ಕಾಳಿದೇವಿಯನ್ನು ಒಲಿಸಿಕೊಳ್ಳಲು ತಾಯಿಯ ರುಂಡ ಕಡಿದ ಮಗರಾಯ!

Update: 2017-04-09 13:54 GMT

ಪುರುಲಿಯಾ(ಪ.ಬಂ.),ಎ.9: ಕಾಳಿದೇವಿಯನ್ನು ಒಲಿಸಿಕೊಳ್ಳಲು ಕುಮಾರ ಕಂಠೀರವನೋರ್ವ ತನ್ನ ಹೆತ್ತ ತಾಯಿಯ ರುಂಡವನ್ನು ಕತ್ತರಿಸಿ ಬಲಿ ನೀಡಿದ ಬರ್ಬರ ಘಟನೆ ಪುರುಲಿಯಾ ಜಿಲ್ಲೆಯ ಬಡಾಬಝಾರ್‌ನಲ್ಲಿ ಸಂಭವಿಸಿದೆ.

  ಬಡಾಬಝಾರ್‌ನ ಬಾಮಾಗ್ರಾಮ ನಿವಾಸಿ ಫುಲಿ ಮಹತೋ(55) ಶುಕ್ರವಾರ ಸಂಜೆ ತನ್ನ ಮನೆಯ ಆವರಣದಲ್ಲಿರುವ ಕಾಳಿ ದೇವಸ್ಥಾನದಲ್ಲಿ ಸ್ವಚ್ಛತಾ ಕಾರ್ಯ ಮಾಡುತ್ತಿದ್ದಾಗ ಪುತ್ರ ನಾರಾಯಣ ಮಹತೋ(35) ಹರಿತವಾದ ಆಯುಧದಿಂದ ಅಕೆಯ ತಲೆಯನ್ನು ಕತ್ತರಿಸಿದ್ದಾನೆ ಎಂದು ಎಸ್‌ಪಿ ಜಾಯ್ ಬಿಸ್ವಾಸ್ ತಿಳಿಸಿದರು.

 ಹತ ಫುಲಿ ಮಹತೋಳ ಮೂವರು ಮಕ್ಕಳಲ್ಲಿ ಕಿರಿಯವನಾಗಿರುವ ನಾರಾಯಣ ಬಳಿಕ ರಕ್ತಸಿಕ್ತ ಆಯುಧದೊಂದಿಗೆ ಹಿರಿಯ ಸಹೋದರನ ನಿವಾಸಕ್ಕೆ ತೆರಳಿ, ತಾಯಿ ಕಾಳಿದೇವಿಯ ವಿಗ್ರಹದ ಎದುರು ಸ್ವಯಂ ಶಿರಚ್ಛೇದನ ಮಾಡಿಕೊಂಡಿದ್ದಾಳೆ ಎಂದು ಹೇಳಿಕೊಂಡಿದ್ದ. ಸೋದರ ನಾರಾಯಣನೊಂದಿಗೆ ಮನೆಗೆ ಧಾವಿಸಿದಾಗ ತಾಯಿಯ ರುಂಡ ರಕ್ತದ ಮಡುವಲ್ಲಿ ಬಿದ್ದಿದ್ದು, ಸ್ವಲ್ಪ ದೂರದಲ್ಲಿ ಮುಂಡ ಬಿದ್ದಿರುವುದು ಕಣ್ಣಿಗೆ ಬಿದ್ದಿತ್ತು. ಆತ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದ.

ಪೊಲೀಸರು ತಡರಾತ್ರಿ ನಾರಾಯಣನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೊಳಪಡಿಸಿದಾಗ ದೇವಿಯನ್ನು ಸಂತುಷ್ಟಗೊಳಿಸಲು ತಾನೇ ತಾಯಿಯ ತಲೆ ಕಡಿದಿದ್ದನ್ನು ಒಪ್ಪಿಕೊಂಡಿದ್ದಾನೆ. ದೇವಿಯು ತನ್ನ ಕನಸಿನಲ್ಲಿ ಬಂದು ಕುಟುಂಬದ ಯೋಗಕ್ಷೇಮಕ್ಕಾಗಿ ತಾಯಿಯನ್ನು ಬಲಿ ನೀಡುವಂತೆ ಹೇಳಿದ್ದಳು ಎಂದೂ ಆತ ಪೊಲೀಸರಿಗೆ ತಿಳಿಸಿದ್ದಾನೆ.

 ಆರೋಪಿ ನಾರಾಯಣ ವಾಮಾಚಾರವನ್ನು ನಡೆಸುತ್ತಿದ್ದ. ಇದಕ್ಕಾಗಿ ಮನೆಯಯಲ್ಲಿಯೇ ಕಾಳಿ ದೇವಸ್ಥಾನವನ್ನು ಸ್ಥಾಪಿಸಿದ್ದ ಎಂದು ನೆರೆಕರೆಯವರು ತಿಳಿಸಿದ್ದಾರೆ. ನ್ಯಾಯಾಲಯವು ಆರೋಪಿಗೆ ಎರಡು ವಾರಗಳ ನ್ಯಾಯಾಂಗ ಬಂಧನವನ್ನು ವಿಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News