ಅಯೋಧ್ಯೆಯಲ್ಲೇ ಬಿಜೆಪಿಗೆ ಯಾಕೆ ಇಂತಹ ಸ್ಥಿತಿ ಬಂತು?

Update: 2024-06-07 05:09 GMT
Editor : Thouheed | Byline : ವಿನಯ್ ಕೆ.

ಲೋಕಸಭಾ ಚುನಾವಣಾ ಫಲಿತಾಂಶದಲ್ಲಿ ಇಡೀ ದೇಶವನ್ನು ಅಚ್ಚರಿಗೆ ಕೆಡವಿದ್ದು ಉತ್ತರ ಪ್ರದೇಶದ ಫಲಿತಾಂಶ.

ಅಯೋಧ್ಯೆ ಇರುವ ಉತ್ತರ ಪ್ರದೇಶದಲ್ಲೇ ಬಿಜೆಪಿಗೆ ಮತದಾರರಿಂದ ಮರ್ಮಾಘಾತ ಬಿದ್ದಿದೆ. ಯಾರೂ ನಿರೀಕ್ಷಿಸಿರದ ಹಿನ್ನಡೆ ಬಿಜೆಪಿಗೆ ಎದುರಾಗಿದೆ.

ಅಖಿಲೇಶ್-ರಾಹುಲ್ ಜೋಡಿ ಯುಪಿಯಲ್ಲಿ ಮ್ಯಾಜಿಕ್ ಮಾಡಿದೆ. ಹೇಗೆ ನಡೆಯಿತು ಈ ಮ್ಯಾಜಿಕ್? ಹಿಂದಿ ಹಾರ್ಟ್ ಲ್ಯಾಂಡ್‌ನ ಕೇಂದ್ರದಲ್ಲೇ ಬಿಜೆಪಿಗೆ ಇಷ್ಟೊಂದು ದೊಡ್ಡ ಹೊಡೆತ ಬಿದ್ದಿದ್ದು ಹೇಗೆ? ಯಾವ್ಯಾವ ಅಂಶಗಳು ಬಿಜೆಪಿ ಹಿನ್ನಡೆಗೆ ಕಾರಣವಾದವು? ಎಸ್‌ಪಿ-ಕಾಂಗ್ರೆಸ್ ಈ ಪರಿ ಪುಟಿದೇಳಲು ನೇರವಾದ ಅಂಶಗಳೇನು?

ಯುಪಿಯನ್ನು ಗೆಲ್ಲುವ ಮೂಲಕವೇ ದಿಲ್ಲಿ ಗದ್ದುಗೆ ಹಿಡಿಯುವುದು ಭಾರತದ ರಾಜಕಾರಣದಲ್ಲಿ ಲಾಗಾಯ್ತಿನಿಂದ ನಡೆದುಬಂದಿದೆ. ಆದರೆ ಯುಪಿಯಲ್ಲಿನ ಫಲಿತಾಂಶ ಬಿಜೆಪಿ ಪಾಲಿಗೆ ಈ ಸಲ ಆಘಾತಕಾರಿಯಾಗಿ ಪರಿಣಮಿಸಿದೆ. ಗಮನಾರ್ಹ ಸಂಖ್ಯೆಯ ಸ್ಥಾನಗಳನ್ನು ಎನ್‌ಡಿಎ ಈ ಬಾರಿ ಕಳೆದುಕೊಂಡಿದೆ. ಎಸ್‌ಪಿ ಮತ್ತು ಕಾಂಗ್ರೆಸ್ ದೊಡ್ಡ ಮಟ್ಟದ ಗೆಲುವು ಸಾಧಿಸಿವೆ.

ಫೈಝಾಬಾದ್‌ನಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿ ಅವಧೇಶ್ ಪ್ರಸಾದ್ ಗೆಲುವು, ಎರಡು ಸಲ ಗೆದ್ದು ಈ ಬಾರಿ ಹ್ಯಾಟ್ರಿಕ್ ಕನಸು ಕಾಣುತ್ತಿದ್ದ ಬಿಜೆಪಿಯ ಲಲ್ಲುಸಿಂಗ್ ಅವರ ಸೋಲು ಸಣ್ಣ ವಿಚಾರವಲ್ಲ.

ಅಯೋಧ್ಯೆಯಲ್ಲಿ ಬಿಜೆಪಿಗೆ ಯಾಕೆ ಇಂಥ ಸ್ಥಿತಿ ಬಂತು?

ಮೊದಲನೆಯದಾಗಿ, ಜನರ ನಾಡಿಮಿಡಿತವನ್ನು ಅರಿಯುವ ಕಷ್ಟವನ್ನೇ ಬಿಜೆಪಿ ತೆಗೆದುಕೊಳ್ಳಲಿಲ್ಲ.ಮೋದಿಯನ್ನು ಮೂರನೇ ಬಾರಿಗೆ ಪ್ರಧಾನಿಯಾಗಿಸುವ ಭ್ರಮೆಯಲ್ಲಿ ಬಿದ್ದಿದ್ದ ಬಿಜೆಪಿ, ಯುಪಿಯ ಒಳಗಿನ ಅಲೆಗಳನ್ನು ಕೇಳಿಸಿಕೊಂಡಿರಲೇ ಇಲ್ಲವೆನ್ನುವುದು ಸ್ಪಷ್ಟ.

ಜನರೆಲ್ಲ ತಮ್ಮದೇ ಆದ ಅಯೋಧ್ಯೆಯನ್ನು ಕಳೆದುಕೊಂಡಿರುವ ಸಂಕಟದಲ್ಲಿದ್ದುದು ಅಧಿಕಾರದ ಅಹಮ್ಮಿನಲ್ಲಿ ಅಬ್ಬರಿಸುತ್ತಿದ್ದ ಬಿಜೆಪಿಗೆ ಅರ್ಥವಾಗಿರಲೇ ಇಲ್ಲ. ಅಲ್ಲಿ ಮತದಾನ ಪ್ರಮಾಣವೂ ಕಡಿಮೆಯಾಗಿತ್ತು.

ಎರಡನೆಯದಾಗಿ, ತಾವೇ ರಾಮನನ್ನು ಅಯೋಧ್ಯೆಗೆ ಕರೆತಂದೆವು ಎಂದು ಅಹಂಕಾರ ಪ್ರದರ್ಶಿಸಿದ್ದವರಿಗೆ ಜನರು ಸರಿಯಾಗಿಯೇ ಪಾಠ ಕಲಿಸಿದ್ದಾರೆ.

ಮಂದಿರ ಕಟ್ಟಿದರು ಸರಿ. ಆದರೆ ತಾವೇ ರಾಮನನ್ನು ಕರೆತಂದೆವು ಎಂದು ಹೇಳುತ್ತ ಗರ್ವಪಡುತ್ತಿದ್ದರೆ ಏನರ್ಥ? ರಾಮನನ್ನು ಕರೆತರಲು ಇವರು ಯಾರು ಎಂದು ಜನರಿಗೂ ಅನ್ನಿಸಿತ್ತು. ರಾಮ ತಮ್ಮೆಲ್ಲರವನೂ ಆಗಿರುವಾಗ, ರಾಮನನ್ನು ತಾವು ಕರೆತಂದೆವು ಎಂದು ಹೇಳಿಕೊಳ್ಳುತ್ತಿದ್ದವರನ್ನು ನೋಡಿ ರೋಸಿಹೋಗಿದ್ದರೆನ್ನಿಸುತ್ತದೆ. ಇವರನ್ನು ಮೊದಲು ಅಯೋಧ್ಯೆಯಿಂದ ಆಚೆ ಕಳಿಸುವುದೇ ಸರಿ ಎಂದು ಆಗಲೇ ಮತದಾರರು ತೀರ್ಮಾನ ಮಾಡಿದ್ದಿರಬಹುದು.

ಮೂರನೆಯದಾಗಿ, ‘ಯುಪಿ ಕೆ ಲಡ್ಕೆ’ ಚಮತ್ಕಾರ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಜಂಟಿಯಾಗಿ ಪ್ರಚಾರದಲ್ಲಿ ತೊಡಗಿದಾಗ, ಬಿಜೆಪಿ ಅವರಿಬ್ಬರನ್ನೂ ‘ಯುಪಿ ಕೆ ಲಡ್ಕೆ’ ಎಂದು ಮೂದಲಿಸಿತ್ತು. ಆದರೆ ‘ಇಂಡಿಯಾ’ ಮೈತ್ರಿಕೂಟಕ್ಕೆ ಅಲ್ಲಿ ಹೆಚ್ಚು ಸ್ಥಾನಗಳನ್ನು ತಂದುಕೊಡುವಲ್ಲಿ ಇದೇ ‘ಯುಪಿ ಕೆ ಲಡ್ಕೆ’ ದೊಡ್ಡ ಪಾತ್ರ ವಹಿಸಿಬಿಟ್ಟರು.

ಎಸ್‌ಪಿ ಇಂಡಿಯಾ ಒಕ್ಕೂಟದ ಭಾಗವಾಗಿ ಕಣಕ್ಕಿಳಿದದ್ದು ಯುಪಿಯಲ್ಲಿನ ಸಮೀಕರಣವನ್ನೇ ಬದಲಿಸಿತ್ತು. ಬಿಜೆಪಿ ವಿರುದ್ಧ ಎದುರಾಳಿಗಳ ಈ ಒಗ್ಗಟ್ಟಿನ ಹೋರಾಟ ಕೊಟ್ಟ ಫಲ ಖಂಡಿತ ದೊಡ್ಡದಾಗಿದೆ.

‘ಇಂಡಿಯಾ’ ಒಕ್ಕೂಟ ರಚನೆಯಾದ ವೇಳೆ ಎಸ್‌ಪಿ ಅದರ ಭಾಗವಾಗಲು ಮೀನ ಮೇಷ ಎಣಿಸಿತ್ತು. ಒಂದು ಹಂತದಲ್ಲಿ ಕಾಂಗ್ರೆಸ್ ಮತ್ತು ಎಸ್‌ಪಿ ನಡುವೆ ವೈಮನಸ್ಸು ಕೂಡ ತಲೆದೋರಿತ್ತು. ಎರಡೂ ಬೇರೆಬೇರೆಯಾಗಿಯೇ ಸ್ಪರ್ಧಿಸಲಿವೆ ಎನ್ನುವ ಹಂತ ನಿರ್ಮಾಣವಾಗಿತ್ತು.

ಕಡೆಗೂ ‘ಇಂಡಿಯಾ’ ಬಣದ ಭಾಗವಾಗಲು ಸಮ್ಮತಿಸಿದ ಅಖಿಲೇಶ್ ಯಾದವ್ ಆನಂತರ ರಾಹುಲ್ ಅವರೊಡನೆ ಸೇರಿ ತೋರಿಸಿದ್ದು ಮಾತ್ರ ಚಮತ್ಕಾರ.

ನಾಲ್ಕನೆಯದಾಗಿ,

ಲೋಕಸಭೆ ಚುನಾವಣೆಗೂ ಮೊದಲು ರಾಹುಲ್ ಗಾಂಧಿ ಕೈಗೊಂಡಿದ್ದ ‘ಭಾರತ ಜೋಡೊ ನ್ಯಾಯ ಯಾತ್ರೆ’ ಕೂಡ ‘ಇಂಡಿಯಾ’ ಒಕ್ಕೂಟದ ಪರ ಮತಗಳು ಬರಲು ಕಾರಣವಾಗಿರುವುದು ಸ್ಪಷ್ಟವಾಗಿದೆ. ರಾಹುಲ್ ಗಾಂಧಿಗೆ ಯುಪಿಯಲ್ಲಿ ಭಾರೀ ಜನಬೆಂಬಲ ಕಾಣುತ್ತಿತ್ತು. ಅದು ವೋಟಾಗಿಯೂ ಪರಿವರ್ತನೆಯಾಗಿರುವುದು ವಿಶೇಷ.

ಐದನೆಯದಾಗಿ, ಇಂಡಿಯಾ ಒಕ್ಕೂಟದ ಸರಕಾರ ಅಧಿಕಾರಕ್ಕೆ ಬಂದರೆ ಜಾತಿ ಜನಗಣತಿ ನಡೆಸಲಾಗುವುದೆಂಬ ಘೋಷಣೆ ಕೂಡ ತನ್ನದೇ ಪಾತ್ರ ವಹಿಸಿತ್ತು. ಮೇಲ್ಜಾತಿಗಳ ದರ್ಪದ ಎದುರು ಮಂಕಾಗಿದ್ದ ಅಹಿಂದ ವರ್ಗಗಳು ಜಾತಿಗಣತಿಯ ಮಹತ್ವ ತಿಳಿದುಕೊಂಡವು.

ಆರನೆಯದಾಗಿ, ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಿಸಲಿದೆ, ಮೀಸಲಾತಿ ಕಿತ್ತುಕೊಳ್ಳಲಿದೆ ಎಂಬುದನ್ನು ಬಹಳ ಪರಿಣಾಮಕಾರಿಯಾಗಿ ಜನರಿಗೆ ಮನವರಿಕೆ ಮಾಡಿಕೊಡುವಲ್ಲಿಯೂ ‘ಇಂಡಿಯಾ’ ಒಕ್ಕೂಟ ಯಶಸ್ವಿಯಾಗಿತ್ತು.

ಮತ್ತೂ ಒಂದು ಕಾರಣವೆಂದರೆ, ತೀರಾ ದುರ್ಬಲವಾದ ಬಿಎಸ್‌ಪಿ.

ಮಾಯಾವತಿ ನೇತೃತ್ವದ ಬಿಎಸ್‌ಪಿ ನಿರೀಕ್ಷಿತ ಸ್ಥಾನಗಳನ್ನು ಗೆಲ್ಲುವಲ್ಲಿ ವಿಫಲವಾಗಿದೆ.

ಯುಪಿ ಮಾತ್ರವಲ್ಲದೆ ರಾಜಸ್ಥಾನದಂಥ ರಾಜ್ಯದಲ್ಲಿಯೂ ಎನ್‌ಡಿಎ ಸಾಧನೆ ಕಳಪೆಯಾಗಿದೆ.

ಹಿಂದಿ ಭಾಷಿಕ ಕೆಲವು ರಾಜ್ಯಗಳಲ್ಲಿ ಬಿಜೆಪಿಗೆ ಹೀಗೆ ಏಟು ಬಿದ್ದಿರುವುದು, ‘ಇಂಡಿಯಾ’ ಒಕ್ಕೂಟ ಕಮಾಲ್ ಮಾಡಿರುವುದು ಗಮನಾರ್ಹವಾಗಿದೆ. ಇದನ್ನು ‘ಬದಲಾಗುತ್ತಿರುವ ರಾಜಕೀಯ’ ಎಂದು ಶರದ್ ಪವಾರ್ ವ್ಯಾಖ್ಯಾನಿಸಿದ್ದಾರೆ.

ಯುಪಿಯಲ್ಲಿ ಬಿಜೆಪಿಗೆ ಎದುರಾಗಿರುವ ಈ ದೊಡ್ಡ ಹಿನ್ನಡೆ ಆ ಪಕ್ಷದೊಳಗೂ ತಳಮಳ ಸೃಷ್ಟಿಸಿದೆ. ಮೋದಿ ಶಾ ಜೋಡಿಗೆ ಆದಿತ್ಯನಾಥ್ ಮೇಲಿರುವ ಪ್ರೀತಿ ಅಷ್ಟಕ್ಕಷ್ಟೇ ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯ. ಈಗ ನಿರ್ಣಾಯಕ ಸಂದರ್ಭದಲ್ಲೇ ಯುಪಿಯಿಂದ ಸಾಕಷ್ಟು ಸೀಟು ತಂದು ಕೊಡದ ಆದಿತ್ಯನಾಥ್ ಅವರನ್ನು ಮೋದಿ ಶಾ ಹಾಗೇ ಬಿಡುತ್ತಾರೆಯೇ?

ಆದರೆ ಈಗಿರುವ ಪರಿಸ್ಥಿತಿಯಲ್ಲಿ ಆದಿತ್ಯನಾಥ್ ಅವರನ್ನು ಮುಟ್ಟುವ ಸಾಮರ್ಥ್ಯ ಮೋದಿ ಶಾ ಅವರಿಗೆ ಇದೆಯೇ ?

ಚುನಾವಣಾ ಪ್ರಚಾರದುದ್ದಕ್ಕೂ ರಾಮಮಂದಿರದ ನಿರ್ಮಾಣದ ಜಪ ಮಾಡಿದ್ದ ಬಿಜೆಪಿ ನಾಯಕರಿಗೆ, ಈಗ ಅಯೋಧ್ಯೆ ಇರುವ ಲೋಕಸಭಾ ಕ್ಷೇತ್ರದಲ್ಲಿ ಹಾಗೂ ಯುಪಿಯಲ್ಲಿ ಆಗಿರುವ ಮುಖಭಂಗವಂತೂ ಮುಟ್ಟಿ ಮುಟ್ಟಿ ನೋಡಿಕೊಳ್ಳುವಂಥ ಹೊಡೆತ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಿನಯ್ ಕೆ.

contributor

Similar News