‘ಆಪ್’ ಕಾ ಕ್ಯಾ ಹೋಗಾ? ಪಂಜಾಬ್‌ನಲ್ಲಿ ತೃತೀಯ,ಗೋವಾದಲ್ಲಿ ಶೂನ್ಯ

Update: 2017-03-11 06:25 GMT

ಹೊಸದಿಲ್ಲಿ, ಮಾ. 11: ಮತದಾನೋತ್ತರ ಸಮೀಕ್ಷೆಗಳು ತನ್ನ ಪರವಾಗಿ ಭವಿಷ್ಯ ನುಡಿದಿದ್ದರೂ ತನ್ನ ಎಚ್ಚರಿಕೆಯಲ್ಲಿ ತಾನಿದ್ದ ಬಿಜೆಪಿ ಇಂದು ಬೆಳಿಗ್ಗೆ ಉತ್ತರ ಪ್ರದೇಶ ದಲ್ಲಿಯ ತನ್ನ ಕಚೇರಿಯಲ್ಲಿ ಹೂವುಗಳನ್ನಾಗಲೀ ಸಿಹಿತಿಂಡಿಗಳನ್ನಾಗಲೀ ಸಿದ್ಧವಾಗಿಟ್ಟಿ ರಲಿಲ್ಲ. ಆದರೆ ಆಮ್ ಆದ್ಮಿ ಪಾರ್ಟಿಯ ಕಚೇರಿಯಲ್ಲಿ ಸಂಭ್ರಮ ಕಂಡು ಬಂದಿತ್ತು. ಸಮೀಕ್ಷೆಗಳು ಪಂಜಾಬ್‌ನಲ್ಲಿ ಕಾಂಗ್ರೆಸ ಅಥವಾ ಆಪ್ ಅಧಿಕಾರದ ಗದ್ದುಗೆಯನ್ನೇರಲಿವೆ ಹಾಗೂ ಗೋವಾದಲ್ಲಿ ಸಾಕಷ್ಟು ಸ್ಥಾನಗಳನ್ನು ಆಪ್ ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದ್ದವು. ಹೀಗಾಗಿ ಆಪ್ ಕಚೇರಿಯಲ್ಲಿ ಪಟಾಕಿಗಳು,ಬಲೂನುಗಳೊಂದಿಗೆ ಬೆಳಿಗ್ಗೆಯೇ ವಿಜಯೋತ್ಸವ ಕಂಡು ಬಂದಿತ್ತು. ಧ್ವನಿವರ್ಧಕಗಳಿಂದ ‘ಜೈ ಹೋ ’ಒಂದೇ ಸಮನೇ ಮೊಳಗುತ್ತಿತ್ತು. ಪಂಜಾಬ್ ಮತ್ತು ಗೋವಾಗಳನ್ನು ಗೆದ್ದ ಸಡಗರ ಆಗಲೇ ಆಪ್ ಕಾರ್ಯಕರ್ತರಲ್ಲಿ ಮನೆ ಮಾಡಿತ್ತು.

ಆದರೆ ಮತಎಣಿಕೆ ಆರಂಭಗೊಂಡು ಎರಡು ಗಂಟೆಗಳಲ್ಲಿ ಆಪ್ ಪಂಜಾಬ್‌ನಲ್ಲಿ ಕಳಪೆ ಪ್ರದರ್ಶನದೊಂದಿಗೆ ಮೂರನೇ ಸ್ಥಾನದಲ್ಲಿದ್ದರೆ ಗೋವಾದಲ್ಲಿ ತನ್ನ ಖಾತೆಯನ್ನು ತೆರೆಯುವಲ್ಲಿಯೇ ವಿಫಲಗೊಂಡಿತ್ತು. ಆಪ್ ಕಾರ್ಯಕರ್ತರ ಮುಖಗಳಲ್ಲಿನ ಸಂಭ್ರಮ ಮಾಯವಾಗಿ ವಿಷಾದ ಮೂಡತೊಡಗಿತ್ತು.

ಪಂಜಾಬ್‌ನಲ್ಲಿ ಆಪ್‌ನ ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ್ ಮಾನ್ ಅವರಂತೂ ತನ್ನ ಪಕ್ಷ ವಿಧಾನಸಭೆಯ 117 ಸ್ಥಾನಗಳ ಪೈಕಿ 100 ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲಲಿದೆ ಎಂದು ಘೋಷಿಸಿಬಿಟ್ಟಿದ್ದರು. ಆದರೆ ಇತ್ತೀಚಿನ ಮತಎಣಿಕೆ ಮಾಹಿತಿಯಂತೆ ಸ್ವತಃ ಮಾನ್ ಜಲಾಲಾಬಾದ್ ಕ್ಷೇತ್ರದಲ್ಲಿ ಹಿಂದೆ ಬಿದ್ದಿದ್ದಾರೆ.

ನಿರಾಶಾದಾಯಕ ಫಲಿತಾಂಶ ಗ್ಯಾರಂಟಿ ಎಂಬ ಹಿನ್ನೆಲೆಯಲ್ಲಿ ಆಪ್ ನಾಯಕ ಸೋಮನಾಥ ಭಾರ್ತಿ ಅವರು, ಪಕ್ಷದ ಲೆಕ್ಕಾಚಾರ ಎಲ್ಲಿ ತಪ್ಪಿತು ಎನ್ನುವುದಕ್ಕೆ ಪಂಜಾಬ್ ಮತ್ತು ಗೋವಾ ದೊಡ್ಡ ಪಾಠಗಳಾಗಲಿವೆ ಎಂದು ಶನಿವಾರ ಇಲ್ಲಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News