ನೀಲೇಶ್ವರಂ: 23 ವರ್ಷದ ಕಾನೂನು ಸಮರದಲ್ಲಿ ಕೊನೆಗೂ ಗೆದ್ದ ಕಾನ್‌ಸ್ಟೇಬಲ್!
ನೀಲೇಶ್ವರಂ, ಜೂನ್ 9: ಪೊಲೀಸ್ ಸ್ಟೇಶನ್‌ನಲ್ಲಿ ಶ್ರೀಗಂಧ ತೈಲ ಸಿಹಿನೀರು ಆದ ಘಟನೆಯಲ್ಲಿ ವಜಾಗೊಳಿಸಲಾಗಿದ್ದ ಕಾಸರಗೋಡು ಪೊಲೀಸ್ ಠಾಣೆಯ ಕಾನ್‌ಸ್ಟೇಬಲ್ ವಿ.ವಿ. ಕುಮಾರನ್ 23ವರ್ಷಗಳ ಕಾನೂನು ಹೋರಾಟದ ಬಳಿಕ ಸರ್ವೀಸ್‌ಗೆ ಮರಳಿ ಸೇರಿಕೊಳ್ಳುತ್ತಿದ್ದಾರೆ. ನಿಲೇಶ್ವರಂ ಪಳ್ಳಿಕೆರೆ ಕಲ್ಲುಂಗಲ್ ಹೌಸ್‌ನ ಕುಮಾರನ್ ಕೆಲಸ ಕಳೆದುಕೊಂಡ ಬಳಿಕ ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದರು. ಮದುವೆಯಾಗದೆ ಕಾನೂನು ಹೋರಾಟಕ್ಕೆ ಧುಮುಕಿದ್ದು ಇದೀಗ ಅವರ ಹೋರಾಟ ಯಶಸ್ವಿಯಾಗಿದೆ. ಅವರ ಮರು ನೇಮಕಾತಿ ಆದೇಶ ಹೊರಡಿಸಲಾಗಿದೆ. ನಿವೃತ್ತ ನ್ಯಾಯಾಧೀಶ ಟಿ.ಆರ್ ರಾಮಚಂದ್ರನ್ ಅಧ್ಯಕ್ಷತೆಯ ರಾಜ್ಯ ಅಡ್ಮಿನಿಸ್ಟ್ರೇಟಿವ್ ಟ್ರಿಬ್ಯೂನಲ್ ಕುಮಾರನ್‌ರನ್ನು ಪುನಃ ಕೆಲಸಕ್ಕೆ ಸೇರಿಸಿಕೊಳ್ಳುವಂತೆ ಸರಕಾರಕ್ಕೆ ಆದೇಶಿಸಿ ತೀರ್ಪು ನೀಡಿದೆ. 1993ರಲ್ಲಿ ಕಾಸರಗೋಡು ಟೌನ್ ಪೊಲೀಸ್ ಸ್ಟೇಶನ್‌ನಲ್ಲಿ ಕಾನ್‌ಸ್ಟೇಬಲ್ ಕರ್ತವ್ಯದಲ್ಲಿದ್ದ ಕುಮಾರನ್‌ರನ್ನು ಶಿಸ್ತುಉಲ್ಲಂಘಿಸಿದ್ದಾರೆ ಎಂದು ತೀರ್ಪು ನೀಡಿ ಸೇವೆಯಿಂದ ವಜಾಗೊಳಿಸಲಾಗಿತ್ತು. 1993ರಿಂದ ಸೇವೆಗೆ ನೇಮಕಾತಿ ತೀರ್ಪುವರೆಗಿನ ಸಂಪೂರ್ಣ ಸಂಬಳವನ್ನು ಹಾಗೂ ಭಡ್ತಿಯನ್ನು ನೀಡಿ ಇಲಾಖೆಗೆ ಮರಳಿ ನೇಮಿಸಬೇಕಾಗಿದೆ ಎಂದು ಟ್ರಿಬ್ಯುನಲ್ ಆದೇಶದಲ್ಲಿದೆ. 1993 ಎಪ್ರಿಲ್ 16ಕ್ಕೆ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿತ್ತು.ಇದೀಗ 54 ವರ್ಷ ವಯಸ್ಸಾಗಿರುವ ಕುಮಾರನ್‌ರಿಗೆ ಪೊಲೀಸ್ ಇಲಾಖೆಯಲ್ಲಿ ಎರಡು ವರ್ಷದ ಸರ್ವೀಸ್ ಮಾತ್ರ ಉಳಿದಿದೆ.