗಿ ನಡೆಸುವುದು ಸರಕಾರದ ಅಂದರೆ ಆಡಳಿತಾರೂಢ ಪಕ್ಷದ ಕರ್ತವ್ಯ. ವಿಪಕ್ಷಗಳು ಯಾವುದೇ ವಿಷಯದ ಮೇಲೆ ಚರ್ಚೆಗೆ ಅವಕಾಶವನ್ನು ಕೇಳಿದಾಗ ಆಡಳಿತಾರೂಢ ಪಕ್ಷ ವಿಪಕ್ಷವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಚರ್ಚೆಯ ಅಗತ್ಯ ಇದೆಯೋ ಇಲ್ಲವೋ ಅಥವಾ ಬೇರಾವ ರೂಪದಲ್ಲಿ ಚರ್ಚಿಸಲು ಸಾಧ್ಯ ಎಂಬುದನ್ನು ಮನವರಿಕೆ ಮಾಡಿಕೊಡಬೇಕು. ಆದರೆ ಸದ್ಯದ ಕೇಂದ್ರ ಸರಕಾರ ಮತ್ತು ಅದನ್ನು ಮುನ್ನಡೆಸುತ್ತಿರುವ ಬಿಜೆಪಿಯ ನಿಲುವು ಸರ್ವಾಧಿಕಾರಿ ಧೋರಣೆಯನ್ನು ನೆನಪಿಸುವಂತಿದೆ. ಪ್ರತಿಭಟನೆ ಮಾಡುವ ಪ್ರತಿಪಕ್ಷಗಳ ಮೇಲೆ ‘ಸದನ ನಡೆಯಲು ಬಿಡುತ್ತಿಲ್ಲ’ ಎನ್ನುವ ದೂರು ಹೊರಿಸಿ ತಾನು ‘ನಿಜವಾಗಿಯೂ’ ಚರ್ಚೆಯಾಗಬೇಕಿರುವ ವಿಷಯಗಳಿಂದಲೂ ಬಚಾವ್ ಆಗುತ್ತಿದೆ.

ಆರಂಭದಲ್ಲಿ ಹೇಳಿದಂತೆ ಒಂದು ನಿಮಿಷ ಸಂಸತ್ ಕಲಾಪ ನಡೆಯಲು ಸುಮಾರು 2.5 ಲಕ್ಷ ರೂಪಾಯಿ ಖರ್ಚಾಗುತ್ತದೆ ಎಂದು ಹೇಳಿರುವುದು 2012ರಲ್ಲಿ ಆಗಿನ ಸಂಸದೀಯ ವ್ಯವಹಾರಗಳ ಸಚಿವ ಪವನ್ ಬನ್ಸಾಲ್. ಅವರು ಸಂಸತ್ತಿಗೆ ಉತ್ತರ ನೀಡುವ ಸಂದರ್ಭದಲ್ಲಿ ಈ ಮಾಹಿತಿ ನೀಡಿದ್ದರು. 2021ರ ವೇಳೆಗೆ ಒಂದು ಸಂಸತ್ತಿನ ಅಧಿವೇಶನ ನಡೆಸಲು ಅಂದಾಜು 133 ಕೋಟಿ ರೂಪಾಯಿ ವೆಚ್ಚವಾಗುತ್ತಿದೆ ಎಂದು ವರದಿಯೊಂದು ತಿಳಿಸಿದೆ. ಆದರೆ ಸಂಸತ್ತಿನ ವರದಿ ಪ್ರಕಾರ ಒಂದು ನಿಮಿಷದ ಅಧಿವೇಶನ ನಡೆಸಲು ಆಗುವ ಖರ್ಚು 2.5 ಲಕ್ಷ ರೂಪಾಯಿ.

ಇಲ್ಲಿ ಕೇವಲ ಹಣ ಖರ್ಚಾಗುತ್ತಿದೆ ಅಥವಾ ಅದು ವ್ಯಯವಾಗುತ್ತಿದೆ ಎನ್ನುವುದೇ ಮುಖ್ಯವಾದ ವಿಷಯವಲ್ಲ, ವಿಪಕ್ಷಗಳ ಪ್ರತಿಭಟನೆ ಮತ್ತು ಆಡಳಿತಪಕ್ಷದ ಹೊಣೆಗೇಡಿತನದಿಂದ ಕೆಲವು ವಿಧೇಯಕಗಳು ಚರ್ಚೆಯನ್ನೇ ಕಾಣದೇ ಅಂಗೀಕಾರವಾಗುತ್ತಿವೆ. ಪರಿಣಾಮವಾಗಿ ಕೆಟ್ಟ ಕಾನೂನುಗಳು ಜಾರಿಗೆ ಬರುವಂತಾಗುತ್ತಿವೆ.

ಸಮಾಜವಾದಿ ಪಕ್ಷ, ತೃಣಮೂಲ ಕಾಂಗ್ರೆಸ್ ಮತ್ತು ಎಡಪಕ್ಷಗಳು ನಮಗೆ ಅದಾನಿ ಅಥವಾ ಸೊರೊಸ್ ಸಮಸ್ಯೆಗಳು ಬೇಡ, ಸದನ ನಡೆಯಬೇಕು ಎಂದು ಹೇಳುತ್ತಿವೆ. ಅದೂ ಅಲ್ಲದೆ ಪ್ರಮುಖ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಸದನದಲ್ಲಿ ಮಾತನಾಡಲು ಸಂಖ್ಯಾಬಲದ ದೃಷ್ಟಿಯಿಂದ ಹೆಚ್ಚಿನ ಸಮಯಾವಕಾಶ ಪಡೆಯುತ್ತಿವೆ. ನಮಗೆ ಅವಕಾಶ ಸಿಗುತ್ತಿಲ್ಲ ಎನ್ನುವ ಅಸಮಾಧಾನವನ್ನೂ ವ್ಯಕ್ತಪಡಿಸಿವೆ. ಈ ಮಾತನ್ನು ಕೇಳಿಸಿಕೊಳ್ಳಬೇಕಾದದ್ದು ಕೂಡ ಆಡಳಿತಾರೂಢ ಪಕ್ಷದ ಕೆಲಸ. ಆದರೆ ಅದು ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ಮಾತನ್ನೇ ಕೇಳುತ್ತಿಲ್ಲ. ಇನ್ನು ಸಣ್ಣ ಪಕ್ಷಗಳ ಮಾತಿನ ಕಡೆಗೆ ಗಮನ ಹರಿಸುವುದೇ?

ಇದೇ ಡಿಸೆಂಬರ್ 13 ಮತ್ತು 14ರಂದು ಸಂಸತ್ತಿನಲ್ಲಿ ಸಂವಿಧಾನದ ಮೇಲಿನ ಚರ್ಚೆ ನಡೆಯುತ್ತಿದೆ. ಈ ಚರ್ಚೆಯಲ್ಲಿ ಎಲ್ಲರಿಗಿಂತ ಹೆಚ್ಚು ಕುತೂಹಲ ಹುಟ್ಟಿಸಿರುವುದು ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ. ರಾಹುಲ್ ಗಾಂಧಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಸಂವಿಧಾನದ ಕೆಂಪು ಬಣ್ಣದ ಸಣ್ಣ ಕೈಪಿಡಿ ಹಿಡಿದು ಇಡೀ ದೇಶಾದ್ಯಂತ ಭಾಷಣ ಮಾಡಿದ್ದರು. ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಸರಕಾರ, ಬಿಜೆಪಿ, ಆರೆಸ್ಸೆಸ್, ಅದರ ಅಂಗಸಂಸ್ಥೆಗಳು ಸಂವಿಧಾನಕ್ಕೆ ಅಪಚಾರ ಎಸಗುತ್ತಿವೆ ಎಂದು ಬಿಡಿಸಿಬಿಡಿಸಿ ಹೇಳಿದ್ದರು. ‘ಸಂವಿಧಾನ ಉಳಿಸಿ’ ಎಂದು ಕೇಳಿಕೊಂಡಿದ್ದರು. ಇದಕ್ಕೆ ಪುಷ್ಟಿ ನೀಡುವಂತೆ ಬಿಜೆಪಿ ನಾಯಕರು ‘ನಮ್ಮ ಪಕ್ಷ 400ಕ್ಕೂ ಹೆಚ್ಚು ಸೀಟು ಗೆದ್ದರೆ ಸಂವಿಧಾನ ಬದಲಿಸುತ್ತೇವೆ’ ಎಂದು ಹೇಳಿದ್ದರು. ಬಿಜೆಪಿ-ಆರೆಸ್ಸೆಸ್ ಯಾವಾಗಲೂ ಹಾಗೆ; ಮುಂಚೂಣಿ ನಾಯಕರು ‘ಇಂತಹ’ ವಿಷಯಗಳ ಬಗ್ಗೆ ಮಾತನಾಡದೆ ಎರಡನೇ ಅಥವಾ ಮೂರನೇ ಹಂತದ ಬಾಯಿಂದ ಬರುವಂತೆ ಮಾಡುತ್ತಾರೆ. ಅದೇನೇ ಇರಲಿ, ಸಂವಿಧಾನದ ಮೇಲಿನ ಚರ್ಚೆಯಾದರೂ ನಡೆಯಲಿದೆಯೇ ಎನ್ನುವ ಅನುಮಾನ ಕಾಡುತ್ತಿದೆ.

ಸಂವಿಧಾನದ ಮೇಲೆ ಚರ್ಚೆಯಾಗಲಿ ಎಂದು ಕಾಯುತ್ತಿರುವ ಕಾಂಗ್ರೆಸ್ ಬಳಿಕ ಇನ್ನಷ್ಟು ಬಿಗಿಪಟ್ಟು ಹಿಡಿಯಬಹುದು. ಕೇಂದ್ರ ಸರಕಾರ ಕೂಡ ಹಲವಾರು ಸಮಸ್ಯೆಗಳಿಂದ ಪಾರಾಗಲು ಪ್ರತಿಪಕ್ಷಗಳ ಪ್ರತಿಭಟನೆಯನ್ನೇ ನೆಪ ಮಾಡಿಕೊಳ್ಳಬಹುದು. ಮೊದಲ ಲೋಕಸಭೆಯಲ್ಲಿ (1952-1957)ವಾರ್ಷಿಕ ಸರಾಸರಿ 135 ದಿನಗಳು ಕಲಾಪ ನಡೆಯುತ್ತಿತ್ತು. 17ನೇ ಲೋಕಸಭೆಯಲ್ಲಿ (2019-2024) ವರ್ಷಕ್ಕೆ ಸರಾಸರಿ 55 ದಿನಗಳು ಮಾತ್ರ ಅಧಿವೇಶನ ನಡೆದಿತ್ತು. ಈಗ 18ನೇ ಅಧಿವೇಶನದಲ್ಲಿ ‘ಮತದಾರರಿಗೆ ಉತ್ತರದಾಯಿಗಳು ಎನ್ನುವ ಪ್ರಜ್ಞೆ ಕಳೆದುಕೊಂಡಿರುವ ಜನಪ್ರತಿನಿಧಿಗಳಿಂದ’ ಇದಕ್ಕಿಂತ ಹೆಚ್ಚಿನದನ್ನು ನಿರೀಕ್ಷೆ ಮಾಡಲು ಸಾಧ್ಯವೇ?

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಧರಣೀಶ್ ಬೂಕನಕೆರೆ

contributor

Similar News

ಪತನದ ಕಳವಳ