ಬಹಿಷ್ಕೃತ ಭಾರತದ ಋಣ ಲೌಕಿಕವಾದ ಋಣ ಅಲ್ಲವೇನು?
ಭಾಗ-1
ಇಂದು ‘ಬಹಿಷ್ಕೃತ ಭಾರತ’ ಪತ್ರಿಕೆಗೆ ಒಂದು ವರ್ಷ ಪೂರ್ತಿಯಾಯಿತು ಎಂದು ಹೇಳಲು ನನಗೆ ಬಹಳ ಸಂತೋಷವಾಗುತ್ತಿದೆ. ಹಾಗೆಯೇ ಮುಂದಿನ ಸಂಚಿಕೆಯಿಂದ ಅದು ಎರಡನೆ ವರ್ಷಕ್ಕೆ ಪಾದಾರ್ಪಣೆ ಮಾಡಲಿದೆ. ಮೊದಲನೆಯ ವರ್ಷದಂತೆ ಅದು ಬರುವ ಎರಡನೆಯ ವರ್ಷವೂ ಬಿಡದೆ ಪ್ರಕಟವಾಗುತ್ತಲೇ ಇರುತ್ತದೆ ಅನ್ನುವ ಭರವಸೆ ನನಗೆ ಇದೆ. ಬಿರುಗಾಳಿ ಬಂದಾಗ ಯಾವುದೇ ಅಂಬಿಗನು ತನ್ನ ನೌಕೆಯ ಹರಿಗೋಲು, ನೌಕೆ ಹಾಗೂ ಉಳಿದೆಲ್ಲಾ ಸಾಮಗ್ರಿ ಸರಿಯಾಗಿದೆಯೇ ಇಲ್ಲವೇ ಹಾಗೂ ನೌಕೆಯನ್ನು ನಡೆಸುವವರು ಸರಿಯಾದ ಸಂಖ್ಯೆಯಲ್ಲಿದ್ದಾರೆಯೇ ಇಲ್ಲವೇ ಅನ್ನುವುದನ್ನು ತಿಳಿದುಕೊಳ್ಳದೆ ಭೋರ್ಗರೆಯುವ ಸಮುದ್ರದಲ್ಲಿ ತನ್ನ ನೌಕೆಯನ್ನು ಇಳಿಸಲಾರ.
‘ಬಹಿಷ್ಕೃತ ಭಾರತ’ದಿಂದ ಮಹಾರಾಷ್ಟ್ರದ ಹಿಂದೂ ಸಮಾಜದಲ್ಲಿ ಬಿರುಗಾಳಿಯೇ ಎದ್ದಿದೆ ಎಂದು ಯಾರಿಗೂ ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ಹೀಗಿರುವಾಗ ಈ ಬಿರುಗಾಳಿಯಲ್ಲಿ ತನ್ನಲ್ಲಿ ಎಲ್ಲ ಅಗತ್ಯವಾದ ಸಾಮಗ್ರಿಗಳಿವೆ ಅನ್ನುವುದರ ಬಗ್ಗೆ ಯೋಚಿಸದೆ ಈ ಪತ್ರಿಕೆಯ ಮುಖ್ಯಸ್ಥರ ಕೆಲಸವನ್ನು ನಾನು ಕೈಗೆ ಹೇಗೆ ತೆಗೆದುಕೊಂಡೇನು? ಹಾಗಾಗಿ ಮೊದಲನೆಯ ವರ್ಷದ ಕೊನೆಯಲ್ಲಿ ಹಾಗೂ ಎರಡನೆಯ ವರ್ಷ ಆರಂಭವಾಗುವ ಮುನ್ನ ‘ಬಹಿಷ್ಕೃತ ಭಾರತ’ದ ಸಿಂಹಾವಲೋಕನ ಮಾಡಿ ಅದರ ಚಿತ್ರವನ್ನು ದಲಿತರೆದುರು ಇಟ್ಟು ಅದಕ್ಕೆ ಸಂಬಂಧಿಸಿದಂತೆ ದಲಿತರ ಕರ್ತವ್ಯಗಳೇನು ಅನ್ನುವುದರ ಬಗ್ಗೆ ಅವರಿಗೊಂದು ಅರಿವು ಮೂಡಿಸುವುದು ನನಗೆ ಅಗತ್ಯವೆನಿಸುತ್ತದೆ.
‘ಬಹಿಷ್ಕೃತ ಭಾರತ’ದ ಸದ್ಯದ ಪರಿಸ್ಥಿತಿ ಬಹಳ ಶೋಚನೀಯವಾಗಿದೆ ಎಂದು ತಿಳಿಸಲು ನನಗೆ ಬಹಳ ದುಃಖವಾಗುತ್ತದೆ. ಖರ್ಚು ಹಾಗೂ ಗಳಿಕೆಯ ಲೆಕ್ಕ ಹಾಕಿದಾಗ ಇಂದಿನ ವರೆಗೆ ‘ಬಹಿಷ್ಕೃತ ಭಾರತ’ದ ಮೇಲೆ 500 ರೂಪಾಯಿಯ ಸಾಲವಿದೆ. ನಿಜ ಹೇಳಬೇಕೆಂದರೆ ‘ಬಹಿಷ್ಕೃತ ಭಾರತ’ದ ಪರಿಸ್ಥಿತಿ ಹೀಗೆ ಶೋಚನೀಯವಾಗಬಾರದಿತ್ತು. ಯಾವುದೇ ಪತ್ರಿಕೆಯ ಉದಾಹರಣೆ ತೆಗೆದುಕೊಂಡರೆ ಅದರ ಸಂಪಾದಕರು, ವ್ಯವಸ್ಥಾಪಕರು ಹಾಗೂ ಅವರ ಕೈಕೆಳಗೆ ಕೆಲಸ ಮಾಡುವ ಪೇದೆಗಳು ಸಂಬಳಕ್ಕಾಗಿ ತಗಾದೆ ಮಾಡುತ್ತಿದ್ದಾರೆ. ದೊಡ್ಡ ದೊಡ್ಡ ಸಮಾಜ ಕಾರ್ಯ ಮಾಡುವ ಪವಿತ್ರ ಉದ್ದೇಶದಿಂದ ಆರಂಭಿಸುವ ಪತ್ರಿಕೆಗಳು ಕೂಡಾ ಈ ತಗಾದೆಯನ್ನು ತಪ್ಪಿಸಿಕೊಂಡಿಲ್ಲ.
ಆದರೆ ‘ಬಹಿಷ್ಕೃತ ಭಾರತ’ ಇದಕ್ಕೆ ಅಪವಾದ ಎಂದರೆ ಯಾವುದೇ ತೊಂದರೆ ಇಲ್ಲ. ‘ಬಹಿಷ್ಕೃತ ಭಾರತ’ದ ಸಂಪಾದಕರು ಹಾಗೂ ವ್ಯವಸ್ಥಾಪಕರು ಇಡೀ ವರ್ಷ ಪಟ್ಟ ಕಷ್ಟಕ್ಕೆ ಅವರಿಗೆ ಒಂದು ನಯಾ ಪೈಸೆಯನ್ನೂ ಸಂಭಾವನೆಯಾಗಿ ಕೊಟ್ಟಿಲ್ಲ. ಮುದ್ರಣ ಹಾಗೂ ಟಪಾಲು ಬಿಟ್ಟರೆ ‘ಬಹಿಷ್ಕೃತ ಭಾರತ’ಕ್ಕೆ ಬೇರೆ ಖರ್ಚಿರಲಿಲ್ಲ. ಒಂದು ಕಚೇರಿಯ ಬಾಡಿಗೆ ಹಾಗೂ ಮತ್ತೊಂದು ಕೆಲಸಗಾರರ ಸಂಬಳ ಈ ಎರಡರ ಒಟ್ಟು ಖರ್ಚು ಲೆಕ್ಕಕ್ಕಿಲ್ಲದಷ್ಟು ಕಡಿಮೆ. ಇಡೀ ವರ್ಷದ ಕಚೇರಿ ಬಾಡಿಗೆ 205 ರೂ. ಹಾಗೂ ಚಪರಾಸಿಗಳ ಸಂಬಳ ಕೇವಲ 18 ರೂಪಾಯಿಗಳು. ಇದರಿಂದ ‘ಬಹಿಷ್ಕೃತ ಭಾರತ’ದಷ್ಟು ಕಡಿಮೆ ಖರ್ಚಿನಲ್ಲಿ ನಡೆಸಿರುವ ಬೇರೆ ಪತ್ರಿಕೆ ಮಹಾರಾಷ್ಟ್ರದಲ್ಲಿಲ್ಲ ಅನ್ನುವ ಬಗ್ಗೆ ಅನುಮಾನ ಪಡುವಂತಿಲ್ಲ. ಹೀಗಿರುವಾಗಲೂ ಒಂದು ವರ್ಷದಲ್ಲೇ ‘ಬಹಿಷ್ಕೃತ ಭಾರತ’ಕ್ಕೆ 500 ರೂಪಾಯಿಯ ಸಾಲವಾಗಿದೆ ಹಾಗೂ ಅದರ ಪರಿಸ್ಥಿತಿ ಹೀಗೆ ಮುಂದುವರಿದರೆ ಸಾಲ ಬೆಟ್ಟದಂತೆ ಬೆಳೆಯುತ್ತಲೇ ಹೋಗಲಿದೆ. ಹಾಗೆ ಬೆಳೆಯುತ್ತ ಹೋದರೆ ಮುಂದೊಂದು ದಿನ ‘ಬಹಿಷ್ಕೃತ ಭಾರತ’ವನ್ನು ಮುಚ್ಚಬೇಕಾಗುತ್ತದೆ. ಇಲ್ಲವೆ ಅದರ ನಷ್ಟ ತುಂಬಿ ಬರುವಂತಹ ವ್ಯವಸ್ಥೆಯನ್ನಾದರೂ ಮಾಡಬೇಕಾಗುತ್ತದೆ.
ಪ್ರಚಲಿತ ಹಿಂದೂ ಧರ್ಮ ಮಾಡುತ್ತಿರುವ ಅನ್ಯಾಯದಿಂದಾಗಿ ನಮ್ಮ ಸಮಾಜವನ್ನು ಅಸ್ಪಶ್ಯರನ್ನಾಗಿ ಪರಿಗಣಿಸುವ ಮಹಾಪಾಪವನ್ನು ದೇವರಿಗೂ ಹೆದರದೆ ಮಾಡುತ್ತಿರುವ ಕೋಟ್ಯಾವಧಿ ಅವಿವೇಕಿ ಜನರು ಈ ಭೂಮಿಯ ಮೇಲಿರುವವರೆಗೆ ಈ ದಲಿತ ಸಮಾಜ ಹೀಗೇ ಕೀಳು ಅವ್ಯವಸ್ಥೆಯಲ್ಲಿರಲಿದೆ ಅನ್ನುವುದನ್ನು ಯಾರಿಗೂ ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ಈ ಅನ್ಯಾಯದಿಂದ ಬಹಿಷ್ಕೃತರೆನಿಸಿಕೊಳ್ಳುವ ಇಷ್ಟು ದೊಡ್ಡ ಜನ ಸಮೂಹವು ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಕಲ್ಪನೆಗೂ ನಿಲುಕದಷ್ಟು ಅಧೋಗತಿಗಿಳಿದಿದೆ ಅನ್ನುವುದು ಎಲ್ಲರಿಗೂ ಗೊತ್ತು. ಬ್ರಿಟಿಷ್ ರಾಜ್ಯದಲ್ಲಿ ಯಾವುದೇ ಮಾನವೀಯ ಹಕ್ಕುಗಳ ಉಲ್ಲಂಘನೆ ಬೇಕೆಂದೇ ಆಗುವುದಿಲ್ಲ. ಎಲ್ಲರಿಗೂ ಒಂದೇ ರೀತಿಯ ವಿದ್ಯೆಯ ಬಾಗಿಲು ತೆರೆದಿದೆ.
ಅದರಂತೆ ಸಾರ್ವಜನಿಕ ಸೌಲಭ್ಯಗಳು ಎಲ್ಲರೂ ಸಮನಾಗಿ ಉಪಯೋಗಿಸಬೇಕು ಎಂದು ಎಲ್ಲೆಡೆ ಹೇಳಲಾಗುತ್ತಿದ್ದರೂ ಸಾಮಾಜಿಕ ಪರಿಸ್ಥಿತಿಯನುಸಾರವಾಗಿಯೇ ಬಹಿಷ್ಕೃತರು ವರ್ತಿಸಬೇಕಾಗುತ್ತದೆ. ಆದ್ದರಿಂದ ಈ ದೇಶದ ಅಮಾನುಷ ಆಚಾರ ವಿಚಾರಗಳಿಂದ ಬ್ರಿಟಿಷ್ ರಾಜ್ಯದಲ್ಲೂ ಬಹಿಷ್ಕೃತ ಜನ ಸಣ್ಣ ಪುಟ್ಟ ಮಾನವೀಯ ಹಕ್ಕುಗಳಿಂದ ವಂಚಿತರಾಗುತ್ತಿದ್ದಾರೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ನಮ್ಮ ಬಹಿಷ್ಕೃತ ಸಮಾಜವು ಕೈಲಾಗದವರಂತೆ ಹಣೆಬರಹವನ್ನು ನಂಬಿ ಸುಮ್ಮನಿರುವ ಪಾಪ ಮಾಡುವುದಕ್ಕಿಂತ ಬ್ರಿಟಿಷ್ ಸಾಮ್ರಾಜ್ಯದ ನೆರಳಿನಲ್ಲಿ ಒಗ್ಗಟ್ಟಾಗಿ, ಧೈರ್ಯ ಹಾಗೂ ಶೌರ್ಯದಿಂದ ಶ್ರಮಪಡಲು ಯಾವತ್ತೂ ಸಿದ್ಧರಿರಬೇಕು ಅನ್ನುವುದು ನಿರ್ವಿವಾದ. ಈ ರೀತಿಯ ತಾಕತ್ತು ಹಾಗೂ ಒಗ್ಗಟುಂಟಾಗಲು ಬಹಿಷ್ಕೃತ ಸಮಾಜವನ್ನು ಬಡಿದೆಬ್ಬಿಸುವಂತಹ ಕೆಲಸ ಅವ್ಯಾಹತವಾಗಿ ನಡೆಯಬೇಕು. ಇಲ್ಲದಿದ್ದರೆ ಅವರಿಗೆ ತಮ್ಮ ಪರಿಸ್ಥಿತಿಯ ಅರಿವಾಗದು.
ಹಾಗೆಯೇ ಶಿಕ್ಷಣದಲ್ಲಿ ಅವರಿಗೆ ಯಾವ ರೀತಿಯ ತೊಡಕುಗಳನ್ನು ಎದುರಿಸಬೇಕಾಗುತ್ತದೆ, ಸರಕಾರಿ ಕೆಲಸಗಳಲ್ಲಿ ಅವರಿಗೆ ಅವಕಾಶಗಳು ಸಿಗುತ್ತಿವೆಯೋ ಇಲ್ಲವೋ? ಬಂಜರು ಭೂಮಿ ಹಾಗೂ ಅರಣ್ಯದ ಭೂಮಿಗಳು ಇವರಿಗೆ ಸಿಗುತ್ತಿವೆಯೋ ಇಲ್ಲವೋ? ಅನ್ನುವ ವಿಷಯಗಳನ್ನು ಸರಕಾರಕ್ಕೆ ತಿಳಿಸದೆ ದಲಿತರಿಗೆ ಈ ವಿಷಯದಲ್ಲಿ ನ್ಯಾಯ ಸಿಗದು. ಹೊಲೆಯರ ವತನದ ಪ್ರಶ್ನೆ, ಸಾರ್ವಜನಿಕ ಕೆರೆ, ದೇವಾಲಯಗಳು, ಇವುಗಳಲ್ಲಿಯ ಅಸ್ಪಶ್ಯತೆಯ ಪ್ರಶ್ನೆಗೆ ಈಗಷ್ಟೇ ಜಾಗೃತಿ ಆರಂಭವಾಗಿದೆ. ಈ ವಿಷಯಗಳಲ್ಲಿ ಸರಕಾರ ಹಾಗೂ ಮೇಲ್ಜಾತಿಯ ಜನರೆದುರು ಬಹಿಷ್ಕೃತರ ಅನಿಸಿಕೆಗಳೇನು ಅನ್ನುವುದನ್ನು ಮತ್ತೆಮತ್ತೆ ಚರ್ಚಿಸಿ ಅದರ ಮೇಲಿನ ಅಕ್ಷೇಪಗಳನ್ನು ಖಂಡಿಸುತ್ತಿದ್ದ್ದರೆ ಮಾತ್ರ ನಮಗೆ ಬೇಕಿರುವ ಪರಿಣಾಮಗಳು ಸಿಗಲಿವೆ. ಆದರೆ ಈ ಪರಿಣಾಮ ಸಿಗಲು ‘ಬಹಿಷ್ಕೃತ ಭಾರತ’ದಂತಹ ಒಂದು ನಿರ್ಭಿಡೆಯಾದ ಪತ್ರಿಕೆಯಿರದೆ ಸಾಧ್ಯವಿಲ್ಲ. ಮೇಲಿನ ವಿವೇಚನೆಗಳಿಂದ ಬಹಿಷ್ಕೃತ ಸಮಾಜಕ್ಕೆ ‘ಬಹಿಷ್ಕೃತ ಭಾರತ’ ಪತ್ರಿಕೆಯ ಎಷ್ಟು ಆವಶ್ಯಕತೆಯಿದೆ ಅನ್ನುವುದು ಅರ್ಥವಾದೀತು. ಈ ಪತ್ರಿಕೆ ಪ್ರಕಟವಾಗುವುದು ನಿಂತರೂ ತೊಂದರೆಯಿಲ್ಲ ಎಂದು ಯಾವುದೇ ಜಾಣ ಮನುಷ್ಯ ಹೇಳಲಾರ. ಬಹಿಷ್ಕೃತ ಭಾರತ ಮುಂದುವರಿಯಬೇಕು ಅನ್ನುವಂತಿದ್ದರೆ ಮೊದಲು ಅದರ ನಷ್ಟ ಪೂರೈಸಲು ಶಾಶ್ವತವಾದ ವ್ಯವಸ್ಥೆಯೊಂದನ್ನು ಮಾಡುವ ಆವಶ್ಯಕತೆಯಿದೆ.
ಬಹಿಷ್ಕೃತ ಭಾರತದ ನಷ್ಟವನ್ನು ಎರಡು ರೀತಿಯಲ್ಲಿ ಪೂರೈಸಬಹುದು. ಅವುಗಳಲ್ಲಿ ಮೊದಲನೆಯದು ಚಂದಾದಾರರನ್ನು ಹೆಚ್ಚಿಸುವುದು.
‘ಬಹಿಷ್ಕೃತ ಭಾರತ’ಕ್ಕೆ ಚಂದಾದಾರರ ಕೊರತೆಯಿರುವ ಕಾರಣವೇನು ಅನ್ನುವುದು ನನಗೆ ಅರ್ಥವಾಗುತ್ತಿಲ್ಲ. ‘ಬಹಿಷ್ಕೃತ ಭಾರತ’ ಸಕಾಲಕ್ಕೆ ಪ್ರಕಟಿಸಲ್ಪಡುವುದಿಲ್ಲ ಅನ್ನುವುದು ನಿಜವಾದರೂ ಹಾಗೂ ಈ ಆರೋಪವನ್ನು ನಾನು ಒಪ್ಪಿಕೊಳ್ಳಲೇಬೇಕಾದರೂ ಇದು ಉದ್ದೇಶಪೂರ್ವಕವಾಗಿಯೋ ಇಲ್ಲ ಆಲಸ್ಯದಿಂದ ಆದದ್ದು ಎಂದು ಯಾರೋ ತಿಳಿದುಕೊಳ್ಳಬಾರದು. ಉಳಿದ ಪತ್ರಿಕೆಗಳ ಸಂಪಾದಕರಿಗೆ ಸಹಾಯಕ ಸಂಪಾದಕನೋ ಇಲ್ಲವೆ ಹೊರಗಿನ ಲೇಖಕರ ಸಹಾಯ ಸಿಗುವುದರಿಂದ ಅವರಲ್ಲಿ ಕೆಲಸಗಳು ವಿಭಾಗಿಸಲ್ಪಟ್ಟು ಲೇಖನದ ಕೆಲಸ ಸಕಾಲದಲ್ಲಾಗುತ್ತದೆ. ಹಾಗೆ ವ್ಯವಸ್ಥಾಪನೆಯ ಕೆಲಸ ನೋಡಿಕೊಳ್ಳುವವರು ಸಂಬಳಕ್ಕಿರುವ ಕೆಲಸಗಾರರಾಗಿರುವುದರಿಂದ ಅವರು ತಮ್ಮ ನಿಯಮಿತ ಕೆಲಸಗಳನ್ನು ನೋಡಿಕೊಳ್ಳುವುದನ್ನು ಬಿಟ್ಟರೆ ಬೇರೆ ಯಾವುದೇ ಕೆಲಸವನ್ನು ಮಾಡುವಂತಿರುವುದಿಲ್ಲ.
ಹಾಗಾಗಿ ಆತನಿಂದ ಆಗಬೇಕಿರುವ ಪತ್ರಿಕೆಯ ವ್ಯವಸ್ಥೆಯೂ ಚಾಚೂ ತಪ್ಪದೆ ನಡೆದುಕೊಂಡು ಹೋಗುತ್ತದೆ. ಬಹಿಷ್ಕೃತ ಭಾರತದ ಪರಿಸ್ಥಿತಿ ಹೀಗಿದ್ದಿದ್ದರೆ ನಿಯಮಿತ ಹಾಗೂ ಶಿಸ್ತಿನ ಬಗ್ಗೆ ತಪ್ಪುಗಳಾಗುತ್ತಿರಲಿಲ್ಲ. ಸಹಾಯಕ ಸಂಪಾದಕರನ್ನಿಟ್ಟುಕೊಳ್ಳುವಷ್ಟು ಒಳ್ಳೆಯ ಆರ್ಥಿಕ ಸ್ಥಿತಿ ನನಗಿರಲಿಲ್ಲ. ಹಾಗೆಯೇ ಸಂಭಾವನೆ ಬಯಸದೆ ಸಂಪಾದಕನ ಕೆಲಸ ಮಾಡುವ ಸರ್ವತ್ಯಾಗಿಯಾಗಿರುವಂತಹ ಒಬ್ಬ ದಲಿತನೂ ಇಲ್ಲಿಯವರೆಗೆ ಸಿಕ್ಕಿಲ್ಲ. ಸಂಪಾದಕರ ಪ್ರೌಢ ಲೇಖನಗಳಿಗೆ ಹೆದರಿಯೋ ಏನೋ ಅಥವಾ ಸಾಮಾಜಿಕ ಕಾರ್ಯದ ಬಗ್ಗೆ ಆತ್ಮೀಯತೆಯ ಕೊರತೆಯಿಂದಲೋ ಏನೋ ಹೊರಗಿನ ಲೇಖಕರಿಂದ ‘ಬಹಿಷ್ಕೃತ ಭಾರತ’ಕ್ಕೆ ಹೇಳಿಕೊಳ್ಳುವಂತಹ ಬೆಂಬಲ ಸಿಗಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಬಹಿಷ್ಕೃತ ಹಿತಕಾರಿಣಿ ಸಭೆಯಂತಹ ಸಾರ್ವಜನಿಕ ಸಂಸ್ಥೆಯ ಹೆಚ್ಚುತ್ತಿರುವ ಕೆಲಸವನ್ನೂ ನಾನೇ ನೋಡಿಕೊಳ್ಳಬೇಕಾಗುತ್ತದೆ, ಹಾಗಾಗಿ ‘ಬಹಿಷ್ಕೃತ ಭಾರತ’ದ ಕೆಲಸ ಸಕಾಲಕ್ಕೆ ಆಗದಿದ್ದರೆ ಈ ದೋಷಕ್ಕಾಗಿ ಓದುಗರು ನನ್ನನ್ನು ಕ್ಷಮಿಸಬೇಕು.
‘ಬಹಿಷ್ಕೃತ ಭಾರತ’ದ ವ್ಯವಸ್ಥಾಪಕರು ಕೂಡ ಸಂಬಳ ಪಡೆಯುವ ಕಾರ್ಮಿಕರಲ್ಲ. ಅವರು ತಮ್ಮ ಮುಖ್ಯ ವ್ಯವಸಾಯವನ್ನು ನೋಡಿಕೊಂಡು ಸಮಯವಿರುವಾಗ ಪತ್ರಿಕೆಯ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಾರೆ. ಹಾಗಾಗಿ ಆತನೇನಾದರೂ ಪತ್ರಿಕೆಯ ಎಲ್ಲ ವಿಷಯಗಳನ್ನು ಸಕಾಲದಲ್ಲಿ ಬಿಡಿಸಲು ಸಾಧ್ಯವಿರದ ಪಕ್ಷದಲ್ಲಿ ಅದು ಆತನ ದೋಷವೇ? ಇಲ್ಲ ಪರಿಸ್ಥಿತಿಯ ದೋಷವೇ? ಅನ್ನುವುದನ್ನು ಕೂಡ ಓದುಗರು ಅರ್ಥಮಾಡಿಕೊಳ್ಳಬೇಕು. ಈ ಸ್ಪಷ್ಟೀಕರಣದಿಂದ ಆಕ್ಷೇಪಿಸುವವರಿಗೆ ಸಮಾಧಾನವಾಗಿರದಿದ್ದರೆ ನಾನೇ ಅವರನ್ನು ಕೆಲವು ಪ್ರಶ್ನೆಗಳನ್ನು ಕೇಳಬಯಸುತ್ತೇನೆ. ಅನಿಯಮಿತದಿಂದ ಆಗಿರುವಂತಹ ನಷ್ಟ ತುಂಬಿ ಬರುವಷ್ಟು ಬಹಿಷ್ಕೃತ ಭಾರತದಲ್ಲಿ ಏನೂ ಇರಲಿಲ್ಲವೇ? ‘ಬಹಿಷ್ಕೃತ ಭಾರತ’ ಸಕಾಲದಲ್ಲಿ ಪ್ರಟಿಸಲ್ಪಡುತ್ತಿರಲಿಲ್ಲ. ಆದರೆ ಎಂಟು ಪುಟಗಳಲ್ಲಿ ನಾಲ್ಕು ಪುಟಗಳನ್ನು ಜಾಹೀರಾತುಗಳಿಗೆ ಖರ್ಚು ಮಾಡುವ ಪದ್ಧತಿಯನ್ನು ‘ಬಹಿಷ್ಕೃತ ಭಾರತ’ ಸ್ವೀಕರಿಸಿತ್ತೇ? ಅಥವಾ ‘ಬಹಿಷ್ಕೃತ ಭಾರತ’ದ ಅಂಕಣಗಳು ವಿವಾಹ ವಿಚ್ಛೇದನೆಯಂತಹ ಪ್ರಕಟನೆಗಳಿಂದಲೂ ಇಲ್ಲ ಹೊಲಸು ಚರ್ಚೆಗಳಿಂದ ಕೂಡಿದ್ದವೇ? ‘ಬಹಿಷ್ಕೃತ ಭಾರತ’ದ ಎಂಟೂ ಪುಟಗಳು ಚಂದಾದಾರರಿಗೆಂದೇ ಸಮರ್ಪಿತವಾಗಿದ್ದವು ಎಂದು ಹೇಳಲು ನನಗೆ ಅಭಿಮಾನವೆನಿಸುತ್ತದೆ.