ಮಾಧ್ಯಮ ವಿಚಾರಣೆಯೇ ತಲೆನೋವು
ದೇಶದ್ರೋಹದ ಆರೋಪದ ಮೇಲೆ ಬಂಧಿತರಾಗಿದ್ದ ಜೆಎನ್‌ಯು ವಿದ್ಯಾರ್ಥಿಗಳು ಶುಕ್ರವಾರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಕೆಲ ಸುದ್ದಿಚಾನಲ್‌ಗಳು ಈ ತರುಣನ ಕುರಿತಂತೆ ಹರಡಿದ ವದಂತಿಗಳ ಬಣ್ಣ ಇದೀಗ ಬಯಲಾಗಿದೆ. ಅವರ ಪ್ರಕಾರ ಈ ಜೆಎನ್‌ಯು ವಿದ್ಯಾರ್ಥಿಯಾದ ಉಮರ್ ಖಾಲಿದ್ ತೀರಾ ಅಪಾಯಕಾರಿ ವ್ಯಕ್ತಿ.
ನ್ಯೂಸ್ ಎಕ್ಸ್ ಉಮರ್‌ನನ್ನು ಜೈಶೆ ಮುಹಮ್ಮದ್ ಬಗ್ಗೆ ಒಲವು ಹೊಂದಿದ ವ್ಯಕ್ತಿ ಎಂದು ಕರೆದರೆ, ಝೀ ನ್ಯೂಸ್ ಫೆಬ್ರವರಿ 9ವರೆಗೆ ಉಗ್ರ ಸಂಘಟನೆಗಳಿಗೆ 800 ಕರೆಗಳನ್ನು ಮಾಡಿದ್ದಾನೆ ಎಂದು ಘೋಷಿಸಿತ್ತು. ಗೃಹಸಚಿವ ರಾಜನಾಥ್ ಸಿಂಗ್ ಅವರಂತೂ ಜೆಎನ್‌ಯು ವಿದ್ಯಾರ್ಥಿಗಳು ಹಾಗೂ ಪಾಕಿಸ್ತಾನಿ ಉಗ್ರ ಹಫೀಝ್ ಮುಹಮ್ಮದ್ ಸಯೀದ್‌ಗೆ ನೇರ ಸಂಪರ್ಕವಿದೆ ಎಂದು ಸರ್ಟಿಫಿಕೇಟ್ ನೀಡಿ, ಪ್ರಕರಣದ ವಿಚಾರಣೆಗೆ ದಿಲ್ಲಿ ಪೊಲೀಸರನ್ನು ನಿಯೋಜಿಸಿದರು.
ಫೆಬ್ರವರಿ 9ರಂದು ವಿದ್ಯಾರ್ಥಿಗಳು ದೇಶವಿರೋಧಿ ಘೋಷಣೆ ಕೂಗಿದ್ದಾರೆ ಎನ್ನಲಾದ ಸಮಾರಂಭ ಜೆಎನ್‌ಯುನಲ್ಲಿ ನಡೆದಿತ್ತು. ಈ ಸಂಬಂಧ ದಿಲ್ಲಿ ಪೊಲೀಸರು ಖಾಲಿದ್, ಕನ್ಹಯ್ಯಾ ಕುಮಾರ್ ಹಾಗೂ ಅನಿರ್ಬನ್ ಭಟ್ಟಾಚಾರ್ಯ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿದ್ದರು. ಆದರೆ ಪ್ರಕರಣ ದಾಖಲಿಸಲು ಸಾಕ್ಷ್ಯವಾಗಿ ಪರಿಗಣಿಸಿದ್ದ ವೀಡಿಯೊ ತಿದ್ದಲ್ಪಟ್ಟ ವೀಡಿಯೊ ಎನ್ನುವುದು ಬಹುಬೇಗನೆ ಬೆಳಕಿಗೆ ಬಂತು. ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾಗೆ ಮಾರ್ಚ್ 2ರಂದು ಜಾಮೀನು ಸಿಕ್ಕಿತು. ಹದಿನೈದು ದಿನದ ಬಳಿಕ ಶುಕ್ರವಾರ ಭಟ್ಟಾಚಾರ್ಯ ಹಾಗೂ ಖಾಲಿದ್‌ಗೆ ಬಿಡುಗಡೆ ಭಾಗ್ಯ ಬಂದಿದೆ. ಈ ಮಧ್ಯೆ ನ್ಯಾಯಾಲಯ ದಿಲ್ಲಿ ಪೊಲೀಸರಿಗೆ ದೇಶದ್ರೋಹ ಎಂದರೆ ಏನರ್ಥ ಎಂದು ಖಾರವಾಗಿ ಪ್ರಶ್ನಿಸಿದೆ.
ಕನ್ಹಯ್ಯ ಅವರಂತೆ ಖಾಲಿದ್ ಹಾಗೂ ಅನಿರ್ಬನ್ ಅವರಿಗೂ ಕ್ಯಾಂಪಸ್‌ನಲ್ಲಿ ಅದ್ದೂರಿ ಸ್ವಾಗತ ದೊರಕಿದೆ. ಕೆಂಪು ಕಮ್ಯುನಿಸ್ಟ್ ಧ್ವಜ, ಅಂಬೇಡ್ಕರ್ ಅನುಯಾಯಿಗಳ ನೀಲಿ ಧ್ವಜ ಹಾಗೂ ತ್ರಿವರ್ಣ ರಾಷ್ಟ್ರಧ್ವಜಗಳು ಹಾರಾಡುತ್ತಿರುವ ವಾತಾವರಣದಲ್ಲಿ ಇಬ್ಬರೂ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಶುಕ್ರವಾರ ಬಿಡುಗಡೆಯಾದ ಇಬ್ಬರು ವಿದ್ಯಾರ್ಥಿಗಳು ಸ್ಕ್ರಾಲ್.ಇನ್‌ಗೆ ವಿಶೇಷ ಸಂದರ್ಶನ ನೀಡಿ, ರಾಷ್ಟ್ರವಿರೋಧಿ ಎಂಬ ಹಣೆಪಟ್ಟಿ ಹೊತ್ತ ತಮ್ಮ ಅನುಭವಗಳನ್ನು ಹಂಚಿಕೊಂಡರು.
ಜೈಲಿನಲ್ಲಿ ಕಳೆದ ಅವಧಿ ಹೇಗಿತ್ತು? ಪೊಲೀಸರು ಏನು ಪ್ರಶ್ನಿಸಿದರು?
ಖಾಲಿದ್: ಜೈಲು ಅನುಭವವನ್ನು ಎರಡು ಭಾಗವಾಗಿ ವಿಂಗಡಿಸುತ್ತೇವೆ. ಒಂದು ಏಳು ದಿನಗಳ ಪೊಲೀಸ್ ಕಸ್ಟಡಿ ಹಾಗೂ ಇನ್ನೊಂದು ತಿಹಾರ್ ಜೈಲಿನಲ್ಲಿ ನ್ಯಾಯಾಂಗ ಬಂಧನ. ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಪೊಲೀಸ್ ಕಸ್ಟಡಿಯ ವಿವರಗಳನ್ನು ನಿಖರವಾಗಿ ವಿವರಿಸಲಾಗದು. ಆದರೆ ನಮ್ಮನ್ನು ದೈಹಿಕವಾಗಿ ಹಿಂಸೆ ಮಾಡಿಲ್ಲ ಎಂದಷ್ಟೇ ದಾಖಲೆಗೆ ಹೇಳಬಹುದು. ಆದರೆ ಸಾಮಾನ್ಯ ದ್ವೇಷದ ವಾತಾವರಣ ಇತ್ತು. ಏಕೆಂದರೆ ಅವರ ಕಣ್ಣಲ್ಲಿ ಮಾಮೂಲಿ ಕೊಲೆ, ಅತ್ಯಾಚಾರ, ಕಳ್ಳತನದ ಆರೋಪಿಗಳು ಒಬ್ಬರು ಅಥವಾ ಇಬ್ಬರ ವಿರುದ್ಧ ಅಪರಾಧ ಎಸಗಬಹುದು. ಆದರೆ ನಾವು ದೇಶದ ವಿರುದ್ಧದ ಅಪರಾಧ ಕೃತ್ಯದಲ್ಲಿ ಶಾಮೀಲಾದವರು. ಆದ್ದರಿಂದ ಪೊಲೀಸ್ ಕಸ್ಟಡಿಯಲ್ಲಿ ನೈತಿಕವಾಗಿ ದೊಡ್ಡ ಪ್ರಮಾಣದ ಆಕ್ರೋಶ ವ್ಯಕ್ತವಾಗಿತ್ತು. ಪ್ರತಿಯೊಬ್ಬರೂ ರಾಷ್ಟ್ರೀಯವಾದದ ಚಿಂತನೆಯನ್ನು ಇವರಿಗೆ ಹಚ್ಚಬೇಕು ಎಂಬ ಮನೋಸ್ಥಿತಿಯಲ್ಲೇ ಇದ್ದರು. ನಾವು ಹೇಗೆ ಪರಾವಲಂಬಿಗಳು, ತುತ್ತು ಉಣಿಸಿದ ತಾಯಿಯ ಕೈಯನ್ನೇ ಕಚ್ಚುವ ಕೆಲಸ ಮಾಡಿದವರು ಎಂಬ ಅರ್ಥದಲ್ಲಿ ನಮಗೆ ಬೋಧನೆ ನಡೆದಿತ್ತು. ಹಿರಿಯ ಅಧಿಕಾರಿಯಿಂದ ಕಿರಿಯ ಅಧಿಕಾರಿವರೆಗೆ ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯ ಸಲಹೆ ನೀಡುವವರೇ.
ವಿಶೇಷ ಪೊಲೀಸ್ ಪಡೆ, ತೀರಾ ದ್ವೇಷ ಹಾಗೂ ಬೆದರಿಸುವ ಮನೋಭಾವ ಹೊಂದಿತ್ತು. ವಿಶೇಷ ಘಟಕಕ್ಕೆ ಪ್ರಕರಣ ವರ್ಗಾಯಿಸಲಾಗಿದೆ ಎಂಬ ಸುದ್ದಿ ಓದಿ ನಮಗೆ ನಿಜಕ್ಕೂ ಕಳವಳವಾಗಿತ್ತು. ವಿಶೇಷ ಪಡೆ ಸಾಮಾನ್ಯವಾಗಿ ಮಾದಕವಸ್ತು, ಸಂಘಟಿತ ಅಪರಾಧ ಹಾಗೂ ಉಗ್ರಗಾಮಿ ಕೃತ್ಯಗಳ ವಿಚಾರಣೆ ನಡೆಸುವಂಥದ್ದು. ಉಗ್ರ ವಿಚಾರಣೆಯಲ್ಲಂತಲೂ ವಿಶೇಷ ಘಟಕ ಕುಖ್ಯಾತಿ ಪಡೆದಿದೆ. ಅವರು ಆರೋಪ ಹೊರಿಸಿದ ಶೇ.70ರಷ್ಟು ಮಂದಿ ಖುಲಾಸೆಯಾಗಿದ್ದಾರೆ.
ಭಟ್ಟಾಚಾರ್ಯ: ವಿಶೇಷ ಪಡೆಗೆ ನಮ್ಮ ಮೊದಲ ಪ್ರಶ್ನೆ ಈ ಪ್ರಕರಣವನ್ನು ನೀವೇಕೆ ವಿಚಾರಣೆ ನಡೆಸುತ್ತಿದ್ದೀರಿ? ಎನ್ನುವುದಾಗಿತ್ತು. ನಾವು ಯಾವ ಘೋರ ಕೃತ್ಯ ಎಸಗಿದ್ದೇವೆ? ಮಾದಕ ವಸ್ತು, ಸಂಘಟಿತ ಅಪರಾಧ ಅಥವಾ ಉಗ್ರಗಾಮಿ ಕೃತ್ಯವೇ? ಇದು ವಿಶೇಷ ಪಡೆ ನಿರ್ವಹಿಸುವ ಪ್ರಕರಣವೇ ಅಲ್ಲ. ಈ ಘಟಕಕ್ಕೆ ಏಕೆ ಪ್ರಕರಣ ಹಸ್ತಾಂತರಿಸಲಾಗಿದೆ ಎನ್ನುವುದೇ ನಮಗೆ ಆತಂಕದ ವಿಚಾರವಾಗಿತ್ತು.
ಖಾಲಿದ್: ಪ್ರತಿದಿನ ಪ್ರಕರಣಕ್ಕೆ ಹೊಸ ತಿರುವು ಸಿಗುತ್ತಿತ್ತು. ಜೈಶೆ ಮುಹಮ್ಮದ್ ಸಂಪರ್ಕದಿಂದ ಹಿಡಿದು, ಪಾಕಿಸ್ತಾನಕ್ಕೆ ಹೋಗಿ ಬಂದವರೆಗೆ. ಕನ್ಹಯ್ಯೆ ಬಂಧನ ತಿರುಗುಬಾಣವಾದ ಮೇಲೆ, ಸರಕಾರ ನಮ್ಮನ್ನು ಜಾಲದಲ್ಲಿ ಸಿಲುಕಿಸಲು ಹೊಸ ಕಥೆ ಹೆಣೆಯುವ ಸಲುವಾಗಿ ವಿಶೇಷ ಘಟಕಕ್ಕೆ ನೀಡಿದೆಯೇ ಎನ್ನುವುದು ನಮ್ಮ ಆತಂಕವಾಗಿತ್ತು.
ಭಟ್ಟಾಚಾರ್ಯ: ಪೊಲೀಸರ ಜತೆಗಿನ ಅನೌಪಚಾರಿಕ ಮಾತುಕತೆ ಕೂಡಾ ಅರಿವು ಮೂಡಿಸುವಂಥದ್ದಾಗಿತ್ತು. ಜೆಎನ್‌ಯು ಸಮಾಜಕ್ಕೆ ಏನೂ ಕೊಡುಗೆ ನೀಡುತ್ತಿಲ್ಲ. ನಮಗೆ ಏನೂ ಕೆಲಸ ಇಲ್ಲ. ನಾವು ವಾಸ್ತವವಾಗಿ ನಮ್ಮ ವೃತ್ತಿ ಬಗ್ಗೆ ಗಮನ ಹರಿಸಬೇಕು, ಅದು ಮಾತ್ರ ರಾಷ್ಟ್ರಕ್ಕೆ ನೀಡಬಹುದಾದ ಕೊಡುಗೆ ಎನ್ನುವುದು ಅವರ ಸಲಹೆಯಾಗಿತ್ತು. ಅನೌಪಚಾರಿಕವಾಗಿ ಮಾತನಾಡುತ್ತಾ, ಈ ಹುಳ, ಜಂತುಗಳನ್ನು ಮುಗಿಸಿಬಿಡಬೇಕು ಎಂಬ ಮಾತೂ ಕೇಳಿಬಂದಿತ್ತು. ಖಾಲಿದ್ ಮುಸ್ಲಿಮ್ ಆಗಿದ್ದ ಕಾರಣದಿಂದ ಮುಸ್ಲಿಮ್ ದೃಷ್ಟಿಕೋನ ಕೂಡಾ ಪ್ರಮುಖವಾಗಿತ್ತು.
ಮುಸ್ಲಿಮ್ ದೃಷ್ಟಿಕೋನ ಹೇಗೆ ಕೆಲಸ ಮಾಡಿತು? ಅನಿರ್ಬನ್ ಹಾಗೂ ಉಮರ್‌ನನ್ನು ಪೊಲೀಸರು ವಿಚಾರಣೆ ನಡೆಸಿದ ರೀತಿ ಹೇಗೆ ಭಿನ್ನವಾಗಿತ್ತು?
ಭಟ್ಟಾಚಾರ್ಯ: ಖಾಲಿದ್ ಇದನ್ನು ಮಾಡುತ್ತಾನೆ ಎಂದರೆ ಕಾರಣ ಅರ್ಥ ಮಾಡಿಕೊಳ್ಳಬಹುದು. ಅಲ್ಲಿ ನೀನು ಏನು ಮಾಡುತ್ತಿದ್ದೆ? ಬಹುಶಃ ಕಲುಷಿತಗೊಳ್ಳದ ಖಾಲಿದ್ ಅವರಿಗೆ ಹೆಚ್ಚು ಸೂಕ್ತವಾಗುತ್ತಿದ್ದ ಎನಿಸುತ್ತದೆ. ನನ್ನ ಇರುವಿಕೆ ಅವರಿಗೆ ಕಿರಿಕಿರಿಗೆ ಕಾರಣವಾಗಿತ್ತು. ಏಕೆಂದರೆ ತಾವು ಅಂದುಕೊಂಡಂತೆ ಅವರಿಗೆ ಕಥೆ ಕಟ್ಟಲಾಗಲಿಲ್ಲ.
ಖಾಲಿದ್: ನಾನು ಖಾಲಿದ್ ಎಂಬ ಕಾರಣಕ್ಕೆ ವಿಶೇಷವಾಗಿ ನನ್ನನ್ನು ಗುರಿ ಮಾಡಲಾಗಿತ್ತು. ಅನಿರ್ಬನ್ ಬಗ್ಗೆಯೂ ಅವರಿಗೆ ದ್ವೇಷ ಇತ್ತು. ಅದಕ್ಕೆ ಕಾರಣ ಸರಳ. ಸಿದ್ಧಪಡಿಸಿ ಇಟ್ಟುಕೊಂಡಿದ್ದ ಕಥೆಯನ್ನು ಆತ ಹಾಳು ಮಾಡಿಬಿಟ್ಟಿದ್ದ. ಇದೀಗ ಅವರ ಕಥೆ ನಮಗೆ ಹೋಲಿಕೆಯಾಗುತ್ತಿರಲಿಲ್ಲ. ಅವರು ಮಾಧ್ಯಮದಿಂದ ಅದನ್ನು ಆರಂಭಿಸಿದ್ದರು. ನಾನು ದೇಶದ್ರೋಹಿಯಾದರೆ ಅದಕ್ಕೆ ನನ್ನ ಮುಸ್ಲಿಮ್ ಧರ್ಮ ಕಾರಣ. ಆದರೆ ಅನಿರ್ಬನ್ ದೇಶ ದ್ರೋಹಿಯ ಜತೆಗೆ ಧರ್ಮ ಹಾಗೂ ಜಾತಿ ದ್ರೋಹಿಯೂ ಆಗಿದ್ದ!
ಒಂದು ಅನೌಪಚಾರಿಕ ಮಾತುಕತೆಯ ವೇಳೆ, ಉಮರ್ ನನ್ನ ಮೇಲೆ ಪ್ರಭಾವ ಬೀರಿದ್ದ ಎಂದು ಒಪ್ಪಿಕೊಳ್ಳುವಂತೆ ಆತನಿಗೆ ಸೂಚಿಸಲಾಗಿತ್ತು. ಖಾಲಿದ್ ಜಾಮಿಯಾ ನಗರ ಮೂಲದವನು. ಆತ ಕಾಶ್ಮೀರಿಗಳನ್ನು ಅಲ್ಲಿಂದ ಕರೆತಂದಿದ್ದಾನೆ. ನೀನೇಕೆ ಇದರಲ್ಲಿ ಸಿಕ್ಕಿಹಾಕಿಕೊಂಡೆ ಎಂದೂ ಆತನನ್ನು ಓಲಾಟಕ್ಕೆ ಸಿಲುಕಿಸುವ ಪ್ರಯತ್ನವನ್ನೂ ಮಾಡಿದರು.
ಅನಿರ್ಬನ್: ಉಮರ್ ಪಾಕಿಸ್ತಾನಕ್ಕೆ ಹೋಗಿದ್ದಾನೆ. ಬಾಂಗ್ಲಾದೇಶಕ್ಕೆ ಕರೆ ಮಾಡಿದ್ದಾನೆ ಎಂಬ ವದಂತಿಗಳ ಬಗ್ಗೆ ಪೊಲೀ ಸರನ್ನು ಪ್ರಶ್ನಿಸಿದೆವು. ಯಾವ ಬಂಧನವೂ ಆಗುವ ಮೊದಲು ಮಾಧ್ಯಮದಲ್ಲಿ ಈ ವಿಷಯ ಪ್ರಟಕವಾಗಿತ್ತು ಎನ್ನುವುದನ್ನು ಗಮನಕ್ಕೆ ತಂದೆವು. ಏನೂ ನಡೆಯದಿದ್ದರೂ, ಇದೆಲ್ಲವೂ ಮಾಧ್ಯಮ ಸೃಷ್ಟಿ ಎನ್ನುವುದನ್ನೂ ಪೊಲೀಸರ ಗಮನಕ್ಕೆ ತಂದೆವು.
ಹಾಗಾದರೆ ನೀವು ವಿವಾದದಿಂದ ಹೊರಗೆ ಬರಲು ಏಕೆ ಸಾಧ್ಯವಾಗಲಿಲ್ಲ? ಫೆಬ್ರವರಿ 9ರಂದು ಏನು ನಡೆಯಿತು?
ಭಟ್ಟಾಚಾರ್ಯ: ಪ್ರಕರಣ ನ್ಯಾಯಾಲ ಯದಲ್ಲಿ ಇರುವುದರಿಂದ ಆ ಬಗ್ಗೆ ಮಾತನಾಡುವಂತಿಲ್ಲ. ಆದರೆ ಇಲ್ಲಿ ಗಮನಿಸಬೇಕಾದ ವಿಚಾರವೆಂದರೆ, ಫೆಬ್ರವರಿ 9ರ ಘಟನೆ ಇಲ್ಲಿ ಪ್ರಮುಖ ವಿಷಯವೇ ಅಲ್ಲ. ಇದು ಜೆಎನ್‌ಯು ಯಾವುದರ ಪರವಾಗಿ ನಿಂತಿದೆಯೋ ಅದೆಲ್ಲದರ ಮೇಲೆ ದಾಳಿ ಮಾಡುವ ಸಂಚು. ಮಹಿಷಾಸುರ ಸೃಷ್ಟಿಯಿಂದ ಹಿಡಿದು ಯುಜಿಸಿ ವಶಪಡಿಸಿಕೊಳ್ಳಿ, ಕಿಸ್ ಆಫ್ ಲವ್‌ವರೆಗಿನ ಎಲ್ಲವೂ ಇದರಲ್ಲಿ ಒಳಗೊಳ್ಳುತ್ತದೆ. ಫೆಬ್ರವರಿ 9ರಂದು ನಡೆದ ರಾಷ್ಟ್ರವಿರೋಧಿ ಚಟುವಟಿಕೆಗೆ ಮಾತ್ರವಲ್ಲದೇ, ಇದುವರೆಗಿನ ಎಲ್ಲ ಚಟುವಟಿಕೆಗಳಿಗೂ ಜೆಎನ್‌ಯು ಮೇಲೆ ದಾಳಿ ನಡೆಯಿತು. ಅದು ಸಂಸ್ಥೆಯ ಮೇಲಿನ ಹಾಗೂ ವೌಲ್ಯಗಳ ಮೇಲಿನ ದಾಳಿ ಎನ್ನುವುದು ಅವರಿಗೆ ತಿಳಿದಿದೆ. ಇದು ಒಂದು ಕಾಲ್ಪನಿಕ ಹಾಗೂ ಸಮೂಹದ ಮನೋಸ್ಥಿತಿ ಎಂದು ಪೊಲೀಸರಿಗೆ ನಾವು ಹೇಳಿದೆವು. ಅದನ್ನು ನಾವು ಸಾಬೀತುಪಡಿಸಿದರೂ, ಅದು ನಿಷ್ಪ್ರಯೋಜಕ. ಜನರ ಮನಸ್ಸಿನಲ್ಲಿ ಈಗಾಗಲೇ ನಮ್ಮನ್ನು ಉಗ್ರರನ್ನಾಗಿ ಬಿಂಬಿಸಿದ್ದು, ಅದು ಅಚ್ಚಳಿಯದೇ ಉಳಿಯುತ್ತದೆ.
ಖಾಲಿದ್: ಕಳೆದ ಒಂದೂವರೆ ವರ್ಷದಲ್ಲಿ ಕ್ಯಾಂಪಸ್‌ನಲ್ಲಿ ನಡೆದ ಘಟನೆಗಳಿಗೂ ಇದು ಸಂಬಂಧಿಸಿದ್ದು. ಕೇವಲ ಫೆಬ್ರವರಿ 9ರ ಘಟನೆಗಷ್ಟೇ ಸಂಬಂಧಿಸಿದ್ದಲ್ಲ. ಇಲ್ಲಿ ಇದೀಗ ಸಿನಿಕತನದ ಕೋಮು ಧ್ರುವೀಕರಣ ನಡೆದಿದೆ. ರಾಷ್ಟ್ರೀಯವಾದದ ಹೆಸರಿನಲ್ಲಿ ಬಿಜೆಪಿ ಇದನ್ನು ಸೃಷ್ಟಿಸಿದೆ. ಇನ್ನೊಂದು ಅಂಶವೆಂದರೆ ವಿದ್ಯಾರ್ಥಿ ಚಳವಳಿಗಳು ಜಾಧವಪುರ, ಹೈದರಾಬಾದ್ ವಿವಿ, ಎಫ್‌ಟಿಟಿಐನಲ್ಲಿ ತೀವ್ರಗೊಂಡಿದ್ದವು. ಇದು ಕಾಂಗ್ರೆಸ್ ಹಾಗೂ ಬಿಜೆಪಿ ನಡುವಿನ ವ್ಯತ್ಯಾಸ. ಕಾಂಗ್ರೆಸ್ ಸರಕಾರ ಆದಿವಾಸಿಗಳ ವಿರುದ್ಧ ಕ್ರಮಕ್ಕೆ ಮುಂದಾಯಿತು. ಆದರೆ ಕಾರ್ಯಕರ್ತರು ಅದಕ್ಕೆ ವಿದ್ಯಾರ್ಥಿಗಳನ್ನು ಸಕ್ರಿಯಗೊಳಿಸಲಿಲ್ಲ. ಆದರೆ ಬಿಜೆಪಿಯ ರಚನೆಯಲ್ಲಿ, ಅದರ ಸೈದ್ಧಾಂತಿಕ ಹಿನ್ನೆಲೆಯಲ್ಲಿ ಶೈಕ್ಷಣಿಕ ಸಂಸ್ಥೆಗಳು ಅದರ ದಾಳಿಯ ಮುಖ್ಯ ಗುರಿಯಾಗಿದೆ. ಅಂದರೆ ವಿದ್ಯಾರ್ಥಿಗಳನ್ನು ಈ ಉದ್ದೇಶಕ್ಕೆ ಬಳಸಿಕೊಳ್ಳುತ್ತಿದೆ ಎನ್ನುವುದು ಸ್ಪಷ್ಟ. ಫೆಬ್ರವರಿ 9ರ ಕಟ್ಟುಕಥೆ, ವಿದ್ಯಾರ್ಥಿ ಚಳವಳಿಯನ್ನು ಹತ್ತಿಕ್ಕುವ ಹಾಗೂ ಕಾನೂನುಬಾಹಿರ ಎಂದು ಮಾಡುವ ಹುನ್ನಾರ. ಅದರಲ್ಲೂ ಮುಖ್ಯವಾಗಿ ರೋಹಿತ್ ವೇೆಮುಲಾ ಪ್ರಕರಣ ಹಾಗೂ ಯುಜಿಸಿ ಸ್ವಾಧೀನ ಚಳವಳಿ ಬಳಿಕ ಈ ಪ್ರಯತ್ನ ನಡೆದಿತ್ತು.
ನಾನು ಮೊದಲೇ ಹೇಳಿದಂತೆ, ಭಾರತ್ ಕಿ ಬರ್ಬಾದಿ ಘೋಷಣೆಗೆ ಬಿಜೆಪಿ ಆಕ್ಷೇಪ ನಿರೀಕ್ಷಿತ. ಆದರೆ ಈ ವಿಷಯವನ್ನು ಬೇರೆಯವರು ಕೈಗೆತ್ತಿಕೊಳ್ಳಬೇಕು ಎನ್ನುವುದು ಅದರ ಆಶಯವಾಗಿತ್ತು. ಆದ್ದರಿಂದ ಫೆಬ್ರವರಿ 9ರ ಘಟನೆಯನ್ನಷ್ಟೇ ನೋಡದೆ, ವಿಸ್ತೃತವಾಗಿ ಅದನ್ನು ಅರ್ಥ ಮಾಡಿಕೊಳ್ಳಬೇಕು.
ಒಂದು ತಿಂಗಳಿಂದ ನಿಮಗೆ ರಾಷ್ಟ್ರದ್ರೋಹಿ ಎಂಬ ಪಟ್ಟ ಕಟ್ಟಲಾಗಿದೆ. ಈ ಹಣೆಪಟ್ಟಿ ಬಗ್ಗೆ ನಿಮ್ಮ ಅಭಿಪ್ರಾಯ ಏನು?
ಖಾಲಿದ್: ಅವರು ರಾಷ್ಟ್ರಪ್ರೇಮಿಗಳಾಗಿದ್ದರೆ, ನನ್ನನ್ನು ದೇಶದ್ರೋಹಿ ಎಂದು ಕರೆಯಲಿ. ಆರೆಸ್ಸೆಸ್ ಹಾಗೂ ಬಿಜೆಪಿ ತಮ್ಮ ಆಡಳಿತ ಮುಂದುವರಿಸಿದರೆ, ಈ ದೇಶದಲ್ಲಿ ಬಹಳಷ್ಟು ಮಂದಿಯನ್ನು ರಾಷ್ಟ್ರದ್ರೋಹಿಗಳಾಗಬೇಕಾಗುತ್ತದೆ. ಅದು ಈಗ ನಡೆಯುತ್ತಿದೆ. ಬಿಜೆಪಿ ನಮ್ಮನ್ನು ದೇಶದ್ರೋಹಿ ಎಂದು ಕರೆದರೆ ನಾವು ವಿಚಲಿತರಾಗುವುದಿಲ್ಲ. ರಾಷ್ಟ್ರ- ಸರಕಾರವನ್ನು ಅವರು ನೋಡುವ ಬಗೆಗೂ ನಮ್ಮ ವಿರೋಧವಿದೆ.
ಸರಕಾರ ಈಗ ತನ್ನನ್ನು ವಿರೋಧಿಸುವ ಎಲ್ಲರನ್ನೂ ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ. ಇದು ಸೈದ್ಧಾಂತಿಕ ಅಪರಾಧ. ನಮ್ಮನ್ನು ಏನು ಕರೆದರೂ ಇಂಥ ಅನಿಷ್ಟದ ವಿರುದ್ಧ ನಾವು ಹೋರಾಟ ಮುಂದುವರಿಸುತ್ತೇವೆ.
ಉಮರ್, ನಿಮ್ಮ ಮೇಲಿನ ಭಯೋತ್ಪಾದಕ ಆರೋಪದ ಬಗ್ಗೆ ನೀವು ಸಮರ್ಥಿಸಿಕೊಂಡು, ಆ ಸಿದ್ಧಾಂತದಲ್ಲಿ ನಂಬಿಕೆ ಇಲ್ಲ ಎಂದು ಹೇಳಿದ್ದೀರಿ. ಅದು ತಪ್ಪು ಸಮರ್ಥನೆ ಎಂದು ನಿಮಗೆ ಅನಿಸುತ್ತದೆಯೇ?
ಇಲ್ಲ. ನಿಜವನ್ನು ನೇರವಾಗಿ ಹೇಳುವುದೂ ಮುಖ್ಯ. ವಾಸ್ತವವೆಂದರೆ ಅವರು ನನ್ನನ್ನು ಇಸ್ಲಾಮಿಸ್ಟ್, ಜೈಶೆ ಮುಹಮ್ಮದ್ ಒಲವು ಇರುವ ವ್ಯಕ್ತಿ, ಪಾಕಿಸ್ತಾನಕ್ಕೆ ಹೋಗಿದ್ದೆ ಎಂದೆಲ್ಲ ಹೇಳಿದ್ದರು. ಆದ್ದರಿಂದ ನನ್ನ ಇಮೇಜ್ ಪ್ರದರ್ಶಿಸುವುದು ಅನಿವಾರ್ಯವಾಗಿತ್ತು. ಕನ್ಹಯ್ಯೆ ಅಥವಾ ಅನಿರ್ಬನ್ ಅವರಿಗಿಂತ ನನಗೆ ಅದು ಸುಲಭವಾಗಿತ್ತು.
ಆದ್ದರಿಂದ ಮೊದಲ ವಿಚಾರಣೆ ವೇಳೆಯೇ ನಾನು ಹಾಗೇಕೆ ಹೇಳುತ್ತಿದ್ದೀರಿ. ನನಗೆ ಅದರಲ್ಲಿ ನಂಬಿಕೆ ಇಲ್ಲ ಎಂದು ಹೇಳಿದ್ದೆ. ಇದೇ ಪೊಲೀಸರು ಹಲವು ಮಂದಿ ಮುಸ್ಲಿಮರನ್ನು ಕರೆದೊಯ್ದಿದ್ದರು. ಮದ್ರಸಾ ಶಿಕ್ಷಕ ಖಾಲಿದ್ ಮುಜಾಹಿದ್ ಕಸ್ಟಡಿಯಲ್ಲಿ ಮೃತಪಟ್ಟಿದ್ದರು. ಅವರನ್ನು ಕರೆದೊಯ್ದದ್ದು ಸರಿಯೇ? ಅವರನ್ನು ಸಿಲುಕಿಸಿದ್ದು ಸರಿಯೇ? ಅವರನ್ನು ಕೊಂದದ್ದು ಸರಿಯೇ? ಎಂದು ಆ ಬಗ್ಗೆ ನಂತರ ಯೋಚಿಸಲು ಆರಂಭಿಸಿದೆ.
ಸ್ವಲ್ಪ ಹೊತ್ತಿನ ಬಳಿಕ, ನನ್ನ ಮುಸ್ಲಿಮ್ ಐಡೆಂಟಿಟಿಯನ್ನು ಖಚಿತಪಡಿಸಲು ಮುಂದಾದೆ. ನಾನು ಮುಸ್ಲಿಮ್ ಸಮುದಾಯದಲ್ಲಿ ಹುಟ್ಟಿದೆ ಎಂಬ ಕಾರಣಕ್ಕೆ ನನ್ನನ್ನು ಬೇಟೆಯಾಡಲು ಮುಂದಾಗುತ್ತಿದ್ದೀರಿ ಎಂದಾದರೆ, ನಾನು ಮುಸ್ಲಿಮ್ ಐಡೆಂಟಿಟಿಯನ್ನು ಖಚಿತಪಡಿಸುತ್ತೇನೆ. ನಾನು ಇಂಗ್ಲಿಷ್ ಶಿಕ್ಷಣ ಪಡೆದು, ಜೆಎನ್‌ಯು ಸೇರಿರುವುದರಿಂದ ನನ್ನ ಮುಸ್ಲಿಮ್ ಐಡೆಂಟಿಟಿ ಪ್ರದರ್ಶಿಸಲು ಇಷ್ಟಪಡಲಿಲ್ಲ. ಇಂಥ ಸಂಪನ್ಮೂಲ ಅಥವಾ ಶಿಕ್ಷಣ ವ್ಯವಸ್ಥೆ ದೊಡ್ಡ ಪ್ರಮಾಣದ ಮುಸಲ್ಮಾನರಿಗೆ ಲಭ್ಯವಿಲ್ಲ. ಆದ್ದರಿಂದ ಅದರ ಲಾಭವನ್ನು ನಾನು ಪಡೆದುಕೊಳ್ಳಬೇಕಿತ್ತೇ ಅಥವಾ ಬೇರೆ ಅಂಶವನ್ನು ಬಿಂಬಿಸಬೇಕಿತ್ತೇ? ಎಂಬ ವಿಷಯಗಳು ನನ್ನ ಮನಸ್ಸಿನಲ್ಲಿ ಬಂದವು.
ಮಾಧ್ಯಮ ವಿಚಾರಣೆ ಬಗ್ಗೆ ನೀವು ಹೇಳಿದ್ದೀರಿ. ಅದರ ಅರ್ಥ ಏನು?
ಖಾಲಿದ್: ಫೆಬ್ರವರಿ 10 ನನಗೆ ಇನ್ನೂ ನೆನಪಿದೆ. ಈ ಘಟನೆ ಬಳಿಕ ನಾವು ಝೀ, ಟೈಮ್ಸ್ ನೌ, ಸುದರ್ಶನ್ ಹೀಗೆ ಹಲವು ಟಿವಿ ವಾಹಿನಿಗಳ ಜತೆ ಮಾತನಾಡಿದೆವು. ಅದೇ ನಮ್ಮ ತಪ್ಪು. ಆಗ ನಾವು ನಿಜವಾಗಿಯೂ ಮಾಧ್ಯಮ ಜಾಲ ಹೆಣೆದ ಬಲೆಯಲ್ಲಿ ಬಿದ್ದೆವು. ಆಗ ಏನಾಗುತ್ತಿದೆ ಎನ್ನುವುದು ನಮಗೆ ತಿಳಿದಿರಲಿಲ್ಲ.
ಇದು ಎಷ್ಟೊಂದು ಆಘಾತಕಾರಿ ಎಂದರೆ, ಝೀ ನ್ಯೂಸ್, ತನ್ನ ವರದಿಯ ಹಿನ್ನೆಲೆಯಲ್ಲೇ ಪೊಲೀಸರು ಕ್ರಮ ಕೈಗೊಂಡಿದ್ದಾರೆ ಎಂದು ಹೇಳಿಕೊಂಡಿತು. ಹೀಗೆ ಜನರನ್ನು ಗುರಿ ಮಾಡುವುದಷ್ಟೇ ಅಲ್ಲದೇ, ಆ ಬಗ್ಗೆ ಬಹಿರಂಗವಾಗಿ ಹೆಮ್ಮೆಪಟ್ಟಿತು.
ಮಾಧ್ಯಮ ಸ್ವತಂತ್ರವಾಗಿ ಕಾರ್ಯನಿರ್ವಹಿಸಲೂ ಇಲ್ಲ. ಬಹುತೇಕ ಎಲ್ಲ ಚಾನಲ್‌ಗಳ ವರದಿ, ದೇಶದ್ರೋಹಿ ಎಂಬ ಅರ್ಥದಲ್ಲಿತ್ತು. ಅಂದರೆ ಮೇಲಿನಿಂದ ಸೂಚನೆ ಇದ್ದಂತಿತ್ತು. ಪೊಲೀಸರು ನಮ್ಮ ಮೇಲೆ ದೇಶದ್ರೋಹದ ಆರೋಪ ಹೊರಿಸುವ ಹಿಂದಿನ ದಿನ ಟೈಮ್ಸ್ ನೌ ಚಾನಲ್‌ನಲ್ಲಿ ಅರ್ನಬ್ ಗೋಸ್ವಾಮಿ, ನಮಗೆ ದೇಶದ್ರೋಹದ ವ್ಯಾಖ್ಯಾನದ ಬಗ್ಗೆ ವಿವರಿಸುವಂತೆ ಕೇಳಿದ್ದರು. ಭಾರತೀಯ ದಂಡಸಂಹಿತೆಯ ಸೆಕ್ಷನ್ 124 ಎ ಬಗ್ಗೆ ಕೇಳಿದ್ದರು. ಅಂದರೆ ನಮ್ಮನ್ನು ದೇಶದ್ರೋಹದ ಆರೋಪದಲ್ಲಿ ಸಿಲುಕಿಸಲಾಗುತ್ತದೆ ಎನ್ನುವುದು ಅವರಿಗೆ ಗೊತ್ತಿತ್ತೇ? ಆ ಪ್ರಶ್ನೆಯನ್ನು ಕೇಳಿದ್ದು ಕಾಕತಾಳೀಯ.
ಭಟ್ಟಾಚಾರ್ಯ: ಟಿವಿ ನಿರೂಪಕ ದೀಪಕ್ ಚೌರಾಸಿಯಾ, ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಅವರನ್ನು ಕುರಿತು, ಈ ಕಾರ್ಯಕ್ರಮದ ಆಧಾರದಲ್ಲಿ ಕ್ರಮ ಕೈಗೊಳ್ಳುತ್ತೀರಾ ಎಂದೂ ಪ್ರಶ್ನಿಸಿದ್ದರು. ನೀವು ಕ್ರಮ ಕೈಗೊಳ್ಳದಿದ್ದರೆ ಬಿಜೆಪಿಗೆ ಹಾಗೂ ಫೆಬ್ರವರಿ 9ರ ಘಟನೆಯಲ್ಲಿ ಪಾಲ್ಗೊಂಡವರಿಗೆ ಯಾವ ವ್ಯತ್ಯಾಸವೂ ಇರುವುದಿಲ್ಲ ಎಂದಿದ್ದರು. ಅಂದರೆ ಅಂಥ ಪ್ರಶ್ನೆ ಎತ್ತಿ, ಒತ್ತಡ ತರುವುದು ಬಿಜೆಪಿಗೆ ಬೇಕಾಗಿತ್ತು.
ಖಾಲಿದ್: ನ್ಯೂಸ್‌ಎಕ್ಸ್ ಅಂತೂ ನನ್ನನ್ನು ಜೈಶೆ ಮುಹಮ್ಮದ್ ಬೆಂಬಲಿಗ ಎಂದೂ ಕರೆದಿತ್ತು. ಸರಕಾರಿ ವರದಿಯೇ ಅವರ ಸುದ್ದಿಯನ್ನು ಕಸದ ಬುಟ್ಟಿಗೆ ಹಾಕಿದೆ. ಆ ಬಳಿಕವಾದರೂ ಕ್ಷಮೆ ಯಾಚಿಸಿದರೇ? ಪತ್ರಿಕೋದ್ಯಮದ ನೀತಿಸಂಹಿತೆ ನಾಯಿಗೆ ಸಮವಾಗಿದೆ. ಹಿಂದೆ ಕೇಂದ್ರ ಸರಕಾರಗಳು ಹೇಗೆ ಮಾಧ್ಯಮವನ್ನು ಬಳಸಿಕೊಂಡಿವೆ ಎಂದು ನಾವು ನೋಡಿದ್ದೇವೆ. ಇದೀಗ ಮತ್ತೆ ನೋಡುತ್ತಿದ್ದೇವೆ.
ವಿಜ್ಞಾನಿ ಹಾಗೂ ಕವಿ ಗೌಹಾರ್ ರಝಾ ಅವರನ್ನೂ ಟಿವಿ ಕಾರ್ಯಕ್ರಮವೊಂದರಲ್ಲಿ ದೇಶದ್ರೋಹಿ ಎಂದು ಬಣ್ಣಿಸಲಾಯಿತು. ಝೀ ನ್ಯೂಸ್ ವಾಹಿನಿಯ ಮೇಲೆ ಒಂದು ಕೋಟಿ ರೂಪಾಯಿಗೆ ದಾವೆ ಹೂಡುವ ಬಗ್ಗೆ ಅವರು ಪರಿಶೀಲಿಸುತ್ತಿದ್ದಾರೆ. ನೀವೂ ಅದನ್ನೇ ಮಾಡುತ್ತೀರಾ?
ಖಾಲಿದ್: ನಾವು ಯಾವುದನ್ನೂ ಅಂತಿಮಪಡಿಸುವುದಿಲ್ಲ. ಆದರೆ ಖಂಡಿತವಾಗಿಯೂ ನಾವು ಸಾಧ್ಯತೆ ಪರಿಶೀಲಿಸುತ್ತಿದ್ದೇವೆ. ಮನಸ್ಸಿಗೆ ತೋಚಿದಂತೆ ಹೇಳಿ ಅವರು ನುಣುಚಿಕೊಳ್ಳಲಾಗದು.
ಈ ಘಟನೆಯ ಬಳಿಕ ವಿದ್ಯಾರ್ಥಿ ಚಳವಳಿ ಹೇಗೆ ಬೆಳೆದಿದೆ?
ಭಟ್ಟಾಚಾರ್ಯ: ನಿಸ್ಸಂದೇಹವಾಗಿ ದೇಶದಲ್ಲಿ ಧ್ರುವೀಕರಣ ಮತಗಳಾಗಿ ಪರಿವರ್ತನೆಯಾಗುತ್ತಿವೆ. ಇದು ಬಿಜೆಪಿಗೆ ಅನುಕೂಲಕರ ಅಂಶ. ಆದರೆ ಇದರ ಇನ್ನೊಂದು ಮುಖವೆಂದರೆ ವಿದ್ಯಾರ್ಥಿ ಚಳವಳಿಗೆ ಉತ್ತೇಜನ ದೊರಕಿರುವುದು. ಇದು ಈಗಾಗಲೇ ಬಹಳಷ್ಟು ಮುಂದೆ ಸಾಗಿದೆ. ರೋಹಿತ್ ಸಾವನ್ನು ಜೆಎನ್‌ಯು ವಿವಾದದಲ್ಲಿ ಮಣ್ಣುಪಾಲು ಮಾಡಬಹುದು ಎಂದು ಅವರು ಅಂದುಕೊಂಡರು. ಆದರೆ ಅವೆರಡೂ ಜತೆಯಾಗಿ ದೊಡ್ಡ ಸಾಗರವಾಗಿ ಮಾರ್ಪಟ್ಟಿತು. ಎಪ್‌ಟಿಟಿಐ, ಜಾಧವಪುರ, ಐಐಟಿ ಮದ್ರಾಸ್, ಹೈದರಾಬಾದ್ ವಿವಿ ಎಲ್ಲವೂ ಜತೆ ಸೇರಿಕೊಂಡವು. ಇದು ವಿದ್ಯಾರ್ಥಿ ಕ್ರಾಂತಿ. ವಿದ್ಯಾರ್ಥಿಗಳಿಗೆ ಕಾರ್ಯಾಚರಣೆಗೆ ವಿಷಯಗಳನ್ನು ನೀಡುತ್ತಿದ್ದಾರೆ. ಹಿಂದೆಲ್ಲೂ ಇಂಥ ನಿದರ್ಶನವೇ ಇಲ್ಲ. ಫ್ಯಾಶಿಸಂ ಹೆಚ್ಚುತ್ತಿರುವಾಗ ಯಾರು ಅದಕ್ಕೆ ಸವಾಲು ಹಾಕಿ ಎದ್ದು ನಿಂತರು? ಇತಿಹಾಸ ಈ ಪ್ರಶ್ನೆ ಕೇಳುತ್ತದೆ.
ಖಾಲಿದ್: ಆರೆಸ್ಸೆಸ್‌ನ ದೊಡ್ಡ ಸಮಸ್ಯೆ ಎಂದರೆ, ಅಧಿಕಾರ ದರ್ಪದ ಮನೋಭಾವ. ಅವರು ಸದಾ ಜನಶಕ್ತಿಯನ್ನು ಕೀಳಂದಾಜು ಮಾಡುತ್ತಾರೆ. ಆದರೆ ಜನ ಅದಕ್ಕೆ ತಕ್ಕ ಉತ್ತರವನ್ನೇ ನೀಡುತ್ತಾ ಬಂದಿದ್ದಾರೆ. ವೇಮುಲಾ ಪ್ರಕರಣದಲ್ಲಿ ಅವರು, ಕೆಲ ವ್ಯಕ್ತಿಗಳನ್ನು ಬೆದರಿಸಿ ಮಟ್ಟಹಾಕಬಹುದು ಎಂದುಕೊಂಡಿದ್ದರು. ಮಾನವ ಸಂಪನ್ಮೂಲ ಸಚಿವಾಲಯ ಕೆಲ ಪತ್ರ ಬರೆದಿತ್ತು. ಅದು ಹಾಗೆಯೇ ಉಳಿಯಿತು. ಆದರೆ ಚಳವಳಿ ಅಂತಿಮವಾಗಿ ರಾಷ್ಟ್ರಮಟ್ಟದ ಚಳವಳಿಯಾಗಿ ಬೆಳೆಯಿತು.
==============
ಜೆಎನ್‌ಯು ವಿಚಾರದಲ್ಲೂ ಹಾಗೆಯೇ ಆಯಿತು. ಕೆಲ ವ್ಯಕ್ತಿಗಳನ್ನು ರಾಷ್ಟ್ರದ್ರೋಹಿಗಳು ಎಂಬ ಹಣೆಪಟ್ಟಿ ಕಟ್ಟಿ ಗುರಿ ಮಾಡಬಹುದು ಎಂಬ ಅವರ ನಿರೀಕ್ಷೆ ಸುಳ್ಳಾಯಿತು. ಇಲ್ಲೂ ಇದು ದೊಡ್ಡ ಚಳವಳಿಯಾಗಿ ಬೆಳೆಯಿತು. ಹಿಂದೆ ಇಂಥ ದೊಡ್ಡಮಟ್ಟದ ವಿದ್ಯಾರ್ಥಿ ಚಳವಳಿ ಎಂದರೆ, 1960, 1970ರ ದಶಕದ ನಕ್ಸಲ್‌ಬಲಿ ಚಳವಳಿ.