ಸುಮಾರು 43 ಕಾರ್ಪೋರೇಟರ್ ವಿರುದ್ಧ ಕ್ರಿಮಿನಲ್ ಕೇಸ್

Update: 2017-03-02 07:50 GMT

ಮುಂಬೈ, ಮಾ.2: ಇತ್ತೀಚೆಗಷ್ಟೇ ಕೊನೆಗೊಂಡ ಬೃಹನ್ಮುಂಬಯಿ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ವಿಜೇತರಾಗಿರುವ ಸುಮಾರು 43 ಕಾರ್ಪೋರೇಟರ್‌ಗಳು ಅತ್ಯಾಚಾರ ಸಹಿತ ಹಲವು ಗಂಭೀರ ಕ್ರಿಮಿನಲ್ ಪ್ರಕರಣವನ್ನು ಎದುರಿಸುತ್ತಿದ್ದಾರೆ ಎಂದು ಎನ್‌ಜಿಒ ನಡೆಸಿರುವ ಸಮೀಕ್ಷೆಯಿಂದ ಬಹಿರಂಗವಾಗಿದೆ.

ನೂತನವಾಗಿ ಆಯ್ಕೆಯಾಗಿರುವ ಬಿಎಂಸಿ ಕಾರ್ಪೋರೇಟರ್‌ಗಳ ಪೈಕಿ ಸುಮಾರು ಶೇ.19ರಷ್ಟು ಮಂದಿ ಹತ್ಯೆ ಯತ್ನ ಹಾಗೂ ರೇಪ್ ಪ್ರಕರಣವನ್ನು ಎದುರಿಸುತ್ತಿದ್ದಾರೆ ಎಂದು ಎರಡು ಎನ್‌ಜಿಒಗಳು ಬಿಎಂಸಿಯ 227 ವಿಜೇತ ಅಭ್ಯರ್ಥಿಗಳ ಪೈಕಿ 225 ಅಭ್ಯರ್ಥಿಗಳ ಅಫಿದಾವಿತ್ ಪರಿಶೀಲನೆ ವೇಳೆ ಈ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

ಜನರು ಸಾಕಷ್ಟು ಸಂಖ್ಯೆಯಲ್ಲಿ ಚುನಾವಣೆಯಲ್ಲಿ ಮತ ಚಲಾಯಿಸದೇ ಇದ್ದರೆ ರಾಜಕೀಯ ಪಕ್ಷಗಳು ಹಣ ಹಾಗೂ ತೋಳ್ಬಲವಿರುವ ವ್ಯಕ್ತಿಗಳನ್ನೇ ಅಭ್ಯರ್ಥಿಗಳನ್ನಾಗಿ ಕಣಕ್ಕಿಳಿಸುತ್ತವೆೆ ಎಂದು ಎನ್‌ಜಿಒ ಮಹಾರಾಷ್ಟ್ರ ಎಲೆಕ್ಷನ್ ವಾಚ್‌ನ ಸಂಯೋಜಕ ಶರದ್ ಕುಮಾರ್ ಹೇಳಿದ್ದಾರೆ.

 115ನೆ ವಾರ್ಡ್‌ನಿಂದ ವಿಜೇತರಾಗಿರುವ ಶಿವಸೇನೆಯ ಅಭ್ಯರ್ಥಿ ಉಮೇಶ್ ಎಸ್. ಮಾನೆ ಹತ್ಯೆಗೆ ಯತ್ನ(ಐಪಿಸಿ ಸೆಕ್ಷನ್ 307) ಪ್ರಕರಣ ಎದುರಿಸುತ್ತಿದ್ದಾರೆ. ಮೂವರು ವಿಜೇತ ಅಭ್ಯರ್ಥಿಗಳು ಅತ್ಯಾಚಾರ ಯತ್ನ(ಐಪಿಸಿ ಸೆಕ್ಷನ್ 376), ಮಹಿಳೆಯರಿಗೆ ಲೈಂಗಿಕ ಕಿರುಕುಳ(ಐಪಿಸಿ ಸೆಕ್ಷನ್ 354) ಪ್ರಕರಣದ ಆರೋಪಿಗಳಾಗಿದ್ದಾರೆ.

225 ವಿಜೇತ ಅಭ್ಯರ್ಥಿಗಳ ಪ್ರಮಾಣಪತ್ರದ ಅವಲೋಕನದ ವೇಳೆ ಶಿವಸೇನೆಯ 22, ಬಿಜೆಪಿಯ 11, ಎಂಎನ್‌ಎಸ್‌ನ 2 ಹಾಗೂ ಕಾಂಗ್ರೆಸ್‌ನ ಇಬ್ಬರು, ಎನ್‌ಸಿಪಿ, ಎಸ್ಪಿ ಹಾಗೂ ಎಂಐಎಂ 1 ಹಾಗೂ ಇಬ್ಬರು ಪಕ್ಷೇತರ ಅಭ್ಯರ್ಥಿಗಳು ಕ್ರಿಮಿನಲ್ ಕೇಸ್ ಎದುರಿಸುತ್ತಿದ್ದಾರೆ. ಸಮೀಕ್ಷೆಯ ವರದಿ ಸಿದ್ಧವಾಗುವಾಗ ಇನ್ನಿಬ್ಬರು ವಿಜೇತ ಅಭ್ಯರ್ಥಿಗಳ ಅಫಿದಾವಿತ್ ಲಭ್ಯವಾಗಿರಲಿಲ್ಲ ಎಂದು ತಿಳಿದುಬಂದಿದೆ.

ಈ ವರ್ಷ 25 ವರ್ಷಗಳಲ್ಲಿ ಮೊದಲ ಬಾರಿ ಮತದಾನದ ಪ್ರಮಾಣ ಹೆಚ್ಚಳವಾಗಿದೆ. ಹೀಗಾಗಿ ಅಪರಾಧ ಹಿನ್ನೆಲೆಯ ಅಭ್ಯರ್ಥಿಗಳ ಸಂಖ್ಯೆ ಕಡಿಮೆಯಾಗಿದೆ ಎಂದು ಕುಮಾರ್ ತಿಳಿಸಿದರು.

ಬಿಎಂಸಿ ಚುನಾವಣೆಯ ವಿಜೇತರಲ್ಲಿ 144 ಮಂದಿ ಕೋಟ್ಯಧಿಪತಿಗಳು, ಐವರು ವಿಜೇತ ಅಭ್ಯರ್ಥಿಗಳು 4 ಲಕ್ಷ ಗಿಂತ ಕಡಿಮೆ ಆದಾಯ ಘೋಷಿಸಿದ್ದಾರೆ. ಇನ್ನು ಕೆಲವರು ತಮ್ಮ ವಾರ್ಷಿಕ ಆದಾಯ 50 ಲಕ್ಷಗಿಂತ ಹೆಚ್ಚು ಎಂದು ಘೋಷಿಸಿಕೊಂಡಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.

ಇತ್ತೀಚೆಗೆ ಕೊನೆಗೊಂಡಿರುವ ಬಿಎಂಸಿ ಚುನಾವಣೆಯಲ್ಲಿ ಶಿವಸೇನೆ 84 ಕ್ಷೇತ್ರಗಳಲ್ಲಿ ಜಯ ಸಾಧಿಸಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಬಿಜೆಪಿ (82) ಹಾಗೂ ಕಾಂಗ್ರೆಸ್ (31) ಕ್ರಮವಾಗಿ 2ನೆ ಹಾಗೂ 3ನೆ ಸಾನ್ಥ ಪಡೆದಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News