ಸ್ವತಃ ಪರೀಕ್ಷಾರ್ಥಿಯಾಗಿದ್ದು ತನಗೇ ಪರೀಕ್ಷಕ ಮತ್ತು ಮೌಲ್ಯಮಾಪಕನಾಗಿದ್ದ ಪಿಎಚ್‌ಡಿ ವಿದ್ಯಾರ್ಥಿ !

Update: 2017-05-14 09:50 GMT

ಲಕ್ನೋ,ಮೇ 14: ಯಾರಿಗೂ ತಿಳಿಯದಂತೆ ತಾನು ಅಭ್ಯರ್ಥಿಯಾಗಿದ್ದ ಪರೀಕ್ಷೆಯಲ್ಲಿ ತನಗೆ ತಾನೇ ಪರೀಕ್ಷಕನಾಗಿ, ತನ್ನ ಉತ್ತರ ಪತ್ರಿಕೆಯ ಮೌಲ್ಯಮಾಪನವನ್ನೂ ತಾನೇ ನಡೆಸಿದ್ದ ಪಿಎಚ್‌ಡಿ ವಿದ್ಯಾರ್ಥಿಯೋರ್ವ ಕೊನೆಗೂ ಸಿಕ್ಕಿಬಿದ್ದಿದ್ದಾನೆ. ತನ್ನ ಆಯ್ಕೆಯ ವಿಷಯಕ್ಕೆ ತನಗೆ ತಾನೇ ಬೋಧಕನಾಗಿದ್ದ ಈತ ತಾನು ಸಲ್ಲಿಸಬೇಕಾಗಿದ್ದ ಪ್ರಬಂಧದ ವಿಷಯವನ್ನು ಸ್ವತಃ ತಾನೇ ಕೊಟ್ಟುಕೊಂಡಿದ್ದ. ಇದು ಇಲ್ಲಿಯ ಡಾ.ಎಪಿಜೆ ಅಬ್ದುಲ್ ಕಲಾಂ ತಾಂತ್ರಿಕ ವಿವಿ (ಎಕೆಟಿಯು)ಭವಿಷ್ಯದ ವಿದ್ವಾಂಸರನ್ನು ತರಬೇತುಗೊಳಿಸುತ್ತಿರುವ ರೀತಿ!

ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಪಿಎಚ್‌ಡಿ ಅಭ್ಯರ್ಥಿ ದೇವೇಶ್ ಓಝಾ ನಗರದ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ (ಐಇಟಿ)ಯಲ್ಲಿ ಸಹಾಯಕ ಶಿಕ್ಷಕನೂ ಆಗಿದ್ದಾನೆ. ಉಪ ಪರೀಕ್ಷಾ ನಿಯಂತ್ರಣಾಧಿಕಾರಿಗಳು ಅಂಕಪಟ್ಟಿ ಸಿದ್ಧಗೊಳಿಸುತ್ತಿದ್ದಾಗ ಈ ವಂಚನೆ ಬೆಳಕಿಗೆ ಬಂದಿದೆ.

ಪಿಎಚ್‌ಡಿ ಕಾರ್ಯಕ್ರಮಕ್ಕೆ ಓಝಾನ ಪ್ರವೇಶವನ್ನು ರದ್ದುಗೊಳಿಸುಂತೆ ಆದೇಶಿಸಿರುವ ಎಕೆಟಿಯು ಕುಲಪತಿ ವಿನಯ್ ಪಾಠಕ್ ಅವರು, ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಎನ್.ಬಿ.ಸಿಂಗ್ ಅವರಿಗೆ ಈ ಪ್ರಕರಣವನ್ನು ಒಪ್ಪಿಸಿದ್ದಾರೆ.

ಅಧ್ಯಯನ ಮಂಡಳಿಯಿಂದ ಆಗಿರುವ ಗಂಭೀರ ಲೋಪವು ಈ ಮುಜುಗರದ ಪರಿಸ್ಥಿತಿಗೆ ಕಾರಣವಾಗಿದೆ. ಈ ವಿಷಯದ ಬಗ್ಗೆ ತನಿಖೆ ನಡೆಸಲು ಪ್ರೊ.ಭಾರತಿ ದ್ವಿವೇದಿ ಅವರ ನೇತೃತ್ವದಲ್ಲಿ ಮೂವರು ಸದಸ್ಯರ ಸಮಿತಿಯನ್ನು ರಚಿಸಿದ್ದೇವೆ ಎಂದು ಐಇಟಿಯ ನಿರ್ದೇಶಕ ಎ.ಎಸ್.ವಿದ್ಯಾರ್ಥಿ ತಿಳಿಸಿದರು.

 ತಮ್ಮ ಸಂಶೋಧನಾ ಕಾರ್ಯದ ಉಸ್ತುವಾರಿಗೆ ಮತ್ತು ಮೌಲ್ಯಮಾಪನಕ್ಕೆ ಎಕೆಟಿಯುನಿಂದ ಪರೀಕ್ಷಕರಿಗಾಗಿ ಕೋರಿಕೊಳ್ಳುವುದು ವಿದ್ಯಾರ್ಥಿಗಳ ಜವಾಬ್ದಾರಿ ಯಾಗಿರುತ್ತದೆ. ಓಝಾನ ಪ್ರಕರಣದಲ್ಲಿ ಪರೀಕ್ಷಕ ಸಲ್ಲಿಸಬೇಕಾದ ದಾಖಲೆಗಳನ್ನು ಪರಿಶೀಲಿಸುವಲ್ಲಿ ಎಕೆಟಿಯು ವಿಫಲಗೊಂಡಿದೆ. ಸೂಕ್ತ ಉಸ್ತುವಾರಿಯಿಲ್ಲದ್ದರಿಂದ ತನ್ನನ್ನು ತಾನೇ ವೌಲ್ಯಮಾಪನ ಮಾಡಿಕೊಳ್ಳುವಲ್ಲಿ ಆತ ಯಶಸ್ವಿಯಾಗಿದ್ದಾನೆ ಎಂದು ವಿದ್ಯಾರ್ಥಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News