ಮೈಸೂರು ಸ್ಯಾಂಡಲ್ ಸೋಪಿಗೆ ವಿದೇಶದಲ್ಲಿ ಹೆಚ್ಚಿನ ಬೇಡಿಕೆ: ಸಚಿವ ಮಹದೇವಪ್ಪ
ಮೈಸೂರು, ಸೆ.23: ಸ್ಥಳೀಯವಾಗಿ ತಯಾರಿಸಲ್ಪಡುತ್ತಿರುವ ಮೈಸೂರು ಸ್ಯಾಂಡಲ್ ಸೋಪು ಹಾಗೂ ಎಣ್ಣೆಗೆ ವಿಶ್ವಮಾನ್ಯತೆ ಇದ್ದು, ವಿದೇಶದಲ್ಲಿ ಹೆಚ್ಚು ಬೇಡಿಕೆಯನ್ನು ಹೊಂದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದ್ದಾರೆ.
ನಗರದ ಇನ್ ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಸಭಾಂಗಣದಲ್ಲಿ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟದ ಸಾಬೂನು ಮೇಳಕ್ಕೆ ಶನಿವಾರ ಚಾಲನೆ ನೀಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರು ಮಹಾರಾಜರ ಕಾಲದಲ್ಲಿ ಸ್ಥಾಪಿಸಲ್ಪಟ್ಟ ಈ ಕಾರ್ಖಾನೆಗೆ ವಿಶ್ವೇಶ್ವರಯ್ಯ ಅವರ ಕೊಡುಗೆ ಅಪಾರವಾಗಿತ್ತು. ಈ ಕಾರ್ಖಾನೆ ಉತ್ತಮ ಗುಣಮಟ್ಟದ ಸೋಪುಗಳನ್ನು ತಯಾರಿಸುತ್ತಿದ್ದು, ಬಹಳ ಹಿಂದೆಯೇ ಲಂಡನ್‍ನಲ್ಲಿ ತನ್ನ ಮಾರುಕಟ್ಟೆಯನ್ನು ಹೊಂದಿತ್ತು, ಇದು ಕಾರ್ಖಾನೆ ಮಾತ್ರವಲ್ಲದೆ ಅನೇಕ ಉತ್ಪನ್ನಗಳನ್ನು ತಯಾರಿಸಿ ಜನ ಮನ್ನಣೆ ಗಳಿಸಿದೆ ಎಂದು ತಿಳಿಸಿದರು.
ಸಾಂಸ್ಕೃತಿಕ ಹಿನ್ನೆಲೆಯುಳ್ಳ ಮೈಸೂರು ಸ್ಯಾಂಡಲ್ ಸೋಪು ವಿಶ್ವವಿಖ್ಯಾತಿಯನ್ನು ಹೊಂದಿದೆ. ಈ ಸಂಸ್ಥೆ ಇನ್ನು ಹೆಚ್ಚಿನ ಉತ್ಪನ್ನಗಳನ್ನು ತಯಾರು ಮಾಡುವುದರ ಜೊತೆಗೆ ಮತ್ತಷ್ಟು ಜನರ ವಿಶ್ವಾಸಗಳಿಸಲಿ ಎಂದು ಹಾರೈಸಿದರು.
ದಸರಾ ಪ್ರಯುಕ್ತ ಈ ಮೇಳವನ್ನು ಆಯೋಜಿಸಿದ್ದು, ಇಂದಿನಿಂದ ಹತ್ತು ದಿನಗಳವರೆಗೆ ಈ ಮಾರಾಟ ಮೇಳವನ್ನು ಏರ್ಪಡಿಸಲಾಗಿದ್ದು, ಪ್ರತೀ ಉತ್ಪನ್ನಗಳ ಮೇಲೆ ಶೇ.18 ರಷ್ಟು ರಿಯಾಯಿತಿ ಮಾರಾಟ ಮಾಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಮೈಸೂರು ಮಹಾನಗರ ಪಾಲಿಕೆ ಸದಸ್ಯ ಎಸ್.ಬಾಲು, ವ್ಯವಸ್ಥಾಪಕ ನಿರ್ದೇಶಕ ಹರಿ ಕುಮಾರ್ ಝಾ, ಕರ್ನಾಟಕ ವಲಯದ ಪ್ರಧಾನ ವ್ಯವಸ್ಥಾಪಕ ಸಿ.ಎಂ.ಸುವರ್ಣ, ಉಮಾಶಂಕರ್ ಅಪಾಲಿ, ಸಹಾಯಕ ಪ್ರಧಾನ ವ್ಯವಸ್ಥಾಪಕ ನಾಗಕೃಷ್ಣ ಅರಸ್, ಶಾಲಿನ ಸೌಮ್ಯ, ಮಾರುಕಟ್ಟೆ ವ್ಯವಸ್ಥಾಪಕ ಬಿ.ಎ.ಹರೀಶ್, ಶಶಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು.