ಭಾರತದ ನಿಜವಾದ ರಾಷ್ಟ್ರಪಿತ ಮೊಘಲ್ ದೊರೆ ಅಕ್ಬರ್: ನ್ಯಾ. ಕಾಟ್ಜು
ಹೊಸದಿಲ್ಲಿ, ಮೇ 23: ‘‘ಮೊಘಲ್ ದೊರೆ ಅಕ್ಬರ್ ಭಾರತದ ನಿಜವಾದ ರಾಷ್ಟ್ರಪಿತ’’ ಹೀಗೆಂದು ಫೇಸ್‌ಬುಕ್ ಪೋಸ್ಟ್ ಒಂದರಲ್ಲಿ ಶನಿವಾರ ಮಾಜಿ ಸುಪ್ರೀಂಕೋರ್ಟ್ ನ್ಯಾಯಾಧೀಶ ಮಾರ್ಕಾಂಡೇಯ ಕಾಟ್ಜು ಅಭಿಪ್ರಾಯಪಟ್ಟಿದ್ದಾರೆ.
‘‘ಅಕ್ಬರ್ ಭಾರತದ ಅಪಾರ ವೈವಿಧ್ಯತೆಯನ್ನು ಗುರುತಿಸಿ ಎಲ್ಲ ಧರ್ಮಗಳಿಗೂ ಸಮಾನ ಗೌರವ ನೀಡಿದ್ದಾನೆ,’’ಎಂದೂ ಕಾಟ್ಜು ತಮ್ಮ ಫೇಸ್‌ಬುಕ್ ಪುಟದಲ್ಲಿ ಹೇಳಿಕೊಂಡಿದ್ದಾರೆ. ದಿಲ್ಲಿಯ ಅಕ್ಬರ್ ರಸ್ತೆಯ ಪುನರ್ ನಾಮಕರಣ ಮಾಡಬೇಕೆಂಬ ಬೇಡಿಕೆಯನ್ನು ‘ಮೂರ್ಖತನ’ ಎಂದು ಕಾಟ್ಜು ಬಣ್ಣಿಸಿದ್ದಾರೆ. ವಿದೇಶಾಂಗ ವ್ಯವಹಾರಗಳ ಖಾತೆಯ ರಾಜ್ಯ ಸಚಿವ ಹಾಗೂ ಮಾಜಿ ಸೇನಾ ಮುಖ್ಯಸ್ಥ ಜ. ವಿ.ಕೆ. ಸಿಂಗ್ ಇತ್ತೀಚೆಗೆ ಅಕ್ಬರ್ ರಸ್ತೆಯನ್ನು ಮಹಾರಾಣಾ ಪ್ರತಾಪ್ ರಸ್ತೆಯೆಂದು ನಾಮಕರಣ ಮಾಡಬೇಕೆಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
ತಾನು ಈ ಹಿಂದೆ ಬ್ಲಾಗ್ ಲೇಖನವೊಂದರಲ್ಲಿ ಅಕ್ಬರ್‌ನನ್ನು ಭಾರತದ ರಾಷ್ಟ್ರಪಿತ ಎಂದು ಹೇಳಿರುವುದನ್ನು ಕಾಟ್ಜು ತನ್ನ ಫೇಸ್ ಬುಕ್ ಪುಟದಲ್ಲಿ ಉಲ್ಲೇಖಿಸಿದ್ದಾರೆ. ‘‘ದುರಂತವೆಂದರೆ ಹೆಚ್ಚಿನ ಹಿಂದೂಗಳು ಅಕ್ಬರ್‌ನನ್ನು ಮುಸ್ಲಿಮ್ ಎಂದರೆ ಹಲವು ಮುಸ್ಲಿಮರು ಆತನನ್ನು ಹಿಂದೂ ಎಂದು ಕರೆಯುತ್ತಾರೆ (ಏಕೆಂದರೆ ಆತ ಹಲವು ಹಿಂದೂ ಹಬ್ಬ ಹಾಗೂ ಪದ್ಧತಿಗಳನ್ನು ಅನುಸರಿಸುತ್ತಿದ್ದ). ಇದು ಭಾರತದ ಶೇ.90 ಹಿಂದೂಗಳು ಹಾಗೂ 90 ಮುಸ್ಲಿಮರು ಮೂರ್ಖರು ಎಂಬ ನನ್ನ ವಾದವನ್ನು ಎತ್ತಿ ಹಿಡಿಯುತ್ತದೆ. ನಿಜವೇನೆಂದರೆ ಸುನ್ನಿ ಮುಸ್ಲಿಮನಾಗಿದ್ದ ಅಕ್ಬರ್ ಒಬ್ಬ ನಿಜವಾದ ಭಾರತೀಯನಾಗಿದ್ದ,’’ ಎಂದು ನ್ಯಾ. ಕಾಟ್ಜು ಅವರ ವಿವಾದಿತ ಬ್ಲಾಗ್ ‘ಸತ್ಯಂ ಬ್ರಯುತ್’ ಹೇಳುತ್ತದೆ.
...