ಸಾಮೂಹಿಕ ಅತ್ಯಾಚಾರ ಮಾಡಿ ಕೊಲೆ ಮಾಡಿದವರನ್ನೇ ಸಜ್ಜನರೆಂದು ಸರಕಾರವೇ ಬಿಡುಗಡೆ ಮಾಡುವಾಗ ಮಾನವತಾವಾದಿ ಉಮರ್ ಖಾಲಿದ್ಗೇಕೆ ನ್ಯಾಯ ನಿರಾಕರಣೆಯಾಗುತ್ತಿದೆ?

ಉಮರ್ ಖಾಲಿದ್ ವಿಚಾರದಲ್ಲಿ ವರ್ಷಗಟ್ಟಲೆ ಪ್ರಕರಣವನ್ನು ಎಳೆಯಲಾಯಿತು. ಜಾಮೀನು ಅರ್ಜಿಯ ವಿಚಾರಣೆಯೇ ಬಹಳ ಕಾಲ ನಡೆಯಲಿಲ್ಲ. ಸುಪ್ರೀಂ ಕೋರ್ಟ್‌ನಲ್ಲಿಯೂ ಬೇರೆ ಬೇರೆ ನ್ಯಾಯಾಧೀಶರ ಮುಂದೆ ಹೋಯಿತು. ಆದರೂ ವಿಚಾರಣೆ ಆಗಲಿಲ್ಲ. ಹಲವು ಬಾರಿ ವಿಚಾರಣೆ ನಿಂತುಹೋಯಿತು. ಕಡೆಗೆ ಮೊದಲ ಜಾಮೀನು ಅರ್ಜಿ ತಿರಸ್ಕೃತವಾಗಿದ್ದ ನ್ಯಾಯಾಲಯದಲ್ಲಿಯೇ ಮತ್ತೆ ಜಾಮೀನು ಪಡೆಯುವ ಹೋರಾಟ ನಡೆದಿದೆ. ಆದರೆ ನ್ಯಾಯ ನಿರಾಕರಣೆಯಾಗುತ್ತಲೇ ಇದೆ.

Update: 2024-05-30 06:37 GMT

ಇಬ್ಬರನ್ನು ತನ್ನ ಕಾರಿನಡಿ ಹೊಸಕಿ ಹಾಕಿದವನಿಗೆ ಪ್ರಬಂಧ ಬರೆಯಲು ಹೇಳಿ ಮನೆಗೆ ಕಳಿಸುವ ವ್ಯವಸ್ಥೆ ಈ ದೇಶದಲ್ಲಿ ಇದೆ. ಆದರೆ ಒಬ್ಬ ಅದ್ಭುತ ಪ್ರತಿಭೆ, ಯುವ ವಿದ್ವಾಂಸ, ಲೇಖಕ, ವಾಗ್ಮಿ, ಪ್ರಜ್ಞಾವಂತ ನಾಗರಿಕ, ಪ್ರಾಮಾಣಿಕ ಕಳಕಳಿಯ ಸಾಮಾಜಿಕ ಕಾರ್ಯಕರ್ತನನ್ನು ನಾಲ್ಕು ವರ್ಷಗಳಿಂದ ಜೈಲಿನಲ್ಲಿ ಕೊಳೆಯಲು ಬಿಡಲಾಗಿದೆ.

ನೇರವಾಗಿ ಹತ್ಯಾಕಾಂಡಕ್ಕೆ ಕರೆಕೊಟ್ಟವರು ಇಲ್ಲಿ ಜೈಲಲಿಲ್ಲ, ಮನೆಯಲ್ಲಿ ತಲವಾರು, ಬಂದೂಕು ಇಟ್ಟುಕೊಳ್ಳಿ ಎಂದವರೂ ಇಲ್ಲಿ ಜೈಲಲ್ಲಿಲ್ಲ, ಯಾವಾಗ ಮುಸ್ಲಿಮರನ್ನು ಕೊಲ್ಲುತ್ತೀರಿ ಹೇಳಿ ಎಂದು ಸಾರ್ವಜನಿಕ ಸಮಾವೇಶದಲ್ಲೇ ಕೇಳಿದವರೂ ಜೈಲಲ್ಲಿಲ್ಲ.

ಸಾಮೂಹಿಕ ಅತ್ಯಾಚಾರ ಮಾಡಿ ಕೊಲೆ ಮಾಡಿದವರನ್ನು ಸಜ್ಜನರು ಎಂದು ಇಲ್ಲಿ ಸರಕಾರವೇ ಬಿಡುಗಡೆ ಮಾಡುತ್ತದೆ. ಆದರೆ ಈ ದೇಶದ ಭವಿಷ್ಯ ರೂಪಿಸುವ ಕೆಲಸದಲ್ಲಿ ನಿರತರಾಗಬೇಕಿದ್ದ, ಇಲ್ಲಿನ ಯುವಜನರಿಗೆ ಮಾರ್ಗದರ್ಶನ ನೀಡಬೇಕಿದ್ದ, ಭರವಸೆಯ ನಾಳೆಗಳನ್ನು ಕಟ್ಟುವಲ್ಲಿ ತನ್ನ ಕೊಡುಗೆ ಕೊಡಬೇಕಿದ್ದ ಒಬ್ಬ ಅತ್ಯುತ್ತಮ ಯುವ ವಿದ್ವಾಂಸನನ್ನು ಗಲಭೆಕೋರ ಎಂದು ಆರೋಪ ಹೊರಿಸಿ ಕಂಬಿಗಳ ಹಿಂದೆ ಹಾಕಿ ಒಂದು ಸಾವಿರ ದಿನಗಳೇ ಕಳೆದು ಹೋದವು.

ಕೇವಲ ಓದು, ಅಧ್ಯಯನ, ಬರಹ ಹಾಗೂ ಆರೋಗ್ಯಕರ ಚರ್ಚೆ, ಸಂವಾದಗಳಲ್ಲಿ ಮುಳುಗಿಹೋಗಿದ್ದ, ಆ ಬುದ್ಧಿವಂತ, ವಿವೇಕವಂತ ಯುವಕ ಈ ದೇಶದ ಭರವಸೆಯಾಗಬೇಕಿತ್ತು. ಇಲ್ಲಿನ ಯುವಕರಿಗೆ ತೀರಾ ಅಗತ್ಯವಾಗಿದ್ದ ಮಾದರಿಯಾಗಬೇಕಿತ್ತು.

ಆದರೆ ಇಡೀ ವ್ಯವಸ್ಥೆ ಒಂದಾಗಿ ಒಬ್ಬ ವಿದ್ಯಾರ್ಥಿಗೆ, ಒಬ್ಬ ಉದಯೋನ್ಮುಖ ವಿದ್ವಾಂಸನಿಗೆ ವಿಧ್ವಂಸಕ ಎಂಬ ಹಣೆಪಟ್ಟಿ ಕಟ್ಟಿಬಿಟ್ಟಿತು.

ಉಮರ್ ಖಾಲಿದ್‌ರನ್ನು ಬೆಂಬಲಿಸಿ ನಡೆದ ಧರಣಿಯೊಂದರಲ್ಲಿ ಭಾಗವಹಿಸಿ ರವೀಶ್ ಕುಮಾರ್ ಒಂದು ಮಾತು ಹೇಳಿದ್ದರು: ‘‘ಮೊದಲು ಸರಕಾರ ಜನರನ್ನು ಪೀಡಿಸಲು ಕಾನೂನನ್ನು ತಿರುಚುತ್ತಿತ್ತು, ಅದನ್ನು ದುರ್ಬಳಕೆ ಮಾಡುತ್ತಿತ್ತು. ಆದರೆ ಈಗ ಜನರನ್ನು ಹಿಂಸಿಸಲೆಂದೇ ಸರಕಾರ ಕಾನೂನುಗಳನ್ನು ರಚಿಸುತ್ತಿರುವ ಕಾಲ’’.

‘‘ಉಮರ್‌ರನ್ನು ಬಂಧಿಸಿದ ಪೊಲೀಸರು ಅವರ ಪಿಎಚ್‌ಡಿ ಪ್ರಬಂಧವನ್ನು ಒಂದು ಸಲ ಓದಿದ್ದರೂ ಸಾಕಿತ್ತು. ಆತ ಎಂತಹ ಯುವಕ ಎಂದು ಅವರಿಗೆ ಬಹಳ ಚೆನ್ನಾಗಿ ಗೊತ್ತಾಗಲು ಅದೊಂದೇ ಸಾಕಿತ್ತು ಎಂದಿದ್ದಾರೆ’’ ರವೀಶ್ ಕುಮಾರ್.

ಉಮರ್ ಖಾಲಿದ್ ಅವರಿಗೆ ಈಗ ಮತ್ತೊಮ್ಮೆ ಜಾಮೀನು ನಿರಾಕರಿಸಲಾಗಿದೆ.

2020ರ ದಿಲ್ಲಿ ಗಲಭೆ ಹಿಂದಿನ ಪಿತೂರಿ ಪ್ರಕರಣದಲ್ಲಿ ಜೆಎನ್‌ಯು ಮಾಜಿ ವಿದ್ಯಾರ್ಥಿ ನಾಯಕ, ಸಾಮಾಜಿಕ ಕಾರ್ಯಕರ್ತ ಉಮರ್ ಖಾಲಿದ್ ಅವರ ಜಾಮೀನು ಅರ್ಜಿಯನ್ನು ದಿಲ್ಲಿಯ ಕಾರ್ಕರ್ಡೂಮಾ ನ್ಯಾಯಾಲಯ ಮಂಗಳವಾರ ತಿರಸ್ಕರಿಸಿದೆ.

ಯುಎಪಿಎ ಕಾಯ್ದೆಯಡಿ ಉಮರ್ ಖಾಲಿದ್ ಸೆಪ್ಟಂಬರ್ 2020ರಿಂದ ಜೈಲಿನಲ್ಲಿದ್ದಾರೆ.

ವಿಳಂಬ ಮತ್ತು ಇತರ ಆರೋಪಿಗಳೊಂದಿಗೆ ಸಮಾನತೆಯ ಆಧಾರದ ಮೇಲೆ ಉಮರ್ ಖಾಲಿದ್ ಈ ಪ್ರಕರಣದಲ್ಲಿ ನಿಯಮಿತ ಜಾಮೀನು ಕೋರಿದ್ದರು.

ಅರ್ಜಿಯನ್ನು ಆಲಿಸಿದ ಕಾರ್ಕರ್ಡೂಮಾ ನ್ಯಾಯಾಲಯದ ಹೆಚ್ಚುವರಿ ಸೆಶನ್ಸ್ ನ್ಯಾಯಾಧೀಶ ಸಮೀರ್ ಬಾಜಪಾಯಿ ಅವರು ಉಮರ್ ಅವರ ಎರಡನೇ ಜಾಮೀನು ಅರ್ಜಿಯನ್ನು ತಿರಸ್ಕರಿಸಿದರು.

ಕಳೆದ ವರ್ಷದ ಮಾರ್ಚ್‌ನಲ್ಲಿ ಖಾಲಿದ್ ಅವರು ಸಲ್ಲಿಸಿದ್ದ ಮೊದಲ ಜಾಮೀನು ಅರ್ಜಿಯನ್ನು ವಿಚಾರಣಾ ನ್ಯಾಯಾಲಯ ತಳ್ಳಿಹಾಕಿತ್ತು.

2020ರಲ್ಲಿ ದಿಲ್ಲಿ ಗಲಭೆಗೆ ಕಾರಣವಾದ 23 ಸ್ಥಳಗಳಲ್ಲಿ ಪ್ರತಿಭಟನೆಗಳನ್ನು ಯೋಜಿಸಿದ್ದಾರೆ ಎಂದು ಪೊಲೀಸರು ಉಮರ್ ವಿರುದ್ಧ ಆರೋಪಿಸಿದ್ದರು.

ಕಾರ್ಕರ್ಡೂಮಾ ನ್ಯಾಯಾಲಯ 2022ರ ಮಾರ್ಚ್‌ನಲ್ಲಿ ಮೊದಲ ಬಾರಿಗೆ ಜಾಮೀನು ನಿರಾಕರಿಸಿದ ನಂತರ ಉಮರ್ ಅವರು ದಿಲ್ಲಿ ಹೈಕೋರ್ಟ್ ಮೊರೆ ಹೋಗಿದ್ದರು.

2022ರ ಅಕ್ಟೋಬರ್‌ನಲ್ಲಿ ದಿಲ್ಲಿ ಹೈಕೋರ್ಟ್ ಜಾಮೀನು ನಿರಾಕರಿಸಿತು. ನಂತರ ಅವರು ಸುಪ್ರೀಂ ಕೋರ್ಟ್‌ನಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದರು.

2023ರ ಮೇನಲ್ಲಿ ಈ ವಿಷಯದಲ್ಲಿ ಸುಪ್ರೀಂ ಕೋರ್ಟ್ ದಿಲ್ಲಿ ಪೊಲೀಸರಿಂದ ಪ್ರತಿಕ್ರಿಯೆ ಕೇಳಿತ್ತು.

ಸುಪ್ರೀಂ ಕೋರ್ಟ್‌ನಲ್ಲಿ ಉಮರ್ ಮನವಿಯನ್ನು 14 ಬಾರಿ ಮುಂದೂಡಲಾಯಿತು. ನಂತರ ಅವರ ವಕೀಲರಾದ ಕಪಿಲ್ ಸಿಬಲ್ ಜಾಮೀನು ಅರ್ಜಿಯನ್ನು ಹಿಂಪಡೆಯುತ್ತಿರುವುದಾಗಿ ನ್ಯಾಯಾಲಯಕ್ಕೆ ತಿಳಿಸಿದರು.

2024ರ ಫೆಬ್ರವರಿ 14ರಂದು ಸುಪ್ರೀಂ ಕೋರ್ಟ್‌ನಿಂದ ಜಾಮೀನು ಅರ್ಜಿ ಹಿಂಪಡೆದ ನಂತರ ಉಮರ್ ವಿಚಾರಣಾ ನ್ಯಾಯಾಲಯಕ್ಕೆ ಹೋಗಿದ್ದರು.

ಪ್ರಕರಣದ ಇತರ ಆರೋಪಿಗಳೊಂದಿಗೆ ವಿಳಂಬ ಮತ್ತು ಸಮಾನತೆಯ ಆಧಾರದ ಮೇಲೆ ಅವರು ನಿಯಮಿತ ಜಾಮೀನು ಕೋರಿದ್ದರು.

ದಿಲ್ಲಿ ಗಲಭೆಯ ಹಿಂದಿನ ಪಿತೂರಿ ಪ್ರಕರಣದಲ್ಲಿ ಆರೋಪಿಗಳಾದ ನತಾಶಾ ನರ್ವಾಲ್, ದೇವಾಂಗನಾ ಕಲಿತಾ ಮತ್ತು ಆಸಿಫ್ ಇಕ್ಬಾಲ್ ತನ್ಹಾ ಅವರಿಗೆ ದಿಲ್ಲಿ ಹೈಕೋರ್ಟ್ ಈ ಮೊದಲು ಜಾಮೀನು ನೀಡಿತ್ತು.

ಉಮರ್ ಖಾಲಿದ್ ಈ ದೇಶದ ನಂಬರ್ ಒನ್ ವಿಶ್ವವಿದ್ಯಾನಿಲಯ ಜೆಎನ್‌ಯುನಲ್ಲಿ ಉನ್ನತ ಶಿಕ್ಷಣ ಪಡೆದವರು. ಡಾಕ್ಟರೇಟ್ ಮಾಡಿದವರು.

‘‘ನಾನು ಪ್ರಜಾಪ್ರಭುತ್ವವನ್ನು ನಂಬುತ್ತೇನೆ ಮತ್ತು ನೀವು ಮತ ಹಾಕುವವರೆಗೂ ಸೀಮಿತವಾಗಿರಲು ಸಾಧ್ಯವಿಲ್ಲದ ಪ್ರಜಾಪ್ರಭುತ್ವವನ್ನು ನಾನು ನಂಬುತ್ತೇನೆ’’ ಎಂದೊಮ್ಮೆ ಹೇಳಿದ್ದರು ಉಮರ್.

ಸಮಸ್ಯೆಗಳ ಬಗ್ಗೆ ಪ್ರಜಾಸತ್ತಾತ್ಮಕ ರೀತಿಯಲ್ಲಿ ದನಿಯೆತ್ತುವುದು ದೈನಂದಿನ ಬದುಕಿನ ಭಾಗವಾಗಬೇಕು ಎಂದು ಅವರು ಹೇಳಿದ್ದರು.

ಇಂತಹ ಪ್ರತಿಭಾವಂತ, ಹೋರಾಟಗಾರ ಉಮರ್ ಅವರನ್ನು ಪಿತೂರಿ ಆರೋಪದ ಮೇಲೆ 2020ರ ಸೆಪ್ಟಂಬರ್‌ನಲ್ಲಿ ಬಂಧಿಸಲಾಯಿತು. ಅಂದಿನಿಂದಲೂ ಖಾಲಿದ್ ಜೈಲಿನಲ್ಲಿದ್ದಾರೆ.

ತಮ್ಮ ವಿರುದ್ಧದ ಆರೋಪಗಳನ್ನು ನಿರಾಕರಿಸಿರುವ ಅವರು, ಶಾಂತಿಯುತ ಪ್ರತಿಭಟನೆಯಲ್ಲಿ ಭಾಗವಹಿಸಿದ್ದೆ ಎಂದು ಹೇಳಿದರೂ ಅದಿನ್ನೂ ನ್ಯಾಯಾಲಯದ ಕಿವಿ ತಲುಪದೇ ಉಳಿದಂತಿದೆ.

ದಿಲ್ಲಿ ಪೊಲೀಸರ ಚಾರ್ಜ್‌ಶೀಟ್‌ನಲ್ಲಿ ಉಮರ್ ಅವರ ವಿರುದ್ಧ ಯಾವುದೇ ಭಯೋತ್ಪಾದಕ ಆರೋಪಗಳನ್ನು ಹೊರಿಸಲಾಗಿಲ್ಲ; ಅವರ ಹೆಸರನ್ನು ಕೇವಲ ದಾಖಲೆಯಲ್ಲಿ ಪುನರಾವರ್ತಿಸಲಾಗಿದೆ ಎಂದು ಉಮರ್ ಖಾಲಿದ್ ವಕೀಲರು ಹೇಳಿದ್ದಾರೆ. ಹೆಸರನ್ನು ಪುನರಾವರ್ತಿಸುವ ಮೂಲಕ, ಸುಳ್ಳು ಸತ್ಯವಾಗುವುದಿಲ್ಲ ಎಂದು ವಕೀಲರು ವಾದಿಸುತ್ತಲೇ ಬಂದಿದ್ಧಾರೆ.

ಉಮರ್ ಖಾಲಿದ್ ವಿರುದ್ಧದ ಆರೋಪಗಳು ಸುಳ್ಳು ಹಾಗೂ ಸಾಕ್ಷ್ಯ ತೀರಾ ದುರ್ಬಲವಾಗಿದೆ ಎಂಬುದು ಕಾನೂನು ವ್ಯಾಖ್ಯಾನಕಾರರ ಅಭಿಪ್ರಾಯವಾಗಿದೆ.

2022ರ ಅಕ್ಟೋಬರ್‌ನಲ್ಲಿ ಗಲಭೆ ಕುರಿತ ವರದಿಯಲ್ಲಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶರು, ಮೂವರು ನಿವೃತ್ತ ಹೈಕೋರ್ಟ್ ನ್ಯಾಯಾಧೀಶರು ಮತ್ತು ಮಾಜಿ ಕೇಂದ್ರ ಗೃಹ ಕಾರ್ಯದರ್ಶಿ ಉಮರ್ ಖಾಲಿದ್ ವಿರುದ್ಧದ ಯುಎಪಿಎ ಪ್ರಕರಣವನ್ನು ಪರಿಶೀಲಿಸಿದ್ದು, ಭಯೋತ್ಪಾದನೆ ಆರೋಪಗಳನ್ನು ವಿಧಿಸಲು ಯಾವುದೇ ಸಮರ್ಥನೀಯ ಪುರಾವೆಗಳು ಕಂಡುಬಂದಿಲ್ಲ ಎಂದು ಬರೆದಿದ್ದಾರೆ. ಕಾನೂನಿನಲ್ಲಿ ಆಂತರಿಕವಾಗಿ ವಿಶ್ವಾಸಾರ್ಹವಲ್ಲದ ವಿಚಾರಗಳ ಮೇಲೆ ಪ್ರಾಸಿಕ್ಯೂಷನ್ ಅವಲಂಬಿತವಾಗಿದೆ ಎಂದೂ ಅವರು ಹೇಳಿದ್ದಾರೆ. ಪೊಲೀಸರ ಹೇಳಿಕೆಗಳು ಅಸಂಗತವಾಗಿರುವುದನ್ನೂ ಅವರು ಗಮನಿಸಿದ್ದಾರೆ. ಸಂಗ್ರಹಿಸಲಾದ ಸಾಕ್ಷಿ ಹೇಳಿಕೆಗಳು ಕೃತಕವಾಗಿರುವ ಸಾಧ್ಯತೆ ಖಚಿತವಾಗುತ್ತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ದಿ ವೈರ್, quintನಂತಹ ವೆಬ್‌ಸೈಟ್‌ಗಳ ಲೇಖನಗಳನ್ನು ಕಳಿಸಿ ಜನಾಭಿಪ್ರಾಯ ರೂಪಿಸಲು ಪ್ರಯತ್ನಿಸುತ್ತಿದ್ದರು ಎಂಬುದೂ ಉಮರ್ ಮೇಲಿನ ಒಂದು ಆರೋಪ.

ಈ ಹಿಂದೆ ಜಾಮೀನು ನಿರಾಕರಿಸಿದ್ದಾಗ ಅದನ್ನು ಪ್ರಶ್ನಿಸಿದ್ದ ಉಮರ್ ಖಾಲಿದ್, ತಮ್ಮ ವಿರುದ್ಧದ ಪ್ರಕರಣ ಏನೆಂಬುದನ್ನು ಪ್ರಾಸಿಕ್ಯೂಷನ್ ತಿಳಿಯಬೇಕಿದೆ ಎಂದಿದ್ದರು. ಇದೆಲ್ಲದರ ಹೊರತಾಗಿಯೂ ಉಮರ್ ಸೆರೆವಾಸ ಕೊನೆಯಾಗುತ್ತಿಲ್ಲ.

ಉಮರ್‌ಗೆ ಜಾಮೀನು ನಿರಾಕರಿಸಿದ್ದನ್ನು, ಮುಕ್ತ ಅಭಿವ್ಯಕ್ತಿ ಮತ್ತು ಶಾಂತಿಯುತ ಸಭೆಗೆ ದೊಡ್ಡ ಹೊಡೆತ ಎಂದು ಆ್ಯಮ್ನೆಸ್ಟಿ ಇಂಟರ್‌ನ್ಯಾಶನಲ್ ವ್ಯಾಖ್ಯಾನಿಸಿತ್ತು.

ಜೈಲಿನಲ್ಲಿ ಉಮರ್ ಓದಿನ ಹಸಿವು ಇಂಗುತ್ತಿಲ್ಲ. ಎಡೆಬಿಡದೆ ಓದುತ್ತಾರೆ. ಸಹ ಕೈದಿಗಳಿಗೆ ಅರ್ಜಿಗಳನ್ನು ಬರೆದುಕೊಡುತ್ತಾರೆ. ಟಿವಿಯಲ್ಲಿ ಕ್ರಿಕೆಟ್ ವೀಕ್ಷಿಸುತ್ತಾರೆ ಎಂದು ಬಿಬಿಸಿ ವರದಿ ಉಲ್ಲೇಖಿಸಿದೆ.

ಬರವಣಿಗೆಯಲ್ಲಂತೂ ಅಪಾರ ಶ್ರದ್ಧೆ. ಜೈಲು ದಿನಚರಿ ಬರೆಯಬೇಕೆಂದುಕೊಂಡಿದ್ದಾರೆ. ಆ ವಿಚಾರ ಹಲವು ಪ್ರಕಾಶಕರ ಆಸಕ್ತಿಯನ್ನು ಕೆರಳಿಸಿದೆ ಎಂದೂ ಆ ವರದಿ ಹೇಳಿದೆ.

ಕುಟುಂಬಕ್ಕೆ ಪ್ರತೀ ವಾರ 20 ನಿಮಿಷಗಳ ವೀಡಿಯೊ ಕರೆಗೆ ಅನುಮತಿಯಿದೆ. ಸ್ನೇಹಿತರು ಜೈಲಿನಲ್ಲಿ ಅರ್ಧ ಗಂಟೆ ಕಾಲ ಅವರ ಭೇಟಿ ಮಾಡಬಹುದು.

ಇನ್ನು ಅವರ ಕುಟುಂಬದಲ್ಲಿ, ಹಲವು ವರ್ಷಗಳ ಕಾಲ ಉರ್ದು ಪತ್ರಿಕೆಯ ಸಂಪಾದಕರಾಗಿದ್ದ ತಂದೆ ರಾಜಕೀಯ ಪಕ್ಷವೊಂದರ ನಾಯಕರಾಗಿದ್ದಾರೆ. ಅವರ ತಾಯಿ ವೈದ್ಯೆಯಾಗಿದ್ದವರು. ಈಗ ಬುಟಿಕ್ ನಡೆಸುತ್ತಿದ್ದಾರೆ.

ಸಹೋದರಿಯ ಮದುವೆಯೂ ಈ ನಡುವೆ ನಡೆಯಿತು. ಅದಕ್ಕಾಗಿ ಒಂದು ವಾರದವರೆಗೆ ಉಮರ್ ಅವರಿಗೆ ತಾತ್ಕಾಲಿಕ ಜಾಮೀನು ನೀಡಲಾಗಿತ್ತು.

ಪರಿಸ್ಥಿತಿ ಆಶಾದಾಯಕವಿಲ್ಲ ಎಂಬುದು ಉಮರ್ ಅವರ ದೀರ್ಘ ಕಾಲದ ಸಂಗಾತಿ ಬನೋಜ್ಯೋತ್ಸ್ನಾ ಲಾಹಿರಿ ಅವರ ಕಳವಳ. ಅವರಿಬ್ಬರೂ 2008ರಲ್ಲಿ ವಿದ್ಯಾರ್ಥಿಗಳಾಗಿದ್ದ ಹೊತ್ತಲ್ಲಿ ಭೇಟಿಯಾದವರು.

ಜೈಲಿನಲ್ಲಿ ಉಮರ್ ಅವರನ್ನು ಕಾಣುವ ಸಂದರ್ಭದ ಬಗ್ಗೆ ಲಾಹಿರಿ ಬರೆಯುವುದನ್ನು ಬಿಬಿಸಿ ತನ್ನ ವರದಿಯೊಂದರಲ್ಲಿ ಹೇಳಿತ್ತು.

ಜೈಲಿನಲ್ಲಿ ಭೇಟಿಯಾಗುವ ಇಬ್ಬರ ನಡುವೆ ಗಾಜಿನ ಗೋಡೆ. ಮಾತು ಇಂಟರ್‌ಕಾಮ್ ಮೂಲಕ ಎಂಬ ವಿವರಗಳು ಅದರಲ್ಲಿವೆ.

‘‘ನಾವು ನಗುತ್ತೇವೆ, ತಮಾಷೆ ಮಾಡುತ್ತೇವೆ. ದುಃಖದ ವಿಷಯಗಳನ್ನು ಚರ್ಚಿಸುವುದಿಲ್ಲ. ನ್ಯಾಯಾಲಯದಲ್ಲಿ ಸನ್ನೆಯಲ್ಲೇ ಮಾತಾಡಿಕೊಳ್ಳುತ್ತೇವೆ’’ ಎಂದು ಲಾಹಿರಿ ಅವರು ಇಂಡಿಯಾ ಲವ್ ಪ್ರಾಜೆಕ್ಟ್ ಎಂಬ ಇನ್‌ಸ್ಟಾಗ್ರಾಮ್ ಖಾತೆಯೊಂದಕ್ಕೆ ಹೇಳಿದ್ದನ್ನು ಬಿಬಿಸಿ ವರದಿ ಉಲ್ಲೇಖಿಸಿದೆ.

ಜನವರಿಯಲ್ಲಿ ಅವರು ಪಾಲ್ ಲಿಂಚ್ ಅವರ ಬೂಕರ್ ವಿಜೇತ ‘ಪ್ರೊಫೆಟ್ ಸಾಂಗ್’, ವಿಲಿಯಂ ಸ್ಟೈರಾನ್ ಅವರ ‘ಸೋಫಿಸ್ ಚಾಯ್ಸ್’ ಮತ್ತು ಸಾದತ್ ಹಸನ್ ಮಾಂಟೋ ಅವರ ಕೃತಿಗಳು ಮತ್ತು ಉರ್ದು ಕವಿ ಮಿರ್ಜಾ ಗಾಲಿಬ್ ಅವರ ಪುಸ್ತಕ ಸೇರಿದಂತೆ ಆರು ಹೊಸ ಪುಸ್ತಕಗಳೊಂದಿಗೆ ಉಮರ್ ಅವರನ್ನು ಜೈಲಿನಲ್ಲಿ ಭೇಟಿ ಮಾಡಿದ್ದರ ಬಗ್ಗೆಯೂ ವರದಿ ಹೇಳಿದೆ.

ಖಾಲಿದ್ ಅವರು ಜೈಲಿನಲ್ಲಿ ಸುಮಾರು 200 ಪುಸ್ತಕಗಳನ್ನು ಓದಿದ್ದಾರೆ ಎಂಬುದು ಲಾಹಿರಿ ಅವರ ಲೆಕ್ಕ.

ಜೈಲು ವಾರ್ಡ್‌ನಲ್ಲಿ ಹಗಲಿನಲ್ಲಿ ಸೆಲ್‌ನಿಂದ ಹೊರಹೋಗಲು ಉಮರ್‌ಗೆ ಅನುಮತಿ ಇದೆ.

ಕೊಲೆಗಾರರು ಮತ್ತು ಇತರ ಘೋರ ಅಪರಾಧಗಳಲ್ಲಿ ಶಿಕ್ಷೆಗೊಳಗಾದವರ ಜೊತೆ ಉಮರ್ ಇರಬೇಕಾಗಿದೆ. ಇವರೆಲ್ಲರ ಮಧ್ಯೆ ನಾನೇಕೆ ಇಲ್ಲಿದ್ದೇನೆ? ಎಂದು ಭೇಟಿಯ ವೇಳೆ ಎಷ್ಟೋ ಸಲ ಉಮರ್ ಕೇಳುತ್ತಾರೆ ಎಂದು ಲಾಹಿರಿ ನೆನಪಿಸಿಕೊಂಡಿದ್ದನ್ನೂ ವರದಿ ಉಲ್ಲೇಖಿಸಿದೆ.

ನಿಜ. ಜೈಲಿನಲ್ಲಿ ಅವರೆಲ್ಲರ ಜೊತೆ ಉಮರ್ ಯಾಕಾದರೂ ಇರಬೇಕಾಗಿದೆ?

ಉಮರ್ ಖಾಲಿದ್ ಪ್ರಕರಣದಲ್ಲಿ ಏನಾಯಿತು ಎಂಬುದನ್ನು ನೋಡುತ್ತಿದ್ದರೆ, ಹೇಗೆ ಸರಕಾರ ತನ್ನ ವೈರಿಗಳೆಂದು ಭಾವಿಸಿರುವವರನ್ನು ತನಗೆ ಬೇಕಾದಷ್ಟು ಕಾಲ ಜೈಲಿನಲ್ಲಿಯೇ ಉಳಿಸಲಿದೆ ಎಂಬುದನ್ನು ಗ್ರಹಿಸಬಹುದಾಗಿದೆ.

ಇಲ್ಲಿ ನಿಜವಾಗಿಯೂ ಯಾರು ಯಾರ ವಿರುದ್ಧ ಸಂಚು ರೂಪಿಸಿದ್ದಾರೆ?

ಉಮರ್ ಖಾಲಿದ್ ವಿಚಾರದಲ್ಲಿ ವರ್ಷಗಟ್ಟಲೆ ಪ್ರಕರಣವನ್ನು ಎಳೆಯಲಾಯಿತು. ಜಾಮೀನು ಅರ್ಜಿಯ ವಿಚಾರಣೆಯೇ ಬಹಳ ಕಾಲ ನಡೆಯಲಿಲ್ಲ. ಸುಪ್ರೀಂ ಕೋರ್ಟ್‌ನಲ್ಲಿಯೂ ಬೇರೆ ಬೇರೆ ನ್ಯಾಯಾಧೀಶರ ಮುಂದೆ ಹೋಯಿತು. ಆದರೂ ವಿಚಾರಣೆ ಆಗಲಿಲ್ಲ. ಹಲವು ಬಾರಿ ವಿಚಾರಣೆ ನಿಂತುಹೋಯಿತು. ಕಡೆಗೆ ಮೊದಲ ಜಾಮೀನು ಅರ್ಜಿ ತಿರಸ್ಕೃತವಾಗಿದ್ದ ನ್ಯಾಯಾಲಯದಲ್ಲಿಯೇ ಮತ್ತೆ ಜಾಮೀನು ಪಡೆಯುವ ಹೋರಾಟ ನಡೆದಿದೆ.

ಆದರೆ ನ್ಯಾಯ ನಿರಾಕರಣೆಯಾಗುತ್ತಲೇ ಇದೆ.

ತಮಿಳುನಾಡಿನಲ್ಲಿ ದಲಿತರ ಮೇಲಿನ ದೌರ್ಜನ್ಯವಾಗಲಿ ಅಥವಾ ಲವ್ ಜಿಹಾದ್ ಹೆಸರಿನಲ್ಲಿ ಕಿರುಕುಳದ ಪ್ರಕರಣವಾಗಲಿ, ಯುರೋಪಿನಲ್ಲಿ ಇಸ್ಲಾಮೋಫೋಬಿಕ್ ಹೇಳಿಕೆಯಾಗಲಿ ಅಥವಾ ಕ್ಯಾಂಪಸ್‌ನಲ್ಲಿ ನೈರ್ಮಲ್ಯ ಕಾರ್ಮಿಕರ ಮುಷ್ಕರವಾಗಲಿ, ಪ್ರತೀ ಆಕ್ರೋಶದ ಬಗ್ಗೆ ಮಾತನಾಡಲು ಬಯಸುವ ವ್ಯಕ್ತಿ ಉಮರ್ ಖಾಲಿದ್ ಎಂದು ಹೋರಾಟಗಾರ ಅನಿರ್ಬನ್ ಭಟ್ಟಾಚಾರ್ಯ ಬರೆದಿದ್ದಾರೆ. ಸತ್ಯಕ್ಕಾಗಿ, ನ್ಯಾಯಕ್ಕಾಗಿ ಹಾಗೆ ಸತತ ಚಡಪಡಿಸುತ್ತಿದ್ದ ಹೋರಾಟಗಾರನನ್ನು ಜೈಲಿನಲ್ಲಿ ಬಂಧಿಸಿಡಲಾಗಿದೆ. ಅದೂ ಕೂಡ ಪೊಳ್ಳು ಕೇಸ್ ಹೊರಿಸುವ ಮೂಲಕ.

ಗಾಂಧೀಜಿಯ ಆದರ್ಶಗಳ ದೇಶ ಕಟ್ಟುವ ಮಾತಾಡಿದ, ದೇಶದಲ್ಲಿ ಸೌಹಾರ್ದ, ಐಕ್ಯತೆ ಇರಬೇಕು ಎಂದು ಹೇಳಿದ ಅಪ್ಪಟ ಪ್ರತಿಭಾವಂತ, ಅಷ್ಟೇ ಮಾನವತಾವಾದಿ ಉಮರ್ ಖಾಲಿದ್ ಜೈಲಿನಲ್ಲಿರುವಂತಾಗಿರುವುದು ಯಾರ ಸಂಚು?

ಚಿಂತಕ ಶಿವಸುಂದರ್ ಅವರು ಬರೆದ ‘ನಾನೂ ಉಮರ್ ಖಾಲಿದ್’ ಶೀರ್ಷಿಕೆಯ ಕವನದ ಕೆಲವು ಸಾಲುಗಳು ಹೀಗಿವೆ:

ಉಮರ್ ಖಾಲಿದ್

ದ್ವೇಷದ ಕೋಟೆಯಲ್ಲಿ

ಪ್ರೀತಿಯ ಸ್ಫೋಟಕ ಅಡಗಿಸಿಟ್ಟ

ದ್ವೇಷ ದ್ರೋಹಿ...

ಸುಳ್ಳಿನ ಸಂದೂಕದಲ್ಲಿ

ಸತ್ಯದ ಕಿಡಿಯನ್ನು ಬಚ್ಚಿಟ್ಟ

ವಿಫಲ ಸಂಚುಕೋರ...

ಭೀಭತ್ಸ ಮೌನದ ಬೀದಿಗಳಲ್ಲಿ

ಮಾತಿನ ಮೊಟ್ಟೆ ಒಡೆಯಲು

ಗುಟ್ಟು ಕಾವು ಕೊಟ್ಟ

ಗಲಭೆಕೋರ...

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಹರೀಶ್ ಎಚ್.ಕೆ.

contributor

Similar News