ಡಾ. ಸುಲ್ತಾನ್ ಅಹ್ಮದ್ ಶರೀಫ್
ಚಿಕ್ಕಮಗಳೂರು, ಆ.21: ನಗರದ ಹೆಸರಾಂತ ವೈದ್ಯ ಡಾ. ಸುಲ್ತಾನ್ ಅಹ್ಮದ್ ಶರೀಫ್ (ಡಾ. ಜುಬೇರ್) (78) ಭಾನುವಾರ ರಾತ್ರಿ ನಿಧನರಾದರು.
ಹಳ್ಳಿ ಜನರಿಗೆ ಹಕೀಂ ಡಾಕ್ಟರ್ ಎಂದೇ ಚಿರಪರಿಚಿತರಾಗಿದ್ದ ಡಾ.ಜುಬೇರ್ ಕಳೆದ 50 ವರ್ಷಗಳಿಂದ ನಗರದ ಐ.ಜಿ. ರಸ್ತೆಯಲ್ಲಿ ಝುಬೈರ್ ಕ್ಲಿನಿಕ್ ಹೆಸರಿನಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದರು. ತಂದೆ ಡಾ. ಝುಬೈರ್ ಉಲ್ಲಾ ಶರೀಫ್ ಕೂಡ 70 ವರ್ಷಗಳ ಕಾಲ ವೈದ್ಯರಾಗಿ ಸೇವೆ ಸಲ್ಲಿಸಿದ್ದು, ಹಳ್ಳಿ ಜನರಿಗೆ ಅತ್ಯಂತ ಕಡಿಮೆ ದರದಲ್ಲಿ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸೆ ನೀಡುತ್ತಿದ್ದರು.
ತಂದೆ ವೈದ್ಯರಾದ ಸಂದರ್ಭದಲ್ಲಿ ಆರೋಗ್ಯ ತಪಾಸಣೆಗೆ ಕೇವಲ 30 ಪೈಸೆ ಪಡೆಯುತ್ತಿದ್ದು, ಈಗಲೂ ಕೂಡ ಡಾ. ಝುಬೈರ್‍ರವರು 30 ರೂ. ಮಾತ್ರ ಆರೋಗ್ಯ ತಪಾಸಣಾ ವೆಚ್ಚವಾಗಿ ಪಡೆಯುತ್ತಿದ್ದರು. ಗ್ರಾಮೀಣ ಜನರ ಆರೋಗ್ಯ ಸೇವೆಗೆ ಹೆಚ್ಚು ಒತ್ತು ನೀಡುತ್ತಿದ್ದ ವೈದ್ಯರ ಹಣವಿಲ್ಲದೇ ಬರುತ್ತಿದ್ದ ರೋಗಿಗಳಿಗೂ ಕೂಡ ಉಚಿತವಾಗಿ ಸೇವೆ ನೀಡುವ ಮೂಲಕ ಅವರಿಗೆ ಬಸ್ ಚಾರ್ಜ್ ಕೂಡ ಕೊಟ್ಟು ಕಳುಹಿಸುತ್ತಿದ್ದದೂ ಉಂಟು.
ಪತ್ನಿ ಫಯಾಜ್ ಬೇಗಂ, ಪುತ್ರ ಡಾ.ಝಾಕೀರ್ ಹುಸೈನ್ ಹಾಗೂ ಮೂರು ಮಂದಿ ಗಂಡು ಮಕ್ಕಳು ಸೇರಿದಂತೆ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮೃತರ ನಿಧನಕ್ಕೆ ಝುಬೈರ್ ಕ್ಲಿನಿಕ್‍ನ ಸಿಬ್ಬಂದಿ ಹಾಗೂ ಬಂಧು-ಮಿತ್ರರು ಸಂತಾಪ ವ್ಯಕ್ತಪಡಿಸಿದ್ದಾರೆ.