ಧ್ರುವೀಕರಣದ ಹತಾರ- ಏಕರೂಪ ನಾಗರಿಕ ಸಂಹಿತೆ

ಬಿಜೆಪಿ ಒಕ್ಕೂಟ ಶಿಲ್ಪಕ್ಕೆ ನಿರಂತರವಾಗಿ ಧಕ್ಕೆ ಮಾಡುತ್ತಿದೆ. ದೇಶದ ಎಲ್ಲ ನಾಗರಿಕರಿಗೂ ಅನ್ವಯಿಸುವ ಏಕೈಕ ಕಾಯ್ದೆ ಜಾರಿಗೊಳಿಸಲು ಒಕ್ಕೂಟ ತತ್ವಕ್ಕೆ ತಿಲಾಂಜಲಿ ನೀಡಬೇಕಾಗುತ್ತದೆ. ಫ್ರಾನ್ಸ್‌ನಂತೆ ಏಕಕೇಂದ್ರ ಪ್ರಭುತ್ವವಿದ್ದರೆ ಮಾತ್ರ ಇದು ಸಾಧ್ಯ. ಆದರೆ, ಉತ್ತರ ಮತ್ತು ದಕ್ಷಿಣ ಅಮೆರಿಕ ಒಟ್ಟಿಗೆ ಸೇರಿಸಿದರೆ ಅದನ್ನೂ ಮೀರುವಷ್ಟು ವಿಶಾಲ ವ್ಯಾಪ್ತಿಯ ದೇಶದಲ್ಲಿ ಇಂಥ ಸಮರೂಪದ ಕಾಯ್ದೆ ಅನ್ವಯ ಹೇಗೆ ಸಾಧ್ಯ? ವ್ಯಕ್ತಿಯೊಬ್ಬರು ಕರ್ನಾಟಕದಲ್ಲಿ ವಿವಾಹವಾಗಿ ದಿಲ್ಲಿಯಲ್ಲಿ ವಿಚ್ಛೇದನ ತೆಗೆದುಕೊಂಡರೆ, ಅದನ್ನು ಯಾವ ರಾಜ್ಯದ ಕಾನೂನಿನಡಿ ಪರಿಗಣಿಸಬೇಕು? ಗೊಂದಲಗಳ ರಾಜ್ಯ ಸೃಷ್ಟಿಯಾಗುತ್ತದೆ.

Update: 2023-07-07 05:22 GMT
Editor : Haneef | Byline : ಮಾಧವ ಐತಾಳ್

ಮಾಧವ ಐತಾಳ್

ಏಕರೂಪ ನಾಗರಿಕ ಸಂಹಿತೆ(ಯುಸಿಸಿ)ಗೆ ಸಂಬಂಧಿಸಿದ ಸಂಸದೀಯ ಸಮಿತಿಯ ಸಭೆಯು ಬಿಜೆಪಿ ಸಂಸದ ಸುಶೀಲ್ ಕುಮಾರ್ ಮೋದಿ ಅವರ ಅಧ್ಯಕ್ಷತೆಯಲ್ಲಿ ಜುಲೈ ಮೂರರಂದು ನಡೆದಿದೆ. ಪಾಲ್ಗೊಂಡಿದ್ದ ಪ್ರತಿಪಕ್ಷಗಳ ಸದಸ್ಯರು ಸರಕಾರದ ಉದ್ದೇಶವನ್ನೇ ಪ್ರಶ್ನಿಸಿದ್ದಾರೆ. 371ನೇ ವಿಧಿಯಡಿ ವಿಶೇಷ ಸ್ಥಾನಮಾನ ಹೊಂದಿರುವ ಈಶಾನ್ಯ ರಾಜ್ಯಗಳಿಗೆ ಯುಸಿಸಿಯಿಂದ ವಿನಾಯಿತಿ ನೀಡಬಹುದೇ ಎಂದು ಅಧ್ಯಕ್ಷರು ಕೇಳಿದ್ದಾರೆ. ಕಾನೂನು ಆಯೋಗ ತನ್ನ ಸಮಾಲೋಚನೆಯನ್ನು ಅಂತಿಮಗೊಳಿಸಿ ವರದಿ ಸಲ್ಲಿಸಬೇಕಿದ್ದು, ಕಾನೂನು ಮತ್ತು ನ್ಯಾಯ ಸಚಿವಾಲಯ ಈ ವರದಿಗಾಗಿ ಕಾಯುತ್ತಿದೆ. ಏಳು ದಶಕಗಳಿಂದ ನೇಪಥ್ಯಕ್ಕೆ ಸರಿದಿದ್ದ ಈ ಕಾಯ್ದೆಯ ಬಗ್ಗೆ ಚರ್ಚೆ ಆರಂಭವಾಗಿದ್ದು ಜೂನ್ 28ರಂದು ಪ್ರಧಾನಿ ಭೋಪಾಲ್‌ನಲ್ಲಿ ‘‘ಪ್ರತ್ಯೇಕ ಸಮುದಾಯಗಳಿಗೆ ಪ್ರತ್ಯೇಕ ಕಾನೂನುಗಳಿರುವ ಇಬ್ಬಗೆ ವ್ಯವಸ್ಥೆಯಿಂದ ದೇಶವನ್ನು ಮುನ್ನಡೆಸಲು ಸಾಧ್ಯವಿಲ್ಲ’’ ಎಂದು ಹೇಳಿದ ಬಳಿಕ.

ಏನಿದು ಯುಸಿಸಿ?

ವಿವಾಹ, ವಿಚ್ಛೇದನ, ಜೀವನಾಂಶ ನೀಡಿಕೆ, ವಾರಸುದಾರಿಕೆ, ಮಗುವಿನ ಸುಪರ್ದು, ದತ್ತು ಮತ್ತು ಪಿತ್ರಾರ್ಜಿತ ಆಸ್ತಿಗೆ ಸಂಬಂಧಿಸಿದ ವಿವಿಧ ವೈಯಕ್ತಿಕ ಕಾನೂನುಗಳ ಬದಲು ಎಲ್ಲ ಭಾರತೀಯರಿಗೂ ಅನ್ವಯಿಸುವ ಏಕೈಕ ಕಾಯ್ದೆಯೇ ಯುಸಿಸಿ. ಹಿಂದೂ ಸಂಹಿತೆ ಎನ್ನುವುದು ಕ್ರಿಶ್ಚಿಯನ್, ಮುಸ್ಲಿಮ್, ಪಾರ್ಸಿ ಹೊರತುಪಡಿಸಿ, ಬೌದ್ಧರು, ಸಿಖ್ಖರು, ಜೈನರು ಸೇರಿದಂತೆ ಬೇರೆಲ್ಲರಿಗೂ ಅನ್ವಯಿಸುತ್ತದೆ. ಆದಿವಾಸಿ ಮತ್ತು ಪರಿಶಿಷ್ಟ ಸಮುದಾಯಗಳು ಇವೆರಡರ ನಡುವೆ ಬರುತ್ತವೆ. ಕಾನೂನು ಆದಿವಾಸಿಗಳನ್ನು ಹಿಂದೂ ಎಂದು ಪರಿಗಣಿಸುತ್ತದಾದರೂ, ಅವರು ತಮ್ಮನ್ನು ಹಿಂದೂಗಳು ಎಂದುಕೊಳ್ಳುವುದಿಲ್ಲ. ಜಾರ್ಖಂಡ್, ಛತ್ತೀಸ್‌ಗಡ ಮತ್ತು ಒಡಿಶಾದ ಮೂಲನಿವಾಸಿಗಳು, ವಿಶೇಷವಾಗಿ ಮುಂಡಾಗಳು, ತಮ್ಮ ಆಚರಣೆಗಳನ್ನು ಕಾನೂನಾಗಿಸಲು ಸರ್ಣಾ ಸಂಹಿತೆಗೆ ಆಗ್ರಹಿಸುತ್ತಿದ್ದಾರೆ. ಹಿಂದೂ ಸಂಹಿತೆಯ ಭಾಗವಾಗಿರುವ ಹಿಂದೂ ಉತ್ತರಾಧಿಕಾರ ಕಾಯ್ದೆ 1956, ಹಿಂದೂ ವಿವಾಹ ಕಾಯ್ದೆ 1955, ಹಿಂದೂ ಅಪ್ರಾಪ್ತ ವಯಸ್ಕರು ಮತ್ತು ಪೋಷಕತ್ವ ಕಾಯ್ದೆ 1956 ಮತ್ತು ಹಿಂದೂ ದತ್ತು ಮತ್ತು ನಿರ್ವಹಣೆ ಕಾಯ್ದೆ 1956ರಡಿ ಈ ಸಮುದಾಯಗಳು ಬರುವುದಿಲ್ಲ.

ಯುಸಿಸಿಗೆ ದೀರ್ಘ ಇತಿಹಾಸವಿದೆ. ಹಿಂದೂಗಳ ವೈಯಕ್ತಿಕ ಕಾಯ್ದೆಗಳ ಸುಧಾರಣೆಯನ್ನು ಬಲಪಂಥೀಯರು ಆರಂಭದಲ್ಲಿ ವಿರೋಧಿಸಿದ್ದರು. ಬಾಬಾ ಸಾಹೇಬ್ ಹಾಗೂ ನೆಹರೂ ಎದುರು ಅವರ ಆಟ ನಡೆಯಲಿಲ್ಲ. ಅಕ್ಟೋಬರ್ 21, 1951ರಲ್ಲಿ ಜನ್ಮ ತಳೆದ ಬಿಜೆಪಿಯ ಮಾತೃಸಂಸ್ಥೆ ಜನಸಂಘದ ಮಾರ್ಗದರ್ಶಕ ತತ್ವಗಳು ಮತ್ತು ಕಾರ್ಯಸೂಚಿಯಲ್ಲಿ ಜಮ್ಮು-ಕಾಶ್ಮೀರಕ್ಕೆ ಸಂವಿಧಾನದ ಅನ್ವಯಿಸುವಿಕೆ(ವಿಧಿ 370 ರದ್ದುಗೊಳಿಸುವಿಕೆ) ಮತ್ತು ಯುಸಿಸಿ ಅನುಷ್ಠಾನ ಪ್ರಮುಖವಾಗಿದ್ದವು. ರಾಮಮಂದಿರ ನಿರ್ಮಾಣ 1989ರಲ್ಲಿ ಕಾರ್ಯಸೂಚಿಗೆ ಸೇರಿಕೊಂಡಿತು. ವೈಯಕ್ತಿಕ ಕಾನೂನುಗಳನ್ನು ಕೊನೆಗಾಣಿಸುವುದು ಬಿಜೆಪಿಯ ಉಳಿದ ಗುರಿ. ವ್ಯಾಪಕ ವಿರೋಧ

ಯುಸಿಸಿ ಮತ್ತೆ ಮುನ್ನೆಲೆಗೆ ಬಂದಿದ್ದು 2022ರಲ್ಲಿ ಉತ್ತರಾಖಂಡದ ಬಿಜೆಪಿ ಸರಕಾರ ತಜ್ಞರ ಸಮಿತಿ ರಚಿಸಿದಾಗ. ಆ ಸಮಿತಿ ಚೀನಾ ಮಾದರಿಯ ‘ಎರಡು ಮಕ್ಕಳ ಕಾರ್ಯನೀತಿ’ಯನ್ನು ಪರಿಗಣಿಸುತ್ತಿದೆ. ಆನಂತರ, 22ನೇ ಕಾನೂನು ಆಯೋಗ ಜೂನ್ 14ರಂದು ಯುಸಿಸಿ ಕುರಿತು ಹೊಸದಾಗಿ ಚರ್ಚೆ ಆರಂಭಿಸಲು ನಿರ್ಧರಿಸಿ, ಸಾರ್ವಜನಿಕರು/ಧಾರ್ಮಿಕ ಸಂಸ್ಥೆಗಳಿಂದ ಸಲಹೆ-ಸೂಚನೆಗಳನ್ನು ಆಹ್ವಾನಿಸಿತು. ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ ಮಾತ್ರವಲ್ಲದೆ, ಜಾರ್ಖಂಡ್‌ನ ಮೂವತ್ತಕ್ಕೂ ಅಧಿಕ ಆದಿವಾಸಿ ಸಂಘಟನೆಗಳು ಯುಸಿಸಿಯನ್ನು ವಿರೋಧಿಸಿದವು. ‘‘ಇಂಥ ಏಕರೂಪ ಕಾಯ್ದೆಗಳು ಮಧ್ಯ ಮತ್ತು ಪೂರ್ವ ಭಾರತದಲ್ಲಿ ಸಂವಿಧಾನದ ಐದನೇ ಪರಿಶಿಷ್ಟದಡಿಯ ಪ್ರದೇಶಗಳಲ್ಲಿ ವಾಸಿಸುತ್ತಿರುವವರ ಸಂಪ್ರದಾಯಗಳು ಹಾಗೂ ಆಚರಣೆಗಳನ್ನು ತೊಡೆದುಹಾಕುತ್ತವೆ’’ ಎಂದು ಆದಿವಾಸಿ ಸಂಘಟನೆಗಳು ದೂರಿದವು. ಐದನೇ ಪರಿಶಿಷ್ಟದಡಿ ಬರುವ ಪ್ರದೇಶಗಳು ಚೋಟಾ ನಾಗಪುರ ಗೇಣಿ ಕಾಯ್ದೆ 1908 ಹಾಗೂ ಸಂತಾಲ್ ಪರಗಣದ ಗೇಣಿ ಕಾಯ್ದೆ 1949ರಡಿ ನಿರ್ವಹಣೆಗೆ ಒಳಪಡುತ್ತವೆ. ಇವು ಭೂಮಿ ಮತ್ತು ಆಸ್ತಿಗಳ ವಾರಸುದಾರಿಕೆಗೆ ಸಂಬಂಧಿಸಿದಂತೆ ಸ್ಥಳೀಯ ಆಚರಣೆಗಳಿಗೆ ಆದ್ಯತೆ ನೀಡುತ್ತವೆ. ತಮ್ಮ ಜಮೀನನ್ನು ಹೊರಗಿನವರು ಸ್ವಾಧೀನಪಡಿಸಿಕೊಳ್ಳುವುದನ್ನು ಯುಸಿಸಿ ಸುಲಭವಾಗಿಸುತ್ತದೆ ಎನ್ನುವುದು ಆದಿವಾಸಿಗಳ ಆತಂಕ ಮತ್ತು ಅವರನ್ನು ಹಿಂದೂಗಳಲ್ಲದ ವಿಶಿಷ್ಟ ಗುಂಪು ಎಂದು ಪರಿಗಣಿಸದೆ ಇರುವುದರಿಂದ, ಅವರ ನಂಬಿಕೆ-ಆಚರಣೆಗಳಿಗೆ ಶಾಸನಾತ್ಮಕ ಮನ್ನಣೆ ಇಲ್ಲ. ಮಣಿಪುರ ಮತ್ತು ನಾಗಾಲ್ಯಾಂಡ್‌ನ ಆದಿವಾಸಿ ಸಂಘಟನೆಗಳು ಮತ್ತು ಚರ್ಚ್, ಯುಸಿಸಿಗೆ ತಮ್ಮ ಸಮ್ಮತಿಯಿಲ್ಲ ಎಂದು ಹೇಳಿದವು. ಮಿಜೋರಾಂನ ವಿಧಾನಸಭೆ ಯುಸಿಸಿಯನ್ನು ವಿರೋಧಿಸಿ, ಗೊತ್ತುವಳಿ ಸ್ವೀಕರಿಸಿತು. ಮಿಜೋರಾಂ-ನಾಗಾಲ್ಯಾಂಡಿನ ವಿಧಾನಸಭೆಗಳ ಸಮ್ಮತಿ ಇಲ್ಲದೆ ಭೂಮಿ ಪರಭಾರೆ, ಸಾಂಪ್ರದಾಯಿಕ ಕಾನೂನುಗಳು, ಧಾರ್ಮಿಕ-ಸಾಮಾಜಿಕ ಆಚರಣೆಗಳಿಗೆ ಸಂಬಂಧಿಸಿದ ಸಂಸತ್ತಿನ ಶಾಸನಗಳ ವಿರುದ್ಧ ರಕ್ಷಣೆ ನೀಡುವ ಸಂವಿಧಾನದ ವಿಧಿ 371-ಎ ಮತ್ತು 371-ಜಿಯನ್ನು ಯುಸಿಸಿ ದುರ್ಬಲಗೊಳಿಸುತ್ತದೆ ಎಂಬ ಆತಂಕ ವ್ಯಾಪಕವಾಗಿದೆ. ನಾಗಾ ಮತ್ತು ಮಿಜೋಗಳ ಸಾಂಪ್ರದಾಯಿಕ ಕಾನೂನುಗಳನ್ನು ಉಲ್ಲಂಘಿಸಬಾರದು ಎಂದು ಈ ವಿಧಿಗಳು ಸ್ಪಷ್ಟವಾಗಿ ಹೇಳುತ್ತವೆ.

ಈಶಾನ್ಯ ಭಾರತವು ಜಗತ್ತಿನಲ್ಲೇ ಅತ್ಯಂತ ಹೆಚ್ಚು ಸಾಂಸ್ಕೃತಿಕ ವೈವಿಧ್ಯವಿರುವ ಪ್ರಾಂತವಾಗಿದ್ದು, ಇಲ್ಲಿ 220 ಬುಡಕಟ್ಟು ಸಮುದಾಯಗಳು ನೆಲೆಸಿವೆ. ಈ ವೈವಿಧ್ಯಕ್ಕೆ ಬೆನ್ನೆಲುಬಾಗಿ ನಿಂತಿರುವುದು ಸಂವಿಧಾನ.

ಈ ರಾಜ್ಯಗಳಿಗೆ ಸಂಸತ್ತಿನ ಹಲವು ಕಾನೂನುಗಳಿಂದ ವಿನಾಯಿತಿ ನೀಡಲಾಗಿದೆ. ಕೇಂದ್ರದ ಒತ್ತಡಕ್ಕೆ ಮಣಿದು ಯುಸಿಸಿಯನ್ನು ಅಂಗೀಕರಿಸಿದಲ್ಲಿ ಎಲ್ಲ 60 ಶಾಸಕರ ಅಧಿಕೃತ ನಿವಾಸಗಳಿಗೆ ಬೆಂಕಿ ಹಚ್ಚುವುದಾಗಿ ನಾಗಾಲ್ಯಾಂಡ್ ಟ್ರಾನ್ಸ್‌ಪರೆನ್ಸಿ, ಪಬ್ಲಿಕ್ ರೈಟ್ಸ್ ಅಡ್ವೊಕಸಿ ಮತ್ತು ಡೈರೆಕ್ಟ್ ಆ್ಯಕ್ಷನ್ ಸಂಘಟನೆ ಎಚ್ಚರಿಸಿದೆ. ರಾಜ್ಯದ ರೈಸಿಂಗ್ ಪೀಪಲ್ಸ್ ಪಾರ್ಟಿ ಕೂಡ ಯುಸಿಸಿಯನ್ನು ವಿರೋಧಿಸಿದೆ. ಮೇಘಾಲಯದಲ್ಲೂ ಪ್ರತಿರೋಧ ವ್ಯಕ್ತವಾಗಿದೆ. ಮಾತೃಪ್ರಧಾನ ಖಾಸಿ ಸಮುದಾಯವನ್ನು ಪ್ರತಿನಿಧಿಸುವ ಹೈನಿಟ್ರೆಪ್ ಯೂತ್ ಕೌನ್ಸಿಲ್ ಹಾಗೂ ಸಿವಿಲ್ ಸೊಸೈಟಿ ವಿಮೆನ್ಸ್ ಸಂಘಟನೆ(ಸಿಎಸ್‌ಡಬ್ಲ್ಯುಒ) ಕಾಯ್ದೆಗೆ ವಿರೋಧ ವ್ಯಕ್ತಪಡಿಸಿವೆ. ಮೇಘಾಲಯ(ಶೇ.74.6), ಮಿಜೋರಾಂ(ಶೇ.86.97) ಮತ್ತು ನಾಗಾಲ್ಯಾಂಡ್(ಶೇ.87.93)ನಲ್ಲಿ ಕ್ರಿಶ್ಚಿಯನ್ ಸಮುದಾಯದವರಿದ್ದಾರೆ(2011ರ ಜನಗಣತಿ). ಸಿಖ್ ವಿವಾಹ ಕಾಯ್ದೆಯ ಅಸ್ತಿತ್ವದ ಮೇಲೆ ವಿಪರಿಣಾಮ ಬೀರುತ್ತದೆ ಎಂದು ಅಕಾಲಿದಳ ಧ್ವನಿಯೆತ್ತಿದೆ. ಇತ್ತೀಚೆಗೆ ಸಿಖ್ ವೈಯಕ್ತಿಕ ಕಾಯ್ದೆ ಮಂಡಳಿ ಕೂಡ ಅಸ್ತಿತ್ವಕ್ಕೆ ಬಂದಿದೆ.

21ನೇ ಕಾನೂನು ಆಯೋಗ ‘‘ಯುಸಿಸಿ ಅಗತ್ಯವಿಲ್ಲ ಅಥವಾ ಅಪೇಕ್ಷಣೀಯವಲ್ಲ’’ ಎಂದು ಹೇಳಿತ್ತು. ತನ್ನ 185 ಪುಟಗಳ ವರದಿಯಲ್ಲಿ ‘‘ಸಾಂಸ್ಕೃತಿಕ ವೈವಿಧ್ಯವನ್ನು ರಕ್ಷಿಸಬೇಕು. ಸಮರೂಪಗೊಳಿಸುವ ಮನಸ್ಥಿತಿ ದೇಶದ ಪ್ರಾಂತೀಯ ಸಮಗ್ರತೆಗೆ ಕುತ್ತು ತರುವಂಥದ್ದು. ಬೇರೆ ದೇಶಗಳು ಭಿನ್ನತೆಯನ್ನು ಗುರುತಿಸಿ, ಮನ್ನಿಸುತ್ತಿವೆ ಮತ್ತು ವಿಭಿನ್ನತೆಯು ಪ್ರಜಾಪ್ರಭುತ್ವದ ಜೀವಂತಿಕೆಗೆ ಸಾಕ್ಷಿಯಾಗಿರುತ್ತದೆ. ವೈಯಕ್ತಿಕ ಕಾನೂನುಗಳ ವೈವಿಧ್ಯವನ್ನು ಕಾಯ್ದುಕೊಳ್ಳಬೇಕು. ಅದೇ ಹೊತ್ತಿನಲ್ಲಿ ಆ ಕಾನೂನುಗಳು ಸಂವಿಧಾನ ಖಾತ್ರಿಗೊಳಿಸಿದ ಮೂಲಭೂತ ಹಕ್ಕುಗಳಿಗೆ ತದ್ವಿರುದ್ಧವಾಗಿರಬಾರದು. ಇದಕ್ಕಾಗಿ ಎಲ್ಲ ಕೌಟುಂಬಿಕ ವೈಯಕ್ತಿಕ ಕಾನೂನುಗಳನ್ನು ಕ್ರೋಡೀಕರಿಸಬೇಕು ಮತ್ತು ಕಂಡುಬರುವ ಅಸಮಾನತೆಗಳನ್ನು ತಿದ್ದುಪಡಿ ಮೂಲಕ ಸರಿಪಡಿಸಬೇಕು’’ ಎಂದು ಹೇಳಿತ್ತು. ಎಲ್ಲ ಕೌಟುಂಬಿಕ ಕಾಯ್ದೆಗಳನ್ನು ಏಕೈಕ ಕಾಯ್ದೆಯಿಂದ ಸ್ಥಳಾಂತರಿಸುವ ಬದಲು ಪ್ರತಿಯೊಂದು ಕಾಯ್ದೆಯನ್ನು ಪ್ರತ್ಯೇಕವಾಗಿ ಸುಧಾರಣೆ ಮಾಡಬೇಕು. ವೈಯಕ್ತಿಕ ಕಾನೂನುಗಳನ್ನು ಕ್ರೋಡೀಕರಿಸುವ ಮೂಲಕ ಎಲ್ಲ ಧರ್ಮಗಳು ಹಾಗೂ ಧಾರ್ಮಿಕ ವೈವಿಧ್ಯವನ್ನು ಸಮಾನವಾಗಿ ಪರಿಗಣಿಸಬೇಕೆಂದು ಸಮತೋಲದ ಶಿಫಾರಸು ಮಾಡಿತ್ತು. ‘‘ಸರಕಾರ ತಾರತಮ್ಯಕ್ಕೆ ಕಾರಣವಾಗುವ ಕಾನೂನುಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಕೇ ಹೊರತು ಅನಗತ್ಯವಾದ ಅಥವಾ ಅಪೇಕ್ಷಣೀಯವಲ್ಲದ ಯುಸಿಸಿ ಬಗ್ಗೆ ಅಲ್ಲ’’ ಎಂದಿತ್ತು.

ಆದರೆ, ಹಿಂದೂ ಸಂಹಿತೆಯ ಪಿತ್ರಾರ್ಜಿತ ಆಸ್ತಿ ಮತ್ತು ಉತ್ತರಾಧಿಕಾರಕ್ಕೆ ಸಂಬಂಧಿಸಿದ ಕೆಲವು ಅಂಶಗಳನ್ನು, ನಿರ್ದಿಷ್ಟವಾಗಿ ಹೇಳಬೇಕೆಂದರೆ, ಹಿಂದೂ ಅವಿಭಜಿತ ಕುಟುಂಬ(ಎಚ್‌ಯುಎಫ್)ದ ಕಲ್ಪನೆಯನ್ನು ಮತ್ತು ಆಸ್ತಿಯ ದಾಯಾದಿ ಮಾಲಕತ್ವವನ್ನು ತೆಗೆದುಹಾಕಬೇಕು ಎಂದು ಶಿಫಾರಸು ಮಾಡಿತ್ತು. ದಾಯಾದಿ ಮಾಲಕತ್ವ ರದ್ದತಿಯಿಂದ ಅಸಂಖ್ಯಾತ ಮಂದಿ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಕಳೆದುಕೊಳ್ಳುತ್ತಾರೆ ಮತ್ತು ಎಚ್‌ಯುಎಫ್ ಕಲ್ಪಲನೆಯಡಿ ತೆರಿಗೆ ವಿನಾಯಿತಿ ಪಡೆಯುತ್ತಿದ್ದವರು ಆ ಸೌಲಭ್ಯದಿಂದ ವಂಚಿತರಾಗುತ್ತಾರೆ. ಅಷ್ಟಲ್ಲದೆ, ಎಚ್‌ಯುಎಫ್ ಕಾಯ್ದೆಗಳು ಇನ್ನೂ ಕ್ರೋಡೀಕರಣಗೊಂಡಿಲ್ಲ. ಈ ಶಿಫಾರಸುಗಳನ್ನು ಮಾಡಿದಾಗ ಇದರಿಂದ ಆಗಬಹುದಾದ ಅಲ್ಲೋಲಕಲ್ಲೋಲವನ್ನು ಪರಿಗಣಿಸಿದಂತೆ ಇಲ್ಲ. ಈ ವರದಿ ಶೈತ್ಯಾಗಾರ ಸೇರಿತು.

ಹಿಂದೂ ವಿವಾಹ ಕಾಯ್ದೆ 1955 ಮತ್ತು ಭಾರತೀಯ ಕ್ರಿಶ್ಚಿಯನ್ ವಿವಾಹ ಕಾಯ್ದೆ 1872 ಧರ್ಮಕ್ಕೆ ಸಂಬಂಧಿಸಿದ ಕೇಂದ್ರದ ಕಾನೂನುಗಳು. ಇವು ಯುಸಿಸಿಗೆ ತದ್ವಿರುದ್ಧವಾಗಿವೆ. ಮುಸ್ಲಿಮ್ ವೈಯಕ್ತಿಕ ಕಾನೂನು ಕೂಡ ವಸಾಹತುಶಾಹಿಯ ಸೃಷ್ಟಿ ಹಾಗೂ ಜಗತ್ತಿನೆಲ್ಲೆಡೆಯ ಮುಸ್ಲಿಮರು ವಿವಿಧ ವೈಯಕ್ತಿಕ ಕಾನೂನುಗಳಡಿ ಜೀವಿಸುತ್ತಿದ್ದಾರೆ. ಯುಸಿಸಿಗೆ ಮುಸ್ಲಿಮರ ವಿರೋಧ ಎಂಬುದು ದೊಡ್ಡ ಚೌಕಟ್ಟೊಂದರ ಸಣ್ಣ ಭಾಗವಷ್ಟೇ. ಯುಸಿಸಿ ಜಾರಿಯಾದಲ್ಲಿ ಈ ಕಾನೂನುಗಳು ವಜಾ ಆಗುತ್ತವೆ.

ಬಿಜೆಪಿ ಒಕ್ಕೂಟ ಶಿಲ್ಪಕ್ಕೆ ನಿರಂತರವಾಗಿ ಧಕ್ಕೆ ಮಾಡುತ್ತಿದೆ. ದೇಶದ ಎಲ್ಲ ನಾಗರಿಕರಿಗೂ ಅನ್ವಯಿಸುವ ಏಕೈಕ ಕಾಯ್ದೆ ಜಾರಿಗೊಳಿಸಲು ಒಕ್ಕೂಟ ತತ್ವಕ್ಕೆ ತಿಲಾಂಜಲಿ ನೀಡಬೇಕಾಗುತ್ತದೆ. ಫ್ರಾನ್ಸ್‌ನಂತೆ ಏಕಕೇಂದ್ರ ಪ್ರಭುತ್ವವಿದ್ದರೆ ಮಾತ್ರ ಇದು ಸಾಧ್ಯ. ಆದರೆ, ಉತ್ತರ ಮತ್ತು ದಕ್ಷಿಣ ಅಮೆರಿಕ ಒಟ್ಟಿಗೆ ಸೇರಿಸಿದರೆ ಅದನ್ನೂ ಮೀರುವಷ್ಟು ವಿಶಾಲ ವ್ಯಾಪ್ತಿಯ ದೇಶದಲ್ಲಿ ಇಂಥ ಸಮರೂಪದ ಕಾಯ್ದೆ ಅನ್ವಯ ಹೇಗೆ ಸಾಧ್ಯ? ವ್ಯಕ್ತಿಯೊಬ್ಬರು ಕರ್ನಾಟಕದಲ್ಲಿ ವಿವಾಹವಾಗಿ ದಿಲ್ಲಿಯಲ್ಲಿ ವಿಚ್ಛೇದನ ತೆಗೆದುಕೊಂಡರೆ, ಅದನ್ನು ಯಾವ ರಾಜ್ಯದ ಕಾನೂನಿನಡಿ ಪರಿಗಣಿಸಬೇಕು? ಗೊಂದಲಗಳ ರಾಜ್ಯ ಸೃಷ್ಟಿಯಾಗುತ್ತದೆ.

ಬಿಜೆಪಿ ತನ್ನ ಎರಡನೇ ಅವಧಿಯ ಕೊನೆಯ ವರ್ಷದಲ್ಲಿದೆ. 2019ರ ಪ್ರಣಾಳಿಕೆಯಲ್ಲಿ ‘ಲಿಂಗ ಸಮಾನತೆ’ಗೆ ಯುಸಿಸಿ ಅಗತ್ಯ ಎಂದು ಹೇಳಿಕೊಂಡಿತ್ತು. ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಡ ಮತ್ತು ತೆಲಂಗಾಣದಲ್ಲಿ ವಿಧಾನಸಭೆ ಚುನಾವಣೆ ಇನ್ನಷ್ಟೇ ನಡೆಯಬೇಕಿದೆ. ಕರ್ನಾಟಕದಲ್ಲಿ ಪಕ್ಷದ ಸೋಲಿನ ಬಳಿಕ ತನ್ನ ಕಟ್ಟಾ ಬೆಂಬಲಿಗರ ಕ್ರೋಡೀಕರಣ ಮತ್ತು ಸಮುದಾಯಗಳ ಧ್ರುವೀಕರಣಕ್ಕೆ ಯುಸಿಸಿಯ ದಾಳ ಎಸೆದಿದೆ. ಬಿಜೆಪಿಯೇತರ ಪಕ್ಷಗಳು ಎಚ್ಚರಿಕೆಯಿಂದ ಪ್ರತಿಕ್ರಿಯಿಸಬೇಕಾದ ಅನಿವಾರ್ಯವನ್ನು ಸೃಷ್ಟಿಸಿದೆ. ಹೀಗಾಗಿಯೇ ಪ್ರಧಾನಿಯ ‘ಶೀಟಿಗೆ ಪ್ರತಿಕ್ರಿಯಿಸುವುದಿಲ್ಲ’ ಎಂದು ಕಾಂಗ್ರೆಸ್ ಹೇಳಿದೆ. 30 ಸದಸ್ಯರ ಸಂಸದೀಯ ಸ್ಥಾಯಿ ಸಮಿತಿಯಲ್ಲಿ ಕಾಂಗ್ರೆಸ್‌ನ ಮಾಣಿಕ್‌ರಾಂ ಟಾಗೋರ್, ವಿವೇಕ್ ತಂಖಾ, ಜಸ್ಬೀರ್ ಸಿಂಗ್ ಗಿಲ್ ಹಾಗೂ ಕುಲ್‌ದೀಪ್ ರೈ ಶರ್ಮಾ ಇದ್ದಾರೆ.

ಕಳೆದ 9 ವರ್ಷದಲ್ಲಿ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದು ಮಾತ್ರ ಸಾಧ್ಯವಾಗಿದೆ; ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಗೊಳ್ಳುತ್ತಿದೆ. ಮೂರನೆಯದಾದ ಯುಸಿಸಿ ಹಿಂದುತ್ವದ ಪ್ರಯೋಗಶಾಲೆ ಎನ್ನಿಸಿಕೊಂಡಿರುವ ಗುಜರಾತ್‌ನಲ್ಲಿ ಕೂಡ ಜಾರಿಯಾಗಿಲ್ಲ. ಮೊದಲ ಸಮಸ್ಯೆ ಎಂದರೆ, ಯುಸಿಸಿ ಹೇಗಿರಬೇಕು ಎಂಬುದು ಯಾರಿಗೂ ಸ್ಪಷ್ಟವಿಲ್ಲ. ಏಳು ದಶಕದಿಂದ ಈ ಬಗ್ಗೆ ಚರ್ಚೆ ನಡೆಯುತ್ತಿದ್ದರೂ, ಪರಿಶೀಲಿಸಿ ಚರ್ಚಿಸಬಹುದಾದ ಒಂದು ಪ್ರಸ್ತಾವನೆ-ಕರಡು ಈವರೆಗೆ ಸಿದ್ಧವಾಗಿಲ್ಲ. ಸಂವಿಧಾನದಲ್ಲಿ ಕೂಡ ಇರುವುದು ಯುಸಿಸಿಯ ಉಲ್ಲೇಖ ಮಾತ್ರವಷ್ಟೇ. ಸಂವಿಧಾನ ಕರ್ತೃಗಳು ಅದನ್ನು ‘ಸಮರ್ಥಿಸಿಕೊಳ್ಳಲಾಗದ ನಿರ್ದೇಶಕ ತತ್ವ’ಗಳ ಒಂದು ಭಾಗವಾಗಿ ಸೇರಿಸಿದ್ದಾರೆ; ಅಂದರೆ, ಇದು ಕಾನೂನಿನ ಬಲ ಹೊಂದಿಲ್ಲ. ಗೋವಾದಲ್ಲಿ 1867ರಿಂದಲೇ ಪೋರ್ಚುಗೀಸ್ ಸಿವಿಲ್ ಪ್ರೊಸೀಜರ್ ಸಂಹಿತೆ ಜಾರಿಯಲ್ಲಿದ್ದು, 1966ರಲ್ಲಿ ಅದಕ್ಕೆ ಹೊಸ ರೂಪ ಕೊಡಲಾಗಿದೆ. ತಮಾಷೆಯೆಂದರೆ, ಈ ಸಂಹಿತೆ ಕೂಡ ಬೇರೆ ಬೇರೆ ಸಮುದಾಯಗಳಿಗೆ ಬೇರೆಯದೇ ರೀತಿ ಅನ್ವಯಿಸುತ್ತದೆ; ಹಿಂದೂಗಳಿಗೆ ಎರಡು ವಿವಾಹವಾಗುವ ಅವಕಾಶ ನೀಡುತ್ತದೆ. 2018ರಲ್ಲಿ ಶಿವಸೇನೆಯ ಚಂದ್ರಕಾಂತ್ ಭಾವೂರಾವ್ ಕಾಯಿರೆ ಲೋಕಸಭೆಯಲ್ಲಿ ಮಂಡಿಸಿದ್ದ ಖಾಸಗಿ ಮಸೂದೆಯನ್ನು ಒಕ್ಕೂಟ ಸರಕಾರ ಮುಂದೂಡಲು ಹೊರಟರೆ, ನಿವೃತ್ತ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ರಾಷ್ಟ್ರೀಯ ಪರಿಶೀಲನೆ ಮತ್ತು ತನಿಖಾ ಸಮಿತಿಯೊಂದನ್ನು ನೇಮಿಸಬೇಕಾಗುತ್ತದೆ. ಈ ಸಮಿತಿ ಎಲ್ಲ ಸಂಹಿತೆಗಳನ್ನು ನಿರ್ಧರಿಸುತ್ತದೆ. ಇದು ಬಿಜೆಪಿ ಸಂಸತ್ತಿನ ಅನುಮತಿ ಇಲ್ಲದೆ ಹೊರಗೆ ಕಾನೂನುಗಳನ್ನು ರೂಪಿಸುತ್ತಿರುವ ಪ್ರಕ್ರಿಯೆಯ ಮುಂದುವರಿಕೆಯಾಗಿದ್ದು, ಅಕ್ರಮ ಮತ್ತು ಸಂವಿಧಾನಬಾಹಿರ. ಇಂಥ ಪ್ರವೃತ್ತಿ ಪ್ರಜಾತಂತ್ರವನ್ನು ಇನ್ನಷ್ಟು ದುರ್ಬಲಗೊಳಿಸುತ್ತದೆ.

ಬಿಜೆಪಿ ಈಗಾಗಲೇ ಗೋಹತ್ಯೆ, ಮತಾಂತರ ನಿಷೇಧವನ್ನು ಜಾರಿಗೊಳಿಸಿದೆ. ಗುಜರಾತ್ ವಿಧಾನಸಭೆ ಚುನಾವಣೆ ವೇಳೆ ಕಳೆದ ಅಕ್ಟೋಬರ್‌ನಲ್ಲಿ, ಉತ್ತರಾಖಂಡದಲ್ಲಿ ಮೇ ತಿಂಗಳಲ್ಲಿ ಹಾಗೂ ಮರು ಆಯ್ಕೆಯಾದಲ್ಲಿ ಹಿಮಾಚಲ ಪ್ರದೇಶದಲ್ಲಿ ಯುಸಿಸಿ ಅನುಷ್ಠಾನಕ್ಕೆ ಸಮಿತಿ ರಚಿಸುವುದಾಗಿ ಹೇಳಿಕೊಂಡಿತ್ತು. ಉತ್ತರಾಖಂಡ ಯುಸಿಸಿ ಸಮಿತಿಗೆ 4 ಲಕ್ಷಕ್ಕೂ ಅಧಿಕ ಸಲಹೆಗಳು ಬಂದಿವೆ. ಅವೆಲ್ಲವೂ ಪರಿಶೀಲನೆಯಾಗಬೇಕಿದೆ. ಈಶಾನ್ಯ ಭಾರತದ 7 ರಾಜ್ಯಗಳಲ್ಲಿ ನಾಲ್ಕರಲ್ಲಿ ಬಿಜೆಪಿ ಆಡಳಿತವಿದೆ; ಸಿಕ್ಕಿಂನಲ್ಲಿ ಎಸ್‌ಕೆಎಂ ಜೊತೆಗೆ, ನಾಗಾಲ್ಯಾಂಡ್ ಮತ್ತು ಮೇಘಾಲಯದಲ್ಲಿ ಪಾಲುದಾರನಾಗಿದೆ. ಇಲ್ಲಿ ಯುಸಿಸಿಗೆ ವ್ಯಾಪಕ ಪ್ರತಿರೋಧ ವ್ಯಕ್ತವಾಗಿದೆ. ಉತ್ತರಾಖಂಡ, ಗುಜರಾತ್ ಮತ್ತು ಅಸ್ಸಾಮಿನ ಬಿಜೆಪಿ ಸರಕಾರಗಳು ಯುಸಿಸಿಯನ್ನು ಬೆಂಬಲಿಸಿವೆ. ನಾಗರಿಕರು-ಸಂಘಸಂಸ್ಥೆಗಳ ಪ್ರತಿರೋಧದಿಂದ ಮಿಜೋರಾಂ-ನಾಗಾಲ್ಯಾಂಡಿನ ವಿಧಾನಸಭೆಗಳು ಯುಸಿಸಿಯನ್ನು ಅಂಗೀಕರಿಸುವ ಸಾಧ್ಯತೆ ಇಲ್ಲ. ಕಾನೂನು ಪರಿಣತರ ಪ್ರಕಾರ, ರಾಜ್ಯ ಮಟ್ಟದಲ್ಲಿ ಯುಸಿಸಿ ಜಾರಿ ಅಕ್ರಮ. ಇದಕ್ಕೆ ರಾಷ್ಟ್ರಪತಿಗಳ ಸಮ್ಮತಿ ಅತ್ಯಗತ್ಯ.

ಬಿಜೆಪಿ ಒಕ್ಕೂಟ ಶಿಲ್ಪಕ್ಕೆ ನಿರಂತರವಾಗಿ ಧಕ್ಕೆ ಮಾಡುತ್ತಿದೆ. ದೇಶದ ಎಲ್ಲ ನಾಗರಿಕರಿಗೂ ಅನ್ವಯಿಸುವ ಏಕೈಕ ಕಾಯ್ದೆ ಜಾರಿಗೊಳಿಸಲು ಒಕ್ಕೂಟ ತತ್ವಕ್ಕೆ ತಿಲಾಂಜಲಿ ನೀಡಬೇಕಾಗುತ್ತದೆ. ಫ್ರಾನ್ಸ್‌ನಂತೆ ಏಕಕೇಂದ್ರ ಪ್ರಭುತ್ವವಿದ್ದರೆ ಮಾತ್ರ ಇದು ಸಾಧ್ಯ. ಆದರೆ, ಉತ್ತರ ಮತ್ತು ದಕ್ಷಿಣ ಅಮೆರಿಕ ಒಟ್ಟಿಗೆ ಸೇರಿಸಿದರೆ ಅದನ್ನೂ ಮೀರುವಷ್ಟು ವಿಶಾಲ ವ್ಯಾಪ್ತಿಯ ದೇಶದಲ್ಲಿ ಇಂಥ ಸಮರೂಪದ ಕಾಯ್ದೆ ಅನ್ವಯ ಹೇಗೆ ಸಾಧ್ಯ? ವ್ಯಕ್ತಿಯೊಬ್ಬರು ಕರ್ನಾಟಕದಲ್ಲಿ ವಿವಾಹವಾಗಿ ದಿಲ್ಲಿಯಲ್ಲಿ ವಿಚ್ಛೇದನ ತೆಗೆದುಕೊಂಡರೆ, ಅದನ್ನು ಯಾವ ರಾಜ್ಯದ ಕಾನೂನಿನಡಿ ಪರಿಗಣಿಸಬೇಕು? ಗೊಂದಲಗಳ ರಾಜ್ಯ ಸೃಷ್ಟಿಯಾಗುತ್ತದೆ.

ಯುಪಿಎ ಕಾಲದಲ್ಲಿ ಹಿಂದೂ ಉತ್ತರಾಧಿಕಾರ ಕಾಯ್ದೆ 1956ಕ್ಕೆ ತಿದ್ದುಪಡಿ ತಂದು, ಮಹಿಳೆಯರಿಗೆ ಆಸ್ತಿಯಲ್ಲಿ ಸಮಾನಾಧಿಕಾರ ನೀಡಲಾಗಿತ್ತು. ಕೌಟುಂಬಿಕ ಹಿಂಸೆ ಕಾಯ್ದೆ, ಬಾಲಾಪರಾಧಿಗಳಿಗೆ ನ್ಯಾಯ ಕಾಯ್ದೆ, ಪೋಷಕರು ಹಾಗೂ ಹಿರಿಯ ನಾಗರಿಕರ ನಿರ್ವಹಣೆ ಹಾಗೂ ಕ್ಷೇಮದಂಥ ಕಾಯ್ದೆಗಳು ಜನಹಿತ ಕಾಯುವಲ್ಲಿ ಯಶಸ್ವಿಯಾಗಿವೆ. ಇಂಥ ವಿವೇಕಯುತ ಮಾರ್ಗ ಸಹ್ಯವಾಗುತ್ತಿಲ್ಲ. ಮಣಿಪುರ ಎರಡು ತಿಂಗಳಿನಿಂದ ಹೊತ್ತಿ ಉರಿಯುತ್ತಿದೆ. ಅದೇ ಹೊತ್ತಿನಲ್ಲಿ ಮಧ್ಯಪ್ರದೇಶದಲ್ಲಿ ಚುನಾವಣೆ ಪ್ರಯುಕ್ತ ಪಿಟೀಲು ವಾದನ ನಡೆಯುತ್ತಿದೆ. ಯುಸಿಸಿ ಬಿಜೆಪಿಯ ವಿಚ್ಛಿದ್ರಕಾರಿ, ಧ್ರುವೀಕರಣ ರಾಜಕಾರಣದ ಒಂದು ಉದಾಹರಣೆ ಅಷ್ಟೇ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ಮಾಧವ ಐತಾಳ್

contributor

Similar News

ಪತನದ ಕಳವಳ