ಸಂವಿಧಾನದ ಏಕರೂಪ ಸಂದಿಗ್ಧ
ಸ್ಥಿರತೆಯನ್ನು ಕದಡುವುದು ಸುಲಭ. ಅದು ಮಾಡಬಲ್ಲ ಗೊಂದಲಗಳನ್ನು, ಪ್ರಮಾದಗಳನ್ನು ಊಹಿಸುವುದು ಕಷ್ಟ; ಸರಿಪಡಿಸುವುದು ಮತ್ತೂ ಕಷ್ಟ. ಏಕರೂಪದ ಸಾಹಸವು ವಿರೂಪಕ್ಕೆಡೆ ಮಾಡಿಕೊಡದಿದ್ದರಾಯಿತು. ಗುರಿ ಒಳ್ಳೆಯದಿದೆಯೆಂದು ಸರ್ವೋಚ್ಚ ನ್ಯಾಯಾಯಲಯ ಹೇಳಿದೆಯೇ ಹೊರತು ಅದರ ಹಾದಿಯ ಕುರಿತು ಅದು ಏನೂ ಹೇಳದಿರುವುದು ಗಮನಾರ್ಹ.
ಈಚೆಗೆ ಮಧ್ಯಪ್ರದೇಶದ ಚುನಾವಣಾ ರ್ಯಾಲಿಯಲ್ಲಿ ಪ್ರಧಾನಿ ಮೋದಿ ತನ್ನ ವಿರೋಧಿಗಳತ್ತ ‘ಏಕರೂಪ ನಾಗರಿಕ ಸಂಹಿತೆ’ಯ ಅಸ್ತ್ರವನ್ನೆಸೆದರು. ಇದನ್ನು ‘ಸಮಾನ ನಾಗರಿಕ ಸಂಹಿತೆ’ ಅಥವಾ ‘ಯುಸಿಸಿ’ ಎಂದೂ ಹೇಳಲಾಗುತ್ತಿದೆ. ಮೇಲ್ನೋಟಕ್ಕೆ ಮತೀಯ ಮತ್ತು ಕೇಂದ್ರೀಕೃತ ಅಧಿಕಾರ ರಾಜಕಾರಣದಂತೆ ಕಂಡರೂ, ಏಕರೂಪ ನಾಗರಿಕ ಸಂಹಿತೆಯ ಅಗತ್ಯವನ್ನು ಸಾರುವುದರ ಮೂಲಕ ಉಗುಳುವುದಕ್ಕೂ ಆಗದ, ನುಂಗುವುದಕ್ಕೂ ಆಗದ ಒಂದು ಸಮಸ್ಯೆಯನ್ನು ಪ್ರಧಾನಿ ಮೋದಿ ದೇಶದೆದುರು ತಂದೊಡ್ಡಿದರು. ಇದು ಎಷ್ಟು ಗಂಭೀರವಾಯಿತೆಂದರೆ ಈಗ ಅದು ರಾಷ್ಟ್ರೀಯ ಚರ್ಚೆಯಾಗುತ್ತಲಿದೆ. ಇದರ ಹಲವು ಮುಖಗಳನ್ನು ಅಧ್ಯಯನ ಮಾಡದ ಹೊರತು ಏನು ಹೇಳಿದರೂ ಅದು ಒಣ ಹರಟೆಯಾದೀತೇ ಹೊರತು ಉತ್ತರವಾಗಲಾರದು.
ಮೋದಿಯನ್ನು, ಅವರ ಮತೀಯ ರಾಜಕಾರಣವನ್ನು ವಿರೋಧಿಸುವವರ ಮುಖ್ಯ ಆಶ್ರಯಸ್ಥಾನವೆಂದರೆ ಭಾರತದ ಸಂವಿಧಾನ. ಸಂವಿಧಾನ, ಅಂಬೇಡ್ಕರ್, ಜಾತ್ಯತೀತತೆ ಇವೇ ಮುಂತಾದ ಪ್ರಸ್ಥಾನಗಳಲ್ಲಿ ಜಾಗೃತ ಮತದಾರರ ಒಲವು ನೆಲೆಗೊಂಡಿದೆ. ಸಂಘ ಪ್ರಣೀತ ಹಿಂದೂರಾಷ್ಟ್ರ ಸ್ಥಾಪನೆಯ ಮೂಲಕ ಜಾತ್ಯತೀತ ಸಂವಿಧಾನವನ್ನು, ಭಾರತದ ಬಹುಮುಖೀ ಸಂಸ್ಕೃತಿಯನ್ನು, ತಲೆಕೆಳಗು ಮಾಡುತ್ತಾರೆಂಬುದೇ ಮೋದಿ ಹಾಗೂ ಅವರ ಬಳಗದ ಕುರಿತು ಇರುವ ಮುಖ್ಯ ಆರೋಪ. ಆದರೆ ಏಕ ರೂಪ ನಾಗರಿಕ ಸಂಹಿತೆಯು ಸಂವಿಧಾನದ ಆಶಯಗಳ ಒಂದು ಭಾಗ. ಇಂತಹ ಸಂದರ್ಭದಲ್ಲಿ ಸಂವಿಧಾನದ ಒಂದಂಶವನ್ನೇ ಮೋದಿ ಕಾನೂನಿನ ಮೂಲಕ ಜಾರಿಗೊಳಿಸಲು ಪ್ರಯತ್ನಿಸುತ್ತಿದ್ದರೆ ಅದನ್ನು ವಿರೋಧಿಸುವ ಅಗತ್ಯ ಮತ್ತು ಉದ್ದೇಶವಾದರೂ ಏನು?
ಸಂವಿಧಾನದ ಬಹುಮುಖ್ಯ ಆಸ್ತಿಯೆಂದರೆ ಮೂಲಭೂತ ಹಕ್ಕುಗಳು. ಇವುಗಳ ರಚನೆಯನ್ನು ವಿಚಲಿತಗೊಳಿಸುವಂತಿಲ್ಲವೆಂದು ಕೇಶವಾನಂದ ಭಾರತಿ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು ಹೇಳಿ ಆಗಲೇ ಐದು ದಶಕಗಳು ಕಳೆದಿವೆ. ಇದಕ್ಕೆ ಅಪಸ್ವರವು ಆಗಾಗ ಬದ್ಧಮತಾಂಧರಿಂದ ಬರುತ್ತಿದೆಯಾದರೂ ಅದನ್ನು ಲೆಕ್ಕಿಸುವ ಸ್ಥಿತಿಯಲ್ಲಿ ದೇಶವಿಲ್ಲ. ಅದೀಗ ಸಂವಿಧಾನದ ಸಂರಚನೆಯನ್ನು ಶಕ್ತಗೊಳಿಸುತ್ತ ಮುನ್ನಡೆದಿದೆ.
ನಾವೆಲ್ಲರೂ ಸಂವಿಧಾನ ನಿರ್ಮಾಪಕರ ಅಭಿಮಾನಿಗಳು. ಇಷ್ಟೊಂದು ವೈವಿಧ್ಯಮಯ ಭಿನ್ನ ಜಾತಿ-ಮತ-ಸಂಸ್ಕೃತಿಯ, ಸಾಮಾಜಿಕ ಚಲನೆಯ, ಭಾರೀ ಜನಸಂಖ್ಯೆಯ, ದೇಶಕ್ಕೆ ಸಂವಿಧಾನವೊಂದನ್ನು ಕಟ್ಟಿಕೊಡುವುದು ಸುಲಭದ ಕೆಲಸವಾಗಿರಲಿಲ್ಲ. ಅದನ್ನು ಆಗಗೊಳಿಸಿದ್ದೇ ಒಂದು ಮಹತ್ಸಾಧನೆ. ಅದನ್ನು ಉಳಿಸಿಕೊಳ್ಳುವುದು ನಮ್ಮ ಮುಂದಿರುವ ಸವಾಲು.
ಸಂವಿಧಾನ ನಿರ್ಮಾಪಕರು ಕೆಲವೊಂದು ವಿಚಾರಗಳನ್ನು ಮೂಲಭೂತ ಹಕ್ಕುಗಳಾಗಿಸದೆ, ಆದರೆ ಕಾನೂನಿನ ಮೂಲಕ ಅನುಷ್ಠಾನಗೊಳಿಸಬೇಕಾದ ಮೌಲ್ಯಗಳಾಗಿ ರೂಪಿಸಿದರು. ಇವನ್ನು ‘ರಾಜ್ಯಾಂಗ ನೀತಿಯ ನಿರ್ದೇಶಕ ತತ್ವಗಳು’ (ಅಥವಾ ‘ಮಾರ್ಗದರ್ಶಿ ಸೂತ್ರ’ಗಳೆಂದು) ಕರೆದು ಸಂವಿಧಾನದ 4ನೇ ಭಾಗದಲ್ಲಿ 36ನೇ ಅನುಚ್ಛೇದದಿಂದ 51ನೇ ಅನುಚ್ಛೇದದ ವರೆಗೆ ನಿರೂಪಿಸಿದರು. ಇವನ್ನು ಅನುಷ್ಠಾನಗೊಳಿಸುವುದು ಆಡಳಿತದ ಅಧಿಕಾರ ವ್ಯಾಪ್ತಿಯಲ್ಲಿ ಇರುವ, ಬರುವ ಹಕ್ಕು ಮಾತ್ರವಲ್ಲ, ಕರ್ತವ್ಯವೂ ಆಗಿದೆ. ಇವು ರಾಷ್ಟ್ರದ ಮಾನವೀಯ ಮತ್ತು ಸಾಮಾಜಿಕ ಮುಖಗಳನ್ನು ಪ್ರತಿಬಿಂಬಿಸುತ್ತವೆ. ಕೇಶವಾನಂದ ಭಾರತೀ ಪ್ರಕರಣದಲ್ಲಿ ಹೇಳಿದಂತೆ ನಮ್ಮ ಸಂವಿಧಾನವು ಮೂಲ ಭೂತ ಹಕ್ಕುಗಳು ಎಂಬ ವಿಚಾರಕ್ಕೆ ಹೆಮ್ಮೆಯ ಸ್ಥಾನವನ್ನೂ ಮತ್ತು ರಾಜ್ಯಾಂಗ ನೀತಿಯ ನಿರ್ದೇಶಕ ತತ್ವಗಳು ಎಂಬ ವಿಚಾರಕ್ಕೆ ಶಾಶ್ವತದ ಸ್ಥಾನವನ್ನೂ ನೀಡಿ ಈ ಎರಡೂ ಮುಖಗಳನ್ನು ಒಟ್ಟಿಗೆ ತರುವ ಕೆಲಸವನ್ನು ಮಾಡುತ್ತದೆ. ಇವೆರಡೂ ಸೇರಿದರೆ ಮಾತ್ರ ಸಂವಿಧಾನದ ಆತ್ಮವು ಪ್ರಕಟವಾಗುತ್ತದೆ.
ಇವೆಲ್ಲವನ್ನೂ ಚರ್ಚಿಸುವುದಕ್ಕೆ ಇಲ್ಲಿ ವ್ಯವಧಾನವಿಲ್ಲ. 37ನೇ ಅನುಚ್ಛೇದದಲ್ಲಿ ಹೇಳಿದಂತೆ ಇವನ್ನು ಯಾವುದೇ ನ್ಯಾಯಾಲಯದಲ್ಲಿ ಒತ್ತಾಯಿಸಿ ಪಡೆಯುವಂತಿಲ್ಲ; ಆದರೆ ದೇಶದ ಆಡಳಿತದಲ್ಲಿ ಇವು ಮೂಲಭೂತ ಆಶಯವನ್ನು ಪ್ರಕಟಿಸುವುದರಿಂದ ಕಾನೂನು ರಚನೆಯಲ್ಲಿ ಈ ತತ್ವಗಳನ್ನು ಅನ್ವಯಿಸುವುದು ರಾಷ್ಟ್ರದ ಕರ್ತವ್ಯವಾಗಬೇಕಾಗಿದೆ. ಮುಂದೆ 38ನೇ ಅನುಚ್ಛೇದದಿಂದ ಸಾಮಾಜಿಕ ವ್ಯವಸ್ಥೆ/ಶಿಸ್ತು, ಅಸಮಾನತೆಯ ನಿರ್ಮೂಲನೆ, ಅವಶ್ಯಕ ಗುಣಮಟ್ಟದ ಗೌರವಪೂರ್ವಕ ಜೀವನವನ್ನು ಪೂರೈಸುವುದು, ಸಮಾನ ಪ್ರತಿಫಲ, ಆರೋಗ್ಯ, ಸಮಾನ ಮತ್ತು ಉಚಿತ ನ್ಯಾಯ, ಗ್ರಾಮ ಪಂಚಾಯತುಗಳ ಮೂಲಕ ಸ್ಥಳೀಯ ಆಡಳಿತ, ಉದ್ಯೋಗ ಮತ್ತು ಶಿಕ್ಷಣದ ಭರವಸೆ, ಯೋಗ್ಯ ಹೆರಿಗೆ ಸೌಕರ್ಯ, ಯಥೋಚಿತ ಮತ್ತು ಗೌರವಪೂರ್ವಕವಾದ ಸಮಾನ ವೇತನ, ಕೈಗಾರಿಕೆಗಳಲ್ಲಿ ಕಾರ್ಮಿಕರಿಗೆ ಮಾಲಕರೊಂದಿಗೆ ಸಹಭಾಗಿತ್ವ, ಸಹಕಾರಿಸಂಘಗಳ ಸ್ಥಾಪನೆ ಮತ್ತು ಪ್ರೋತ್ಸಾಹ, ಏಕರೂಪ ನಾಗರಿಕ ಸಂಹಿತೆ, ಮಕ್ಕಳಿಗೆ ಶಿಕ್ಷಣ, ಹಿಂದುಳಿದ ಎಲ್ಲ ಜಾತಿ, ವರ್ಗ ಮತ್ತು ಸಮುದಾಯಗಳ ಹಿತರಕ್ಷಣೆ, ಪಾನ ನಿಷೇಧವೂ ಸೇರಿದಂತೆ ಆರೋಗ್ಯಪಾಲನೆ, ಕೃಷಿ ಮತ್ತು ಹೈನುಗಾರಿಕೆಯ ಬೆಳವಣಿಗೆ, ಗೋಹತ್ಯೆ ನಿಷೇಧ, ಶುದ್ಧ ಪರಿಸರ ನಿರ್ಮಾಣ, ಅರಣ್ಯ ಮತ್ತು ವನ್ಯಜೀವನದ ರಕ್ಷಣೆ, ಸ್ಮಾರಕಗಳ ಹಾಗೂ ರಾಷ್ಟ್ರೀಯ ಪ್ರಾಮುಖ್ಯ ಸ್ಥಳಗಳ ಹಾಗೂ ವಸ್ತುಗಳ ರಕ್ಷಣೆ, ಕಾರ್ಯಾಂಗದಿಂದ ಪ್ರತ್ಯೇಕವಾದ ಸ್ವತಂತ್ರವಾದ ನ್ಯಾಯಾಂಗ, ಅಂತರ್‌ರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯ ಸ್ಥಾಪನೆ ಹೀಗೆ ಹತ್ತಾರು ವಿಚಾರಗಳನ್ನು ಸೂಚಿಸಲಾಗಿದೆ. ಇವುಗಳಲ್ಲಿ ಒಂದೊಂದೂ ಸಮಗ್ರ ಚರ್ಚೆಯನ್ನು ಬಯಸುವಂತಹವು. ಈ ಪೈಕಿ ಕೆಲವಾರು ವಿಚಾರಗಳು-ಆರೋಗ್ಯ, ಗ್ರಾಮಪಂಚಾಯತ್, ಶಿಶುಶಿಕ್ಷಣ, ಅರಣ್ಯ, ಸಹಕಾರ ಸಂಘಗಳು ಇವೆಲ್ಲ ವಿವಿಧ ರೀತಿಯಲ್ಲಿ ವಿವಿಧ ಕಾನೂನುಗಳ ರೂಪದಲ್ಲಿ ಅನುಷ್ಠಾನಗೊಳ್ಳುತ್ತಿವೆ. ಇನ್ನು ಕೆಲವು ವಿಚಾರಗಳು ಭ್ರೂಣಾವಸ್ಥೆಯಲ್ಲೇ ಇವೆ. ಉದಾಹರಣೆಗೆ ಅರೆನ್ಯಾಯಿಕ ಅಧಿಕಾರವು ಈಗಲೂ ಕಾರ್ಯಾಂಗದಲ್ಲೇ ನಿಹಿತವಾಗಿದೆ. ಅವನ್ನು ಬಿಟ್ಟುಕೊಡಲು ರಾಜಕಾರಣ, ಅಧಿಕಾರದಾಹ, ಅಂತೂ ನಿಯಂತ್ರಣವನ್ನು ಬಯಸುವ ಆಡಳಿತ ಶಕ್ತಿಯು ಸಿದ್ಧವಿಲ್ಲ. ಪಾನನಿಷೇಧವನ್ನು ಅನುಷ್ಠಾನಗೊಳಿಸುವುದಿರಲಿ, ಅದು ತರುವ ಕಾಂಚಾಣದ ಮಿಣಿಮಿಣಿಗಾಗಿ ಅದನ್ನು ಉತ್ತೇಜಿಸುವ ಎಲ್ಲ ಕ್ರಮಗಳನ್ನೂ ಸರಕಾರಗಳು ಕೈಗೊಳ್ಳುತ್ತಿವೆ. ಅಸಂಖ್ಯ ಕುಟುಂಬಗಳು ಅದರಿಂದಾಗಿ ನಾಶವಾದರೂ ಸರಕಾರ ಅದನ್ನು ಗಣಿಸುತ್ತಿಲ್ಲ. ಪರಿಸರ-ಅರಣ್ಯಗಳ ರಕ್ಷಣೆಗೆ ಸರಕಾರ ಕೈಗೊಳ್ಳುವ ಕ್ರಮಗಳು ಗಣಿಗಾರಿಕೆಯಂತಹ ಸರಕಾರಿ ವ್ಯೆಹದಿಂದಾಗಿ ನಗೆಪಾಟಲಾಗುತ್ತಿವೆ. ಅರಣ್ಯವನ್ನು ರಕ್ಷಿಸಲು ನ್ಯಾಯಾಲಯಗಳು ಎಷ್ಟೇ ಪಣತೊಟ್ಟರೂ ಸರಕಾರವೇ ಅದನ್ನು ಇಲ್ಲವಾಗಿಸುತ್ತಿದೆ. ಏಕರೂಪ ನಾಗರಿಕ ಸಂಹಿತೆಯು ಸಂವಿಧಾನದ ಮೂಲ ಆಶಯಗಳಲ್ಲೊಂದು. ಅದು ಸಾಧುವಲ್ಲದಿದ್ದರೆ ಅಥವಾ ಅದು ಜಾತ್ಯತೀತ ತತ್ವಗಳಿಗೆ, ಮೂಲಭೂತ ಹಕ್ಕುಗಳಿಗೆ ಪೂರಕವಲ್ಲದಿದ್ದರೆ ಅದನ್ನು ಸಂವಿಧಾನ ನಿರ್ಮಾಪಕರು ಸಂವಿಧಾನದಲ್ಲಿ ಯಾವ ರೂಪದಲ್ಲೂ ಅಳವಡಿಸುತ್ತಿರಲಿಲ್ಲ. ಹೀಗಿರುವಾಗ ಅದು ಮತ್ತೆ ಮತ್ತೆ ನ್ಯಾಯಾಲಯಗಳ ಸುತ್ತ ಗಿರಕಿ ಹೊಡೆದು ಮೂಲೆಯಲ್ಲಿ ಮುದುಡಿ ಮಲಗುವ ಸಾಧು ಪ್ರಾಣಿಯಂತಿದೆಯಷ್ಟೇ ಹೊರತು ಪ್ರಖರವಾದ ವಿದ್ಯಮಾನವಾಗಿಲ್ಲ. ಸಂವಿಧಾನೋತ್ತರ ನ್ಯಾಯಾಂಗದ ಇತಿಹಾಸದಲ್ಲಿ ಇದರ ಕುರಿತ ಉಲ್ಲೇಖಗಳು ಹಲವು: 1980ರ ಮಿನರ್ವ ಮಿಲ್ಸ್ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು ಮೊದಲ ಬಾರಿಗೆ ರಾಜ್ಯ ನೀತಿಯ ಮಾರ್ಗದರ್ಶಿ ತತ್ವಗಳ ಅನುಷ್ಠಾನವನ್ನು ಒತ್ತಾಯಿಸಲು ಸಾಧ್ಯವಿಲ್ಲವೆಂಬ ಸಂವಿಧಾನದ ಆಶಯವನ್ನು ಸ್ಪಷ್ಟಗೊಳಿಸಿತು. ಇದೇ ಪ್ರಕರಣದಲ್ಲಿ ತನ್ನ ಪ್ರತ್ಯೇಕ ತೀರ್ಪಿನಲ್ಲಿ ನ್ಯಾಯಮೂರ್ತಿ ಭಗವತಿಯವರು ಕೆಲವೊಮ್ಮೆ ಅಂತಹ ಹೇರಿಕೆ ಅನಿವಾರ್ಯವೆಂದು ಅಭಿಪ್ರಾಯಪಟ್ಟರು. ಹಕ್ಕುಗಳ ನಿಜವಾದ ಅರ್ಥವಿರುವುದು ಕರ್ತವ್ಯದಲ್ಲಿ; ರಾಜಕಾರಣದಡಿ ಈ ಸಮತೋಲವನ್ನು ಕಾಪಾಡುವುದು ಅಸಾಧ್ಯವಾದರೆ ಸುಖೀರಾಜ್ಯದ ಸೃಷ್ಟಿ ಅಸಾಧ್ಯವೆಂದು ಅವರು ಹೇಳಿದ ಮಾತು ಅರ್ಥಪೂರ್ಣವಾಗಿದೆ. 1985ರ ಶಾಬಾನೊ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದ ಐವರು ನ್ಯಾಯಾಧೀಶರ ಪೀಠವು ಒಮ್ಮತದ ತೀರ್ಪಿನಲ್ಲಿ ಏಕರೂಪ ನಾಗರಿಕ ಸಂಹಿತೆಯು ಜಾರಿಯಾಗುವ ಅಗತ್ಯವನ್ನು ಒತ್ತಿ ಹೇಳಿದರು. ಆದರೆ ಈ ಸಲಹೆ ತೀರ್ಪಿನ ಪುಟಗಳಲ್ಲೇ ಉಳಿಯಿತು ಮಾತ್ರವಲ್ಲ, ಆಗಿನ ಕೇಂದ್ರ ಸರಕಾರ ತನಗಾದ ಮುಜುಗರ ನಿವಾರಣೆಗಾಗಿ ಹೊಸ ಕಾಯ್ದೆಯನ್ನೇ ತಂದಿತು. 1995ರ ಸರಳಾ ಮುದ್ಗಲ್ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದ ದ್ವಿಸದಸ್ಯ ಪೀಠವು ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸಲು ಶಿಫಾರಸುಮಾಡಿತು. ಇದೂ ಕಡತಗಳಲ್ಲೇ ಉಳಿಯಿತು. 2003ರಲ್ಲಿ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ಇನ್ನೊಂದು ಪೀಠವು ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವ ಅಗತ್ಯವನ್ನು ಹೇಳಿ ಇದು ಇನ್ನೂ ಜಾರಿಯಾಗದಿರುವುದು ದುರದೃಷ್ಟಕರವೆಂದು ಬಣ್ಣಿಸಿತು. ಜಾತ್ಯತೀತ ಭಾರತದಲ್ಲಿ ಧರ್ಮಶಾಸ್ತ್ರಗಳ ಆಧಾರದಲ್ಲಿ ಉಂಟಾಗಿರುವ ಗೊಂದಲಗಳನ್ನು ಮತ್ತು ವಿರೋಧಾಭಾಸಗಳನ್ನು ಬಗೆಹರಿಸಿ ವೈವಿಧ್ಯತೆಯಲ್ಲಿ ರಾಷ್ಟ್ರೀಯ ಏಕತೆಯನ್ನು ಸಾಧಿಸುವಲ್ಲಿ ಏಕರೂಪ ನಾಗರಿಕ ಸಂಹಿತೆಯು ಮಹತ್ವದ ಹೆಜ್ಜೆಯಾಗಲಿದೆಯೆಂದು ಅಭಿಪ್ರಾಯಪಟ್ಟಿತು. ಇಷ್ಟೆಲ್ಲ ಮಹತ್ವದ ವಿಚಾರವು ಬೆಳಕಿಗಿಂತ ಬೆಂಕಿಯನ್ನು, ಗಾಳಿಗಿಂತ ಧೂಳನ್ನು ಹಬ್ಬಿಸಲು ಕಾರಣವೇನು? ಇದಕ್ಕೆ ಬಹುಪಾಲು ಕಾರಣ ರಾಜಕಾರಣ. ಇದನ್ನು ಪ್ರಾಮಾಣಿಕವಾಗಿ ಮತ್ತು ವಿಶ್ವಸನೀಯವಾಗಿ ಜಾರಿಗೊಳಿಸುವುದು ಹೇಗೆಂದು ಯಾವ ಪರಿಣತರೂ ಹೇಳಿಲ್ಲ. ಏಕರೂಪ ನಾಗರಿಕ ಸಂಹಿತೆಯು ಹೇಗಿರಬೇಕು, ಅದು ಧರ್ಮದಿಂದ ಎಷ್ಟು ದೂರವಿರಬೇಕು, ಜಾತ್ಯತೀತತೆಗೆ ಅದು ಹೇಗೆ ಪೂರಕವಾಗಿರಬೇಕು ಎಂಬ ಬಗ್ಗೆ ನಿಖರವಾದ ಅಂಕಿ-ಅಂಶಗಳಿಲ್ಲ, ಸ್ಪಷ್ಟ ಅಭಿಮತವಿಲ್ಲ. ನಮ್ಮಲ್ಲಿ ಶಿಕ್ಷಣ ಪದ್ಧತಿ ಬದಲಾಗಬೇಕು ಎಂಬ ಚರ್ಚೆ ಮುನ್ನೆಲೆಗೆ ಬಂದಾಗೆಲ್ಲ ಈ ಬದಲಾವಣೆ ಹೇಗೆ? ಯಾಕೆ ಎಂಬ ಬಗ್ಗೆ ಯಾರಲ್ಲೂ ಸ್ಪಷ್ಟ ಅಭಿಪ್ರಾಯಗಳಿಲ್ಲದೆ ಹುತ್ತವ ಬಡಿದರೂ ಹಾವು ಸಾಯಲಿಲ್ಲ ಎಂಬ ಹಾಗೆ ಸಮಸ್ಯೆ ಉಳಿದ್ದನ್ನು ನೆನಪಿಸಬಹುದು. ಕುರುಡು ಅಧಿಕಾರವನ್ನು, ಮತಾಂಧತೆಯನ್ನು ಹಿಂಬಾಲಿಸುವವರಿಂದ ಸ್ವತಂತ್ರ ಸರ್ವಹಿತ ನಿಲುವನ್ನು ಬಯಸಲಾಗದು. ಈಗ ಬಂದಿರುವ ಸಮಸ್ಯೆಯೆಂದರೆ ಇದೇ. ಇದನ್ನು ವಿರೋಧಿಸಿದರೆ ಸಂವಿಧಾನದ, ಆ ಮೂಲಕ ಅಂಬೇಡ್ಕರ್ ಅವರ ಆಶಯಗಳನ್ನು ವಿರೋಧಿಸಿದಂತೆ. ನಮಗೆ ಸಂವಿಧಾನವೇ ಭಗವದ್ಗೀತೆ/ಬೈಬಲ್/ಕುರ್‌ಆನ್/ಗುರುಗ್ರಂಥಸಾಹಿಬ್ ಎಂದೆಲ್ಲ ಹೇಳುತ್ತ ಬಂದಿರುವ ಪ್ರಗತಿಪರರಿಗೆ, ಜಾತ್ಯತೀತರಿಗೆ ಈ ಅಂಶ ವನ್ನು ಜೀರ್ಣಿಸಿಕೊಳ್ಳುವುದು ಯಾಕೆ ಕಷ್ಟವಾಗುತ್ತಿದೆ?
ಮೋದಿಯ ಈ ಮಾಸ್ಟರ್ ಸ್ಟ್ರೋಕ್ ಸಾಮಾನ್ಯರಿಗೆ ಏನೂ ಅನ್ನಿಸದ ವಿಚಾರ. ಅನುದಿನದ ಜೀವನ ಯಥಾವತ್ತು ಅಬಾಧಿತವಾಗಿ ಮುಂದುವರಿಯಲಿದೆ. ಮೋದಿ ಇದನ್ನು ಈಗ ಪ್ರಸ್ತಾವಿಸುವುದರ ಹಿಂದಿನ ಉದ್ದೇಶವು 2024ರ ಚುನಾವಣೆ. ಸದ್ಯ ಮೋದಿಗಾಗಲೀ ಭಾಜಪಕ್ಕಾಗಲೀ ‘ಸರ್ಜಿಕಲ್ ಸ್ಟ್ರೈಕ್’ ವಿಚಾರಗಳಿಲ್ಲ. ಅಯೋಧ್ಯೆ, ಜಮ್ಮು ಮತ್ತು ಕಾಶ್ಮೀರ, ಪಾಕಿಸ್ತಾನ, ದೇಶದ್ರೋಹ, ಸಂಸತ್ತಿನ ಹೊಸ ಭವನ, 5 ಟ್ರಿಲಿಯನ್ ಆರ್ಥಿಕತೆ, ವಿಶ್ವಗುರುಪೀಠ ಮುಂತಾದ ವಿಷಯಗಳೀಗ ಕ್ಷೀಶೆಯಾಗಿವೆ. ಜನಕ್ಕವು ಗತ. ಅಘೋಷಿತ ತುರ್ತುಪರಿಸ್ಥಿತಿಯು ಜನರನ್ನು ಆಕರ್ಷಿಸಲು ಸಾಕಾಗುವುದಿಲ್ಲ. ಹೊಸತೇನಾದರೂ ಬೇಕಲ್ಲ! ನಿಜಕ್ಕೂ ಇಂತಹ ಮಾರ್ಗದರ್ಶಿತತ್ವಗಳ ಅನುಷ್ಠಾನವು ಸರಕಾರದ ಉದ್ದೇಶವಾಗಿದ್ದರೆ ಪಾನನಿಷೇಧದಂತಹ ವಿಚಾರಗಳನ್ನು ಅದರ ಗುಣಾವಗುಣಗಳ ಬೆಂಬತ್ತಿ ನಿರ್ಧರಿಸಬೇಕಿತ್ತು. ಆದರೆ ಅಂತಹ ವಿಚಾರಗಳಲ್ಲಿ ಮೋದಿ ಸರಕಾರವು ಎಲ್ಲ ಉಪಭೋಗವಾದಿಗಳಂತೆಯೇ ಇದೆ. ಭಿನ್ನವಾದ ಯಾವ ಆತ್ಮನಿರ್ಭರತೆಯೂ ಕಾಣಿಸುವುದಿಲ್ಲ. ಇಷ್ಟೇ ಅಲ್ಲ, ಈ ಅಚಾನಕವಾದ ಘೋಷಣೆಯ ಹಿಂದೆ ಯಾವ ಸುಸೂತ್ರ ವಿವೇಕವೂ ಇದ್ದಂತಿಲ್ಲ. ದೇಶದ ಪ್ರಧಾನಿಯೊಬ್ಬ ಇಂತಹ ಮಹತ್ವದ ಸಂಗತಿಯನ್ನು ಹೀಗೆ ಘೋಷಿಸುವುದು ವಿಚಾರಹೀನತೆಯಾಗುತ್ತದೆ. ಆದರೆ ಇದೇನೂ ಹೊಸದಲ್ಲ. ನೋಟಿನ ಅಮಾನ್ಯೀಕರಣ, ಕೋವಿಡ್-19ರ ಲಾಕ್‌ಡೌನ್ ಮುಂತಾದ ವಿಚಾರಗಳಲ್ಲೂ ಪ್ರಧಾನಿ ಹೀಗೆ ಹಠಾತ್ತಾಗಿ ತೆರೆಯ ಮೇಲೆ ಬಂದು ಆಘಾತವೆಸಗಿದ್ದು ಜನರಿಗೆ ಮರೆತುಹೋಗಿರಲಾರದು. ಏಕರೂಪ ನಾಗರಿಕ ಸಂಹಿತೆಯು ಹೇಗೆ ಜಾರಿಯಾಗಬೇಕು, ಅದರ ‘ಏಕರೂಪ’ವೇನು, ಅದರ ರೂಪರೇಖೆಗಳೇನು, ಇಷ್ಟೊಂದು ಧರ್ಮ, ಜಾತಿ, ಮತ, ಪಂಗಡಗಳಿರುವಲ್ಲಿ ಯಾವೊಂದು ರೂಪವೂ ಸರ್ವಸಮ್ಮತವಾಗದಿರುವ ಸಹಜ ಹಿನ್ನೆಲೆಯಲ್ಲಿ ಈ ಅಪರೂಪ ವಿಚಾರದ ‘ಏಕರೂಪ’ ಯಾವುದು? ಸಾರ್ವಜನಿಕ ಅಭಿಪ್ರಾಯಗಳು ರೂಪುಗೊಳ್ಳದೆಯೇ ಪ್ರಧಾನಿಯೊಬ್ಬರು ಹೀಗೆ ಜೇನುಗೂಡಿಗೆ ಕೈಹಾಕುವ ಕೆಲಸವನ್ನು ಮಾಡಿದರೇಕೆ? ಮುಂತಾದ ಪ್ರಶ್ನೆಗಳು ಸಹಜ. ಆದರೆ ರಾಜಕಾರಣವೇ ಉದ್ದೇಶವಾದಾಗ ಉಳಿದ ಅಂಶಗಳು ಗೌಣವಾಗುತ್ತವೆ.
ಪ್ರಕೃತ ಭಾರತದಲ್ಲಿರುವ ಹಲವು ಸಿವಿಲ್ ಕಾನೂನುಗಳು ಭಿನ್ನ ಧರ್ಮಗಳ ಮಾತ್ರವಲ್ಲ, ಒಂದೇ ಧರ್ಮಗಳನ್ನನುಸರಿಸುವವರಲ್ಲೂ ಭಿನ್ನವಾಗಿವೆ. ಚಿಕ್ಕ ಉದಾಹರಣೆಯನ್ನು ನೀಡುವುದಾದರೆ ಆನುವಂಶಿಕತೆ ಹಾಗೂ ವಾರಸುದಾರಿಕೆ ಕಾಯ್ದೆಯಲ್ಲಿ ಯಾವುದನ್ನು ಏಕರೂಪವಾಗಿ ಸ್ವೀಕರಿಸಬೇಕು? ಹಿಂದೂ ವಾರಸುದಾರಿಕೆ ಕಾಯ್ದೆ ಮತ್ತು ಭಾರತೀಯ ವಾರಸುದಾರಿಕೆ ಕಾಯ್ದೆಯಲ್ಲಿ ಯಾವುದು ಸ್ವೀಕಾರಾರ್ಹವಾಗಬೇಕು? ವಿವಾಹ ಮತ್ತು ವಿಚ್ಛೇದನ ಕಾನೂನುಗಳಲ್ಲಿ ಯಾವುದು ಏಕರೂಪದ ಮಾನದಂಡವಾಗಿರಬೇಕು ಮತ್ತು ಯಾಕೆ? ಕಾನೂನಿನಡಿ ಸಂಸಾರದ ಒಡೆತನ ಯಾರದ್ದಿರಬೇಕು? ಗಂಡಿನದ್ದೇ ಹೆಣ್ಣಿನದ್ದೇ? ಇದೊಂದು ಶಿಖರಾಗ್ರದ ನೋಟ ಮಾತ್ರ. ವಿಶ್ಲೇಷಿಸುತ್ತ ಹೋದಂತೆ ಇಂತಹ ಹತ್ತು ಹಲವು ಅಂತರಗಳು ಗೋಚರಿಸಬಹುದು. ಸ್ಥಿರತೆಯನ್ನು ಕದಡುವುದು ಸುಲಭ. ಅದು ಮಾಡಬಲ್ಲ ಗೊಂದಲಗಳನ್ನು, ಪ್ರಮಾದಗಳನ್ನು ಊಹಿಸುವುದು ಕಷ್ಟ; ಸರಿಪಡಿಸುವುದು ಮತ್ತೂ ಕಷ್ಟ. ಏಕರೂಪದ ಸಾಹಸವು ವಿರೂಪಕ್ಕೆಡೆಮಾಡಿಕೊಡದಿದ್ದರಾಯಿತು. ಗುರಿ ಒಳ್ಳೆಯದಿದೆಯೆಂದು ಸರ್ವೋಚ್ಚ ನ್ಯಾಯಾಯಲಯ ಹೇಳಿದೆಯೇ ಹೊರತು ಅದರ ಹಾದಿಯ ಕುರಿತು ಅದು ಏನೂ ಹೇಳದಿರುವುದು ಗಮನಾರ್ಹ