ಗೋ ಮಾತೆಗೆ
ದುರ್ಬೀನಿಟ್ಟು ಹುಡುಕಿದರೂ
ಆ ಗೋಮಾತೆಯ ಒಸಡಿಗೆ
ಚುಚ್ಚುವುದು ಬೆಣಚುಕಲ್ಲು ಮುಳ್ಳು ಪೊದರು
ಗೋಮಾಳ ಮಾತ್ರ ಮಕ್ಕಳ ಪಠ್ಯಪುಸ್ತಕದಲ್ಲಿ;
ಪರಿಸ್ಥಿತಿ ಹೀಗಿರುವಾಗ ಎಲ್ಲಿಂದ ಬರಬೇಕು
ಗೋಮಯ, ಗೋ ಮೂತ್ರ ಆ ತಾಯಿಗೆ?
ಮನ ಶುದ್ಧಿ ಮನೆ ಶುದ್ಧಿಗೆ
ಬೇಕು ಗೋಮೂತ್ರ ಸೆಗಣಿ
ಲಂಗ ತೊಟ್ಟ ಪೋರಿ ಬುಟ್ಟಿ
ಗಿಂಡಿಗೆ ಹಿಡಿದು ಪುಣ್ಯಕೋಟಿಯ
ಹಿಂದೆ ಸುತ್ತಿದ್ದೇ ಬಂತು
ತದೇಕ ಚಿತ್ತದಿಂದ ಅದರ ಹಿಂಭಾಗ
ಪಿಳಿಪಿಳಿ ನೋಡಿದ್ದೇ ಬಂತು
ಅಪ್ಪ ಅಂಗಳದಲ್ಲಿ ನಿಂತು ನೋಡುತ್ತಿದ್ದಾನೆ
ಅಂಡು ತುರಿಸಿ ಕ್ಯಾಕರಿಸಿ ಉಗುಳುತ್ತಿದ್ದಾನೆ
ಥೂ... ನಿಮ್ ಕೈಗೆ ನಾಚಿಕೆ ಮರ್ಯಾದೆ ಇಲ್ವೇ?
ಗದರಿಸುತ್ತಿದ್ದಾಳೆ ಮನೆಯೊಡತಿ ಕುಂಡೆ ತುರಿಸಿ
ಅಣ್ಣ ಚಾಪೆಯಿಂದೆದ್ದು ಕಣ್ಣುಜ್ಜಿ ಆಕಳಿಸಿ
ತೆಂಗಿನ ಕಟ್ಟೆಗೆ ಬಂದು ಉಚ್ಚೆ ಹೊಯ್ದು
ಅದರ ಚೆಂದ ನೋಡುತ್ತಿದ್ದಾನೆ
ನೈರ್ಮಲ್ಯದ ಘಾಟು ಮಡಿವಂತಿಕೆಯ
ಸೋಗಲಾಡಿತನ ಬ್ರಹ್ಮಕಪಾಲದಂತೆ
ಕಾಡಿದರೂ, ಅಜ್ಜಿಯ ಕೆಂಪು ಸೀರೆ ಜಬ್ಬಾಗಿ
ತಲೆಯ ಮೇಲೆ ಹತ್ತಿ ಬೆಳೆ ಬೆಳೆದರೂ
ಇಂದಿಗೂ ಅವಳು ಶುದ್ಧಾಚಾರದ
ಸಾಕಾರ ಮೂರ್ತಿ; ಅವಳಜ್ಜಿ ಮುತ್ತಜ್ಜಿಯಂತೆ
ಆದರೆ ಮೊಮ್ಮಗಳು ಬರಲೇ ಇಲ್ಲ
ಸೆಗಣಿ ಗೋಮೂತ್ರ ತರಲೇ ಇಲ್ಲ
ಪಿತೃಗಳಿಗೆ ಕಾಕ ಪಿಂಡವಿಡಬೇಕು
ದೇವತೆಗಳಿಗೆ ಹವ್ಯತರ್ಪಣ ಕೊಡಬೇಕು
ಅಗಲಿದ ಪ್ರೇತಗಳು ಕಾಗೆಗಳಾಗಿ ಕಿಂಚಿ ಮೇಲೆ ಕುಳಿತು
ಕಾ..ಕಾ ಎಂದು ಶ್ರಾದ್ಧ ಪಿಂಡಕ್ಕಾಗಿ ಕಾಯುತ್ತಲಿವೆ
ಸತ್ತ ತಂಗಿ ಹೆಣ್ಣು ಪಿಶಾಚಿಯಾಗಿ
ಅಂತರಿಕ್ಷದಲ್ಲಿ ಗತಿಯಿಲ್ಲದೆ ಅಲೆಯುತ್ತಿದ್ದಾಳೆ
ಅವಳಿಗೊಂದು ಗಂಡು ಹುಡಿಕಿ ಮದುವೆ ಮಾಡಬೇಕು
ಆದರೆ ಪೋರಿ ಬರಲೇ ಇಲ್ಲ
ಸಿಹಿ ಸುದ್ದಿ ತರಲೇ ಇಲ್ಲ
ಆದರೂ ಹುಡುಗಿ ಸುಮ್ಮನಿರಲಿಲ್ಲ
ಅವಳು ಇದ್ದಕ್ಕಿದ್ದಂತೆ ಸುತ್ತಮುತ್ತ ನೋಡಿ
ಲಂಗ ಮೇಲೆ ಮಾಡಿ ಕುಕ್ಕರುಗಾಲು ಹಾಕಿ
ಶುಚಿರ್ಭೂತಳಾಗಿ ಹಾಯಾಗಿ ನಿಟ್ಟುಸಿರು ಬಿಟ್ಟಳಲ್ಲ?
ಪಾಪ! ಬಡಕಲು ಆಕಳು
ಇನ್ನೊಂದೋ ಎರಡೋ ದಿನಗಳಲ್ಲಿ
ಕಸಾಯಿಖಾನೆಗೆ ಹೋಗಲೇಬೇಕು
ಆದರೆ ಅದು ಅದಕೆ ಹೇಗೆ ಗೊತ್ತು?
ಕಾಮಧೇನು ಹಿಂದೆ ಮುಂದೆ ನೋಡಲಿಲ್ಲ
ಶುದ್ಧ ಅಶುದ್ಧದ ಪರಿವೆ ಅದಕ್ಕಿಲ್ಲ
ಹಸಿವೆಯ ಮಹಿಮೆಯೋ ಏನೋ..!
ಅಮೇಧ್ಯವನ್ನು ದೇವರ ಪ್ರಸಾದದಂತೆ
ತಿಂದು ತೇಗಿ ಬಾಯಿ ಚಪ್ಪರಿಸಿದಾಗ
ಅದರ ಆತ್ಮಕ್ಕೂ ಶಾಂತಿ ದೊರೆಯಿತಲ್ಲ !
ಆಗ ತಾನೇ ಹೊರಗೆ ಇಣುಕಿತಲ್ಲ
ಸೆಗಣಿ ಮೂತ್ರ; ಇದು ಸಹಜ
ಪೋರಿಗೂ ಮತ್ತೆ ಎಲ್ಲಿಲ್ಲದ ಮಜಾ