ಮುಸ್ಲಿಮರು ನಮಗೆ ಮತ ಹಾಕಿಲ್ಲ: ಸಚಿವ ರವಿಶಂಕರ ಪ್ರಸಾದ್

Update: 2017-04-22 04:36 GMT

ಹೊಸದಿಲ್ಲಿ, ಎ.22: "ಮುಸ್ಲಿಮರು ನಮಗೆ ಮತ ಹಾಕಿಲ್ಲ ಎನ್ನುವುದು ಖಾತ್ರಿಯಾಗಿದೆ. ಆದರೂ ನಾವು ಅವರಿಗೆ ಸೂಕ್ತ ಗೌರವ ಕೊಟ್ಟಿಲ್ಲವೇ?" ಎಂದು ಕೇಂದ್ರ ದೂರಸಂಪರ್ಕ ಖಾತೆ ಸಚಿವ ರವಿಶಂಕರ ಪ್ರಸಾದ್ ಪ್ರಶ್ನಿಸಿದ್ದಾರೆ.

ಹೀರೊ ಉದ್ಯಮ ಸಮೂಹ ಆಯೋಜಿಸಿದ್ದ ಮೈಂಡ್‌ಮೈನ್ ಶೃಂಗದ ಸಂವಾದದಲ್ಲಿ ಎದುರಾದ ಪ್ರಶ್ನೆಗೆ ಸಚಿವರು ಮೇಲಿನಂತೆ ಉತ್ತರಿಸಿದರು. ಸಮಾಜದ ಬಹುಸಂಸ್ಕೃತಿಯನ್ನು ಅಳವಡಿಸಿಕೊಳ್ಳುವಷ್ಟು ಸರ್ಕಾರದ ಟೆಂಟ್ ದೊಡ್ಡದಾಗಿಯೇ ಎಂಬ ಪ್ರಶ್ನೆಯನ್ನು ಸಭಿಕರೊಬ್ಬರು ಕೇಳಿದ್ದರು.

"ಭಾರತದ ವೈವಿಧ್ಯತೆಯನ್ನು ನಾವು ಗೌರವಿಸುತ್ತೇವೆ. ಅದನ್ನು ನೋಡುವ ಎರಡು ವಿಧಗಳಿದ್ದು, ನಾನು ಇದನ್ನು ಮುಕ್ತವಾಗಿ ವಿವರಿಸುತ್ತೇನೆ. ನಮ್ಮ ವಿರುದ್ಧ ಧೀರ್ಘಕಾಲದಿಂದಲೂ ಅಪಪ್ರಚಾರ ನಡೆದಿತ್ತು. ಆದರೆ ಜನರ ಆಶೀರ್ವಾದದಿಂದ ನಾವು ಇಲ್ಲಿದ್ದೇವೆ. 15 ರಾಜ್ಯಗಳಲ್ಲಿ ಸ್ವಂತ ಬಲದಲ್ಲಿ ಅಧಿಕಾರಕ್ಕೆ ಬಂದಿದ್ದೇವೆ. 13 ಮುಖ್ಯಮಂತ್ರಿಗಳು ನಮ್ಮವರಿದ್ದಾರೆ. ನಾವು ದೇಶವನ್ನು ಆಳುತ್ತಿದ್ದೇವೆ. ಉದ್ಯಮದಲ್ಲಿ ಕೆಲಸ ಮಾಡುತ್ತಿರುವ ಅಥವಾ ಸೇವೆಯಲ್ಲಿರುವ ಯಾವ ಮುಸ್ಲಿಮರನ್ನಾದರೂ ನಾವು ಬಲಿಪಶು ಮಾಡಿದ್ದೇವೆಯೇ? ನಮಗೆ ಮುಸ್ಲಿಮರು ಮತ ಹಾಕಿಲ್ಲ ಎಂದು ಸ್ಪಷ್ಟಪಡಿಸುತ್ತೇನೆ. ಆದರೆ ಅವರಿಗೆ ಸೂಕ್ತ ಗೌರವ ನೀಡಿಲ್ಲವೇ" ಎಂದು ಸಚಿವರು ಸಮರ್ಥಿಸಿಕೊಂಡರು.

ತಮ್ಮ ಮಾತಿಗೆ ಸಮರ್ಥನೆಯಾಗಿ ಸಚಿವರು, ಅನ್ವರ್ ಉಲ್ ಹಕ್ ಅವರ ನಿದರ್ಶನ ವಿವರಿಸಿದರು. ಜಲಪೈಗುರಿ ಚಹಾ ತೋಟದ ಕಾರ್ಮಿಕನಾದ ಈತ ಅಸ್ವಸ್ಥರನ್ನು ತನ್ನ ಬೈಕ್‌ನಲ್ಲಿ ಕರೆದೊಯ್ದು ಆಸ್ಪತ್ರೆಗೆ ಸೇರಿಸುತ್ತಿರುವ ಸೇವಾಕಾರ್ಯವನ್ನು ಗುರುತಿಸಿ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ ಎಂದು ಹೇಳಿದರು. ವೈದ್ಯಕೀಯ ಸೇವೆ ದೊರಕದೇ ಸಾವಿಗೀಡಾದ ತಾಯಿಯ ನೆನಪಿಗಾಗಿ ಈ ಸೇವೆ ಮಾಡುತ್ತಿರುವ ಹಕ್ ಸುಮಾರು 2,000 ಜೀವ ಉಳಿಸಿದ್ದಾರೆ ಎಂದು ಬಣ್ಣಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News