ಮೈಸೂರು ದಸರಾ: ಗಜಪಡೆಯಲ್ಲಿ ಅರ್ಜುನನಿಗಿಂತಲೂ ಧೈರ್ಯವಂತ ಅಭಿಮನ್ಯು!
ಮೈಸೂರು,ಸೆ.18: ಅವರ ಪ್ರಕಾರ ದಸರಾ ಗಜಪಡೆಯಲ್ಲಿ ಎಲ್ಲವೂ ಧೈರ್ಯವಂತ ಆನೆಗಳೇ. ಆದರೂ. ಎಲ್ಲಕ್ಕಿಂತ ಹೆಚ್ಚು ಧೈರ್ಯ ಸ್ವಭಾವದ ಆನೆಯೊಂದಿದೆ. ಅದೂ... ಅಭಿಮನ್ಯು...!
ಇದೇನಿದು ಅರ್ಜುನ ಅಲ್ಲ, ಬಲರಾಮನೂ ಅಲ್ಲ... 52 ವರ್ಷದ ಅಭಿಮನ್ಯುವೇ? ಎಂದ ಆಶ್ಚರ್ಯ ಪಡದಿರಿ. ನಾಗರಾಜ್ ಅವರೇ ಅದನ್ನು ದೃಷ್ಟಾಂತದ ಮೂಲಕ ದೃಢಪಡಿಸಿದ್ದಾರೆ.
ಮತ್ತಿಗೂಡು ಶಿಬಿರ ನಿವಾಸಿ ಅಭಿಮನ್ಯು, ಕಾಡಾನೆಗಳು, ಹುಲಿಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಅದರ ಧೈರ್ಯ ಸಾಹಸ ನೋಡಿದ್ದೇನೆ. 2002ರಲ್ಲಿ ಸುಂಕದ ಕಟ್ಟೆ ಕಾಡಿನಲ್ಲಿ ಹುಲಿಯೊಂದು ಟ್ರ್ಯಾಪ್ ಜಾಕ್‍ಗೆ ಕಾಲು ಸಿಕ್ಕಿಕೊಂಡು ಗಾಯಗೊಂಡಿತ್ತು. ಅದು ಕಬಿನಿ ಅಣೆಕಟ್ಟೆ ಹಿನ್ನೀರಿನ ಡಿ.ಬಿ.ಕುಪ್ಪೆ ಬಳಿ ಹಳೆ ಮಾಸ್ತಿಗುಡಿ ಸಮೀಪ ಕರಡಿ ಗುಹೆಯಲ್ಲಿ ಸೇರಿಕೊಂಡಿತ್ತು. ಆ ಸುಳಿವು ತಿಳಿದು ಅರ್ಜುನ, ಭರತ, ಅಭಿಮನ್ಯು ಇನ್ನೆರಡು ಹೆಣ್ಣಾನೆಗಳ ಸಹಿತ ಕಾರ್ಯಾಚರಣೆ ಶುರು ಮಾಡಿದ್ದರಂತೆ.
ಹುಲಿ ಇದ್ದ ಕರಡಿ ಗುಹೆಯ ಸಮೀಪ ಹೋಗುತ್ತಿದ್ದಂತೆ ಅದರ ಗರ್ಜನೆ ಮೊಳಗಿತು. ಅಷ್ಟೇ ಅಭಿಮನ್ಯು ಹೊರತಾಗಿ ಉಳಿದ ಎಲ್ಲ ಆನೆಗಳು ದಿಕ್ಕಾಪಾಲಾಗಿ ಚದುರಿದವು. ಅಭಿಮನ್ಯು ಮಾತ್ರ ಒಂದು ಹೆಜ್ಜೆಯನ್ನು ಹಿಂದಿಡದೆ ಮುನ್ನುಗ್ಗಿತ್ತಂತೆ. ಮಾವುತರು ನಿಯಂತ್ರಿಸಿದ್ದರೆ ಹುಲಿಯ ಜೊತೆ ಕಾದಾಟಕ್ಕೆ ಇಳಿಯವುದಕ್ಕೂ ಅಭಿಮನ್ಯು ಹೆದರುವುದಿಲ್ಲ ಎಂಬುದು ಡಾ.ನಾಗರಾಜ್ ಅವರ ಅಭಿಮಾನದ ನುಡಿ.
ಸೆರೆ ಹಿಡಿದು ವಾಹನಗಳಲ್ಲಿ ಸಾಗಿಸುವ ಕಾಡಾನೆಗಳನ್ನು ಪಳಗಿಸುವುದಕ್ಕಾಗಿ ಶಿಬಿರದಲ್ಲಿ `ಕ್ರಾಲ್'ಗೆ ಇಳಿಸುವಾಗ ಈ ನಮ್ಮ ಆನೆಗಳ ಸಹಾಯ ಮುಖ್ಯವಾಗಿರುತ್ತದೆ. ಮತ್ತು ಅದು ಒಂದು ಕಲೆ ಇದ್ದಹಾಗೆ. ಅದರಲ್ಲಿ ಇತರೆಲ್ಲ ಆನೆಗಳಿಗಿಂತ ಅಭಿಮನ್ಯು ತಜ್ಞನಾಗಿದ್ದಾನೆ.
ಜಂಬೂಸವಾರಿಯಲ್ಲಿ ಅಭಿಮನ್ಯು ಪೊಲೀಸ್ ವಾದ್ಯ ವೃಂದ ಇರುವ ಆನೆಗಾಡಿಯನ್ನು ಎಳೆದೊಯ್ಯುತ್ತಿತ್ತು. ಎರಡು ವರ್ಷಗಳ ಹಿಂದೆ ತಾಲೀಮಿನ ಸಂದರ್ಭದಲ್ಲಿ ಆನೆಗಾಡಿ ಕಬ್ಬಿಣದ ಸರಳುಗಳು ದೇಹಕ್ಕೆ ತಾಗಿ ಗಾಯವಾಗಿದ್ದರಿಂದ ಅಭಿಮನ್ಯುಗೆ ಆ ಕೆಲಸದಿಂದ ವಿನಾಯಿತಿ ನೀಡಲಾಯಿತು. ಆದರೆ, ಪ್ರತಿವರ್ಷ ಉತ್ಸವದ ಜತೆಯಲ್ಲಿ ಸಾಗುತ್ತಾನೆ.
ಧೈರ್ಯವಂತ ಅಭಿಮನ್ಯು ಹೆದರುವುದೇತಕ್ಕೆ?
ದಸರಾ ಗಜಪಡೆಯಲ್ಲಿ ಅತ್ಯಂತ ಧೈರ್ಯವಂತ ಅಭಿಮನ್ಯು ಹೆದರುವುದೇತಕ್ಕೆ ಗೊತ್ತಾ? ಕೇವಲ ಒಂದು ಸೂಜಿಗೆ! ಆನಾರೋಗ್ಯ ನಿಮಿತ್ತ ಅದಕ್ಕೆ ಚುಚ್ಚುಮದ್ದು ನೀಡುವಾಗ ಮಾತ್ರ ಬಹಳ ಅಂಜುತ್ತದೆ.
-ಡಾ.ನಾಗರಾಜ್