ಸೆ.21 ರಿಂದ ಅ.1ರವರೆಗೆ ಫಲಪುಷ್ಪ ಪ್ರದರ್ಶನ

Update: 2017-09-18 15:51 GMT

ಮೈಸೂರು,ಸೆ.18: ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ತೋಟಗಾರಿಕೆ ಇಲಾಖೆ, ಮೈಸೂರು ನಗರಪಾಲಿಕೆ ಹಾಗೂ ಜಿಲ್ಲಾ ತೋಟಗಾರಿಕೆ ಸಂಘ ಇವುಗಳ ಸಂಯುಕ್ತಾಶ್ರಯದಲ್ಲಿ ದಸರಾ ಫಲಪುಷ್ಪ ಪ್ರದರ್ಶನವನ್ನು ಸೆ.21ರಿಂದ ಅ.1ರವರೆಗೆ ನಿಶಾದ್ ಬಾಗ್(ಕುಪ್ಪಣ್ಣ ಪಾರ್ಕ್)ನಲ್ಲಿ ಆಯೋಜಿಸಲಾಗುವುದು.

ನಿಶಾದ್ ಬಾಗ್‍ನಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಜಿಲ್ಲಾ ತೋಟಗಾರಿಕೆ ಸಂಘದ ಅಧ್ಯಕ್ಷ ಪಿ.ಶಿವಶಂಕರ್ ವಿವರ ನೀಡಿದರು.

ಸೆ.21 ರಂದು ಸಂಜೆ 4.30ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಲಿದ್ದಾರೆ. ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಸೇರಿದಂತೆ ಜಿಲ್ಲಾ ವ್ಯಾಪ್ತಿಯ ವಿಧಾನಸಭೆ, ವಿಧಾನ ಪರಿಷತ್, ಲೋಕಸಭೆ, ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಶ್ರೀ ಚನ್ನಕೇಶವ ದೇವಾಲಯ ಆಕರ್ಷಣೆ: ಈ ಬಾರಿ ಫಲಪುಷ್ಪ ಪ್ರದರ್ಶನದಲ್ಲಿ ತಿ.ನರಸೀಪುರ ತಾಲ್ಲೂಕು ಸೋಮನಾಥಪುರದ ಶ್ರೀ ಚನ್ನಕೇಶವ ದೇವಾಲಯ ಪ್ರತಿಕೃತಿಯನ್ನು ಸುಮಾರು ಮೂರು ಲಕ್ಷ ಗುಲಾಬಿ ಸುಮಗಳಿಂದ ನಿರ್ಮಿಸಲಾಗುವುದು. ಅದು 37 ಅಡಿ ಅಗಲ, 18 ಅಡಿ ಎತ್ತರ ಹಾಗೂ 16 ಅಡಿ ಉದ್ದ ವಿಸ್ತೀರ್ಣ ಇರಲಿದೆ. 

ಇದಲ್ಲದೆ ಆರ್ಕಿಡ್ ಹೂಗಳಿಂದ 12 ಅಡಿ ಎತ್ತರದ ಬಾರ್ಬಿಗಲ್ರ್ಸ್ ತಯಾರಾಗಲಿದೆ. ವಿವಿಧ ಬಗೆಯ ಹೂಗಳ ನವಿಲು, ಅಸ್ಪಾರಾಗಸ್ ಎಲೆಗಳಿಂದ 10 ಅಡಿಯ ಗಂಡಾನೆ, 8 ಅಡಿ ಎತ್ತರದ ಹೆಣ್ಣಾನೆ ಹಾಗೂ 5 ಅಡಿಯ ಮರಿಯಾನೆಗಳ ಮಾದರಿಯೂ ವೀಕ್ಷಕರನ್ನು ಸೆಳೆಯಲಿದೆ. 
ಇವಲ್ಲದೆ, ಪ್ಯಾರಿಸ್‍ನ ಐಫೆಲ್ ಟವರ್ ಕೂಡ ಸುಮರಾಶಿಯಲ್ಲಿ ಅರಳಲಿದೆ. ಇದು 25 ಅಡಿ ಎತ್ತರ, 14 ಅಡಿ ಅಗಲ ವಿಸ್ತೀರ್ಣ ಹೊಂದಿರಲಿದೆ. 17 ಅಡಿ ಎತ್ತರದ ದೊಡ್ಡ ಗಡಿಯಾರ, ಈ ಬಾರಿಯ ದಸರಾ ಉದ್ಘೋಷಣೆಯಾದ ಸಂವಿಧಾನ, ಸಾಮಾಜಿಕ ನ್ಯಾಯ ಮತ್ತು ಸಮಾನತೆ ಅಡಿಯಲ್ಲಿ ಬುದ್ಧ, ಬಸವ ಮತ್ತು ಅಂಬೇಡ್ಕರ್ ಅವರ ಪ್ರತಿಕೃತಿಗಳು ದವಸಧಾನ್ಯಗಳಿಂದ ವಿಕಸನಗೊಳ್ಳಲಿವೆ. 
ಫಲಪುಷ್ಪ ಪ್ರದರ್ಶನದಲ್ಲಿ ಲೇಸರ್ ಶೋ ಏರ್ಪಡಿಸಲಾಗುವುದು. ಸುಮಾರು 2,15,000 ಪ್ರಭೇದಗಳಪುಷ್ಪಕಾಶಿಯೇ ಮೈದಾಳಲಿದೆ. ಇದರ ಜೊತೆಗೆ ವಿವಿಧ ಆಯಾಮಗಳಿಗೆ ಒತ್ತು ನೀಡಿ ವಿಶೇಷವಾದ ವಸ್ತುಪ್ರದರ್ಶನವನ್ನು ಆಯೋಜಿಸಲಾಗುವುದು. ಅದರಲ್ಲಿ ಆರ್ಕಿಡ್ಸ್, ಬೋನ್ಸಾಯ್, ಕ್ಯಾಕ್ಟರ್ಸ್, ಅಂಥೂರಿಯಂ, ತರಕಾರಿ ಕೆತ್ತನೆ ವಿವಿಧ ರೀತಿಯ ಹೂವಿನ ಜೋಡಣೆ, ಒಣಗಿದ ಹೂಗಳ ಜೋಡಣೆ, ಜೇನು ಮಾರಾಟ ಕೇಂದ್ರ, ಟೆರಾಕೋಟ ಹಾಗೂ ಕರಕುಶಲ ವಸ್ತುಗಳ ಪ್ರದರ್ಶನವೂ ಇರಲಿದೆ.

ಸ್ಪರ್ಧೆಗಳು: ಪ್ರತಿ ವರ್ಷದಂತೆ ಈ ಬಾರಿ ಕೂಡ ಖಾಸಗಿ ಗೃಹಗಳು, ಕಾರ್ಖಾನೆಗಳೂ, ವಿದ್ಯಾಸಂಸ್ಥೆಗಳು ಹಾಗೂ ಮೈಸೂರು  ತೋಟಗಾರಿಕೆ ಮಂಡಳಿ, ಟ್ಟ್ರೈಟಾನ್ ವಾಲ್ಸ್, ಬಿಇಎಂಎಲ್, ಎನ್‍ಐಇ ಮುಂತಾದ ಸಂಸ್ಥೆಗಳಿಂದ ಹೂ ಕುಂಡಗಳ ಜೋಡಣೆ ಹಾಗೂ ತೋಟಗಾರಿಕೆ ಪ್ರದರ್ಶನಗಳು ನಡೆಯಲಿವೆ.

3.50 ಲಕ್ಷ ವೀಕ್ಷಕರ ನಿರೀಕ್ಷೆ: ಕಳೆದ ವರ್ಷ ಫಲಪುಷ್ಪ ಪ್ರದರ್ಶನಕ್ಕೆ ಸುಮಾರು 3 ಲಕ್ಷ ಮಂದಿ ಭೇಟಿ ನೀಡಿದ್ದು, ಅದು ಈ ಬಾರಿ 3.50 ಲಕ್ಷಕ್ಕೆ ಹೆಚ್ಚಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಆಹಾರ ವಿಭಾಗವೂ ಇರಲಿದ್ದು, 50 ಮಳಿಗೆಗಳಿಗೆ ಅವಕಾಶ ಕಲ್ಪಿಸಲಾಗಿದೆ. 

ಒಟ್ಟು 70.5 ಲಕ್ಷ ರೂ.: ದಸರಾ ಫಲಪುಷ್ಪ ಪ್ರದರ್ಶನಕ್ಕೆ ಈ ಬಾರಿ ಒಟ್ಟು 70.5 ಲಕ್ಷ ರೂ. ವೆಚ್ಚವಾಗಲಿದೆ. ಶ್ರೀ ಚನ್ನಕೇಶವ ದೇವಾಲಯಕ್ಕೆ 23 ಲಕ್ಷ ರೂ., ಐಫೆಲ್ ಟವರ್‍ಗೆ 3 ಲಕ್ಷ ರೂ., ಬಾಬಿಗಲ್ರ್ಸ್ ಪ್ರತಿಕೃತಿಗೆ 2 ಲಕ್ಷ ರೂ., ದೊಡ್ಡ ಗಡಿಯಾರಕ್ಕೆ 4 ಲಕ್ಷ ರೂ. ವೆಚ್ಚವಾಗಲಿದೆ. 

ಸುರಕ್ಷತೆ ದೃಷ್ಟಿಯಿಂದ ಫಲಪುಷ್ಪ ಪ್ರದರ್ಶನದಲ್ಲಿ 10 ಕಡೆ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಫಲಪುಷ್ಪ ಪ್ರದರ್ಶನಕ್ಕಾಗಿ ತೋಟಗಾರಿಕೆ ಇಲಾಖೆ ಸುಮಾರು 55 ಸಿಬ್ಬಂದಿ ಕಳೆದ ನಾಲ್ಕು ತಿಂಗಳಿಂದ ಹೂ ಗಿಡಗಳನ್ನು ಬೆಳೆಸಲು ಶ್ರಮಿಸಿದ್ದಾರೆ.
ಜಿಲ್ಲಾ ತೋಟಗಾರಿಕೆ ಸಂಘದ ಉಪಾಧ್ಯಕ್ಷ ಡಾ.ಡಿ.ಪ್ರಭಾಮಂಡಲ್, ಜಂಟಿ 

ಕಾರ್ಯದರ್ಶಿ ಎಚ್.ಹನುಮಯ್ಯ, ಖಜಾಂಚಿ ಎಂ.ವಿಜಯಕುಮಾರಿ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಡಿ.ಮಂಜುನಾಥ್, ಸಂಘದ ಪದನಿಮಿತ್ತ ಕಾರ್ಯದರ್ಶಿ ಹಾಗೂ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಜಿ.ಡಿ.ದಿನೇಶ್ ಕುಮಾರ್, ಸಂಘದ ಕೌನ್ಸಿಲ್ ನಿರ್ದೇಶಕರಾದ ಶಶಿಕಲಾ ನಾಗರಾಜು, ಆರ್.ಎನ್.ರಾಜೇಶ್ವರಿ, ಡಾ.ಎನ್.ಎಂ.ಕಾವೇರಿಯಪ್ಪ, ಪಿ.ದಾಸಪ್ಪ, ಬಿ.ಕೆ.ಕೆಂಪೇಗೌಡ, ಸಿ.ಸಲ್ಡಾನ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಬಿ.ಸಿ.ಆನಂದ್, ಸಹಾಯಕ ತೋಟಗಾರಿಕೆ ನಿರ್ದೇಶಕ ಎಚ್.ಡಿ.ತಿಮ್ಮರಾಜು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News