ರಾಜೀನಾಮೆಗೆ ಮುಂದಾದ ಐಎಎಸ್ ಟಾಪರ್ ಶಾ ಫೈಸನ್
ಶ್ರೀನಗರ, ಜು.16: ಜಮ್ಮು ಮತ್ತು ಕಾಶ್ಮೀರದ ಐಎಎಸ್ ಟಾಪರ್, ಕಣಿವೆ ರಾಜ್ಯದ ಶಿಕ್ಷಣ ವಿಭಾಗದ ಮುಖ್ಯಸ್ಥ ಶಾ ಫೈಸಲ್, ರಾಷ್ಟ್ರೀಯ ಮಾಧ್ಯಮಗಳ ವಿಕೃತ ಅಪಪ್ರಚಾರದ ಭಾಗವಾಗಿ ತಮ್ಮನ್ನು ಬಳಸಿಕೊಳ್ಳುವ ಹುನ್ನಾರ ವಿರುದ್ಧ ಕಿಡಿ ಕಾರಿದ್ದಾರೆ. ಬುರ್ಹಾನ್ ವಾನಿ ಜತೆ ತಮ್ಮನ್ನು ಹೋಲಿಸುವ ಮೂಲಕ ತೇಜೋವಧೆಗೆ ಮುಂದಾಗಿರುವ ಕ್ರಮಕ್ಕೆ ಪ್ರತಿಭಟನಾರ್ಥವಾಗಿ ರಾಜೀನಾಮೆಗೆ ಮುಂದಾಗಿದ್ದಾರೆಂದು ವರದಿಯಾಗಿದೆ.
ಕಾಶ್ಮೀರ ಹಿಂಸಾಚಾರ ಕುರಿತ ವರದಿಗಳ ಕುರಿತ ಪ್ರೈಮ್ಟೈಂ ಸುದ್ದಿಗಳಲ್ಲಿ ತಮ್ಮ ಭಾವಚಿತ್ರವನ್ನು ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ಬುರ್ಹಾನ್ ವಾನಿ ಅವರ ಜರ್ಜರಿತ ದೇಹದ ಚಿತ್ರದ ಜತೆಗೆ ಟಿವಿ ವಾಹಿನಿಗಳಲ್ಲಿ ಪ್ರಸಾರ ಮಾಡಿರುವ ಕ್ರಮಕ್ಕೆ ಶಾಲಾ ಶಿಕ್ಷಣ ಇಲಾಖೆಯ ನಿರ್ದೇಶಕರಾಗಿರುವ ಶಾ ಕೆಂಡಾಮಂಡಲವಾಗಿದ್ದಾರೆ.
"ಬುರ್ಹಾನ್ ವಾನಿ ಭಾವಚಿತ್ರದ ಜತೆಗೆ ನನ್ನ ಭಾವಚಿತ್ರವನ್ನು ಪ್ರದರ್ಶಿಸುವ ಮೂಲಕ ರಾಷ್ಟ್ರೀಯ ಮಾಧ್ಯಮದ ಒಂದು ವಿಭಾಗ, ವಿವಾದಾತ್ಮಕ, ಅನಾಗರಿಕ ಮನೋಭಾವಕ್ಕೆ ಅಂಟಿಕೊಂಡು, ತಪ್ಪುಕಲ್ಪನೆ ಮೂಡಿಸುವ, ಜನರನ್ನು ವಿಭಜಿಸಿ ಮತ್ತಷ್ಟು ದ್ವೇಷಭಾವನೆಯನ್ನು ಹುಟ್ಟುಹಾಕುವ ದುಸ್ಸಾಹಸಕ್ಕೆ ಇಳಿದಿವೆ" ಎಂದು 2009ರ ಐಎಎಸ್ ಟಾಪರ್ ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಜುಲೈ 8ರಂದು ಭದ್ರತಾ ಪಡೆಯ ಜತೆಗಿನ ಗುಂಡಿನ ಚಕಮಕಿಯಲ್ಲಿ ವಾನಿ ಮೃತಪಟ್ಟ ಹಿನ್ನೆಲೆಯಲ್ಲಿ, ಕಾಶ್ಮೀರ ಕಣಿವೆಯಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಪ್ರತಿಭಟನಾಕಾರರು ಹಾಗೂ ಭದ್ರತಾ ಪಡೆಗಳ ನಡುವಿನ ಹೋರಾಟದಲ್ಲಿ 38 ಮಂದಿ ಬಲಿಯಾಗಿದ್ದಾರೆ.
"ಅಮಾಯಕರ ಸಾವಿನ ಬಗ್ಗೆ ಕಾಶ್ಮೀರ ಶೋಕಸಾಗರದಲ್ಲಿ ಮುಳುಗಿದ್ದರೆ, ಕೆಂಪು ಹಾಗೂ ನೀಲಿ ಸುದ್ದಿಮನೆಗಳಿಂದ ಅಪಪ್ರಚಾರ ಹಾಗೂ ಪ್ರಚೋದನಾಕಾರಿ ಸುದ್ದಿಗಳು ಬಿತ್ತರವಾಗುತ್ತಿವೆ. ಇದು ಆಕ್ರೋಶ ಹಾಗೂ ಪರಕೀಯ ಭಾವನೆಯನ್ನು ಹುಟ್ಟುಹಾಕುತ್ತಿದೆ" ಎಂದು ಶಾ ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಇಂಥ ಬುದ್ಧಿಗೇಡಿ ದುಸ್ಸಾಹಸ ಮುಂದುವರಿಸಿದರೆ, ತಕ್ಷಣ ರಾಜೀನಾಮೆ ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ವೈಯಕ್ತಿಕ ಟೀಕೆಯ ಜತೆ, ಅಸಂಬದ್ಧ ಚರ್ಚೆಯ ಭಾಗವಾಗಿ ನನ್ನನ್ನು ಮಾಡಲು ಹೊರಟಿರುವುದು ತೀವ್ರ ಆಘಾತ ತಂದಿದೆ. ನಾನು ಜನಸೇವೆ ಮಾಡಲು ಐಎಎಸ್ ಸೇರಿರುವುದೇ ಅಥವಾ ನಿಮ್ಮ ವಿಕೃತ ಅಪಪ್ರಚಾರದ ಭಾಗವಾಗುವ ಸಲುವಾಗಿಯೇ? ಎಂದು ಪ್ರಶ್ನಿಸಿದ್ದಾರೆ.