ನೇತಾಜಿ ಕುರಿತ ಜೇಟ್ಲಿ ಟ್ವೀಟ್‌ನಿಂದ ಆಘಾತ,ನೋವು: ಮಮತಾ ಬ್ಯಾನರ್ಜಿ

Update: 2016-08-18 12:26 GMT

ಕೋಲ್ಕತಾ,ಆ.18: ಮಹಾನ್ ಸ್ವಾತಂತ್ರ ಹೋರಾಟಗಾರ ನೇತಾಜಿ ಸುಭಾಷಚಂದ್ರ ಬೋಸ್ ಅವರಿಗೆ ಶ್ರದ್ಧಾಂಜಲಿಗಳನ್ನು ಸಲ್ಲಿಸಿ ವಿತ್ತಸಚಿವ ಅರುಣ್ ಜೇಟ್ಲಿಯವರು ಮಾಡಿರುವ ಟ್ವೀಟ್ ತನಗೆ ಆಘಾತ ಮತ್ತು ನೋವನ್ನುಂಟು ಮಾಡಿದೆ ಎಂದು ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಗುರುವಾರ ಇಲ್ಲಿ ಹೇಳಿದರು. ಬೋಸ್ ಅವರು 1945ರಲ್ಲಿ ತೈವಾನಿನಲ್ಲಿ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದಾರೆಂಬ ವರದಿಗಳಿವೆಯಾದರೂ ಆ ಬಳಿಕವೂ ಅವರು ಬದುಕಿದ್ದರು ಎಂದು ಬಹುಜನರು ನಂಬಿದ್ದಾರೆ.

ಈ ವರ್ಷ ನಡೆದ ಬಂಗಾಲ ಚುನಾವಣೆಗೆ ಮುನ್ನ ಬಿಜೆಪಿಗೆ ಸೇರ್ಪಡೆಗೊಂಡಿದ್ದ ಬೋಸ್ ಅವರ ಮೊಮ್ಮಗ ಚಂದ್ರ ಬೋಸ್ ಅವರು ಜೇಟ್ಲಿಯವರು ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿದ್ದಾರೆ.

ನೇತಾಜಿಯವರ ‘ಪುಣ್ಯತಿಥಿ’ಯಂದು ಅವರಿಗೆ ಶ್ರದ್ಧಾಂಜಲಿಗಳನ್ನು ಸಲ್ಲಿಸಿ ಜೇಟ್ಲಿ ಟ್ವೀಟ್ ಮಾಡಿದ್ದರು. ಆದರೆ ಅದೀಗ ಜೇಟ್ಲಿಯವರ ಟ್ವಿಟರ್ ಖಾತೆಯಿಂದ ಮಾಯವಾಗಿದೆ. ಜೇಟ್ಲಿಯವರ ಟ್ವೀಟ್‌ನ್ನು ಬೋಸ್ 1945,ಆ.18ರಂದು ವಿಮಾನ ದುರಂತದಲ್ಲಿ ಮೃತಪಟ್ಟಿದ್ದಾರೆ ಎಂದು ಸರಕಾರ ಮೊದಲ ಬಾರಿಗೆ ಒಪ್ಪಿಕೊಂಡಿರುವುದರ ದ್ಯೋತಕ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.

ನೇತಾಜಿಯವರ ಸಾವು ಇಂದಿಗೂ ನಿಗೂಢವಾಗಿದ್ದು ಬಂಗಾಲದಲ್ಲಿ ಭಾವನಾತ್ಮಕ ವಿಷಯವಾಗಿದೆ.ಸರಕಾರವು ನೇಮಿಸಿದ್ದ ಎರಡು ವಿಚಾರಣಾ ಆಯೋಗಗಳು ಬೋಸ್ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂಬ ನಿರ್ಧಾರಕ್ಕೆ ಬಂದಿದ್ದರೆ,ಮೂರನೆಯ ವಿಚಾರಣಾ ಆಯೋಗವು ಅದನ್ನು ತಳ್ಳಿಹಾಕಿದೆ.

ಇತಿಹಾಸಜ್ಞರ ಒಂದು ವರ್ಗ ಮತ್ತು ಬೋಸ್ ಕುಟುಂಬ ಸದಸ್ಯರು ಅವರು ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ನಂಬಿದ್ದಾರೆ. ಆದರೆ ಇದನ್ನು ನಂಬಲು ಇತರ ಹಲವಾರು ಜನರು ಸಿದ್ಧರಿಲ್ಲ. ಅವರು ಭಾರತದಲ್ಲಿ ಬ್ರಿಟಿಷರ ಆಡಳಿತದ ವಿರುದ್ಧ ಹೋರಾಟವನ್ನು ಮಂದುವರಿಸಲು ಪರಾರಿಯಾಗಿದ್ದರು ಮತ್ತು ಆಗಿನ ಕಾಂಗ್ರೆಸ್ ನಾಯಕತ್ವವು ಹೇಗೋ ಅವರ ಬಾಯಿ ಮುಚ್ಚಿಸಿತ್ತು ಎಂದು ಈ ಜನರು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News