ಫೇಸ್‌ಬುಕ್‌ನಲ್ಲಿ ನೆಹರೂ ಗುಣಗಾನ: ಐಎಎಸ್ ಅಧಿಕಾರಿಗೆ ವರ್ಗಾವಣೆಯ ಶಿಕ್ಷೆ

Update: 2016-05-27 06:20 GMT

ಭೋಪಾಲ್, ಮೇ 27: ಫೇಸ್‌ಬುಕ್‌ನಲ್ಲಿ ಭಾರತದ ಮಾಜಿ ಪ್ರಧಾನಮಂತ್ರಿ ಜವಾಹರ್‌ಲಾಲ್ ನೆಹರೂ ಅವರನ್ನು ಶ್ಲಾಘಿಸಿದ ಮಧ್ಯಪ್ರದೇಶದ ಹಿರಿಯ ಐಎಎಸ್ ಅಧಿಕಾರಿಯನ್ನು ವರ್ಗಾವಣೆ ಮಾಡಲಾಗಿದೆ.

ಅಜಯ್ ಸಿಂಗ್ ಗಾಂಗ್ವಾರ್ ವರ್ಗಾವಣೆಯ ಶಿಕ್ಷೆಗೆ ಗುರಿಯಾಗಿರುವ ಐಎಎಸ್ ಅಧಿಕಾರಿ. ಅವರು ತನ್ನ ವರ್ಗಾವಣೆಗೆ ಕಾರಣವಾದ ಫೇಸ್‌ಬುಕ್ ಬರಹವನ್ನು ಬುಧವಾರವೇ ಅಳಿಸಿಹಾಕಿದ್ದಾರೆ.

  ಸಾಮಾಜಿಕ ಜಾಲ ತಾಣಗಳಲ್ಲಿ ಅಧಿಕಾರಿಗಳು ರಾಜಕೀಯ ವಿಷಯವನ್ನು ಹಂಚಿಕೊಳ್ಳಬಾರದು. ಆದರೆ, ಅಜಯ್ ಸಿಂಗ್ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರದ ಹೆಸರಲ್ಲಿ ವ್ಯವಸ್ಥೆಯನ್ನು ಹಾಳು ಮಾಡುತ್ತಿದ್ದಾರೆ. ಇದು ತಪ್ಪು ಎಂದು ಬಿಜೆಪಿ ಮುಖಂಡ ಬಿಶ್ವಾಸ್ ಸಾರಂಗ್ ಹೇಳಿದ್ದಾರೆ.

ಅಜಯ್ ಸಿಂಗ್ ರಾಜ್ಯ ರಾಜಧಾನಿಯ ಭೋಪಾಲ್‌ನಿಂದ 350 ಕಿ.ಮೀ.ದೂರದಲ್ಲಿರುವ ಬಾರ್ವಾನಿಯಲ್ಲಿ ಜಿಲ್ಲಾಧಿಕಾರಿ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದೀಗ ಅವರನ್ನು ರಾಜ್ಯ ಸರಕಾರದ ಮುಖ್ಯ ಕಚೇರಿಗೆ ವರ್ಗಾಯಿಸಲಾಗಿದೆ. ಅಜಯ್ ಸಿಂಗ್ ತನ್ನ ಫೇಸ್‌ಬುಕ್ ಪುಟದಲ್ಲಿ ನೆಹರೂ ಅವರ ಜಾತ್ಯಾತೀತತೆಯನ್ನು ಬೆಂಬಲಿಸಿ ಬರೆದಿದ್ದರು. ಬಿಜೆಪಿಯ ನಿಲುವನ್ನು ಟೀಕಿಸಿದ್ದರು.

ಕಾಂಗ್ರೆಸ್ ನಾಯಕರು ಹಾಗೂ ಸ್ವಾತಂತ್ರ ಹೋರಾಟಗಾರರನ್ನು ಬೆಂಬಲಿಸಿ ಮಾತನಾಡುವ ವ್ಯಕ್ತಿಯನ್ನು ಸಹಿಸದ ಬಿಜೆಪಿ ಮತ್ತೊಮ್ಮೆ ತನ್ನ ಅಸಹಿಷ್ಣುತೆಯನ್ನು ಸಾಬೀತುಪಡಿಸಿದೆ. ನೆಹರೂ ಅವರನ್ನು ಬೆಂಬಲಿಸಿದ ಅಧಿಕಾರಿಗೆ ಹಿಂಭಡ್ತಿ ನೀಡಿರುವ ಬಿಜೆಪಿ ನೇತೃತ್ವದ ರಾಜ್ಯ ಸರಕಾರದ ಈ ನಿರ್ಧಾರ ಖಂಡನೀಯ ಎಂದು ಪ್ರತಿಪಕ್ಷ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News