ಮಾಲೆಗಾಂವ್‌ ಸ್ಫೋಟ ಪ್ರಕರಣ; ಸಾದ್ವಿ ಪ್ರಗ್ಯಾಗೆ ಬಾಂಬೆ ಹೈಕೋರ್ಟ್‌ನಿಂದ ಷರತ್ತುಬದ್ಧ ಜಾಮೀನು

Update: 2017-04-25 14:08 GMT

 ಮುಂಬೈ,ಎ.25: 2008ರ ಮಾಲೆಗಾಂವ್ ಸ್ಫೋಟ ಸಂಚಿನ ಪ್ರಮುಖ ಆರೋಪಿ ಸಾಧ್ವಿ ಪ್ರಜ್ಞಾಸಿಂಗ್ ಠಾಕೂರ್‌ಗೆ ಬಾಂಬೆ ಹೈಕೋರ್ಟ್ ಮಂಗಳವಾರ ಜಾಮೀನು ಬಿಡುಗಡೆಗೊಳಿಸಿದೆ. ಆದರೆ ಪ್ರಕರಣದ ಸಹಆರೋಪಿ ಲೆ.ಕ.ಪ್ರಸಾದ್ ಪುರೋಹಿತ್‌ಗೆ ಜಾಮೀನು ನೀಡಲು ನಿರಾಕರಿಸಿದೆ.

5 ಲಕ್ಷ ರೂ.ಗಳ ಬಾಂಡ್‌ನೊಂದಿಗೆ ಸಾಧ್ವಿಗೆ ಜಾಮೀನು ನೀಡಿರುವ ನ್ಯಾಯಾಲಯ, ಬಿಡುಗಡೆಯ ಬಳಿಕ ಯಾವುದೇ ಸಾಕ್ಷಾಧಾರಗಳನ್ನು ತಿರುಚದಂತೆ ಹಾಗೂ ಪಾಸ್‌ಪೋರ್ಟ್‌ನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಗೆ ಒಪ್ಪಿಸುವಂತೆಯೂ ಆಕೆಗೆ ಆದೇಶಿಸಿದೆ. ಅಗತ್ಯವಿದ್ದಾಗಲೆಲ್ಲಾ ಎನ್‌ಐಎ ನ್ಯಾಯಾಲಯದ ಮುಂದೆ ಹಾಜರಾಗಬೇಕೆಂದು ಅದು ಸೂಚಿಸಿದೆ.

ಪ್ರಜ್ಞಾಸಿಂಗ್ ವಿರುದ್ಧ ಮೇಲ್ನೋಟಕ್ಕೆ ಯಾವುದೇ ಬಲವಾದ ಸಾಕ್ಷಗಳು ಲಭ್ಯವಿಲ್ಲದ ಕಾರಣ ಆಕೆಗೆ ಜಾಮೀನು ನೀಡಿರುವುದಾಗಿ ನ್ಯಾಯಮೂರ್ತಿಗಳಾದ ರಂಜಿತ್ ಮೋರೆ ಹಾಗೂ ಶಾಲಿ ಫನ್ಸಾಲ್ಕರ್ ಜೋಶಿ ಅವರನ್ನೊಳಗೊಡ ವಿಭಾಗೀಯ ಪೀಠ ತಿಳಿಸಿದೆ.

ಮಹಾರಾಷ್ಟ್ರದ ಮಾಲೆಗಾಂವ್ ಪಟ್ಟಣದಲ್ಲಿ 2008ರ ಸೆಪ್ಟೆಂಬರ್ 29ರಂದು ಮಸೀದಿಯೊಂದರ ಸಮೀಪ ಮೋಟಾರ್‌ಸೈಕಲ್‌ನಲ್ಲಿ ಇರಿಸಲಾಗಿದ್ದ ಬಾಂಬೊಂದು ಸ್ಫೋಟಿಸಿ ಎಂಟು ಮಂದಿ ಸಾವನ್ನಪ್ಪಿದ್ದರು ಹಾಗೂ 80ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿ ಸಾಧ್ವಿ ಪ್ರಜ್ಞಾಸಿಂಗ್ ಹಾಗೂ ಶ್ರೀಕಾಂತ್ ಪುರೋಹಿತ್ ಅವರನ್ನು 2008ರಲ್ಲಿ ಬಂಧಿಸಲಾಗಿತ್ತು ಹಾಗೂ ಅವರು ಅವಾಗಿನಿಂದ ಜೈಲಿನಲ್ಲಿಯೇ ಇದ್ದಾರೆ.ತಮ್ಮ ಜಾಮೀನು ಮನವಿಯನ್ನು ತಿರಸ್ಕರಿಸಿದ ವಿಶೇಷ ನ್ಯಾಯಾಲಯದ ಹಿಂದಿನ ಆದೇಶವನ್ನು ಪ್ರಶ್ನಿಸಿ ಸಾಧ್ವಿ ಪ್ರಜ್ಞಾಸಿಂಗ್ ಹಾಗೂ ಪುರೋಹಿತ್ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯನ್ನು ಇಂದು ನ್ಯಾಯಾಲಯ ನಡೆಸಿತ್ತು.

ಮಾಲೆಗಾಂವ್ ಸ್ಫೋಟವನ್ನು ಕೇಸರಿ ಉಗ್ರಗಾಮಿ ಸಂಘಟನೆ ಅಭಿನವ್ ಭಾರತ್ ನಡೆಸಿರುವುದಾಗಿ ತನಿಖಾ ಸಂಸ್ಥೆಗಳು ಆರೋಪಿಸಿವೆ ಹಾಗೂ ಪ್ರಕರಣಕ್ಕೆ ಸಂಬಂಧಿಸಿ ಪುರೋಹಿತ್ ಹಾಗೂ ಪ್ರಜ್ಞಾ ಸೇರಿದಂತೆ ಒಟ್ಟು 11 ಮಂದಿ ಜೈಲುವಾಸ ಅನುಭವಿಸುತ್ತಿದ್ದಾರೆ. ಮಾಲೆಗಾಂವ್ ಸ್ಫೋಟದಲ್ಲಿ ತನ್ನ ಕೈವಾಡವಿರುವ ಬಗ್ಗೆ ಯಾವುದೇ ಪುರಾವೆ ತನಗೆ ದೊರೆತಿಲ್ಲವೆಂದು ಎನ್‌ಐಎ ತನ್ನ ದೋಷಾರೋಪ ಪಟ್ಟಿಯಲ್ಲಿ ಘೋಷಿಸಿರುವುದನ್ನು ಗಮನಕ್ಕೆ ತೆಗೆದುಕೊಳ್ಳಲು ಕೆಳನ್ಯಾಯಾಲಯ ವಿಫಲವಾಗಿದೆಯೆಂದು ಪ್ರಜ್ಞಾಸಿಂಗ್ ತನ್ನ ಅರ್ಜಿಯಲ್ಲಿ ವಾದಿಸಿದ್ದರು.

ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹದಳ ನಡೆಸುತ್ತಿದ್ದ ಈ ಪ್ರಕರಣದ ತನಿಖೆಯು ಬಹಳ ವರ್ಷಗಳ ಬಳಿಕ ರಾಷ್ಟ್ರೀಯ ತನಿಖಾ ಸಂಸ್ಥೆಗೆ ಹಸ್ತಾಂತರಿಸಲ್ಪಟ್ಟಿತ್ತು. ಸಾಧ್ವಿಯ ಮನವಿಗೆ ತನ್ನ ಯಾವುದೇ ಆಕ್ಷೇಪವಿಲ್ಲವೆಂದು ಎನ್‌ಐಎ ಹೈಕೋರ್ಟ್‌ಗೆ ತಿಳಿಸಿದೆ.ಸಾಧ್ವಿಗೆ ಜಾಮೀನು ಬಿಡುಗಡೆ ದೊರೆತಿರುವ ಬಗ್ಗೆ ಪ್ರತಿಕ್ರಿಯಿಸಿರುವ ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹದಳವು, ‘‘ಈಗ ಚೆಂಡು ಎನ್‌ಐಎ ನ್ಯಾಯಾಲಯದಲ್ಲಿದ್ದು, ಜಾಮೀನು ಮನವಿಯನ್ನು ಬೆಂಬಲಿಸುವ ಅಥವಾ ವಿರೋಧಿಸುವುದು ಈಗ ತನ್ನ ಬಾಧ್ಯತೆಯಾಗಿ ಉಳಿದಿಲ್ಲವೆಂದು ಅದು ಹೇಳಿದೆ.

ಈ ಮಧ್ಯೆ ನ್ಯಾಯಾಲಯದ ಇಂದಿನ ಆದೇಶಕ್ಕೆ ಸಾಧ್ವಿ ಪ್ರಜ್ಞಾಸಿಂಗ್‌ರ ಸೋದರ ಭಗವಾನ್ ಝಾ ಹರ್ಷ ವ್ಯಕ್ತಪಡಿಸಿದ್ದಾರೆ. ‘‘ಕೊನೆಗೂ ನಾವು ಗೆದ್ದೆವು. ಯಾವುದೇ ಪುರಾವೆಗಳಿಲ್ಲದೆ ಆಕೆ 9 ವರ್ಷಗಳಿಂದ ಜೈಲಿನಲ್ಲಿದ್ದಳು. ಇದೀಗ ಆಕೆಯ ಬಿಡುಗಡೆಗೊಂಡಿರುವುದನ್ನು ನಾವು ದೇಶಾದ್ಯಂತ ಸಂಭ್ರಮದೊಂದಿಗೆ ಆಚರಿಸಲಿದ್ದೇವೆ’’ ಎಂದು ಆತ ಸುದ್ದಿಗಾರರಿಗೆ ತಿಳಿಸಿದ್ದಾರೆ.

 ಪುರೋಹಿತ್‌ಗೆ ಜಾಮೀನು ನೀಡಲು ಎನ್‌ಐಎ ವಿರೋಧ

 ಪುರೋಹಿತ್ ಸಲ್ಲಿಸಿದ ಜಾಮೀನು ಬಿಡುಗಡೆಯ ಮನವಿಯನ್ನು ಎನ್‌ಐಎ ತೀವ್ರವಾಗಿ ವಿರೋಧಿಸಿದೆ. ತನಗೆ ಲಭ್ಯವಾಗಿರುವ ಹಲವಾರು ಆಡಿಯೋ ಹಾಗೂ ವಿಡಿಯೋ ದಾಖಲೆಗಳು, ದೂರವಾಣಿ ಕರೆ ವಿವರಗಳು ಹಾಗೂ ಸಾಕ್ಷಿಗಳ ಹೇಳಿಕೆಗಳು ಆತ ಈ ಪ್ರಕರಣದಲ್ಲಿ ಶಾಮೀಲಾಗಿರುವುದನ್ನು ಸಾಬೀತುಪಡಿಸಿರುವುದಾಗಿ ಅದು ಹೇಳಿದೆ.

ಮಾಲೆಗಾಂವ್ ಸ್ಫೋಟ ಸಂಚಿನ ಸಭೆಗಳಲ್ಲಿ ಪುರೋಹಿತ್ ಸಕ್ರಿಯವಾಗಿ ಪಾಲ್ಗೊಂಡಿದ್ದ ಹಾಗೂ ಸ್ಫೋಟಕ್ಕೆ ಬಳಸಲು ಬೇಕಾದ ಸ್ಫೋಟಕಗಳನ್ನು ಕೂಡಾ ಏರ್ಪಾಡು ಮಾಡಿದ್ದನವೆಂದು ಎನ್‌ಐಎ ಚಾರ್ಜ್‌ಶೀಟ್‌ನಲ್ಲಿ ಆಪಾದಿಸಿದೆ. ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಎನ್‌ಐಎ ಕೆಲವು ಆರೋಪಿಗಳನ್ನು ಮಾತ್ರವೇ ಆಯ್ದು ದೋಷಮುಕ್ತಗೊಳಿಸುತ್ತಿದೆ ಹಾಗೂ ಅದು ತನ್ನನ್ನು ಈ ಪ್ರಕರಣದಲ್ಲಿ ಬಲಿಪಶುವನ್ನಾಗಿ ಮಾಡಿದೆಯೆಂದು ಪುರೋಹಿತ್ ವಾದಿಸಿದ್ದಾನೆ.


ಸುಪ್ರೀಂಗೆ ಮೇಲ್ಮನವಿ ಸಲ್ಲಿಸಲುಸಂತ್ರಸ್ತ ಕುಟುಂಬಗಳ ನಿರ್ಧಾರ

 ಪ್ರಜ್ಞಾಸಿಂಗ್‌ಳ ಜಾಮೀನು ಮನವಿಗೆ ಆಕ್ಷೇಪ ವ್ಯಕ್ತಪಡಿಸಿ ಅರ್ಜಿ ಸಲ್ಲಿಸಿದ್ದ ಮಾಲೆಗಾಂವ್ ಸ್ಫೋಟ ಪ್ರಕರಣದ ಸಂತ್ರಸ್ತ ಕುಟುಂಬಗಳು, ಇಂದು ನ್ಯಾಯಾಲಯ ನೀಡಿದ ಆದೇಶಕ್ಕೆ ತಡೆಯಾಜ್ಞೆ ಕೋರಿದ್ದು, ತಾವು ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವುದಾಗಿ ತಿಳಿಸಿವ್ಲೆ ಪ್ರಜ್ಞಾಸಿಂಗ್ ಮಾಲೆಗಾಂವ್ ಸ್ಫೋಟ ಪ್ರಕರಣದ ಪ್ರಮುಖ ರೂವಾರಿಗಳಲ್ಲೊಬ್ಬಳೆಂಬುದನ್ನು ದೃಢಪಡಿಸುವ ಸಾಕಷ್ಟು ಪುರಾವೆಗಳು ಎನ್‌ಐಎ ಸಲ್ಲಿಸಿರುವ     ದೋಷಾರೋಪಪಟ್ಟಿಯಲಿಲಭ್ಯವಿರುವುದಾಗಿ ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News