ರಸ್ತೆಯಲ್ಲಿ ಸುರಕ್ಷಿತನಾಗಿರುವುದು ಬಳಕೆದಾರನ ಹಕ್ಕು : ನ್ಯಾಯಾಲಯ

Update: 2017-03-28 13:56 GMT

ಹೊಸದಿಲ್ಲಿ, ಮಾ.28: ಚಾಲಕನಾಗಿರಲಿ ಅಥವಾ ಪಾದಚಾರಿಯಾಗಿರಲಿ, ಪ್ರತಿಯೊಬ್ಬ ರಸ್ತೆ ಬಳಕೆದಾರನೂ, ದಾರಿಯಲ್ಲಿ ಸುರಕ್ಷಿತನಾಗಿರುವ ಹಕ್ಕನ್ನು ಹೊಂದಿದ್ದಾನೆಂದು ದಿಲ್ಲಿಯ ನ್ಯಾಯಾಲಯವೊಂದು ಮಂಗಳವಾರ ಹೇಳಿದೆ.

 ಪಾನಮತ್ತನಾಗಿ ವಾಹನ ಚಲಾಯಿಸಿದ ಪ್ರಕರಣದಲ್ಲಿ ಚಾಲಕ ಕರಮ್‌ಬೀರ್‌ಸಿಂಗ್ ಎಂಬಾತ ದೋಷಿಯೆಂಬ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ನೀಡಿದ ತೀರ್ಪನ್ನು ಎತ್ತಿಹಿಡಿದ ಸಂದರ್ಭದಲ್ಲಿ ದಿಲ್ಲಿ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಕಾನೂನು ಉಲ್ಲಂಘಿಸಿ, ಮದ್ಯದ ಅಮಲಿನಲ್ಲಿ ನಿರ್ಲಕ್ಷದಿಂದ ವಾಹನ ಚಲಾಯಿಸುವ ಯಾರಿಗೂ ಕೂಡಾ ರಸ್ತೆ ಬಳಕೆದಾರನ ಹಕ್ಕನ್ನು ಕಸಿಯುವ ಅಧಿಕಾರವಿಲ್ಲವೆಂದು ಕೋರ್ಟ್ ತೀರ್ಪಿನಲ್ಲಿ ತಿಳಿಸಿದೆ.

 ರಸ್ತೆಯನ್ನು ಸುರಕ್ಷಿತವಾಗಿ ಬಳಸುವ ಹಕ್ಕು ರಸ್ತೆಬಳಕೆದಾರನಿದೆ ಮಾತ್ರವಲ್ಲ, ಇತರ ರಸ್ತೆ ಬಳಕೆದಾರರು ಕೂಡಾ ಸುರಕ್ಷಿತವಾಗಿರುವಂತೆ ನೋಡಿಕೊಳ್ಳುವ ಕರ್ತವ್ಯವನ್ನು ಆತ ಹೊಂದಿದ್ದಾನೆ. ರಸ್ತೆ ಸಂಚಾರದ ವೇಳೆ ತಾನಾಗಲಿ ಅಥವಾ ಇತರರಾಗಲಿ ಪ್ರಮಾದಗಳನು ಎಸಗುವುದರ ವಿರುದ್ಧ ಆತ ಎಚ್ಚರಿಕೆ ವಹಿಸಬೇಕೆಂದು ನ್ಯಾಯಾಲಯ ಪ್ರತಿಪಾದಿಸಿದೆ.

 ‘‘ ಒರಟಾಗಿ ಅಥವಾ ನಿರ್ಲಕ್ಷದಿಂದ, ಅದರಲ್ಲೂ ಮದ್ಯದ ಅಮಲಿನಲ್ಲಿ ವಾಹನ ಚಲಾಯಿಸುವ ಮೂಲಕ ರಸ್ತೆ ಬಳಕೆದಾರನು ಇತರರ ಸುರಕ್ಷತೆಯನ್ನು ಗಾಳಿಗೆ ತೂರಕೂಡದು. ಯಾರಾದಾರೂ ಹಾಗೆ ಮಾಡಿದ್ದೇ ಅದಲ್ಲಿ ಅವರು ಶಿಕ್ಷೆಗೆ ಅರ್ಹರಾಗಿದ್ದಾರೆ’’ ಎಂದು ಹೆಚ್ಚುವರಿ ಸೆಶನ್ಸ್ ನ್ಯಾಯಾಧೀಶ ಎಂ.ಆರ್.ಸೇಠಿ ಆದೇಶದಲ್ಲಿ ತಿಳಿಸಿದ್ದಾರೆ.

ಆದಾಗ್ಯೂ ವಿಚಾರಣಾ ನ್ಯಾಯಾಲಯ ಆರೋಪಿಗೆ ವಿಧಿಸಿದ್ದ 30 ದಿನಗಳ ಜೈಲು ಶಿಕ್ಷೆಯ ಅವಧಿಯನ್ನು ನ್ಯಾಯಾಧೀಶರು ಏಳು ದಿನಗಳಿಗೆ ಇಳಿಸಿದ್ದಾರೆ. ಆದರೆ ಆತನಿಗೆ ವಿಧಿಸಿದ್ದ 3500 ರೂ. ದಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News