ಬೇರೆ ನೆಲದಲ್ಲಿ ಆಶ್ರಯಕ್ಕಾಗಿ ಕೋರಬೇಕಾದ ಸ್ಥಿತಿ ಶೇಕ್ ಹಸೀನಾರಿಗೆ ಏಕೆ ಬಂತು?
15 ವರ್ಷಗಳಿಂದ ಪ್ರಧಾನಿ ಹುದ್ದೆಯಲ್ಲಿದ್ದ ಹಸೀನಾ ಸರ್ವಾಧಿಕಾರಿ ಎಂಬ ಆರೋಪ ಹೊತ್ತಿದ್ದರು.
ಮುಜೀಬುರ್ ರೆಹಮಾನ್ ಅವರ ಹೆಸರನ್ನು ತನ್ನ ಕೆಟ್ಟ ರಾಜಕೀಯಕ್ಕೆ ಬಳಸಿಕೊಳ್ಳುತ್ತ, ಜನರನ್ನು ಭಯೋತ್ಪಾದಕರೆಂದು ಜರೆಯುತ್ತ ಅಧಿಕಾರ ಅನುಭವಿಸುತ್ತಿದ್ದ ಹಸೀನಾ ಅಂತಿಮವಾಗಿ ದೇಶವನ್ನೇ ಬಿಟ್ಟು ಪಲಾಯನ ಮಾಡಬೇಕಾಯಿತು.
ಚುನಾವಣೆಗಳೆಲ್ಲವೂ ಅಕ್ರಮ ಎಂಬ ಆರೋಪಗಳೂ ಇದ್ದವು. ಅದರ ಪರಿಣಾಮ, ಅವರನ್ನೀಗ ಬೇರೆ ನೆಲದಲ್ಲಿ ಆಶ್ರಯ ಕೇಳಿಕೊಂಡು ಹೋಗಬೇಕಾದ ಸ್ಥಿತಿಗೆ ತಂದು ನಿಲ್ಲಿಸಿದೆ.
ಬಾಂಗ್ಲಾದೇಶದಲ್ಲಿನ ದಂಗೆಯ ಸ್ಥಿತಿ ಭಾರತಕ್ಕೂ ತಲೆನೋವಾಗಿ ಪರಿಣಮಿಸಿದೆ. ಈ ಹಂತದಲ್ಲಿ ಭಾರತ ಹೇಗೆ ಅಲ್ಲಿನ ಸ್ಥಿತಿಗೆ ಪ್ರತಿಕ್ರಿಯಿಸುತ್ತಿದೆ ಎಂಬುದರ ಕಡೆ ಜಗತ್ತಿನ ಕಣ್ಣಿರುತ್ತದೆ. ಬಾಂಗ್ಲಾದೇಶದಲ್ಲಿನ ಹೊಸ ವ್ಯವಸ್ಥೆಯ ಜೊತೆ ಮುಂದಿನ ದಿನಗಳಲ್ಲಿ ಮಾತುಕತೆ ನಡೆಯಬೇಕಿದ್ದು, ಪರಿಸ್ಥಿತಿ ತಿಳಿಗೊಳ್ಳುವವರೆಗೂ ಕಾಯಬೇಕಾಗಿದೆ. ಭಾರತ ಈಗ ಪದಚ್ಯುತ ಶೇಕ್ ಹಸೀನಾರಿಗೆ ಅವರು ಮುಂದೇನು ಮಾಡಬೇಕೆಂಬುದನ್ನು ನಿರ್ಧರಿಸುವವರೆಗೂ ಆಶ್ರಯ ಕೊಡಲಿದೆ.
ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಮಂಗಳವಾರ ರಾಜ್ಯಸಭೆಯಲ್ಲಿ ಮಾತನಾಡುತ್ತ ಬಾಂಗ್ಲಾದೇಶದಲ್ಲಿನ ಬೆಳವಣಿಗೆಗಳು ಮತ್ತು ನಂತರದ ಸ್ಥಿತಿಯ ಬಗ್ಗೆ ಮಾಹಿತಿ ನೀಡಿದ್ದಾರೆ.
ಬಾಂಗ್ಲಾದೇಶದಲ್ಲಿ ಪ್ರಸಕ್ತ 19,000 ಭಾರತೀಯ ಪ್ರಜೆಗಳಿದ್ದಾರೆ. ಅವರಲ್ಲಿ 9,000 ವಿದ್ಯಾರ್ಥಿಗಳು ಇದ್ದಾರೆ.
ಜುಲೈನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಾಂಗ್ಲಾದೇಶ ತೊರೆದು ವಿದ್ಯಾರ್ಥಿಗಳು ಭಾರತಕ್ಕೆ ಮರಳಿದ್ದರು ಎಂದಿದ್ದಾರೆ.
ಭಾರತ ಢಾಕಾದೊಂದಿಗೆ ಸಂಪರ್ಕದಲ್ಲಿದ್ದು, ಅಲ್ಲಿರುವ ಭಾರತೀಯರ ವಿಚಾರವಾಗಿ ನಿರಂತರ ನಿಗಾ ಇರಿಸಿದೆ.
ಅಲ್ಪಸಂಖ್ಯಾತರ ಆಸ್ತಿ ಮತ್ತು ಮಂದಿರಗಳ ಮೇಲೆ ದಾಳಿಯಾಗುತ್ತಿರುವ ಸುದ್ದಿಗಳಿವೆ. ಆದರೆ ಅದೆಷ್ಟು ವ್ಯಾಪಕ ಎಂಬುದು ಸ್ಪಷ್ಟವಿಲ್ಲ. ಆದರೆ ಅಲ್ಪಸಂಖ್ಯಾತರ ಆಸ್ತಿ ಮತ್ತು ಮಂದಿರಗಳ ರಕ್ಷಣೆಗೆ ಜನರು ಮತ್ತು ಸಂಘಟನೆಗಳು ಪ್ರಯತ್ನಿಸುತ್ತಿರುವುದನ್ನು ಸ್ವಾಗತಿಸುವುದಾಗಿ ಜೈಶಂಕರ್ ಹೇಳಿದ್ದಾರೆ.
ವಿದ್ಯಾರ್ಥಿಗಳು ಮತ್ತಿತರರು ಕೂಡ ಅಲ್ಪಸಂಖ್ಯಾತರ ಜೀವ ಮತ್ತು ಆಸ್ತಿಪಾಸ್ತಿ ಹಾನಿಯಾಗದಂತೆ ರಕ್ಷಣೆಗೆ ನಿಂತಿರುವ ಚಿತ್ರಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿವೆ.
ಅಲ್ಪಸಂಖ್ಯಾತರ ರಕ್ಷಣೆಗೆ ವಿದ್ಯಾರ್ಥಿ ಸಂಘಟನೆಗಳು ಮನವಿ ಮಾಡಿಕೊಂಡಿರುವುದಾಗಿ ಹೇಳಲಾಗಿದೆ.
ಬಾಂಗ್ಲಾದೇಶದ ಅಧ್ಯಕ್ಷ ಮುಹಮ್ಮದ್ ಶಹಾಬುದ್ದೀನ್ ಕೂಡ ಅಲ್ಪಸಂಖ್ಯಾತರನ್ನು, ಅವರ ಆಸ್ತಿಪಾಸ್ತಿಯನ್ನು ರಕ್ಷಿಸುವಂತೆ ಮನವಿ ಮಾಡಿದ್ದಾರೆ.
ಅಲ್ಪಸಂಖ್ಯಾತರಿಗೆ ಹಾನಿಯಾಗದಂತೆ ನೋಡಿಕೊಳ್ಳುವುದಾಗಿ ವಿದ್ಯಾರ್ಥಿ ಸಂಘಟನೆಗಳು ಟ್ವೀಟ್ ಮಾಡಿರುವುದು ಕೂಡ ಗಮನ ಸೆಳೆದಿದೆ. ಅಲ್ಲಿ ಅಲ್ಪಸಂಖ್ಯಾತರು ಸುರಕ್ಷಿತವಾಗಿದ್ದಾರೆ ಎಂದೇ ಹೇಳಲಾಗುತ್ತಿದೆ.
ಬಾಂಗ್ಲಾದಲ್ಲಿನ ಸ್ಥಿತಿ ಬಗ್ಗೆ ಭಾರತ ಏನು ಹೇಳಿದೆ ಎಂಬುದರ ಕಡೆ ಎಲ್ಲರ ಗಮನವೂ ಹರಿಯುವುದು ಸಹಜ.
ಮೊದಲಿಂದಲೂ ಬಾಂಗ್ಲಾದೇಶದೊಂದಿಗೆ ಭಾರತ ಉತ್ತಮ ಸಂಬಂಧ ಹೊಂದಿದೆ.
ಈಗ ಅಲ್ಲಿನ ಪ್ರಕ್ಷುಬ್ಧ ಪರಿಸ್ಥಿತಿಯ ಕಾರಣದಿಂದಾಗಿ ಕಳವಳ ಉಂಟಾಗಿದೆ ಎಂಬುದು ಜೈಶಂಕರ್ ಹೇಳಿಕೆ.
ಜನವರಿಯಲ್ಲಿ ಚುನಾವಣೆ ಆದಾಗಿನಿಂದಲೂ ಬಾಂಗ್ಲಾದೇಶದಲ್ಲಿ ಒಂದು ಬಗೆಯ ಉದ್ವಿಗ್ನತೆ ಇದ್ದೇ ಇತ್ತು. ಧ್ರುವೀಕರಣ ಹೆಚ್ಚಿತು. ಆನಂತರ ವಿದ್ಯಾರ್ಥಿಗಳ ಆಂದೋಲನ ಶುರುವಾಯಿತು.
ಪ್ರತಿಭಟನೆ ಕಡೆಗೆ ಶೇಕ್ ಹಸೀನಾ ರಾಜೀನಾಮೆ ನೀಡಬೇಕೆಂಬ ಏಕೈಕ ಬೇಡಿಕೆಯೊಂದಿಗೆ ತೀವ್ರಗೊಂಡಿತ್ತು ಎಂದು ರಾಜ್ಯಸಭೆಯಲ್ಲಿ ಜೈಶಂಕರ್ ವಿವರಿಸಿದರು.
ಶೇಕ್ ಹಸೀನಾ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಸಂದರ್ಭದಲ್ಲಿ ಭಾರತಕ್ಕೆ ತೆರಳುವುದಕ್ಕೆ ಅನುಮತಿ ನೀಡುವಂತೆ ಕೋರಿದ್ದರು ಎಂದು ಜೈಶಂಕರ್ ರಾಜ್ಯಸಭೆಯಲ್ಲಿ ಮಾಹಿತಿ ನೀಡಿದರು.
ದೇಶದ ಭದ್ರತಾ ಸಂಸ್ಥೆಗಳ ಅಧಿಕಾರಿಗಳ ಸಭೆ ನಡೆಸಿದ ನಂತರ ಶೇಕ್ ಹಸೀನಾ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರ ತೆಗೆದುಕೊಂಡಿದ್ದರು.
ಭಾರತಕ್ಕೆ ತೆರಳಲು ಅನುಮತಿ ನೀಡುವಂತೆ ಹಸೀನಾ ಕೇಳಿಕೊಂಡಾಗ ಬಹಳ ಕಡಿಮೆ ಸಮಯವಿತ್ತು. ಆ ಪ್ರಕಾರ ಸೋಮವಾರ ರಾತ್ರಿ ಹಸೀನಾ ದಿಲ್ಲಿಗೆ ಆಗಮಿಸಿದ್ದಾರೆ ಎಂದು ಜೈಶಂಕರ್ ಹೇಳಿದ್ದಾರೆ.
ಘಾಝಿಯಾಬಾದ್‌ನ ಹಿಂಡನ್ ವೈಮಾನಿಕ ನೆಲೆಗೆ ಶೇಕ್ ಹಸೀನಾ ಆಗಮಿಸುವ ಮೊದಲು ಏಕಕಾಲದಲ್ಲಿ ಬಾಂಗ್ಲಾದೇಶದ ಅಧಿಕಾರಿಗಳಿಂದ ಫ್ಲೈಟ್ ಕ್ಲಿಯರೆನ್ಸ್ ಮನವಿ ಸ್ವೀಕರಿಸಿರುವುದಾಗಿ ಜೈಶಂಕರ್ ತಿಳಿಸಿದ್ದಾರೆ.
ಇದಕ್ಕೂ ಮೊದಲು ಮಂಗಳವಾರ ನಡೆದ ಮಹತ್ವದ ಸರ್ವಪಕ್ಷ ಸಭೆಯಲ್ಲಿ ಶೇಕ್ ಹಸೀನಾ ಅವರಿಗೆ ಭಾರತದ ನೆರವು ನೀಡುವ ಕುರಿತು ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ.
ಶೇಕ್ ಹಸೀನಾ ಅವರಿಗೆ ಭಾರತ ಸಕಲ ರೀತಿಯ ನೆರವು ನೀಡುವುದಾಗಿ ಭರವಸೆ ನೀಡಿದ್ದು, ಮುಂದಿನ ಕ್ರಮವನ್ನು ನಿರ್ಧರಿಸಲು ಸಮಯ ನೀಡಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಮಂಗಳವಾರ ಸರ್ವಪಕ್ಷ ಸಭೆಯಲ್ಲಿ ತಿಳಿಸಿದ್ದಾರೆ.
ಸರ್ವಪಕ್ಷಗಳ ಸಭೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಡಿಎಂಕೆ ನಾಯಕ ಟಿ.ಆರ್. ಬಾಲು, ಎನ್‌ಸಿಪಿ ನಾಯಕಿ ಸುಪ್ರಿಯಾ ಸುಳೆ ಸೇರಿದಂತೆ ಹಲವು ನಾಯಕರು ಭಾಗವಹಿಸಿದ್ದರು.
ಇನ್ನು ಬಾಂಗ್ಲಾದೇಶದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ಯಾಕೆ ಹಿಂಸಾತ್ಮಕ ಸ್ವರೂಪ ಪಡೆಯಿತು?
ಅದರ ಹಿಂದಿನ ಕಾರಣಗಳೇನು ಎಂಬುದನ್ನು ನೋಡಿಕೊಳ್ಳುತ್ತ ಹೋದರೆ, ಮೀಸಲಾತಿ ಜೊತೆಗೇ ಪ್ರಶ್ನೆ ಪತ್ರಿಕೆ ಸೋರಿಕೆ ಕೂಡ ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿತ್ತು.
ಮೀಸಲಾತಿ ವಿಚಾರ ವಿದ್ಯಾರ್ಥಿಗಳ ಆಕ್ರೋಶ ಭುಗಿಲೇಳುವುದಕ್ಕೆ ಕಾರಣವಾದ ಹೊತ್ತಲ್ಲಿಯೇ ಬಾಂಗ್ಲಾದೇಶ ಸಿವಿಲ್ ಸರ್ವೀಸ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಸುದ್ದಿಯಾಗಿತ್ತು.
ಹಿಂಸೆ ಮುಂದುವರಿದರೂ, ಸಾಕಷ್ಟು ಸುಧಾರಿಸಿದೆ ಎಂಬ ವರದಿಗಳಿವೆ. ಇಂಟರ್ನೆಟ್ ಸಂಪರ್ಕ ಮರಳಿದೆ.
ಇಂಟರ್ನೆಟ್ ಸ್ಥಗಿತಗೊಳಿಸಿ ಹೋರಾಟ ನಿಲ್ಲಿಸುವುದು ಸಾಧ್ಯವಿಲ್ಲ ಎಂಬುದು ಬಾಂಗ್ಲಾದೇಶದಲ್ಲಿ ಎಲ್ಲರಿಗೂ ಮನವರಿಕೆಯಾಗಿದೆ.
ಈ ನಡುವೆ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಮುಹಮ್ಮದ್ ಯೂನುಸ್ ಅವರನ್ನು ಮಧ್ಯಂತರ ಸರಕಾರದ ಮುಖ್ಯ ಸಲಹೆಗಾರರನ್ನಾಗಿ ನೇಮಿಸುವಂತೆ ವಿದ್ಯಾರ್ಥಿಗಳು ಒತ್ತಾಯಿಸಿದ್ದರು. ವಿದ್ಯಾರ್ಥಿಗಳ ಮನವಿಯನ್ನು ಯೂನುಸ್ ಕೂಡ ಒಪ್ಪಿದ್ದಾರೆ.
ಭ್ರಷ್ಟಾಚಾರ ಆರೋಪದಲ್ಲಿ ಜೈಲುಪಾಲಾಗಿದ್ದ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ ನಾಯಕಿ, ಮಾಜಿ ಪ್ರಧಾನಿ ಖಾಲೀದಾ ಜಿಯಾ ಬಿಡುಗಡೆಗೂ ಅಧ್ಯಕ್ಷರು ಆದೇಶಿಸಿದ್ದಾರೆ.
ದಂಗೆಯಲ್ಲಿ ಪಾಕ್ ಮತ್ತು ಚೀನಾ ಕೈವಾಡವಿರಬಹುದು ಅಥವಾ ಅಮೆರಿಕ ಕುತಂತ್ರವೇನಾದರೂ ಇದ್ದೀತು ಎಂಬ ಎರಡು ಅನುಮಾನಗಳು ದಟ್ಟವಾಗಿವೆ. ಆದರೆ ಜೈಶಂಕರ್ ಇಂಥ ಯಾವುದೇ ವಿಚಾರವಾಗಿ ಮಾತನಾಡಿಲ್ಲ.
ಮೀಸಲಾತಿ ವಿಚಾರ ಆಂದೋಲನಕ್ಕೆ ಕಾರಣವಾಗಿರುವುದು ಹೌದಾದರೂ, ಅದೊಂದೇ ಕಾರಣವಲ್ಲ ಎಂಬುದು ಕೂಡ ಸ್ಪಷ್ಟ. ಮೀಸಲಾತಿ ಹೋರಾಟ ನಡೆದಿದ್ದಾಗಲೇ ಸಿವಿಲ್ ಸರ್ವೀಸ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯ ಸುದ್ದಿಯನ್ನು ಚಾನೆಲ್ ಪ್ರಸಾರ ಮಾಡಿದ್ದು ಬೆಂಕಿಗೆ ತುಪ್ಪ ಸುರಿದ ಹಾಗಾಯಿತು.
ಅವಾಮಿ ಲೀಗ್‌ನ ಜನರಿಗೇ ಉದ್ಯೋಗಗಳು ಸಿಗುವ ಬಗೆಗೆ ಸಿಟ್ಟಾಗಿದ್ದ ವಿದ್ಯಾರ್ಥಿಗಳು ಪ್ರಶ್ನೆಪತ್ರಿಕೆ ಸೋರಿಕೆ ಸುದ್ದಿಯಿಂದ ಇನ್ನೂ ಉದ್ರಿಕ್ತರಾಗಿದ್ದರು. ಪರೀಕ್ಷಾ ವ್ಯವಸ್ಥೆಯ ಮೇಲಿನ ವಿಶ್ವಾಸವೇ ಹೋಗಿಬಿಟ್ಟಿತ್ತು.
ಪ್ರತಿಭಟನೆಯನ್ನು ಹತ್ತಿಕ್ಕುವ ತೀವ್ರ ಯತ್ನಗಳ ಬಳಿಕ ವಿದ್ಯಾರ್ಥಿಗಳ ಮೇಲೆ ಗುಂಡು ಹಾರಿಸಿದ್ದೇ ಪರಿಸ್ಥಿತಿ ಪೂರ್ತಿಯಾಗಿ ಹತೋಟಿ ತಪ್ಪುವಷ್ಟು ಪ್ರಕ್ಷುಬ್ಧಗೊಂಡಿತು ಮತ್ತು ಅದೊಂದು ತಪ್ಪಿನಿಂದಾಗಿ ಹಸೀನಾ ದೇಶವನ್ನೇ ಬಿಡಬೇಕಾಗಿ ಬಂತು.
ಹಿಂಸಾಚಾರಕ್ಕೆ ಅದೆಷ್ಟು ಜನರು ಬಲಿಯಾಗಿದ್ದಾರೆ ಎಂಬುದು ಖಚಿತವಿಲ್ಲ. ಜುಲೈನಲ್ಲಿ ಪ್ರತಿಭಟನೆ ಶುರುವಾದಾಗಿನಿಂದಲೂ 440ಕ್ಕೂ ಆಧಿಕ ಜನರು ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ.
ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂಬ ಸುದ್ದಿಯೂ ಹರಡಿದೆ.
ಇಷ್ಟೆಲ್ಲಕ್ಕೂ ಶೇಕ್ ಹಸೀನಾ ಅವರ ಅಹಂಕಾರವೇ ಕಾರಣ ಎಂಬ ಅಭಿಪ್ರಾಯ ಈಗ ಬಾಂಗ್ಲಾದೇಶದಲ್ಲಿ ವ್ಯಾಪಕವಾಗುತ್ತಿದೆ.
ಬಾಂಗ್ಲಾದೇಶದ ಮಾಜಿ ವಿದೇಶಾಂಗ ಕಾರ್ಯದರ್ಶಿ ಶಂಶೀರ್ ಮುಬೀನ್ ಚೌಧರಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮೀಸಲಾತಿ ವಿಚಾರವನ್ನು ಹಸೀನಾ ಸಮರ್ಪಕವಾಗಿ ನಿಭಾಯಿಸಲಿಲ್ಲ ಎಂಬುದು ಅವರ ಆರೋಪ. ವಿದ್ಯಾರ್ಥಿಗಳು ಬಯಸಿದರೆ ಮಾತುಕತೆಗೆ ಸಿದ್ಧ ಎಂದು ಹಸೀನಾ ಹೇಳಿದ್ದು ಅಹಂಕಾರದ ಮಾತಾಗಿತ್ತು ಎಂಬುದು ಚೌಧರಿ ಅಭಿಪ್ರಾಯ.
ಬಲ ತೋರಿಸಿ ಪ್ರತಿಭಟನೆ ಹತ್ತಿಕ್ಕಲು ಆಗದು ಎಂದು ಎಷ್ಟೇ ಮನವರಿಕೆ ಮಾಡಿಕೊಡಲು ಯತ್ನಿಸಲಾಗಿತ್ತಾದರೂ ಹಸೀನಾ ಅದಾವುದನ್ನು ಅರ್ಥ ಮಾಡಿಕೊಳ್ಳಲೇ ಇಲ್ಲ ಎಂದಿದ್ದಾರೆ ಚೌಧರಿ.
ಇಷ್ಟಾದ ಮೇಲೆಯೂ ಹುದ್ದೆ ಬಿಡುವ ಮನಸ್ಸು ಮಾಡಿರದ ಹಸೀನಾ ಕಡೆಗೆ ಮಗನ ಮಾತು ಕೇಳಿ ರಾಜೀನಾಮೆ ನಿರ್ಧಾರಕ್ಕೆ ಬಂದರು.
ದೇಶವನ್ನುದ್ದೇಶಿಸಿ ಭಾಷಣ ಮಾಡುವ ಇರಾದೆಯನ್ನು ಹೊಂದಿದ್ದರೂ, ಅಷ್ಟು ಹೊತ್ತಿಗೆ ಪ್ರತಿಭಟನಾಕಾರರು ನಿವಾಸ ಸಮೀಪಿಸುತ್ತಾರೆ, ಅಷ್ಟರೊಳಗೆ ಪಾರಾಗಿಬಿಡಿ ಎಂಬ ಸಲಹೆಯ ಮೇರೆಗೆ ಕಡೆಗೂ ಢಾಕಾ ಬಿಟ್ಟು, ಭಾರತದೆಡೆಗೆ ಬರಲು ಹೆಲಿಕಾಪ್ಟರ್ ಏರಿದ್ದರು.
ಅಧಿಕಾರದ ಮದದಲ್ಲಿ ಅವರು ಜನರನ್ನೂ ಅರ್ಥ ಮಾಡಿಕೊಳ್ಳಲಿಲ್ಲ, ವಿದ್ಯಾರ್ಥಿಗಳ ಹೋರಾಟವನ್ನೂ ಅರ್ಥ ಮಾಡಿಕೊಳ್ಳಲಿಲ್ಲ. ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಭಯೋತ್ಪಾಕರೆಂದು ಕರೆದದ್ದು, ದೇಶದ್ರೋಹಿಗಳೆಂದು ಕರೆದದ್ದು ಮುಂದಿನ ಅನಾಹುತಗಳಿಗೆ ಕಾರಣವಾಗಿಬಿಟ್ಟಿತ್ತು.
ಮೀಸಲಾತಿ ತೆಗೆದುಹಾಕಲು ಒತ್ತಾಯಿಸುತ್ತಿದ್ದ ಹೋರಾಟ, ಹಸೀನಾ ಅವರನ್ನು ಕೆಳಗಿಳಿಸುವ ಹೋರಾಟವಾಗಿ ಬದಲಾಗಿಬಿಟ್ಟಿತ್ತು.
ಪ್ರತಿಭಟನಾಕಾರರ ಸಿಟ್ಟು ಕಡೆಗೆ ಬಾಂಗ್ಲಾದೇಶ ಸಂಸ್ಥಾಪಕ, ಹಸೀನಾ ತಂದೆ ಮುಜೀಬುರ್ ರೆಹಮಾನ್ ಅವರ ಕಡೆ ತಿರುಗಿತ್ತು. ಅವರ ಪ್ರತಿಮೆಯನ್ನು ಒಡೆದುಹಾಕಿದ್ದು ಭಾರತದಲ್ಲಿ ಕೂಡ ತೀವ್ರ ಬೇಸರಕ್ಕೆ ಕಾರಣವಾದ ಸಂಗತಿಯಾಗಿದೆ.
15 ವರ್ಷಗಳಿಂದ ಪ್ರಧಾನಿ ಹುದ್ದೆಯಲ್ಲಿದ್ದ ಹಸೀನಾ ಸರ್ವಾಧಿಕಾರಿ ಎಂಬ ಆರೋಪ ಹೊತ್ತಿದ್ದರು.
ಮುಜೀಬುರ್ ಅವರ ಹೆಸರನ್ನು ತನ್ನ ಕೆಟ್ಟ ರಾಜಕೀಯಕ್ಕೆ ಬಳಸಿಕೊಳ್ಳುತ್ತ, ಜನರನ್ನು ಭಯೋತ್ಪಾದಕರೆಂದು ಜರೆಯುತ್ತ ಅಧಿಕಾರ ಅನುಭವಿಸುತ್ತಿದ್ದ ಹಸೀನಾ ಅಂತಿಮವಾಗಿ ದೇಶವನ್ನೇ ಬಿಟ್ಟು ಪಲಾಯನ ಮಾಡಬೇಕಾಯಿತು.
ಚುನಾವಣೆಗಳೆಲ್ಲವೂ ಅಕ್ರಮ ಎಂಬ ಆರೋಪಗಳೂ ಇದ್ದವು. ಅದರ ಪರಿಣಾಮ, ಅವರನ್ನೀಗ ಬೇರೆ ನೆಲದಲ್ಲಿ ಆಶ್ರಯ ಕೇಳಿಕೊಂಡು ಹೋಗಬೇಕಾದ ಸ್ಥಿತಿಗೆ ತಂದು ನಿಲ್ಲಿಸಿದೆ.