ರಾಮ್‌ಜಾಸ್ ಕಾಲೇಜು ಗಲಭೆ: ದಿಲ್ಲಿ ವಿವಿ ಪ್ರಾಧ್ಯಾಪಕರ ವಿರುದ್ಧ ದೂರು

Update: 2017-08-04 04:03 GMT

ಹೊಸದಿಲ್ಲಿ, ಆ.4: ರಾಮ್‌ಜಾಸ್ ಕಾಲೇಜಿನಲ್ಲಿ ಕೆಲ ತಿಂಗಳ ಹಿಂದೆ ಎರಡು ವಿದ್ಯಾರ್ಥಿ ಗುಂಪುಗಳ ನಡುವೆ ನಡೆದ ಘರ್ಷಣೆಗೆ ಸಂಬಂಧಿಸಿದಂತೆ ಆಜಾದಿ ಘೋಷಣೆ ಕೂಗಿದ ವಿದ್ಯಾರ್ಥಿ ಗುಂಪಿನ ನೇತೃತ್ವ ವಹಿಸಿದ್ದ ದಿಲ್ಲಿ ವಿಶ್ವವಿದ್ಯಾನಿಲಯದ ಐವರು ಪ್ರೊಫೆಸರ್‌ಗಳ ವಿರುದ್ಧ ಪೊಲೀಸರು ದೂರು ನೀಡಿದ್ದಾರೆ.

ಗುರುವಾರ ನಗರದ ನ್ಯಾಯಾಲಯಕ್ಕೆ ಕ್ರಮ ಕೈಗೊಂಡ ವರದಿ ಸಲ್ಲಿಸಿದ ದಿಲ್ಲಿ ಪೊಲೀಸರು, "ಫೆಬ್ರವರಿ 21ರಂದು ಕಾಲೇಜು ಕ್ಯಾಂಪಸ್‌ನಲ್ಲಿ ನಡೆದ ಸಾಹಿತ್ಯ ಉತ್ಸವದಲ್ಲಿ ಭಾಗವಹಿಸಿದ್ದ ಪ್ರತಿನಿಧಿಗಳು ಐವರು ಪ್ರೊಫೆಸರ್‌ಗಳ ನೇತೃತ್ವದಲ್ಲಿ ಸಮ್ಮೇಳನ ಸಭಾಂಗಣದಿಂದ ಹೊರಬಂದು ಎಬಿವಿಪಿ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ" ಎಂದು ಆಪಾದಿಸಿದ್ದಾರೆ.

ಮುಕುಲ್ ಮಾಂಗ್ಲಿಕ್, ವಿನಿತಾ ಚಂದ್ರ, ದೇವರಾಜ್ ಮುಖರ್ಜಿ, ಎನ್.ಎ.ಜಾಕೋಬ್ ಹಾಗೂ ಬೆನುಲಾಲ್ ಅವರು "ಹಮ್ ಕ್ಯಾ ಮಾಂಗೇ ಆಝಾದಿ" "ಕಾಶ್ಮೀರ್ ಮಾಂಗೆ ಆಝಾದಿ" "ಬಸ್ತರ್ ಮಾಂಗೇ ಆಝಾದಿ", "ಯೇ ಪ್ಯಾರೇ ಪ್ಯಾರಿ ಆಝಾದಿ" "ಯೇ ಸುಂದರ್‌ವಾಲಿ ಆಝಾದಿ", "ಪೊಲೀಸ್ ತುಮ್ ಬಾಹರ್ ಜಾವೋ" "ಹಮಾರಾ ಉಮರ್ ವಾಪಾಸ್ ಲಾವೋ" ಎಂಬ ಘೋಷಣೆ ಕೂಗಿದ್ದಾರೆ ಎಂದು ಒಂಬತ್ತು ಪುಟಗಳ ವರದಿಯಲ್ಲಿ ಆಪಾದಿಸಲಾಗಿದೆ. ಈ ಗುಂಪು ಕ್ಯಾಂಪಸ್‌ನಲ್ಲಿ ಪ್ರತಿಭಟನೆ ನಡೆಸಿದ್ದಾಗಿಯೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಆದರೆ ಪ್ರತಿಭಟನಾ ಮೆರವಣಿಗೆ ಆರಂಭವಾದಾಗ ಆ ಸ್ಥಳದಲ್ಲೇ ತಾವು ಇರಲಿಲ್ಲ ಎಂದು ವರದಿಯಲ್ಲಿ ಹೆಸರಿಸಲಾದ ಪ್ರೊಫೆಸರ್‌ಗಳಲ್ಲೊಬ್ಬರಾದ ಮುಖರ್ಜಿ ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News