ದಸರಾ ಆಹಾರ ಮೇಳದ ಸ್ತಬ್ಧಚಿತ್ರಕ್ಕೆ ಚಾಲನೆ ನೀಡಿದ ಜಿಲ್ಲಾಧಿಕಾರಿ ಡಿ.ರಂದೀಪ್
ಮೈಸೂರು,ಸೆ.14: ವಿಶ್ವ ವಿಖ್ಯಾತ ಮೈಸೂರು ದಸರಾ ಅಂಗವಾಗಿ ನಡೆಯುವ ಜನಪ್ರಿಯ ಆಹಾರ ಮೇಳದ ಪ್ರಚಾರಕ್ಕೆ ಇದೇ ಮೊದಲ ಬಾರಿಗೆ ದಸರಾ ಸಮಿತಿಯು ಆಹಾರಮೇಳದ ಸ್ತಬ್ಧಚಿತ್ರ ಪ್ರಚಾರಕ್ಕೆ ಮುಂದಾಗಿದ್ದು, ಚಾಲನೆ ನೀಡಲಾಯಿತು.
ನಗರದ ಜಿಲ್ಲಾಧಿಕಾರಿಗಳ ಕಛೇರಿ ಆವರಣದಲ್ಲಿ ಜಿಲ್ಲಾಧಿಕಾರಿ ಡಿ ರಂದೀಪ್ ಅವರು ಆಹಾರ ಮೇಳದ ಪ್ರಚಾರದ ಸ್ತಬ್ಧಚಿತ್ರಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ಅಷ್ಟೇ ಅಲ್ಲದೇ ಅಲ್ಲಿ ಸೇರಿದ್ದ ಜನತೆಗೆ ಸಿಹಿ ವಿತರಿಸಿದರು. ಬಳಿಕ ಮಾತನಾಡಿದ ಅವರು ಇದೇ ಮೊದಲಬಾರಿಗೆ 2 ಕಡೆ ಆಹಾರ ಮೇಳ ನಡೆಯಲಿದೆ. ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ 8 ದಿನಗಳ ಕಾಲ ನಡೆಯಲಿದೆ. ಲಲಿತ್ ಮಹಲ್ ನಲ್ಲಿ 10 ದಿನಗಳ ಕಾಲ ನಡೆಯಲಿದೆ.
ಇದರ ಪ್ರಚಾರಕ್ಕಾಗಿ ಇದೇ ಮೊದಲಬಾರಿಗೆ ಸ್ತಬ್ಧಚಿತ್ರ ಪ್ರಚಾರ ಕೈಗೊಳ್ಳಲಾಗಿದ್ದು ಇಂದಿನಿಂದ ಆರಂಭವಾಗಲಿದೆ. ಮೈಸೂರು ನಗರ ಹಾಗೂ ತಾಲೂಕುಗಳಲ್ಲಿ ಸಂಚರಿಸಿ ಸಾರ್ವಜನಿಕರಿಗೆ ಮಾಹಿತಿ ನೀಡಲಿದೆ. ಆಹಾರ ಮೇಳದಲ್ಲಿನ ಬಂಬೂ ಬಿರಿಯಾನಿಗೆ ಬೇಡಿಕೆ ಹೆಚ್ಚಿರುವುದರಿಂದ ಹೆಚ್ಚು ಸ್ಟಾಲ್ ಗಳನ್ನು ತೆರೆಯಲಾಗುತ್ತಿದೆ. ಹಾಗೆಯೇ ಬೆಲೆಯು ಕಡಿಮೆ ಇದೆ ಎಂದರು. ಈ ಸಂದರ್ಭ ಆಹಾರ ಸರಬರಾಜು ಇಲಾಖೆಯ ಉಪನಿರ್ದೇಶಕ ಕಾ.ರಾಮೇಶ್ವರಪ್ಪ ಉಪಸ್ಥಿತರಿದ್ದರು.
ಪ್ರಚಾರ ಸ್ತಬ್ಧಚಿತ್ರದಲ್ಲಿ ಆನೆಯ ಮೇಲೆ ಆಹಾರವನ್ನಿರಿಸಲಾದ ಬುಟ್ಟಿಯನ್ನಿಡಲಾಗಿದ್ದು,ಮುಂದೆ ಬಾಣಸಿಗ ಕುಳಿತ ಕಲಾಕೃತಿಯನ್ನು ರಚಿಸಲಾಗಿದ್ದು, ಆಕರ್ಷಣೀಯವಾಗಿದೆ. ಸ್ತಬ್ಧಚಿತ್ರ ಚಾಲನೆಯ ವೇಳೆ ನಗಾರಿಯನ್ನು ಬಾರಿಸುವ ಮೂಲಕ ಕಾರ್ಯಕ್ರಮಕ್ಕೆ ಮೆರಗು ನೀಡಲಾಯಿತು.