ಪ್ರಧಾನಿ ತವರಲ್ಲಿ ದಲಿತರ ಪ್ರತಿಭಟನೆ: ಮೋದಿ, ಬಿಜೆಪಿ ವಿರುದ್ಧ ಆಕ್ರೋಶ

Update: 2016-07-23 13:00 GMT

ವಡ್ನಗರ್,ಜು.23: ಉನಾದಲ್ಲಿ ಸತ್ತ ದನವೊಂದರ ಚರ್ಮವನ್ನು ಸುಲಿದಿದ್ದಕ್ಕಾಗಿ ದಲಿತ ಯುವಕರ ಮೇಲೆ ಗೋರಕ್ಷಕರ ಅಮಾನವೀಯ ದಾಳಿಯನ್ನು ವಿರೋಧಿಸಿ ಗುಜರಾತ್‌ನಾದ್ಯಂತ ನಡೆಯುತ್ತಿರುವ ತೀವ್ರ ಪ್ರತಿಭಟನೆಗಳಿಗೆ ಪ್ರಧಾನಿ ನರೇಂದ್ರ ಮೋದಿಯವರ ತವರೂರು ವಡ್ನಗರ್ ಶುಕ್ರವಾರ ಸಾಕ್ಷಿಯಾಯಿತು. ದಲಿತರ ಮೇಲಿನ ದಾಳಿಗೆ ಪ್ರಧಾನಿ ಮತ್ತು ಬಿಜೆಪಿ ಹೊಣೆಗಾರರೆಂದು ಆರೋಪಿಸಿ 4,000ಕ್ಕೂ ಅಧಿಕ ದಲಿತರು ಭಾರೀ ಮತಪ್ರದರ್ಶನ ನಡೆಸಿದರು.

ಹಲವಾರು ದಲಿತರು ಹಿಂದುಗಳ ಅಂತ್ಯಸಂಸ್ಕಾರದ ಸಂದರ್ಭದಲ್ಲಿ ಶವ ಮೆರವಣಿಗೆಯ ವೇಳೆ ಮಹಿಳೆಯರು ಬಳಸುವ ಸಾಂಪ್ರದಾಯಿಕ ಘೋಷಣೆಯನ್ನು ಪರಿಷ್ಕರಿಸಿ ‘ಹಾಯ್ ರೆ ಮೋದಿ...ಹಾಯ್-ಹಾಯ್ ರೆ ಮೋದಿ ’ ಎಂದು ಬೊಬ್ಬೆಯಿಡುತ್ತಿದ್ದ ದೃಶ್ಯಗಳು ಪ್ರತಿಭಟನೆಯ ವೀಡಿಯೊದಲ್ಲಿ ಕಂಡುಬಂದಿವೆ. ಉದ್ದೇಶಪೂರ್ವಕವಾಗಿಯೇ ನಾವು ಹಾಯ್-ಹಾಯ್ ಘೋಷಣೆಯನ್ನು ಕೂಗಿದ್ದೇವೆ. ಇದು ಬಿಜೆಪಿ ಮತ್ತು ಸಂಘ ಪರಿವಾರಕ್ಕೆ ಎಚ್ಚರಿಕೆಯಾಗಿದೆ ಎಂದು ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ದಲಿತ ಸಮುದಾಯದ ನಾಯಕ ಶೈಲೇಶಭಾಯಿ ಶಂಕರಭಾಯಿ ಹೇಳಿದರು.

ದಾಳಿಕೋರರ ಹಿಂದುತ್ವ ಸಿದ್ಧಾಂತವನ್ನು ಬಿಜೆಪಿ ಮತ್ತು ಮೋದಿ ಹಂಚಿಕೊಂಡಿದ್ದಾರೆ. ಈ ಸಿದ್ಧಾಂತವು ಗುಜರಾತನ್ನು ಹಾಳುಗೆಡವಿದೆ. ಮುಸ್ಲಿಮರ ನೈತಿಕ ಸ್ಥೈರ್ಯವನ್ನಂತೂ ಅವರು ಉಡುಗಿಸಿಬಿಟ್ಟಿದ್ದಾರೆ. ಇದೀಗ ಅವರು ದಲಿತರ ಬೆನ್ನು ಬಿದ್ದಿದ್ದಾರೆ ಎಂದು ಅವರು ಕಿಡಿಕಾರಿದರು.

ಮೆಹ್ಸಾನಾ ಜಿಲ್ಲೆಯ,ಮೋದಿ ಪರ ನಿಷ್ಠೆಗಾಗಿ ಹೆಸರಾಗಿರುವ ವಡ್ನಗರದಲ್ಲಿ ಇದು ಇಂತಹ ಮೊದಲ ಪ್ರತಿಭಟನೆಯಾಗಿದ್ದು, ಜು.11ರ ಉನಾ ಘಟನೆಯ ವಿರುದ್ಧ ದಲಿತ ಸಮುದಾಯದಲ್ಲಿ ಕ್ರೋಧವು ಹೆಪ್ಪುಗಟ್ಟಿರುವ ಸಂದರ್ಭದಲ್ಲಿ ನಡೆದಿದೆ. ತನ್ಮಧ್ಯೆ ಸ್ವಘೋಷಿತ ಗೋರಕ್ಷಕರ ನಿರಂಕುಶತೆ ಮತ್ತು ಸರಕಾರದ ನಿರ್ಲಕ್ಷವನ್ನು ವಿರೋಧಿಸಿ ಗುಜರಾತಿನಾದ್ಯಂತ ಸಾವಿರಾರು ದಲಿತರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.

ಗಣ್ಯ ರಾಜಕಾರಣಿಗಳ ನಿವಾಸಗಳು ಮತ್ತು ಸರಕಾರಿ ಕಚೇರಿಗಳ ಹೊರಗೆ ನೂರಾರು ದನಗಳ ಕಳೇಬರಗಳನ್ನು ರಾಶಿ ಹಾಕಿರುವ ದಲಿತರು, ಸರಕಾರವು ತಮಗೆ ರಕ್ಷಣೆ ನೀಡುವವರೆಗೆ ಅವುಗಳನ್ನು ವಿಲೇವಾರಿ ಮಾಡದಿರಲು ನಿರ್ಧರಿಸಿದ್ದಾರೆ.

ಗೋರಕ್ಷಣೆಯ ಹೆಸರಿನಲ್ಲಿ ಗೂಂಡಾಗಳನ್ನು ಉತ್ತೇಜಿಸುತ್ತಿರುವುದಕ್ಕಾಗಿ ಮುಖ್ಯಮಂತ್ರಿ ಆನಂದಿಬೆನ್ ಪಟೇಲ್ ಮತ್ತು ಬಿಜೆಪಿ ವಿರುದ್ಧವೂ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿದರು.


    ದನಗಳಕಳೇಬರಗಳನ್ನು ಇನ್ನೆಂದೂ ಮುಟ್ಟುವುದಿಲ್ಲವೆಂದು ಹಲವಾರು ಪ್ರತಿಭಟನಾಕಾರರು ಪ್ರತಿಜ್ಞೆ ಮಾಡಿದ್ದಾರೆ. ದಲಿತರ ಮೇಲಿನ ದಾಳಿಗಳು ನಿಲ್ಲದಿದ್ದರೆ ಹಿಂದು ಧರ್ಮವನ್ನು ತೊರೆಯುವುದಾಗಿ ಅವರು ಬೆದರಿಕೆಯನ್ನೊಡ್ಡಿದ್ದಾರೆ.

ಸತ್ತ ದನಗಳನ್ನು ಪಡೆದುಕೊಂಡು ಅವುಗಳ ಚರ್ಮ ಸುಲಿದು ಅವಶೇಷಗಳನ್ನು ವಿಲೇವಾರಿ ಮಾಡುವುದನ್ನು ನಾವು ನಿಲ್ಲಿಸಿದರೆ ಸಾವಿರಾರು ಸಂಖ್ಯೆಯಲ್ಲಿ ಜಾನುವಾರುಗಳನ್ನು ಹೊಂದಿರುವ ಮೇಲ್ಜಾತಿಗಳು ನಮ್ಮ ಮುಂದೆ ಮಂಡಿಯೂರಲಿವೆ. ಮೇಲ್ಜಾತಿಗಳ ಜನರೇ ಮಾಲಕರಾಗಿರುವ ಚರ್ಮೋತ್ಪನ್ನಗಳ ಕಾರ್ಖಾನೆಗಳಿಗೂ ಇದರ ಬಿಸಿ ತಟ್ಟಲಿದೆ ಎಂದು ಪ್ರತಿಭಟನೆಯ ಸಂಘಟಕರಲ್ಲೋರ್ವರಾದ ರಾಜೇಶ ಪರಮಾರ್ ಹೇಳಿದರು.

ರಾಜ್ಯವ್ಯಾಪಿ ನಡೆಯುತ್ತಿರುವ ದಲಿತರ ಬೃಹತ್ ಪ್ರತಿಭಟನೆಯು ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಆದರೆ ಶುಕ್ರವಾರದ ಪ್ರತಿಭಟನೆಯು ಅವರ ತವರೂರಿನಲ್ಲಿ ಮೋದಿಯವರ ವಿರುದ್ಧದ ಇಂತಹ ಮೊದಲ ಪ್ರತಿಭಟನೆಯಾಗಿದ್ದು, ಹೆಚ್ಚಿನ ಪ್ರತಿಭಟನಾಕಾರರು ದಲಿತ ಸಮುದಾಯದವರಾಗಿರಲಿಲ್ಲ ಎಂದು ಬಿಜೆಪಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News