‘ಚಾರ್ ಸೌ ಪಾರ್’ ಎಂದವರು ಈಗ ಬಂದು ತಲುಪಿದ್ದು ಎಲ್ಲಿಗೆ?

ಈಗ ರಚನೆಯಾಗುತ್ತಿರುವುದು ಮೋದಿ ಹಾಗೂ ಅಮಿತ್ ಶಾ ಅವರದ್ದೇ ಇಶಾರೆಯ ಹಾಗೆ ನಡೆಯುವ ಬಿಜೆಪಿ ಸರಕಾರ ಅಲ್ಲ. ತೀರಾ ಕಸರತ್ತು ಮಾಡಿ ರಚನೆಯಾಗುತ್ತಾ ಇರುವುದು ‘ಚೌಕಾಸಿ ಸರಕಾರ’. ಈವರೆಗಿನ ಹತ್ತು ವರ್ಷಗಳ ಮೋದಿ ಸರಕಾರಕ್ಕೂ ಈಗ ಬರುತ್ತಿರುವ ಈ ಚೌಕಾಸಿ ಸರಕಾರಕ್ಕೂ ಅಜಗಜಾಂತರ ಇರಲಿದೆ. ಚಂದ್ರಬಾಬು ನಾಯ್ಡು ಮತ್ತು ನಿತೀಶ್ ಕುಮಾರ್ ಎನ್‌ಡಿಎ ಭಾಗವಾಗಲಿದ್ದಾರೆ. ಆದರೆ ಹಳೆಯ ಅನುಭವಗಳು ಅವರನ್ನು ಕಾಡದೇ ಇರುವುದಿಲ್ಲ.

Update: 2024-06-07 06:20 GMT

‘ಇಸ್ ಬಾರ್ ಚಾರ್ ಸೌ ಪಾರ್’ ಎಂದು ಹೋದಲ್ಲಿ ಬಂದಲ್ಲಿ ಹೇಳಿ 250 ಎಂಪಿ ಸೀಟು ಕೂಡ ಇಲ್ಲದ ಸ್ಥಿತಿಗೆ ಬಂದು ತಲುಪಿದೆ ಈಗ ಮೋದಿಜಿ ಹಾಗೂ ಬಿಜೆಪಿಯ ಸ್ಥಿತಿ.

ಹಾಗಾಗಿ ಈ ಬಾರಿ ಮೋದಿ ಹಾಗೂ ಅಮಿತ್ ಶಾ ಅವರದ್ದೇ ಇಶಾರೆಯ ಹಾಗೆ ನಡೆಯುವ ಬಿಜೆಪಿ ಸರಕಾರ ಅಲ್ಲ. ಈಗ ತೀರಾ ಕಸರತ್ತು ಮಾಡಿ ರಚನೆಯಾಗುತ್ತಾ ಇರುವುದು ‘ಚೌಕಾಸಿ ಸರಕಾರ’. ಈವರೆಗಿನ ಹತ್ತು ವರ್ಷಗಳ ಮೋದಿ ಸರಕಾರಕ್ಕೂ ಈಗ ಬರುತ್ತಿರುವ ಈ ಚೌಕಾಸಿ ಸರಕಾರಕ್ಕೂ ಅಜಗಜಾಂತರ ಇರಲಿದೆ.

ಚಂದ್ರಬಾಬು ನಾಯ್ಡು ಮತ್ತು ನಿತೀಶ್ ಕುಮಾರ್ ಎನ್‌ಡಿಎ ಭಾಗವಾಗಲಿದ್ದಾರೆ. ಆದರೆ ಹಳೆಯ ಅನುಭವಗಳು ಅವರನ್ನು ಕಾಡದೇ ಇರುವುದಿಲ್ಲ.

ಇದೇ ಚಂದ್ರಬಾಬು ನಾಯ್ಡು ಮೋದಿಯನ್ನು ಹಾರ್ಡ್‌ಕೋರ್ ಭಯೋತ್ಪಾದಕ ಎಂದಿದ್ದನ್ನು ಸ್ವತಃ ನಾಯ್ಡು ಆಗಲಿ ಮೋದಿಯಾಗಲಿ ಮರೆತಿರಲಿಕ್ಕಿಲ್ಲ. ಆದರೆ ಕುರ್ಚಿ ಉಳಿಸಿಕೊಳ್ಳುವ ಸಲುವಾಗಿ ಮೋದಿ ಯಾರ ಜೊತೆಯಾದರೂ ಹೋಗುತ್ತಾರೆ. ತನ್ನನ್ನು ಭಯೋತ್ಪಾದಕ ಎಂದವರ ಜೊತೆಗೂ ಹೋಗುತ್ತಾರೆ.

ಮೋದಿ ಅಲ್ಪಸಂಖ್ಯಾತರ ವಿರುದ್ಧ ದ್ವೇಷ ಕಾರುವುದು ಗೊತ್ತಿದ್ದೂ ನಾಯ್ಡು 2014ರಿಂದ 2018ರವರೆಗೆ ಮೋದಿ ಸರಕಾರದ ಭಾಗವಾಗಿದ್ದರು. ಮೋದಿಯ ನೋಟ್ ಬ್ಯಾನ್ ಕ್ರಮವನ್ನು ನಾಯ್ಡು ಸಮರ್ಥಿಸಿದ್ದರು. ಅಲ್ಲಿಂದ ಹೊರಹಾಕಿಸಿಕೊಂಡ ಬಳಿಕ ಮೋದಿಯನ್ನು ಭಯೋತ್ಪಾದಕ ಎಂದು ಜರೆದರು.

ನಿತೀಶ್ ಕುಮಾರ್ ಮತ್ತು ನಾಯ್ಡು ಜೊತೆಗಿನ ಮೋದಿ ರಾಜಕೀಯ ಸಂಬಂಧದ ಉದ್ದಕ್ಕೂ ಇರುವುದು ಅವಿಶ್ವಾಸ, ಬೆನ್ನ ಹಿಂದಿನಿಂದ ದಾಳಿ, ಎದುರಿನಿಂದ ಆಹಾ ಎನ್ನಿಸುವಂಥ ಸ್ನೇಹದ ನಗೆ.

ಬಿಹಾರದಲ್ಲಿ ಈ ಬಾರಿ ನಿತೀಶ್ ಜೊತೆ ಮತ್ತೆ ಮೈತ್ರಿ ಮಾಡಿಕೊಂಡರು ಮೋದಿ. ಹಾಗೆಯೇ ಆಂಧ್ರದಲ್ಲಿ ತನ್ನನ್ನು ಭಯೋತ್ಪಾದಕ ಎಂದಿದ್ದ ನಾಯ್ಡು ಜೊತೆಗೂ ಮತ್ತೆ ಮೈತ್ರಿ ಮಾಡಿಕೊಂಡರು. ಹಿಂದಿನ ಯಾವುದೂ ಮೋದಿ ಜೊತೆ ಮೈತ್ರಿ ಮಾಡಿಕೊಳ್ಳುವುದಕ್ಕೆ ನಾಯ್ಡುಗೆ ಅಡ್ಡಿಯಾಗಲಿಲ್ಲ.

ಈ ವಿಚಾರದಲ್ಲಿ ಮೋದಿ ಕೂಡ ನಾಯ್ಡುಗಿಂತ ಯಾವ ಲೆಕ್ಕದಲ್ಲೂ ಕಡಿಮೆಯಿರಲಿಲ್ಲ. 2019ರ ಹೊತ್ತಿಗೆ ಮೋದಿ ಕೂಡ ನಾಯ್ಡು ಬಗ್ಗೆ ಆಡಿದ್ದ ಮಾತುಗಳು ಒಂದೆರಡಲ್ಲ.

ನಾಯ್ಡುವನ್ನು ಬಾಹುಬಲಿ ಸಿನೆಮಾದ ವಿಲನ್ ಬಲ್ಲಾಳದೇವನ ಜೊತೆ ಹೋಲಿಸಿ ಮೋದಿ ಟೀಕಿಸಿದ್ದರು. ಆತ ತನ್ನ ಸಹೋದರನನ್ನೇ ಅಧಿಕಾರದಿಂದ ದೂರ ತಳ್ಳಲು ತಂತ್ರ ಮಾಡಿದವನಾಗಿದ್ದ.

ಪಕ್ಷ ಬದಲಿಸುವುದರಲ್ಲಿ, ಬೇರೆ ಬೇರೆ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವುದರಲ್ಲಿ, ಸ್ವಂತ ಮಾವನಿಗೇ ವಿಶ್ವಾಸಘಾತ ಮಾಡಿದ್ದರಲ್ಲಿ ಸೀನಿಯರ್ ಎಂದು ನಾಯ್ಡು ಬಗ್ಗೆ ಕಟುವಾಗಿ ಮಾತನಾಡಿದ್ದರು ಮೋದಿ.

ನಾಯ್ಡುವನ್ನು ಮೋದಿ ಆಗ ‘ಯೂ ಟರ್ನ್ ಬಾಬು’ ಎಂದೂ ಲೇವಡಿ ಮಾಡಿದ್ದಿತ್ತು.

‘‘ಆಂಧ್ರದ ಸಂಸ್ಕೃತಿಗೆ ಯೂ ಟರ್ನ್ ಬಾಬುವಿನಿಂದ ಅಪಾಯ ಇದೆ’’ ಎಂದು ಮೋದಿ ವಾಗ್ದಾಳಿ ನಡೆಸಿದ್ದರು.

2019ರ ಚುನಾವಣೆಗೆ ಮೊದಲು ‘ಮೋದಿ ಈಸ್ ಮಿಸ್ಟೇಕ್’ ಎಂಬ ಹ್ಯಾಶ್‌ಟ್ಯಾಗ್ ಬಳಸಿ ನಾಯ್ಡು ಟ್ವೀಟ್ ಮಾಡಿದ್ದರು. ಮೋದಿಯ ವಿಭಜನೆ ರಾಜಕಾರಣವನ್ನು ಟೀಕಿಸಿದ್ದರು. ಮೋದಿ ಹೇಗೆ ದೇಶದ ಸ್ವಾಯತ್ತ ಮತ್ತು ಪ್ರತಿಷ್ಠಿತ ಸಂಸ್ಥೆಗಳನ್ನು ಮುಗಿಸಿಬಿಟ್ಟಿದ್ದಾರೆ ಎಂಬುದನ್ನು ನಾಯ್ಡು ಹೇಳುತ್ತಿದ್ದರು. ಸಾಂವಿಧಾನಿಕ ಸಂಸ್ಥೆಗಳ ಸ್ವಾಯತ್ತತೆ ಮತ್ತು ಪ್ರಜಾಪ್ರಭುತ್ವ ಆಪಾಯದಲ್ಲಿದೆ ಎಂದು ಹೇಳುತ್ತಿದ್ದರು.

ಇನ್ನೊಂದೆಡೆ ಮೋದಿ, ದೇಶದ ತುಂಬ ಸುಳ್ಳು ಹರಡುವುದರಲ್ಲಿ ಕೆಲವರು ತೊಡಗಿದ್ದಾರೆ ಎಂದು ನಾಯ್ಡುವನ್ನು ಗುರಿ ಮಾಡಿ ಹೇಳಿದ್ದರು.

ಮೋದಿ ತನ್ನ ವೈರಿಗಳನ್ನು ಮರೆಯುವುದಿಲ್ಲ. ಅವರನ್ನು ಯಾವಾಗ ಹೇಗೆ ಆಟ ಆಡಿಸಬಹುದೆಂಬ ಲೆಕ್ಕಾಚಾರವನ್ನು ಅವರು ಮಾಡುತ್ತಲೇ ಇರುತ್ತಾರೆ.

ತನಿಖಾ ಸಂಸ್ಥೆಗಳ ಮೇಲೆ ಹಿಡಿತ, ಮೀಡಿಯಾಗಳ ಮೇಲೆ ನಿಯಂತ್ರಣ ಹೊಂದಿದ್ದ ಮೋದಿ, ಎದುರಾಳಿಯ ಮನೆ ಒಡೆಯುತ್ತಿದ್ದುದು, ಆ ಎದುರಾಳಿಯ ಮನೆಯಿಂದಲೇ ಕೆಲವರು ತಮ್ಮ ಪಾಳಯವನ್ನು ಸೇರುವಂತೆ ಮಾಡುತ್ತಿದ್ದುದು ಗೊತ್ತೇ ಇದೆ.

ಆದರೆ ಅದೇ ಮೋದಿ ಈಗ ಅದೇ ಎದುರಾಳಿಗಳನ್ನು ಸರಕಾರ ರಚನೆಗಾಗಿ ಓಲೈಸಬೇಕಾಗಿದೆ. ಅವರನ್ನು ತನ್ನ ಅಕ್ಕಪಕ್ಕದಲ್ಲೇ ಕೂರಿಸಿಕೊಂಡು ಆಗಾಗ ಅವರನ್ನು ನೋಡಿ ಮುಗುಳ್ನಗೆ ನೀಡಬೇಕಾಗಿದೆ.

ಮೈತ್ರಿ ವಿಚಾರದಲ್ಲಿ ಯಾರ ಬಗ್ಗೆ ಅತ್ಯಂತ ಕೆಟ್ಟದಾಗಿ ಮಾತನಾಡಿದ್ದರೊ ಅದೇ ನಾಯ್ಡು ಬಳಿ ಈಗ ಮೋದಿ ಬೆಂಬಲ ಕೇಳಿ ನಿಲ್ಲಬೇಕಾಗಿದೆ. ಯಾರನ್ನು ಸತತ ಜರೆದಿದ್ದರೊ ಅದೇ ನಿತೀಶ್ ಕುಮಾರ್ ಅವರನ್ನು ಕೇಳಬೇಕಾಗಿ ಬಂದಿದೆ.

ಮೋದಿ ಈ ಚುನಾವಣೆ ಹೊತ್ತಲ್ಲಿ ಮಾಡಿದ್ದ ಭಾಷಣಗಳನ್ನು ಗಮನಿಸಿದರೆ, ವಿಪಕ್ಷ ಮೈತ್ರಿಯ ಬಗ್ಗೆ ಅವರು ಹೇಗೆಲ್ಲ ಮಾತಾಡಿದ್ದರು ಎಂಬುದನ್ನು ನೋಡಬಹುದು.

‘‘ಕೊಳ್ಳೆ ಹೊಡೆಯುವವರ ಅಡ್ಡಾ’’ ಎಂದಿದ್ದರು.

‘‘ಮೂರಂಕಿಯ ಸೀಟು ಗೆಲ್ಲಲಾರದ ಈ ‘ಇಂಡಿಯಾ’ ಒಕ್ಕೂಟದವರು ಸರಕಾರದ ಬಾಗಿಲವರೆಗಾದರೂ ಹೋಗಬಲ್ಲರಾ?’’ ಎಂದು ವ್ಯಂಗ್ಯವಾಡಿದ್ದರು ಮೋದಿ. ‘‘ಒಂದು ವರ್ಷ ಒಬ್ಬ ಪ್ರಧಾನಿ ಎನ್ನುವಂತಹ ಸ್ಥಿತಿ. ಐದು ವರ್ಷ ಅವಕಾಶ ಸಿಕ್ಕಿತೆಂದರೆ ಐವರು ಪ್ರಧಾನಿಗಳು’’ ಎಂದು ಕೂಡ ಮೋದಿ ಕೆಣಕಿ ಲೇವಡಿ ಮಾಡಿದ್ದರು.

ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ರಚನೆಯಾದ ಬಗ್ಗೆಯೂ ಟೀಕಿಸಿ, ಅರ್ಧರ್ಧ ಅವಧಿಗೆ ಒಬ್ಬೊಬ್ಬ ಸಿಎಂ ಎಂಬ ಫಾರ್ಮುಲಾ ಬಗ್ಗೆ ಹೇಳಿ ಟೀಕಿಸಿದ್ದರು.

ಛತ್ತೀಸ್‌ಗಡ, ರಾಜಸ್ಥಾನಗಳಲ್ಲಿಯೂ ಅದೇ ಫಾರ್ಮುಲಾ ಮಾಡಿದ್ದರು, ಕಡೆಗೆ ಆದದ್ದೇನು? ಆ ಫಾರ್ಮುಲಾ ಜಾರಿಯಾಗಲೇ ಇಲ್ಲ ಎಂದು ವಾಗ್ದಾಳಿ ನಡೆಸಿದ್ದರು.

ಎನ್‌ಡಿಎ 2014ರಿಂದ 2024ರವರೆಗೆ ತನ್ನ ಸರಕಾರವನ್ನು ‘ಮೋದಿ ಸರಕಾರ’ ಎಂದೇ ಕರೆಯುತ್ತಾ ಬಂತು. ಯಾವತ್ತೂ ಎನ್‌ಡಿಎ ಸರಕಾರ ಎನ್ನಲೇ ಇಲ್ಲ. ಎನ್‌ಡಿಎ ಎಂಬ ಹೆಸರೇ ಮರೆತು ಮೂಲೆ ಸೇರುವ ಹಾಗೆ ಮೋದಿ, ಶಾ ಹತ್ತು ವರ್ಷ ಎಲ್ಲವನ್ನೂ ಆವರಿಸಿಕೊಂಡಿದ್ದರು. ಪ್ರಚಾರದ ಹೋರ್ಡಿಂಗ್‌ಗಳನ್ನು ನೋಡಿದ್ದರೂ ನಿಮಗೆ ಕಾಣಿಸುತ್ತಿದ್ದದ್ದು ಮೋದಿ ಮಾತ್ರ. ಮತ್ತೊಬ್ಬ ನಾಯಕನನ್ನು ನೋಡುವುದು ಸಾಧ್ಯವೇ ಇರಲಿಲ್ಲ. ಎಲ್ಲಾ ಕಡೆ ಮೋದಿ ಮಾತ್ರ ಇರುತ್ತಿದ್ದರು. ಎನ್‌ಡಿಎ ಮೈತ್ರಿಯಲ್ಲಿದ್ದ ಪಾಲುದಾರ ಪಕ್ಷಗಳ ನಾಯಕರಿಗೂ ಪೋಸ್ಟರುಗಳಲ್ಲಿ ಕಾಣಿಸಿಕೊಳ್ಳಲು ಅವಕಾಶ ಇರಲಿಲ್ಲ. ನಿತೀಶ್ ಕುಮಾರ್ ಕೂಡ ಇರಲಿಲ್ಲ.

ಹೀಗೆಲ್ಲ ಇರುವಾಗ, ಈಗ ನಿತೀಶ್ ಮತ್ತು ನಾಯ್ಡು ಅವರು ಮೋದಿ ಜೊತೆಗೆ ಹೋಗುವುದನ್ನು ನೋಡಿದರೆ ಮುಂದಿನ ದಿನಗಳಲ್ಲಿ ಅವರ ಪಕ್ಷಗಳು ಮೋದಿ ಬೇಟೆಗೆ ತುತ್ತಾಗಲೂ ಬಹುದು. ಯಾಕೆಂದರೆ ಮೋದಿ ಕಾಲದಲ್ಲಿ ಅವರ ಜೊತೆ ಹೋದ ಪಕ್ಷಗಳು ಛಿದ್ರವಾಗಿವೆ. ಮೋದಿಯ ಬಿಜೆಪಿಯಲ್ಲಿ ವಿಲೀನಗೊಂಡು ಕಣ್ಮರೆಯಾಗಿವೆ. ಅದರ ನಾಯಕರು ಮೋದಿ ಪಕ್ಷದಲ್ಲಿ ಸೇರಿಹೋಗಿದ್ದಾರೆ.

ರಾಮ್ ವಿಲಾಸ್ ಪಾಸ್ವಾನ್ ನಿಧನದ ಬಳಿಕ ಲೋಕ ಜನಶಕ್ತಿ ಪಕ್ಷದಲ್ಲಿಯೇ ಒಡಕು ಮೂಡಿತು. ಬಿಜೆಪಿಯ ಹಳೇ ದೋಸ್ತಿ ಪಕ್ಷವಾಗಿದ್ದ ಶಿವಸೇನೆ ಹೇಗೆ ಒಡೆದುಹೋಯಿತು ಎಂಬುದನ್ನು ಕೂಡ ನೋಡಿದ್ದೇವೆ.

ಪಂಜಾಬ್‌ನ ಅಕಾಲಿ ದಳ ಕೂಡ ಹಳೇ ಪಾಲುದಾರ ಪಕ್ಷವಾಗಿತ್ತು. ಆಮೇಲೆ ಅದರ ಕಥೆಯೇನಾಯಿತು ಎನ್ನುವುದು ಎಲ್ಲರಿಗೂ ಗೊತ್ತಿದೆ.

ಹಿಂದೆ ಏನೆಲ್ಲ ಆಗಿತ್ತು ಎಂಬುದು ಗೊತ್ತಿದ್ದೂ ನಿತೀಶ್ ಮತ್ತು ನಾಯ್ಡು ಇಬ್ಬರೂ ಮೋದಿ ಜೊತೆ ಹೋಗುತ್ತಿದ್ದಾರೆ ಎಂದರೆ ಸ್ವಲ್ಪ ಸಮಯದ ಬಳಿಕ ಅವರಿಗೆ ಭಯಂಕರ ದುಃಸ್ವಪ್ನ ಕಾಡಲಿದೆ.

2019ರಲ್ಲಿ ಮೋದಿಯನ್ನು ಸೋಲಿಸಲು ನಾಯ್ಡು ತೃತೀಯ ರಂಗದ ಬಗ್ಗೆ ಪ್ರಯತ್ನ ನಡೆಸಿದ್ದರು. ವಿಪಕ್ಷಗಳ ನಾಯಕರನ್ನು ಭೇಟಿಯಾಗಲು ದೇಶಾದ್ಯಂತ ತಿರುಗಾಡಿದ್ದರು. 2018ರ ನವೆಂಬರ್‌ನಲ್ಲಿಯೇ ರಾಹುಲ್ ಗಾಂಧಿಯವರನ್ನು ನಾಯ್ಡು ಭೇಟಿಯಾಗಿದ್ದರು. ಬಿಜೆಪಿ ವಿರುದ್ಧ ವಿಪಕ್ಷಗಳ ಮೈತ್ರಿ ಕಟ್ಟಲು ಅವರು ಪ್ರಯತ್ನ ನಡೆಸಿದ್ದರು.

ಬಳಿಕ 2019ರಲ್ಲಿ ವಿಧಾನಸಭೆ ಚುನಾವಣೆಯನ್ನು ನಾಯ್ಡು ಸೋತರು.

ಎನ್‌ಡಿಎ ಮೈತ್ರಿಯಿಂದ ಅವರು ಹೊರಗೂ ಬಂದಿದ್ದರು. ಆಂಧ್ರಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ಅವರು ಇಟ್ಟಿದ್ದ ಬೇಡಿಕೆಗೆ ಮೋದಿ ಸರಕಾರ ಒಪ್ಪಿರಲಿಲ್ಲ. ಆಗ ಎನ್‌ಡಿಎಯಿಂದ ನಾಯ್ಡು ಬೇರೆಯಾದರು.

ಆದರೆ ಆಗ ಬಿಜೆಪಿಯೊಂದೇ ಬಹುಮತ ಗಳಿಸಿ, ಯಾರೂ ತನ್ನನ್ನು ಏನೂ ಮಾಡದ ಹಾಗೆ ಬಲಿಷ್ಠವಾಗಿತ್ತು. ಸ್ಪಷ್ಟ ಬಹುಮತ ಇರುವುದರಿಂದಲೇ ಮೋದಿ ಆಂಧ್ರಕ್ಕೆ ವಿಶೇಷ ಸ್ಥಾನಮಾನದ ಬೇಡಿಕೆ ನಿರಾಕರಿಸಿದ್ದಾರೆ ಎಂಬುದು ನಾಯ್ಡು ಆರೋಪವಾಗಿತ್ತು.

ಆದರೆ ಈ ಬಾರಿ ಬಿಜೆಪಿಯ ಬಳಿ ಬಹುಮತವೇ ಇಲ್ಲ. ಹೀಗಾಗಿ ಕುರ್ಚಿ ಉಳಿಸಿಕೊಳ್ಳಲು ಓಲೈಸುವ ಕಸರತ್ತಿಗೆ ಬಿದ್ದಿರುವ ಮೋದಿ, ಆಂಧ್ರದ ಅಭಿವೃದ್ಧಿಗಾಗಿ ಜೊತೆಯಾಗಿ ಕೆಲಸ ಮಾಡೋಣ ಎಂದಿದ್ದಾರೆಯೇ ಹೊರತು, ವಿಶೇಷ ಸ್ಥಾನಮಾನದ ಬಗ್ಗೆ ಏನನ್ನೂ ಹೇಳಿಲ್ಲ.

ಬಿಹಾರಕ್ಕೆ ವಿಶೇಷ ಸ್ಥಾನಮಾನಕ್ಕಾಗಿ ನಿತೀಶ್ ಕುಮಾರ್ ಕೂಡ ಬೇಡಿಕೆ ಇಡುತ್ತಲೇ ಬಂದಿದ್ದಾರೆ. 10 ವರ್ಷಗಳಲ್ಲಿ ಮೋದಿ ಅಂತಹ ಬೇಡಿಕೆಗಳ ವಿಚಾರದಲ್ಲಿ ತಲೆ ಕೆಡಿಸಿಕೊಂಡದ್ದೇ ಇಲ್ಲ.

2014ರಲ್ಲಿ ಅಧಿಕಾರಕ್ಕೆ ಬಂದ ನಂತರ ರಾಜ್ಯವೊಂದಕ್ಕೆ ವಿಶೇಷ ಸ್ಥಾನಮಾನ ನೀಡುವುದನ್ನೇ ಮೋದಿ ನಿಲ್ಲಿಸಿಬಿಟ್ಟರು. ಇರುವ ವಿಶೇಷ ಸ್ಥಾನಮಾನವನ್ನು ಕಿತ್ತು ಹಾಕುವಲ್ಲೇ ಅವರ ವಿಶೇಷ ಮುತುವರ್ಜಿ ಇತ್ತು. ಈಗ ಎನ್‌ಡಿಎ ಬೆಂಬಲಕ್ಕೆ ನಿಂತಿರುವ ನಾಯ್ಡು ತಮ್ಮ ಷರತ್ತಿನ ಭಾಗವಾಗಿ ಆಂಧ್ರಕ್ಕೆ ವಿಶೇಷ ಸ್ಥಾನಮಾನದ ಬೇಡಿಕೆ ಇಡುವ ಧೈರ್ಯ ತೋರಿಸುವರೇ ಎಂದು ಜೈರಾಮ್ ರಮೇಶ್ ಕೇಳಿದ್ದಾರೆ.

ಮನಮೋಹನ್ ಸಿಂಗ್ ಸರಕಾರ ಆಂಧ್ರಕ್ಕೆ ವಿಶೇಷ ಸ್ಥಾನಮಾನದ ಭರವಸೆ ನೀಡಿತ್ತು. ‘ಇಂಡಿಯಾ’ ಒಕ್ಕೂಟ ಆ ಭರವಸೆಯನ್ನು ಪೂರ್ಣಗೊಳಿಸುವ ಉದ್ದೇಶ ಹೊಂದಿದೆ. ಪ್ರಣಾಳಿಕೆಯಲ್ಲಿ ಕೂಡ ಆ ಭರವಸೆ ನೀಡಲಾಗಿತ್ತು ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.

ಈ ಭರವಸೆ ಈಡೇರಬಹುದೆಂಬ ಕಾರಣಕ್ಕೆ ನಾಯ್ಡು ‘ಇಂಡಿಯಾ’ ಒಕ್ಕೂಟ ಸೇರುವರೆ?

ನಿತೀಶ್ ಕೂಡ ಬರಲೊಪ್ಪುವರೆ?

ಸದ್ಯಕ್ಕಂತೂ ಅವರಿಬ್ಬರೂ ಎನ್‌ಡಿಎ ಜೊತೆಗಿರುವ ಸುಳಿವು ಕೊಟ್ಟಿದ್ದಾರೆ.

ಮೈತ್ರಿ ಸರಕಾರಗಳು ಕೊಳ್ಳೆ ಹೊಡೆಯುವ ಸರಕಾರಗಳಾಗುತ್ತವೆ ಎಂದೆಲ್ಲ ತತ್ವ ಹೇಳುತ್ತಿದ್ದ ಮಡಿಲ ಮೀಡಿಯಾಗಳು ಈಗೇನು ಹೇಳುತ್ತವೆ?

ಮೋದಿ ಮೂರನೇ ಅವಧಿಗೆ ಇತರರ ಬೆಂಬಲ ನಂಬಿ ಪ್ರಧಾನಿಯಾಗು ವಾಗ ಮಡಿಲ ಮೀಡಿಯಾಗಳ ಇದೇ ಮಾತು ಮೋದಿ ವಿಚಾರಕ್ಕೂ ಅನ್ವಯವಾಗಲಿದೆಯೇ?

ಇದೆಲ್ಲದರ ನಡುವೆ ನಾಯ್ಡು ಯಾವ್ಯಾವುದೋ ಖಾತೆಗಳಿಗಾಗಿ ಬೇಡಿಕೆ ಇಟ್ಟಿದ್ದಾರೆ ಎಂಬ ಸುದ್ದಿಗಳು ಹರಿದಾಡತೊಡಗಿವೆ.

ನಿತೀಶ್ ಕುಮಾರ್, ಚಿರಾಗ್ ಪಾಸ್ವಾನ್ ಕೂಡ ನಿರ್ದಿಷ್ಟ ಮಂತ್ರಿ ಪದವಿ ಕೇಳುತ್ತಿದ್ದಾರೆ ಎಂಬ ಸುದ್ದಿಗಳಿವೆ.

ಇದೇ ‘ಇಂಡಿಯಾ’ ಮೈತ್ರಿಕೂಟದ ವಿಚಾರದಲ್ಲಾಗಿದ್ದರೆ ‘‘ಕೊಳ್ಳೆ ಹೊಡೆಯಲು ಖಾತೆ ಕೇಳುವುದು ಶುರುವಾಗಿದೆ’’ ಎಂದು ಮಡಿಲ ಮೀಡಿಯಾಗಳು ಕಥೆ ಶುರು ಮಾಡಿರುತ್ತಿದ್ದವು.

ಮುಸ್ಲಿಮ್ ಮೀಸಲಾತಿಯ ವಿರೋಧಿಯಾಗಿ ಕಾಣಿಸಿಕೊಂಡವರು ಮೋದಿ. ಆದರೆ ನಾಯ್ಡು ಮತ್ತು ನಿತೀಶ್ ಮುಸ್ಲಿಮ್ ಮೀಸಲಾತಿಯ ಬೆಂಬಲಿಗರಾಗಿದ್ದಾರೆ. ನಾಯ್ಡು ಅಂತೂ ಮುಸ್ಲಿಮ್ ಮೀಸಲಾತಿಯನ್ನು ರಕ್ಷಿಸುವ ಭರವಸೆಯನ್ನೇ ಕೊಟ್ಟಿದ್ದಾರೆ.

ಬಿಹಾರದಲ್ಲಿ ಕರ್ಪೂರಿ ಠಾಕೂರ್ ಕಾಲದಿಂದಲೂ ಮುಸ್ಲಿಮರಿಗೆ ಮೀಸಲಾತಿ ಇದೆ ಮತ್ತು ನಿತೀಶ್ ಕುಮಾರ್ ಸರಕಾರ ಕೂಡ ಅದಕ್ಕೆ ಬದ್ಧವಾಗಿದೆ.

ಹೀಗಿರುವಾಗ, ಮುಸ್ಲಿಮ್ ಮೀಸಲಾತಿ ವಿರೋಧಿಸುವ ಮೋದಿ,

ಮುಸ್ಲಿಮ್ ಮೀಸಲಾತಿಯ ಕಟ್ಟಾ ಬೆಂಬಲಿಗರಾದ ಇಬ್ಬರು ನಾಯಕರ ಬೆಂಬಲದೊಂದಿಗೆ 3ನೇ ಬಾರಿಗೆ ಪ್ರಧಾನಿಯಾಗುತ್ತಿರುವುದು ಎಂತಹ ವ್ಯಂಗ್ಯವಲ್ಲವೆ?

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಎಸ್. ಸುದರ್ಶನ್

contributor

Similar News