ಸೆ.16ರಿಂದ ಆರಂಭಗೊಳ್ಳಲಿದೆ ಹೆಲಿ ರೈಡ್ಸ್: ಡಿಸಿ ರಂದೀಪ್
ಮೈಸೂರು, ಸೆ.15: ಮೈಸೂರಿನಲ್ಲಿ ದಸರಾ ಉತ್ಸವವು ಅತೀ ದೊಡ್ಡ ಸಾರ್ವಜನಿಕ ಸಮಾರಂಭವಾಗಿದ್ದು, ಪ್ರವಾಸಿಗರನ್ನು ಕೈ ಬೀಸಿ ಕರೆಯಲಿದೆ. ಪ್ರವಾಸಿಗರು ಮೈಸೂರಿನ ಪ್ರೇಕ್ಷಣೀಯ ಸ್ಥಳಗಳನ್ನು ನೋಡಲು ಟ್ರಿಣ್ ಟ್ರಿಣ್ ಸೇವೆಗೆ ಜಿಲ್ಲಾಡಳಿತ ಮುಂದಾಗಿದ್ದು ಕೆಲವು ಕ್ರಮಗಳನ್ನು ಕೈಗೊಂಡಿದೆ. ಪ್ರವಾಸಿಗರು ಇವುಗಳನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಜಿಲ್ಲಾಧಿಕಾರಿ ಡಿ.ರಂದೀಪ್ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, 1. ಬಲರಾಮ ಗೇಟ್, 2. ಅಂಬಾವಿಲಾಸ್ ಗೇಟ್,3. ವರಾಹ ಗೇಟ್ ಬಳಿ ನಿಲ್ದಾಣ ತೆರೆಯಲಾಗುವುದು. ನಿಲ್ದಾಣದಲ್ಲಿ 20-25ಸೈಕಲ್ ಗಳಿರಲಿದ್ದು, ಈ ಸೇವೆಯನ್ನು ಪಡೆಯಲು ಬಯಸುವವರು ಮಾನ್ಯವಾದ ಗುರುತಿನ ಪುರಾವೆಗಳನ್ನು ಒದಗಿಸಿ ದೈನಂದಿನ ಯೋಜನೆಯನ್ನು ಪಡೆಯಬಹುದಾಗಿದೆ ಎಂದು ಹೇಳಿದರು.
ದಸರಾದಲ್ಲಿ ಮೂರು ರೀತಿಯ ಸೇವೆಗಳಿರುತ್ತವೆ. ಒಂದು ದಿನದ ಸೇವೆ- 50 ರೂ, 3 ದಿನದ ಸೇವೆ 150ರೂ, ಒಂದು ವಾರದ ಸೇವೆ 150 ರೂ. ಇರಲಿದೆ ಎಂದು ಅವರು, ಹೆಚ್ಚಿನ ಮಾಹಿತಿಗಾಗಿ www.mytrintrin.com , ಮೈ ಟ್ರಿಣ್ ಟ್ರಿಣ್ ಆಫ್ ಟ್ರಿಣ್ ಟ್ರಿಣ್ ರಜಿಸ್ಟ್ರೇಶನ್ ಸೆಂಟರ್ ಗಳನ್ನು ಸಂಪರ್ಕಿಸಬಹುದು. ಸಹಾಯವಾಣಿಗಾಗಿ 0821-2333000,0821-6500301ನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.
ದಸರಾ ಮಹೋತ್ಸವ ಅಂಗವಾಗಿ ವಿಶೇಷ ಪ್ರವಾಸಿ ಚಟುವಟಿಕೆಯಾಗಿ ಹೆಲಿರೈಡ್ಸ್ ನ್ನು ಮೈಸೂರು ಜಿಲ್ಲಾಡಳಿತ, ಪವನ್ ಹನ್ಸ ಲಿಮಿಟೆಡ್ ಹಾಗೂ ಚಿಪ್ಸನ್ ಏವಿಯೇಷನ್ ಲಿಮಿಟೆಡ್, ನವದೆಹಲಿ ಇವರ ಸಹಯೋಗದೊಂದಿಗೆ ಸೆ.16ರಿಂದ ಅ.5ರವರೆಗೆ ಲಲಿತ್ ಮಹಲ್ ಹೆಲಿಪ್ಯಾಡ್ ನಲ್ಲಿ ಆಯೋಜಿಸಲಾಗುತ್ತಿದೆ. ಒಂದು ರೈಡ್ ನಲ್ಲಿ 6 ಮಂದಿಯನ್ನು ಕರೆದೊಯ್ಯಬಹುದಾಗಿದೆ. 10 ನಿಮಿಷಗಳ ಮೈಸೂರು ನಗರದ ವಿಹಂಗಮ ನೋಟದೊಂದಿಗೆ ಏರಿಯಲ್ ರೈಡ್ ಮಾಡಿಸಲಾಗುವುದು. ಲಲಿತ್ ಮಹಲ್ ಹೆಲಿಪ್ಯಾಡ್ ನಿಂದ ಬೆಳಿಗ್ಗೆ 9ರಿಂದ ಸಂಜೆ 5ರವರೆಗೆ ಒಬ್ಬರಿಗೆ ರೂ.2300, ವಿಶೇಷಚೇತನರಿಗೆ ಹಾಗೂ 6ವರ್ಷದೊಳಗಿನ ಮಕ್ಕಳಿಗೆ 2200ರೂ ನಿಗದಿಪಡಿಸಲಾಗಿದೆ. ಟಿಕೇಟ್ ಗಳು ಪವನ್ ಹನ್ಸ್ ಲಿಮಿಟೆಡ್, ಲಲಿತ್ ಮಹಲ್ ಹೆಲಿಪ್ಯಾಡ್ ಬುಕ್ಕಿಂಗ್ ಕೌಂಟರ್, ಆನ್ ಲೈನ್ ಬುಕ್ಕಿಂಗ್ ಗಾಗಿ www.pawanhans.co.in ಮೊ.ಸಂ.8828122245, 8828122260, ಹಾಗೂ ಚಿಪ್ಸನ್ ಏವಿಯೇಷನ್ ಲಿಮಿಟೆಡ್ ಲಲಿತ ಮಹಲ್ ಹೆಲಿಪ್ಯಾಡ್ ಬುಕ್ಕಿಂಗ್ ಕೌಂಟರ್, ಆನ್ ಲೈನ್ ಬುಕಿಂಗ್ ಗಾಗಿ www.bookmyshow.com ಅಥವಾ ಮೊ.ಸಂ. 8375914948 ಸಂಪರ್ಕಿಸಬಹುದು ಎಂದು ಮಾಹಿತಿ ನೀಡಿದರು.
ದಸರಾ ವೆಬ್ ಸೈಟ್ ನಿಂದ ಲಿಂಕ್ ನೀಡಲಾಗುತ್ತಿದೆ. www.mysoredasara.gov.in ನೋಡಬಹುದು ಎಂದು ಇದೇ ವೇಳೆ ತಿಳಿಸಿದರು.
ಈ ಸಂದರ್ಭದಲ್ಲಿ ನಗರಪಾಲಿಕೆ ಆಯುಕ್ತ ಜೆ.ಜಗದೀಶ್, ವಾರ್ತಾಇಲಾಖೆ ಸಹಾಯಕ ನಿರ್ದೇಶಕ ರಾಜು ಸೇರಿದಂತೆ ಇತರ ಅಧಿಕಾರಿಗಳು ಹಾಜರಿದ್ದರು.