ಗುಜರಾತ್:‘ಲವ್ ಜಿಹಾದ್ ’ವೀಡಿಯೊಕ್ಕೆ ಸಂಬಂಧಿಸಿ ಪೊಲೀಸ್ ಠಾಣೆಯ ಮೇಲೆ ದಾಳಿ

Update: 2016-08-01 15:18 GMT

ಸೂರತ್,ಆ.1: ‘ಲವ್ ಜಿಹಾದ್ ’ವಿಷಯಕ್ಕೆ ಕುರಿತ ವೀಡಿಯೊವೊಂದರಲ್ಲಿ ತಮ್ಮನ್ನು ಕೀಳಾಗಿ ಬಿಂಬಿಸಲಾಗಿದ್ದರಿಂದ ಆಕ್ರೋಶಿತ ಅಲ್ಪಸಂಖ್ಯಾತ ಸಮದಾಯದ ಸುಮಾರು 200 ಜನರು ರವಿವಾರ ರಾತ್ರಿ ಇಲ್ಲಿಯ ಲಿಂಬಾಯತ್ ಪೊಲೀಸ್ ಠಾಣೆಗೆ ನುಗ್ಗಿ ಈ ವೀಡಿಯೊವನ್ನು ಚಿತ್ರೀಕರಿಸಿ ಅದನ್ನು ಪ್ರಸಾರಿಸಿದವರನ್ನು ತಕ್ಷಣ ಬಂಧಿಸುವಂತೆ ಆಗ್ರಹಿಸಿದರು. ಉದ್ರಿಕ್ತ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ,ಬಳಿಕ ಅಶ್ರುವಾಯು ಪ್ರಯೋಗ ನಡೆಸಿದರು.

  ವೀಡಿಯೊವನ್ನು ನಿರ್ಮಿಸಿ ಅದನ್ನು ಪ್ರಸಾರಿಸುವ ಮೂಲಕ ಅಲ್ಪಸಂಖ್ಯಾತ ಸಮುದಾಯದ ಧಾರ್ಮಿಕ ಭಾವನೆಗಳಿಗೆ ನೋವನ್ನುಂಟು ಮಾಡಿರುವ ಆರೋಪದಲ್ಲಿ ನಾಲ್ವರ ವಿರುದ್ಧ ನಾವೀಗಾಗಲೇ ಎಫ್‌ಐಆರ್ ದಾಖಲಿಸಿದ್ದೇವೆ. ದಾಂಧಲೆ ನಡಸಿದ್ದಕ್ಕಾಗಿ ಗುಂಪಿನ ವಿರುದ್ಧವೂ ಎಫ್‌ಐಆರ್ ದಾಖಲಿಸಿಕೊಂಡಿದ್ದೇವೆ. ಈ ವರೆಗೆ ಯಾರನ್ನೂ ಬಂಧಿಸಲಾಗಿಲ್ಲ ಎಂದು ಲಿಂಬಾಯತ್ ಠಾಣಾಧಿಕಾರಿ ಬಿ.ಎಂ.ಪರಮಾರ್ ತಿಳಿಸಿದರು.

ತಮ್ಮ ರೂಮನ್ನು ಖಾಲಿ ಮಾಡುವಂತೆ ಮತ್ತು ಬೇರೆ ಪ್ರದೇಶಕ್ಕೆ ತೆರಳುವಂತೆ ಅಲ್ಪಸಂಖ್ಯಾತ ಸಮುದಾಯದ ಇಬ್ಬರು ಯುವಕರಿಗೆ ಮೂವರು ವ್ಯಕ್ತಿಗಳು ಬೆದರಿಕೆಯೊಡ್ಡುತ್ತಿರುವ ವೀಡಿಯೊ ರವಿವಾರ ವಾಟ್ಸಾಪ್‌ನಲ್ಲಿ ವೈರಲ್ ಆಗಿತ್ತು.

ದುಷ್ಕರ್ಮಿಗಳು ಯುವಕರಿಗೆ ಬೆದರಿಕೆಯೊಡ್ಡುವ ಜೊತೆಗೆ ಅವರ ಸಮುದಾಯದ ಜನರು ಲವ್ ಜಿಹಾದ್‌ನಲ್ಲಿ ತೊಡಗಿದ್ದಾರೆ ಎಂದೂ ಆರೋಪಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News