15 ವರ್ಷದ ಬಾಲಕಿಯ ಸಾಮೂಹಿಕ ಅತ್ಯಾಚಾರ, ಕೊಲೆ: ದುಷ್ಕರ್ಮಿಗಳು ಪರಾರಿ
ಬಹರಾಯಿಚ್, ಮೇ 28: ಬಹಿರ್ದೆಸೆಗೆಂದು ಮನೆಯಿಂದ ರಾತ್ರಿವೇಳೆ ಹೊರಹೋದ ಹದಿನೈದು ವರ್ಷದ ಬಾಲಕಿಯನ್ನು ಮೂವರು ದುರುಳರ ತಂಡವೊಂದು ಸಾಮೂಹಿಕ ಅತ್ಯಾಚಾರವೆಸಗಿ ಕೊಂದು ಹಾಕಿದ ದಾರುಣ ಘಟನೆ ಮಾಧಿಗಾಂವ್ ಎಂಬಲ್ಲಿಂದ ವರದಿಯಾಗಿದೆ.
ಪುಷ್ಪಾ ಎಂಬ ಹದಿನೈದು ವರ್ಷದ ಬಾಲಕಿ ನಿನ್ನೆ ರಾತ್ರಿ ನಿತ್ಯಕ್ರಿಯೆಗೆಂದು ಮನೆಯಿಂದ ಹೊರಬಂದವಳು ಮತ್ತೆ ಮನೆಗೆ ಮರಳಿರಲಿಲ್ಲ. ಗ್ರಾಮದ ಹೊರಗೆ ಹೊಂಚು ಹಾಕಿ ಕುಳಿತ ಯುವಕರ ಗುಂಪು ಅವಳನ್ನು ಅಪಹರಿಸಿ ಹೊಲದಲ್ಲಿ ಅತ್ಯಾಚಾರವೆಸಗಿ ಕತ್ತು ಹಿಸುಕಿ ಕೊಂದು ಹಾಕಿತ್ತು. ಮಗಳು ಎಷ್ಟು ಹೊತ್ತಾದರೂ ಬರಲಿಲ್ಲ ಎಂದಾದಾಗ ನೆರೆಯವರನ್ನು ಕರೆದು ಕೊಂಡು ತಂದೆ ಎಷ್ಟೇ ಹುಡುಕಾಡಿದರೂ ಬಾಲಕಿಯ ಸುಳಿವು ದೊರಕಿರಲಿಲ್ಲ. ಮರುದಿವಸ ಬೆಳಗ್ಗೆ ಯಾರೋ ಹೊಲದಲ್ಲಿ ಬಟ್ಟೆಯಲ್ಲಿ ಸುತ್ತು ಹಾಕಿದ ಪುಷ್ಪಾಳ ಶವವನ್ನು ನೋಡಿ ತಿಳಿಸಿದ್ದಾರೆ. ನಂತರ ಪುಷ್ಪಾಳ ತಂದೆ ಗ್ರಾಮದ ಯುವಕರಾದ ಸರ್ವಜೀತ್, ಧನಶ್ಯಾಮ್ ಮತ್ತು ಇಮ್ರಾನ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯ ಆರೋಪಿಗಳು ಪರಾರಿಯಾಗಿದ್ದು ಪೊಲೀಸರು ಹುಡುಕುತ್ತಿದ್ದಾರೆಂದು ವರದಿಯಾಗಿದೆ.