ಪ್ರವಾಸಿ ತಾಣ ಪರಿಚಯಿಸಲು ದೇಶದಲ್ಲೇ ಮೊಟ್ಟಮೊದಲ ಬಾರಿಗೆ ಓಪನ್ ಜೀಪ್ ಟೂರ್ಸ್: ಬಿ.ಎಸ್.ಪ್ರಶಾಂತ್

Update: 2017-09-20 06:43 GMT

ಮೈಸೂರು, ಸೆ.16: ಸಾಂಸ್ಕೃತಿಕ ನಗರಿ ಮೈಸೂರಿನ ಪ್ರವಾಸಿ ತಾಣಗಳನ್ನು ಪ್ರವಾಸಿಗರಿಗೆ ಪರಿಚಯಿಸುವ ನಿಟ್ಟಿನಲ್ಲಿ ಸೇಫ್‍ ವೀಲ್ಸ್ ವತಿಯಿಂದ ದೇಶದಲ್ಲೇ ಮೊದಲ ಬಾರಿಗೆ ಓಪನ್ ಜೀಪ್ ಟೂರ್ಸ್ ಆಯೋಜಿಸಲಾಗಿದೆ ಎಂದು ಸೇಫ್‍ವೀಲ್ ಮ್ಯಾನೇಜಿಂಗ್ ಡೈರೆಕ್ಟರ್ ಬಿ.ಎಸ್.ಪ್ರಶಾಂತ್ ತಿಳಿಸಿದರು.

ನಗರದ ಖಾಸಗಿ ಹೋಟೆಲ್‍ನಲ್ಲಿ ಶನಿವಾರ  ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮೈಸೂರು ಎಂದಾಕ್ಷಣ ಅರಮನೆಗಳು, ಪಾರಂಪರಿಕ ಕಟ್ಟಡಗಳು, ಐತಿಹಾಸಿಕ ಸ್ಥಳಗಳು ಕಣ್ಣ ಮುಂದೆ ಬರುತ್ತವೆ. ನಗರದ ಸೌಂದರ್ಯ ಸವಿಯಲೆಂದೇ ದೇಶ ವಿದೇಶಗಳಿಂದ ಸಾವಿರಾರು ಪ್ರವಾಸಿಗರು ನಗರಕ್ಕೆ ಬರುತ್ತಾರೆ. ಆದರೆ ಅವರಿಗೆ ಪ್ರವಾಸಿ ತಾಣಗಳ ಮಾಹಿತಿ ಇರುವುದಿಲ್ಲ. ಹಾಗಾಗಿ ನಗರದ ಪ್ರತಿಯೊಂದು ಸ್ಥಳದ ಐತಿಹಾಸಿಕ ಮಾಹಿತಿಯೊಂದಿಗೆ ಅಂದವನ್ನು ಕಣ್ತುಂಬಿಕೊಳ್ಳಲು ಓಪನ್ ಜೀಪ್ ಟೂರ್ಸ್ ಆಯೋಜಿಸಲಾಗಿದ್ದು, ಸೆ.18ರಂದು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಬೆಳಗ್ಗೆ 11 ಗಂಟೆಗೆ ಅರಮನೆಯ ಉತ್ತರ ದ್ವಾರದಲ್ಲಿ ಚಾಲನೆ ನೀಡಲಿದ್ದು, ಶಾಸಕ ವಾಸು, ಮಾಜಿ ಸಚಿವ ಎಸ್.ಎ.ರಾಮದಾಸ್, ಜಿಲ್ಲಾಧಿಕಾರಿ ಡಿ.ರಂದೀಪ್, ಅರ್ಜುನ ಟೂರ್ಸ್ ಆ್ಯಂಡ್ ಟ್ರಾವೆಲ್ಸ್‍ನ ಎಂ.ರವಿ, ಹೊಟೇಲ್ ಮಾಲಕರ ಸಂಘದ ನಾರಾಯಣ ಗೌಡ ಸೇರಿದಂತೆ ಇನ್ನಿತರರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಓಪನ್ ಜೀಪ್‍ನಲ್ಲಿ 6 ಮಂದಿ ಕೂರುವ ವ್ಯವಸ್ಥೆಯಿದ್ದು ಒಬ್ಬರಿಗೆ 599 ರೂ ದರ ನಿಗದಿ ಮಾಡಲಾಗಿದೆ. ಕುಟುಂಬದ ಮೂವರು ಸದಸ್ಯರು ಮಾತ್ರ ಒಂದು ಜೀಪ್‍ನಲ್ಲಿ ಪ್ರವಾಸ ಕೈಗೊಂಡರೆ 3500 ರೂ ದರ ನಿಗದಿಪಡಿಸಿವೆ. ತಮ್ಮ ಪ್ರವಾಸದ ಸಂತಸದ ಕ್ಷಣಗಳನ್ನು ಸೆರೆ ಹಿಡಿಯುವ ಸಲುವಾಗಿ ಎರಡು ಸೆಲ್ಫಿ ಸ್ಟಿಕ್, ರೇನ್ ಕೋಟ್ ನೀಡುತ್ತೇವೆ. ಅಲ್ಲದೆ ಪ್ರತ್ಯೇಕವಾಗಿ ಛಾಯಾಗ್ರಾಹರಕು ಬೇಕೆಂದರೆ ಅದಕ್ಕೂ ವ್ಯವಸ್ಥೆ ಮಾಡುತ್ತೇವೆ ಎಂದರು.

ಈ ಬಾರಿ ನಾವು ಆಡಿಯೋ ಗೈಡೆಡ್ ವ್ಯವಸ್ಥೆ ಮಾಡಿದ್ದೇವೆ. ಕನ್ನಡ, ಇಂಗ್ಲಿಷ್, ಹಿಂದಿ, ಪ್ರೆಂಚ್ ಭಾಷೆಯಲ್ಲಿ ಮಾಹಿತಿ ಇದ್ದು ಪ್ರವಾಸ ಆರಂಭಿಸುವಾಗ ಸ್ಟಾರ್ಟ್ ಬಟನ್ ಒತ್ತಿದರೆ ಸಂಪೂರ್ಣ ಮಾಹಿತಿ ದೊರೆಯಲಿದೆ. ಪ್ರವಾಸಿಗರನ್ನು ಅವರು ತಂಗಿರುವ ಹೊಟೇಲ್ ನಲ್ಲಿಯೇ ಪಿಕಪ್ ಮಾಡುವ ವ್ಯವಸ್ಥೆ ಇದ್ದು ಮೈಸೂರಿಗರನ್ನು ಜಗನ್ಮೋಹನ ಅರಮನೆ ಆವರಣದಿಂದ ಕರೆದೊಯ್ಯಲಾಗುವುದು ಎಂದು ಹೇಳಿದರು.

ಪ್ರತಿದಿನ ಎರಡು ಅವಧಿಯಲ್ಲಿ ಪ್ರವಾಸ ಇರಲಿದ್ದು, ಎರಡು ಗಂಟೆಯ ಅವಧಿಯಲ್ಲಿ ಲಲಿತ ಮಹಲ್ ಪ್ಯಾಲೇಸ್, ಆಡಳಿತ ತರಬೇತಿ ಕೇಂದ್ರ, ಚಾಮುಂಡಿಬೆಟ್ಟದ ವ್ಯೂ ಪಾಯಿಂಟ್, ರೇಸ್ ಕೋರ್ಸ್, ಸರ್ಕಾರಿ ಅತಿಥಿ ಗೃಹ, ವೆಲ್ಲಿಂಗ್‍ಟನ್ ಹೌಸ್, ಕ್ಲಾಕ್ ಟವರ್, ಪ್ರೀ ಮ್ಯಾಷನ್ ಕ್ಲಬ್, ಟೌನ್‍ಹಾಲ್, ಗಾಂಧಿ ಚೌಕ, ದೇವರಾಜ ಮಾರುಕಟ್ಟೆ, ಗುರುಸ್ವೀಟ್, ದೊಡ್ಡ ಗಡಿಯಾರ, ಲ್ಯಾನ್ಸ್‍ಡೌನ್ ಬಿಲ್ಡಿಂಗ್, ಮಹಾನಗರ ಪಾಲಿಕೆ, ಗನ್‍ಹೌಸ್ ಮೂಲಕ ಸಾಗಿ ಕೊನೆಯಲ್ಲಿ ಜಯಮಾರ್ತಾಂಡ ದ್ವಾರದಲ್ಲಿ ಕೊನೆಗೊಳ್ಳಲಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರವಾಸೋದ್ಯಮ ಇಲಾಖೆ ಜನಾರ್ದನ್, ಪ್ರವೀಣ್, ಶಿವರಾಜು, ಕಿರಣ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News